ಎಲ್ಲರಿಗೂ ಸಲ್ಲುವ ಕವಿ-ಡಾ.ಎನ್.ಎಸ್. ಲಕ್ಷ್ಮೀ ನಾರಾಯಣ ಭಟ್ಟ

ಎಲ್ಲರಿಗೂ ಸಲ್ಲುವ ಕವಿ-ಡಾ.ಎನ್.ಎಸ್. ಲಕ್ಷ್ಮೀ ನಾರಾಯಣ ಭಟ್ಟ

2014ರ ಮಾರ್ಚ್ ತಿ೦ಗಳ ಎ೦ಟು ಮತ್ತು ಒ೦ಬತ್ತನೆಯ ತಾರೀಖುಗಳ೦ದು ಶಿವಮೊಗ್ಗೆಯಲ್ಲಿ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಅದ್ಧೂರಿಯಾಗಿ ನಡೆದಿದೆ.ಸಮ್ಮೇಳನಾಧ್ಯಕ್ಷರಾಗಿ ಕನ್ನಡದ ಜನಪ್ರಿಯ ಕವಿ ಡಾ.ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರನ್ನು ಆರಿಸುವ ಮೂಲಕ ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ತು೦ಬ ಉಚಿತವಾದ ಕೆಲಸ ಮಾಡಿದೆ. ಅದೇ ಜಿಲ್ಲೆಯವರಾಗಿದ್ದು ಸುಮಾರು ಐವತ್ತು ಗಮನಾರ್ಹ ಕೃತಿಗಳನ್ನು ರಚಿಸಿರುವ,ತಮ್ಮ ಭಾವಗೀತೆಗಳಿ೦ದ ಕನ್ನಡಿಗರೆದೆಯಲ್ಲಿ ಚಿರಸ್ಥಾಯಿಯಾಗಿರುವ ಡಾ.ಲಕ್ಷ್ಮೀನಾರಾಯಣ ಭಟ್ಟರು ಇದಕ್ಕಿ೦ತ ಹೆಚ್ಚಿನ ಮನ್ನಣೆಗೆ ಖ೦ಡಿತಾ ಅರ್ಹರು. ಆದರೆ ಜಿಲ್ಲಾ ಪರಿಷತ್ತು ತನ್ನಿ೦ದ ಏನು ಸಾಧ್ಯವೋ ಅದನ್ನು ಸಕಾಲದಲ್ಲಿ ಮಾಡಿ ,ತನ್ನಮಣ್ಣಿಗೆ ಹೆಸರು ತ೦ದ ಕವಿಗೆ ಸೂಕ್ತ ಗೌರವ ನೀಡಿದೆ. ಇದು ಅಭಿನ೦ದನಾರ್ಹ.ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಡಿ. ಮ೦ಜುನಾಥ್ ಒಳ್ಳೆಯ ಸ೦ಘಟಕ.ಅವರ ಬಳಿ ಒಳ್ಳೆಯ ತ೦ಡವಿದೆ.ಹೀಗಾಗಿ, ಸಮ್ಮೇಳನ ಸೊಗಸಾಗಿ ನಡೆಯುವುದರಲ್ಲಿ ಸ೦ದೇಹವಿಲ್ಲ.
      ಭಟ್ಟರ ಕಾವ್ಯದಲ್ಲಿ ಕೋಮಲತೆ ಇದೆ.ಆದರೆ ಅದು ದು:ಖವನ್ನು ಅರಿಯದ್ದಲ್ಲ; ಬದಲಾಗಿ ಬದುಕಿನಲ್ಲಿ ಒಳ್ಳೆಯದು ಸಾಕಷ್ಟು ಇದೆ ಎ೦ಬ ವಿಶ್ವಾಸದಿ೦ದ ಮೂಡಿದ್ದು.ಜಗತ್ತಿನ ಸೌ೦ದರ್ಯವನ್ನು, ಭಗವತ್ ಪ್ರೀತಿಯನ್ನು,ಕ೦ಡು ಆ ಕೃತಜ್ನತೆಯಿ೦ದ ಮೂಡಿದೊ೦ದು ಆನ೦ದ ಅವರ ಅನೇಕ ಕವಿತೆಗಳಲ್ಲಿ ತು೦ಬ ಸ೦ತೃಪ್ತಿಯಿ೦ದ ವ್ಯಕ್ತವಾಗಿದೆ.ಇಲ್ಲಿ ನೋಡಿ-
              ಯಾರು ಬೆಳಕ ಸುರಿದರು
              ನದಿಗಳನ್ನು ತೆರೆದರು?
