ಎಲ್ಲಾರು ಮಾಡುವುದು ಹೊಟ್ಟೆಗಾಗಿ ...

ಎಲ್ಲಾರು ಮಾಡುವುದು ಹೊಟ್ಟೆಗಾಗಿ ...

ಬರಹ

ಏನಿದೆಯಪ್ಪಾ???......................

ಖಾಲಿ ದೋಸೆ , ಮಸಾಲೆದೋಸೆ, ತುಪ್ಪ ದೋಸೆ ,ಸೆಟ್ ದೋಸೆ ,ಇಡ್ಲಿ -ಸಾಂಬಾರ್ , ಚಪಾತಿ ,ಪೂರಿ,ಪರೋಟ ,ಉಪ್ಪಿಟ್ಟು ,ಗೋಳಿಬಜೆ ....... ಕುಂದಾಪುರದ ಸಾಗರ್ ವಿಹಾರ್ ಹೋಟೆಲಿನಲ್ಲಿ ಅರಳು ಹುರಿದಂತೆ ಪಟ್ ಪಟ್ ಎಂದು ಮಾಣಿ ಹೇಳುವುದನ್ನು ಕೇಳುವುದೇ ಕರ್ಣಾನಂದ. ಅರ್ಧ ಹೊಟ್ಟೆ ಅಲ್ಲೇ ತುಂಬುತ್ತದೆ . ಇನ್ನು ಒಂದು ಪ್ಲೇಟ್ ಇಡ್ಲಿ (೫ ರೂಪಾಯಿ ) ತಿಂದು ಬೈ ಟೂ ಕಾಪಿ ( ಇದು coffee ಅಲ್ಲ "ಕಾಪಿ" "ಕಾ sssss ಪಿ " ಗೊತ್ತಾಯ್ತಾ ?? ) ಕುಡಿದರೆ ಬೆಳಿಗ್ಗಿನ ತಿಂಡಿ ಏಳೂವರೆ ರುಪಾಯಿಯೊಳಗೆ ಆಗಿ ಹೋಯಿತು .ಆದರೂ ಸಾಗರ್ ವಿಹಾರ್ ಸ್ವಲ್ಪ "ದುಬಾರಿ ". ನಾನು ಕುಂದಾಪುರದಲ್ಲಿದ್ದಾಗ ಹೋಟೆಲಿಗೆ ಹೋಗಿದ್ದೆ ಕಡಿಮೆ . ಅಕಸ್ಮಾತ್ ಹೋದರು ಬೊಬ್ಬರ್ಯನ ಕಟ್ಟೆ ಪಕ್ಕದ "ಸುಂದ್ರಯ್ಯನ " ಹೋಟೆಲಿಗೆ ಹೋಗುವುದು . ಬೆಳಿಗ್ಗೆ ೫ :೩೦ ಕ್ಕೆ ಹೋದರೆ ೬ ಬಗೆಯ ತಿಂಡಿ ಲಭ್ಯ . ಅವು
೧ ) ಉಪ್ಪಿಟ್ಟು - ಅವಲಕ್ಕಿ
೨ )ಅವಲಕ್ಕಿ - ಉಪ್ಪಿಟ್ಟು
೩ )ಉಪ್ಪಿಟ್ಟು -ಅವಲಕ್ಕಿ ಒಟ್ಟ್-ಒಟ್ಟಿಗೆ
೪ )ಉಪ್ಪಿಟ್ಟು - ಅವಲಕ್ಕಿ ಬೇರೆ -ಬೇರೆ
೫ )ಉಪ್ಪಿಟ್ಟು ಮಾತ್ರ
೬ )ಅವಲಕ್ಕಿ ಮಾತ್ರ

೭ ಗಂಟೆಗೆ ಇಡ್ಲಿ- ದೋಸೆ- ಬನ್ಸು ಸಿಗುತ್ತದೆ .
