ಎಲ್ಲ ಕಾಲಕ್ಕೂ ಬರುವ ಕಥೆಗಳು

ಎಲ್ಲ ಕಾಲಕ್ಕೂ ಬರುವ ಕಥೆಗಳು

ಪುಸ್ತಕದ ಲೇಖಕ/ಕವಿಯ ಹೆಸರು
ಶಾಂತಾ ರಂಗಾಚಾರಿ
ಪ್ರಕಾಶಕರು
ನ್ಯಾಷನಲ್ ಬುಕ್ ಟ್ರಸ್ಟ್, ಇಂಡಿಯಾ
ಪುಸ್ತಕದ ಬೆಲೆ
ರೂ.40/-

ಶಾಂತಾ ರಂಗಾಚಾರಿ ಮಕ್ಕಳಿಗಾಗಿ ಇಂಗ್ಲಿಷಿನಲ್ಲಿ ಬರೆದ ಐದು ಪೌರಾಣಿಕ ಕತೆಗಳ ಸಂಕಲನ ಇದು. ಇವನ್ನು ಕನ್ನಡಕ್ಕೆ ಅನುವಾದಿಸಿದವರು ಕೆ.ವಿ. ಸುಬ್ಬಣ್ಣ. ಚಂದದ ಚಿತ್ರಗಳನ್ನು ಬರೆದವರು ಪಿ. ಖೇಮರಾಜ್. ಇದರಲ್ಲಿರುವ ಕತೆಗಳು:
ಸಾವಿನ ಜತೆಗೆ ಸಂಭಾಷಣೆ (ಸಾವಿತ್ರಿ - ಸತ್ಯವಾನ)
ಏಳು ದಿನಗಳ ಕಾವಲು (ಪರೀಕ್ಷಿತ ರಾಜ - ತಕ್ಷಕ ಸರ್ಪ)
ಉಪಮನ್ಯು ಕಲಿತ ಪಾಠ (ಗುರು ಧೌಮ್ಯ ಆಚಾರ್ಯ - ಶಿಷ್ಯ ಉಪಮನ್ಯು)
ಭೀಮ ಕೊಂದ ಬಕಾಸುರ
ಖಾಂಡವ ದಹನ (ಅಗ್ನಿಯ ಖಾಂಡವ ವನ ದಹನಕ್ಕೆ ಅರ್ಜುನನ ರಕ್ಷಣೆ)

ಇವೆಲ್ಲ ನಮ್ಮಲ್ಲಿ ಹಲವರಿಗೆ ಗೊತ್ತಿರುವ ಪೌರಾಣಿಕ ಕತೆಗಳೇ ಆಗಿವೆ. ಶಾಂತಾ ರಂಗಾಚಾರಿ ಅವರು ಮಕ್ಕಳಿಗಾಗಿ ಅವನ್ನು ಸರಳ ಭಾಷೆಯಲ್ಲಿ ಹೇಳಿರುವುದೇ ಈ ಕತೆಗಳ ವಿಶೇಷ. ಜೊತೆಗೆ, ಕತೆಗಳ ಸಂದೇಶವು ಮನಮುಟ್ಟುವಂತೆ ಅವನ್ನು ವಿಸ್ತಾರವಾಗಿ ಹೇಳಿದ್ದಾರೆ.

ಉದಾಹರಣೆಗೆ, ಸಾವಿನ ಜತೆಗೆ ಸಂಭಾಷಣೆ ಕತೆ. ಆ ದಿನ ಕಾಡಿನಲ್ಲಿ ಸೌದೆ ಕಡಿಯಲು ಸತ್ಯವಾನ ಹೊರಟಾಗ ಅದು ಅವನ ಸಾವಿನ ನಿಗದಿತ ದಿನ ಎಂಬುದು ಪತ್ನಿ ಸಾವಿತ್ರಿಗೆ ತಿಳಿದಿತ್ತು. ಆದ್ದರಿಂದ ಅವಳು ಹಟಮಾಡಿ ಆ ದಿನ ಅವನೊಂದಿಗೆ ಕಾಡಿಗೆ ಹೋಗುತ್ತಾಳೆ. ಅವನ ಮೃತ್ಯು ಎಲ್ಲಿಂದ ಯಾವ ರೂಪದಲ್ಲಿ ಬರುತ್ತದೆಯೋ ಎಂಬ ಆತಂಕದಲ್ಲಿ ಸತ್ಯವಾನನನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತ ಇರುತ್ತಾಳೆ. ಆತನ ಪ್ರಾಣ ತೆಗೆಯಲು ಹುಲಿ ಅಥವಾ ಹಾವು ಬರಲಿಲ್ಲ. ಅಚಾನಕ್ ಅವನು ಕುಸಿದು ಬೀಳುತ್ತಾನೆ. ಆಗ, ಸತ್ಯವಾನನ ದೇಹವನ್ನು ಯಮರಾಜ ಎಳೆದೊಯ್ಯುತ್ತಾನೆ.

