ಎಲ್ಲರದೂ ಒಂದೇ ದಾರಿ, ಅದು ಅಡ್ಡದಾರಿ...
ಎಲ್ಲರದೂ ಒಂದೇ ದಾರಿ, ಅದು ಅಡ್ಡದಾರಿ...
ರಸಗೊಬ್ಬರದ ಬಗ್ಗೆ ರಾಜ್ಯಾದ್ಯಂತ ಎದ್ದಿರುವ ನಿಲ್ಲದ ಹಾಹಾಕಾರದ ಮಧ್ಯೆ ನನಗೆ ಮತ್ತೆ ಮತ್ತೆ ನೆನಪಾಗುತ್ತಿರುವುದು ಮೈಸೂರಿನ ಗೆಳೆಯ ಸ್ವಾಮಿ ಆನಂದ್. ನಾಲ್ಕು ವರ್ಷಗಳ ಹಿಂದೆ ಶೂನ್ಯ ಬಂಡವಾಳದ ಪಾಳೇಕರ್ ಕೃಷಿ ಪದ್ಧತಿಯನ್ನು ನಿಜವಾಗಿಯೂ ಒಂದು ಆಂದೋಲನ ರೂಪದಲ್ಲಿ ಏಕಾಕಿಯಾಗಿ ಆರಂಭಿಸಿದ್ದ ಇವರು, ಇತ್ತೀಚಿನವರೆಗೆ ರಾಜ್ಯಾದ್ಯಂತ ಅನೇಕ ಶಿಬಿರಗಳನ್ನು ನಡೆಸಿ ಹೆಮ್ಮೆಯಿಂದ ಬೀಗುತ್ತಿದ್ದರು. ಈ ಕೃಷಿ ಪದ್ಧತಿ ಬಗ್ಗೆ ಪುಸ್ತಕವೊಂದನ್ನು ಬರೆದು ಅದು ಹಲವು ಮುದ್ರಣಗಳನ್ನು ಕಂಡು ಬಹು ಜನಪ್ರಿಯವೂ ಆಗಿತ್ತು. ನಾನೂ ಇವರ ಒಂದೆರಡು ಶಿಬಿರಗಳಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಸಂದರ್ಭದಲ್ಲಿ, ಅದರಲ್ಲಿ ಪಾಲ್ಗೊಂಡಿದ್ದ ರೈತರ ಉತ್ಸಾಹ ಕಂಡು, ಇಪ್ಪತ್ತು ವರ್ಷಗಳಲ್ಲಿ ರೈತಸಂಘ ಮಾಡಲಾಗದ ಕ್ರಾಂತಿಯನ್ನು ಇದು ಮಾಡಬಹುದು ಎಂದು ನನಗನ್ನಿಸಿತ್ತು. ಆಗ ಸ್ವಾಮಿ ಆನಂದ್ ಹೇಳಿದ್ದರು: 'ನೋಡ್ತಿರಿ ಸರ್, ಇನ್ನು ಐದು ಹತ್ತು ವರ್ಷಗಳಲ್ಲಿ ಈ ರಸಗೊಬ್ಬರ ಮತ್ತು ಕೀಟನಾಶಕ ಕಂಪನಿಗಳೆಲ್ಲ ಹೇಗೆ ಗುಳೆ ಎದ್ದು ಹೋಗ್ತವೆ ಅಂತ. ಆಮೇಲೆ ರೈತರ ಸಾಲ ಅನ್ನುವ ಮಾತೇ ಇರುವುದಿಲ್ಲ!'
