ಎಳ್ಳು ಬೆಳೆಗೆ ಕಂಟಕ ಈ ರಕ್ಕಸ ಹುಳು !


ಬಡವರ ತುಪ್ಪ ಎಂದೇ ಪ್ರಖ್ಯಾತವಾಗಿರುವ “ಎಳ್ಳು” ಮಳೆಯಾಶ್ರಿತ ಪ್ರದೇಶದ ಪ್ರಮುಖ ಎಣ್ಣೆಕಾಳು ಬೆಳೆಯಾಗಿದೆ. ನಮ್ಮ ದೇಶವು ಈ ಬೆಳೆಯು ಕ್ಷೇತ್ರ ಹಾಗೂ ಉತ್ಪಾದನೆಯಲ್ಲಿ ಮೊದಲನೆಯ ಸ್ಥಾನದಲ್ಲಿದೆ. ನಮ್ಮ ದೇಶದಲ್ಲಿ ಈ ಬೆಳೆಯನ್ನು ೧೮.೫ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಇದರ ಉತ್ಪಾದನೆಯು ೮.೪ ಲಕ್ಷ ಟನ್ ಇದ್ದು, ಉತ್ಪಾದಕತೆಯು ೩೮೦ ಕಿಲೋ ಪ್ರತಿ ಹೆಕ್ಟೇರಿಗೆ ಇದೆ. ಕರ್ನಾಟಕದಲ್ಲಿ ಬೀದರ್, ಕಲಬುರಗಿ, ರಾಯಚೂರ, ಬಳ್ಳಾರಿ, ಕೊಪ್ಪಳ, ಬಾಗಲಕೋಟ, ಗದಗ, ಹಾವೇರಿ, ಧಾರವಾಡ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಲ್ಲಿ ಬೆಳೆಯಲಾಗುತ್ತದೆ. ಈ ಎಣ್ಣೆಕಾಳಿನಲ್ಲಿ ಶೇ ೪೮ ರಿಂದ ೫೨ ರಷ್ಟು ಎಣ್ಣೆ ಅಂಶ ಇದೆ. ದಕ್ಷಿಣ ಭಾರತದ ರಾಜ್ಯಗಳಲ್ಲಿ ಶೇ ೮೦ ರಷ್ಟು ಎಣ್ಣೆಯನ್ನು ಆಹಾರ ತಯಾರಿಕೆಯಲ್ಲಿ ಬಳಸಲಾಗುತ್ತಿದೆ. ಹಾಗೂ ಎಳ್ಳು ಎಲ್ಲಾ ತರಹದ ಆಮೈನೊ ಆಮ್ಲಗಳು ಹಾಗೂ ಫ್ಯಾಟಿ ಆಮ್ಲಗಳು ಇರುವುದರಿಂದ ಉತ್ತಮ ಔಷಧಿಯ ಗುಣ ಹೊಂದಿದೆ. ಸಾಮಾನ್ಯವಾಗಿ ಈ ಬೆಳೆಯಲ್ಲಿ ಕೀಟ ಭಾದೆ ಕಡಿಮೆ ಆದಾಗ್ಯೂ ಬಂಜೆ ರೋಗ ತರುವ ಹುಳು (ಜಿಗಿ ಹುಳು), ಎಲೆಯ ಸುರಳಿ ಹಾಗೂ ಕಾಯಿ ಕೊರಕ ಹುಳು ಮತ್ತು ಕತ್ತರಿಸುವ ಹುಳು (ರಕ್ಕಸಹುಳು) ಪ್ರಮಖವಾದದ್ದು.
ರಕ್ಕಸ ಹುಳು/ ಕತ್ತರಿಸುವ ಹುಳು : ಈ ಕೀಟವು ಎಳ್ಳು ಅಲ್ಲದೆ ಶೇಂಗಾ, ಲಬ್‌ಲಬ್, ಹೆಸರು, ಮಲ್ಲಿಗೆ, ಮುಂತಾದ ಬೆಳೆಗಳಲ್ಲಿ ಕಂಡುಬರುತ್ತದೆ. ಈ ಕೀಟದ ವೈಜ್ಞಾನಿಕ ಹೆಸರು ಅಕೆರೋನ್ಸಿಯಾ ಸ್ಟಿಕ್ಸ್.
