ಎಲ್ಲಿ ಹೋದಿರಿ ಗುಬ್ಬಿಗಳೇ, ಚಿಂವ್ ಚಿಂವ್ ಎನ್ನುತ್ತಾ ಬನ್ನಿರಿ…!

ಸಾವಿರಾರು ವರ್ಷ ಕಾಲದಿಂದ ಮನುಷ್ಯನ ಜೊತೆ ಜೊತೆಗೇ ಗುಬ್ಬಿಗಳು ಜೀವಿಸುತ್ತಾ ಬಂದಿವೆ. ಅವನು ಮನೆ ಕಟ್ಟಿದಲ್ಲೇ ತಾವೂ ಮನೆ ಕಟ್ಟಿ ಅವನ ಸಂಸಾರದ ಜೊತೆಗೇ ತಾವೂ ಸಂಸಾರ ಹೂಡಿ ಪ್ರೇಮ ಪ್ರಣಯ ಸಂಸಾರ ಪಾಠ ಹೇಳುತ್ತ ಜಗತ್ತಿನ ಎಲ್ಲಾ ಜಾನಪದದ ಕತೆ, ಕಾವ್ಯ, ಮಹಾ ಕಾವ್ಯ, ಗಾದೆ, ಒಗಟುಗಳಲ್ಲಿ ರೂಪಕ, ಉಪಮೆ, ಪ್ರತಿಮೆಗಳಾಗಿ ಸ್ಥಾನಪಡೆದು ಮನುಷ್ಯ ಬದುಕಿನ ಅವಿಭಾಜ್ಯ ಅಂಗವಾಗಿದೆ ಗುಬ್ಬಿ.
ನಮ್ಮ ಮಕ್ಕಳು ಅತ್ತ ಗೋಲಿ, ಬುಗುರಿ, ಲಗೋರಿ ಆಡುತ್ತಿದ್ದರೆ ಇತ್ತ ಗುಂಪು ಗೂಡಿ ಕುಪ್ಪಳಿಸುತ್ತಾ ಚಿಂವ್ ಚಿಂವ್ ಚಿಟಾಂವ್ ಎಂದು ಗುಲ್ಲೆಬ್ಬಿಸಿ ಆಡುತ್ತಾ ಕಸಕಡ್ಡಿ, ಕಾಳುಕಡ್ಡಿ ಹೆಕ್ಕುತ್ತಾ ಬದುಕಿನ ಭಾಗವಾಗಿ ಜೀವಿಸುತ್ತಿದ್ದ ಗುಬ್ಬಿಗಳು ಜಾಗತೀಕರಣದಿಂದ ತೊಂಬತ್ತರ ದಶಕದಲ್ಲಿ ಇದ್ದಕ್ಕಿದ್ದಂತೆ ಮಂಗ ಮಾಯವಾಗತೊಡಗಿದವು. ಒಂದೋ ನಾವು ಪಾರಂಪರಿಕ ಮನೆ ಕಟ್ಟಡಗಳ ವಾಸ್ತು ಬದಲಾಯಿಸಿ ಪಾಶ್ಚಾತ್ಯ ಮಾದರಿಯ ತಾರಸಿ ಮನೆ ಬೃಹತ್ ಕಟ್ಟಡಗಳ ನಿರ್ಮಾಣದಲ್ಲಿ ತೊಡಗಿರುವುದು, ಮತ್ತೊಂದು ಮೊಬೈಲ್ ಮತ್ತಿತರೆ ಅಂತರ್ಜಾಲದ ಎಲೆಕ್ಟ್ರಾನಿಕ್ ಅಲೆಗಳು ವಾತಾವರಣದಲ್ಲಿ ಟ್ರಾಫಿಕ್ ಜಾಮ್ ಮಾಡಲು ಆರಂಭಿಸಿದ್ದು.
ಇದೆಲ್ಲದಕ್ಕಿಂತ ಮುಖ್ಯವಾದ ಮತ್ತೊಂದು ಸಂಗತಿ ಕೃಷಿ ಸಂಸ್ಕೃತಿ ಮಾರ್ಪಾಡಾಗಿ ಕಾಳು ಕಡ್ಡಿ ಒಕ್ಕುವ ಪದ್ಧತಿಯಲ್ಲಿ ಬದಲಾವಣೆ ಕಣಜಗಳಿಲ್ಲದ ಮನೆಗಳು, ಕಮರ್ಷಿಯಲ್ ಬೆಳೆಗಳು ಇವೆಲ್ಲದರ ಜೊತೆಗೆ ಕಾಳು ಕಡ್ಡಿ ಬಿದ್ದಿರುತ್ತಿದ್ದ ಮನೆಯ ಮುಂದಿನ ಕಸದ ಗುಡ್ಡೆಗೆ, ಗುಳಿಗೆ ಟಾನಿಕ್ಕು ಸಿರಪ್ ಪೇಷ್ಟ್, ಗಾಜಿನ ಚೂರು ಬೀಳ ತೊಡಗಿದುದು. ನಾವು ಬಳಸುವ ಮೈ ಸೋಪು, ಶಾಂಪು, ಬಟ್ಟೆ ಸೋಪು ಬ್ಲೀಚಿಂಗ್ ಪೌಡರ್, ಪೆನಾಯಿಲ್, ಮನೆಗಳಿಗೆ ಸಿಂಪಡಿಸುವ ಬಣ್ಣ, ಚರಂಡಿಗೆ ಹಾಕುತ್ತಿದ್ದ ಡಿಡಿಟಿ ಪೌಡರ್ ಎಲ್ಲವೂ ಬೆರೆತ ನೀರನ್ನೇ ಅವು ಕುಡಿಯಬೇಕಾದುದರಿಂದ ಅವುಗಳ ಜೀವದ ಮೇಲೆ ನೂರಾರು ಬಗೆಯ ಮಾರಣಾಂತಿಕ ಪರಿಣಾಮಗಳಾಗಿ ಅವುಗಳ ಸಂತತಿ ದಿಢೀರನೆ ಇಳಿಮುಖವಾಯಿತು.
ಬಹುಷಃ ಯಾವ ಪ್ರಾಣಿ ಅಥವಾ ಪಕ್ಷಿ ಜಗತ್ತಿನಿಂದ ಕಣ್ಮರೆಯಾದಾಗಲೂ ಜಗತ್ತು ಅಷ್ಟೊಂದು ಕಳವಳಗೊಂಡಿತ್ತೋ ಇಲ್ಲವೋ ಕಾಣೆ. ಗುಬ್ಬಿಗಳು ಕಣ್ಮರೆಯಾಗ ತೊಡಗಿದ ಕೂಡಲೇ ಎಲ್ಲೆಡೆಯಲ್ಲೂ ಜನ ಮನ ಮಿಡಿಯಿತು. ಗುಬ್ಬಿಗಳ ರಕ್ಷಣೆಗಾಗಿ ಪರಿಸರವಾದಿಗಳು ಪರಿಸರ ಪ್ರೇಮಿಗಳು ಪಕ್ಷಿ ಪ್ರೇಮಿಗಳು ಛಾಯಾಗ್ರಾಹಕರು ಎಲ್ಲರೂ ದನಿ ಎತ್ತಿದರು. ಹೋರಾಟ ಜರುಗಿದವು, ಲೇಖನಗಳು ಸಾಕ್ಷ್ಯಚಿತ್ರಗಳು ಚಿಂತನ ಮಂಥನಗಳು ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜರುಗಿದವು. ಅನೇಕ ಸಂಸ್ಥೆಗಳು ಸಚಿವಾಲಯಗಳು ಗುಬ್ಬಿಗಳ ದಿಢೀರ್ ಕಣ್ಮರೆಯ ಕುರಿತು ಸಮೀಕ್ಷೆ ಸಂಶೋಧನೆ ಅಧ್ಯಯನಗಳ ಮೂಲಕ ವರದಿಗಳನ್ನು ಸಿದ್ದಪಡಿಸಿದರು. ಹೀಗೆ ಜಗತ್ತಿನ ದನಿ ಒಂದಾಗಿ ಗುಬ್ಬಿಗಳ ರಕ್ಷಣೆಗೆ ಮುಂದಾಯಿತು. ಅದರ ಪರಿಣಾಮವೇ ಪ್ರತಿವರ್ಷ ಗುಬ್ಬಿಗಳ ರಕ್ಷಣೆಗಾಗಿ ಜಗತ್ತಿಗೆ ಅರಿವು ಮೂಡಿಸಲು ಮಾರ್ಚ್ 20ರಂದು ವಿಶ್ವ ಗುಬ್ಬಿಗಳ ದಿನಾಚರಣೆ ಆಚರಿಸಲಾಗುತ್ತಿದೆ.
