ಎಲ್ಲ ಇಲಾಖೆಗಳಿಗೆ ಪ್ರಾದೇಶಿಕ ಭಾಷೆಗಳಲ್ಲೇ ಪರೀಕ್ಷೆ ನಡೆಯಲಿ

ಎಲ್ಲ ಇಲಾಖೆಗಳಿಗೆ ಪ್ರಾದೇಶಿಕ ಭಾಷೆಗಳಲ್ಲೇ ಪರೀಕ್ಷೆ ನಡೆಯಲಿ

ಕೇಂದ್ರ ಸರಕಾರದ ಗೃಹ ಸಚಿವಾಲಯದ ವ್ಯಾಪ್ತಿಯಲ್ಲಿರುವ ಕೇಂದ್ರ ಸಶಸ್ತ್ರ ಪಡೆ (ಸಿಎಪಿಎಫ್) ಮತ್ತು ಇದರ ಅಧೀನದಲ್ಲಿರುವ ಇತರ ಕೇಂದ್ರೀಯ ಭದ್ರತಾ ಪಡೆಗಳ ಕಾನ್ ಸ್ಟೇಬಲ್ ಹುದ್ದೆಗಳಿಗೆ ನಡೆಸಲಾಗುವ ಪ್ರವೇಶ ಪರೀಕ್ಷೆಯನ್ನು ಇನ್ನು ಮುಂದೆ ಕನ್ನಡ, ಕೊಂಕಣಿ, ಮಲಯಾಳ, ಮರಾಠಿ ಸಹಿತ ೧೩ ಪ್ರಾದೇಶಿಕ ಭಾಷೆಗಳಲ್ಲಿ ಬರೆಯಲು ಅವಕಾಶ ಕಲ್ಪಿಸಲು ಕೇಂದ್ರ ಸರಕಾರ ತೀರ್ಮಾನಿಸಿದೆ. ಈ ಮಹತ್ತರ ತೀರ್ಮಾನದಿಂದಾಗಿ ಕೇಂದ್ರಿಯ ಸಶಸ್ತ್ರ ಪಡೆಗಳಲ್ಲಿ ಕಾರ್ಯನಿರ್ವಹಿಸಲು ಆಸಕ್ತರಾಗಿರುವ ಕರ್ನಾಟಕ ಸಹಿತ ದೇಶದ ವಿವಿಧ ರಾಜ್ಯಗಳ ಅಭ್ಯರ್ಥಿಗಳಿಗೆ ಅನುಕೂಲವಾಗಲಿದೆ.

ಕೇಂದ್ರ ಸರಕಾರದ ವಿವಿಧ ಇಲಾಖೆಗಳು ಮತ್ತು ಸಂಸ್ಥೆಗಳು ನೇಮಕಾತಿಗಾಗಿ ನಡೆಸುವ ಪ್ರವೇಶ ಪರೀಕ್ಸೆಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ಬರೆಯಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಕಳೆದ ಹಲವು ವರ್ಷಗಳಿಂದ ವಿವಿಧ ರಾಜ್ಯಗಳಿಂದ ಬೇಡಿಕೆ, ಆಗ್ರಹಗಳು ಕೇಳಿಬರುತ್ತಲೇ ಇದ್ದವು. ರಾಜ್ಯದಲ್ಲಂತೂ ಕನ್ನಡ ಪರ ಸಂಘಟನೆಗಳು ವಿವಿಧ ಕೇಂದ್ರೀಯ ಸಂಸ್ಥೆಗಳ ಪರೀಕ್ಷೆಗಳ ಸಂದರ್ಭದಲ್ಲಿ ಕನ್ನಡದಲ್ಲಿ ಪರೀಕ್ಷೆಗೆ ಉತ್ತರಿಸಲು ಅವಕಾಶ ನೀಡುವಂತೆ ಆಗ್ರಹಿಸಿ ಪ್ರತಿಭಟನೆಗಳನ್ನು ನಡೆಸಿದ್ದವು. ಈ ಸಂಬಂಧ ರಾಜ್ಯ ಮತ್ತು ಕೇಂದ್ರ ಸರಕಾರಗಳಿಗೆ ನಿರಂತರವಾಗಿ ಮನವಿಗಳು ಸಲ್ಲಿಕೆಯಾಗಿದ್ದವು. ಈ ಹಿನ್ನಲೆಯಲ್ಲಿ ರಾಜ್ಯ ಸರಕಾರ ಕೂಡ ಕೇಂದ್ರ ಸರಕಾರಕ್ಕೆ ಪತ್ರವನ್ನು ಬರೆದು ಮನವಿ ಮಾಡಿಕೊಂಡಿತ್ತು.

