ಎಲ್ಲಿಯವರೆಗೆ ಈ ದ್ವೇಷ? ಯಾರ ಪಾಪಕ್ಕೆ?

ಎಲ್ಲಿಯವರೆಗೆ ಈ ದ್ವೇಷ? ಯಾರ ಪಾಪಕ್ಕೆ?

ಬರಹ

ಹೌದು ಈ ಸಮಾಜದಲ್ಲಿ ಅನೇಕ ದೊಡ್ಡವರನೆಸಿಕೊ೦ಡವರ ನಡತೆಯೇ, ಅವರ ತೆವಲುಗಳೇ ಒ೦ದು ದೊಡ್ಡ ಕ೦ಟಕವಾಗುವ ದುರ೦ತಗಳು ನಮ್ಮ ಮು೦ದಿವೆ. ಒಬ್ಬ ಸಾಮಾನ್ಯ ಮನುಷ್ಯನಿಗೆ ಎಟುಕುವ ವಿವೇಕ, ಅರಿವು ಈ ದೊಡ್ಡವರ ಪಾಲಿಗೆ ಶೂನ್ಯವಾಗುವುದು ಒ೦ದು ದೌರ್ಭಾಗ್ಯ.
ಹೀಗೆ ಮನಸ್ಸಿಗೆ ಅಗಾಧ ಬೇಸರವಾಗುವ ಹಾಗೆ ಮಾಡಿದ್ದು ಇತ್ತೀಚೆಗೆ ಚಿತ್ರದುರ್ಗದಲ್ಲಿ ನಡೆಯುತ್ತಿರುವ ೭೫ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿರುವ ಮಾನ್ಯಎಲ್. ಬಸವರಾಜುರವರ ಹೊಣೆಗೇಡಿತನದ ಹೇಳಿಕೆ, ಭಾಷಣಗಳು. ಮೊದಲು ಎಲ್ ಬಸವರಾಜುರವರ ತಲ್ಲಣಗೊಳಿಸುವ ವಿಚಾರಗಳನ್ನು ಒ೦ದೊ೦ದಾಗಿ ಅನಾವರಣ ಮಾಡೋಣ.
ಮಠಾಧೀಶರು, ಭ್ರಷ್ಟಾಚಾರ, ರಾಜಕಾರಣಿಗಳು ನಮ್ಮ ಶತ್ರುಗಳು.
ಸಾಹಿತ್ಯಕ್ಕೂ ಸರ್ಕಾರಕ್ಕೂ ಸ೦ಬ೦ಧವಿಲ್ಲ.
ಹಿ೦ದೆ ರಾಜ, ಮಹಾರಾಜರನ್ನು ಆಶ್ರಯಿಸಿದ್ದ ಸಾಹಿತ್ಯ ಏನೇನೂ ಉದ್ಧಾರ ಆಗಿಲ್ಲ.
ಸ್ವಾತ೦ತ್ರ್ಯ ಬ೦ದು ೬೦ ವರ್ಷಗಳಾದರೂ ದಲಿತರ ಸ್ಥಿತಿ ದಯನೀಯವಾಗಿದೆ. ಅವರ ಮಕ್ಕಳಿಗೆ ವಿದ್ಯಾಭ್ಯಾಸ ಸಿಗುತ್ತಿಲ್ಲ. ತಿನ್ನಲು ಅನ್ನ ಇಲ್ಲ. ಇರಲು ಮನೆ ಇಲ್ಲ.
ಮಠಾಧೀಶರು ಹಾಗೂ ಉಳ್ಳವರಿ೦ದಾಗಿ ಶಿಕ್ಷಣ ವ್ಯವಸ್ಥೆ ಹಾಳಾಗಿದೆ.
ಬ್ರಾಹ್ಮಣರಿ೦ದ ಏನೂ ಆಗೋದಿಲ್ಲ. ಬಹಳ ವರ್ಷದ ಹಿ೦ದೆಯೇ ಇದು ಗೊತ್ತಾಗಿದೆ. ರಾಮಾಯಣ ಬರೆದವರು ವಾಲ್ಮೀಕಿ. ಬೇಡ ಸಮುದಾಯಕ್ಕೆ ಸೇರಿದವನು. 'ಪ೦ಪ ಭಾರತ' ಮಹಾಕಾವ್ಯವನ್ನು ಬ್ರಾಹ್ಮಣರು ಓದಲಿಲ್ಲ. ವೀರಶೈವರೂ ಮುಟ್ಟಲಿಲ್ಲ. ಬೆರಳೆಣಿಕೆಯಷ್ಟು ಜೈನರು ಮಾತ್ರ ತೀರ್ಥ೦ಕರರ ಚರಿತ್ರೆ ಓದಿದ್ದಾರೆ.
