ಎಲ್ಲವೂ ನಮಗಾಗಿ

ಎಲ್ಲವೂ ನಮಗಾಗಿ

ಬರಹ

ನನ್ನ ಮಿತ್ರನೊಬ್ಬ "ದೇವರು ಈ ಪ್ರಪಂಚದ ಸಕಲ ಜೀವಿಗಳನ್ನು ಮನುಷ್ಯನಿಗಾಗಿಯೇ ಮಾಡಿದ್ದಾನೆ, ಆದ್ದರಿಂದ ಅವನ್ನು ತಿನ್ನುವುದು ಏನೂ ಅಪರಾಧವಲ್ಲ. ಮಾಂಸಾಹಾರ ಪ್ರಾಣಿ ಹಿಂಸೆ ಆದ್ರೆ ಸಸ್ಯಾಹಾರ ಸಸ್ಯ ಹಿಂಸೆ ಅಲ್ವೆ, ಅದಕ್ಕೆ ಕೂಡ ಜೀವ ಇರುತ್ತೆ ಅಂತ ಜಗದೀಶಚಂದ್ರ ಭೋಸರು ತೋರಿಸಿಕೊಟ್ಟಿಲ್ಲವೇ" ಎಂದು ನಾನ್ ವೆಜ್ ಹೋಟೆಲ್ನಲ್ಲಿ ಚಿತ್ರಾನ್ನ ತಿನ್ನುತ್ತಿದ್ದ ನನ್ನನ್ನು ಪ್ರಶ್ನಿಸಿದ. ನಾನೇನೂ "ನಾನು ಮಾಂಸಾಹಾರಿ ಅಲ್ಲ, ತುಂಬಾ ಒಳ್ಳೆಯ ಕೆಲಸ ಮಾಡ್ತಾ ಇದೀನಿ" ಅಂತ ಅವನ ಬಳಿ ಹೇಳಿಕೊಂಡಿರಲಿಲ್ಲ. ಆದರೂ ನಾನು ತಿನ್ನುತ್ತಾ ಇರೋ ಚಿತ್ರಾನ್ನ ಅವನಿಗೆ ಆ ರೀತಿ ಹೇಳ್ತೋ ಎನೋ. ಹಿಂದಿನಿಂದಲೂ ಕೇಳುತ್ತಾ ಬರುತ್ತಿದ್ದ, ಮಾನವ ಜನ್ಮ ಎಲ್ಲದಕ್ಕಿಂತ ಶ್ರೇಷ್ಠ ಎಂಬುದನ್ನು ಕಣ್ಮುಚ್ಚಿ ಒಪ್ಪಿಕೊಂಡ ನನಗೆ ಇವನು ಹೇಳಿದ "ದೇವರು ಈ ಪ್ರಪಂಚದ ಸಕಲ ಜೀವಿಗಳನ್ನು ಮನುಷ್ಯನಿಗಾಗಿಯೇ ಮಾಡಿದ್ದಾನೆ" ಎಂಬ ಮಾತೂ ಸರಿಯಾಗಿ ಕಾಣಿಸಿತು. ನಂತರ ಆ ವಿಷಯದ ಮೇಲೆ ಮಂಥನ ನಡೆಸಿದಾಗ ಕಂಡುಕೊಂಡ ಸತ್ಯದ ಕೆಲವು ತುಣುಕನ್ನು ನಿಮ್ಮೊಂದಿಗೆ ಹಂಚಿಕೊಳ್ಳುವಾಸೆ.

ಕೋಳಿ: ಮಾಂಸವನ್ನೊಳಗೊಂಡಂತೆ ಅದರ ತತ್ತಿಯನ್ನು ಕೂಡಾ ತಿನ್ನಬಹುದಾಗಿದೆ. ಇದರ ಹಿಕ್ಕೆ ವ್ಯವಸಾಯಕ್ಕೆ ಉತ್ತಮ ಗೊಬ್ಬರವೂ ಹೌದು.

ಮೀನು: ತಿನ್ನಲು ಉಪಯೋಗ. ಮೀನಿನ ಯಕೃತ್ತಿನ ಎಣ್ಣೆಯನ್ನು ಔಷಧವಾಗಿಯೂ, ಹಿಂಡಿ ಉಳಿದ ಜಗಟಿಯನ್ನು ಹೊಗೆಸೊಪ್ಪಿನ ಕೃಷಿಗೂ ಬಳಸಬಹುದು. ತಿನ್ನಲು ಯೋಗ್ಯವಲ್ಲದ ಬಣ್ಣ ಬಣ್ಣದ ಮೀನುಗಳನ್ನು ಹಿಡಿದು, ಅಕ್ವೇರಿಯಂ ಒಳಗಿಟ್ಟು ಆನಂದಿಸಬಹುದು.

