ಎಷ್ಟು ಬೇಕೋ ಅಷ್ಟು

ಎಷ್ಟು ಬೇಕೋ ಅಷ್ಟು

ಬದುಕಿನ ಅದೆಷ್ಟೊ ಜಂಜಾಟ, ಒದ್ದಾಟಗಳಲ್ಲಿ ಎದುರಿಸುವ ಅಥವಾ ನಿಭಾಯಿಸಬೇಕಾದ ಒಂದು ಪ್ರಮುಖವಾದ ತೊಡಕೆಂದರೆ 'ಎಷ್ಟು ಬೇಕೊ ಅಷ್ಟು' ಎನ್ನುವ ಮಿತಿಯನ್ನು ಗುರುತಿಸಿ ಆ ಮಿತಿಯಳತೆಯಲ್ಲೆ ವ್ಯವಹರಿಸುವ ಛಾತಿ, ಜಾಣ್ಮೆಯನ್ನು ಪ್ರದರ್ಶಿಸುವುದು. ಬದುಕಿನ ಯಾವುದೆ ವಿಷಯ ತೆಗೆದುಕೊಂಡರು ಎಲ್ಲವು ಒಂದು ಸರಿಯಾದ ಮಿತಿಯ, ಅಳತೆಯ, ಪರಿಧಿಯ ಒಳಗಿರುವ ತನಕ ಎಲ್ಲವೂ ಚಂದವೆ; ಅಳತೆ ಮೀರಿದರೆ ಮಾತ್ರ ಆಪತ್ತು. ಆ ನಿಗದಿತ ಮಿತಿಗಿಂತ ಕಡಿಮೆಯಿದ್ದರು ಕಷ್ಟವೆ - ಅದನ್ನೆ ದೌರ್ಬಲ್ಯವಾಗಿ ಬಳಸಿಕೊಂಡು ದಬ್ಬಾಳಿಕೆ ನಡೆಸುವವರ ಅಡಿಯಾಳಾಗುವ ಪರಿಸ್ಥಿತಿಗೆ ಸಮವಾಗಿಬಿಡುತ್ತದೆ. ಮೀತಿ ಮೀರಿ ಅತಿಯಾದರೆ ಅದೇ ನಮ್ಮನ್ನಾಳುವ ಪ್ರಭುವಾಗಿ ಅಲ್ಲಸಲ್ಲದ ಕಾರ್ಯಕ್ಕೆ ಒತ್ತಾಸೆಯಾಗಿ ಕಾಡುವ ದೈತ್ಯ ಶಕ್ತಿಯಾಗಿಬಿಡುತ್ತದೆ. ಅದು ಕ್ರೀಡೆಗಳಲ್ಲಿನ ಆಸಕ್ತಿಯಾಗಲಿ, ಓದುವ ಹುಚ್ಚು ಹಂಬಲವಾಗಲಿ, ಕುಡಿತದ ವ್ಯಸನವಾಗಲಿ, ಬಂಧುಬಳಗ ನೆಂಟರ ವ್ಯಾಮೋಹವಾಗಲಿ, ಸಂಸಾರದ ಮೋಹಪಾಶಗಳಡಿ ಸಿಕ್ಕ ವ್ಯಾಮೋಹವಾಗಲಿ, ಲೌಕಿಕ ಇಹದ ಇಷ್ಟಾಯಿಷ್ಟಗಳಾಗಲಿ, ಅಲೌಕಿಕ ಪರದ ಮುಕ್ತಿಯಾಚನೆಯ ತೆವಲಾಗಲಿ - ಎಲ್ಲವು ಮಿತಿಯ ಪರಿಧಿಯೊಳಗಿರುವ ತನಕವಷ್ಟೆ ಸಹನೀಯವಾಗುತ್ತವೆ. ಆ ಪರಿಧಿ ದಾಟಿದರೆ ಹುಚ್ಚಾಟವೆಂದು ಹಣೆಪಟ್ಟಿ ಹಚ್ಚುವಷ್ಟೆ ಸಹಜವಾಗಿ, ಪರಿಧಿ ದಾಟದ ಅಥವಾ ತಲುಪದ ಹಂತವನ್ನು ನಿಷ್ಪ್ರಯೋಜಕ ನಿರಾಸಕ್ತಿಗೆ ಸಮೀಕರಿಸಿಬಿಡುವುದು ಸಾಮಾನ್ಯವಾಗಿ ಕಾಣುವ ಅಂಶ.