ಆದರೆ ಇಂದು ರಾಜ್ಯಾದ್ಯಂತ ರೈತರು ಬೀಜ - ಗೊಬ್ಬರಗಳಿಗಾಗಿ ಹಾಹಾಕಾರ ಎಬ್ಬಿಸಿ ಅವರಲ್ಲಿ ಕೆಲವರು ಹತಾಶರಾಗಿ ಆತ್ಮಹತ್ಯೆ ಮಾಡಿಕೊಳ್ಳತೊಡಗಿರುವಾಗ ಸ್ವಾಮಿ ಆನಂದರ ಸುದ್ದಿಯೇ ಇಲ್ಲ. ತಮ್ಮ ಆಂದೋಲನ ನಡೆಸಲು ಅವರು ಮತ್ತು ಅವರ ಗೆಳೆಯರು ಸೇರಿ ಮಾಡಿಕೊಂಡಿದ್ದ ರಾಜ್ಯ ಮಟ್ಟದ ವೇದಿಕೆ ಎಲ್ಲಿದೆಯೋ. ಏನು ಮಾಡುತ್ತಿದೆಯೋ ಯಾರಿಗೂ ತಿಳಿಯದು. ಆ ವೇದಿಕೆಯೇನಾದರೂ ಇಂದು ಅಸ್ತಿತ್ವದಲ್ಲಿದ್ದರೆ, ಅದು ಇಂದಿನ ರೈತರ ಹಾಹಾಕಾರಕ್ಕೆ ಸ್ಪಂದಿಸಬೇಕಿತ್ತು. ಸಾಂತ್ವನ ಶಿಬಿರಗಳನ್ನು ನಡೆಸಿ, ತನ್ನ ವಿಚಾರಗಳನ್ನು ಹರಡಲು ಇದು ಸಕಾಲವೆಂದು ಅದರಲ್ಲಿ ಉದ್ಯುಕ್ತವಾಗಬೇಕಿತ್ತು. ಅವರು ಅಂದು ಆಯೋಜಿಸುತ್ತಿದ್ದ ಭರ್ಜರಿ ಶಿಬಿರಗಳಲ್ಲಿ ಅವರು ಆಡುತ್ತಿದ್ದ ಮಾತಿನ ಮತ್ತು ವ್ಯಕ್ತಪಡಿಸುತ್ತಿದ್ದ ಭರವಸೆಗಳ ರಭಸ ನೋಡಿ ನನ್ನಲ್ಲಿ ಹುಟ್ಟಿದ ನಿರೀಕ್ಷೆಯಿದು. ಆದರೆ ಅವರೂ, ಅವರ ವೇದಿಕೆಯೂ ಇಂದು ನಮ್ಮ ಕಣ್ಮುಂದಿನ ಚಿತ್ರದಿಂದ ಕಾಣೆಯಾಗಿದ್ದಾರೆ. ಇದಕ್ಕೆ ಪಾಳೇಕರರೊಂದಿಗೆ ಅವರಿಗೆ ಉಂಟಾದ ಭಿನ್ನಾಭಿಪ್ರಾಯವೇ ಕಾರಣವೆಂದು ಹೇಳಲಾಗುತ್ತಿದೆ. ಈ ಮಧ್ಯೆ ಅವರು ತಮ್ಮ ಈ ಆಂದೋಲನವನ್ನು ಅಮಾನತ್ತಿನಲ್ಲಿಟ್ಟು, ಯಾರೋ ಓರ್ವ ಅನಾಮಿಕ ಸ್ವಾಮಿಗಳ ಹಿಂದೆ ಬಿದ್ದು, ಪರ್ಯಾಯ ವೈದ್ಯ ಪದ್ಧತಿ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆಂದು ಕೇಳಲ್ಪಟ್ಟಿರುವೆ. ಅಲ್ಲೂ ಎಷ್ಟು ವರ್ಷ 'ಕ್ರಿಯಾಶೀಲ'ರಾಗಿರುವರೋ ತಿಳಿಯದು! ಅಥವಾ ಅದೂ ಈಗ ಸ್ತಬ್ಧಗೊಂಡಿದೆಯೋ? ಏಕೆಂದರೆ ಈಚೆಗೆ ಅವರ ಸುದ್ದಿಯೇ ಇಲ್ಲ...
ಇನ್ನು ಈ ಪಾಳೇಕರ್ ಕೃಷಿ ಪದ್ಧತಿಯನ್ನು ತನ್ನ ಪ್ರಣಾಳಿಕೆಯನ್ನಾಗಿ ಮಾಡಿಕೊಳ್ಳಲು ನಿಶ್ಚಯಿಸಿ ಅದರ ಮೊದಲ ಶಿಬಿರವನ್ನು ಬಹು ವೈಭವದಿಂದ ಆಯೋಜಿಸಿದ್ದ ರಾಜ್ಯ ರೈತಸಂಘಕ್ಕೆ ಬಹುಶಃ ಅದೇ ಕೊನೆಯ ಶಿಬಿರವೂ ಆಯಿತು. ಏಕೆ ಎಂಬುದು ಇಂದಿಗೂ ತಿಳಿಯದು! ನಂತರದಲ್ಲಿ ರೈತ ಸಂಘದ ಮತ್ತು ಅದರ ರಾಜಕೀಯ ಮುಖವೆಂದು ಹೇಳಲಾದ ಸರ್ವೋದಯ ಕರ್ನಾಟಕ ಪಕ್ಷದ ಮುಖಂಡರು ಈ ಕೃಷಿ ಪದ್ಧತಿ ಬಗ್ಗೆ 'ಖಾಸಗಿ'ಯಾಗಿ ಪ್ರೋತ್ಸಾಕರ ಮಾತುಗಳನ್ನಾಡುತ್ತಿದ್ದರಾದರೂ, ಆ ದಿಸೆಯಲ್ಲಿ ಯಾವುದೇ ಪ್ರಚಾರಾಂದೋಲನವನ್ನು ಹಮ್ಮಿಕೊಳ್ಳಲಿಲ್ಲ. ಹೋಗಲಿ. ಈಗ ರೈತರು ರಸಗೊಬ್ಬರ ಸಿಗದೆ ಪರದಾಡುತ್ತಿದ್ದಾರೆ, ಹಿಂಸಾಚಾರಕ್ಕೆ ಇಳಿದಿದ್ದಾರೆ, ಸಾರ್ವಜನಿಕ ಆಸ್ತಿಪಾಸ್ತಿಯನ್ನು ಹಾಳು ಮಾಡುತ್ತಿದ್ದಾರೆ, ಆತ್ಮಹತ್ಯೆಗೂ ಶರಣಾಗುತ್ತಿದ್ದಾರೆ ಮತ್ತು ಕೆಲವರು ಕಳ್ಳಸಂತೆಯಲ್ಲೂ ತೊಡಗಿದ್ದಾರೆ. ಇಂತಹ ಸಮಯದಲ್ಲಿ ರೈತ ಸಂಘ ಏನು ಮಾಡುತ್ತಿದೆ? ಸರ್ವೋದಯ ಕರ್ನಾಟಕ ಏನು ಮಾಡುತ್ತಿದೆ? ಗಲಾಟೆಯ ಮಧ್ಯೆ ಅಲ್ಲಲ್ಲಿ ಹಸಿರು ಶಾಲುಗಳೇನೋ ಕಾಣುವುವು. ಆದರೆ ರೈತ ಸಂಘ ಮಾತ್ರ ಕಾಣುತ್ತಿಲ್ಲ - ಅವರ ನಾಯಕರಿಬ್ಬರು ಒಂದೆರಡು ಸರ್ಕಾರ ವಿರೋಧಿ ಹೇಳಿಕೆಗಳನ್ನು ನೀಡಿದ್ದರ ಹೊರತಾಗಿ. ಬಹುಶಃ ಅವರು ಚುನಾವಣೆಗಳಲ್ಲಿ ಸೋತು ಸದ್ಯಕ್ಕೆ ಇನ್ನೇನೂ ಮಾಡಲಾಗದಷ್ಟು ಆಯಾಸಗೊಂಡಿದ್ದಾರೆಂದು ಕಾಣುತ್ತದೆ!
ಮುಖ್ಯವಾಹಿನಿ ರಾಜಕೀಯ ಪಕ್ಷಗಳಿಗೆ ಯಾವುದೇ ಸ್ಪಷ್ಟ ರಾಜಕೀಯ ನೀತಿಯಾಗಲೀ, ಕಾರ್ಯಕ್ರಮವಾಗಲಿ ಇಲ್ಲವೆಂದು ಹೇಳುತ್ತಾ ಪರ್ಯಾಯ ರಾಜಕಾರಣ ಮಾಡಲು ಹೊರಟ ರೈತಸಂಘಕ್ಕೆ ಯಾವ ನೀತಿ ಅಥವಾ ಕಾರ್ಯಕ್ರಮವಿದೆ? ಅದಕ್ಕೇನಾದರೂ ರೈತರಿಗೆ ಸಂಬಂಧಿಸಿದಂತೆಯೇ ಒಂದು ಸ್ಪಷ್ಟ ಕಾರ್ಯಕ್ರಮವಿದ್ದಿದ್ದಲ್ಲಿ ಅದು ಈಗ ಹೀಗೆ ನಾಪತ್ತೆಯಾಗುತ್ತಿರಲಿಲ್ಲ. ಬದಲಿಗೆ, ರೈತರ ಮಧ್ಯೆ ಕಾಣಿಸಿಕೊಂಡು, ಅವರ ಕಷ್ಟ ಸುಖಗಳನ್ನು ವಿಚಾರಿಸುತ್ತಾ, ಇವೊತ್ತಿನ ಸಂಕಟಗಳನ್ನು ಎದುರಿಸಲು ಅವರು ಅಸಹಾಯಕವಾಗಿ ಹಿಡಿದಿರುವ ಹಿಂಸಾಚಾರ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ, ಆತ್ಮಹತ್ಯೆಗಳಂತಹ ವಿನಾಶಕಾರಿ ದಾರಿಯಿಂದ ಅವರನ್ನು ವಿಮುಖಗೊಳಿಸಿ ರಚನಾತ್ಮಕ ದಾರಿಯೊಂದನ್ನು ಕಂಡುಕೊಳ್ಳುವ ಸಂಘಟನಾತ್ಮಕ ಪ್ರಯತ್ನಗಳಲ್ಲಿ ತೊಡಗುತ್ತಿತ್ತು. ಆದರೆ ಇವರೆಲ್ಲರಿಗೂ (ಇವರ ಜೊತೆ ಸೇರಿರುವ ದಲಿತ ಸಂಘರ್ಷ ಸಮಿತಿಯವರಿಗೂ) ಸಂಘಟನೆಯ ಕಲ್ಪನೆಯಲ್ಲೇ ನಂಬಿಕೆ ಹೋಗಿದೆ. ಹಾಗಾಗಿಯೇ ಇದ್ದ ತಮ್ಮ ಸಂಘಟನೆಗಳನ್ನೂ ನಾಶ ಮಾಡಿಕೊಂಡಿರುವ ಇವರಿಗೆ ಚುನಾವಣೆಗಳ ಹೊತ್ತಿಗಷ್ಟೇ ಸಂಘಟನೆಯ ಅಗತ್ಯ ಕಾಣತೊಡಗುವುದು. ಆಗ ಹೇಗೋ ಒಂದಷ್ಟು ಜನವನ್ನು ಸೇರಿಸಿಕೊಂಡು ನಾಯಕತ್ವಕ್ಕಾಗಿ ಹಳೆಯ ಗಾಯಗಳನ್ನೆಲ್ಲ ಕೆದಕಿಕೊಂಡು ಜಗಳಾಡಿ, ಇನ್ನು ಹೆಚ್ಚು ಸಮಯವಿಲ್ಲವೆಂಬ ಒತ್ತಡದಲ್ಲಿ ಹೇಗೋ ಒಂದಾಗುವ ನಾಟಕವನ್ನು ಸಾರ್ವಜನಿಕರ ಮುಂದೆ ಅಭಿನಯಿಸುವುದು ಮತ್ತು ಆನಂತರ ಕಾಣೆಯಾಗುವುದು ಇವರಿಗೆ ಅಭ್ಯಾಸವಾಗಿ ಹೋಗಿದೆ. ಹಾಗಾಗಿ ಜನ ಕೂಡಾ ಇವರನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ.
