ಎಲ್ಲರಿಗೊಂದು ಪಾಠ!

" ನನ್ನ ಹೆಂಡತಿ ಸದಾ ರೇಗುವುದು, ಗೊಣಗುವುದು, ಬೈಯುವುದು, ಸಣ್ಣ ಸಮಸ್ಯೆಗೂ ದೊಡ್ಡದಾಗಿ ಪ್ರತಿಕ್ರಿಯಿಸುವುದು ಅವಳ ಸ್ವಭಾವವಾಗಿತ್ತು. ಅದೊಂದು ದಿನದಿಂದ ಆಕೆ ಸಂಪೂರ್ಣ ಬದಲಾದದ್ದು ಗಮನಕ್ಕೆ ಬಂತು.
" ನಾನು ಈ ದಿನ ಸ್ವಲ್ಪ ಕುಡಿಯುತ್ತೇನೆ" ಎಂದಾಗ ಶಾಂತ ಚಿತ್ತದಿಂದ " ಸರಿ.. ಆದರೆ ಮಿತಿಯಿರಲಿ" ಎಂದಳು. ಮತ್ತೊಂದು ದಿನ ಮಗ " ಅಮ್ಮಾ ಟೆಸ್ಟ್ ಲಿ ಎಲ್ಲ ವಿಷಯಗಳಲ್ಲಿ ಕಡಿಮೆ ಅಂಕ ಬಂದಿವೆ " ಎಂದು ಅಳುಕುತ್ತಾ ಹೇಳಿದಾಗ " ಪರವಾಗಿಲ್ಲ ಬಿಡು. ಇನ್ನು ಮುಂದೆ ಹೆಚ್ಚು ಓದು. ಸೆಮಿಸ್ಟರ್ ಹೋದರೆ ಹೋಗಲಿ. ಮುಂದಿನ ಪರೀಕ್ಷೆಗೆ ಟ್ಯೂಷನ್ ತೊಗೋ." ಎಂದಾಗ ಮಗ ಮೈ ಚಿವುಟಿ ನೋಡಿಕೊಂಡ .
ಮತ್ತೊಮ್ಮೆ ಮಗಳು" ಅಮ್ಮ ಈ ದಿನ ಕಾರ್ ಸ್ವಲ್ಪ ಜಖಂ ಆಯ್ತು" ಎಂದು ಅಳುತ್ತಾ ಹೇಳಿದಾಗ " ಅಳಬೇಡ.. ಹೋಗಿ ಈಗಲೇ ರಿಪೇರಿಗೆ ಕೊಟ್ಟು ಬಾ " ಎಂದು ತಲೆ ಸವರಿದಳು. ಮಗಳ ಅಳು ತಟ್ಟನೆ ನಿಂತು ಅಚ್ಚರಿ ಮನೆ ಮಾಡಿತ್ತು.. ನಮಗೆಲ್ಲ ಅವಳ ಶಾಂತ ಪ್ರತಿಕ್ರಿಯೆ ನೋಡಿ ಚಿಂತೆಯಾಯ್ತು.
ಅವಳೇನಾದರೂ ವೈದ್ಯರ ಬಳಿ ಹೋಗಿ ಯಾವುದಾದರೂ ಮಾತ್ರೆ ತಂದು ಹೀಗೆ ಮಂಕಾಗಿದ್ದಾಳಾ ಅನ್ನಿಸತೊಡಗಿತು. ಹಾಗಾಗಿ ನಾವೆಲ್ಲ ಅವಳನ್ನು ಕೂರಿಸಿ ಮಾತಾಡಿದಾಗ ಅವಳು ಕೊಟ್ಟ ಉತ್ತರದಿಂದ ನಾವು ಮೂಕ ವಿಸ್ಮಿತರಾದೆವು.