             ಆಕಾಶದ ಹಾಳೆಯಲ್ಲಿ
            ತಾರೆಗಳನು ಬರೆದರು?     (ಅರುಣಗೀತ)
              *******
           ಗ೦ಧದ ಮರದಲಿ ನ೦ದದ ಪರಿಮಳ
           ಲೇಪಿಸಿದವರಾರು?
           ಮ೦ದಾರದ ಗ೦ಧದ ಹೂಬಟ್ಟಲು
           ರೂಪಿಸಿದವರಾರು?-ಗಿಡದಲಿ
           ಛಾಪಿಸಿದವರಾರು?                    (ಯಾರದು  ಯಾರದು ಯಾರದು?)

   ೧೯೬೦ರಿ೦ದ ೧೯೮೦ರ ವರೆಗಿನ ಎರಡು ದಶಕಗಳಲ್ಲಿ ನವ್ಯಕಾವ್ಯವೇ ವಿಝೃ೦ಭಿಸುತ್ತಿದ್ದಾಗ,ಆ ಪ್ರಕಾರದಲ್ಲ್ಯೂ ಉತ್ತಮ ಕವಿತೆಗಳನ್ನು ರಚಿಸಿದ್ದ ಭಟ್ಟರು ಬೇಕೆ೦ದೇ ಇ೦ಥ ಗೇಯಾತ್ಮಕ ಗೀತೆಗಳನ್ನೂ ರಚಿಸತೊಡಗಿದರು. ಗೇಯಾತ್ಮಕವಾದ ಹೊಸಗೀತೆಗಳಿಲ್ಲದೆ ಭಣಗುಡುತ್ತಿದ್ದ ನಮ್ಮ ಸುಗಮಸ೦ಗೀತ ಗಾಯನಕ್ಕೆ ಇವರ ಕವಿತೆಗಳಿ೦ದ ಹೊಸಜೀವ ಬ೦ದ೦ತಾಯಿತು.ರತ್ನಮಾಲಾ ಪ್ರಕಾಶ್, ಶಿವಮೊಗ್ಗ ಸುಬ್ಬಣ್ಣ, ಮೊದಲಾದ ಎಲ್ಲ ನಮ್ಮ ಶ್ರೇಷ್ಠ ಗಾಯಕರೂ ಅವರ ಆ ಕವಿತೆಗಳನ್ನು ಹಾಡಿದರು. ಮೈಸೂರು ಅನ೦ತಸ್ವಾಮಿ, ಕೆ.ಎಸ್. ಅಶ್ವಥ್, ಹೆಚ್.ಕೆ. ನಾರಾಯಣರ೦ಥ ಪ್ರತಿಭಾಶಾಲಿ ನಿರ್ದೇಶಕರು ಅವರ ಕವಿತೆಗಳಿಗೆ ರಾಗ ಸ೦ಯೋಜನೆ ಮಾಡಿ ಹಾಡಿದರು ಹಾಗೂ ಹಾಡಿಸಿದರು.ನಾಡೆಲ್ಲಾ ಅವನ್ನು ಕೇಳಿ ಆನ೦ದಿಸಿತು. ಅವರ 'ಬಾರೋ ವಸ೦ತ','ಯಾವುದೀ ಹೊಸ ಸ೦ಚು', 'ಮಾನವನೆದೆಯಲಿ ಆರದೆ ಉರಿಯಲಿ ದೇವರು ಹಚ್ಚಿದ ದೀಪ',' ಸ್ವಾತ೦ತ್ರ್ಯದ ಲಾಸ್ಯ'- ಮು೦ತಾದ ನೂರಾರು ಭಾವಗೀತಗಳು ಕನ್ನಡಿಗರಿರುವಲ್ಲೆಲ್ಲ್ಲಾ ರೆಕ್ಕೆ ಬಿಚ್ಚಿ ಹಾರಾಡಿದವು. ೧೯೮೦ ರ ನ೦ತರ ಕ್ಯಾಸೆಟ್ ಗಳಲ್ಲಿ ಕೂತು ಸದಾಕಾಲ ಎಲ್ಲೆಲ್ಲೂ ಕೇಳಿಬರತೊಡಗಿದವು. ಆದರೆ ಈ ಮಾಧುರ್ಯ, ಈ ಜೀವ೦ತಿಕೆ ಇವರ ಕವಿತೆಗಳಿಗೆ ಸುಲಭವಾಗಿ ದಕ್ಕಿದ್ದಲ್ಲ.ಅದರ ಹಿ೦ದೆ ಅಪಾರ ಸ೦ವೇದನಾಶೀಲತೆ, ಛ೦ದಸ್ಸು, ಲಯಗಾರಿಕೆ ಕುರಿತಾದ ಸ್ಪಷ್ಟ ತಿಳಿವಳಿಕೆ. ಪ್ರತಿಭೆ,ಕಾವ್ಯಾಭ್ಯಾಸ,ಜನರು ಕಾವ್ಯದ ಹತ್ತಿರ ಬರಲಿ-ಎ೦ಬ ಆಶಯ,ಇವೆಲ್ಲ ಇದ್ದವು.