ಎಲ್ಲ ಪಕ್ಷಗಳು ಹೊಸ ಮಾದರಿಯ ಪ್ರಚಾರಕ್ಕೆ ನಾಂದಿ ಹಾಡಲಿ

ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಗೋವಾ, ಮಣಿಪುರ ರಾಜ್ಯಗಳ ವಿಧಾನ ಸಭೆ ಚುನಾವಣೆಗಾಗಿ ಶನಿವಾರವಷ್ಟೇ ಕೇಂದ್ರ ಚುನಾವಣಾ ಆಯೋಗ ವೇಳಾ ಪಟ್ಟಿ ಪ್ರಕಟಿಸಿದೆ. ಅದರಂತೆ ಫೆ ೧೦ರಿಂದ ಮಾ ೭ರವರೆಗೆ ಈ ರಾಜ್ಯಗಳ ಚುನಾವಣೆ ನಡೆಯಲಿದ್ದು ಮಾ ೧0ಕ್ಕೆ ಫಲಿತಾಂಶ ಹೊರಬೀಳಲಿದೆ.
ಕೊರೊನಾ ಸಂಕಷ್ಟದ ಸಮಯದಲ್ಲೇ ಈ ಚುನಾವಣೆ ನಡೆಯುತ್ತಿದ್ದು ಕೇಂದ್ರ ಚುನಾವಣಾ ಆಯೋಗ, ರಾಜಕೀಯ ಪಕ್ಷಗಳು ಮತ್ತು ನಾಗರಿಕರು ಎಚ್ಚರಿಕೆಯಿಂದಲೇ ಇರಬೇಕಾದ ಅನಿವಾರ್ಯತೆಯೂ ಇದೆ. ಚುನಾವಣೆ ವಿಚಾರದಲ್ಲಿ ಒಂದಷ್ಟು ನಿರ್ಲಕ್ಷ್ಯ ವಹಿಸಿದರೂ ಕೊರೊನಾ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಹಬ್ಬುವ ಎಲ್ಲ ಸಾಧ್ಯತೆಗಳೂ ಇವೆ.
ಈ ಅಂಶವನ್ನು ಗಮನದಲ್ಲಿ ಇರಿಸಿಕೊಂಡೇ ಕೇಂದ್ರ ಚುನಾವಣ ಆಯೋಗ ಜ.೧೫ರ ವರೆಗೆ ಯಾವುದೇ ರಾಲಿ, ಪಾದಯಾತ್ರೆ ರೋಡ್ ಶೋ ನಡೆಸದಂತೆ ರಾಜಕೀಯ ಪಕ್ಷಗಳಿಗೆ ಸೂಚನೆ ನೀಡಿದೆ. ಅಂದರೆ ಈ ಎಲ್ಲದಕ್ಕೂ ನಿರ್ಬಂಧ ಹೇರಿದೆ. ಜ.೧೬ರ ಬಳಿಕ ಪರಿಸ್ಥಿತಿ ನೋಡಿಕೊಂಡು ಇವುಗಳಿಗೆ ಅನುಮತಿ ನೀಡುವ ಅಥವಾ ನಿರಾಕರಿಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದೆ.
ಈಗಿನ ಪರಿಸ್ಥಿತಿಯಲ್ಲಿ ಕೇಂದ್ರ ಚುನಾವಣ ಆಯೋಗ ತೆಗೆದುಕೊಂಡಿರುವ ಈ ಕ್ರಮ ಉತ್ತಮವಾದದ್ದೇ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳೂ ಆಗಬೇಕು. ಹಾಗೆಯೇ ಕೊರೊನಾ ಸಂಕಷ್ಟವನ್ನು ಯಶಸ್ವಿಯಾಗಿ ನಿವಾರಿಸಬೇಕು. ಕೊರೊನಾದ ನೆಪವೊಡ್ಡಿ ಚುನಾವಣೆಗಳನ್ನು ಮುಂದೂಡಿದರೆ ಆಡಳಿತ ಯಂತ್ರ ಕುಸಿಯುವ ಭೀತಿ ಉಂಟಾಗುತ್ತದೆ. ಹೀಗಾಗಿ ಲಭ್ಯ ಸಂಪನ್ಮೂಲಗಳನ್ನು ಬಳಸಿಕೊಂಡೇ ಚುನಾವಣೆಗಳನ್ನು ನಡೆಸುತ್ತಿರುವುದು ಸೂಕ್ತವಾಗಿದೆ.
