ಎಲ್ಲಿ ಹೋದವು ಆ ದಿನಗಳು?
ಇತ್ತೀಚಿಗೆ ಸಂಸ್ಕೃತ ಕೆಲಸದ ದೃಷ್ಟಿಯಿಂದ ಉತ್ತರ ಕನ್ನಡದ ಕೆಲವು ಹಳ್ಳಿಗಳಿಗೆ ಹೋಗಿದ್ದೆ. ದೊಡ್ಡ ದೊಡ್ಡ ಮನೆಗಳು. ಒಂದೊಂದು ಮನೆಯ ಇತಿಹಾಸ ಸುಮಾರು 60, 100 ವರ್ಷಗಳದ್ದು. ದೊಡ್ಡ ಜಗಲಿ, ಮೂರು ನಾಲ್ಕು ರೂಮುಗಳು, ದೊಡ್ಡ ಅಂಗಳ, ದೊಡ್ಡ ಚಪ್ಪರ ಹಾಕಲು ನಿಲ್ಲಿಸಿದ ಕಲ್ಲಿನ ಕಂಬಗಳು, 18-20 ಹಸುಗಳನ್ನು ಕಟ್ಟುತ್ತಿದ್ದ ದನದ ಕೊಟ್ಟಿಗೆ, ನಿರಂತರ ಬೀಳುತ್ತಿರುವ ನಿರ್ಮಲ ನೀರು, ಮನೆಯ ಮುಂದೆ ಮೂರು ನಾಲ್ಕು ಎಕರೆ ಅಡಿಕೆ ತೋಟ, ದೊಡ್ಡ ತುಳಸಿ ಕಟ್ಟೆ....
ಮನೆಯ ಮೆಟ್ಟಿಲು ಹತ್ತುತ್ತಿದ್ದಂತೆ ಸುಂದರ ರಂಗೋಲಿ, ಒಳಗೆ ಅಡಿಕೆ ತಟ್ಟೆ ...ಅದರ ಇತಿಹಾಸವು 35-40 ವರ್ಷಗಳ ಹಿಂದಿನದೇ. ಅಡಿಗೆ ಮನೆಯಲ್ಲಿ ತಾಮ್ರದ, ಹಿತ್ತಾಳೆಯ ಪಾತ್ರೆಗಳು, ಮನೆಯ ಹಿಂದಿನ ಕೊಟ್ಟಿಗೆಯಲ್ಲಿ ದೊಡ್ಡ ಬಿಸಿನೀರ ಹಂಡೆ, ಹಂಡೆಯಲ್ಲಿ ಈಗಲೂ ಕುದಿಯುತ್ತಿರುವ ಬಿಸಿನೀರು, ಅಡಿಕೆಯ ಒಲೆ. ಹಳ್ಳಿಯ ವೈಭವವನ್ನು ಹೇಳುತ್ತಿದ್ದರೆ ಶಬ್ದಗಳು ಸಾಲವು.
