ಎಲ್ಲರೂ ನಮ್ಮವರೇ…?

ಎಲ್ಲರೂ ನಮ್ಮವರೇ…?

ಸರಗಳ್ಳತನ ಮಾಡುವವನು ನನ್ನ ಗೆಳೆಯ,

ಸರ ಕಳೆದುಕೊಳ್ಳುವವಳು ನನ್ನ ಅಮ್ಮ,

 

ಕೊಲೆ ಮಾಡುವವನು ನನ್ನ ತಮ್ಮ,

ಕೊಲೆಯಾಗುವವನು ನನ್ನ ಅಣ್ಣ,

 

ಲಂಚ ಪಡೆಯುವವನು ನನ್ನ ಚಿಕ್ಕಪ್ಪ,

ಲಂಚ ಕೊಡುವವನು ನನ್ನ ದೊಡ್ಡಪ್ಪ,

 

ವರದಕ್ಷಿಣೆ ಪಡೆಯುವವನು ನನ್ನ ಅಪ್ಪ,

ವರದಕ್ಷಿಣೆ ಕೊಡುವವನು ನನ್ನ ಮಾವ,

 

ವಂಚಿಸುವವನು ನನ್ನ ಭಾವಮೈದ,

ವಂಚನೆಗೆ ಒಳಗಾಗುವವನು ನನ್ನ ಸೋದರಮಾವ,

 

ಮಹಿಳೆಯರು ನನ್ನ ಬಂಧುಗಳೆ,

ಪುರುಷರೂ ನನ್ನ ರಕ್ತ ಸಂಬಂದಿಗಳೇ,

 

ಆಡಳಿತ ನಡೆಸುವವರು ನನ್ನವರೇ,

ವಿರೋಧಿಸುವವರೂ ನನ್ನವರೇ,

 

ಆಸ್ತಿಕರು ನನ್ನವರೇ,

ನಾಸ್ತಿಕರೂ ನನ್ನವರೇ,

 

ಮೀಸಲಾತಿ ಪಡೆಯುವವರು ನನ್ನವರೇ,

ಮೀಸಲಾತಿ ವಿರೋಧಿಸುವವರೂ ನನ್ನವರೇ,

 

ಎಲ್ಲರೂ ನಮ್ಮವರೇ,

ಆದರೂ ಆದರೂ ಆದರೂ,

 

ಕಾಡುತ್ತಿದೆ ನನ್ನನ್ನು,

ಯಾವುದು ಸರಿ ಯಾವುದು ತಪ್ಪು,

 

ಕಾಡುತ್ತಿದೆ ನನ್ನನ್ನು,

ಯಾರು ನನ್ನವರು, ಯಾರು ಇತರರು,

 

ಕಾಡುತ್ತಿದೆ ನನ್ನನ್ನು ಮತ್ತೆ ಮತ್ತೆ,

ನಾನ್ಯಾರೆಂಬ ಅನಾಥ ಪ್ರಜ್ಞೆ.

  • ಜ್ಞಾನ ಭಿಕ್ಷಾ ಪಾದಯಾತ್ರೆಯ 136 ನೆಯ ದಿನ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನಲ್ಲಿ ವಾಸ್ತವ್ಯದ ಸಮಯದಲ್ಲಿ ಬರೆದ ಬರಹ.  

-ವಿವೇಕಾನಂದ. ಹೆಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