ಗುಬ್ಬಿಗಳು ಮಾತ್ರವಲ್ಲ ತೊಂಬತ್ತರ ದಶಕ, ಅನೇಕ ಜೀವಿಗಳನ್ನು ನುಂಗಿ ನೀರು ಕುಡಿದ ದಶಕ. ಅದು ನಿಲ್ಲದೇ ಕಾಡ್ಗಿಚ್ಚಿನಂತೆ ಮುಂದುವರೆದೇ ಇದೆ. ಪರಿಸರದ ಪೌರಕಾರ್ಮಿಕರು ಎಂದೇ ಕರೆಯಲಾಗುವ ರಣಹದ್ದು (Indian vulture)ಗಳೂ ಡೈಕ್ಲೊಫೆನಾಕ್ ಸೋಡಿಯಂ ಎಂಬ ಲಸಿಕೆ ಚುಚ್ಚಿದ್ದ ಸತ್ತ ದನಗಳನ್ನು ತಿಂದು ಈಗ ಎಲ್ಲೆಲ್ಲೂ ಕಾಣಸಿಗದಂತೆ ನಾಶವಾದವು. ರಾಮನಗರ ಜಿಲ್ಲೆಯಲ್ಲಿ ಒಂದು ರಣಹದ್ದು ಧಾಮವಿದೆ ಬಿಟ್ಟರೆ ಗದಗ ಜಿಲ್ಲೆಯ ಗಜೇಂದ್ರಗಡದಲ್ಲಿ ಬೆರಳೆಣಿಕೆಯ ರಣಹದ್ದುಗಳು ಕಾಣಸಿಗುತ್ತವೆ. ಸತ್ತವರಿಗೆ ಮೂರು ದಿನದ ಕೂಳು ಹಾಕಿದರೆ ಬಂದು ಕೂಳು ತಿನ್ನಲು ಕಾಗೆಗಳಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಕಾಗೆಗಳ ಬದಲಿಗೆ ಉಣ್ಣೆಗೊರವಗಳು ಕೂಳು ಮುಟ್ಟಿದರೆ ತೃಪ್ತಿಪಟ್ಟುಕೊಳ್ಳಬೇಕಾದ ಸ್ಥಿತಿ ಬಂದಿದೆ. ಅಷ್ಟೇ ಅಲ್ಲ ರಣಹದ್ದುಗಳು ಕಣ್ಮರೆಯಾದದ್ದರಿಂದ ಪಾರ್ಸಿಗಳು ತಮ್ಮ ಶವಸಂಸ್ಕಾರ ಪದ್ಧತಿಯನ್ನೇ ಬದಲಾಯಿಸಿಕೊಳ್ಳಬೇಕಾದ ಸ್ಥಿತಿ ಬಂದೊದಗಿದೆ. ಶವಸಂಸ್ಕಾರದ ಬಗ್ಗೆ ಅವರಲ್ಲಿ ಗಂಭೀರ ಚಿಂತನೆ ನಡೆದಿದೆ. ಹೀಗೆ ನಾವು ಬದುಕುತ್ತಿರುವ ಈ ಕಾಲಘಟ್ಟ ತುಂಬ ವಿನಾಶಕಾರಿಯಾದುದು.
