ಎಷ್ಟು ಚಂದ ಆ ದಿನಗಳು...!
ಕೇವಲ 70 ವರ್ಷಗಳ ಹಿಂದೆ ಹುಬ್ಬಳ್ಳಿ- ಗದಗ- ವಿಜಾಪೂರ- ಗೋಕಾಕ- ಕೊಪ್ಪಳ- ರಾಯಚೂರ- ಬಾಗಲಕೋಟೆಗಳಲ್ಲಿ ಹಿತ್ತಲ ಇಲ್ಲದ ಮನೆಗೆ ಕನ್ಯಾ ಕೊಡುತ್ತಿರಲಿಲ್ಲ !
“ಹಿತ್ತಲ ಇಲ್ಲದಾಕಿಗೆ ಹಿರೇತನ ಇಲ್ಲಾ”…ಎಂಬ ಗಾದೆಮಾತೇ ಇತ್ತು. ಕಾರಣ : ಹೆಂಗಳೆಯರಿಗೆ ಹಿತ್ತಲು ತಲೆಹಿಕ್ಕಿಕೊಳ್ಳಲು, ವಗಿಯಾಣ ಮಾಡಲು, ಪಾತ್ರೆ ತೊಳೆಯಲು, ಹಿತ್ತಲ ಕಟ್ಟೆಮೇಲೆ ಕುಂತು ಹರಟೆ ಹೊಡೆಯಲು, ಬೆಳದಿಂಗಳ ಊಟ ಮಾಡಲು,
ಕರಬೇವು-
ಕೋತಂಬ್ರಿ-
ನುಗ್ಗಿ-
ಹೀರೆ-
ಬೆಂಡಿ-
ಚವಳಿ-
ಕುಂಬಳ-
ಬದ್ನಿ-
ತುಪ್ರಿ-
ಚಳ್ಳವರಿ-
ನಿಂಬಿ-
ಹಾಗಲ ಹಾಗೂ ಗಾವಟಿ ಔಷಧಿಸಸ್ಯಗಳನ್ನು ಬೆಳೆಯಲು ಗುಪ್ತಕಾಶಿ ಆಗಿತ್ತು. ಹಾಂ….
ಆಗ ಈ ಹಿತ್ತಲದಲ್ಲಿ ಎಮ್ಮಿ ಆಕಳುಗಳಿಗೂ ಪಡವು ಇತ್ತು. ಕುಳ್ಳಿನ ಕುಳಬಾನ ಇತ್ತು. ಇವುಗಳ ಜೊತೆಗೆ ಸಾವಿರಾರು ಗುಬ್ಬಿಗಳಿಗೆ, ಪಾರಿವಾಳಗಳಿಗೆ, ಗೊರವಂಕಗಳಿಗೆ ನೆಲೆಯಿತ್ತು. ಬೆಳವ, ಕವುಜುಗ, ಗೀಜಗ, ಕಬ್ಬಕ್ಕಿಗಳ ಹಕ್ಕಲವಾಗಿತ್ತು.
ಹಿತ್ತಲ ಬಾಗಿಲು ತೆರೆದರೆ ಸಾಕು ರತ್ನಪಕ್ಷಿ ನಮ್ಮನ್ನು ಸ್ವಾಗತಿಸುತ್ತಿತ್ತು. ಕೋಗಿಲೆ ನಮ್ಮ ಮಾವಿನ ಮರದ ಕೋಮಲೆಯಾಗಿತ್ತು. ದೇವರ ಪೂಜೆಗೆ ಗುಳಬುಟ್ಟಿತುಂಬ ಬಸವನ ಪಾದ, ಜಾಜಿ, ಮಲ್ಲಿಗೆ, ಚಂಡು ಹೂಗಳು ಸಿಗುತ್ತಿದ್ದವು. ಹಿತ್ತಲಲ್ಲಿ ಬೆಳೆದ ಕುಂಬಳ ಬಳ್ಳಿಯ ದೊಡ್ಡ ಹಳದೀ ಹೂಗಳನ್ನು ನಮ್ಮ ಅವ್ವ-ಚಿಗವ್ವರು ಮುಂಚೀಬಾಗಿಲ ಹೊಸ್ತಿಲುಗಳಿಗೆ ಏರಿಸಿದರೆ ಆ ಬಾಗಿಲು ಮಂಗಳಗೌರಿಯಾಗಿ ಕಂಗೊಳಿಸುತ್ತಿತ್ತು. ಹಾಂಹಾಂ….