ಇವರಿಗೆ ಚುನಾವಣೆಗಳಲ್ಲಿ ಒಂದೆರಡು ಕಡೆ ಗಣನೀಯವಾಗಿ ಮತ ಬೀಳುತ್ತಿರುವುದೂ ಆಯಾ ಅಭ್ಯರ್ಥಿಗಳ ವೈಯುಕ್ತಿಕ ಪ್ರಭಾವದಿಂದಲೇ ಹೊರತು ರೈತ ಸಂಘ ಅಥವಾ ಸರ್ವೋದಯ ಕರ್ನಾಟಕ ಎಂಬ ಪಕ್ಷದ ವರ್ಚಸ್ಸಿನಿಂದಲ್ಲ. ಈಚಿನ ಚುನಾವಣೆಗಳ ಸಂದರ್ಭದಲ್ಲಿ ಈ ಪಕ್ಷದ ವರಿಷ್ಠ ನಾಯಕರೊಬ್ಬರೊಂದಿಗೆ ನಾನು ಮಾತನಾಡಿದ ಸಂದರ್ಭದಲ್ಲಿ ಅವರಾಡಿದ ಮಾತಿನಿಂದಾಗಿ ನನ್ನಲ್ಲಿ ಪರ್ಯಾಯ ರಾಜಕಾರಣದ ಬಗ್ಗೆ ಅಳಿದುಳಿದಿದ್ದ ಆಸೆಯೂ ಕಮರಿ ಹೋಯಿತು: "ನಾವು ಚುನಾವಣೆ ಸಂದರ್ಭದಲ್ಲಿ ಏನು ಮಾಡುತ್ತೇವೆ ಎಂಬುದು ಮುಖ್ಯವೇ ಹೊರತು, ಈ ಹಿಂದೆ ಏನು, ಎಷ್ಟು ಕೆಲಸ ಮಾಡಿದ್ದೆವು ಎಂಬುದು ಮುಖ್ಯವಾಗುವುದಿಲ್ಲ." ಸರ್ವೋದಯ ಕರ್ನಾಟಕ ಪಕ್ಷವನ್ನು ಅದು ಸ್ಥಾಪನೆಯಾದ ದಿನದಿಂದಲೂ ಸಮರ್ಥವಾಗಿ ಕಟ್ಟಿ ಬೆಳೆಸಿದ್ದರೆ ಮುಖ್ಯವಾಹಿನಿ ಪಕ್ಷಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಎದುರಿಸಬಹುದಿತ್ತಲ್ಲವೇ ಎಂಬ ನನ್ನ ಪ್ರಶ್ನೆಗೆ ಅವರು ನೀಡಿದ ಜಾಣ ಉತ್ತರವಿದು. ನಾವು ಮುಖ್ಯವಾಹಿನಿ ಪಕ್ಷಗಳನ್ನು ಜನತೆಯ ಶತ್ರುಗಳು ಎಂದು ಸುಲಭವಾಗಿ ಕರೆದುಬಿಡಬಹುದು. ಆದರೆ ಪರ್ಯಾಯ ರಾಜಕಾರಣ ಮಾಡಹೊರಟ ಪಕ್ಷ ಅಥವಾ ಸಂಘಟನೆಗಳು ಹಿಡಿದಿರುವ ದಾರಿಯಾದರೂ ಯಾವುದು? ಸುಮ್ಮನೆ ಎಷ್ಟು ಕಾಲ ಇವು ತಮ್ಮನ್ನು ನಂಬಿದ ಮುಗ್ಧ ಜನಕ್ಕೆ ಮೋಸ ಮಾಡುತ್ತಾ ಹೋಗುವುದು?
