ಎಷ್ಟು ಗಳಿಸಿದರೇನು?
ಕವನ
ಇವನು ಭೃಷ್ಟ ಎನುವನಾತ
ಅವನು ಭೃಷ್ಟ ಎನುವನೀತ
ಯಾರ ಮಾತು ಸತ್ಯವೆಂದು ಅರಿಯದಾಗಿದೆ
ಇಬ್ಬರಲ್ಲು ಹುಳುಕು ಇದ್ದು
ಹೊಡೆದುದೆಲ್ಲ ಜನರ ದುಡ್ಡು
ಯಾರು ಎಷ್ಟು ಹೊಡೆದರೆಂದು ಅರಿಯಬೇಕಿದೆ
ಮುಷ್ಟಿಯೊಳಗೆ ಗುಟ್ಟನಿಟ್ಟು
ವೈರಿಕಡೆಗೆ ನೋಟ ನೆಟ್ಟು
ತನ್ನ ಹೊಲಸು ಕಾರ್ಯಕೆಲ್ಲ ಮಾಡಿ ಸೇತುವೆ
ಇವನಲುಂಟು ಅವನ ಗುಟ್ಟು
ಅವನಲುಂಟು ಇವನ ಜುಟ್ಟು
ಇಬ್ಬರೂನು ಬಿಟ್ಟುಕೊಡರು ಬರಿದೆ ನಾಟಕ
ದೊರೆವ ಹಣದ ಗಂಟಿಗಾಗಿ
ಇವರ ಹಿಂದೆ ಜನರು ಹೋಗಿ
ಅರ್ಥವಿರದ ಮಾತಿಗೆಲ್ಲ ಕರದ ತಾಡನ
ಎಷ್ಟು ಮಾಡಿಕೊಂಡರೇನು
ಕಡೆಗೆ ಜೊತೆಗೆ ಬರುವುದೇನು
ಅರಿಯಬೇಕು ಜಗದಿ ಮೂರು ದಿನದ ಬಾಳುವೆ||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್