"ಪ್ರತಿ ಮನುಷ್ಯನೂ ತನ್ನ ಜೀವಕ್ಕೆ - ಜೀವನಕ್ಕೇ ತಾನೇ ಜವಾಬ್ದಾರನು. ನನಗೆ ಜ್ಞಾನೋದಯವಾಗಲು ಇಷ್ಟು ಸಮಯ ಬೇಕಾಯಿತು. ನನ್ನ ಕೋಪ, ಬುದ್ದಿವಾದ, ಕಿರಿಕಿರಿ, ಬೇಸರ, ನಿದ್ರಾಹೀನತೆ, ಚಿಂತೆ, ಆತಂಕ, ನನ್ನ ಧೈರ್ಯ ಯಾವುವೂ ನಿಮ್ಮ ಸಮಸ್ಯೆಯನ್ನು ಪರಿಹರಿಸಲಾರವು, ಬದಲಿಗೆ ನನ್ನ ಸಮಸ್ಯೆಯನ್ನು ಹೆಚ್ಚಿಸುವವು ಎಂದು ಅರಿವಾಗಿದ್ದೇ ಈಗ.
ಎಲ್ಲರ ಕೆಲಸಗಳಿಗೆ ನಾನು ಜವಾಬ್ದಾರಳಾಗಿ ಎಲ್ಲರನ್ನೂ ಸಂತೋಷವಾಗಿರಿಸುವುದು ನನ್ನ ಕೆಲಸವಲ್ಲ. ಹಾಗಾಗಿ ನಾನೊಂದು ನಿರ್ಧಾರಕ್ಕೆ ಬಂದೆ. ಸದಾ ಶಾಂತಳಾಗಿದ್ದು ಅವರವರ ಸಮಸ್ಯೆಗೆ ಅವರೇ ಪರಿಹಾರ ಕಂಡುಕೊಳ್ಳಲಿ ಎಂದಿದ್ದು ಬಿಡುವುದು ನನ್ನ ಕರ್ತವ್ಯ. ಯೋಗ, ಧ್ಯಾನ, ವೈದ್ಯಕೀಯ ರಂಗ, ಆಧ್ಯಾತ್ಮ ಎಲ್ಲ ಹೇಳುವುದು ಒಂದೇ ವಿಚಾರ " ನಾನು ನನ್ನನ್ನು ಮಾತ್ರ ನಿಯಂತ್ರಿಸಿಕೊಳ್ಳಬಲ್ಲೆನೇ ಹೊರತು ಇತರರನ್ನಲ್ಲ .
ಪ್ರತಿ ಜೀವಿಯೂ ಅದೆಷ್ಟೇ ದೊಡ್ಡ ಸಮಸ್ಯೆಯಾಗಿದ್ದರೂ, ತನ್ನ ಸಮಸ್ಯೆಯ ವಿರುದ್ಧ ಹೋರಾಡುವ ಚೈತನ್ಯ ಪಡೆದೇ ಬಂದಿರುತ್ತಾನೆ. ನನ್ನ ಕೆಲಸವೇನೆಂದರೆ ಎಲ್ಲರನ್ನೂ ಪ್ರೀತಿಸುವುದು, ಎಲ್ಲರಿಗಾಗಿ ಪ್ರಾರ್ಥಿಸುವುದು,ಎಲ್ಲರನ್ನೂ ಪ್ರೋತ್ಸಾಹಿಸುವುದು, ಆದರೆ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಂಡು ಸಂತೋಷವಾಗಿರುವುದು ನಿಮಗೆ ಸಂಬಂಧಿಸಿದ್ದು. ನಾನು ಕೇವಲ ಸಲಹೆ ಕೊಡಬಲ್ಲೆ ಅದೂ ನೀವು ಕೇಳಿದರೆ! ಅದನ್ನ ಪಾಲಿಸುವುದು ನಿಮಗೆ ಬಿಟ್ಟ ವಿಚಾರ.
ನಮ್ಮ ನಿರ್ಧಾರಗಳು ಒಳಿತಿರಬಹುದು,ಕೆಡುಕಿರಬಹುದು, ಮತ್ತೊಂದು ಸಮಸ್ಯೆ ಎದುರಾಗಬಹುದು. ಅದರೊಡನೆ ಬದುಕುವುದನ್ನು ನಾವು ಕಲಿಯಬೇಕು..ನನ್ನ ಈ ನಿರ್ಧಾರ ನನಗೆ ಸಂತಸ ಶಾಂತಿ ನೆಮ್ಮದಿ ತಂದಿದೆ.. " ಹೆಂಡತಿ ಹೀಗೆ ಮಾತು ಮುಗಿಸಿದಾಗ ನಾವೆಲ್ಲ ಮಾತು ಹೊರಡದೇ ಮೂಕರಾದೆವು. ಆ ದಿನದಿಂದ ಮನೆಯಲ್ಲಿ ಎಲ್ಲ ಕೆಲಸ ಕಾರ್ಯಗಳು ಸುಲಲಿತವಾದವು ಸರಳವಾದವು. ಯಾಕೆಂದರೆ ಮನೆಯಲ್ಲಿ ಎಲ್ಲರಿಗೂ ತಮ್ಮ ಕರ್ತವ್ಯದ ಅರಿವಾಗಿತ್ತು.ಏನು ಮಾಡಿದರೆ ಏನಾಗುತ್ತದೆ ಅದಕ್ಕೇನು ಪರಿಹಾರ, ಯಾರು ಪರಿಹಾರ ಕೊಡಬೇಕು ಎಲ್ಲದರ ಬಗ್ಗೆ ಕಣ್ಣು ತೆರೆದಿತ್ತು . ಇಡೀ ಕುಟುಂಬ ಪಾಠ ಕಲಿಯಿತು.
(ಮೇಲಿನ ಪುಟ್ಟ ಕಥೆ ವಾಟ್ಸಾಪ್ ಮೂಲಕ ಇಂಗ್ಲೀಷ್ ಭಾಷೆಯಲ್ಲಿ ಬಂದ ಮೆಸೇಜ್. ಆಂಗ್ಲ ಭಾಷೆಯಲ್ಲಿ ಬರೆದ ಆ ಆಜ್ಞಾತ ಲೇಖಕನನ್ನು ಒಮ್ಮೆ ಸ್ಮರಿಸಿ, ವಂದಿಸಿ ನಾನು ಅದನ್ನು ಕನ್ನಡಕ್ಕೆ ಅನುವಾದಿಸಿದ್ದೇನೆ. )
ನಿಜಕ್ಕೂ ಮೇಲಿನ ಪತ್ನಿಯ ಮಾತುಗಳು ಎಷ್ಟೊಂದು ಸತ್ಯ ಆಲ್ಲವೇ? ನಾವು ನಮ್ಮದಲ್ಲದ ಕೆಲಸಗಳ ಹಿಂದೆ ಓಡುತ್ತೇವೆ. ಪುಟ್ಟ ಮಕ್ಕಳನ್ನು ಬಿಟ್ಟು ಉಳಿದ ಎಲ್ಲರಿಗೂ ತಮ್ಮ ಒಳಿತು ಕೆಡುಕುಗಳ ಬಗ್ಗೆ ಅರಿವು ಇದ್ದೇ ಇರುತ್ತದೆ. ಕುಡಿದರೆ ಆರೋಗ್ಯಕ್ಕೆ ಹಾಳು ಎನ್ನುವುದು ನಮಗೆ ಗೊತ್ತಿರುವುದಿಲ್ಲವೇ? ಹಣವೂ ಸುಮ್ಮನೇ ವ್ಯರ್ಥ ಎಂಬ ಸತ್ಯವೂ ತಿಳಿದಿರುತ್ತದೆ. ಆದರೆ ಶೋಕಿಗಾಗಿ ಕುಡಿಯುತ್ತೇವೆ, ಜತೆಗೆ ಒತ್ತಡದಿಂದ ಮುಕ್ತರಾಗಲು ಕುಡಿಯುವುದು ಉತ್ತಮ ಎಂಬ ದೊಡ್ಡ ದೊಡ್ದ ಡೈಲಾಗ್ ಹೊಡೆಯುತ್ತೇವೆ. ಇದನ್ನು ನಮ್ಮ ಮಕ್ಕಳೂ ಅನುಸರಿಸುತ್ತಾರೆ, ಅಪ್ಪ ಕುಡಿದರೆ ತೊಂದರೆ ಇಲ್ಲ ನಾನು ಕುಡಿಯಬಾರದೇಕೆ ಎಂದು ಬೆಳೆದು ನಿಂತ ಮಗ ಯೋಚನೆ ಮಾಡುತ್ತಾನೆ.