ಆದರೆ ಆ ರುಚಿಯನ್ನು ನಾನು ಮುಂಬೈ ಯ ಸ್ಟಾರ್ ಹೋಟೆಲ್ ನಲ್ಲೂ ಪಡೆದಿಲ್ಲ . ಯಾಕೆಂದರೆ ನಾವು "ಹೋಟೆಲ್ ಮಹೇಶ್ ಪ್ರಸಾದ್ " ಗೆ ಹೋಗುತ್ತಿರಲಿಲ್ಲ ನಾವು ಹೋಗುವುದು "ಸುಂದ್ರಯ್ಯನ " ಹೋಟೆಲಿಗೆ. ಮತ್ತು ಅವರ ಹೋಟೆಲಿಗೆ "ಗಿರಾಕಿಗಳು" ಬರುತ್ತಿರಲಿಲ್ಲ ಬರುವುದು ಶ್ಯಾನುಭಾಗರು ,ಸುರೇಶ್ ಮೇಸ್ತ ,ಕಾರಂತರ ಮಗ,ಐತಾಳರ ಅಳಿಯ ಇಂತವರು . ನಮ್ಮ ನಡುವೆ Owner-Customer ಸಂಬಂಧವಿರಲಿಲ್ಲ . ನಮ್ಮೆಲ್ಲರನ್ನೂ ಅವರು ಹೆಸರಿನಿಂದ ಬಲ್ಲರು ಮತ್ತು ಆ ತಿಂಡಿಯಲ್ಲಿ ಪ್ರೀತಿಯನ್ನೂ ಬೆರೆಸಿ ಕೊಡುತ್ತಿದ್ದರು . ಮತ್ತೆ ಈ ಟಿಪ್ಸು -ಗಿಪ್ಸು ಎಲ್ಲ ನಾನು ನಿನ್ನೆಯೋ ಮೊನ್ನೆಯೋ ಕಲಿತಿದ್ದು . ಕುಂದಾಪುರದಲ್ಲಿ ಊಟದ ಬಿಲ್ಲು ಒಂದಂಕಿ ಯಲ್ಲಿರುವಾಗ ಟಿಪ್ಸ್ ಯಾರು ಕೊಡುತ್ತಾರೆ ?? ನೀವು ಒಬ್ಬರೇ ಹೋಗಿ ೧೫ ಮಂದಿ ಹೋಗಿ ಮುನ್ನ ( ಮೋಹನ -ಹೋಟೆಲ್ ಮಾಣಿ .. ೧೮ ವರ್ಷದವನು ) ಎಲ್ಲರಿಗೂ ಒಂದೇ ಕೈಯಲ್ಲಿ ನೀರಿನ ಲೋಟ ತಂದು ಇಡುತ್ತಾನೆ . ಲೇ ಮುನ್ನಾ .... ಸಂಜೆ ಮೈದಾನಕ್ಕೆ ಬಾ.... ಕ್ರಿಕೆಟ್ ಆಡೋಣ .. ನಮ್ಮ ಆಹ್ವಾನ . ಒಳಗೆ ಪಾಂಡುರಂಗಣ್ಣ -- ಅಡುಗೆಯವರು . ಅವರು ಹೊರಗೆ ಬರೋಲ್ಲ .ಇಲ್ಲಿಗೆ ಹೋಟೆಲ್ ಸಿಬ್ಬಂದಿ ವರ್ಗ ಮುಗಿಯಿತು . ಮುನ್ನ ರಜೆ ತಗೊಂಡರೆ ಸುಂದ್ರಯ್ಯನವರ ಏಕಪಾತ್ರಾಭಿನಯ . ಹಾ .... ಒಂದು ಪ್ಲೇಟ್ ಇಡ್ಲಿ ತಾ.... ಎಂದು ಕೂಗಿ ತಾವೇ ಒಳಗೆ ಹೋಗಿ ಇಡ್ಲಿ ತಂದು ಆಮೇಲೆ .... ಏಯ್ ಎಲ್ ಹೋದ್ಯೋ ಮುನ್ನ .. ಇಲ್ಲಿ ಕ್ಲೀನ್ ಮಾಡು .. ಎಂದು ಕೂಗಿ ... ಈ ಮಾಣಿಯೊಂದು... ಹೇಳಿದ್ ಕೆಲಸ ಮಾಡಲ್ಲಾ ......ಎಂದು ಬೈಯುತ್ತ ತಾವೇ ಕ್ಲೀನ್ ಮಾಡುವರು . ಕೆಲಸದವರಿಲ್ಲ ಎಂದು ಯಾರಿಗೂ ತಿಳಿಯೋಲ್ಲ .

ನಾನು ಮುಂಬೈ ಗೆ ಬಂದ ಹೊಸದರಲ್ಲಿ ಊಟ -ತಿಂಡಿಯ ವಿಷಯದಲ್ಲಿ ನನ್ನ ಅನುಭವವನ್ನು ಬರೆಯುತ್ತಿದ್ದೇನೆ . "ಹೊಟ್ಟೆ ತುಂಬಿಸಿಕೊಳ್ಳುವುದು " ನಿಜಕ್ಕೂ ಕಷ್ಟ ಎಂದು ನನಗೆ ಆಗ ತಿಳಿಯಿತು . ಆದರೆ ಗುಣದಲ್ಲಿ ಕಡಿಮೆಯಾದರೂ ಹಣದಲ್ಲಿ ಮುಂಬೈ ದೊಡ್ಡದು .ಮುಂಬಯಿಯಲ್ಲಿ ನನ್ನ ಒಂದು ತಿಂಡಿಯ ಬಿಲ್ಲಿನ ಹಣದಲ್ಲಿ ಕುಂದಾಪುರದಲ್ಲಿ ೬ ಮಂದಿ ೨ ದಿನ ಹೊಟ್ಟೆ ತುಂಬಾ ತಿನ್ನಬಹುದು . ಈಗ ನೋಡಿ ..... ನಾನು ಮುಂಬಯಿಯ ಪ್ರಸಿದ್ಧ ಪಂಚತಾರಾ ಹೋಟೆಲಿನೊಳಗೆ ಪ್ರವೇಶಿಸಿದ್ದೇನೆ .

