ಎಲ್ಲಿ ಹೋದರು ನಮ್ಮ ಪೊಲೀಸ್ ಸಿಂಗಂಗಳು…? (ಭಾಗ 2)

ಎಲ್ಲಿ ಹೋದರು ನಮ್ಮ ಪೊಲೀಸ್ ಸಿಂಗಂಗಳು…? (ಭಾಗ 2)

ಇವರಿಗೆ ದೇವರಿಗಿಂತ ಹೆಚ್ಚಾಗಿ, ದೊಡ್ಡ ದೊಡ್ಡ ಕಟೌಟ್ ಗಳು, ಮೆರವಣಿಗೆಗಳು, ಹಾಲಿನ ಅಭಿಷೇಕ, ಜ್ಯೆಕಾರ ಘೋಷಣೆಗಳು, ಅಭಿಮಾನಿ ಭಕ್ತರುಗಳು, ನೋಡಲು ನೂಕುನುಗ್ಗಲು, ಲಾಠಿ ಪ್ರಹಾರಗಳು, ಮೊದಲನೇ ದಿನದ, ಮೊದಲನೇ ಪ್ರದರ್ಶನ ನೋಡಲು ಗಲಭೆಗಳು. ಅಬ್ಬಾ… ಸಾಮಾಜಿಕ ಜಾಲತಾಣಗಳು ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಅವರ ಬಗ್ಗೆ ಬಹುದೊಡ್ಡ ಚರ್ಚೆಯಂತೆ. ನಾನು ಡಿ ಬಾಸ್ ದರ್ಶನ್ ಅವರ ಪಕ್ಕಾ ಅಭಿಮಾನಿ. ನಮ್ಮ ಬಾಸ್ ಅನ್ನು ಟೀಕಿಸಿದರೆ ನಾನು ಸುಮ್ಮನಿರಲ್ಲ. ನಾನು ಕಿಚ್ಚ ಸುದೀಪ್ ಅಭಿಮಾನಿ. ಅಣ್ಣನಿಗೆ ಯಾರಾದರೂ ಕೆಟ್ಟದಾಗಿ ಮಾತನಾಡಿದರೆ ನಾನು ಯಾವ ಕೆಟ್ಟ ಹಂತಕ್ಕೆ ಬೇಕಾದರೂ ಹೋಗಬಲ್ಲೆ, ನಾನು ದಿವಂಗತ ಪವರ್ ಸ್ಟಾರ್ ಅಪ್ಪು ಪುನೀತ್ ಅಭಿಮಾನಿ. ಅವರ ಬಗ್ಗೆ ಏನಾದರೂ ನೆಗೆಟಿವ್ ಆಗಿ ಮಾತನಾಡಿದರೆ ನನ್ನ ಪ್ರಾಣವನ್ನು ಲೆಕ್ಕಿಸದೆ ದಾಳಿ ಮಾಡುತ್ತೇನೆ, ನಾನು ರಾಂಕಿಂಗ್ ಸ್ಟಾರ್ ಯಶ್ ಅಭಿಮಾನಿ. ‌ಅವರ ಬಗ್ಗೆ ಉಸಿರೆತ್ತಿದರೆ ಯಾರೇ ಆದರೂ ಸುಮ್ಮನೆ ಬಿಡುವುದಿಲ್ಲ. ಯಾಕಪ್ಪಾ, ಏನಾಗಿದೆ ಸಮಸ್ಯೆ,