ಕೀಟದ ಪ್ರಮುಖ ಹಂತಗಳು :
ಮೊಟ್ಟೆ : ಮೊಟ್ಟೆಯು ತೆಳು ಹಳದಿ ಬಣ್ಣದಾಗಿದ್ದು, ಎಲೆಯ ಮೇಲ್ಬಾಗದಲ್ಲಿ ಒಂದೊಂದಾಗಿ ಇಡುತ್ತದೆ. ಮೊಟ್ಟೆಯೊಡೆಯುವ ಸಮಯದಲ್ಲಿ ಗಾಢ ಹಳದಿ ಬಣ್ಣದಿಂದ ಕೂಡಿರುತ್ತದೆ.
ಲಾರ್ವಾ (ಕೀಡೆ): ಇದು ಬೆಳೆಯ ಹಾನಿಯುಂಟು ಮಾಡುವ ಹಂತವಾಗಿದ್ದು, ಕೀಡೆಯು ದೊಡ್ಡದಾಗಿದ್ದು ಹಿಂದೆ ಒಂದು ಕೊಂಬು ಇರುತ್ತದೆ. ಆದುದರಿಂದ ಇದನ್ನು “ಕೊಂಬಿನ ಹುಳು” ಎಂತಲೂ ಕರೆಯುತ್ತಾರೆ. ಕೊನೆಯ ಅವಧಿಯ ಕೀಡೆಯು ತೋರು ಬೆರಳಿನಷ್ಟು ದಪ್ಪವಾಗುತ್ತದೆ.
ಕೋಶ : ಬಲಿತ ಕೀಡೆಯು ಬೆಳೆದ ನಂತರ ಮಣ್ಣಿನಲ್ಲಿ ಸೇರಿ ಕೋಶಾವಸ್ಥೆಯನ್ನು ತಲುಪುತ್ತದೆ.
ಪ್ರೌಢ ಪತಂಗ : ಮುಂದಿನ ರೆಕ್ಕೆ ಗಾಢ ಕಪ್ಪು ಬಣ್ಣ ಹೊಂದಿದ್ದು ಹಿಂದಿನ ರೆಕ್ಕೆಯು ಹಳದಿಯಾಗಿರುತ್ತದೆ. ತಲೆಯ ಮೇಲೆ ತಲೆಬುರುಡೆಯಂತಹ ಚಿನ್ಹೆ ಇರುವುದರಿಂದ ಇದನ್ನು “ಡೆತ್ ಹೆಡೆಡ್ ಮಾತ್ ”ಅಂತಲೂ ಕರೆಯುತ್ತಾರೆ.
ಹಾನಿಯ ಲಕ್ಷಣಗಳು : ಮೊಟ್ಟೆಯಿಂದ ಹೊರಬಂದ ಕೀಡೆಯು ಸಣ್ಣದಾಗಿ ಎಲೆಗಳನ್ನು ತಿನ್ನಲು ಆರಂಭಿಸುತ್ತದೆ. ನಂತರದ ಅವಧಿಯಲ್ಲಿ ಸಸ್ಯದ ಎಲ್ಲ ಎಲೆಗಳನ್ನು ತಿಂದು ಕೇವಲ ಕಾಂಡ ಮಾತ್ರ ಉಳಿಸುತ್ತದೆ. ಸಸ್ಯದ ಎಲೆಯ ಭಾಗವನ್ನು ತಿಂದು ತೇಗುವುದರಿಂದ ಸಸ್ಯದಲ್ಲಿ ದ್ಯುತಿಸಂಶ್ಲೇಷಣೆ ಕ್ರಿಯೆಯು ಕಡಿಮೆಯಾಗಿ ಇಳುವರಿ ಕುಂಠಿತ ಗೊಳ್ಳುತ್ತದೆ. ಕೀಡೆಯು ರಭಸವಾಗಿ ತಿನ್ನುವುದರಿಂದ ಬೇಗನೆ ಗಿಡದ ಎಲೆಗಳು ಖಾಲಿಯಾಗಿ ಗಿಡಗಳ ಬರಿ ಕಾಂಡ ಉಳಿಯುತ್ತದೆ.