ಮಚ್ಚಾ ..... ಇಲ್ಲಿ ಯಾರದ್ದೋ ಮದ್ವೆ ಇರಬೇಕು ಬೇರೆ ಕಡೆ ಹೋಗೋಣ .
ಏಯ್ ಗುಬಾಲ್ ... ಅವ್ನು ಬಾಗಿಲು ತೆಗೆಯುವವನು ಬಾಸಿಂಗ ಹಾಕಿ ನಿಂತಿದ್ದಾನೆ ಅಷ್ಟೆ ..... ಮುಚ್ಕೊಂಡು ಬಾ..... ಬಬ್ಲು ಉಸುರಿದ .
ಒಳಗೆ ಹೋಗಿ ಕುಳಿತೆವು . ಪಾರದರ್ಶಕ ಗ್ಲಾಸ್ ನಲ್ಲಿ 2 ಲೋಟ ನೀರು ಬಂತು . ಬರೀ ಮೌನ . ಇವನು ಯಾವುದೋ ಪುಸ್ತಕ ಓದುತ್ತ ಕುಳಿತಿದ್ದಾನೆ . ಲೇ .. ಮನೆಗ್ ಹೋಗಿ ಓದ್ಕೋ ... ಈಗ ಏನಿದೆ ತಿನ್ನೋಕ್ಕೆ ಅಂತ ಕೇಳು ಅಂದೆ. ಅದೇ ಮಾಡ್ತಾ ಇದ್ದೀನಿ ಇದು ಮೆನು ಎಂದ . ಉಪ್ಪಿಟ್ಟು -ಅವಲಕ್ಕಿ ಉಂಟಾ ನೋಡು ಎಂದೆನು . ಬಬ್ಲು ಗುರಾಯಿಸಿದ . ನಾನು ಸುಮ್ಮನಾದೆ . ಮಚ್ಚಾ ..... ನಾನ್ ಹೇಳಲಾ ?? ಕೇಳಿದ . ಆಯಿತಪ್ಪ ನೀನೆ ಹೇಳು ಅಂದೆನು. ಅಲ್ವೋ...... ನಾನ್ ಹೇಳಲಾ ಬಟರ್ ರೋಟಿ ಹೇಳಲಾ ?? ಅಂದ . ನನಗೇನೂ ಗೊತ್ತಿಲ್ಲಪ್ಪ . ನೀನು ನಂಗೆ ಇಡ್ಲಿ -ವಡಾ-ಸಾಂಬಾರ್ ಹೇಳು ಅಂದೆನು . ಮತ್ತೆ starter ಏನು ಹೇಳಲಿ ಅಂದ . ನಾನೇನೂ ಹಳೆ ಲಾರಿ ಇಂಜಿನ್ ಅಲ್ಲ.... ಅದೆಲ್ಲ ಏನೂ ಬೇಡ.... ನಾನು ಯಾವತ್ತು ರೆಡಿ ಇರ್ತೀನಿ ಎಂದೆ... ಹೇಗಿರತ್ತೆ ನೋಡೋಣ ಎಂದು ಒಂದು Veg Manchow Soup ಆರ್ಡರ್ ಮಾಡಿದ . ೧೦ ನಿಮಿಷದ ನಂತರ ಮಾಣಿ ... ಕ್ಷಮಿಸಿ "ವೈಟರ್ " ಎರಡು ಪಾತ್ರೆಯಲ್ಲಿ ( ಆ ಪಾತ್ರೆಗೆ ಬೌಲ್ ಅಂತಾರಂತೆ ) ಕಂದು ಬಣ್ಣದ ದ್ರವ ತಂದಿಟ್ಟ .