ಕೇಂದ್ರ ಚುನಾವಣ ಆಯೋಗದ ಈ ನಿರ್ಬಂಧ ರಾಜಕೀಯ ಪಕ್ಷಗಳಿಗೆ ಹೊಸ ಸವಾಲನ್ನು ನೀಡಿದೆ. ಪಕ್ಷಗಳ ನಾಯಕರು, ಮತದಾರರನ್ನು ಸೆಳೆಯಲು ಆನ್ ಲೈನ್ ಅಥವಾ ವರ್ಚುವಲ್ ಮಾರ್ಗವನ್ನು ಅನುಸರಿಸಬೇಕು. ೨೦೧೪ರ ಚುನಾವಣೆಯಲ್ಲೇ ಬಿಜೆಪಿ, ಎಲ್ಲ ಮತದಾರರನ್ನು ರಾಲಿಗಳ ಮೂಲಕ ತಲುಪಲು ಸಾಧ್ಯವಿಲ್ಲ ಎಂಬುದನ್ನು ಮನಗಂಡು ಹೊಸ ಮಾದರಿಯ ಪ್ರಚಾರ ತಂತ್ರದ ಮೊರೆ ಹೋಗಿತ್ತು. ಈಗಲೂ ಅಷ್ಟೇ ಎಲ್ಲ ರಾಜಕೀಯ ಪಕ್ಷಗಳು ವರ್ಚುವಲ್ ರಾಲಿಗಳ ಮೂಲಕ ಜನರ ಹತ್ತಿರ ಹೋಗಬಹುದು.
ಕೊರೊನಾ ಎಂಬುದು ಈಗ ನಮ್ಮ ಸುತ್ತಲೇ ಇರುವ ರೋಗವಾಗಿ ಮಾರ್ಪಟ್ಟಿದೆ. ಇದರಿಂದ ಸದ್ಯಕ್ಕೆ ಮುಕ್ತಿ ಸಿಗುವುದು ಕಷ್ತವೇ ಸರಿ. ಒಂದರ ಮೇಲೊಂದರಂತೆ ರೂಪಾಂತರಿಗಳ ಕಾಟವೂ ಹೆಚ್ಚಾಗಿದೆ. ಹೀಗಾಗಿ ಈ ಪಂಚರಾಜ್ಯ ಚುನಾವಣೆಯಲ್ಲಿ ಹೊಸ ಮಾದರಿಯನ್ನೇ ಹುಟ್ಟು ಹಾಕಬಹುದು. ಇದನ್ನು ಮುಂದಿನ ದಿನಗಳಲ್ಲಿ ಎಲ್ಲ ಚುನಾವಣೆಗಳಲ್ಲಿ ಬಳಕೆ ಮಾಡುವ ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ.
ಏಕೆಂದರೆ ಈ ಪಂಚರಾಜ್ಯ ಚುನಾವಣೆಗಳ ಬಳಿಕ ೨೦೨೨ರಲ್ಲೇ ಬೇರೆ ಬೇರೆ ರಾಜ್ಯಗಳ ಚುನಾವಣೆ ಬರಲಿದೆ. ಮುಂದಿನ ವರ್ಷವೂ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಚುನಾವಣೆ ಇದೆ. ೨೦೨೪ಕ್ಕೆ ಲೋಕ ಸಭೆ ಚುನಾವಣೆಯೂ ಬರಲಿದೆ. ಒಂದು ವೇಳೆ ಕೊರೊನಾ ಈ ವರ್ಷವೇ ಸಂಪೂರ್ಣವಾಗಿ ನಿರ್ಮೂಲನೆಯಾದರೂ, ಹೆಚ್ಚು ವೆಚ್ಚವಿಲ್ಲದೇ ಅತ್ಯಾಧುನಿಕ ಮತ್ತು ಸುಧಾರಿತ ತಂತ್ರಜ್ಞಾನಗಳ ಮೂಲಕ ಚುನಾವಣೆ ನಡೆಸಲು ಒಂದು ಹೊಸ ಮಾರ್ಗ ಸಿಕ್ಕಂತಾಗುತ್ತದೆ.
ಕೃಪೆ: ಉದಯವಾಣಿ ಪತ್ರಿಕೆಯ ಸಂಪಾದಕೀಯ ದಿ.೧೦-೦೧-೨೦೨೨
ಚಿತ್ರ ಕೃಪೆ: ಅಂತರ್ಜಾಲ ತಾಣ