ಎಲ್ಲಿ ಹೋದರು ನಮ್ಮ ಪೊಲೀಸ್ ಸಿಂಗಂಗಳು…? (ಭಾಗ 1)
ಸಂಸದನೊಬ್ಬ ಅತ್ಯಾಚಾರ ಮಾಡಿ ದೇಶದಿಂದ ಪರಾರಿಯಾಗಿ 34 ದಿನಗಳ ನಂತರ ಹಿಂದಿರುಗಿದಾಗ ಕನಿಷ್ಠ ಆತನ ಕತ್ತಿನ ಪಟ್ಟಿ ಹಿಡಿದು ಅಥವಾ ಆತನ ಸೊಂಟ ಹಿಡಿದು ಅಥವಾ ಆತನ ಕೈಹಿಡಿದು ದರದರನೇ ಎಳೆದು ತರಲು ಯಾವ ಐಪಿಎಸ್ ಅಧಿಕಾರಿಗೂ ಸಾಧ್ಯವಾಗಲಿಲ್ಲ. ಅಮಾಯಕನೊಬ್ಬನನ್ನು ಬರ್ಬರವಾಗಿ ಕೊಂದ ಸಿನಿಮಾ ನಟನೊಬ್ಬನನ್ನು ಕುತ್ತಿಗೆ ಹಿಡಿದು ಎಳೆದು ತರುವ ಧೈರ್ಯವನ್ನೂ ಯಾವ ಕಮೀಷನರ್ ಗಳೂ ಮಾಡಲಿಲ್ಲ.
ತೆಲುಗು, ತಮಿಳು, ಹಿಂದಿ, ಕನ್ನಡ ಮುಂತಾದ ಸಿನಿಮಾಗಳ ನಾಯಕ ನಟರು ಪೊಲೀಸ್ ಪಾತ್ರದಲ್ಲಿ ಈ ರೀತಿ ಕ್ರಿಮಿನಲ್ ಗಳನ್ನು ಹಿಡಿದು, ಬಟ್ಟೆ ಬಿಚ್ಚಿ, ರಸ್ತೆಯಲ್ಲಿ ಮೆರವಣಿಗೆ ಮಾಡುವ ದೃಶ್ಯಗಳು ಮೂಡಿದಾಗ ಸಿನಿಮಾ ಮಂದಿರದ ಎಲ್ಲ ಜನರು ಶಿಳ್ಳೆ ಕೇಕೆ ಹಾಕಿ ಚಪ್ಪಾಳೆ ಹೊಡೆದು ಸಂಭ್ರಮಿಸುತ್ತಾರೆ. ಆದರೆ ನಿಜ ಜೀವನದಲ್ಲಿ ಅದು ಸಾಧ್ಯವಾಗುವುದೇ ಇಲ್ಲ. ಸಾಮಾನ್ಯ ಜನರೊಂದಿಗೆ ಮಾತ್ರ ಅತ್ಯಂತ ಕೆಟ್ಟದ್ದಾಗಿ, ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಾರೆ.
ಎಷ್ಟೊಂದು ದುರಹಂಕಾರ, ಎಷ್ಟೊಂದು ಕ್ರೌರ್ಯ ಇವರಲ್ಲಿ ಮನೆ ಮಾಡಿರಬಹುದು. ಕಾನೂನಿನ ಬಗ್ಗೆ ಎಷ್ಟೊಂದು ತಾತ್ಸಾರ ಇರಬಹುದು. ಏನನ್ನು ಮಾಡಿದರೂ, ಕೊನೆಗೆ ಕೊಲೆ ಮಾಡಿದರು ಗೆಲ್ಲಬಹುದು ಎಂದುಕೊಂಡಿರುವ ಕೊಬ್ಬಿದ ಈ ಕೊಲೆಗಡುಕರನ್ನು ನೋಡಲು ಅಭಿಮಾನಿಗಳು ಸಾಗರೋಪಾದಿಯಲ್ಲಿ ಸೇರುತ್ತಾರೆ. ಲಾಠಿ ಚಾರ್ಜ್ ಮಾಡಿಸಿಕೊಂಡು ದರ್ಶನ ಪಡೆಯಲು ನೂಕುನುಗ್ಗಲಿನಲ್ಲಿ ಬೆವರು ಸುರಿಸುತ್ತಾರೆ.