ಪ್ರಾಕೃತಿಕ ವಿಕೋಪ ನಿಯಂತ್ರಿಸಲು ಈ ಜಗಳವೇ ? ಆರ್ಥಿಕ ಕುಸಿತ ತಡೆಯಲು ಈ ತಂತ್ರಗಳೇ ? ರಾಜ್ಯ ದೇಶದ ಘನತೆ ಕಾಪಾಡಲು ಈ ಬೈದಾಟಗಳೇ ? ಸಮಾಜದಲ್ಲಿ ಶಾಂತಿ ಸೌಹಾರ್ದತೆ ಉಂಟುಮಾಡಲು ಈ ವಿವಾದವೇ ? ಶಿಕ್ಷಣ - ಆರೋಗ್ಯದ ಗುಣಮಟ್ಟ ಕಾಪಾಡಲು ಈ ಕ್ರಮಗಳೇ ? ರೀ, ಸ್ವಾಮಿ ಇದು 2024 ನೇ ಇಸವಿ. ಇನ್ನೇನು ಚಂದ್ರನಲ್ಲಿ ವಾಸ ಮಾಡುವ ದಿನಗಳು ದೂರವಿಲ್ಲ. ಇಡೀ ವಿಶ್ವ ನಮ್ಮ ಬೆರಳ ತುದಿಯಲ್ಲಿ ಇದೆ. ಅಂತಹ ಸಂದರ್ಭದಲ್ಲಿ ವಾಸಿಸುತ್ತಿರುವ ನಮಗೆ ಚಲನಚಿತ್ರ ಒಂದು ಕಲಾ ಮಾಧ್ಯಮ - ಮನರಂಜನೆಯ - ವ್ಯಾಪಾರ ವ್ಯವಹಾರದ ಒಂದು ಉದ್ಯಮ ಎನ್ನುವ ಪ್ರಜ್ಞೆ ಬೇಡವೇ ?

ಗುರು, ಸಿನಿಮಾ ಒಂದು ಕೃತಕ ಸೃಷ್ಟಿ. ಅದರ ಪಾತ್ರಗಳು ಕಾಲ್ಪನಿಕ. ಅದನ್ನು ಯಾರೋ ವ್ಯಕ್ತಿಗಳು ಭಾವ ತುಂಬಿ ನಿರ್ದೇಶಕರು ಹೇಳಿದಂತೆ ನಟಿಸುತ್ತಾರೆ. ಅವರನ್ನು ನಟ ನಟಿಯರು ಎನ್ನುತ್ತಾರೆ. ಕೆಲವರಲ್ಲಿ ಒಂದಷ್ಟು ಅಭಿನಯ ಸಾಮರ್ಥ್ಯ ಚೆನ್ನಾಗಿರಬಹುದು. ಕೆಲವರು ಆ ಬಣ್ಣ, ವೇಷ, ಸನ್ನಿವೇಶ ಮತ್ತು ಇತರ ಪೂರಕ ಪಾತ್ರಗಳ ಬೆಂಬಲದಿಂದ ನೋಡಲು  ಮೇಲ್ನೋಟಕ್ಕೆ ಚೆನ್ನಾಗಿ ಕಾಣಬಹುದು. ಹೊಡೆದಾಟ ಬಡಿದಾಟ ದುಃಖ ಪ್ರೀತಿ ಹಾಸ್ಯ ದೃಶ್ಯಗಳಲ್ಲಿ ವಾಸ್ತವಕ್ಕಿಂತ ನಮ್ಮ ಮನೋ ಕಲ್ಪನೆಯಲ್ಲಿ ಮೂಡುವ ಆದರೆ ನಮ್ಮಿಂದ ನಿಜ ಜೀವನದಲ್ಲಿ ಅನುಭವಿಸಲು ಸಾಧ್ಯವಾಗದ ಸನ್ನಿವೇಶಗಳು ನಮಗೆ ಮಜಾ ಅಥವಾ ಸ್ಪೂರ್ತಿ ಕೊಡಬಹುದು. ಅಷ್ಟು ಬಿಟ್ಟರೆ ಸಾಮಾನ್ಯ ಪರಿಕಲ್ಪನೆಯಲ್ಲಿ ಅವರು ಯಾವ ಅತಿಮಾನುಷ ಅಥವಾ ವಿಶೇಷ ಅಧಿಕಾರ ಅಥವಾ ಶಕ್ತಿ ಹೊಂದಿಲ್ಲ. ಅಂತಹವರಿಗೆ ಮೆಚ್ಚುಗೆ ಪ್ರಶಂಸೆ ಒಂದಷ್ಟು ಗೌರವ ಹೊರತುಪಡಿಸಿ ಇದೇನ್ರಿ ಅಸಹ್ಯ.

ಹೌದು, ಸ್ವಲ್ಪ ಹಿಂದೆ ನಾಟಕ, ಸಿನಿಮಾ ಹೊರತುಪಡಿಸಿ ಬೇರೆ ಮನರಂಜನೆಗಳೇ ಇಲ್ಲದಿದ್ದಾಗ, ಬಡತನ, ಅಜ್ಞಾನ ತುಂಬಿ ತುಳುಕುತ್ತಿದ್ದಾಗ ಸಿನಿಮಾ ಸಾಹಿತ್ಯ ಮತ್ತು ಅದರ ಪಾತ್ರಗಳು, ವರ್ತನೆಗಳು ಅಂದಿನ ಯುವ ಜನಾಂಗದ ಮೇಲೆ ಒಳ್ಳೆಯ ಮತ್ತು ಕೆಟ್ಟ ಪರಿಣಾಮ ಬೀರಿರುವುದು ನಿಜ. ಅಲ್ಲದೆ ಅಂದಿನ ಸಾಮಾಜಿಕ ಮೌಲ್ಯಗಳನ್ನು ಜನರಿಗೆ ನೆನಪಿಸುವ ಮಾಧ್ಯಮವೂ ಇದಾಗಿತ್ತು ಅದನ್ನು ಅಲ್ಲಗಳೆಯುವಂತಿಲ್ಲ. ಆದರೆ ಈಗ ಎಲ್ಲವೂ ಬದಲಾಗಿದೆ. ಅರಿವಿನ ಮಟ್ಟ, ತಂತ್ರಜ್ಞಾನ, ಸಂಪರ್ಕ ಎಲ್ಲವೂ ಹೆಚ್ಚಾಗಿದೆ.  ನಟನಟಿಯರಿಗಿಂತ ಮಹತ್ವದ ವ್ಯಕ್ತಿಗಳು, ವೃತ್ತಿಗಳು ಈ ಸಮಾಜದಲ್ಲಿ ಪ್ರಾಮುಖ್ಯತೆ ಪಡೆದಿದೆ ಮತ್ತು ಉತ್ತಮ ಬೆಳವಣಿಗೆ ಹೊಂದಿದೆ. ಹೀಗಿರುವಾಗ ಈ ತಿಕ್ಕಲುತನ ಬೇಕೆ......

ಬೇಜಾರಾಯ್ತ ಶಿವ, ನಿಮ್ಮ ಹೀರೋಗೆ ಈ ರೀತಿ ಹೇಳಿದ್ದಕ್ಕೆ ? ಸಾರಿ ಬ್ರದರ್, ನಮಗೂ ಮೈ ಎಲ್ಲಾ ಉರಿಯುತ್ತೆ. ಹಾಲು ಹಣ್ಣು ತರಕಾರಿಗಳನ್ನು ರೈತರು ‌ಎಷ್ಟು ಕಷ್ಟ ಪಟ್ಟು ಬೆಳೆಯುತ್ತಾರೆ. ಅದನ್ನು ಆಹಾರವಾಗಿ ತಿನ್ನಲು ಉಪಯೋಗಿಸದೆ, ಎಷ್ಟೋ ಬಡವರು ಪೌಷ್ಟಿಕಾಂಶದ ಕೊರತೆಯಿಂದಾಗಿ ನರಳುತ್ತಿರುವಾಗ ಕೃತಕ ಪಾತ್ರ ಮಾಡುವ ನಟನ ಪ್ರತಿಮೆಗೆ ಇದನ್ನು ಸುರಿಯುವುದನ್ನು ನೋಡಿದಾಗ…