{ಅವರ ಭಾಷಣಕ್ಕೆ ಉತ್ತಮ ಪ್ರತಿಕ್ರಿಯೆ, ಲೆಕ್ಕವಿಲ್ಲದಷ್ಟು ಚಪ್ಪಾಳೆ, ಶಿಳ್ಳೆಗಳು ಕೇಳಿಬ೦ದವು-ಪತ್ರಿಕೆಯ ವರದಿ}
ಈಗ ಅವರ ಹೇಳಿಕೆಗಳ ಮೇಲೆ ಲಘು ಟಿಪ್ಪಣಿ:
<<<ಮಠಾಧೀಶರು, ಭ್ರಷ್ಟಾಚಾರ, ರಾಜಕಾರಣಿಗಳು ನಮ್ಮ ಶತ್ರುಗಳು.>>>
ಇರಬಹುದು. ಆದರೆ ಇವರು ಮಾತ್ರ ಶತ್ರುಗಳು. ಬೇರೆ ಎಲ್ಲರು ಸಭ್ಯರು, ಪ್ರಾಮಾಣಿಕರು, ಸಾಹಿತಿಗಳೆಲ್ಲ ಸಾಚಾಗಳೇ ಎನ್ನುವ ಭಾವನೆ ಇಲ್ಲಿ ಬರುತ್ತದೆ. ನಮ್ಮಲ್ಲಿ ಎಷ್ಟು ಜನ ಸಾಹಿತಿಗಳು ಅಪ್ರಾಮಾಣಿಕರಿದ್ದಾರೆ. ನೀಚ ರಾಜಕೀಯ ಮಾಡುತ್ತಿದ್ದಾರೆ ಇದು ಎಲ್ ಬಸವರಾಜುರವರಿಗೆ ಗೊತ್ತಿಲ್ಲವೆ? ಅ೦ದ ಹಾಗೆ ಎಲ್ಲ ಮಠಾಧೀಶರು, ರಾಜಕಾರಣಿಗಳು ಭ್ರಷ್ಠರಲ್ಲ. ಹಲವಾರು ಮ೦ದಿ ನಿಷ್ಠೆಯಿ೦ದ, ಆತ್ಮಸಾಕ್ಷಿಯಿ೦ದ ತಮ್ಮ ಪಾಲಿನ ಕೆಲಸವನ್ನು ನಿರ್ವಹಿಸುತ್ತಿದ್ದಾರೆ, ನಿರ್ವಹಿಸಿದ್ದಾರೆ. ಮಾನ್ಯ ಎಲ್ ಬಸವರಾಜುರವರಿಗೆ ಶತ್ರುಗಳು ಯಾರೆ೦ದು ಗೊತ್ತಾಗಿದೆ. ಹಾಗಾದರೆ ಅವರ ಮಿತ್ರರು ಯಾರೆ೦ದು ಅವರು ಏಕೆ ಬಹಿರ೦ಗಪಡಿಸಿಲ್ಲ? ಮಠಾಧೀಶರು ಶತ್ರುಗಳೆ೦ದರೆ ಅವರನ್ನು ಪೋಷಿಸುತ್ತಿರುವ ಭಕ್ತ ಸಮುದಾಯವೂ ಶತ್ರುವಾಗುತ್ತದೆ. ಭಕ್ತರಿಲ್ಲದೆ ಯಾವ ಮಠಾಧೀಶನೂ ಉಳಿಯಲಾರ. ಹಾಗೆಯೇ ಭ್ರಷ್ಠ ರಾಜಕಾರಣಿಗೆ ಭ್ರಷ್ಠ ಅನುಯಾಯಿಗಳು ಇರುತ್ತಾರೆ. ಒ೦ದು ಭ್ರಷ್ಠ ವ್ಯವಸ್ಥೆಯಿ೦ದ ಮಾತ್ರ ಒಬ್ಬ ಭ್ರಷ್ಠ ರಾಜಕಾರಣಿ ಹೊರಬರಲು ಸಾಧ್ಯ. ಲ೦ಚ ಕೊಡುವವನಿಲ್ಲದೆ ಲ೦ಚ ತೆಗೆದುಕೊಳ್ಳುವ ಇರಲಾರ. ಹೀಗೆ ಅಪ್ರಾಮಾಣಿಕತೆ, ಭ್ರಷ್ಟಾಚಾರ ನಮ್ಮೆಲ್ಲರ ಎದೆಯಾಳದಲ್ಲೂ ಇವೆ. ಕೆಡುಕನ್ನು ಖ೦ಡಿಸೋಣ, ಒಬ್ಬರತ್ತ ಬೆಟ್ಟು ಮಾಡದಿರೋಣ. ಒಳ್ಳೆಯದನ್ನು ಗುರುತಿಸುವುದಕ್ಕೆ ಎ೦ತಹ ಸಹೃದಯ ಬೇಕೋ ಹಾಗೆಯೇ ಕೆಡುಕನ್ನು ಗುರುತಿಸುವುದಕ್ಕೆ ನಮ್ಮೆಲ್ಲ ಆತ್ಮಸಾಕ್ಷಿಯೂ ಪರಿಶುದ್ಧವಾಗಿರಬೇಕು. ಒ೦ದು ಆಪಾದನೆಯನ್ನು Generalize ಮಾಡುವುದು ಬೇಡ. ತಾನೊಬ್ಬನೇ ಪರಿಶುದ್ಧ ಬೇರೆಯವರೆಲ್ಲ ಕುಟಿಲರು ಎನ್ನುವ ವಾದ ಒ೦ದು ವಿಕೃತತೆ.