ಜಗಲಿಯ ಮೇಲೆ ಹೋಗಿ ಕುಳಿತುಕೊಂಡರೆ 65 ವರ್ಷದ ಅಮ್ಮ ಬಿಸಿ ಚಹಾವನ್ನು ತಂದುಕೊಡುತ್ತಾರೆ. ತೋಟದ ಕೆಲಸಕ್ಕೆ ಹೋಗಿದ್ದ 70 ವರ್ಷದ ಮನೆಯ ಯಜಮಾನರು ಮಾತುಕತೆಗೆ ಬಂದು ಕುಳಿತುಕೊಳ್ಳುತ್ತಾರೆ. ಮನೆಯ ವೈಭವವನ್ನು, ಇತಿಹಾಸವನ್ನು, ಅಡಿಕೆ ತೋಟದಲ್ಲಿ ಬೆಳೆವ ಏಲಕ್ಕಿ, ಬಾಳೆ, ಮೆಣಸಿನ ಕಾಳು, ಚಕ್ಕೋತ, ಲಿಂಬೆ, ಹಲಸು, ಮಾವು, ಪೇರಳೆ, ಮೂಸಂಬೆ, ಕಂಚಿಕಾಯಿ ಗಿಡಗಳ ಸಂಖ್ಯೆಯನ್ನು ಒಪ್ಪಿಸುತ್ತಾರೆ. ಮಾತಿನ ಮಧ್ಯದಲ್ಲಿ ಒಂದೆರಡು ಬಾರಿ ವೀಳ್ಯದೆಲೆಯನ್ನು ಅಡಿಕೆ, ಸುಣ್ಣ, ಹೊಗೆಸೊಪ್ಪಿನೊಂದಿಗೆ ಸೇರಿಸಿ ಬಾಯಿಗೆ ಇಟ್ಟುಕೊಳ್ಳುತ್ತಾರೆ. ಅವರ ಮಾತಿನಲ್ಲಿ ಸಾರ್ಥಕತೆಯ ಝಳಕು ಮೂಡಿ ಬರುತ್ತಿರುತ್ತದೆ.
ಮಧ್ಯದಲ್ಲಿ ನೀವೇನಾದರೂ ಕುತೂಹಲದಿಂದ 'ನಿಮ್ಮ ಮಕ್ಕಳೆಷ್ಟು' ಎಂದು ಕೇಳಿದರೆ ಅವರ ಮುಖ ವಿಷಾದದಿಂದ ಬಾಡುತ್ತದೆ. 'ಮೂರು ಮಕ್ಕಳು, ಎರಡು ಗಂಡು, ಒಂದು ಹೆಣ್ಣು. ಮಗಳನ್ನು ದೂರದ ಮೈಸೂರಿಗೆ ಕೊಟ್ಟಿದ್ದೇವೆ. ಮಗ ಹಿರಿಯವ ಬೆಂಗಳೂರಿನ ಸಾಫ್ಟ್ ವೇರ್ ಕಂಪನಿಯ ಉದ್ಯೋಗಿ. ಅವನಿಗೂ ಮದುವೆಯಾಗಿದೆ. ವರ್ಷಕ್ಕೊಮ್ಮೆ ರಜಕ್ಕೆ ಎಂಟು ಹತ್ತು ದಿನಗಳು ಇರುವಂತೆ ಬರುತ್ತಾನೆ. ಇನ್ನೊಬ್ಬ ಬೆಂಗಳೂರಿನ ಬ್ಯಾಂಕಿನಲ್ಲಿ ಉದ್ಯೋಗಿ. ಆತನೂ ಆಗಾಗ ಬಂದು ಹೋಗುತ್ತಿರುತ್ತಾನೆ. ಮಕ್ಕಳಿಬ್ಬರಿಗೂ ಈ ಹಳ್ಳಿಗೆ ಬರಲು ಉತ್ಸಾಹ ಇಲ್ಲ. ಅವರ ಮಕ್ಕಳನ್ನು ಅಲ್ಲಿಯ ಉತ್ತಮ ವಿದ್ಯಾಲಯಗಳಲ್ಲಿ ಸೇರಿಸಿ ಬಿಟ್ಟಿದ್ದಾರೆ. ಇಬ್ಬರು ಸೊಸೆಯರೂ ಕೆಲಸಕ್ಕೆ ಹೋಗುತ್ತಾರೆ. ನಮ್ಮನ್ನು ಅಲ್ಲಿಗೇ ಬರುವಂತೆ ಕರೆಯುತ್ತಿದ್ದಾರೆ. ಹೇಗೆ ಹೋಗೋದು? ಹುಟ್ಟಿದ ಊರು ಇದು. ಪಿತ್ರಾರ್ಜಿತ ಆಸ್ತಿಯ ಜೊತೆಗೆ ನಾನೂ ಸ್ವಲ್ಪ ಆಸ್ತಿಯನ್ನು ಮಾಡಿಕೊಂಡಿದ್ದೇನೆ. ಒಂದೆರಡು ಹಸುಗಳಿವೆ. ಊರಿನ ದೇವಸ್ಥಾನದ ಜವಾಬ್ದಾರಿಯೂ ಇದೆ. ಹೇಗೆ ಎಲ್ಲಾ ಬಿಟ್ಟು ಹೋಗೋದು' ಎಂದು ಎಪ್ಪತ್ತು ವರ್ಷದ ವೃದ್ಧರು ತಮ್ಮ 65 ವರ್ಷದ ಪತ್ನಿಯ ಮುಖ ನೋಡುತ್ತಾರೆ.