ಸಾಮಾನ್ಯವಾಗಿ ಈ ಕೀಟದ ಭಾದೆಯನ್ನು ಕಂಡು ಹಿಡಿಯುವುದು ಸ್ವಲ್ಪ ಕಷ್ಟ ಏಕೆಂದರೆ ಕೀಡೆಯು ಹಸಿರು ಬಣ್ಣದಾಗಿದ್ದು ಗಿಡಗಳ ಬಣ್ಣ ಹಸಿರಾಗಿರುವುದರಿಂದ ಕಾಣುವುದು ಕಷ್ಟ. ಆದರೆ ಇದು ತಿಂದ ನಂತರ ದಪ್ಪ ದಪ್ಪ ಹಿಕ್ಕೆಗಳನ್ನು ಎಲೆಗಳ ಮೇಲೆ ಮತ್ತು ಮಣ್ಣಿನಲ್ಲಿ ಕಾಣಸಿಗುತ್ತದೆ. ಈ ಹಿಕ್ಕೆಗಳ (ಮಲ) ಆಧಾರದ ಮೇಲೆ ಕೀಟವನ್ನು ಪತ್ತೆ ಹಚ್ಚಬಹುದು.
ಸಮಗ್ರ ನಿರ್ವಹಣೆ : ಕೋಶಾವಸ್ಥೆಯು ಮಣ್ಣಿನಲ್ಲಿ ಆಗುವುರಿಂದ ಬೇಸಿಗೆಯ ಮಾಗಿ ಉಳುಮೆ ಅತೀಸೂಕ್ತ. ಇದರಿಂದ ಮಣ್ಣಿನಲ್ಲಿರುವ ಕೋಶವು ಬಿಸಿಲಿಗೆ ಬಂದು ಹಕ್ಕಿಗಳಿಗೆ ಆಹಾರವಾಗುತ್ತದೆ. ನೈಸರ್ಗಿಕವಾಗಿ ಈ ಕೀಟದ ಮೊಟ್ಟೆ ಮೇಲೆ ಟ್ರೈಕೊಗ್ರಾಮಾ ಎಂಬ ಪರತಂತ್ರ ಜೀವಿಗಳ ಹಾವಳಿ ಹೆಚ್ಚಿರುವುದರಿಂದ ಮೊಟ್ಟೆಯು ಮರಿ ಒಡೆಯುವುದಿಲ್ಲ, ಈ ಕೀಟದಿಂದ ಪರಾವಲಂಬನೆಗೊಳಗಾದ ಮೊಟ್ಟೆಯು ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಕೀಡೆಯು ದಪ್ಪವಾಗಿದ್ದರಿಂದ ಕೀಡೆಯ ಮೇಲೆ “ಟೆಕಾನಿಡ್” ಎಂಬ ನೊಣ ಜಾತಿಯು ಪರತಂತ್ರ ಜೀವಿಯು ಮೊಟ್ಟೆಯಿಟ್ಟ ಕೀಡೆಯ ಒಳಗಡೆಯಿಂದ ತಿಂದು ಕೀಡೆಯನ್ನು ಸಾಯಿಸುತ್ತದೆ.
ದೊಡ್ಡ ಹುಳುಗಳನ್ನು ಕೈಯಿಂದ ಆರಿಸಿ ನಾಶ ಪಡಿಸುವುದು. ಕೀಟನಾಶಕಗಳಾದ ಪ್ರೊಫೆನೊಫಾಸ್ ೫೦ ಇ.ಸಿ. ೨ ಮಿ. ಲೀ. ಪ್ರತಿ ಲೀಟರ್ ನೀರಿಗೆ ಅಥವಾ ಮೊನೊಕ್ರೊಟೊಫಾಸ್ ೩೬ ಎಸ್.ಎಲ್. ೧ ಮಿ. ಲೀ. ಪ್ರತಿ ಲೀಟರ್ ನೀರಿನಲ್ಲಿ ಸೇರಿಸಿ ಸಿಂಪಡಿಸಬೇಕು.
ಚಿತ್ರಗಳ ವಿವರ: ೧. ಆರೋಗ್ಯವಂತ ಗಿಡ ೨. ರೋಗಪೀಡಿತ ಸಸ್ಯ ೩. ಕೀಟದ ಮೊಟ್ಟೆ ೪. ಗಿಡವನ್ನು ತಿನ್ನುತ್ತಿರುವ ಕೀಡೆ ೫. ಟ್ರೈಕೊಗ್ರಾಮಾ ಪರತಂತ್ರ ಜೀವಿಯ ಜೀವನ ಚಕ್ರ
ಮಾಹಿತಿ ಮತ್ತು ಚಿತ್ರಗಳು: ಅನೀಲದೇವ ದಶವಂತ,ಕೃಷಿ ಕೀಟಶಾಸ್ತ್ರವಿಭಾಗ, ಕೃಷಿ ವಿಶ್ವವಿದ್ಯಾಲಯ, ಧಾರವಾಡ