ಲೇ ಏನೋ ಇದು ಫಿನಾಯಿಲ್ ಥರ ಇದೆ ಅಂದೆನು . ಏಯ್ ... ಅದು ಸೂಪು .ಸುಮ್ನೆ ಕುಡಿ ಎಂದ . ಆಯಿತು ಎಂದು ಬೌಲ್ ಎತ್ತಿದೆ . ಲೇ.... ಹಾಗಲ್ಲ ಸ್ಪೂನ್ ನಿಂದ ಸ್ವಲ್ಪ ಸ್ವಲ್ಪ ಕುಡಿಯಬೇಕು ಅಂದನು ..... ಇದೇನು ಜ್ವರದ ಟಾನಿಕ್ ಏನೋ ಹಾಗೆ ಕುಡಿಯಕ್ಕೆ ಅಂದೆನು ?? ಅಲ್ವಂತೆ ಅದು ಟೇಬಲ್ ಮೇನರ್ಸ್ ಅಂತೆ . ಸರಿ ಎಂದು ಸ್ವಲ್ಪ ಬಾಯಿಗೆ ಹಾಕಿಕೊಂಡೆ . ಅಜ್ಜಿ ನೆನಪಾದಳು . ಸಣ್ಣವನಿರುವಾಗ ಅಜ್ಜಿ ಕಿರಾಥಕಡ್ಡಿ ಕಷಾಯ ಮಾಡಿದ ದಿನ ಮನೆಯಲ್ಲಿ ನಾನು ನಾಪತ್ತೆ . ಬೆಳಿಗ್ಗೆ ಅಜ್ಜಿ ದೇವರ ಪೂಜೆ ಮಾಡುತ್ತಿರಬೇಕಾದರೆ ಹೊರಗೆ ಹೋಗುತ್ತಿದ್ದ ನಾನು ರಾತ್ರಿ ಅಜ್ಜಿ ಮಲಗಿದ ನಂತರ ವಾಪಾಸ್ ಬರುತ್ತಿದ್ದೆ . ಈಗ ಏನು ಹಣೆಬರಹ ನೋಡಿ , ದುಡ್ಡು ಕೊಟ್ಟು ಕಾಷಾಯ ಕುಡಿಯುತ್ತಿದ್ದೇನೆ ಅನ್ನಿಸಿತು . ಆಮೇಲೆ ಅವನು ಕೊಕೊನಟ್ -ರೈಸ್ ಹೇಳಿದ ನನಗೆ ವಡಾ- ಸಾಂಬಾರ್ ಹೇಳಿದ . ೧೫ ನಿಮಿಷದಲ್ಲಿ ನಮ್ಮ ಎದುರು ೨ ದೊಡ್ಡ ಪ್ಲೇಟ್ ಬಂತು . ಅರ್ಧ ಗಂಟೆ ನಂತರ ವಡಾ -ಸಾಂಬಾರ್ ಕೊಕೊನಟ್ ರೈಸ್ ಬಂದಿತು . ವಡಾ ನೋಡಿ ದಂಗಾದೆನು . ಅದಕ್ಕೆ ಭಾರೀ ನಿತ್ರಾಣವಾದಂತಿತ್ತು . ಅದರಲ್ಲಿ ತೂತು ಬಿಟ್ಟರೆ ಮತ್ತೇನೂ ಇರಲೇ ಇಲ್ಲ . ಒಂದು ವೇಳೆ ಶಿಶುನಾಳ ಶರೀಫರು ಆ ವಡಾ ನೋಡಿದ್ದಲ್ಲಿ " ವಡಾವನ್ನು ತೂತೆ ನುಂಗಿತ್ತಾ...." ಎಂದು ಹಾಡುತ್ತಿದ್ದರು . ನಾನು ಒಂದು ಸಲ "ಅಮ್ಮಾ ... ಪ್ಲೀಸ್ ....." ಅಂದರೆ ನನ್ನ ಅಮ್ಮ ಅದಕ್ಕಿಂತ ದೊಡ್ಡ ಕೋಡುಬಳೆ ಮಾಡಿ ಕೊಡುತ್ತಿದ್ದರು . ಅದನ್ನು ಚಮಚದಲ್ಲಿ ತಿನ್ನುವುದೋ ಅಥವಾ ಸಾರಿಡಾನ್ ಮಾತ್ರೆ ಥರಾ ನುಂಗಿ ನೀರು ಕುಡಿಯುವುದೋ ತಿಳಿಯಲಿಲ್ಲ . ಮತ್ತೆ ಸಾಂಬಾರ್ ಬೇರೆ ಪಾತ್ರೆಯಲ್ಲಿ . ಅಯ್ಯೋ ವಡೆಗೆ ಸಾಂಬಾರಿನ ಅಭಿಷೇಕ ಮಾಡಬೇಕು . ಆ ಪಾತ್ರೆಯಲ್ಲಿ ವಡಾ ಪೂರ್ತಿ ಮುಳುಗಿರಬೇಕು . ಆಮೇಲೆ ಚಮಚದಿದಂದ ಪಾತ್ರೆಯೊಳಗೆ "ವಡಾ ಶೋಧನೆ " ಮಾಡಿ ತಿನ್ನಬೇಕು . ಇದು ವಡೆ ತಿನ್ನುವ ಶಾಸ್ತ್ರ . ಇರಲೆಂದು ಮನದಲ್ಲೇ ಬೈಯ್ಯುತ್ತಾ ತಿಂದು ಮುಗಿಸಿದೆ . ಇನ್ನು ಅವನ ಕೊಕೊನಟ್ ರೈಸ್ ಹೇಗಿದೆ ಎಂದು ನೋಡಲು ಸ್ವಲ್ಪ ತೆಗೆದುಕೊಂಡೆ . ಹೃದಯದಲ್ಲಿ ಭಕ್ತಿ ತುಂಬಿ ಹರಿಯಿತು . ನಮ್ಮ ಕುಂದಾಪುರದ "ಅಯ್ಯಪ್ಪ ಸ್ವಾಮೀ ಭಕ್ತ ವೃಂದ" ದವರು ಹಂಚುವ ಪಂಚಕಜ್ಜಾಯದಂತಿತ್ತು . ಕಣ್ಣಿಗೆ ಒತ್ತಿಕೊಂಡು ತಿಂದೆನು. ಆಮೇಲೆ ಒಂದು ಟೀ ಒಂದು ಕಾಪಿ ಕ್ಷಮಿಸಿ .... Coffee ಹೇಳಿದೆವು . ೧೦ ನಿಮಿಷದಲ್ಲಿ ಬಂದಿತು .ಲೋಟ ನೋಡಿ Rotomac ಪೆನ್ನಿನ top ನೆನಪಾಯಿತು . ಒಹ್.... ದೊಡ್ಡ ಹೋಟೆಲ್ ಅಲ್ವಾ ಮೊದಲು ರುಚಿಗೆ ಸ್ವಲ್ಪ ಕೊಟ್ಟು ಆಮೇಲೆ ದೊಡ್ಡ ಲೋಟದಲ್ಲಿ ಕಾಫಿ ಕೊಡುತ್ತಾರೆ ಅಂದುಕೊಂಡೆ. ಅಲ್ವಂತೆ ಅದೇ ಫುಲ್ ಅಂಡ್ ಫೈನಲ್ ಲೋಟ ಅಂದ. ನಮ್ಮ ಕುಂದೇಶ್ವರ ದೇವಸ್ಥಾನದ ಭಟ್ಟರು ಅದಕ್ಕಿಂತ ಹೆಚ್ಚು ತೀರ್ಥ ಕೊಡುತ್ತಿದ್ದರು . "ಕುಡಿಯುವಾಗ ಶಬ್ದ ಮಾಡಬೇಡ " ಬಬ್ಲು ತಾಕೀತು ಮಾಡಿದ . ಅರೆ .... ಇದೊಳ್ಳೆ ಕತೆಯಾಯ್ತಲ್ಲ .... ಪಾಯಸ ತಿನ್ನುವಾಗ ಕಾಪಿ ಕುಡಿಯುವಾಗ ಸುರ್ರರ್...... ಎಂದು ಶಬ್ದ ಶೃತಿಬದ್ಧವಾಗಿ ಹೊರಡದಿದ್ದರೆ ಅದು ಪಾಯಸ -ಕಾಪಿಗೆ ಅವಮಾನ ಮಾಡಿದಂತೆ . ಶಬ್ದ ಬರುವುದೆಂದು ಹಪ್ಪಳ ನೀರಿನಲ್ಲಿ ನೆನೆಸಿ ತಿಂದರೆ ರುಚಿ ಉಂಟಾ ?? ಕಷ್ಟಪಟ್ಟು ಹೇಗೋ ಸೈಲೆಂಟ್ ಮೋಡ್ ನಲ್ಲಿ ಕುಡಿದು ಮುಗಿಸಿದೆ . ಮತ್ತೆ ಟೀ .... ಹಾಲು ,ಸಕ್ಕರೆ , ಚಾ ಪುಡಿಯ ಒಂದು ಸಣ್ಣ ಚೀಲ ತಂದುಕೊಟ್ಟರು . ೨೫ ರೂಪಾಯಿ ಕೊಟ್ಟಿದ್ದಲ್ಲದೆ ನಾವೇ ಚಾ ಮಾಡಿಕೊಳ್ಳಬೇಕು . ನಮ್ಮ ಸುಂದ್ರಯ್ಯನ ಹೋಟೆಲ್ ನಲ್ಲಿ ೨ ರೂಪಾಯಿಗೆ ೨ ಮೀಟರ್ ಮೇಲಿನಿಂದ "ಹೊಡೆದು" ಕಡಕ್ ಚಾ ಮಾಡಿ ಕೊಡುತ್ತಿದ್ದ . ಆಮೇಲೆ ಬಿಲ್ ಬಂದಿತು . ಬ್ರಿಯಾನ್ ಲಾರಾನ ಟೆಸ್ಟ್ ದಾಖಲೆಯನ್ನು ಮೀರಿಸಿತ್ತು . ನನ್ನ ಎದೆ ನಿಮಿಷಕ್ಕೆ ೭೨ ಕ್ಕೆ ಒಂದೆರಡು ಸೊನ್ನೆ ಸೇರಿಸಿ ಬಡಿಯಲು ಆರಂಭಿಸಿತು .ಕಾಷಾಯಕ್ಕೆ ೧೨೦ , ವಡಾ ಸಾಂಬಾರ್ ೬೦ ಪಂಚಕಜ್ಜಾಯಕ್ಕೆ ೧೮೦ ಆಮೇಲೆ ಕಾಪಿ -ಚಾ -ಟಿಪ್ಸು- ಟ್ಯಾಕ್ಸು ಸೇರಿಸಿ ೪೫೦ ಆಗಿತ್ತು .

