ಎಲ್ಲರಿಗೂ ಒಳಿತನ್ನು ಮಾಡು

ಎಲ್ಲರಿಗೂ ಒಳಿತನ್ನು ಮಾಡು

ಕವನ

ಶ್ರೀ ದುರ್ಗೆ ಪಾವನೆ ಕರುಣಾಕರಿ

ಶ್ರೀ ಮಾತೆ ಅಂಬೆ ಜಗದೀಶ್ವರಿ  ಜಗದಾದಿಮಾಯೆ ಶಕ್ತಿಸ್ವರೂಪಿಣಿ

ಸೊಗದಿಂದ ಕಾಯೇ 

ಶಂಕರನ ಭಾಮಿನಿ

 

ಕೆಟ್ಟ ಸೃಷ್ಟಿಯ ನಾಶಕೆ ಅವತಾರವೆತ್ತಿದೆ

ದುಷ್ಟ ಮಹಿಷನ ಯಮಪುರಿಗೆ ಅಟ್ಟಿದೆ

ಚಂಡ ಮುಂಡರ ಶಿರವ ಚೆಂಡಾಡಿದೆ

ಧೂಮ್ರಾಕ್ಷನನು ಹೂಂಕಾರದಲಿ ಭಸ್ಮವಾಗಿಸಿದೆ

 

ಕನಕದುಯ್ಯಾಲೆಯಲಿ ಜೀಕುತಲಿ ಸೆಳೆದೆ

ಸುಗ್ರೀವನ ಮನದಿಂಗಿತವ ಅರ್ಥೈಸಿದೆ

ರಕ್ತಬೀಜಾಸುರನ ಕಸುವ ಹೀರಿದೆ

ಶುಂಭ ನಿಶುಂಭರ ಯಮಪುರಿಗಟ್ಟಿದೆ 

 

ಪಾರ್ವತಿ ಕಲ್ಯಾಣಿ ಶಾಂಭವಿ ಶೈಲೇಶ್ವರಿಯೇ

ತಪಶ್ಚಾರಿಣಿ ಅಪರ್ಣೆ ಚಂದ್ರಘಂಟಾ ದೇವಿಯೇ

ಕೂಷ್ಮಾಂಡೆ ಮಹಾದೇವಿ ಕಾರುಣ್ಯನಿಧಿಯೇ

ಸ್ಕಂದಮಾತೆ ಸಮೃದ್ಧಿಯ ನೀಡಿ ಕಾಯೇ

 

ಕಾತ್ಯಾಯನೀ ಕಾಳಿಕಾಂಬೆ, ಚಂಡಿ ಚಾಮುಂಡಿಯೇ

ಮಹಾಯೋಗಿನಿ ಶುಭಕರಿ ಇಂದ್ರಾಣಿಯೇ

ಕಾಲರಾತ್ರಿ ಶಕ್ತಿಸ್ವರೂಪಿಣಿ ಶರಣಾಗತವತ್ಸಲೆಯೇ

ಪಾಪನಾಶಿನಿ ವಿಶ್ವವಂದ್ಯಳೆ ವರಪ್ರದಾಯಿನಿಯೇ

 

ಮಹಾಗೌರಿ ಜ್ಞಾನರೂಪಿಣಿ, ಸರಸ್ವತಿ ಶಾರದೆ

ನಂಬಿದ ಭಕುತರಿಗೆ ಇಂಬನು ನೀಡು ವರದೆ

ಸಿದ್ಧಿದಾತ್ರಿ ಭುವನೇಶ್ವರಿ ಕೃಪಾಕರಿ ಜಯಪ್ರದೆ

ಅನ್ನಪೂರ್ಣೇ ಭಗವತಿ ಭವಾನಿ ಬೇಡುವೆವಿಂದೆ

 

ತನುಮನದಲಿ ಸರ್ವೇಶ್ವರಿಯ ಧ್ಯಾನಿಪೆವು 

ಶಂಕರನ ಮಡದಿಗೆ ಕಿಂಕರರೆಲ್ಲ ಮಣಿವೆವು

ಪಂಕಜನೇತ್ರೆಯ ಅಡಿದಾವರೆಗೆ ನಮಿಪೆವು

ಎಲ್ಲರಿಗು ಒಳಿತನ್ನು ಹಾರೈಸೆಂದು ಭಜಿಪೆವು  

-ರತ್ನಾ ಕೆ.ಭಟ್, ತಲಂಜೇರಿ

ಶಾರದಾ ದೇವಿ ರೂಪದರ್ಶಿ: ಆದ್ಯ ಪ್ರಕಾಶ್, ಬೋಂದೇಲ್

ಚಿತ್ರ್