ಪಾರಿವಾಳ: ಬ್ಯಾಡ್ ಮಿಂಟನ್ನಂತಹ ಕ್ರೀಡೆಗಳಲ್ಲಿ ಶಟಲ್ ಕಾಕ್ ತಯಾರಿಸಲು ಇದರ ಪುಕ್ಕವನ್ನು ಉಪಯೋಗಿಸಬಹುದು.

ಕಾಗೆ: ಶ್ರಾದ್ಧದಲ್ಲಿ ಹಾಕುವ ಪಿಂಡವನ್ನು ಮೃತರಿಗೆ ತಲುಪಿಸಲು ಸಹಾಯಕ.

ಗಿಳಿ: ಪಂಜರದಲ್ಲಿರಿಸಿ ಮನೆಯ ಅಲಂಕಾರಕ್ಕೆ ಉಪಯುಕ್ತ, ಮನೆಯಲ್ಲಿ ಒಬ್ಬರೇ ಕುಳಿತು ಬೇಸರವಾಗುವಂತಹ ಸಂದರ್ಭದಲ್ಲಿ ಇವಕ್ಕೆ ಮಾತನ್ನು ಕಲಿಸಿ ಸಂಭಾಷಣೆ ನಡೆಸಬಹುದು.ಅದೂ ಅಲ್ಲದೇ ನಿಮ್ಮ ಭವಿಷ್ಯವನ್ನು ಕೂಡ ಇದು ತಿಳಿಸಬಲ್ಲದು.

ನವಿಲು: ಗಂಡು ನವಿಲಿನ ಗರಿಯನ್ನು ಬೀಸಣಿಗೆಯಂತಹ ಅಲಂಕಾರಿಕ ವಸ್ತುವಿಗೆ ಮೆರುಗು ನೀಡಲು ಬಳಸಬಹುದು.

ಗೂಬೆ: ಪ್ರತ್ಯಕ್ಷ ಪ್ರಯೋಜನ ಇಲ್ಲದಿದ್ದರೂ ಊಟ ಮಾಡದ, ಹಟ ಮಾಡುವ ಮಕ್ಕಳಿಗೆ ಹೆದುರಿಸಲು ಮತ್ತು ಬೈಗಳವಾಗಿ ಇದರ ಹೆಸರನ್ನು ಬಳಸಬಹುದು.

ಹೋರಿ, ಕೋಣ: ಉಳಲು ಮತ್ತು ಸಾರಿಗೆಗೆ ಉಪಯೋಗವಾದರೂ ಈಗ ಟ್ರಾಕ್ಟರ್ ಬಂದುದರಿಂದ, ಎಮ್ಮೆ, ದನಗಳ ಕೃತಕ ಗರ್ಭದಾರಣೆಗಾಗಿ ಬೀಜ ಸಂಗ್ರಹಕ್ಕೆ ಉಪಯೋಗಿಸಬಹುದು. ಸತ್ತ ನಂತರ ಇವುಗಳ ಚರ್ಮ ಡೋಲು ಮಾಡಲು ಉಪಯುಕ್ತ.

ದನ: ಹಾಲು ಪ್ರಮುಖ ಉಪಯೋಗವಾದರೂ, ಸಗಣಿಯನ್ನು ಗೊಬ್ಬರಕ್ಕೋ, ಗ್ಯಾಸಿಗೋ, ಬೆರಣಿಗೋ ಮತ್ತು ಉಚ್ಚೆಯನ್ನು ಪಂಚಗವ್ಯದ ತಯಾರಿಕೆಗೆ ಹಾಗೂ ಮಧುಮೇಹದಂತಹ ಕಾಯಿಲಿಗೆ ಔಷಧವಾಗಿ ಬಳಸಬಹುದು.

ಆನೆ: ದೇವಸ್ಥಾನ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮೆರವಣಿಗೆಗೆ ಚೆಲುವು ಕೊಡಬಲ್ಲದು. ಮರ ಕಡಿದು ಅರಣ್ಯದಿಂದ ದಿಮ್ಮೆಗಳನ್ನು ಸಾಗಿಸಲು ತುಂಬಾ ಉಪಯುಕ್ತ.ಬಾಲದ ರೋಮವನ್ನು ಚಿನ್ನದೊಂದಿಗೆ ಉಂಗುರ ಅಥವಾ ಕೈಬಳೆ ಮಾಡಿಸಿಕೊಂಡರೆ ಆನೆಯ ಬಲ ಪ್ರಾಪ್ತಿಯಾಗುವುದು.

ಕುದುರೆ: ದ್ವಿಚಕ್ರ ವಾಹನದ ದೆಸೆಯಿಂದ ಇದರ ಸವಾರಿ ಕಡಿಮೆಯಾದರೂ ಜೂಜು, ಸರ್ಕಸ್ ಮೊದಲಾದ ಮನೋರಂಜನೆಗೆ ಉಪಯೋಗವಾಗುವುದು.