ಹೀಗಿದೆ ಹಳ್ಳಿಯ ಇನ್ನೊಂದು ಮುಖ. ಹಳ್ಳಿಯಲ್ಲಿರುವ ಸರ್ಕಾರಿ ವಿದ್ಯಾಲಯ ಮುಚ್ಚಿ ಅರೆಂಟು ವರ್ಷಗಳೇ ಕಳೆದಿವೆ. ಊರಿನ ದೇವಸ್ಥಾನಕ್ಕೆ ಹೋಗುವ ಯುವಕ, ಯುವತಿಯರು ಈಗಿಲ್ಲ. ಪೇರಳೆ ಹಣ್ಣುಗಳನ್ನು ಕದ್ದು ತಿನ್ನುವವರಿಲ್ಲ. ಎತ್ತರದ ದಾಲ್ಚಿನ್ನಿ ಮರವನ್ನು ಹತ್ತಿ ಎಲೆಯನ್ನು ಕೊಯ್ಯುವ ಕಿಶೋರರಿಲ್ಲ. ಅಪ್ಪ ತಂದ ಹಲಸಿನ ಹಣ್ಣನ್ನು ತಿನ್ನುವವರಿಲ್ಲ. ಮನೆಯ ಮುಂದಿನ ಮಾವಿನ ಮರಕ್ಕೆ ಕಲ್ಲು ಹೊಡೆದು ಮಾವಿನ ಹಣ್ಣನ್ನು ಬೀಳಿಸುವ ಮಕ್ಕಳಿಲ್ಲ. ಊರಿನ ಸಣ್ಣ ಹಳ್ಳದಲ್ಲಿ ಈಜಾಡುವವರಿಲ್ಲ, ಸಾಯಂಕಾಲ ಆಚೆ ಮನೆ. ಈಚೆ ಮನೆ ಮಕ್ಕಳು ಸೇರಿ ಆಡುತ್ತಿದ್ದ ಲಗೋರಿ. ಚಿನ್ನಿದಾಂಡು ಈಗ ಇಲ್ಲ.