ಈ ಹೇರಳ ಹೂಗಳ ರಾಶಿಗೆ ಆಕರ್ಷಿತವಾಗಿ ಬರುತ್ತಿದ್ದ ಸಾವಿರ- ಸಾವಿರ ಜಾತಿಯ ಬಣ್ಣದ ಪಾತರಗಿತ್ತಿಗಳಿಗೆ ಲೆಕ್ಕವೇ ಇಲ್ಲ. ಅಂದು ಇಡೀ ಹುಬ್ಬಳ್ಳಿ- ಧಾರವಾಡಗಳು ಅಸಂಖ್ಯ ಕೋಟಿ ಪಾತರಗಿತ್ತಿಗಳಿಗೆ ಕ್ಯಾಪಿಟಲ್ ಸಿಟಿ ಆಗಿದ್ದವು. ಆದ್ದರಿಂದಲೇ ಅವುಗಳನ್ನು ಕಂಡು ದಂಗುದಕ್ಕಾದ ಬೇಂದ್ರೆಯವರು..
”ಪಾತರಗಿತ್ತಿ ಪಕ್ಕಾ ನೋಡೀದೇನ ಅಕ್ಕಾ…. ಹಸಿರುಹಚ್ಚಿ ಚುಚ್ಚಿ…. ಮೇಲೆ ಅರಿಷಿಣ ಹಚ್ಚಿ…. ಹೂವಿಗೆ ಹೋಗತಾವ…. ಗಲ್ಲಾ ತಿವೀತಾವ….” ಅಂತ ಕವನ ಬರೆದದ್ದು ! ಬೇಂದ್ರೆಯವರ ಆ ಕವನದ ಹಿಂದೆ ಶತಮಾನದ ಹಿಂದಿನ ಅದ್ಭುತ ಕನಸಿನ ಪ್ರಕೃತಿಯೇ ಕೈಜೋಡಿಸಿ ನಿಂತಿದೆ ! ಅದಕ್ಕೆ ನಮ್ಮ ಹಿತ್ತಲು ಪ್ರತ್ಯಕ್ಷ ಸಾಕ್ಷಿಯಾಗಿತ್ತು ! ನಾವು ಹುಡುಗರು ವಿಶ್ವ ಸುಂದರಿ ಬೋರಂಗೀ ಹುಳಗಳನ್ನು ಹಿಡಿದು ಆಡಿಸಿ ಮತ್ತೆ ಆಕಾಶಕ್ಕೆ ಹಾರಿಬಿಡುತ್ತಿದ್ದೆವು. ಇನ್ನೂ ಕೇಳ್ರಿ….
ಅಂದು ಪ್ರಕೃತಿ ನಮ್ಮ ವಿಕೃತಿ ಆಗಿರಲಿಲ್ಲ. ನಮ್ಮ ಮನೆತುಂಬ ತರತರದ ಸುಂದರ ಹಾವುಗಳಿದ್ದವು. ನಮ್ಮ ಹಂಚಿನ ಚಪ್ಪರದಲ್ಲಿ ಅವು ತಮ್ಮ ಮಕ್ಕಳು- ಮೊಮ್ಮಕ್ಕಳು- ಗೆಳೆಯ- ಗೆಳತಿಯರೊಂದಿಗೆ ಚಕ್ಕಂದ ಆಡುತ್ತಿದ್ದವು. ಅವುಗಳ ಮಟ್ಟಿಗೆ ಅವು ! ನಮ್ಮಮಟ್ಟಿಗೆ ನಾವು ! ಹಾವು- ಚೇಳು- ಹಲ್ಲಿ- ಹಾವ್ರಾಣಿ- ಜೇಡ- ಹುಗ್ಗಿಜೇನು- ಕಣಜೀರಿಗಿ- ವನಕೀಮಂಡ- ಕುಂಬಾರ ಹುಳ- ಮುಂಗಲಿ- ಡೊಣ್ಣಿಕಾಟ ಇವು ನಮ್ಮೊಂದಿಗೆ ಲಿವಿಂಗ್ ಟುಗೇದರ್ ಸಿಸ್ಟಿಂದಲ್ಲಿ ಚಂದವಾಗಿದ್ದವು !