ಇದರಿಂದ ಪಾಠ ಕಲಿತ ನಾನು ನಂತರ ಯಾವುದೇ ಹೋಟೆಲ್ ಗೆ ಹೋದರೂ ಮೊದಲು ಮೆನು ಕಾರ್ಡಿನ ಬಲಭಾಗದಲ್ಲಿರುವ ಅಂಕಿ - ಅಂಶಗಳ ಗುಣಾಕಾರ ಮಾಡಿಕೊಂಡು ಆಮೇಲೆ ಆರ್ಡರ್ ಮಾಡುತ್ತಿದ್ದೆ. ಮತ್ತೆ ಕೆಲವು ಹೆಸರು ನೋಡಿ ನಗುವುರೋ ಅಳುವುದೋ ತಿಳಿಯುವುದಿಲ್ಲ . ಮಸಾಲಾ ಪಾಪಡ್ ೨೫ /- . ಅಶೋಕ ಹಪ್ಪಳದ ಮೇಲೆ ದೂರದಿಂದ ೪ ನೀರುಳ್ಳಿ ,ಟೊಮೇಟೊ ಬಿಸಾಕಿ ತಂದುಕೊಡುತ್ತಾರೆ. ಮತ್ತೆ ಲೆಮನ್ ರೈಸ್ ಅಂತೆ . ದಿಗಿಲಾಗಬೇಡಿ .. ನಿನ್ನೆಯ ಅನ್ನ ಉಳಿದರೆ ಅಮ್ಮ ಚಿತ್ರಾನ್ನ ಮಾಡುವುದಿಲ್ಲವೇ ?? ಇದು ಅದರದ್ದೇ ಅವತಾರ . ಆದರೆ ೪೫ /- ಮಾತ್ರ . ಊರಿನಲ್ಲಿ ಚಪಾತಿಗೂ ಭಾಜೀಗೂ , ಪೂರಿ ಕುರ್ಮಾ ಕ್ಕೂ ರಿಜಿಸ್ಟರ್ ಮದುವೆ ಆಗಿದೆ . ಚಪಾತಿ,ಪೂರಿ ಹೇಳಿದ್ರೆ ಅದರೊಟ್ಟಿಗೆ ಭಾಜೀ ಕುರ್ಮಾ ಫ್ರೀ. ಇಲ್ಲಿ ಹಾಗಲ್ಲ ಚಪಾತಿ ರೋಟಿ ಬ್ರಹ್ಮಚಾರಿಗಳು . ಅದಕ್ಕೆ ಮಸಾಲೆ ಬೇರೆ ಹೇಳಬೇಕು .ರೋಟಿಯ ಸ್ಥಿತಿಯಂತೂ ಮಳೆಗಾಲದಲ್ಲಿ ಕಳಪೆ ಕಾಮಗಾರಿಯ ರಸ್ತೆಯಂತೆ ಇರುತ್ತದೆ . ಪನ್ನೀರ್ ಗೆ ಇದ್ದ ಊರಿನ ಹೆಸರನ್ನೆಲ್ಲ ಸೇರಿಸಿ ಇವರ ಮಸಾಲೆಗಳು . ಹೈದ್ರಾಬಾದಿ,ಕೊಲ್ಲಾಪುರಿ , ಕಾಶ್ಮೀರಿ , ಪಂಜಾಬಿ , ಮತ್ತೆ ಅದರಲ್ಲೂ ಟಿಕ್ಕಾ, ಟುಕ್ಕ , ಹಂಡಿ ಹುಂಡಿ ಎಲ್ಲ ಸೇರಿಸಿ ಮತ್ತಿಷ್ಟು ಬಗೆ . ಉತ್ತರಭಾರತದಲ್ಲಿ ಹೋಟೆಲಿನಲ್ಲಿ ವೆಜ್ ಕುಂದಾಪುರಿ , ದಾಲ್ ಕೆಂಗೇರಿ , ಪನ್ನೀರ್ ಮದ್ದೂರಿ , ವೆಜ್ ಕಲಾಸಿಪಾಳ್ಯ ಬಿರಿಯಾನಿ ಎಲ್ಲ ಚಾಲ್ತಿಯಲ್ಲಿವೆಯೋ ಏನೋ..?? ಮೆನು ನ ಬಲಭಾಗದಲ್ಲೋ ಒಂದಂಕಿಯ ಸಂಖ್ಯೆ ಕಾಣಸಿಗದು . ಆಮ್ಲೆಟ್ ಪಕ್ಕದಲ್ಲಿ ೬೦ /- ಬರೆದದ್ದನ್ನು ನೋಡಿ ವೈಟರ್ ನನ್ನು ಕರೆದು "ಏನಪ್ಪಾ ... ಇಲ್ಲಿ ಆಮ್ಲೆಟ್ ಗೆ ಯಾವುದರ ಮೊಟ್ಟೆ ಹಾಕುತ್ತಾರೆ ಕೇಳಿದೆ . ಕೊಳೀದು ಸಾರ್ .. ಯಾಕೆ ??