ಈಗ ಎಲ್ಲರದೂ ಒಂದೇ ದಾರಿ. ಅದು ಅಡ್ಡದಾರಿ. ಸುಲಭ ಮಾತು, ಸುಲಭ ಹಣ, ಸುಲಭ ಸುಖ, ಸುಲಭ ಜಯ, ಸುಲಭ ಅಧಿಕಾರ, ಸುಲಭ ಕೀರ್ತಿಯ ದಾರಿ. ಹಾಗಾಗಿಯೇ ಇಂದು ಈ ಜನಪರ, ಜನವಿರೋಧಿ, ಜೀವಪರ, ಜೀವ ವಿರೋಧಿ, ಬಂಡವಾಳಶಾಹಿ, ಊಳಿಗಮಾನ್ಯಶಾಹಿ ಇತ್ಯಾದಿ ಮಾತುಗಳೆಲ್ಲ ಕ್ಲೀಷೆಯಾಗಿವೆ. ಈ ಮಾತುಗಳನ್ನು ಆಡುವವರ ಬಾಯಿಗಳು, ಕೇಳುವವರ ಕಿವಿಗಳೂ ಮಲಿನವಾಗಿ ಹೋಗಿವೆ. ಎಪ್ಪತ್ತು - ಎಂಭತ್ತರ ದಶಕದಲ್ಲಿ 'ಜನಪರತೆ' ಮತ್ತು 'ಜೀವಪರತೆ'ಯ ಘೋಷಣೆಗಳೊಂದಿಗೆ ಆರಂಭವಾದ ಚಳುವಳಿಗಳು ಇಂದು ಏನಾಗಿವೆ ಎಂದು ನೋಡಿದರೆ ನನ್ನ ಈ ಮಾತುಗಳು ಹೆಚ್ಚು ಸ್ಪಷ್ಟವಾದೀತು. ದಲಿತ ಕವಿ ಸಿದ್ಧಲಿಂಗಯ್ಯ ಇಂದು ತಲುಪಿರುವ ಸ್ಥಿತಿಯೇ ಈ ಎಲ್ಲವನ್ನೂ ಸ್ಪಷ್ಟಪಡಿಸೀತು. ಅವರು ಬಿಜೆಪಿ ಸರ್ಕಾರಕ್ಕೂ ತಮ್ಮ ಅಮೂಲ್ಯ 'ದಲಿತ' ಸೇವೆ ಸಲ್ಲಿಸಲು ತಯಾರಾಗಿದ್ದಾರೆಂಬ ಅರ್ಥದಲ್ಲಿ ನಾನು ಈ ಮಾತು ಹೇಳುತ್ತಿಲ್ಲ. ಅವರು ಯಾವುದೇ ಸರ್ಕಾರಕ್ಕೂ ನಿರ್ಭಿಡೆಯಿಂದ ತಮ್ಮ 'ಸೇವೆ' ಸಲ್ಲಿಸಲು ಕಾದು ನಿಂತಿರುವ ಇಂದಿನ ಅವರ ದುಃ'ಸ್ಥಿತಿ'ಯ ಬಗ್ಗೆ ಈ ಮಾತು. ನಮ್ಮ ಪ್ರಗತಿಪರರ, ಕ್ರಾಂತಿಕಾರರ ಪಯಣ ಎಲ್ಲಿಂದ ಎಲ್ಲಿಗೆ ಬಂದು ಮುಟ್ಟಿದೆ!
ಇದಕ್ಕೆ ನಮ್ಮಲ್ಲಿ ಬಹುಪಾಲು ಜನರಲ್ಲಿ ಒಂದಲ್ಲ ಒಂದು ಪ್ರಮಾಣದಲ್ಲಿ ಇರುವ 'ಸಿದ್ಧಲಿಂಗಯ್ಯತನ'ವೇ ಕಾರಣವಾಗಿದೆ.ಎಂದರೆ ತಪ್ಪಾಗಲಾರದು. ಸಿದ್ಧಲಿಂಗಯ್ಯ ಪೂರ್ತಿ ಕೊಳೆತು ಹೋಗಿರಬಹುದು. ಆದರೆ ನಾವೂ ಸ್ವಲ್ಪ ಸ್ವಲ್ಪ ಕೊಳೆತು ಅದಕ್ಕೆಲ್ಲ ಜಾಣ ವಿವರಣೆಗಳನ್ನು ಕಂಡುಕೊಳ್ಳುತ್ತಾ ಇದನ್ನೆಲ್ಲ ಸಹಿಸಿಕೊಳ್ಳುತ್ತಾ ಬಂದಿದ್ದೇವೆ. ಹಾಗಾಗಿಯೇ ಇತ್ತೀಚೆಗೆ, ಸಮಾಜವಾದಿ ರಾಜಕಾರಣದಲ್ಲ್ಲಿ ತೀವ್ರ ಆಸಕ್ತಿ ಇರುವ ಹಿರಿಯ ಲೇಖಕರೊಬ್ಬರು ದೂರವಾಣಿಯಲ್ಲಿ ಮಾತನಾಡುತ್ತಾ, "ನಮ್ಮ ಕಣ್ಮುಂದೆಯೇ ನಮ್ಮ ರಾಜ್ಯದಲ್ಲೂ ಬಿಜೆಪಿ ಅಧಿಕಾರಕ್ಕೆ ಬರುವಂತಾಯಿತಲ್ಲ" ಎಂದು ಅಲವತ್ತುಕೊಂಡಾಗ, ಇದು