ಅಬ್ಬಬ್ಬಾ…. ಹಾವು ಸಂಭಾವಿತ ! ಚೇಳು ಚಾಪ್ಟರ್ ! ಚೇಳು ಕಚ್ಚದ ಮನುಷ್ಯ ಮನುಷ್ಯನೇ ಅಲ್ಲ. ಚೇಳು ಕಚ್ಚಿದರೆ ಮುಂದೆ ಹತ್ತು ವರ್ಷ ರೋಗಬರುವದಿಲ್ಲ ಅಂತ ಅಜ್ಜ ಹೇಳುತ್ತಿದ್ದ.
ನಮ್ಮ ಹಿತ್ತಲಿನ ಕುಳಬಾನ, ವಡಕಟ್ಟಿಗಿ ರಾಶಿಯಲ್ಲಿ ಚೇಳುಗಳು ಆಯ್ತಾರ ಸಂತಿ ಮಾಡುತ್ತಿದ್ದವು. ಅವುಗಳಲ್ಲಿ ಕೆಂಪು ಚೇಳು ಡೇಂಜರಸ್. ಹುಂಚೀಕಪ್ಪದ ಬಣ್ಣದ ಚೇಳು ಮೀಡಿಯಂ ಡೇಂಜರ್. ರಾಕ್ಷಸ ಗಾತ್ರದ ಕಬ್ಬಿಣ ಚೇಳು ನೋಡಲು ಭಯ, ಆದರೆ ಜೀವಕ್ಕೆ ಅಭಯ ! ನಮ್ಮ ಓಣಿಯಲ್ಲಿ ಚೇಳಿನ ಮಂತ್ರ ಬಲ್ಲ ಅಜ್ಜ- ಕಾಕಾ -ದೊಡ್ಡಪ್ಪಗಳಿದ್ದರು. ಚೇಳು ಕಚ್ಚಿದ ಕೂಡಲೆ ನಾವು ಅವರ ಹತ್ತರ ಓಡಿ ಹೋಗುತ್ತಿದ್ದೆವು. ಅವರದೇ ವಿಚಿತ್ರವಾದ ಗ್ರಾಮೀಣ ಔಷಧಿ ಪದ್ಧತಿ, ಮಂತ್ರ ಪದ್ಧತಿ ಇತ್ತು. ಉದಾಹರಣೆಗೆ ಚೇಳು ನಮ್ಮ ಬಲಗಾಲಿಗೆ ಕಚ್ಚಿದರೆ; ಬಿಳಿ ಉಳ್ಳಾಗಡ್ಡಿ ಜಜ್ಜಿ , ನಮ್ಮ ಎಡ ಕಿವಿಯಲ್ಲಿ ಅದರ ರಸ ಹಿಂಡುತ್ತಿದ್ದರು ; ಹಾಗೂ…. ಎಡಕಾಲಿಗೆ ಕಚ್ಚಿದರೆ ಬಲಗಿವಿಯಲ್ಲಿ ಆ ರಸ ಹಿಂಡುತ್ತಿದ್ದರು. ಮೇಲೆ ಚೇಳಿನ ಮಂತ್ರ ಗುಪ್ತವಾಗಿ ಪಟಿಸುತ್ತಿದ್ದರು. ಆಗ ಚೇಳಿನ ವಿಷ ಜರ್ರನೆ ಜಾರಿ ಹೋಗಿ ಮತ್ತೆ ಮರುದಿನ ನಾವು ಗುಂಡಾ- ಗಜಗಾ- ಬಗರಿ- ವಟ್ಟಪ್ಪಾ- ಚಿಣಿಫಣಿ ಆಡುತ್ತಿದ್ದೆವು.
ನಮ್ಮ ಹಳೆಯ ಕಾಲದ ಮನೆಗಳ ಕೂಡುಕುಟುಂಬ ಜೀವನದ ಸೊಗಸನ್ನು ಅರ್ಥ ಮಾಡಿಕೊಂಡವರಿಗೆ ಮಾತ್ರ ನಮ್ಮ ಜಾನಪದ ಸಾಹಿತ್ಯದ ಸೊಗಡು ಅರ್ಥವಾಗಬಲ್ಲದು. ಬದುಕಿನ ಬಣ್ಣಗಳಿಗೆ ಹತ್ತಿರವಾಗಿ ಉತ್ತರ ಕಂಡುಕೊಳ್ಳುವ ಪ್ರಯತ್ನವೇ ನಮ್ಮ ಜನಪದೀಯ ಹಾಡುಗಬ್ಬ ! ನೆನಪಾಯ್ತು ! ಪ್ರತಿಯೊಂದು ಮನೆಯ ಹಿತ್ತಲದಲ್ಲಿಯೂ ಕಂಪಲ್‌ಸರಿಯಾಗಿ ಒಂದು ಆಳ ತಗ್ಗಿನ ಗುಂಡಿಯಲ್ಲಿ ರಸಗೊಬ್ಬರದ ತಿಪ್ಪಿ ಇದ್ದೇ ಇರುತ್ತಿತ್ತು. ಪ್ಲಾಸ್ಟಿಕ್ ಪಿಶಾಚಿ ಇನ್ನೂ ಅವತಾರ ತಾಳದ ಆರೋಗ್ಯಪೂರ್ಣ ಕಾಲ ಅದು.