ನೀರು ಗಾಳಿ ಆಹಾರ ಮಣ್ಣು ಎಲ್ಲದರಲ್ಲೂ ರಾಸಾಯನಿಕ ತುಂಬಿದ್ದರಿಂದಲೋ ಏನೋ ನಮ್ಮ ಮೈಯ್ಯಿಗೂ ಆ ವಿಷ ಸೇರಿ ಮನಸ್ಸೂ ವಿಷವೇ ಆಗಿ ಎಲ್ಲರೂ ವಿಷಕಂಠರಲ್ಲ, ವಿಷಘಾತುಕರಾಗಿದ್ದೇವೆ. ದೇವರು ಧರ್ಮದಾಚೆಗೆ ನಾವು ಬದುಕಲು ಬೇಕಾದ ನಮ್ಮ ಹೊರತೂ ಇರುವ ಅಗಾಧ ಜೀವಜಗತ್ತನ್ನು ಇನ್ನಿಲ್ಲದಂತೆ ಅಲಕ್ಷಿಸಿದ್ದೇವೆ. ಹಕ್ಕಿಗಳಿಗಾಗಿ ಮನೆಯ ಮಹಡಿಯ ಮೇಲೆ ಒಂದಿಷ್ಟು ನೀರು ಒಂದಷ್ಟು ಕಾಳುಕಡ್ಡಿ ಇಡಲಾರದ ಮಟ್ಟಿಗೆ, ಮನೆಯ ಸುತ್ತಮುತ್ತ ಸ್ವಚ್ಚತೆಯನ್ನು ಕಾಪಾಡಿಕೊಳ್ಳಲಾರದ ಮಟ್ಟಿಗೆ ಬೇಜವಾಬ್ದಾರಿಗಳಾಗಿದ್ದೇವೆ.
ನಾವು ತಲೆ ಎತ್ತಿ ನೋಡಿದರೆ ಆಕಾಶದ ನೇಲಿಯಲ್ಲಿ ಅರಳೆ ತುಪ್ಪಳದಂತಹಾ ಬಿಳಿಮೋಡದ ತಳದಲ್ಲಿ ಗಿರಕಿಹೊಡೆಯುತ್ತಿದ್ದ ರಣಹದ್ದು ಒಂದಗುಳ ಕಂಡರೆ ತನ್ನ ಬಳಗವನೆಲ್ಲವ ಕರೆದು ಶೂನ್ಯಸಂಪಾದನೆಯ ಪಾಠ ಹೇಳಿ ಸಮಾನವಾಗಿ ಹಂಚಿಕೊಂಡು ತಿನ್ನಿರಿ ಎಂಬ ಸಮತಾವಾದದ ಪಾಠ ಒಗ್ಗಟ್ಟಿನ ಪಾಠ ತನ್ನವರು ನೊಂದರೆ ಸತ್ತರೆ ನಾವು ಹೇಗೆ ಮಿಡಿಯಬೇಕೆಂಬ ಸಂಬಂಧದ ಪಾಠ ಹೇಳಿಕೊಡುತ್ತಿದ್ದ ಕಾಗೆಗಳು ಮರೆಯಾಗುತ್ತಿವೆ. ನಮ್ಮನ್ನು ನಂಬುತ್ತಾ ನಮ್ಮ ಮನೆಯ ಮಕ್ಕಳೇ ಆಗಿ ನಮ್ಮೊಡನೆ ಬಾಳುತ್ತಿದ್ದ ಗುಬ್ಬಚ್ಚಿಗಳ ಬದುಕು ಅಪ್ಪಚ್ಚಿಯಾಗಿದೆ. ಇನ್ನೇನುಳಿಯಲಿದೆ ಈ ಜಗತ್ತಿನಲ್ಲಿ. ಮನುಷ್ಯತ್ವವೇ ಮರೆಯಾಗುತ್ತಿರುವಾಗ.
- ಸುರೇಶ ಎನ್ ಶಿಕಾರಿಪುರ
ಇಂಟರ್ನೆಟ್ ಚಿತ್ರ ಕೃಪೆ