ನಮ್ಮೆಲ್ಲರ ಪಾಪದ ಫಲ ಎಂದು ಹೇಳಬೇಕೆನಿಸಿತ್ತು. ಆದರೆ ಅವರ ವಯಸ್ಸು ಇದನ್ನು ತಡೆದುಕೊಳ್ಳಲಾರದೆಂದು ಅಂಜಿ ಸುಮ್ಮನಾದೆ. ಪರಿಸ್ಥಿತಿ ಹೀಗಿರುವಾಗ ಇಂತಹ ಯಾವ ಹಣೆಪಟ್ಟ್ಟಿಯನ್ನೂ ಹಚ್ಚಿಕೊಳ್ಳದ ಸಿದ್ಧರಾಮಯ್ಯ, ಬಿಜೆಪಿ ಸೇರುವ ಸಂಭವ ಇದೆ ಎಂದರೆ, ಯಾರಾದರೂ ಯಾಕೆ ಆಶ್ಚರ್ಯ ಪಡಬೇಕು? ಅವರು ಮುಖ್ಯಮಂತ್ರಿಯಾಗಲೆಂದೇ ರಾಜಕಾರಣ ಮಾಡುತ್ತಿರುವವರು. ಅವರ ರಾಜಕಾರಣಕ್ಕೆ ಅದೊಂದೇ ಉದ್ದೇಶವೆಂದು ಎಂದೋ ಸ್ಪಷ್ಟವಾಗಿದೆ. ಹಾಗಿರುವಾಗ ಆ ಉದ್ದೇಶವಿಟ್ಟುಕೊಂಡು ಅವರು ಎಲ್ಲಿಗಾದರೂ ಹೋಗಿಯಾರು! ಕಾಂಗ್ರೆಸ್ಸಿನಲ್ಲಿ ಉಳಿದರೂ ಅದಕ್ಕಾಗಿಯೇ ಉಳಿದಾರು! ಮತ್ತು ಅಳಿದಾರೂ ಕೂಡಾ... ಆದರೆ ಅನ್ಯ ಉದ್ದೇಶಗಳಿಗಲ್ಲ!!
ಈಗ ಅನ್ಯ ಉದ್ದೇಶಗಳೆಂಬುವಾದರೂ ರಾಜಕೀಯದಲ್ಲಿ ಎಲ್ಲಿವೆ? ಪ್ರಾಣ ಕಳೆದುಕೊಂಡ ರೈತರ ಮನೆಗಳಿಗೆ ವಿವಿಧ ರಾಜಕೀಯ ಪಕ್ಷಗಳು ಮುಗಿ ಬೀಳುತ್ತಿರುವ ಧಾವಂತವನ್ನು ನೋಡಿ. ಸ್ಪರ್ಧೆಯಲ್ಲಿದ್ದಂತೆ ಅವರು ಆ ಕುಟುಂಬಗಳಿಗೆ ಪರಿಹಾರ ಧನ ವಿತರಿಸುತ್ತಿದ್ದಾರೆ. ಪರಸ್ಪರ ಕೆಸರೆರಚಾಟವನ್ನೂ ನಡೆಸಿದ್ದಾರೆ. ಇದರಿಂದಾಗಿ ಶಿಕಾರಿಪುರದ ಬಳಿ ದೊಡ್ಡ ಹೊಡೆದಾಟವೇ ನಡೆದು ಹೋಗಿದೆ. ಸಾಯುತ್ತಿರುವವರು ರೈತರಲ್ಲ ಎಂದು ಯಡಿಯೂರಪ್ಪ ತಮ್ಮ ಗುಪ್ತಚರ ಇಲಾಖೆಯ ಮಾಹಿತಿ ಆಧರಿಸಿ ಹೇಳುತ್ತಿದ್ದರೆ, ಮಲ್ಲಿಕಾರ್ಜುನ ಖರ್ಗೆಯವರು ಇದರ ಬಗ್ಗೆ ತನಿಖೆಯಾಗಲಿ ಎಂದು ಗುಡುಗುತ್ತಿದ್ದಾರೆ. ಮಣ್ಣಿನ ಮಗ ದೇವೇಗೌಡರಂತೂ ಸಾರ್ವಜನಿಕವಾಗಿ ಕಣ್ಣೀರು ಹರಿಸುತ್ತಾ ಯಡಿಯೂರಪ್ಪನವರ ಸರ್ಕಾರಕ್ಕೆ 'ಅಯೋಗ್ಯರ ಸರ್ಕಾರ' ಎಂದು ಹಿಡಿಶಾಪ ಹಾಕುತ್ತಿದ್ದಾರೆ. ಆದರೆ ಇಂತಹ 'ಅಯೋಗ್ಯ' ಸರ್ಕಾರ ಬರಲು ತಮ್ಮಂತಹವರ ಇನ್ನಷ್ಟು ಅಯೋಗ್ಯವಾದ ರಾಜಕಾರಣವೇ ಕಾರಣವೆಂದು ಗೊತ್ತಾಗದಷ್ಟು ಅವರು ಅಮಾಯಕರೇನಲ್ಲ. ಇದನ್ನು ಮರೆಮಾಚಲೆಂದೇ ಇವರು ಈಗ ಮತ್ತೆ ಕಾಂಗ್ರೆಸ್ನೊಡನೆ ಮೈತ್ರಿ ರಾಜಕಾರಣದ ಹೊಸ ಆಟ ಆರಂಭಿಸಿದ್ದಾರೆ.