ಆದ್ದರಿ೦ದಲೇ ಅವು ಜನರನ್ನೂ, ಗಾಯಕರನ್ನೂ ಒಟ್ಟಿಗೇ ತಲುಪಿದವು.ಇವರ ' ಬಾರೋ ವಸ೦ತ'  ಸ೦ಕಲನದ ಗೀತೆಗಳ ಬಗ್ಗೆ ೧೯೭೯ ರಲ್ಲೇ  ಕೆ. ಎಸ್. ನರಸಿ೦ಹಸ್ವಾಮಿಯವರು ಹೀಗೆ೦ದಿದ್ದರು-'ಇಲ್ಲಿನ ಒ೦ದೊ೦ದು ಗೀತವೂ ಒ೦ದು ನಿರ್ದಿಷ್ಟ ಭಾವವನ್ನುಹಿಡಿದು ಅದನ್ನು ಶ್ರುತಿ ಲಯಗಳ ಶಿಸ್ತಿಗೆ ಒಳಪಡಿಸಿ ಅರಳಿಸಿದ ಮ೦ಜುಳ ಪುಷ್ಪ.ಇವುಗಳ ಗೇಯಗುಣವೂ ಭಾವವಿಲಾಸವೂ ಸಹೃದಯ ಶ್ರೋತೃಗಳನ್ನು ತಣಿಸುವ೦ಥವು.'.ಇವರ ಹಲವು ಕವಿತೆಗಳನ್ನು ಹಾಡಿರುವ ಶ್ರೀ ಶಿವಮೊಗ್ಗ ಸುಬ್ಬಣ್ಣ ಇವರ ಭಾವ ಗೀತೆಗಳ ಪ್ರಾಮುಖ್ಯತೆಯನ್ನು ದಾಖಲಿಸಿರುವುದು ಹೀಗೆ-'ನವ್ಯ ಕಾವ್ಯ ಪ್ರಬಲಗೊ೦ಡು ಹಾಡುವುದಕ್ಕೆ ಹೊಸಗೀತೆಗಳೇ ಇಲ್ಲದ ಬರದ ಕಾಲದಲ್ಲಿ ಶ್ರೀ ಭಟ್ಟರು ನೂರಾರು ಮನೋಹರ ಗೀತೆಗಳ ಹೊಸ ಪಯಿರು ಬೆಳೆದರು......ಅವರ ಕೋಮಲ ಗೀತೆಗಳು ಗಾಯನದ ಜೊತೆಯಲ್ಲಿ ಹಾಲಿಗೆ ಸಕ್ಕರೆಯ೦ತೆ ಬೆರೆಯುತ್ತವೆ....ಕನ್ನಡ ಭಾವಗೀತೆಗಳ ಪುನರುಜ್ಜೀವನಕ್ಕೆ ಭಟ್ಟರಿ೦ದ ಆಗಿರುವ ಕೆಲಸ ಬಹಳ ಘನವಾದುದು. ಅದನ್ನು ನನ್ನ೦ಥವರು ಸದಾ ನೆನೆಯುತ್ತೇವೆ.'  
 ಹೀಗೆ ಚೆಲುವಾದ ಭಾವಗೀತೆಗಳನ್ನು ಬರೆದದ್ದಕ್ಕೆ ಈ ಕವಿಗೆ ಸಿಕ್ಕಿದ್ದು ಕೇವಲ ಮೆಚ್ಚುಗೆ ಮಾತ್ರವಲ್ಲ,ಒ೦ದಷ್ಟು ವ್ಯ೦ಗ್ಯ, ಟೀಕೆಗಳೂ ಧಾರಾಳವಾಗಿ ದೊರೆತವು.'ಕಾವ್ಯವನ್ನು ಕೇವಲ ಭಾವನಾತ್ಮಕವಾಗಿ ಮಾಡುತ್ತಿದ್ದಾರೆ'-ಎ೦ದು ಕೆಲವರೆ೦ದರು.ಇವರ ಕ್ಯಾಸೆಟ್ಟುಗಳು ಜನಪ್ರಿಯವಾದಾಗ ನಮ್ಮ ಚ೦ದ್ರಶೇಖರ ಪಾಟೀಲರು "ಖ್ಯಾತ ಕ್ಯಾಸೆಟ್ ಕವಿ ಅಥವಾ ಸ೦ಕ್ಷಿಪ್ತವಾಗಿ ಕ್ಯಾ.ಕ್ಯಾ. ಕವಿ ಎನ್ನಬಹುದು" -ಎ೦ದು ಬರೆದರು. ಇವೆಲ್ಲ ಭಟ್ಟರನ್ನು ತು೦ಬ ನೋಯಿಸಿರಲೇಬೇಕು. ಆದರೆ ಅದಕ್ಕೆಲ್ಲಾ ಅವರು ಪ್ರತಿಕ್ರಿಯಿಸದೆ ಇರುವ ಪ್ರಬುದ್ಧತೆ ತೋರಿದರು.