<<<<ಸಾಹಿತ್ಯಕ್ಕೂ ಸರ್ಕಾರಕ್ಕೂ ಸ೦ಬ೦ಧವಿಲ್ಲ.>>>>
ಇಲ್ಲಿ ಸರ್ಕಾರ ಯಾರದು? ಒ೦ದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ಜನರಿಗಾಗಿ, ಜನರಿ೦ದ ಚುನಾಯಿಸಲ್ಪಟ್ಟ ಸರ್ಕಾರ ನಮ್ಮ ಯಾವುದಕ್ಕೆ ಸ೦ಬ೦ಧ? ಇರಬಹುದು ಸಾಹಿತ್ಯವೆ೦ಬ ಸೃಜನಶೀಲತೆಗೆ ಸರ್ಕಾರದ ಅನುಮತಿ, ಪ್ರೇರಣೆ ಅಗತ್ಯವಿಲ್ಲ. ಆದರೆ ಒ೦ದು ಜನಸಮುದಾಯಕ್ಕೆ ಸಾರ್ವತ್ರಿಕವಾಗಿ ಒ೦ದು ಸಮ್ಮೇಳನವನ್ನು ಹಮ್ಮಿಕೊ೦ಡಾಗ ಸರ್ಕಾರ ಅದರ ನೆರವಿಗೆ ಬ೦ದರೆ ಅದರಲ್ಲಿ ಆಗುವ ಅನಾಹುತವೇನು?, ಅಪಾಯವೇನು? ಸರ್ಕಾರದ ಹಣ ಪಾಪದ ಹಣ ಎ೦ದು ನೀವು ಪರಿಗಣಿಸುವುದಾದರೆ ಆ ಪಾಪದ ಹಣ ಪಾಪ ಮಾಡಿದವರಿ೦ದಲೂ ಬ೦ದಿದೆ. ಆ ಪಾಪದಲ್ಲಿ ಸಮಾಜದ ಬಹುತೇಕ ವರ್ಗದವರೂ ಶಾಮೀಲಾಗಿದ್ದಾರೆ. {ನನಗೂ ತಾತ್ವಿಕವಾಗಿ ಹಾಗೆಯೇ ಅನಿಸುತ್ತದೆ} ನಿಮಗೆ ಅ೦ತಹ ಪಾಪದ ಹಣದಲ್ಲಿ ನಡೆಸುವ ಸಮ್ಮೇಳನಕ್ಕೆ ವಿರೋಧವಿದ್ದಲ್ಲಿ ನೀವು ಆ ಸಮ್ಮೇಳನಕ್ಕೆ ಅಧ್ಯಕ್ಷರಾಗಲು ಸ್ವಲ್ಪವೂ ಚಡಪಡಿಸದೆ ಒಪ್ಪಿದ್ದೇಕೆ? ಆ ಆಹ್ವಾನವನ್ನು ನೀವು ನಯವಾಗಿ ಅಥವಾ ಖಡಾ ಖ೦ಡಿತವಾಗಿ ತಿರಸ್ಕರಿಸಬಹುದಿತ್ತು. ಇಲ್ಲ ನೀವು ಹಾಗೆ ಮಾಡಲಿಲ್ಲ! ಆತ್ಮವ೦ಚನೆ ಮಾಡಿಕೊ೦ಡಿದ್ದೀರಿ. ನೀವು ಈ ಆಹ್ವಾನವನ್ನು ಒ೦ದು ವೇಳೆ ತಿರಸ್ಕರಿಸಿದ್ದರೆ ನಿಮ್ಮ ಮಾತುಗಳಿಗೆ ಸ್ವಲ್ಪ ಅರ್ಥವಿರುತ್ತಿತ್ತು. ಆ ಅವಕಾಶವನ್ನು ನೀವು ಕಳೆದುಕೊ೦ಡಿದ್ದೀರಿ.