ಹೌದು, ಈ ದೇಶದಲ್ಲಿ ಪ್ರತಿಕ್ಷಣವೂ ಅನೇಕ ಕಾರಣಗಳಿಗಾಗಿ ಕೊಲೆಗಳು ನಡೆಯುತ್ತಲೇ ಇರುತ್ತದೆ. ಆ ಕೊಲೆಗಡುಕರಿಗೆ ಕಾರಣಗಳು ಸಾಕಷ್ಟು ಇರುತ್ತವೆ. ಆದರೆ ಈ ದರ್ಶನ್ ಎಂಬ ವ್ಯಕ್ತಿ ಕೇವಲ ಸಾಮಾಜಿಕ ಜಾಲತಾಣದಲ್ಲಿ ತನ್ನ ಪ್ರೇಯಸಿಯ ವಿರುದ್ಧ ಮಾನಹಾನಿ ಹೇಳಿಕೆಗಳು, ಚಿತ್ರಗಳನ್ನು ಪ್ರದರ್ಶಿಸುತ್ತಿದ್ದ ಎಂಬ ಒಂದೇ ಕಾರಣದಿಂದ ಅವನನ್ನು ಕರೆಸಿ ಶೆಡ್ ನಲ್ಲಿ ಕೂಡಿಹಾಕಿ ತನ್ನ ಪ್ರೇಯಸಿಯೊಂದಿಗೆ, ಸಹಚರರೊಂದಿಗೆ, ಇಷ್ಟೊಂದು ಬರ್ಬರವಾಗಿ ಆ ವ್ಯಕ್ತಿಯನ್ನು ಹತ್ಯೆ ಮಾಡಿದ್ದಾನೆ. ತಾನು ಹೊಡೆಯುವ ಏಟು ಆ ವ್ಯಕ್ತಿಯಲ್ಲಿ ಎಷ್ಟು ನೋವು ಉಂಟು ಮಾಡುತ್ತಿರಬಹುದು ಎಂಬ ಪರಿಕಲ್ಪನೆಯೂ ಇಲ್ಲದೆ ಕೊಂದಿದ್ದಾನೆಂದರೆ ಆತನು ಒಳಗಿರುವ ರಾಕ್ಷಸತ್ವ ಎಷ್ಟಿರಬಹುದು?
ನಮಗೆ ತೊಂದರೆ ಕೊಡುವ ಜನರಿಂದ ರಕ್ಷಣೆ ಪಡೆಯಲು ಅಥವಾ ಶಿಕ್ಷಿಸಲು ಈ ಆಧುನಿಕ ಕಾಲದಲ್ಲಿ ಎಷ್ಟೊಂದು ಪರ್ಯಾಯ ಮಾರ್ಗಗಳಿವೆ. ಅದರಲ್ಲೂ ಅಂತಹ ಜನಪ್ರಿಯ ವ್ಯಕ್ತಿಗೆ ಪೋಲಿಸರ ಸಹಾಯ, ನ್ಯಾಯಾಲಯದ ಸಹಾಯ, ಬೆದರಿಕೆ ಒಡ್ಡುವ ಅವಕಾಶ ಎಲ್ಲವೂ ಇರುತ್ತದೆ. ಅದೆಲ್ಲವನ್ನು ಮೀರಿ ಹೀಗೆ ಮುಂದೆ ತೊಂದರೆಯಾಗುತ್ತದೆ ಎಂಬ ಅರಿವಿದ್ದರೂ ಕೊಲ್ಲುತ್ತಾರೆಂದರೆ ಅವರ ಮನಸ್ಥಿತಿ ಎಷ್ಟು ಕ್ರಿಮಿನಲ್ ಆಗಿರಬೇಕು ಊಹಿಸಿ.
ಸುಮಾರು ಹತ್ತು ವರ್ಷಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಬರೆಯುವ ಅನೇಕ ಸಂದರ್ಭಗಳಲ್ಲಿ ಹಾಗೂ ವೇದಿಕೆಗಳಲ್ಲಿ ಮಾತನಾಡುವ ಅನೇಕ ಸನ್ನಿವೇಶಗಳಲ್ಲಿ ಮಾನವೀಯ ಮೌಲ್ಯಗಳಿಗೆ ಮತ್ತು ಸಮಾಜದ ಆದರ್ಶಗಳಿಗೆ ಅತಿಹೆಚ್ಚು ಅಪಾಯವಿರುವುದು ಕೆಲವು ರಾಜಕಾರಣಿಗಳು, ಅಧಿಕಾರಿಗಳು, ಪತ್ರಕರ್ತರು, ಸಿನಿಮಾ ನಟನಟಿಯರು, ಧಾರ್ಮಿಕ ನಾಯಕರು ಮುಂತಾದವರೆಂದು ಪದೇಪದೇ ಹೇಳುತ್ತಲೇ ಇರುತ್ತೇನೆ. ನಿಜವಾಗಲೂ ಈ ಸಮಾಜದ ರೋಲ್ ಮಾಡೆಲ್ ಗಳು ನಮ್ಮ ಹುಟ್ಟಿಸಿದ ಅಪ್ಪ ಅಮ್ಮ ಮತ್ತು ಶಿಕ್ಷಕರು ಆಗಬೇಕೆ ಹೊರತು ಸಿನಿಮಾ ನಟರಲ್ಲ ಎಂಬುದು ಸ್ವತಃ ಅನುಭವದ ಪಾಠ. ಅದು ಮತ್ತೆ ಮತ್ತೆ ದೃಢಪಡುತ್ತಲೇ ಇದೆ.