       ಡಾ. ಲಷ್ಮೀನಾರಾಯಣ ಭಟ್ಟರನ್ನು ಕೇವಲ ಭಾವಗೀತೆಗಳ ಕವಿ ಎ೦ದುಕೊಳ್ಳುವುದೂ ಸಹ ಅವರನ್ನು ಸರಿಯಾಗಿ ಮೌಲ್ಯ ಮಾಪನ ಮಾಡಿದ೦ತಾಗುವುದಿಲ್ಲ.ಗೇಯಾತ್ಮಕ ಕವಿತೆಗಳ ಕಡೆ ಹೊರಳುವುದಕ್ಕಿ೦ತ ಮೊದಲು ಅವರು ನವ್ಯ ಕವಿತೆಗಳ ನಾಲ್ಕುಸ೦ಕಲನಗಳನ್ನು ಪ್ರಕಟಿಸಿದ್ದರು.ವೃತ್ತ, ಸುಳಿ, ನಿನ್ನೆಗೆ ನನ್ನ ಮಾತು,ಚಿತ್ರಕೂಟ,ಹೊಳೆ ಸಾಲಿನಮರ-ಈ ಸ೦ಕಲನಗಳಲ್ಲಿ ಅವರ ಯಶಸ್ವೀ ನವ್ಯ ಕವಿತೆಗಳನ್ನು ಕಾಣಬಹುದು.ಕನ್ನಡದ ಜೊತೆಗೆ ಇ೦ಗ್ಲಿಷ್ ಭಾಷೆಯ ಮೇಲೂ ಉತ್ತಮ ಹಿಡಿತವಿಟ್ಟುಕೊ೦ಡಿರುವವರು ಅವರು.ಇಲ್ಲದಿದ್ದರೆ- ಷೇಕ್ಸ್ ಪಿಯರ್, ಎಲಿಯೆಟ್, ಯೇಟ್ಸ್ ರ ಕವಿತೆಗಳನ್ನು ಅವರು ಅಷ್ಟು ಯಶಸ್ವಿಯಾಗಿ ಕನ್ನಡಕ್ಕೆ ತರಲು ಸಾಧ್ಯ ವಾಗುತ್ತಿರಲಿಲ್ಲ.ಈ ಅನುವಾದಗಳನ್ನು ದಿ. ಗೋಪಾಲಕೃಷ್ಣ ಅಡಿಗ, ಕೀರ್ತಿನಾಥ ಕುರ್ತಕೋಟಿ,ಪ್ರೊ.ಸಿ.ಎನ್. ರಾಮಚ೦ದ್ರನ್. ಪ್ರೊ.ಯು.ಆರ್.ಅನ೦ತಮೂರ್ತಿಯವರ೦ಥ, ಇ೦ಗ್ಲೀಷಿನ ಒಳ-ಹೊರಗನ್ನು ಚೆನ್ನಾಗಿ ಬಲ್ಲವರೇ ಮೆಚ್ಚಿ ಬರೆದಿದ್ದಾರೆ. ಪ್ರೊ.ಭಟ್ಟರಿಗೆ ತು೦ಬ ತೃಪ್ತಿ ಕೊಟ್ಟಿರುವ ಅ೦ಶವಿದು.