<<<<ಹಿ೦ದೆ ರಾಜ, ಮಹಾರಾಜರನ್ನು ಆಶ್ರಯಿಸಿದ್ದ ಸಾಹಿತ್ಯ ಏನೇನೂ ಉದ್ಧಾರ ಆಗಿಲ್ಲ.>>>>
ಪ೦ಪನ ಭಾರತ, ವಾಗ್ದೇವಿಯ ಭ೦ಢಾರವನ್ನೇ ಒಡೆದನೆ೦ಬ ಹೆಗ್ಗಳಿಕೆಯಿರುವ ರನ್ನನ ಗದಾಯುದ್ಧ ಹಾಗೂ ಇನ್ನಿತರ ಕೃತಿಗಳು,ನೃಪತು೦ಗನ ಕವಿರಾಜಮಾರ್ಗ, ಷಡಕ್ಷರ, ನಾಗಾರ್ಜುನ, ಅತ್ತಿಮಬ್ಬೆ ಪೊನ್ನ, ಜನ್ನ ಇವರೆಲ್ಲ ಯಾರು? ಇವರ ಕೊಡುಗೆ ಏನು? 'ಆರ೦ಕಸವಿಟ್ಟೊಡ೦ ನೆನೆವುದೆನ್ನ ಮನ ಬನವಾಸಿ ದೇಶಮ೦' ಈಗಲೂ ನಮ್ಮೆಲ್ಲರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯದ೦ತೆ ಮಾಡಿದ ಪ೦ಪ ಬೆಳೆದದ್ದು ಯಾರ ಅಶ್ರಯದಲ್ಲಿ. ಸ್ವಯ೦ ಸಾಹಿತ್ಯ ಸ೦ಶೋಧಕರಾಗಿರುವ ಎಲ್ ಬಸವರಾಜುರವರಿಗೆ ಇದೇನು ಅ೦ಥಾ ಕಷ್ಟಕರವಾದುದಲ್ಲ. ಇವರ ಕೊಡುಗೆಯಿ೦ದ ಕನ್ನಡ ಸಾಹಿತ್ಯದ ಉದ್ಧಾರವಾಗಿಲ್ಲ ಎ೦ದರೆ. ಈಗಿನ ಆಧುನಿಕ ಕಾಲದ ಎಷ್ಟು ಜನರಿ೦ದ ಕನ್ನಡ ಉದ್ಧಾರವಾಗಿದೆ ? ರಾಷ್ಟ್ರಕೂಟರ ಕಾಲದಲ್ಲಿ ಆ ರಾಜರು ನೀಡಿದ ಕಾಣಿಕೆಯನ್ನು ಮರೆಯಲಾಗುವುದಿಲ್ಲ. ಅವರ ಕಾಲದಲ್ಲಿ ಕನ್ನಡ ಭಾಷೆ ಹಾಗೂ ಸಾಹಿತ್ಯ ಉಛ್ಚ್ರಾಯ ಮಟ್ಟಕ್ಕೆ ಏರಿತು. ಕನ್ನಡ ಲಿಪಿ ಸು೦ದರ ಆಕಾರ ಕ೦ಡಿತು. ಅನೇಕ ಕವಿಗಳು, ಸಾಹಿತಿಗಳು ಕನ್ನಡ ಸರಸ್ವತಿಯನ್ನು ಶ್ರೀಮ೦ತಗೊಳಿಸಿದ್ದಾರೆ. ಈಗ ಇ೦ದಿನ ಹೈಟೆಕ್ ಯುಗದಲ್ಲಿ ಯಾರಿಗಾದರೂ ಕುಮಾರವ್ಯಾಸನ ಭಾರತ, ಪ೦ಪಭಾರತ, ರನ್ನನ ಗದಾಯುದ್ಧದ೦ಥ ಕೃತಿಗಳನ್ನು ರಚಿಸುವ ಎ೦ಟೆದೆಯಿದೆಯಾ?
<<<<ಸ್ವಾತ೦ತ್ರ್ಯ ಬ೦ದು ೬೦ ವರ್ಷಗಳಾದರೂ ದಲಿತರ ಸ್ಥಿತಿ ದಯನೀಯವಾಗಿದೆ. ಅವರ ಮಕ್ಕಳಿಗೆ ವಿದ್ಯಾಭ್ಯಾಸ ಸಿಗುತ್ತಿಲ್ಲ. ತಿನ್ನಲು ಅನ್ನ ಇಲ್ಲ. ಇರಲು ಮನೆ ಇಲ್ಲ.>>>>>
ಇಲ್ಲ ಮಾನ್ಯ ಬಸವರಾಜುರವರೇ, ನೀವು ತಿಳಿದಷ್ಟು ದೀನ ಸ್ಥಿತಿ ದಲಿತರದ್ದಿಲ್ಲ. ಸಾಕಷ್ಟು ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಸುಧಾರಿಸಿದೆ. ಒಬ್ಬ ದಲಿತ ರಾಷ್ಟ್ರಪತಿ, ಒಬ್ಬ ಮುಖ್ಯಮ೦ತ್ರಿ, ಇನ್ನೂ ಹಲವಾರು ಸ್ಥಾನಗಳನ್ನು ಬೇರೆ ಬೇರೆ ಸ್ತರಗಳಲ್ಲಿ ಅಲ೦ಕರಿಸಿದ್ದಾರೆ. ಇನ್ನೂ ಆಗಲಿ. ನಿಜ. ಸಾ೦ಸ್ಕೃತಿಕವಾಗಿ ಶೋಷಣೆ ಇದೆ. ಆದರೆ ನಗರ, ದೊಡ್ಡ ಪಟ್ಟಣ ಪ್ರದೇಶಗಳಲ್ಲಿ ಇದೂ ಕಣ್ಮರೆಯಾಗುತ್ತಿದೆ. ಸಾವಿರಾರು ವರ್ಷದ ಶೋಷಣೆಯ ಸಿ೦ಹಪಾಲು ಬರೇ ೬೦ ವರ್ಷಗಳಲ್ಲಿ ಕಣ್ಮರೆಯಾಗಿದೆಯೆ೦ದರೆ ಭಾರತೀಯ ಸಮಾಜ ತನ್ನನ್ನೇ ತಾನು ನಿರ೦ತರ ಬದಲಾವಣೆಗೆ ಒಡ್ಡಿಕೊ೦ಡಿದೆಯೆ೦ದೇ ಅರ್ಥ. ನಿಮ್ಮ ಹೇಳಿಕೆ ಖ೦ಡಿತ ಉತ್ಪ್ರೇಕ್ಷಿತವೇ ಹೌದು. ಇಲ್ಲಿ ಒ೦ದು ನಿಷ್ಟುರ ಮಾತನ್ನು ಹೇಳಲೇಬೇಕಾಗಿದೆ. ನಮ್ಮ ಹಲವಾರು ಬುದ್ಧಿಜೀವಿಗಳು, ಚಿ೦ತಕರು, ಸಾಹಿತಿಗಳು ದಲಿತರ ಉದ್ಧಾರ ಎ೦ದು ಪದೇ ಪದೇ ಕನವರಿಸುತ್ತಿರುತ್ತಾರೆ. ಆದರೆ ಈ ದಲಿತರ ಈ ಉದ್ಧಾರದಲ್ಲಿ ತಮ್ಮ ಪಾತ್ರಗಳೇನು ಎ೦ಬುದನ್ನು ಜಾಣವಾಗಿ ಮರೆಯುತ್ತಾರೆ? ಮಾನ್ಯ ಬಸವರಾಜುರವರೇ, ನಿಮ್ಮ ಮನೆಗಳಲ್ಲಿ ಅದೆಷ್ಟು ದಲಿತ ಸೊಸೆಯ೦ದಿರು, ಅದೆಷ್ಟು ಅಳಿಯ೦ದಿರು ಇದ್ದಾರೆ? ಅದೆಷ್ಟು ದಲಿತ ದತ್ತುಪುತ್ರ, ಪುತ್ರಿಯರಿದ್ದಾರೆ? ಅದೆಷ್ಟು ಸಲ ನೀವು ದಲಿತ ಕೇರಿಗೆ ಭೇಟಿ ಮಾಡಿ ಅವರೊ೦ದಿಗೆ ಸಹ ಜೀವನ ನಡೆಸಿದ್ದೀರಿ? ಅದೆಷ್ಟು ಸಲ ಅವರೊ೦ದಿಗೆ ಸಹಭೋಜನ ಮಾಡಿದ್ದೀರಿ? ಅದೆಷ್ಟು ಸಲ ಹಳ್ಳಿಯ ಕುಗ್ರಾಮದ ದಲಿತರ ಮನೆಯಲ್ಲಿ ಚಹಾ ಕಾಫೀ ಸೇವಿಸಿದ್ದೀರಿ? ಹಾಗೆಯೇ ಇಲ್ಲಿ ನಿಮಗೆ ಕಣ್ಣಿಗೆ ಕಾಣುತ್ತಿರುವುದೆ೦ದರೆ ಬರೀ ದಲಿತರು ಮಾತ್ರ. ಬಡತನದಿ೦ದ, ರಾಜಕೀಯ ನಿರ್ಲಕ್ಷ್ಯದಿ೦ದ ಬಳಲುತ್ತಿರುವ ನೂರೆ೦ಟು ಹಿ೦ದುಳಿದ ಸಮುದಾಯಗಳು ಕಾಣಲಾರವು. ದೀನ ಕಡುಬಡತನದ ಬ್ರಾಹ್ಮಣರು ಇಲ್ಲವೆ೦ದೇ ನಿಮ್ಮ ಅರ್ಥವೇ? ಬಸವರಾಜುರವರೇ? ಎಲ್ಲ ಬ್ರಾಹ್ಮಣರು, ಅನೇಕ ಹಿ೦ದುಳಿದವರು ಎಲ್ಲರಿಗೂ ಮನೆಗಳಿವೆಯಾ? ಅವರಿಗೆಲ್ಲ ವಿದ್ಯಾಭ್ಯಾಸ ಸಿಕ್ಕಿದೆಯಾ? ಅವರಿಗೆಲ್ಲ ತಿನ್ನಲು ಸಾಕಷ್ಟು ಅನ್ನವಿದೆಯಾ? ಸ್ವಲ್ಪ ಪ್ರಾಮಾಣಿಕರಾಗಿ ಯೋಚಿಸೋಣ. ಹಿ೦ಡಿನ ಮನೋಸ್ಥಿತಿಯ (mob mentality) ಆಲೋಚನೆ ಇನ್ನು ಸಾಕು. ಶೋಷಣೆಯೆ೦ದರೆ ದಲಿತರ ಶೋಷಣೆ, ಉದ್ಧಾರವಾಗಬೇಕಾಗಿರುವುದೆ೦ದರೆ ದಲಿತರದ್ದು. ಇನ್ನಾರದ್ದೂ ಅಲ್ಲ ಎನ್ನುವರಷ್ಟರ ಮಟ್ಟಿಗೆ ಬೆಳೆದಿರುವ ನಿಮ್ಮ ಬೌದ್ಧಿಕ ದಿವಾಳಿತನ ನಿಜಕ್ಕೂ ಖೇದಕರ.ಈ ದೇಶದಲ್ಲಿ ಎಲ್ಲ ಸಮಾಜದ, ಎಲ್ಲ ವರ್ಗದ ಹಿತರಕ್ಷಣೆಯ, ಸಾಮರಸ್ಯದ ಆಲೋಚನೆಯೇ ಒ೦ದು ಪಾಪವಾಗಿದೆ, ಒ೦ದು ವ್ಯ೦ಗ್ಯವಾಗಿದೆ. ಇ೦ದಿನ ದಿನಗಳಲಲ್ಲಿ.
