ಎಷ್ಟು ಮಾಡಿದರೂ ಜೀವನ ಅಂದ್ರೆ ಇಷ್ಟೇ ಅಲ್ವೆ?!
ಜೀವನ ಅಂದ್ರೆ ಹೇಗಿರುತ್ತೆ ಆಶ್ಚರ್ಯವಾಗಬಹುದು… ಯಾರೋ ಒಬ್ಬರು ಬರೆದಿರೋದು. ಹೆಸರಿಲ್ಲದೇ ಹಂಚಿಕೊಂಡು ಬಂದ ಈ ಕಥೆ ನಮ್ಮೆಲ್ಲರ ಬದುಕಿಗೆ ನೈಜವಾಗಿದೆ. ಮೂಲ ಲೇಖಕರಿಗೆ ಕೃತಜ್ಞತೆಯನ್ನು ಹೇಳುತ್ತಾ ಈ ಕಥೆಯನ್ನು ಓದಿ...
ನಾ ಸತ್ತ ಸುದ್ದಿ ಎಲ್ಲ ಕಡೆ ಹರಡಿತು. ಸತ್ತ ಐದೇ ನಿಮಿಷದಲ್ಲಿ ನನ್ನ ಶವ ಇನ್ನೂ ಆಸ್ಪತ್ರೆಯಿಂದ ಮನೆಗೆ ಬಂದಿರಲಿಲ್ಲ. ಆಗಲೇ ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ಮತ್ತು ವಾಟ್ಸ್ ಅಪ್ ಗಳಲ್ಲಿ ನನ್ನ ಫೋಟೊ ಹಾಕಿ RIP ಎಂದು ಬರೆದಿದ್ದರು. ಫೇಸ್ ಬುಕ್ ನಲ್ಲಿ ನನ್ನ ಸಾವಿನ ಸುದ್ದಿಗೆ ಪೊಸ್ಟ್ ಮಾಡಿದ ಒಂದು ಗಂಟೆಯಲ್ಲಿ ನೂರಾರು ಲೈಕ್ ಗಳು. ಈ ಲೈಕ್ ಗಳನ್ನು ನೋಡಿದಾಗ ನನಗೆ ಅನ್ನಿಸಿದ್ದು , ನನ್ನ ಸಾವು ಇವರಿಗೆಲ್ಲ ಇಷ್ಟವಾಗಿದೆ ಅಂತ.
ಒಬ್ಬರಿಗೂ ನನ್ನ ಬಗ್ಗೆ ಬರೆಯಬೇಕು ಅನಿಸಲಿಲ್ಲವೇ ?. ನನ್ನ ಅರವತ್ತು ವರ್ಷಗಳ ಜೀವನದಲ್ಲಿ ನಾನು ಏನೂ ಯಾರಿಗೂ ಸಹಾಯನೇ ಮಾಡಿಲ್ಲವೆ?. ಸತ್ತಾಗಲಾದರೂ ನನ್ನ ಸಹಾಯವನ್ನು ಸ್ಮರಣೆ ಮಾಡಿಕೊಳ್ಳುವರು ಇಲ್ಲವಾಯಿತಲ್ಲ , ಈಜನ್ಮ ವ್ಯರ್ಥ ಎಂದು ಕೊಂಡೆ. ಮನೆಯ ಮುಂದಿನ ಅಂಗಳದಲ್ಲಿ ತಂದಿರಿಸಿದರು ನನ್ನ ಶವವನ್ನು ವಾಕಿಂಗ್ ಗೆ ಹೋದ ಐದಾರು ಜನ ಒಮ್ಮೆ ಬಂದು ಹೋದರು. ಎಲ್ಲರಿಗೂ ವಿಷಯ ತಿಳಿಸಲು ಹೆಂಡತಿ ತನ್ನ ಮೊಬೈಲ್ನಲಿದ್ದ ನಂಬರ್ ಗಳಿಗೆ ಫೋನು ಮಾಡಿದಳು.