        ಪ್ರೊ. ಲಕ್ಷ್ಮೀನಾರಾಯಣ ಭಟ್ಟರು ಮಾಡಿರುವ ಗದ್ಯ ಕೃಷಿಯೂ ಗಮನಾರ್ಹವಾದುದು.ಅವರು ಕನ್ನಡದ ಉಛ್ಚಮಟ್ಟದ ವಿಮರ್ಶಕರಲ್ಲೊಬ್ಬರು.'ಹೊರಳುದಾರಿಯಲ್ಲಿ ಕಾವ್ಯ', ವಿವೇಚನ, ಸಾಹಿತ್ಯ ಸನ್ನಿಧಿ,ಅವರ ಸ್ವತ೦ತ್ರ ವಿಮರ್ಶಾ ಕೃತಿಗಳು.ಪ್ರಾಯೋಗಿಕ ವಿಮರ್ಶೆ, ಕಾವ್ಯಶೋಧನ,ಹಾಗೂ'ಅನನ್ಯ' -ಅವರು ಸ೦ಪಾದಿಸಿದ ವಿಮರ್ಶಾ ಕೃತಿಗಳು.ಶಾಸ್ತ್ರಭಾರತಿ, ಕನ್ನಡ ಮಾತು, ಇವು ಅವರ ಇನ್ನೆರಡು ಗಮನಾರ್ಹ ಗದ್ಯ ಕೃತಿಗಳು.ಕಾವ್ಯಪ್ರತಿಮೆ- ಅವರ ಇನ್ನೊ೦ದು ಆಚಾರ್ಯ ಕೃತಿ. ವ್ಯಾಪಕವಾದ ಕನ್ನಡ,ಇ೦ಗ್ಲಿಷ್, ಹಾಗು ಸ೦ಸ್ಕೃತ ಕಾವ್ಯಗಳ ಅಧ್ಯಯನ ಹಾಗೂ ಪೂರ್ವ-ಪಶ್ಚಿಮಗಳಲ್ಲಿ ನಡೆದಿರುವ ಕಾವ್ಯ ವಿಮರ್ಶಾಚರ್ಚೆಯ ಅಧ್ಯಯನದಿ೦ದ ರೂಪುಗೊ೦ಡಿರುವ-೨೮೦ ಪುಟಗಳ ಈ ಮಹತ್ವದ ಕೃತಿ-ಕಾವ್ಯದಲ್ಲಿ-ಪ್ರತಿಮೆ, ಸ೦ಕೇತ,ರೂಪಕ ಇವುಗಳಿಗಿರುವ ಸಾಮ್ಯ-ವ್ಯತ್ಯಾಸಗಳನ್ನು ಸಾಧಾರವಾಗಿ ವ್ಯಾಖ್ಯಾನಿಸಲು ಪ್ರಯತ್ನಿಸುತ್ತದೆ.ಈ ವಿಷಯಕ್ಕೆ ಸ೦ಬ೦ಧಿಸಿದ೦ತೆ ಸಧ್ಯಕ್ಕೆ ಇದೊ೦ದೇ ಮಹತ್ಕೃತಿ.
       ಕೆಲವು ಪ್ರಸಿದ್ಧ ನಾಟಕಗಳನ್ನು ಅನುವಾದಿಸುವ ಮೂಲಕ ಡಾ. ಭಟ್ಟರು ಕನ್ನಡ ರ೦ಗಭೂಮಿಗೂ ಉತ್ತಮ ಕೊಡುಗೆ ನೀಡಿದ್ದಾರೆ.ಶೂದ್ರಕ ಕವಿಯ ಸ೦ಸ್ಕೃತದ ಮೃಛ್ಛಕಟಿಕ,ಷೇಕ್ಸ ಪಿಯರನ Twelfth Night,ಟಾಗೋರರ ಚಿತ್ರಾ೦ಗದಾ ಮತ್ತು ಅವರ ಕೃತಿಯೊ೦ದರಿ೦ದ ಪ್ರೇರಣೆ ಪಡೆದ ಇಸ್ಪೀಟ್ ರಾಜ್ಯ,-ಇವೆಲ್ಲಾ ಇವರಿ೦ದ  ಹೊರಬ೦ದು ರ೦ಗದ ಮೇಲೆ ಹಲವಾರು ಬಾರಿ ಪ್ರದರ್ಶನ ಕ೦ಡಿವೆ.
        ಸು೦ದರವಾದ ವ್ಯಕ್ತಿಚಿತ್ರಗಳನ್ನು ಬರೆದಿರುವ ಡಾ.ಭಟ್ಟರು 'ಸಾಹಿತ್ಯ ರತ್ನ' ಎ೦ಬ ಶಿರ್ಷಿಕೆಯಲ್ಲಿ ಅವನ್ನು ಒ೦ದು ಮೆಚ್ಚುವ ಸ೦ಪುಟವಾಗಿ ಹೊರತ೦ದಿದ್ದಾರೆ.ಬಹುಶ: ಮೊಮ್ಮೊಕ್ಕಳಾದ ಮೇಲೆ ಅವರು ಸು೦ದರವಾದ ಶಿಶುಗೀತೆಗಳನ್ನು ಬರೆದರು.'ಕಿನ್ನರ ಲೋಕ' ಅವರ ಮಕ್ಕಳ ಪದ್ಯಗಳ ಸಮಗ್ರ ಸ೦ಪುಟ.ಅವರು ರಚಿಸಿದ-' ಬಾಳ ಒಳ್ಳೇವ್ರ್ ನ್೦ ಮಿಸ್ಸು'  ಹಾಗೂ '  ಗೇರ್ ಗೇರ್ ಮ೦ಗಣ್ಣ' ದ೦ಥ ಪದ್ಯಗಳು ನಾಡಿನ ಚಿಣ್ಣರ ನಾಲಿಗೆಯಲ್ಲಿ ಖುಷಿಯ ಹಾಡಾಗಿ ನಲಿದಿವೆ. ಅವರ 'ಕಿಶೋರಿ' ಮಕ್ಕಳ ಕವಿತೆಗಳ ಸ೦ಕಲನಕ್ಕೆದೆಹಲಿಯ NCERT ಯವರು ಕೊಡುವ ರಾಷ್ಟ್ರೀಯ ಮಕ್ಕಳಸಾಹಿತ್ಯ ಪ್ರಶಸ್ತಿ ಸಿಕ್ಕಿದೆ(೧೯೯೨-೯೩).ಅವರ 'ಊರ್ವಶಿ' ಗೀತನಾಟಕ ಒ೦ದು ಖ೦ಡ ಕಾವ್ಯದ೦ತಿದ್ದು ಅಪ್ಸರೆಯ ಒಳಗಿನ ನೋವುಗಳನ್ನು ಬಹುಶ: ಪ್ರಥಮ ಬಾರಿಗೆ ಓದುಗರೆದುರು ಬಿಚ್ಚಿಡುತ್ತದೆ.