ಯಮರಾಜನನ್ನು ಹಿಂಬಾಲಿಸಿದ ಸಾವಿತ್ರಿ, ‘ನಿಲ್ಲು, ನಿನ್ನ ಜತೆ ಮಾತನಾಡಬೇಕಾಗಿದೆ” ಎನ್ನುತ್ತಾಳೆ. ಯಮರಾಜ ನಿಂತಾಗ, ಆತನ ಜತೆ ಧೈರ್ಯದಿಂದ ಮಾತನಾಡಲು ಶುರು ಮಾಡುತ್ತಾಳೆ. “ಸತ್ಯವಾನನ ಜೀವ ಮಾತ್ರ ಕೇಳಬಾರದು. ಬೇರೆ ಏನು ಬೇಕಾದರೂ ಕೇಳು” ಎಂದು ಯಮರಾಜ ಸಂವಾದಕ್ಕೆ ತೊಡಗುತ್ತಾನೆ. ಇವಳ ಚತುರ ಮಾತುಗಾರಿಕೆಯ ಸುಳಿಯಲ್ಲಿ ಸಿಲುಕಿದ ಯಮರಾಜ ಅವಳಿಗೆ ಮೂರು ವರಗಳನ್ನು ಕೊಡುತ್ತಾನೆ. "ನಿನಗೆ ನೂರು ಮಕ್ಕಳನ್ನು ಹರಸುತ್ತೇನೆ. ನಿನ್ನ ರಾಜವಂಶ ಬೆಳೆಯಲಿ" ಎಂಬುದು ಯಮರಾಜ ಸಾವಿತ್ರಿಗಿತ್ತ ಮೂರನೆಯ ವರ. ಅದರ ಪರಿಣಾಮವಾಗಿ ಯಮರಾಜ ಸತ್ಯವಾನನನ್ನು ಬದುಕಿಸಬೇಕಾಗುತ್ತದೆ! ಸಾವಿತ್ರಿಯ ಯೋಜನೆ ಫಲಿಸಿತ್ತು. ಸಾವಿಗಿಂತ ಬಲಶಾಲಿಯಾದ ಸಂಗತಿಯಿಂದ ಸಾವನ್ನು ಗೆಲ್ಲಬಹುದೆಂದು ಅವಳು ನಂಬಿದ್ದಳು. ಅದು ಅವಳಲ್ಲಿತ್ತು; ಅದುವೇ ಪ್ರೀತಿ.

ಉಪಮನ್ಯುವಿನ ಕತೆಯಲ್ಲಿ, ಹಲವು ಒಳ್ಳೆಯ ಗುಣಗಳನ್ನು ಹೊಂದಿದ್ದ ಉಪಮನ್ಯುವಿನಲ್ಲಿ ಒಂದು ನ್ಯೂನತೆಯಿತ್ತು. ಅದುವೇ ಹಸಿವನ್ನು ಸಹಿಸಲಾಗದೆ, ಗುರು ಧೌಮ್ಯ ಆಚಾರ್ಯ ವಿಧಿಸಿದ ನಿಯಮಗಳನ್ನು ಉಲ್ಲಂಘಿಸಿ, ಏನನ್ನಾದರೂ ತಿಂದು ಬಿಡುವುದು. ಹಲವು ಪರೀಕ್ಷೆಗಳ ನಂತರ, ಗುರುಗಳು ಅವನನ್ನು ದನಗಳನ್ನು ಮೇಯಿಸಲು ಕಳಿಸುತ್ತಾರೆ. ಆದರೆ ಉಪಮನ್ಯು ದನಗಳ ಹಾಲನ್ನೇ ಕುಡಿದು ತನ್ನ ಹಸಿವು ತಣಿಸಿಕೊಳ್ಳುತ್ತಾನೆ. ಅದನ್ನು ತಿಳಿದ ಗುರು ಧೌಮ್ಯ ತನ್ನ ದುಃಖ, ಕೋಪ ತಡೆದುಕೊಂಡು ಉಪಮನ್ಯುವಿಗೆ ಅವನು ಮಾಡಿದ್ದು ತಪ್ಪೆಂದು ವಿವರಿಸುತ್ತಾನೆ.

ಆಗ ಉಪಮನ್ಯು ಗುರುವಿಗೆ ಮಾತು ಕೊಡುತ್ತಾನೆ: “ಗುರುವೇ, ಇನ್ನು ನೀವೇ ತಿನ್ನು ಎಂದು ಹೇಳುವ ತನಕ ಮತ್ತೊಂದು ತುತ್ತನ್ನು ಬಾಯಿಗಿಡುವುದಿಲ್ಲ.” ತದನಂತರ ದನಗಳನ್ನು ಮೇಯಿಸಲು ಒಯ್ದ ಉಪಮನ್ಯು ಎರಡು ದಿನ ಏನೂ ತಿನ್ನದೆ ಉಪವಾಸವಿರುತ್ತಾನೆ. ಆದರೆ ಎರಡನೇ ದಿನ ಮುಗಿಯುತ್ತಿದ್ದಂತೆ, ಹಸಿವು ತಾಳಲಾಗದೆ, ಯಾವುದೋ ಗಿಡದ ಎಲೆಗಳನ್ನು ತಿನ್ನುತ್ತಾನೆ. ತಕ್ಷಣವೇ ಅವನು ಕುರುಡಾಗುತ್ತಾನೆ. ಆಶ್ರಮಕ್ಕೆ ಹಿಂತಿರುಗದ ಉಪಮನ್ಯುವನ್ನು ಹುಡುಕಿಕೊಂದು ಗುರು ಧೌಮ್ಯ ಆ ದಿನ ರಾತ್ರಿ ಬಂದಾಗ, ಕಣ್ಣು ಕಾಣದ ಉಪಮನ್ಯು ಒಂದು ಹೊಂಡಕ್ಕೆ ಬಿದ್ದಿದ್ದ. ಉಪಮನ್ಯುವಿಗೆ ಒಂದು ಷರತ್ತು ಹಾಕಿ ಗುರು ಹೊರಟು ಹೋಗುತ್ತಾರೆ. ಉಪಮನ್ಯು ಅಲ್ಲೇ ಧ್ಯಾನದಲ್ಲಿ ಮುಳುಗುತ್ತಾನೆ. ಕೊನೆಗೆ, ಅಶ್ವಿನಿ ದೇವತೆಗಳು ಪ್ರತ್ಯಕ್ಷರಾಗಿ ಅವನಿಗೆ ದೃಷ್ಟಿ ದಾನ ಮಾಡುತ್ತಾರೆ. ಮರುದಿನ ಅರುಣೋದಯವಾಗುತ್ತಿದ್ದಂತೆ, ಉಪಮನ್ಯು ತನ್ನ ಸುತ್ತಲಿನ ಪ್ರಕೃತಿಯನ್ನು ಸೂಕ್ಷ್ಮವಾಗಿ ಗಮನಿಸಿತ್ತಾನೆ. ಅವನಿಗೆ ಎಲ್ಲವೂ ಅದ್ಭುತವಾಗಿ ಕಾಣಿಸುತ್ತದೆ. ಅವನಿಗೆ ಸತ್ಯದರ್ಶನವಾಗುತ್ತದೆ! ಆಶ್ರಮಕ್ಕೆ ಮರಳಿದ ಉಪಮನ್ಯು ಗುರುವಿಗೆ ಎಲ್ಲವನ್ನೂ ತಿಳಿಸಿ, ಅವರ ಆಶೀರ್ವಾದ ಬೇಡುತ್ತಾನೆ.

ಇಂತಹ ಒಳನೋಟಗಳನ್ನು ಒದಗಿಸುವ ಈ ಐದು ಕತೆಗಳನ್ನು ಮಕ್ಕಳು ಮಾತ್ರವಲ್ಲ, ಹಿರಿಯರೂ ಓದಿ, ಆ ಪೌರಾಣಿಕ ಕತೆಗಳ ಸಂದೇಶಗಳನ್ನು ಇನ್ನೂ ಚೆನ್ನಾಗಿ ಅರ್ಥ ಮಾಡಿಕೊಳ್ಳಬಹುದು. ತಮ್ಮ ಅರಿವಿನ ದಿಗಂತ ವಿಸ್ತರಿಸಿಕೊಳ್ಳಬಹುದು.