ಗೆಳೆಯನೊಬ್ಬ ಬಂದು ಮುಂದೆ ನಿಂತು ಹರಿಶ್ಚಂದ್ರ ಘಾಟ್ಗೆ ವಿಷಯ ತಿಳಿಸಿದ. ಅವನು ಅರ್ಧ ಗಂಟೆಯಲ್ಲಿ ಬರುವುದಾಗಿ ಹೇಳಿದ. ಬೇಡ, ಜನ ಬರುವುವರು ಇದ್ದಾರೆ ಮಧಾಹ್ನ ಒಂದು ಘಂಟೆ ಸುಮಾರಿಗೆ ಬಂದರೆ ಸಾಕು ಎಂದ, ಆಯಿತು ಎಂದು ಫೋನು ಇಟ್ಟ. ಅಕ್ಕಪಕ್ಕದವರು ಬಂದರು. ಮದುವೆ ಕಾಲದಲ್ಲಿ ಕೊರಳಿಗೆ ಬಿದ್ದಿದ್ದ ಹೂವಿನ ಹಾರ ಮತ್ತೇ ಕೊರಳಿಗೆ ಬಿದ್ದದ್ದು ಈಗಲೇ. ಮಧ್ಯಾಹ್ನ ಒಂದು ಗಂಟೆ ಹೊತ್ತಿಗೆ ಮನೆ ಮುಂದೆ ಜನ ಸೇರಿದರು. ಎಲ್ಲರೂ ಅಳ ತೊಡಗಿದರು. ಡಯಾಬಿಟಿಸ್ ಇತ್ತು, ಆದರೆ ಎಲ್ಲವನ್ನು ತಿನ್ನುತ್ತಾ ಇದ್ದ, ಕಂಟ್ರೊಲ್ ಮಾಡಲೇ ಇಲ್ಲ ಎಂದು ಹೇಳಿ ಹೇಳಿ ಅತ್ತರು.
ಎಲ್ಲರ ಅಳುವಿನ ನಡುವೆ ಶವವನ್ನು ವ್ಯಾನಿನಲ್ಲಿ ಇಡಲಾಯಿತು. ವ್ಯಾನ್ ಮನೆ ದಾಟಿತು. ಅಳುವವರು ತಮ್ಮ ಅಳುವನ್ನು ನಿಲ್ಲಿಸಿ ಸ್ನಾನ ಮಾಡಲು ಹೋದರು. ಪಕ್ಕದ ಮನೆಯವರು ಉಪ್ಪಿಟ್ಟು, ಕಾಫಿ ಮಾಡಿಕೊಂಡು ಬಂದರು. ಹಸಿದ ಹೊಟ್ಟೆಗೆ ಉಪ್ಪಿಟ್ಟು ಕಾಫಿ ಬಿದ್ದ ಮೇಲೆ ತಣ್ಣಗಾಯಿತು. ಮನೆಯಲ್ಲಿ ಅಳುವು ತಣ್ಣಾಗಾಗಿತ್ತು. ಶವ ಸಂಸ್ಕಾರ ಮಾಡಿ ಬಂದ ಮಗ ಮೊದಲು ಮಾಡಿದ ಕೆಲಸವೆಂದರೆ ನನ್ಮ ಬ್ಯಾಂಕ್ ಪಾಸ್ ಪುಸ್ತಕ ಮತ್ತು ಬಾಂಡ್ ಗಳ ಪರಿಶೀಲನೆ.
ನನ್ನ ಅತ್ತೆ ಬಂದು ಮುಂದಿನ ಕಾರ್ಯಗಳ ಬಗ್ಗೆ ಮಾತನಾಡಿದರು. ಮನೆಯಲ್ಲಿ ದೀಪ ಹಚ್ಚಿಟ್ಟು ಮೊದಲನೆಯ ದಿನವೂ ಕಳೆದು ಹೋಯಿತು. ಎರಡನೇಯ ದಿನಕ್ಕೆ ಮನೆಯಲ್ಲಿದ್ದ ಕೆಲವರು ಕೆಲಸದ ನೆಪವೊಡ್ಡಿ ಹತ್ತನೆಯ ದಿನ ಬರುವುದಾಗಿ ಹೇಳಿ ಹೊರಟರು. ಅತ್ತೆಯೇ ಅಡುಗೆ ಮನೆ ಜವಾಬ್ದಾರಿ ಹೊತ್ತು ಮೈಲಿಗೆ ಯಲ್ಲಿದ್ದ ಎಲ್ಲರಿಗೂ ಅನ್ನ ಸಾರು ಚಟ್ನಿ ಮಾಡಿ ಹಾಕಿದರು. ಮಗ ಬ್ಯಾಂಕಿಗೆ ಅಡ್ಡಾಡಿ ಕೆಲವು ಪತ್ರಗಳನ್ನು ತನ್ನ ಅಮ್ಮನ ಮುಂದೆ ಹಿಡಿದು ಸಹಿ ಮಾಡಿಸಿಕೊಂಡ.ಎಷ್ಟು ಬರುತ್ತೆ ಮಗನನ್ನು ಅಮ್ಮ ಕೇಳಿದಳು.