ಅನಿಲ್ ಲಾಡ್ ಮತ್ತು ರಾಜಶೇಖರನ್ ಎಂಬ ತಮ್ಮ ಎರಡು 'ಆಯ್ಕೆ'ಗಳನ್ನೇ ರಾಜ್ಯಸಭೆ ಮತ್ತು ವಿಧಾನಪರಿಷತ್ತುಗಳಿಗೆ ಕಾಂಗ್ರೆಸ್ನ ಆಯ್ಕೆಯಾಗಿಯೂ ಪರಿವರ್ತಿಸುವ ಜಾಣ ರಾಜಕಾರಣ ಮಾಡಿರುವ ದೇವೇಗೌಡರು ರಾಜ್ಯ ರಾಜಕಾರಣದ ಮುಂದಿನ ನಡೆಗಳನ್ನು ತಮ್ಮ ಕೈಯಲ್ಲೇ ಭದ್ರಪಡಿಸಿಕೊಂಡಿದ್ದಾರೆ. ಚುನಾವಣಾ ಸೋಲಿನಿಂದ ಇನ್ನೂ ಸುಧಾರಿಸಿಕೊಳ್ಳಲಾಗದ ರಾಜ್ಯ ಕಾಂಗ್ರೆಸ್ ನಾಯಕರು, ಸದ್ಯ ಅಧಿಕಾರ ಬರುವುದಾದರೆ ಹೇಗಾದರೂ ಬರಲಿ ಎಂದು ಈ ರಾಜಕೀಯ ಚೌಕಾಶಿಯಲ್ಲಿ ತಮ್ಮ ಪಾಲಿನ ವಿಧಾನ ಪರಿಷತ್ತಿನ ಒಂದು ಸ್ಥಾನವನ್ನೂ ದೇವೇಗೌಡರಿಗೆ ಧಾರೆ ಎರೆದಿದ್ದಾರೆ! ಆದರೆ ಕರ್ನಾಟಕ ಹೇಗೂ ಹೋಯಿತು, ಮುಂದೆ ಬರಲಿರುವ ಅನ್ಯ ರಾಜ್ಯಗಳ ಚುನಾವಣೆಗಳನ್ನಾದರೂ ಗೆಲ್ಲಲು ಹಣ ಹೊಂದಿಸಿಕೊಳ್ಳುವ ತರಾತುರಿಯಲ್ಲಿರುವ ಕಾಂಗ್ರೆಸ್ನ ವರಿಷ್ಠ ನಾಯಕತ್ವ ರಾಜ್ಯದ ಕಾಂಗ್ರೆಸ್ ಭವಿಷ್ಯವನ್ನು ದೇವೇಗೌಡರಿಗೆ ಒಪ್ಪಿಸಿ, ತನ್ನ ಪಾಲಿನ ಕಪ್ಪ ವಸೂಲಿ ಮಾಡಿಕೊಂಡು ಹೋಗಿದೆ! ಇಲ್ಲಿ ಸಿದ್ಧರಾಮಯ್ಯನವರ ಅಸಹಾಯಕತೆ ಮಲ್ಲಿಕಾರ್ಜುನ ಖರ್ಗೆಯವರ ಅಸಹಾಯಕತೆಯನ್ನು ಹೆಚ್ಚಿಸಿದೆಯಷ್ಟೆ! ಉತ್ತರ ಪ್ರದೇಶದಲ್ಲಿ ಇಪ್ಪತ್ತು ವರ್ಷಗಳ ಹಿಂದೆ ಕಾಂಗ್ರೆಸ್ ಅವನತಿ ಹೀಗೇ ಶುರುವಾದದ್ದು ಎಂಬುದು ಖರ್ಗೆಯವರಿಗೆ ಗೊತ್ತೆ?