ಈ ವಿಷಯವಾಗಿ ವಿವಿಧ ರಾಜ್ಯಗಳ ಅದರಲ್ಲೂ ದಕ್ಷಿಣ ಭಾರತದ ರಾಜ್ಯಗಳ ಸಂಸದರು ಸಂಸತ್ ನಲ್ಲಿ ದನಿ ಎತ್ತಿ ಪ್ರಾದೇಶಿಕ ಭಾಷೆಗಳಲ್ಲಿ ಉದ್ಯೋಗ ನೇಮಕಾತಿ ಪ್ರವೇಶಗಳನ್ನು ನಡೆಸುವಂತೆ ಕೇಂದ್ರ ಸರಕಾರವನ್ನು ಆಗ್ರಹಿಸಿದ್ದರು. ಇವೆಲ್ಲವನ್ನೂ ಪರಿಗಣಿಸಿ ಕೇಂದ್ರ ಸರಕಾರ ಈಗ ಸಿಎಪಿಎಫ್ ಕಾನ್ ಸ್ಟೇಬಲ್ ಹುದ್ದೆಗಳ ನೇಮಕಾತಿಗಾಗಿ ನಡೆಸುವ ಪ್ರವೇಶ ಪರೀಕ್ಷೆಯನ್ನು ದೇಶದ ೧೩ ಪ್ರಾದೇಶಿಕ ಭಾಷೆಗಳಲ್ಲಿ ಬರೆಯಲು ಅವಕಾಶ ಕಲ್ಪಿಸಿಕೊಡಲು ತೀರ್ಮಾನಿಸಿದೆ. ಇದರಿಂದಾಗಿ ಸಿಎಪಿಎಫ್, ಬಿ ಎಸ್ ಎಫ್, ಸಿ ಐ ಎಸ್ ಎಫ್, ಐಟಿಬಿಪಿ, ಎಸ್ ಎಸ್ ಬಿ ಮತ್ತು ಎಸ್ ಎಸ್ ಜಿ ಕಾನ್ ಸ್ಟೇಬಲ್ ಹುದ್ದೆಗಳ ಪ್ರವೇಶ ಪರೀಕ್ಷೆಗಳನ್ನು ಆಯಾಯ ರಾಜ್ಯದಲ್ಲಿನ ಪ್ರದೇಶಿಕ ಭಾಷೆಯಲ್ಲಿ ಬರೆಯಬಹುದಾಗಿದೆ. ಕೇಂದ್ರ ಸರಕಾರದ ಈ ತೀರ್ಮಾನದಿಂದಾಗಿ ಮುಂದಿನ ದಿನಗಳಲ್ಲಿ ಈ ಪರೀಕ್ಷೆಗೆ ಈ ರಾಜ್ಯಗಳ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗಲಿದ್ದು ಸಹಜವಾಗಿಯೇ ಭವಿಷ್ಯದಲ್ಲಿ ಕೇಂದ್ರ ಸಶಸ್ತ್ರ ಪಡೆಗಳಲ್ಲಿ ಈ ರಾಜ್ಯಗಳ ಪ್ರಾತಿನಿಧ್ಯ ಹೆಚ್ಚಲಿದೆ.

ಕೇಂದ್ರದ ಬಹುತೇಕ ಇಲಾಖೆ ಮತ್ತು ಸಂಸ್ಥೆಗಳಲ್ಲಿ ಉತ್ತರ ಭಾರತದವರೇ ಪ್ರಾಬಲ್ಯ ಹೊಂದಿದ್ದಾರೆ ಎಂಬ ಆರೋಪ ಇಂದು -ನಿನ್ನೆಯದಲ್ಲ. ಕೇಂದ್ರದ ನೇಮಕಾತಿಗಾಗಿ ನಡೆಯುವ ಪರೀಕ್ಷೆಗಳಲ್ಲಿ ಉತ್ತರ ಭಾರತದ ಪ್ರಮುಖ ಭಾಷೆಯಾದ ಹಿಂದಿ ಮತ್ತು ಇಂಗ್ಲಿಷ್ ಗೆ ಹೆಚ್ಚಿನ ಒತ್ತು ನೀಡುತ್ತಾ ಬರಲಾಗಿರುವುದರಿಂದ ಇದು ಸಹಜವೂ ಆಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಕೇಂದ್ರದ ಒಂದೊಂದೇ ಇಲಾಖೆ, ಸಂಸ್ಥೆಗಳಲ್ಲಿ ನೇಮಕಾತಿಗಾಗಿ ನಡೆಸಲಾಗುವ ಪರೀಕ್ಷೆಗಳಲ್ಲಿ ಪ್ರಾದೇಶಿಕ ಭಾಷೆಗಳಿಗೂ ಅವಕಾಶ ನೀಡುವ ಮೂಲಕ ಉತ್ತರ-ದಕ್ಷಿಣ ತಾರತಮ್ಯವನ್ನು ಹೋಗಲಾಡಿಸುವ ಪ್ರಯತ್ನ ನಡೆಯುತ್ತಲೇ ಬಂದಿದೆ. ಈಗ ಗೃಹ ಸಚಿವಾಲಯ ಈ ನಿಟ್ಟಿನಲ್ಲಿ ಮುಂದಡಿ ಇರಿಸಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಭದ್ರತಾ ಪಡೆಗಳ ನೇಮಕಾತಿಯಲ್ಲಿ ಪ್ರಾದೇಶಿಕ ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಾಗಲಿದೆ. ಕೇಂದ್ರ ಸರಕಾರದ ಇತರೆ ಇಲಾಖೆಗಳು ಮತ್ತು ಸಂಸ್ಥೆಗಳು ಕೂಡ ಇದೇ ಮಾದರಿಯನ್ನು ಅನುಸರಿಸಿ ಎಲ್ಲ ರಾಜ್ಯಗಳಿಗೂ ಸಮಾನ ಪ್ರಾತಿನಿಧ್ಯಕ್ಕೆ ಅವಕಾಶ ಕಲ್ಪಿಸಬೇಕು.

ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೧೩-೦೨-೨೦೨೪ 

ಚಿತ್ರ ಕೃಪೆ: ಅಂತರ್ಜಾಲ ತಾಣ