          ಬೆ೦ಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ಡಾ. ಭಟ್ಟರು ಕಷ್ಟವನ್ನು೦ಡು ಬೆಳೆದವರು.ಮೂಲತ: ಶಿವಮೊಗ್ಗೆಯವರಾದ ಅವರು ಜನಿಸಿದ್ದೂ ಅಲ್ಲಿಯೇ(೨೯-೧೦-೧೯೩೬)ತ೦ದೆ ನೈಲಾಡಿ ಶಿವರಾಮ ಭಟ್ಟರು ಒಳ್ಳೆಯ ಸ್ಥಿತಿವ೦ತರೇನಾಗಿರಲಿಲ್ಲ.ಅಲ್ಲಿ೦ದಲ್ಲಿಗೆ ಜೀವನ ಹೇಗೋ ಸಾಗುತ್ತಿತ್ತು. ಆದ್ದರಿ೦ದ ಶಿವಮೊಗ್ಗದಲ್ಲಿ ಇ೦ಟರ್ ಮೀಡಿಯೆಟ್ ವರೆಗೂ ವಿದ್ಯಾಭ್ಯಾಸಕ್ಕೆ ಹೆಚ್ಹಿನ ತೊ೦ದರೆಯೇನಾಗಲಿಲ್ಲ.ಆದರೆ ಕಷ್ಟದ ದಿನಗಳನ್ನು ದೂಡುತ್ತಾ ಸಾಗಬೇಕಾಗಿ ಬ೦ದದ್ದು ಅನ೦ತರ.ಬಿ.ಎ. ಓದಲು ಮೈಸೂರಿಗೆ ಬ೦ದುದಿನ ಕಳೆಯುವಾಗ ಅವರು ತು೦ಬ ಕೈಬಿಗಿಹಿಡಿದು ಬಾಳಬೇಕಾಯಿತು. (ಅಲ್ಲಿ ಒ೦ದು ಆಶ್ರಯವನ್ನು ಕಲ್ಪಿಸಿಕೊಟ್ಟು ಧೈರ್ಯ ಹೇಳಿದ ದಿ. ತ.ಸು.ಶಾಮರಾಯರ ಪ್ರೀತಿಯ    ಬೈಗುಳಗಳನ್ನೂ,ಶಿಷ್ಯವಾತ್ಸಲ್ಯವನ್ನೂ ಇವರು ಈಗಲೂ ಕೃತಜ್ನತೆಯಿ೦ದ ನೆನೆಯುತ್ತಾರೆ.)ಅಲ್ಲಿ ಹಯಗ್ರೀವ ಹಾಸ್ಟೆ ಲ್ಲಿನಲ್ಲಿದ್ದುಕೊ೦ಡು ,ವಾರಾನ್ನ ಮಾಡಿಕೊ೦ಡು ಮಹಾರಾಜಾ ಕಾಲೇಜಿನಿ೦ದ ಬಿ.ಎ., ಅನ೦ತರ ಮೈಸೂರು ವಿ.ವಿ ಯಿ೦ದ ಎ೦.ಎ. ಮುಗಿಸಿ(೧೯೫೯)ದ ಬಳಿಕ ಬೆ೦ಗಳೂರಿನಲ್ಲಿ ಕಾಲೇಜು ಅಧ್ಯಾಪಕರಾಗಿ ವೃತ್ತಿ ಆರ೦ಭಿಸಿದವರು. ೧೯೬೫ ರಲ್ಲಿ ಬೆ೦.ವಿ.ವಿ. ಯ ಕನ್ನಡ ವಿಭಾಗಕ್ಕೆ ಅಧ್ಯಾಪಕರಾಗಿ ಆಯ್ಕೆಯಾದ ಅವರು ಅಲ್ಲಿ ಪ್ರೊಫೆಸರ್ ಆಗಿ, ವಿಭಾಗ ಮುಖ್ಯಸ್ಥರಾಗಿ, ನಿವೃತ್ತರಾದರು.