ತಾರೇ ಕಾಯಿ, ಕಲ್ಲು ಸಂಪಿಗೆ ಹಣ್ಣು, ಗಿರುಕನ ಹಣ್ಣು, ರಂಜದ ಹಣ್ಣು, ಮೀನಂಗಿ ಹಣ್ಣು, ಕರ್ಜಿಕಾಯಿ, ಈಚಲು ಹಣ್ಣು, ಅಂಬಾರ್ಲ ಹಣ್ಣು, ಬೆಂಬಾರ್ಲ ಹಣ್ಣು, ನೇರಳೆಹಣ್ಣು, ಸೊಳ್ಳೆಹಣ್ಣು, ಪನ್ನೀರ್ಲ ಹಣ್ಣು, ಹೆಬ್ಬಲಸಿನ ಹಣ್ಣು, ಜಂಬು ನೇರಳೆ ಹಣ್ಣು, ಹುಲ್ಗೆ ಹಣ್ಣು, ಗಂಧದ ಹಣ್ಣು, ಕಾಕಿ ಹಣ್ಣು, ಜಟ್ಟಪ್ಪನ ಹಣ್ಣು… ಪಪ್ಪಾಯಿ ಬಿದ್ದು ಕೊಳೆಯುತ್ತಿವೆ. ಬಾಳೆ ಹೂವಿನ ರಸ ಕುಡಿಯುವರಿಲ್ಲ,
ತೋಟದ ಮಧ್ಯದಲ್ಲಿ ಇದ್ದ ಜಾರು ಬಂಡೆ ಈಗ ಅನಾಥವಾಗಿದೆ. ದಾಸವಾಳದ ಹೂವು. ಮಲ್ಲಿಗೆ ಹೂವು, ಗೊರಟೆ ಹೂವು, ನಂದಿ ಬಟ್ಟಲು, ಸೀತೆ ದಂಡೆ, ಕೇದಿಗೆ ಹೂವು. ಮರ ಮಲ್ಲಿಗೆ. ಕಸ್ತೂರಿ ಮಲ್ಲಿಗೆ, ದುಂಡು ಮಲ್ಲಿಗೆ, ಗುಲಾಬಿ, ಕಮಲ ಅಬ್ಬಲಿಗೆ, ಮಂದಾರ, ಜಾಜಿ, ಸಂಪಿಗೆ, ಕರವೀರ, ಗೋವಿನ ಪುಷ್ಪ. ರಾಮ ತುಂಬೆ, ಗದ್ದೆ ತುಂಬೆ, ಪಾರಿಜಾತ, ಶಂಖಪುಷ್ಪ, ತೇರು ಹೂವು, ಚೆಂಡು ಹೂವು, ನೆಲ ಗುಲಾಬಿ, ಸೇವಂತಿಗೆ, ನೀರು ಗುಲಾಬಿ, ಸೂರುಳಿ ಹೂವು, ಕಾಕಡ ಮಲ್ಲಿಗೆ, ಜೇನುತುಂಬೆ, ಮಧ್ಯಾಹ್ನದ ಮಲ್ಲಿಗೆ, ಬೊಂಬಾಯಿ ಮಲ್ಲಿಗೆ ಹೂಗಳು ಮುದುಡಿ ಹೋಗುತ್ತಿವೆ...
ಬೇಲಿ ಹಾರಿ ಬರುತ್ತಿದ್ದ ದನಗಳನ್ನು ಓಡಿಸಿಕೊಂಡು ಹೋಗುವವರಿಲ್ಲ, ಕಾಗದದ ದೋಣಿ ಮಾಡಿ ಮಳೆಗಾಲದಲ್ಲಿ ತೇಲಿ ಬಿಡುವವರಿಲ್ಲ. ಬೆಳಿಗ್ಗೆ ಬಂದು ಅಂಗಳದಲ್ಲಿ ವಾಕಿಂಗ್ ಮಾಡುತಿದ್ದ ಪಾರಿವಾಳಗಳಿಗೆ, ಗುಬ್ಬಿಗಳಿಗೆ ಅಕ್ಕಿ ಚೆಲ್ಲುವವರಿಲ್ಲ. ಮರದ ಬುಡದಲ್ಲಿದ್ದ ಜೇನನ್ನು ಹಿಡಿಯಲು ಕೈಹಾಕಿ ಹೊಡೆಸಿಕೊಳ್ಳುವವರಿಲ್ಲ. ಮಿತ್ರನ ಬುಗುರಿಯನ್ನು ಒಡೆದು ಹಾಕಿದ ದಿನಗಳು ಎಲ್ಲಿ ಹೋದವು? ಹಸಿರು. ಬಿಳಿ.ನೀಲಿ ಗೋಲಿ ಆಟ ಈಗ ಇಲ್ಲ. ಕಾಡಿಗೆ ಹೋಗಿ ನವಿಲು ಗರಿಗಳನ್ನು ತಂದು ಸಂಗ್ರಹಿಸಿ ಜಂಬ ಕೊಚ್ಚಿಕೊಳ್ಳುವವರಿಲ್ಲ.