ಆದರೆ ನೈಜದಲ್ಲಿ ಆ ಸರಿಯಾದ ಮಿತಿ ಯಾವುದೆಂದು ಗುರುತಿಸುವುದು ಅಷ್ಟು ಸುಲಭವಲ್ಲ. ಯಾರಿಗೆ ಯಾವುದರ ಮೇಲೆ ತೀವ್ರ ಆಸಕ್ತಿ ಇರುವುದೊ ಆ ವಸ್ತು, ಹವ್ಯಾಸ ಅಥವಾ ಪ್ರವೃತ್ತಿ ಯಾವತ್ತೂ ಅತಿಯೆಂದು ತೋರುವುದಿಲ್ಲ. ಆದರೆ ಮಿತಿಯನ್ನು ಗುರುತಿಸಲಾಗದ ದೌರ್ಬಲ್ಯ ಅಂತಹವರನ್ನು ಎಷ್ಟೊ ಬಾರಿ ಬೇಡದ ಸಂಕಟಕ್ಕೆ ದೂಡುವುದು ಉಂಟು. ಕೆಲವು ಬಂಧುಗಳ, ಗೆಳೆಯರ ಜತೆಗಿನ ನಂಟು, ಸಖ್ಯ ಇದಕ್ಕೊಂದು ಉದಾಹರಣೆ ಎನ್ನಬಹುದು. ಮನುಷ್ಯ ಸಂಘ ಜೀವಿಯಾದ ಕಾರಣ ಬಂಧು ಬಳಗ ಸ್ನೇಹಿತರ ಜತೆಗಿನ ಒಡನಾಟ ಅತ್ಯವಶ್ಯ. ಆದರೆ ಹಾಗೆ ನಂಟಿನ, ಸ್ನೇಹದ ನೆಪ ಹಿಡಿದು ಬರುವ ಅದೆಷ್ಟೊ ಸಾಂಗತ್ಯಗಳ ಹಿಂದೆ ಅಡಗಿರಬಹುದಾದ ಹುನ್ನಾರಗಳ, ಸಂಚುಗಳ ಅಷ್ಟೇಕೆ ಧನಾತ್ಮಕ ಆಶಯಗಳ ಸುಳಿವೂ ಇರುವುದಿಲ್ಲ ಈ ಬಂಧದಲ್ಲಿ ಸಿಲುಕುವ ಜನರಿಗೆ. ಎಷ್ಟೊ ಬಾರಿ ತೀರಾ ಆಳಕ್ಕಿಳಿದು, ಹಿಂದಿರುಗಲಾಗದಷ್ಟು ದೂರ ಹೋದ ಮೇಲೆ ಅದರ ತಥ್ಯಾತಥ್ಯತೆಗಳ ಅರಿವಾದರೂ ಅದಾಗಲೆ ತಡವಾಗಿ ಹೋಗಿರುತ್ತದೆ. ಆ ಹುಸಿ ಪ್ರಭಾವದಲ್ಲೊ, ದಾಕ್ಷಿಣ್ಯದ ಸುಳಿಯಲ್ಲೊ ಸಿಲುಕಿ ಬೇಡವೆನಿಸಿದರೂ ಬಿಡಲಾಗದ ಅನಿವಾರ್ಯಕ್ಕೆ ಸಿಕ್ಕಿಕೊಂಡುಬಿಟ್ಟಿರುತ್ತದೆ ಆ ನಂಟಿನ ಸಾಂಗತ್ಯ. ಆ ಹೊತ್ತಿನಲ್ಲಿ ದೂರ ಸರಿಯಬೇಕೆಂದರೂ ಸುಲಭವಲ್ಲ - ಕೆಸರು ರಾಡಿಯೆಬ್ಬಿಸದೆ ನುಣುಚಿಕೊಳ್ಳಲು, ಕಳಚಿಕೊಳ್ಳಲು ಆಗದ ಆಳದಲ್ಲಿ ನಿಂತಂತಹ ಸನ್ನಿವೇಶ. ಸಾಕಷ್ಟು ತರಚು ಪರಚು ಗಾಯಗಳಿಲ್ಲದೆ ತಪ್ಪಿಸಿಕೊಂಡು ಬರಲೆ ಆಗದ ದುಸ್ಥಿತಿ. 