ಇಂತಹ ಮುನ್ನೋಟವೇ ಇಲ್ಲದ ತಾಕ್ಷಣಿಕ ರಾಜಕಾರಣದ ವಾತಾವರಣದಲ್ಲಿ ರೈತರ ಸರಣಿ ಸಾವುಗಳನ್ನಾಗಲೀ, ಇಂದು ಎರಡಂಕಿ ಮುಟ್ಟಿ ವಿಷದಂತೆ ಏರುತ್ತಿರುವ ಹಣದುಬ್ಬರಕ್ಕಾಗಲೀ ನಿಜವಾಗಿ ಏನು ಕಾರಣ ಎಂದು ಯೋಚಿಸಲು ಯಾರಿಗೂ ವ್ಯವಧಾನವೇ ಇಲ್ಲದಾಗಿದೆ. ಎಂತಹುದೇ ಕಾರ್ಯಕ್ರಮಗಳನ್ನು ಪ್ರಕಟಿಸಿದರೂ ರೈತರ ಆತ್ಮಹತ್ಯೆ ನಿಲ್ಲುತ್ತಿಲ್ಲ. ಎಂತಹುದೇ ಬೆಲೆ ರಿಯಾಯ್ತಿ ಪ್ರಕಟಿಸಿದರೂ ಹಣದುಬ್ಬರ ಹತೋಟಿಗೆ ಸಿಗುತ್ತಿಲ್ಲ. ಏಕೆ? ಈ ಪ್ರಶ್ನೆಗೆ ಯಾರೂ ಉತ್ತರ ಕೊಡುತ್ತಿಲ್ಲ. ಸುಮ್ಮನೆ ಈ ಬಗ್ಗೆ ಗಲಾಟೆ ಮಾಡುತ್ತಿರುವ ಬಿಜೆಪಿ ಮತ್ತು ಇತರೆ ವಿರೋಧ ಪಕ್ಷಗಳ ನಾಯಕರಿಗೂ ಇದಕ್ಕೆ ಉತ್ತರ ಗೊತ್ತಿಲ್ಲ. ಏಕೆಂದರೆ ಇವರೆಲ್ಲರೂ ಮರುಳಾಗಿ ಅನುಸರಿಸುತ್ತಿರುವ ಆರ್ಥಿಕ ನೀತಿ, ಸಣ್ಣ ಪುಟ್ಟ ವಿವರಗಳ ಹೊರತಾಗಿ, ಒಂದೇ ಆಗಿದೆ. ಹಾಗೆ ನೋಡಿದರೆ ಇದಕ್ಕೆ ನಿಜವಾಗಿ ಉತ್ತರ ಕೊಡಬೇಕಾದ ಪ್ರಧಾನಿ ಮನಮೋಹನ ಸಿಂಗರು ಇದಕ್ಕೆಲ್ಲ ಅಮೆರಿಕಾದೊಡನೆಯ ಅಣು ಒಪ್ಪಂದದ ಜಾರಿಯೇ ಪರಿಹಾರವೆಂಬಂತೆ ಅದಕ್ಕಾಗಿ ತಮ್ಮ ಸರ್ಕಾರವನ್ನೇ ಬಲಿಕೊಡಲು ಸಿದ್ಧರಾಗುತ್ತಿದ್ದಾರೆ! ಬಹುಶಃ ಅವರಿಗೆ ಈಗ ಅಧಿಕಾರ ಬೇಡವಾಗಿದೆ. ಅವರು ಆರಂಭಿಸಿದ ಹೊಸ ಆರ್ಥಿಕ ನೀತಿ ತನ್ನೆಲ್ಲ್ಲ ಫಲಗಳನ್ನು ನೀಡಬೇಕಾದವರಿಗೆ ನೀಡಿ, ಈಗ ಅವರ ಕೊರಳಿಗೇ ಸುತ್ತಿಕೊಳ್ಳುತ್ತಿರುವ ಹಾವಾಗಿ ಪರಿಣಮಿಸಿದೆ. ಹೀಗಾಗಿ ಇನ್ನು ಕೆಲವೇ ದಿನಗಳಲ್ಲಿ ರೈತರೊಂದಿಗೆ ಮಧ್ಯಮ ವರ್ಗವೂ ಬೀದಿಗೆ ಬಂದರೂ ಆಶ್ಚರ್ಯವಿಲ್ಲ. ಏಕೆಂದರೆ, ಹಣಕಾಸಿನ ಮಂತ್ರಿ ಚಿದಂಬರಂ ಅವರೇ ಹೇಳಿದ್ದಾರಲ್ಲ, ಈ ಬೆಲೆ ಏರಿಕೆ ನಿರೀಕ್ಷಿತ ಮತ್ತು ಇದಕ್ಕೆ ಸದ್ಯಕ್ಕೆ ಪರಿಹಾರವಿಲ್ಲವೆಂದು? ಸದ್ಯದ ಪರಿಸ್ಥಿತಿಯಲ್ಲಿ ಇದಕ್ಕಿಂತ ಭಂಡ ಮತ್ತು ನಿರ್ಲಜ್ಜ ಹೇಳಿಕೆ ಇನ್ನೊಂದಿರಲಾರದು.