ಹೀಗೆ ಯೋಚಿಸಿ, ಕುಡಿದು ಬಂದ ಮಗನಿಗೆ ಬುದ್ಧಿ ಹೇಳಲು ನಾವು ಅಸಮರ್ಥರಾಗುತ್ತೇವೆ. ಹಾಗೂ ಅವನಿಗೆ ಬುದ್ದಿ ಹೇಳುವ ಅರ್ಹತೆಯನ್ನೇ ಕಳೆದುಕೊಳ್ಳುತ್ತೇವೆ. ಅಪರಾತ್ರಿಗಳಲ್ಲಿ ಕಿಟ್ಟಿ ಪಾರ್ಟಿ, ಕ್ಲಬ್ ಎಂದೆಲ್ಲಾ ಓಡಾಡುವ ಅಮ್ಮ, ತನ್ನ ಬೆಳೆದು ನಿಂತ ಮಗಳನ್ನು ಹೇಗೆ ತಾನೇ ಮನೆಯಿಂದ ಹೊರಗಡೆ ಹೋಗದೇ ಇರಲು, ತನ್ನ ಬಾಯ್ ಫ್ರೆಂಡ್ಸ್ ಜೊತೆ ತಿರುಗಾಡದೇ ಇರಲು ಬಿಟ್ಟಾಳು? ಬಿಡಲೇ ಬೇಕಾಗುತ್ತದೆ. ಏಕೆಂದರೆ ಅಮ್ಮ ಮಾಡಬಹುದು, ನಾನ್ಯಾಕೆ ಮಾಡಬಾರದು ಎಂಬ ಯೋಚನೆ ಮಗಳಿಗೂ ಬಂದಿರುತ್ತದೆ ಅಲ್ಲವೇ?
ಅದಕ್ಕೇ ನಾವು ಮೊದಲು ನಮ್ಮ ವರ್ತನೆಗಳನ್ನು ಸರಿಪಡಿಸಿಕೊಳ್ಳಬೇಕು. ನಂತರ ಬೇರೆಯವರಿಗೆ ತಿಳಿ ಹೇಳಲು ಹೋಗಬೇಕು. ಉಳಿದಂತೆ ಬೆಳೆದು ದೊಡ್ಡವರಾಗಿ ಸ್ವಂತ ಯೋಚನೆ ಮಾಡುವ ಶಕ್ತಿ ಇರುವವರಿಗೆ ನಾವು ಸಲಹೆಗಳನ್ನಷ್ಟೇ ನೀಡಬಹುದು ಅದನ್ನು ಅನುಷ್ಟಾನ ಅವರವರೇ ಮಾಡಬೇಕು ಅಲ್ಲವೇ?
-ಬಸಯ್ಯ ಗು. ಮಳಿಮಠ, ಹುಬ್ಬಳ್ಳಿ
ಸಾಂಕೇತಿಕ ಚಿತ್ರ ಕೃಪೆ: ಇಂಟರ್ನೆಟ್ ತಾಣ