ನಾಯಿ: ಮನೆ ಕಾಯಲು ಹಾಗೂ ಮನೆಯಲ್ಲಿ ಬೇಸರ ಕಳೆಯಲು

ಬೆಕ್ಕು:ಇಲಿ ನಾಷಕ ಹಾಗೂ ಮನೆಯಲ್ಲಿ ಬೇಸರ ಕಳೆಯಲು

ಹುಲಿ, ಚಿರತೆ: ಕೊಂದು ಒಳಗಿನ ತಿರುಳು ಕೊರೆದು, ಜೊಂಡು ತುಂಬಿಸಿ ಅಲಂಕಾರಕ್ಕಾಗಿ ಉಪಯೋಗಿಸಬಹುದು. ಹಿಂದೆ ಋಷಿ ಮುನಿಗಳು ಇದರ ಚರ್ಮವನ್ನು ಧರಿಸಿಯೋ, ಆಸನವಾಗಿರಿಸಿಕೊಂಡೋ ತಪಸ್ಸು ಮಾಡುಲು ಉಪಯೋಗಿಸುತ್ತಿದ್ದರಂತೆ, ಇಂದು ಚರ್ಮವನ್ನು ಬಗೆಬಗೆಯ ಫೋಷಾಕು ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ. ಇದರ ಉಗುರನ್ನು ಚಿನ್ನದೊಡನೆ ಬೆರೆಸಿ ಸರವನ್ನಾಗಿ ಮಾಡಿಕೊಂಡು ಹುಲಿಯ ಶೌರ್ಯ ಪಡೆಯಬಹುದು.

ನಾಗರ ಹಾವು: ನಾಗರ ಪಂಚಮಿಯಂದು ಪೂಜೆ ಸಲ್ಲಿಸಲು ಹಾಗೂ ಹಾವಾಡಿಗರ ಮನೋರಂಜನೆಯನ್ನು ನೋಡಲು ಉಪಯೋಗ.ಇದರ ಚರ್ಮವನ್ನು ಪರ್ಸು, ಬೆಲ್ಟು, ಚಪ್ಪಲಿಗಳಲ್ಲಿ ಬಳಸಬಹುದು.

ಓತಿಕ್ಯಾತ: ಸೂರ್ಯ ದೇವನಿಗೆ ಹೀಯಾಳಿಸುವ ಅಥವಾ ಅಲ್ಲಾನಿಗೆ ಮೋಸ ಮಾಡಿದ ಇದನ್ನು ಕೊಂದು ಪುಣ್ಯ ಸಂಪಾದಿಸಬಹುದು.

ಮೃದ್ವಂಗಿ: ತಿರುಳು ತಿನ್ನಲು ಬರುವುದು ಸಾಮಾನ್ಯ ಉಪಯೋಗವಾದರೂ, ಇದರ ಕವಚದಿಂದ ಶಂಖ, ಕಪ್ಪೆ ಚಿಪ್ಪಿನ ಬಳೆ, ಓಲೆ, ಇನ್ನಿತರ ಪ್ರದರ್ಶನ ವಸ್ತುವನ್ನೂ ಮಾಡಲು ಬರುವುದು.

ಏರೋಪ್ಲೇನ್ ಚಿಟ್ಟೆ: ಹಿರಿಯರಿಗೆ ಇದರಿಂದ ಯಾವುದೇ ಪ್ರಯೋಜನ ಇಲ್ಲದಿದ್ದರೂ, ಮಕ್ಕಳು ಅದರ ಬಾಲಕ್ಕೆ ದಾರ ಕಟ್ಟಿ ಆಟವಾಡಬಹುದು.

ರೇಷ್ಮೆ ಹುಳು: ಕೋಶಾವಸ್ಥೆಗೆ ತಲುಪಿದ ನಂತರ ಇದನ್ನು ಕುದಿಸಿ ನವಿರಾದ ರೇಷ್ಮೆದಾರವನ್ನು ಪಡೆಯಬಹುದು.

ಜೇನು ಹುಳು: ದಿನವಿಡೀ ಕುಡಿದ ಮಕರಂದ ಜಾಸ್ತಿಯಾಗಿ ಗೂಡಿಗೆ ಮರಳಿ ವಾಂತಿಮಾಡಿದ್ದನ್ನು ಹಿಂಡಿ, ಜೇನುತುಪ್ಪವಾಗಿ ಬಳಸಬಹುದು.

ಮಿಂಚು ಹುಳು: ಟಾರ್ಚ್ ಇಲ್ಲದ ಸಂದರ್ಭದಲ್ಲಿ ಇವನ್ನು ಹಿಡಿದು ಪಾರದರ್ಶಕ ಲಕೋಟೆಯಲ್ಲಿ ಇರಿಸಿ, ಟಾರ್ಚ್ನಂತೆ ಬಳಸಬಹುದು.

ಈ ಮೇಲಿನ ಸತ್ಯ ನಿಮಗೆ ಮೊದಲೇ ಪ್ರಾಪ್ತವಾಗಿದ್ದಲ್ಲಿ ದಯವಿಟ್ಟು ನನ್ನ ದೂಷಿಸಬೇಡಿ.