ಇದೆಲ್ಲಾ ಆಲೋಚಿಸಿದರೆ ಪ್ರತಿಯೊಂದರಲ್ಲೂ ಅದರಲ್ಲೂ ಭಾವನಾತ್ಮಕವಾದ ಬಾಂಧವ್ಯ, ನಂಟು, ಸ್ನೇಹಗಳಲ್ಲಿ ಸೂಕ್ತ ಮಿತಿಯನ್ನು ಮೊದಲೆ ಗುರ್ತಿಸಿ,  ಸಾಧ್ಯವಿರುವಷ್ಟು ದೂರ ಮತ್ತು ಸಾಕೆನಿಸುವಷ್ಟು ಹತ್ತಿರವಿರುವುದೆ ಉತ್ತಮ ವಿಧಾನವೆನಿಸುತ್ತದೆ. ಈ 'ಸರಿಸೂಕ್ತ ನಡುದೂರ' ವನ್ನು ಗುರುತಿಸಿ ಅಳವಡಿಸಿಕೊಳ್ಳುವುದೆ ನಿಜವಾದ ಪಂಥ. ಬಹುಶಃ ಆ ಸರಿದೂರದ ನಿರಂತರ ಶೋಧನೆಯೆ ಜೀವನದ ಹುಡುಕಾಟವಾಗಿಬಿಡುತ್ತದೇನೊ? ಅದೆಂತೆ ಇದ್ದರೂ 'ಎಷ್ಟು ಬೇಕೊ ಅಷ್ಟು' ಸೂತ್ರವನ್ನು ಅಳವಡಿಸಿಕೊಂಡವರದು ಡಿಫೆನ್ಸಿವ್ ಆದರೂ ಹೆಚ್ಚು ಸುರಕ್ಷಿತ ವಿಧಾನ ಎನ್ನಲು ಅಡ್ಡಿಯೇನಿಲ್ಲ. ಆ 'ಎಷ್ಟು ಬೇಕೊ ಅಷ್ಟರ' ಒಂದು ಪ್ರತಿನಿಧಿತ ಇಣುಕು ನೋಟ ಈ ಕವನದಲ್ಲಿ ಬಿಂಬಿತ. 

ಎಷ್ಟು ಬೇಕೋ ಅಷ್ಟು...
____________________

ಯಾಕೀ ಬಂಧುಗಳಾಗರು 
ಬರಿ ಸಂಬಂಧಗಳು ?
ನೈಜ ಭಾವ ಬಂಧಗಳು
ನಿರೀಕ್ಷೆ ಮೀರಿದ ಕಕ್ಷೆಗಳು ||

ಬೆನ್ನಟ್ಟದೆ ನಿಗೂಢ ತಂತ್ರ
ಇರಿಸಿಕೊಳದಾಸೆ ಕೊಸರು
ನಿಮ್ಮವ ನಮ್ಮವ ಹೆಮ್ಮೆ
ತಂತಮ್ಮತನಗಳ ಸೊಗಡು ||

ಕರೆದಿಕ್ಕುವರೂಟ ಚಿರೋಟಿ
ಮಾತು ಮಲ್ಲಿಗೆ ಸಿಹಿಪಾಕ
ಆತ್ಮೀಯತೆ ಮೀಟೆ ಕರುಳು
ಪ್ರಸ್ತಾಪವಾಗೊ ಉರುಳು ||

ಕಷ್ಟಸುಖ ಹಂಚಿಕೊಂಡೆ
ಹಗುರಾಗದಲ್ಲಾ ಹುನ್ನಾರ
ಆಯಾಮಗಳದೆಷ್ಟೊ ಯಾಚಿಸೆ
ಬಲೆಗೆ ಬಿದ್ದರದೆ ಗಾಳ ||

ಎಗರಾಡುವ ಬಯಕೆ ಚಿತ್ತ
ಪೊರಕೆ ನೆಲ ಬಿರುಕಿಸದಂತೆ
ಸರಿದೂರವಿಡುತಿರೆ ಸೂಕ್ತ
ಎಷ್ಟು ಬೇಕೊ ಅಷ್ಟಿರೆ ಸಮಸ್ತ ||

------------------------------------
ನಾಗೇಶ ಮೈಸೂರು

Comments

Submitted by kavinagaraj Tue, 01/13/2015 - 20:31

'ಎಷ್ಟು ಬೇಕೋ ಅಷ್ಟು' ಇದ್ದಿದ್ದರೆ ಮತ್ತು ಹೆಚ್ಚು ಬೇಡವೆನಿಸಿದ್ದರೆ ಲೋಕ ಸ್ವರ್ಗವಾಗುತ್ತಿತ್ತು. ಆದರೆ, ಜಗತ್ತು ನಡೆಯಬೇಕಲ್ಲಾ! ಚೆನ್ನಾಗಿದೆ, ನಾಗೇಶರೇ.

Submitted by nageshamysore Wed, 01/14/2015 - 02:57

In reply to by kavinagaraj

ಧನ್ಯವಾದಗಳು ಕವಿಗಳೆ. ಮಿತಿಯ ಅಳತೆ ಗೊತ್ತಾದರು ಅದರ ಪರಿಮಿತಿಯೊಳಗಿರಲು ಬಿಡದಂತೆ, ಲೋಕದ ಮಾಯೆ ಆವರಿಸಿಕೊಂಡಿರುವುದಂತೆ. ಹೀಗಾಗಿ ಸ್ವರ್ಗದಂತಿರುವುದನ್ನು ಕೆಣಕಿ ಕೆಡಿಸಿ ಕಂಗೆಡುವುದು ಮರ್ಕಟ ಮನದ ದೌರ್ಬಲ್ಯ. ಮಿತಿಯರಿತು ಬಾಳಿದರೆ ಗೆದ್ದ, ಅರಿಯದೆ ಹೆಣಗಿದರೆ ಪ್ರಾರಬ್ದ!