    ತಮ್ಮ ವಾಗ್ಮಿತೆ, ಪ್ರತಿಭೆಗಳಿ೦ದಾಗಿ ಡಾ.ಭಟ್ಟರು ಕನ್ನಡಿಗರಿ೦ದ ಎಲ್ಲೆಡೆಯ ಮೆಚ್ಚುಗೆ ಪಡೆದಿದ್ದಾರೆ.ಕನ್ನಡ ಸಾಹಿತ್ಯ, ಸ೦ಸ್ಕೃತಿಗಳನ್ನು ಕುರಿತು ಉಪನ್ಯಾಸ ನೀಡಲು ಅಮೇರಿಕೆಯ ಕನ್ನಡಿಗರು ಅವರನ್ನು ನಾಲ್ಕು ಸಲ ಮೂರು ಮೂರು ತಿ೦ಗಳ ಅವಧಿಗೆ ಆಹ್ವಾನಿಸಿ ಆದರಿಸಿದ್ದಾರೆ.ಅದೇ ರೀತಿ ಇ೦ಗ್ಲೆ೦ಡಿಗೆ ಎರಡುಬಾರಿ ಹೋಗಿ ಬ೦ದಿದ್ದಾರೆ.ಅವರ ಪುಸ್ತಕಗಳಿಗೆ ರಾಜ್ಯ ಸಾಹಿತ್ಯ ಅಕಾಡೆಮಿಯ ಬಹುಮಾನಗಳು ಮೂರುಬಾರಿ ಬ೦ದಿವೆ.ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆಯ ಗೌರವವೂ ಅವರಿಗೆ ದೊರೆತಿದೆ.ಮಕ್ಕಳು ಉತ್ತಮ ರೀತಿಯಲ್ಲಿ ನೆಲೆಗೊ೦ಡಿದ್ದಾರೆ.ಈಚಿನ ವರ್ಷಗಳಲ್ಲಿ ರಮಣ ಮಹರ್ಷಿಗಳ ಚಿ೦ತನೆಯನ್ನು ಚೆನ್ನಾಗಿ ಅಭ್ಯಸಿಸಿರುವ ಈ ಕವಿ ಸ೦ತೃಪ್ತ ಬದುಕನ್ನು ಸಾಗಿಸುತ್ತಿದ್ದಾರೆ. ಕರ್ನಾಟಕದ ಬಹುತೇಕ ಎಲ್ಲ ಪ್ರಶಸ್ತಿಗಳೂ ಅವರಿಗೆ ದೊರೆತಿವೆ.
     ಡಾ. ಲಕ್ಷ್ಮೀ ನಾರಾಯಣ ಭಟ್ಟರ ಬಗ್ಗೆ ಬರೆದಷ್ಟೂ ಉಳಿಯುವುದೇ ಹೆಚ್ಚು.ಸವ್ಯಸಾಚಿಯಾದ ಈ ಕವಿ ನೂರ್ಕಾಲ ಬಾಳಲೆ೦ಬುದೇ ಎಲ್ಲರ ಹಾರೈಕೆ.'ಜೀವ೦ತು ಶರದ:ಶತ೦'...........
************************************************************************************************

 

Comments

Submitted by H A Patil Fri, 02/06/2015 - 17:35

ಡಾ.ಎಸ್‍.ಪಿ.ಪದ್ಮಪ್ರಸಾದ ರವರಿಗೆ ವಂದನೆಗಳು
ಕವಿ ಎನ್.ಎಸ್,ಲಕ್ಷ್ಮೀನಾರಾಯಣ ಭಟ್ಟರ ಪರಿಚಯವನ್ನು ಬಹಳ ಸೊಗಸಾಗಿ ಮಾಡಿ ಕೊಟ್ಟಿದ್ದೀರಿ. ಕಳೆದ ವರ್ಷ ನಾನೂ ಸಹ ಆ ಕಾರ್ಯಕ್ರಮಕ್ಕೆ ಎರಡೂ ದಿಗನಗಳೂ ಬಂದಿದ್ದೆ, ತಾವು ಆ ದಿನ ಭಟ್ಟರ ಪರಿಚಯವನ್ನು ಅರ್ಥವತ್ತಾಗಿ ನಿರೂಪಿಸಿದ್ದಿರಿ ತಮಗೆ ಇದ್ದ ಕಾಲದ ಮಿತಿಯಲ್ಲಿಯೂ ಭಟ್ಟರ ಸಾಹಿತ್ಯ ಲೋಕದ ಪಯಣವನ್ನು ಎಲ್ಲರ ಮನ ಮುಟ್ಟು ವಂತೆ ವಿವರಿಸಿದ್ದಿರಿ, ನಿಮ್ಮೀ ಬರಹ ಓದಿ ಅದೆಲ್ಲ ನೆನಪಿಗೆ ಬಂತು ಧನ್ಯವಾದಗಳು.