ಯಾರೋ ಒಬ್ಬ ಹುಚ್ಚು ಅಭಿಮಾನಿ ಎಲ್ಲಿಂದಲೋ ಸಾಮಾಜಿಕ ಜಾಲತಾಣಗಳಲ್ಲಿ ಏನೋ ಅಭಿಪ್ರಾಯ ವ್ಯಕ್ತಪಡಿಸಿದಾಗ ಆತನನ್ನು ಕೊಂದು ವಿಷಯ ತಿಳಿದಾಗ. ನಟರಾದವರು ಸಾಮಾಜಿಕ ಜವಾಬ್ದಾರಿಯಿಂದ ಈ ರೀತಿಯ ಹುಚ್ಚಾಟಗಳನ್ನು ಬಹಿರಂಗವಾಗಿ ಖಂಡಿಸಿ, ಹೇಗೆ ಜನರು ತಮ್ಮ ಸ್ವಾಭಿಮಾನ ಮತ್ತು ಗೌರವ ಕಾಪಾಡಿಕೊಳ್ಳಬೇಕು ಎಂದು ತಿಳಿಸದೆ, ಅಭಿಮಾನಿಗಳು ಎಂಬುವವರ ಹೊಗಳಿ ಭ್ರಮೆಯಲ್ಲಿಟ್ಟು, ತಾವು ನಿಜ ಜೀವನದ ಹಿರೋಗಳಂತೆ ಬಿಲ್ಡಪ್ ಕೊಡುವುದನ್ನು ನೋಡಿದಾಗ, ಪೈಲ್ವಾನ್ - ಚಕ್ರವರ್ತಿ - ರಾಕಿಬಾಯ್ ಇವೆಲ್ಲವೂ ಜನರನ್ನು ಆಕರ್ಷಿಸಲು ಪಾತ್ರಗಳಿಗೆ ಇಡುವ ಹೆಸರುಗಳೇ ಹೊರತು ಅದು ನಿಜ ಜೀವನದ ಅವರ ವ್ಯಕ್ತಿತ್ವಗಳಲ್ಲ ಎಂದು ಗೊತ್ತಿದ್ದರೂ, ಇಂದಿನ ಆಧುನಿಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ನಾಯಕ ನಟನ ಹಿರೋ ಗಿರಿ ಸಾಧ್ಯವಿಲ್ಲ ಎಂದು ಅರ್ಥವಾಗಿದ್ದರೂ, ಅವರಲ್ಲಿ ಅತಿಮಾನುಷ ಶಕ್ತಿ ಇದೆ ಎಂಬಂತೆ ಆರಾಧಿಸುವುದನ್ನು ನೋಡಿದಾಗ… ಈ ಸಮಾಜದ ಮಾನಸಿಕ ಸ್ಥಿತಿಯ ಬಗ್ಗೆ ಮರುಕ ಉಂಟಾಗುತ್ತದೆ.....

ಅಭಿಮಾನಿಗಳೇ, ನಿಜ ಜೀವನದಲ್ಲೇ ಸಾಕಷ್ಟು ರೋಚಕ, ಸಾಹಸ, ತ್ಯಾಗದ ಘಟನೆಗಳು ನಮ್ಮ ಸಮಾಜದಲ್ಲಿ ನಡೆಯುತ್ತವೆ. ದನ ಕಾಯುತ್ತಿದ್ದ ಹುಡುಗ ಮುಖ್ಯಮಂತ್ರಿಯಾದರೆ, ಟೀ ಮಾರುತ್ತಿದ್ದ ಹುಡುಗ ಪ್ರಧಾನ ಮಂತ್ರಿಯಾಗುತ್ತಾರೆ. ಅಪಘಾತದಲ್ಲಿ ಎರಡೂ ಕಾಲಿಲ್ಲದ ಅರುಣಿಮಾ ಪರ್ವತಾರೋಹಣ ಮಾಡುತ್ತಾರೆ, ಅಭಿನಂದನ್ ವರ್ತಮಾನ್ ಶತ್ರುವಿನ ಕೈಗೆ ಸೆರೆ ಸಿಕ್ಕಿ ಧೈರ್ಯದಿಂದಲೇ ಅವರಿಗೆ ಉತ್ತರಿಸಿ ಸಾವಿನಿಂದ ಪಾರಾಗಿ ಬಂದು ಮತ್ತೆ ಸೈನ್ಯ ಸೇರುತ್ತಾರೆ. ರೈಲು ನಿಲ್ದಾಣದಲ್ಲಿ ಭಿಕ್ಷೆ ಬೇಡುತಿದ್ದ ಒಬ್ಬ ವಯೋವೃದ್ದೆ ಪ್ರಖ್ಯಾತ ಗಾಯಕಿಯಾಗಿ ರಾಷ್ಟ್ರಾಧ್ಯಂತ ಜನಪ್ರಿಯವಾಗುತ್ತಾರೆ. ಬಾಕ್ಸರ್ ಮೇರಿ ಕೋಮ್ ಮೂರು ಮಕ್ಕಳ ತಾಯಿಯಾಗಿಯೂ ವಿಶ್ವ ಚಾಂಪಿಯನ್ ಆಗುತ್ತಾರೆ. ಎಷ್ಟೋ ಪುಟ್ಟ ಮಕ್ಕಳ ನೆನಪಿನ ಶಕ್ತಿ ಅತಿಮಾನುಷ ಬುದ್ದಿ ಮತ್ತೆಯಂತೆ ಭಾಸವಾಗುತ್ತದೆ.