ಕಾಳು ಮತ್ತು ಜೊಳ್ಳು. ಕಲಾತ್ಮಕ ಮತ್ತು ಕ್ರಿಯಾತ್ಮಕ ಮಾಧ್ಯಮವಾದ ಹಾಗು ಮುಖ್ಯವಾಗಿ ಮನರಂಜನೆ ಮತ್ತು ವ್ಯಾಪಾರ ಉದ್ದೇಶದ ಸಿನಿಮಾ ಎಂಬ ಭ್ರಮಾ ಲೋಕದಲ್ಲಿ ನಟಿಸುವ ನಟರ ಅಭಿನಯ ಮೆಚ್ಚಿ, ಅವರಿಂದ ಸ್ಪೂರ್ತಿ ಪಡೆದು ಒಂದಷ್ಟು ಅಭಿಮಾನ ಪಡುವುದು ಸಹಜ ಮತ್ತು ಸಾಮಾನ್ಯ. ಇವರೇ ಕಾಳುಗಳು…
ಆದರೆ ಆ ನಟರನ್ನೇ ಆರಾಧ್ಯ ದೈವ ಎಂದು ಭಾವಿಸಿ, ಅವರನ್ನು ಅತಿ ಮಾನವರಂತೆ ಭ್ರಮಿಸಿ, ಅವರ ಪರವಾಗಿ ಸಾಮಾಜಿಕ ಜಾಲತಾಣಗಳಲ್ಲಿ, ರಸ್ತೆ ಬೀದಿಗಳಲ್ಲಿ ಅತ್ಯಂತ ಕ್ಷುಲ್ಲಕ ವಿಷಯಗಳಿಗೆ ಬಡಿದಾಡುವ - ಹೊಡೆದಾಡುವ ಮೂರ್ಖರೇ ಜೊಳ್ಳುಗಳು… ಸಮಾಜ ಕಾಳುಗಳನ್ನು ಆರಿಸಿಕೊಂಡು ಜೊಳ್ಳುಗಳನ್ನು ತೂರಬೇಕಿದೆ. ಜೊಳ್ಳುಗಳು ನಿಷ್ಪ್ರಯೋಜಕ ಮತ್ತು ಕೆಲವೊಮ್ಮೆ ಅಪಾಯಕಾರಿ.
ಅವನೊಬ್ಬ SUPER STAR,
ಇವನೊಬ್ಬ MEGA STAR,
ಅಲ್ಲೊಬ್ಬ POWER STAR,
ಇಲ್ಲೊಬ್ಬ CHALLENGING STAR,
ಮತ್ತೊಬ್ಬ REAL STAR,
ಮಗದೊಬ್ಬ REBEL STAR,
ಒಬ್ಬ GOLDEN STAR,
ಇನ್ನೊಬ್ಬ LOVELY STAR,
ಹೀಗಿದ್ದ CRAZY STAR,
ಹಾಗಿದ್ದ DEADLY STAR,
ಅವನೊಬ್ಬ ROCKING STAR,
ಇವನೊಬ್ಬ DANCING STAR,
ಅಲ್ಲೊಬ್ಬ DARING STAR,
ಇಲ್ಲೊಬ್ಬ DASHING STAR,
ಮತ್ತೊಬ್ಬ ACTION STAR.
ಮಗದೊಬ್ಬ FIRING STAR,
ಒಬ್ಬ MENTAL STAR,
ಇನ್ನೊಬ್ಬ MONKEY STAR.......
ಸುಂದರ ಯುವತಿಯರೊಂದಿಗೆ ಹಾಡುತ್ತಾ ಹಾರಾಡುತ್ತವೆ ಎಲ್ಲೆಲ್ಲೂ, ನಿಮಿಷಕ್ಕೊಂದು ವೇಷ ಬದಲಿಸುತ್ತಾ, ಭೂಮಿ, ಆಕಾಶ, ಪಾತಾಳ ಒಂದು ಮಾಡುತ್ತವೆ, ಸೋಲಿಲ್ಲದ, ಸಾವಿಲ್ಲದ ಜಗದ್ ರಕ್ಷಕರು ಇವರು, ಸಾವಿರಾರು ಜನರೇ ಬರಲಿ, ಬಂದೂಕು, ಬಾಂಬುಗಳೇ ಇರಲಿ, ದೊಡ್ಡ ಅಪಘಾತಗಳೇ ಆಗಲಿ, ಮಚ್ಚು, ಲಾಂಗುಗಳ ಹೊಡೆತಗಳಾಗಲಿ ಏನಾಗುವುದಿಲ್ಲ ಇವರಿಗೆ…?
(ಇನ್ನೂ ಇದೆ)
-ವಿವೇಕಾನಂದ. ಎಚ್. ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