ಎಲ್ಲರ ಅಂಬೇಡ್ಕರ್

ಎಲ್ಲರ ಅಂಬೇಡ್ಕರ್

ಪುಸ್ತಕದ ಲೇಖಕ/ಕವಿಯ ಹೆಸರು
ಎಚ್ ಟಿ ಪೋತೆ
ಪ್ರಕಾಶಕರು
ಜನ ಪ್ರಕಾಶನ, ಜಯನಗರ, ಬೆಂಗಳೂರು - ೫೬೦೦೪೧
ಪುಸ್ತಕದ ಬೆಲೆ
ರೂ. ೧೦೦.೦೦, ಮುದ್ರಣ: ೨೦೨೩

‘ಎಲ್ಲರ ಅಂಬೇಡ್ಕರ್’ ಎನ್ನುವ ಕೃತಿಯನ್ನು ಬರೆದಿರುವವರು ಎಚ್ ಟಿ ಪೋತೆ ಎನ್ನುವವರು. ಅಂಬೇಡ್ಕರ್ ಬಗ್ಗೆ ಈಗಾಗಲೇ ಸಾವಿರಾರು ಪುಸ್ತಕಗಳು ಹೊರಬಂದಿವೆ. ಆದರೂ ಈ ೮೮ ಪುಟಗಳ ಪುಟ್ಟ ಪುಸ್ತಕವು ಅಂಬೇಡ್ಕರ್ ಬಗ್ಗೆ ಇನ್ನಷ್ಟು ತಿಳಿಸಿಕೊಡಲಿದೆ ಎನ್ನುವ ವಿಶ್ವಾಸ ಲೇಖಕರದ್ದು. ಅವರು ತಮ್ಮ ನುಡಿಯಲ್ಲಿ ಹೇಳುವುದೇನೆಂದರೆ 

‘ಅಂಬೇಡ್ಕರ್' ಎನ್ನುವ ಹೆಸರು ಇದೀಗ ಜಗತ್ತು ನೈಜ ಭಾರತವನ್ನು ಅರಿಯುವ ಬೆಳಕಿಂಡಿಯಾಗಿದೆ. 'ಜೈ ಭೀಮ್' ಎನ್ನುವುದು ಈ ದೇಶದ ಕೋಟ್ಯಾಂತರ ಜನರ ಶಕ್ತಿ ಮಂತ್ರವಾಗಿದೆ. ಅದೇ ಹೊತ್ತಿಗೆ ಈ ದೇಶದ ಸನಾತನವಾದಿಗಳ ಮನಸ್ಸುಗಳ ಆಳದಲ್ಲಿ ಅಡಗಿ ಕೂತ ಅಂಬೇಡ್ಕರ್ ವಿರೋಧವೆಂಬ ಅಸಹನೆಯ ಕೊಚ್ಚೆ ಕೂಡ ಆಗಾಗ ಬಯಲಿಗೆ ಬರುತ್ತಿರುತ್ತದೆ. ಹೀಗಿದ್ದೂ ಜಗದ ಎದುರಿಗೆ ಗಟ್ಟಿಯಾಗಿ ಹೇಳಲಾಗದೆ ಅಂಬೇಡ್ಕರ್ ವಿರೋಧವನ್ನು ಬೇರೆ ಬೇರೆ ರೂಪಗಳಲ್ಲಿ ಹೊರ ಹಾಕುವ ವಿಧ್ಯಮಾನಗಳನ್ನು ಕಾಣುತ್ತಿದ್ದೇವೆ. ಜಗತ್ತಿನ ವಿದ್ವತ್ ಲೋಕ ಇಂದು ಅಂಬೇಡ್ಕರ್ ಅವರನ್ನು 'ಅರಿವಿನ ಬೆಳಕು' ಎನ್ನುವಂತೆ ಪರಿಭಾವಿಸಿ ಚರ್ಚೆ ಸಂವಾದಗಳಲ್ಲಿ ಅಂಬೇಡ್ಕರ್ ಅರಿವನ್ನು ಕಸಿ ಮಾಡುತ್ತಿದ್ದಾರೆ. ವಿಶೇಷವಾಗಿ ಬಾಬಾಸಾಹೇಬರು ದಲಿತ ದಮನಿತ ಹಿಂದುಳಿದ ಅಲೆಮಾರಿ ಬುಡಕಟ್ಟು ಮಹಿಳೆ ಅಲ್ಪಸಂಖ್ಯಾತ ಪ್ರಜ್ಞಾವಂತ ಯುವ ಸಮುದಾಯ ಹೊಸ ಅಸ್ಮಿತೆಯಾಗಿದ್ದಾರೆ. ಇದು ಬಾಬಾಸಾಹೇಬರನ್ನು ಪ್ರೀತಿಸುವವರಿಗೆ ಬಹುದೊಡ್ಡ ಖುಷಿಯ ಸಂಗತಿ. ಇಂದು ಲೈಂಗಿಕ ಅಲ್ಪಸಂಖ್ಯಾತರು ಟ್ರಾನ್ಸ್ ಜೆಂಡರ್ ಕಮ್ಯುನಿಟಿ ಕೂಡ ಅಂಬೇಡ್ಕರ್ ಅವರು ನಮ್ಮ ಹೋರಾಟದ ನಾಯಕರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ.