ಹೀಗಾಗಿ ಆ ಕಾಲದಲ್ಲಿ ತಿಪ್ಪಿಗೆ ಸಮಾಜದಲ್ಲಿ ತುಂಬಾ ಗೌರವ ಇತ್ತು. ಶೂನ್ಯಸಂಪಾದನೆಯಲ್ಲಿ ಮರುಳಶಂಕರದೇವ ಶರಣ ಮೂಡಿಬಂದದ್ದೇ ಈ ತಿಪ್ಪಿಯಲ್ಲಿ. ಆಗ ಅನೇಕರ ಹೆಸರೇ “ತಿಪ್ಪವ್ವ”, “ತಿಪ್ಪಣ್ಣ”, “ತಿಪ್ಪಣ್ಣಗೌಡ” ಅಂತ ಇತ್ತು ! ಈಗ ಪರಭಾಷೆಗಳ ಟ್ರಿಂಟ್ರಾಂ ಹೆಸರುಗಳ ಆಕ್ರಮಣದಲ್ಲಿ ನಮ್ಮ ಹುಬ್ಬಳ್ಳಿಯ “ತಿಪ್ಪವ್ವ”, “ಹುಚ್ಚಯ್ಯ”, “ಫಕೀರಪ್ಪ”, “ದ್ಯಾಮವ್ವ”, “ಮಾಗುಂಡವ್ವ”, “ಕರೆವ್ವ”, “ಕಲ್ಲಪ್ಪ” ,”ಕಂಟೆಪ್ಪ” ಮೂಲೆಗುಂಪಾದವು ! ತಿಪ್ಪವ್ವನ ಬದಲು ಡಿಂಪಲ್ ಬಂದಳು ! ಹುಚ್ಚವ್ವನ ಬದಲು ಸಿಂಪಲ್ ಬಂದಳು ! ಮುಂದೆ ನಮ್ಮ ಸೊಸೆ ಯಾವ ಹೆಸರು ತರುವಳೋ ಅವಳಿಗೇ ಗೊತ್ತು !
ಹಿತ್ತಲಿಲ್ಲದ ಮನೆ ಬತ್ತಲೆ…. ಅಂತ ನಂಬಿದ ಬೆಳುವಲ ಸೀಮೆಯ ಭಾವನೆ ಇತ್ತು ! “ಹಿತ್ತಲಿಲ್ಲದಾಕಿಗೆ ಹಿರೇತನ ಇಲ್ಲ…. ಬಚ್ಚಲಿಲ್ಲದಾಕಿಗೆ ಬಹುಮಾನ ಇಲ್ಲ….” ಎಂಬ ಗಾದೆ ಮಾತು ೭೦ ವರ್ಷಗಳ ಹಿಂದೆ ಹುಬ್ಬಳ್ಳಿಯಲ್ಲಿ ಚಾಲ್ತಿಇತ್ತು. ಜನಪದ ಸಾಹಿತ್ಯಕ್ಕೂ ಬದುಕಿಗೂ ಬಿಚ್ಚದ ಬೆಸುಗೆಯ ಕಾಲ ಅದು.
ನಮ್ಮ ಬೆವರು- ಬಿಸಿಲು- ಮನೆ- ಮನ- ದನ- ಹೊಲ- ದಂದಕ್ಕಿ- ಹಿತ್ತಲ- ಹಕ್ಕಲಗಳ ಜೀವನವೇ ಜೀವಂತ ಚಿತ್ರಕಾವ್ಯವಾಗಿತ್ತು. ಈಗ ೩೦-೪೦ ಸೈಜಿನ ಗಿಡ್ಡೂಪುಠಾಣಿ ಮನೆಗಳಲ್ಲಿ ಹಿತ್ತಲೂ ಇಲ್ಲ; ಪತ್ತಲೂ ಇಲ್ಲ. ಎಲ್ಲಾ ಸಿಮೆಂಟಿನ ಕತ್ತಲೋ ಕತ್ತಲಾ ! ಬನ್ನಿ….