ಹೀಗೆ ವಾಸ್ತವ ಬದುಕಿನ ಘಟನೆಗಳೇ ಇರುವಾಗ ಅದನ್ನು ಸ್ಪೂರ್ತಿಯಾಗಿ ಪಡೆಯುವುದು‌ ಅರ್ಥಪೂರ್ಣವೋ ಅಥವಾ ಸಿನಿಮಾ ನಟರ ಕಾಲ್ಪನಿಕ ವ್ಯಕ್ತಿತ್ವವನ್ನು ನೋಡಿ ಅವರ ನಿಜ ಜೀವನವನ್ನು ಅನುಸರಿಸುವುದೋ ನೀವೇ ನಿರ್ಧರಿಸಿ. ಅವರ ನಿಜ ಜೀವನದ ಕೌಟುಂಬಿಕ ವ್ಯವಹಾರಗಳೂ ಸೇರಿ ಎಲ್ಲಾ ಏರಿಳಿತಗಳು ನಮ್ಮಂತೆ ಇರುವಾಗ ಅವರನ್ನು  ಆರಾಧಿಸುವುದು ಸರಿಯೇ ?

ಗೆಳೆಯ ಗೆಳತಿಯರೆ, ಸಿನಿಮಾ ಮಾಧ್ಯಮದ ಬಗ್ಗೆ ಯಾವುದೇ ತಕಾರಾರಿಲ್ಲ. ಅಲ್ಲಿನ ಕ್ರಿಯಾತ್ಮಕತೆಯ ಬಗ್ಗೆ, ಕಲಾವಿದರ ಬಗ್ಗೆ , ಅದರ ಪ್ರಭಾವದ ಬಗ್ಗೆ ಯಾವುದೇ ಅಸಮಾಧಾನವಿಲ್ಲ. ಆದರೆ ಈ ಹುಚ್ಚುತನದ ಅತಿರೇಕಗಳು, ಸ್ವಾಭಿಮಾನವಿಲ್ಲದ ಗುಲಾಮಗಿರಿ, ಪಾತ್ರಗಳಲ್ಲಿ ನಟಿಸುವವರನ್ನು ಅತಿಮಾನುಷ ಶಕ್ತಿಯುಳ್ಳ ವ್ಯಕ್ತಿಗಳಂತೆ ಪೂಜಿಸುವುದು, ಬಪೂನ್ ಗಿರಿ ಮುಂತಾದ ಚಮಚಾ ಕೆಲಸಗಳು ಮಾತ್ರ ಆರೋಗ್ಯ ಪೂರ್ಣ ಸಮಾಜಕ್ಕೆ ಅಪಾಯಕಾರಿ ಅದನ್ನು ದಯವಿಟ್ಟು ಮಾಡಬೇಡಿ ಎಂದು ಮನವಿ ಮಾಡಿಕೊಳ್ಖುತ್ತಾ… ಭ್ರಮಾಲೋಕದ ಬದುಕಿಗಿಂತ, ವಾಸ್ತವ ಜೀವನದ ಅರಿವಿನ ಜೀವನ ಶೈಲಿ ನಿಮ್ಮ ಜೀವನಮಟ್ಟ ಸುಧಾರಿಸಲು ಸಹಾಯಕಾರಿ. ಗೌರವಿಸಿ, ಪ್ರೋತ್ಸಾಹಿಸಿ, ಎಲ್ಲರಂತೆ. ಆದರೆ, ಮಾರಿಕೊಳ್ಳಬೇಡಿ ಸ್ವಾಭಿಮಾನ ಬಪೂನ್ ಗಳಂತೆ. ವಾಸ್ತವ ಪ್ರಜ್ಞೆ ಸದಾ ಜಾಗೃತಾವಸ್ಥೆಯಲ್ಲಿರಲಿ.

(ಮುಗಿಯಿತು)

-ವಿವೇಕಾನಂದ. ಎಚ್. ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