ಎಂದ . ಅಲ್ಲಪ್ಪಾ ಇಲ್ಲಿ ೬೦ /- ಬರೆದಿದ್ದಾರೆ. ನಾನು ಉಷ್ಟ್ರ ಪಕ್ಷಿಯ ಮೊಟ್ಟೆ ತಿನ್ನುವುದಿಲ್ಲ ಅದಕ್ಕೆ ಕೇಳಿದೆ ಎಂದೆ .

ಒಮ್ಮೆ ಹಣ ಉಳಿಸುವ ಯತ್ನದಲ್ಲಿ ಸಂಖ್ಯಾಶಾಸ್ತ್ರ ಲೆಕ್ಕ ಹಾಕಿ ಕಡಿಮೆ ಹಣದ "ದಾಲ್ ತರ್ಡ್ ಕ್ಲಾಸ್ "( ದಾಲ್ ತಡ್ಕಾ ) ಆರ್ಡರ್ ಮಾಡಿದೆನು . ಹಿತ್ತಾಳೆ ಬಣ್ಣದ ಬಾಲ್ದಿಯಲ್ಲಿ ತೊವ್ವೆ ತಂದು ಕೊಟ್ಟರು . ಬಾಲ್ದಿಯೆಂದರೆ ... ಚಿಕ್ಕ ಮಕ್ಕಳು ಡ್ರಾಯಿಂಗ್ ಬುಕ್ ನಲ್ಲಿ ಚಿತ್ರ ಬಿಡಿಸುತ್ತಾರಲ್ಲ ಅಂಥ ಟಿಪಿಕಲ್ ಶೇಪ್ -ಸೈಜ್ ನಲ್ಲಿತ್ತು . ಊಹಿಸಲು ಕಷ್ಟವಾಗುತ್ತಿದೆಯೇ ?? ಸರಿ .... ಹಮ್ .... ಹಾ .... ಸಾರ್ವಜನಿಕ ಶೌಚಾಲಯಗಳಲ್ಲಿ ಇರುತ್ತದಲ್ಲ .... ಹಾ ... ಅದೇ ಶೇಪ್ . ಕೆಳಗಡೆ ತೂತು ಇರಲಿಲ್ಲ ಅಷ್ಟೆ . ಕಷ್ಟಪಟ್ಟು ತಿಂದೆನು. ರಾತ್ರಿ ನಿದ್ದೆ ಬರಲಿಲ್ಲ . ಸೊಳ್ಳೆ ಪರದೆಯ ಸಣ್ಣ ಸಂದಿಯೊಳಗಿಂದ ಸೊಳ್ಳೆಗಳು ಶಿಸ್ತಿನ ಸಿಪಾಯಿಗಳಂತೆ ಮಾರ್ಚ್ -ಫಾಸ್ಟ್ ಮಾಡಿ ಒಳಗೆ ಬಂದು
ಡೀ.ಟೀ.ಎಸ್ ಸೌಂಡ್ ಎಫೆಕ್ಟ್ ನೊಂದಿಗೆ ಗುಂಯ್ ಗುಡುತ್ತಿವೆ . ಗುಡ್ ನೈಟ್ ನ ಲಿಕ್ವಿಡ್ ಇವೆಪೋರೆಟರನ್ನು ಪರ್ಫ್ಯೂಮ್ ಥರ ಬಳಸಿಕೊಳ್ಳುತ್ತಿವೆ . ಹೊಟ್ಟೆಯಲ್ಲಿ ದಾಲ್ ನ ಅಸಹಕಾರ ಚಳುವಳಿ ಚಾಲ್ತಿ . ಟಾಯ್ಲೆಟ್ ಗೆ ಹತ್ತಿರವಿರುವ ರೂಮಿಗೆ ಶಿಫ್ಟ್ ಆದೆನು . ೨೪ ಗಂಟೆ ನನ್ನ ಕೈ ಒಣಗಲಿಲ್ಲ . ಮರುದಿನ ಹೋಟೆಲ್ ಗೆ ಹೋಗಿ "ಅಪ್ಪಾ ನಿಮ್ಮ ಹೋಟೆಲ್ ಮಾಲೀಕರು ಎಲ್ಲಿದ್ದಾರೆ ಕೇಳಿದೆ . ಪಕ್ಕದ ಹೋಟೆಲಿಗೆ ಊಟಕ್ಕೆ ಹೋಗಿದ್ದಾರೆ ಸರ್ . ಎಂಬ ಉತ್ತರ ಬಂತು . ಪಕ್ಕದ ಹೋಟೆಲಿನಲ್ಲಿ "Our owner eats Here only " ಎಂಬ ಬೋರ್ಡ್ ನೋಡಿ ಸಂತೋಷವಾಯಿತು . ಅಂತೂ ನಾನು ಬಯಸಿದಂಥ ಹೋಟೆಲ್ ಸಿಕ್ಕಿತು ಎಂಬ ಸಂತೋಷದಿಂದ ವೈಟರ್ ಬಳಿ ನಿಮ್ಮ ಮಾಲೀಕರು ಎಲ್ಲಿದ್ದಾರೆ ಎಂದು ಕೇಳಿದೆನು . ಇವತ್ತು ಬಂದಿಲ್ಲ ಸಾರ್ .... 3 ದಿನದಿಂದ ಸಿಕ್ಕಾಪಟ್ಟೆ ಹೊಟ್ಟೆನೋವು ಸಾರ್ ಅವ್ರಿಗೆ .... ಎಂಬ ಉತ್ತರ ಕೇಳಿ ಬದುಕಿದೆಯಾ ಬಡಜೀವವೇ ಎಂದು ಅಲ್ಲಿಂದ ಕಾಲಿಗೆ ಬುದ್ದಿ ಹೇಳಿದೆ .

ಸರೀ ... ಒಳ್ಳೆ ಅಡುಗೆ ಮಾಡುವ ಹೆಂಡತಿಯಾದರೂ ಸಿಗಲೆಂದು ಹತ್ತಿರದ ರಾಮ ಮಂದಿರಕ್ಕೆ ಹೋಗಿ ದೇವರಲ್ಲಿ ಪ್ರಾರ್ಥಿಸಿದೆನು . ರಾಮನೋ " ನೋಡಪ್ಪ ಹೆಂಡತಿ ಹುಡುಕಿ ಕೊಡುವುದರಲ್ಲಿ ಅವನು ನಿಸ್ಸೀಮ , ನನ್ನ ಹೆಂಡತಿಯನ್ನು ಅವನೇ ಹುಡುಕಿ ಕೊಟ್ಟಿದ್ದು ಎಂದು ಹನುಮಂತನ ಬಳಿ ಕಳಿಸಿದನು. ಹನುಮಂತನ ಬಳಿ ಬಂದು "ದೇವಾ ... ಒಳ್ಳೆಯ ಗುಣದ, ನನ್ನನ್ನು ಅರಿತು ನಡೆಯುವ , ಒಳ್ಳೆ ಅಡುಗೆ ಮಾಡುವ ಹೆಂಡತಿಯನ್ನು ಕರುಣಿಸು ಎಂದು ಬೇಡಿಕೊಂಡೆನು " . ಲೇ .... ಅಂಥ ಹುಡುಗಿ ಇದ್ದಿದ್ರೆ ನಾನ್ಯಾಕೋ ಬ್ರಹ್ಮಚಾರಿ ಆಗಿ ಇರ್ತಿದ್ದೆ ?? ಎಂಬ ಅಶರೀರವಾಣಿ ಮೊಳಗಿತು . ತಣ್ಣೀರು ಕುಡಿದು ಸ್ವಲ್ಪ ಸುಧಾರಿಸಿಕೊಂಡು ಮನೆಗೆ ಹೋಗಿ ಅಮ್ಮ ಮಾಡಿದ ಗಂಜಿ - ಉಪ್ಪಿನಕಾಯಿ ತಿಂದು ಮಲಗಿದೆನು .

********************************************ವಿಕಟಕವಿ ******************