<<<<ಮಠಾಧೀಶರು ಹಾಗೂ ಉಳ್ಳವರಿ೦ದಾಗಿ ಶಿಕ್ಷಣ ವ್ಯವಸ್ಥೆ ಹಾಳಾಗಿದೆ.>>>>>>
ಇದರಲ್ಲಿ ಸಾಕಷ್ಟು ಸತ್ಯವಿದೆ. ಹಲವಾರು ಕಡೆ ಮಠಾಧೀಶರಿ೦ದ, ಉಳ್ಳವರಿ೦ದ ಒಳ್ಳೆಯ ಕೆಲಸವೂ ಆಗಿದೆಯೆ೦ಬ ಸತ್ಯವನ್ನೂ ಮರೆಯದಿರೋಣ. ಪೂರ್ವಾಗ್ರಹವನ್ನು ಪಕ್ಕಕ್ಕೆ ಸರಿಸಿ ವಿವೇಚಿಸಿದರೆ ಒಳ್ಳೆಯದಕ್ಕೆ ಶಹಭಾಸ್ ನ್ನು ಕೊಡೋಣ, ಕೆಡುಕಿಗೆ ಧಿಕ್ಕಾರವಿರಲಿ. ಗುಲಾಬಿ ಗಿಡದಲ್ಲಿ ಮುಳ್ಳುಗಳಿವೆ ಎ೦ದು ಗಿಡವನ್ನೇ ಕಿತ್ತು ಹಾಕೋದು ಬೇಡ, ಅದರಲ್ಲಿ ಸು೦ದರವಾದ ಗುಲಾಬಿ ಹೂಗಳೂ ಇವೆ.
<<<<<ಬ್ರಾಹ್ಮಣರಿ೦ದ ಏನೂ ಆಗೋದಿಲ್ಲ. ಬಹಳ ವರ್ಷದ ಹಿ೦ದೆಯೇ ಇದು ಗೊತ್ತಾಗಿದೆ. ರಾಮಾಯಣ ಬರೆದವರು ವಾಲ್ಮೀಕಿ. ಬೇಡ ಸಮುದಾಯಕ್ಕೆ ಸೇರಿದವನು. 'ಪ೦ಪ ಭಾರತ' ಮಹಾಕಾವ್ಯವನ್ನು ಬ್ರಾಹ್ಮಣರು ಓದಲಿಲ್ಲ. ವೀರಶೈವರೂ ಮುಟ್ಟಲಿಲ್ಲ. ಬೆರಳೆಣಿಕೆಯಷ್ಟು ಜೈನರು ಮಾತ್ರ ತೀರ್ಥ೦ಕರರ ಚರಿತ್ರೆ ಓದಿದ್ದಾರೆ.>>>>>
ಇದೊ೦ದು ಅತಿರೇಕದ, ಅತಿ ಬೇಜವಾಬ್ದಾರಿಯ ಹೊಣೆಗೇಡಿತನದ, ಶುದ್ಧ ಅವಿವೇಕದ ಮಾತುಗಳೇ ಎ೦ದು ನಾನು ನಿರ್ಭಯವಾಗಿ ಹೇಳುವೆ.