ಅಂಬೇಡ್ಕರ್ ನೇರವಾಗಿ ಟ್ರಾನ್ಸ್ ಜೆಂಡರ್ ಕಮ್ಯುನಿಟಿ ಬಗ್ಗೆ ಚರ್ಚಿಸಿಲ್ಲ. ಆದರೆ, ಸಂವಿಧಾನದಲ್ಲಿ ಇಂತಹ ದಮನಿತ ಸಮುದಾಯಗಳನ್ನು ಕಾಪಾಡುವ ತಾಯ್ತನದ ಕಾನೂನುಗಳು ಟಾನ್ಸ್ ಕಮ್ಯುನಿಟಿಯ ನೆರವಿಗೆ ಬಂದಿವೆ. ಅಂದರೆ ಈ ದೇಶದಲ್ಲಿ ಮುಂದೆಯೂ ಅಸಮಾನತೆ ಹೆಚ್ಚಾದಂತೆ ತಬ್ಬಲಿಗಳಾಗುವ ಎಲ್ಲಾ ಜನರನ್ನು ಅಂಬೇಡ್ಕರ್ ಕನಸಿನ ಸಂವಿಧಾನ ಪೊರೆಯುತ್ತದೆ. ಹಾಗಾಗಿ ಅಂಬೇಡ್ಕರ್ 'ಎಲ್ಲರ ಅಂಬೇಡ್ಕರ್' ಸಂವಿಧಾನದ ವ್ಯಾಪ್ತಿಗೆ ಬರದೆ ಇರುವ ಯಾರಾದರೂ ಈ ದೇಶದಲ್ಲಿ ಇದ್ದಾರೆಯೇ? ಹಾಗಿರಲು ಸಾಧ್ಯವೇ? ಅಂದರೆ ಒಪ್ಪಲಿ, ಬಿಡಲಿ ಎಲ್ಲರೂ ಅಂಬೇಡ್ಕರ್ ಕನಸಿನ ಸಂವಿಧಾನವೆಂಬ ಹೆಮ್ಮರದ ನೆರಳಲ್ಲಿ ಮಿರಮಿಸುವವರೇ ಆಗಿದ್ದಾರೆ. ದೈವ-ದೇವರು, ಪ್ರಾಣಿ- ಪಕ್ಷಿಗಳು ಸಂವಿಧಾನದಡಿಯಲ್ಲಿ ಬಾಳುವ, ಬದುಕುವ ಹಕ್ಕುಗಳನ್ನು ಪಡೆದಿವೆ. ಎಲ್ಲರೂ ಆ ಹೆಮ್ಮರದ ಫಲಗಳನ್ನು ಉಣ್ಣುವವರೇ ಆಗಿದ್ದಾರೆ. ಅಂತಹ ಸಂವಿಧಾನವೆಂಬ ಫಲಭರಿತ ಹೆಮ್ಮರದ ಬೀಜ ಊಣಿದ್ದು, ನೀರುಣಿಸಿದ್ದು, ಮರವಾಗಿಸಿದ್ದು, ಅಂಬೇಡ್ಕರ್.

ಅಂಬೇಡ್ಕರ್ ಬೆಳೆಸಿದ ಮರ ಇದೀಗ ಹೆಮ್ಮರವಾಗಿ ಕೋಟ್ಯಾಂತರ ಜನರಿಗೆ ನೆರಳಾಗಿದೆ. ಹಾಗಾಗಿ ಈ ಕೃತಿಯನ್ನು ಹೆಮ್ಮರವೊಂದರ ಬೆಳವಣಿಗೆಯ ಸಾತತ್ಯವನ್ನು ಗುರುತಾಗಿಸಿಟ್ಟುಕೊಂಡು ಮೊಳಕೆ, ಗಿಡ, ಮರ, ಹೆಮ್ಮರ ಎನ್ನುವ ಬೆಳವಣಿಗೆಯ ನೆಲೆಯಲ್ಲಿ ಅಂಬೇಡ್ಕರ್ ಅವರ ಬದುಕಿನ ಕಥನವನ್ನು ಎಲ್ಲರಿಗೂ ತಲುಪುವಂತೆ ಸರಳವಾಗಿ ಕಟ್ಟಿಕೊಡಲಾಗಿದೆ. ಹಾಗಾಗಿ ಅಂಬೇಡ್ಕರ್ ಈಗಲೂ- ಮುಂದೆಯೂ-ಎಂದೆಂದಿಗೂ ಎಲ್ಲರ ಅಂಬೇಡ್ಕರ್ ಎನ್ನುವುದನ್ನು ತಾತ್ವಿಕ ಬಿತ್ತಿಯಾಗಿಸಿಕೊಂಡ 'ಎಲ್ಲರ ಅಂಬೇಡ್ಕರ್' ನಿಮ್ಮ ಕೈಯಲ್ಲಿದೆ. ಪ್ರಸ್ತುತ ಕೃತಿ ರೂಪತಾಳಲು ಕಾರಣರಾದ ಜನ ಪ್ರಕಾಶನದ ಬಿ. ರಾಜಶೇಖರಮೂರ್ತಿ, ಹಿರಿಯ ಹೋರಾಟಗಾರರಾದ ಮಾವಳ್ಳಿ ಶಂಕರ್ ಅವರಿಗೆ ಕೃತಜ್ಞನಾಗಿದ್ದೇನೆ. ಬರಗೂರು ರಾಮಚಂದ್ರಪ್ಪ ಅವರು ಬರೆದ ಬೆನ್ನುಡಿ ಕೃತಿಯ ಮೌಲ್ಯವನ್ನು ಇಮ್ಮಡಿಗೊಳಿಸಿದೆ, ಅವರಿಗೂ ಕೃತಜ್ಞತೆಗಳು.”