ಕಪ್ಪೆ ಮರಿಗಳನ್ನು ಕೈಯಲ್ಲಿ ಹಿಡಿಯುವ ಖುಷಿ ಈಗಿನ ಪೀಳಿಗೆಗೆ ಗೊತ್ತಿಲ್ಲ. ಬಿದಿರಿನ ಬೇರಿನಿಂದ ಮಾಡಿದ ಕ್ರಿಕೆಟ್ ಬಾಲು ಕಾಲಿಗೆ ಬಿದ್ದು ಊದಿಸಿಕೊಂಡು ಅಯೋಡೆಕ್ಸ್ ಹಚ್ಚಿಕೊಂಡ ದಿನಗಳು ಈಗಿಲ್ಲ. ವರ್ಷಕ್ಕೆ ಒಂದೆರಡು ಬಾರಿ ಬರುತ್ತಿದ್ದ ಸಮೀಪದ ನೆಂಟರ ಛತ್ರಿ, ಚಪ್ಪಲಿಗಳನ್ನು ಕದ್ದಿಟ್ಟು ಅವರು ಇನ್ನೆರಡು ದಿನ ಇರುವಂತೆ ಒತ್ತಾಯ ಮಾಡುತ್ತಿದ್ದವರಿಲ್ಲ. ಮನೆಗೆ ನೆಂಟರು ಬಂದರೆ ಅವರ ಚೀಲಕ್ಕೆ ಕೈ ಹಾಕಿ ಶುಂಠಿ ಪೇಪರ್ಮೆಂಟು. ಪಾಪಿನ್ಸು. ಪಾರ್ಲೆ ಬಿಸ್ಕತ್ತುಗಳನ್ನು ಕೇಳದೆ ತಿನ್ನುತ್ತಿದ್ದ ದಿನಗಳು ಈಗ ಎಲ್ಲಿ ಹೋದವು?
ಹುಣಸೆ ಮರ ಹತ್ತಿ, ಹಣ್ಣು ಬೀಳಿಸಿ, ಹೊಟ್ಟೆ ತುಂಬಾ ತಿಂದು ಆದರ ಬೀಜವನ್ನು ಕುಟ್ಟಿ ಬಾಯಿಗೆ ಹಾಕಿ ವಾಂತಿ ಮಾಡಿಕೊಂಡ ದಿನಗಳು ಎಲ್ಲಿ ಹೋದವು!!? ದೊಡ್ಡ ಮರ ಹತ್ತಿ, ಇಳಿಯಲಾಗದೆ ಅಪ್ಪನಿಗಾಗಿ ಕಾಯುತ್ತಿದ್ದ ದಿನಗಳು ಎಲ್ಲಿ ಹೋದವು? ಮನೆಗೆ ತಂದ ಸೌದೆಯಿಂದ ವಿವಿಧ ಬಗೆಯ ಮನೆಗಳನ್ನು ಮಾಡಿ ಬೀಳಿಸುತ್ತಿದ್ದ ದಿನಗಳು ಹಿಂದೆ ಸರಿದವು. ರಾತ್ರಿ ನಮ್ಮ ಮೇಲೆ ಹಾವು ಹರಿದು ಹೋಗದೆ ಇರಲಿ ಅಂತ 'ಆಸ್ತಿಕ ಮಹಾಋಷಿಗಳ ಆಣೆ' ಎಂದು ಹಾಸಿಗೆಯ ಪಕ್ಕದಲ್ಲಿ ಬರೆದುಕೊಂಡು ಸುಖವಾಗಿ ನಿದ್ರಿಸಿದ ದಿನಗಳು ಈಗಿಲ್ಲ. ಮನೆಗೆ ಬಂದ ಭಿಕ್ಷುಕರಿಗೆ ಸಂನ್ಯಾಸಿಗಳಿಗೆ ಅಕ್ಕಿಯನ್ನು ಕೊಟ್ಟು ಸಂಭ್ರಮಿಸಿದ ದಿನಗಳು ಅದೆಷ್ಟೋ.
ರಾತ್ರಿ ಯಕ್ಷಗಾನ ನೋಡಲು ಅಪ್ಪನ ಜೊತೆ ಹೋಗಿ, ಆ ಗದ್ದಲದ ನಡುವೆಯೇ ನಿದ್ರೆ ಮಾಡಿ, ಬೆಳಗ್ಗೆ ಕಣ್ಣು ಬಿಟ್ಟಾಗ ಮನೆಯಲ್ಲಿ ಇದ್ದ ದಿನಗಳು ನೆನಪಿದೆಯೇ? ಪೆಟ್ಲು ಕಾಯಿಂದ ಗಜ ಮಾಡಿಸಿ ಹೊಡೆಯುತ್ತಿದ್ದ ದಿನಗಳು ಈಗಿಲ್ಲ. ನಾಗರಹಾವು ,ಕ್ಯಾರೆ ಹಾವು, ಕಾಳಿಂಗ ಸರ್ಪಗಳನ್ನು ಸಮೀಪದಲ್ಲಿ ಕಂಡ ದಿನಗಳು ಅದೆಷ್ಟು? ಊರಿನ ರಾಮ ನವರಾತ್ರಿಯ ಭಜನೆಯನ್ನು ಮಾಡುತ್ತಿದ್ದ ಕಾಲ ಈಗ ಇಲ್ಲ. ಊರಿನ ಗದ್ದೆಗಳು ಸಾಗುವಳಿಯನ್ನು ಕಾಣದೆ ಅನೇಕ ವರ್ಷಗಳನ್ನು ಕಂಡಿವೆ. ಕಾಲಿಗೆ ಚಪ್ಪಲಿ ಇಲ್ಲ ...ಹರಿದು ಹೋದ ಚೆಡ್ಡಿ ..ಗುಂಡಿ ಇಲ್ಲದ ಅಂಗಿ.. ಆದರೂ ಎಂದೂ ನೆಮ್ಮದಿಗೆ ಕೊರತೆ ಇರಲಿಲ್ಲ ಎಲ್ಲಿ ಹೋದವು ಆ ದಿನಗಳು?
ನಮ್ಮ ಹಳ್ಳಿ ಈಗ ವೃದ್ಧಾಶ್ರಮ ಆಗುತ್ತಿದೆಯೇ? ವರ್ಷಕ್ಕೊಮ್ಮೆ ಬರುವ ಮಕ್ಕಳ ಸ್ಟೇ ಹೋಂ ಆಗುತ್ತಿದೆಯೇ? ಯಾರು ಇದಕ್ಕೆಲ್ಲ ಕಾರಣ? ಮತ್ತೆ ಹಳ್ಳಿಯ ವೈಭವವನ್ನು ತರುವ ಪ್ರಯತ್ನವನ್ನು ಎಲ್ಲಿಂದ ಮತ್ತು ಹೇಗೆ ಆರಂಭಿಸಬೇಕು? ಉತ್ತರ ಯಾರಲ್ಲಿದೆ? ಉತ್ತರ ನಮ್ಮಲ್ಲೇ ಇದೆ. ಹೌದು... ಆರಂಭವಾಗಬೇಕು ಅಷ್ಟೇ.
-ಲಕ್ಷ್ಮೀನಾರಾಯಣ (ಶೃಂಗೇರಿ) ಹುಬ್ಬಳ್ಳಿ
ಸಾಂಕೇತಿಕ ಚಿತ್ರ ಕೃಪೆ: ಅಂತರ್ಜಾಲ ತಾಣ