ನಮ್ಮ ಪ್ರೀತಿಯ ಬೆಂಗ್ಳೂರ ಮಹಾನಗರದಲ್ಲಿ ವೃಕ್ಷ ಪ್ರೇಮಿಗಳಿಗಿಂತ ವೃಕ್ಷವೈರಿಗಳೇ ಜಾಸ್ತಿ. ಇಲ್ಲಿ ಗೂಗೆ ವಾಸಮಾಡಿದ ಮರ ಖತಂ. ವಾಸ್ತು ದೋಷ ಇದ್ದರಂತೂ ಢಂ. ಕೆಲವರಿಗೆ ಇರುವೆಗಳಿರುವ ಮರಗಳೆಂದರೆ ಭೀತಿ. ತಮ್ಮ ಮನೆಯ ಚಂದ ಪೇಂಟಿಂಗ್ ಮಾಡಿದ ಗೋಡೆ ಕಾಣುವದಿಲ್ಲ ಅಂತ ಮರಗಳ ಮಾರಣ ಹೋಮ. ಅವೂ ಢಮಾರ್ .
ಮನೆಮುಂದೆ ತಪ್ಪಲುಕಸ ಬೀಳುತ್ತದೆ ಅಂತ ಭಯದಿಂದ ಹಚ್ಚಿದ ಮರಗಳನ್ನು ಕಿತ್ತುಹಾಕಿದ ಮಧುರ ಮಾನಿನಿಯರೂ ಉಂಟು. ಈ ಮಾನಿನಿಯರು ಮರಗಳ ಹಾನಿನಿಯರು ! ಅವರಿಗೆ ಕಸದ ಚಿಂತೆ. ಮನೆಮುಂದೆ ಬಳ್ಳಿಗಳನ್ನು ಬೆಳೆಸಿದರೆ ಹಾವುಗಳು ಬಂದು ಸೇರುತ್ತವೆಯೆಂಬ ಭೀತಿ ! ಹಾಂ… ಹಾಂ…. ಎಪ್ಪತ್ತು ವರ್ಷಗಳ ಹಿಂದೆ….
ನಮ್ಮ ಹಿತ್ತಲಗಳಲ್ಲಿ ದೆವ್ವಗಳಿಗೂ ಕೊರತೆ ಇರಲಿಲ್ಲ. ನಮ್ಮ ಹಿತ್ತಲುಗಳು ಸತ್ತವರ ನೈಟ್ ಕ್ಲಬ್ ಆಗಿದ್ದವು. ಆ ದೆವ್ವಗಳು ಕಾಲಲ್ಲಿ ದೆವ್ವನ ಗೆರಿ ಇದ್ದವರಿಗೆ ಪ್ರತ್ಯಕ್ಷ ಕಂಡು, ಮಾತಾಡಿ ಹೋಗುತ್ತಿದ್ದವು. ಕಾರಣ ಆಗ ಇನ್ನೂ ಝಗಝಗಿಸುವ ಲೈಟುಗಳು ಬಂದಿರಲಿಲ್ಲ. ಚಿಮಣಿಯ ಕುಡ್ಡ ದೀಪದಲ್ಲಿ ಈ ದೆವ್ವಗಳು ಪಸಂದಾಗಿ ಬಾಳೆ ಮಾಡುತ್ತಿದ್ದವು ! ಅಯ್ಯೋ…. ! ಲೈಟುಗಳು ಬಂದು …ಪಾಪ…. ಈ ದೆವ್ವಗಳು ಓಡಿ ಹೋದವು ! ಮೊಬೈಲುಗಳು ಬಂದು ಪ್ರೇಮಪತ್ರಗಳು ಕಾಣೆಯಾದವು !
-ಪ್ರೊ. ಜಿ. ಎಚ್. ಹನ್ನೆರಡುಮಠ, ಧಾರವಾಡ
ಸಾಂದರ್ಭಿಕ ಚಿತ್ರ ಕೃಪೆ: ಇಂಟರ್ನೆಟ್ ತಾಣ