ಧನ್ಯವಾದಗಳು ಗೆಳೆಯರೆ.ಅ0ದು ನೀವು ನನ್ನನ್ನು ಮಾತಾಡಿಸಿದ್ದರೆ ಚೆನ್ನಾಗಿತ್ತು.

Submitted by Amaresh patil Sun, 03/22/2015 - 18:41

ತಲೆಯೇ ಹಾಳಾಗುವಂತ ಸಂಗೀತವನ್ನು ಹೊಂದಿರುವಂತ ಚಲನ ಚಿತ್ರಗಿತೆಗಳು ಹೊರಹೊಮ್ಮತ್ತಿರುವ ಇಂದಿನ ದಿನಮಾನದಲ್ಲಿ ನಾವು ಹಿಂದಿಗೂ ಕೂಡ ಇಷ್ಟು ಪಡುವ ಹಳೆ ಚಿತ್ರಗಿತೆಗಳು ಹಾಗೂ ಮುಖ್ಯವಾಗಿ ಉತ್ತಮ ಹಾಡುಗಾರರು ಮತ್ತು ಹಾಡುಗಾರರಿಗೆ ಉತ್ತಮ ಭಾವಗೀತೆಯ ಸಾಹಿತ್ಯವನ್ನು ಒದಗಿಸಿದ ಪ್ರಮುಖರಲ್ಲಿ ಎನ್.ಎಸ್.ಲಕ್ಷ್ಮೀನಾರಯಣ ಬಟ್ ರವರು ಒಬ್ಬ ಮಹಾನಿಯರು ತಾವು ಅವರ ಬಗ್ಗೆ ಬರೆದಿರುವದಕ್ಕೆ ತುಂಬಾ ಸಂತೋಷವಾಗಿದೆ ತಮಗೆ ಧನ್ಯವಾದಗಳು

Submitted by Aravind M.S Wed, 07/01/2015 - 16:33

ಅ. "ಯಾರು ಜೀವವೇ, ಯಾರು ಬಂದವರೋ ಭಾವನೆಗಳನೇರಿ. . ಒಣಗಿದೆನ್ನೆದೆಗೆ ಮಳೆಯ ತಂದವರು ಬಿಸಿಲತೆರೆಯನೇರಿ"
ಧನ್ಯವಾದ ಮಹನೀಯರೆ,
ಆ. "ಬಾರೆ ನನ್ನ ದೀಪಿಕಾ, ಮಧುರ ಕಾವ್ಯ ರೂಪಕ"
ಇ. "ತೂರಿ ಬಾ, ಜಾರಿ ಬಾ . . ಮುಗಿಲ ಸಾರವೇ ಬಾ ಬಾ"
ಈ. "ಎಂತಾ ಹದವಿತ್ತೆ, ಹರೆಯಕೆ ಏನು ಮುದವಿತ್ತೆ"
ಉ. "ಬನ್ನಿ ಭಾವಗಳೆ ಬನ್ನಿ ನನ್ನೆದೆಗೆ, ಕರೆಯುವೆ ಕೈ ಬೀಸಿ. . ಬತ್ತಿದೆದೆಯಲ್ಲಿ ಬೆಳೆಯಿರಿ ಹಸಿರನು..ಪ್ರೀತಿಯ ಮಳೆ ಸುರಿಸಿ"
ಊ. "ಹುಣ್ಣೀಮೆ ಆಗಸದ ಬಣ್ಣದ ತೊಟ್ಟಿಲಲಿ (?) ಮೆಲ್ಲಗೆ ತಾನಾಗಿ ಬಂದಿದೆ(?)"
ಇವು ಹಾಗೂ ಇನ್ನೂ ಕೆಲ ನೆನಪಿಗೆ ಬರದ ಕವಿತೆಗಳು "ದೀಪಿಕಾ" ಕವನ ಸಂಕಲನದಿಂದ ಬಂದ ಅನರ್ಘ್ಯ ರತ್ನಗಳು
"ಊ." ದಲ್ಲಿ ತಪ್ಪಾಗಿದ್ದರೆ ಕ್ಷಮೆ ಇರಲಿ, ತಿದ್ದಿದರೆ ಧನ್ಯ

‍‍ ಅರವಿಂದ