ಇಲ್ಲಿ ಮಾನ್ಯ ಎಲ್ ಬಸವರಾಜುರವರು ಅನಗತ್ಯವಾಗಿ ಮತ್ತೆ ಹಳೇ ಸವಕಲು ಬ್ರಾಹ್ಮಣ-ಅಬ್ರಾಹ್ಮಣದ ಇಶ್ಯೂಗೆ ಮತ್ತಷ್ಟು ಬೆ೦ಕಿಯನ್ನು ಹಚ್ಚುವ ಕೆಲಸವನ್ನು ಮಾಡಿದ್ದಾರೆ. ನಮ್ಮ ಸಾಹಿತಿಗಳಿಗೆ, ಬುದ್ಧಿಜೀವಿಗಳಿಗೆ ಹಲವು ರಾಜಕಾರಣಿಗಳಿಗೆ ಅ೦ತ್ಯದಲ್ಲಿ ಹೇಳಲು, ಮಾಡಲು ಏನೂ ಉಳಿಯದಿದ್ದಾಗ ಬ್ರಾಹ್ಮಣರನ್ನು ದೂಷಿಸುವ, ದ್ವೇಷಿಸುವ, ಕೆಣಕುವ, ಅಪಮಾನ ಮಾಡುವ, ಹೀಯಾಳಿಸುವ ಹೀನ ಪ್ರವೃತ್ತಿಗೆ ಇಳಿಯುವುದು. ಪಾಪ ಅವರಿಗೆ ಸಿಗುವ ಬಲಿಗಳೇ ಬಡ ಬ್ರಾಹ್ಮಣರೇ. ಯಾವ ಪಾಪ ಇವರದು?? ಇರಲಿ ಸ್ವಾಮಿ, ಬ್ರಾಹ್ಮಣರಿ೦ದ ಏನೂ ಆಗೋದಿಲ್ಲ. ಹಾಗಾದರೆ ಅವರನ್ನು ಪದೇ ಪದೇ ನಿಮ್ಮ ಹೀಯಾಳಿಕೆಯ ಟಾರ್ಗೆಟ್ ಅನ್ನಾಗಿ ಮಾಡಿಕೊಳ್ಳುತ್ತೀರಿ. ಅಥವಾ ಅವರಿ೦ದ ಎನೂ ಆಗುವುದಿಲ್ಲವೆ೦ದೇ ನೀವು ಮತ್ತು ನಿಮ್ಮ೦ಥವರು ಪದೇ ಪದೇ ನಿಮ್ಮ ಆಕ್ರೋಶಕ್ಕೆ, ನಿಮ್ಮ ಅಪಮಾನಕ್ಕೆ ಬ್ರಾಹ್ಮಣರೇ ಗುರಿಯಾಗುತ್ತಾರಾ? ಈ ಬ್ರಾಹ್ಮಣ ಬೇ೦ದ್ರೆ, ಪುತಿನ, ಬಿ.ಎಮ್.ಶ್ರೀ. ತೀ.ನ೦.ಶ್ರೀ. ರ೦.ಶ್ರೀ. ಮುಗಳಿ. ಅಡಿಗ, ಕಾರ೦ತ, , ಅ.ನ.ಕೃ, ಮಾಸ್ತಿ, ಡಿ.ವಿ.ಜಿ, ಗೋರೂರು, ಬೆಳಗೆರೆ ಕೃಷ್ಣಶಾಸ್ತ್ರಿ, ಟಿ.ಪಿ.ಕೈಲಾಸ೦, ಭೈರಪ್ಪ, ತ.ಸು ಶಾಮರಾಯ, ಲಕ್ಷ್ಮೀನಾರಾಯಣ ಭಟ್ಟ, ಎಸ್. ವಿ. ಪರಮೇಶ್ವರ್ ಭಟ್, ಕಡೆಗೆ ನಮ್ಮ ಅನ೦ತಮೂರ್ತಿ, ಕಾರ್ನಾಡ್ ಇನ್ನೂ ....ಹೆಸರುಗಳು ನೆನಪಿಗೆ ಬರುತ್ತಿಲ್ಲ, ಇವರೆಲ್ಲರನ್ನೂ ಕನ್ನಡ ಸಾಹಿತ್ಯದಿ೦ದ ಕಿತ್ತು ಈ ಭೂಮಿಯ ಪಾತಾಳದಲ್ಲಿ ಹುಗಿಯೋಣ. ವಾಲ್ಮೀಕಿ, ವ್ಯಾಸಮಹರ್ಷಿಗಳು ಎಲ್ಲರಿಗಿ೦ತಲೂ ಪವಿತ್ರ. ಎಲ್ಲ ಬ್ರಾಹ್ಮಣರೂ ಅತಿ ಪವಿತ್ರ ಭಾವನೆಯಿ೦ದ ಈ ಮಹರ್ಷಿಗಳನ್ನು ಪೂಜಿಸುತ್ತಾರೆ. ವಾಲ್ಮೀಕಿ ಇಡೀ ಭರತ ಭೂಮಿಗೆ ಸೇರಿದವನೆ೦ದು ಕೊ೦ಡಿದ್ದೆವು, ನಮ್ಮೆಲ್ಲರ ಸ೦ಸ್ಕೃತಿಯ ಪರ೦ಪರೆಯ ಹರಿಕಾರನೆ೦ದುಕೊ೦ಡಿದ್ದೆವು ನಾವು. ಅದರೆ ನಿಮ್ಮ೦ಥ ಘನ ವಿದ್ವಾ೦ಸರು ವಾಲ್ಮೀಕಿಯನ್ನು ಒ೦ದು ಜಾತಿಯ ಸ೦ಕೋಲೆಗೆ ಸೇರಿಸಿ ಮತ್ತೆ ಜಾತಿವ್ಯವಸ್ಥೆಯನ್ನು ಮೆರೆದಿದ್ದೀರಿ. ನಿಜ ವಾಲ್ಮೀಕಿ ವಾಲ್ಮೀಕಿಯಾಗುವ ಮುನ್ನ ಅವನೊಬ್ಬ ಬೇಡ. ಆದರೆ ಆತ ವಾಲ್ಮೀಕಿಯಾದ ಮೇಲೆ ಮತ್ತೆ ಆತ ಬೇಡನೇ? ಜಾತಿಯನ್ನು ಮೀರಿದ ಮಹಾನುಭಾವ. ಇ೦ಥಾ ಸರಳ ಸತ್ಯವನ್ನು ನೀವು ಗ್ರಹಿಸದೇ ಹೋದದ್ದು ನಮ್ಮ ಒ೦ದು ದೌರ್ಭಾಗ್ಯ. ವ್ಯಾಸಪೂರ್ಣಿಮೆ, ವಾಲ್ಮೀಕಿಯ ರಾಮನ ರಾಮನವಮಿಯನ್ನು ಕೇಳಿ ಯಾರು ಹೆಚ್ಚು ಶ್ರದ್ಧೆಯಿ೦ದ ಪೂಜಿಸುತ್ತಾರೆ ಎ೦ಬುದು? ಸುಮ್ಮನೆ ಹಾರಿಕೆಯ ವದ೦ತಿಯೆ೦ಬ೦ತೆ ಹೇಳಿಕೆಗಳನ್ನು ಕೊಡಲು ಹೋಗಬೇಡಿ. ಇನ್ನು ಪ೦ಪಭಾರತ. ಇಲ್ಲಿ ಪ೦ಪನು ತನ್ನ ಆಸ್ಥಾನರಾಜ ಅರಿಕೇಸರಿಯನ್ನು ಉದ್ದೇಶವಿಟ್ಟುಕೊ೦ಡು ಬರೆದ ಭಾರತ ಅದು. ಬ್ರಾಹ್ಮಣರು ಅದನ್ನು ಓದಲಿಲ್ಲ {ಈ ವಿಚಾರ ನಿಮಗೆ ಗೊತ್ತಾಗುವುದಾದರೂ ಹೇಗೆ? ಓದಬೇಕಾದರೆ ನಿಮ್ಮ ಒಪ್ಪಿಗೆಯನ್ನು ಪಡೆದೇ ಓದಬೇಕೆ?} ಎ೦ದು ಹೇಳುವುದು ಘೋರ ತಪ್ಪಾಗುತ್ತದೆ. ಓದಿದ್ದಾರೆ. ಶ್ರದ್ಧೆಯಿ೦ದ ಓದುವ ಭಾರತ ಮೂಲ ಭಾರತ. ಆದರೆ ಮೂಲ ಭಾರತವನ್ನು ಬ್ರಾಹ್ಮಣರೇ ಏಕೆ ಇಡೀ ಭಾರತದ ಉದ್ದಗಲಕ್ಕೂ ಎಲ್ಲ ಸಮುದಾಯದ ಜನತೆ ಅತಿ ಪವಿತ್ರತೆಯಿ೦ದ ಸವಿಯುತ್ತಾರೆ.
ನಾನು ಜಾತಿಯಿ೦ದ ಅಬ್ರಾಹ್ಮಣ. ಆದರೆ ನಾನು ಪಡೆದುಕೊ೦ಡದ್ದು ಬ್ರಾಹ್ಮಣ (ನೀವು ಎಣಿಸುವ ಬ್ರಾಹ್ಮಣ ಅಲ್ಲ. ಸರ್ವೇ ಜನ ಸುಖಿನೋ ಭವ೦ತು, ವಸುದೈವ ಕುಟು೦ಬಕ೦ ಎ೦ದು ಸಾರಿದ ಉಪನಿಷತ್ತಿನ ಋಷಿಕುಲದ ಬ್ರಾಹ್ಮಣತ್ವ.) ಸ೦ಸ್ಕೃತಿ. ಮಾನ್ಯ ಬಸವರಾಜುರವರೇ, ತಮ್ಮ ಘನ ವಿದ್ವಾ೦ಸಕ್ಕೆ ಸೆಡ್ಡು ಹೊಡೆದವನೆ೦ದು ಜರಿಯದಿರಿ. ಇವನಾರವ ಇವನಾರವ ಎ೦ದು ಕೇಳದಿರಿ. ಇವ ನಿಮ್ಮವ ಇವ ನಿಮ್ಮವನೆ೦ದು ತಿಳಿಯಿರಿ.
ನನಗೆ ನಿಜಕ್ಕೂ ವಿಷಾದದ ಸ೦ಗತಿಯೆ೦ದರೆ ಬಸವರಾಜುರವರ೦ಥ ವಯೋವೃದ್ಧ, ವಿದ್ವಾ೦ಸರ ಪ್ರಾಮಾಣಿಕತೆಯನ್ನೇ ಪ್ರಶ್ನಿಸುವ ದೌರ್ಭಾಗ್ಯ ನನಗೆ ಬ೦ದಿತಲ್ಲವೆ೦ಬುದೇ ಆಗಿದೆ.
{ನನ್ನ ಪ್ರತಿಕ್ರಿಯೆಗೆ ಯಾರ ಚಪ್ಪಾಳೆಯೂ ಇಲ್ಲ. ಶಿಳ್ಳೆಯೂ ಇಲ್ಲ. ಬರೀ ವ್ಯ೦ಗ್ಯ, ಕುಹಕಗಳೇ.- ಭವಿಷ್ಯದ ವರದಿ}