ತನ್ನ ಹೆಂಡತಿ ಮುಖ ನೋಡಿದ. ಅವನ ಹೆಂಡತಿಯೇ ತನ್ನ ಅತ್ತೆಗೆ ಇಪ್ಪತ್ತು ಲಕ್ಷ ಅತ್ತೆ ಎಂದಳು. ಅಷ್ಟಕ್ಕೇ ನನ್ನ ಹೆಂಡತಿ ಮುಖ ಅರಳಿತು, ನನ್ನ ಪೆನ್ಷನ್ ಎಂದು ಮೆಲ್ಲಗೆ ಕೇಳಿದಳು. ಇಪ್ಪತ್ತೆರಡು ಸಾವಿರ ಬರುತ್ತೆ ಎಂದು ಸೊಸೆನೇ ಹೇಳಿದಳು. ಅಪ್ಪನ ದುಡ್ಡಲ್ಲಿ ನನಗೆ ಪಾಲು ಬೇಕು ಎಂದು ಮಧ್ಯೆ ಬಂದು ಕುಳಿತಳು ಮಗಳು. ಕೊಡ್ತೀನಿ ಎಂದಳು ಅವಳ ಅಮ್ಮ. ಅಮ್ಮನ ಮುಖ ಮುಖ ನೋಡಿದರು ಮಗ ಸೊಸೆ. ಅವಳಿಗೂ ಕೊಡೋದು ನ್ಯಾಯ ಕಣೊ ಎಂದಳು ಅಮ್ಮ. ಒಂದೆರಡು ಲಕ್ಷ ಕೋಡೊಣ ಬಿಡಿ ಎಂದಳು ಸೊಸೆ. ಯಾರಿಗೆ ಬೇಕು ಎರಡು ಲಕ್ಷ ನೀವೇ ಇಟ್ಟು ಕೊಳ್ಳಿ ಎಂದಳು ಮಗಳು. ಕೊಡ್ತಾರೆ ಬಿಡಮ್ಮ ಸಮಾಧಾನ ಪಡಿಸಿದಳು ಅವಳಮ್ಮ. ನೀವು ಏನೂ ನನಗೆ ಭಿಕ್ಷೆ ಕೊಡ್ತಾ ಇಲ್ಲ, ಅವರು ನನಗೂ ಅಪ್ಪನೇ, ಸಮಪಾಲು ಬೇಕು ಇಲ್ಲಾಂದ್ರೆ ಕೋರ್ಟಿಗೆ ಹೋಗ್ತಿನಿ ಎಂದು ಆವಾಜ್ ಹಾಕಿದಳು ಮಗಳು. ದೊಡ್ಡವರು ಮಧ್ಯೆ ಬಂದರು. ಐದು ಲಕ್ಷಕ್ಕೆ ಮಗಳನ್ನು ಸಮಾಧಾನ ಮಾಡಿದರು.
ದುಡ್ಡಿನ ವ್ಯವಹಾರದಲ್ಲಿ ಎರಡು ಮೂರು ದಿನ ಕಳೆದು ಹೋದವು. ಯಾರೂ ಸತ್ತ ನನ್ನನ್ನು ಜ್ಞಾಪಿಸಿಕೊಳ್ಳಲೇ ಇಲ್ಲ. ಮಗ ಬ್ಯಾಂಕಿಗೆ ಹೋಗಿ ತಂದಿದ್ದು ನನ್ನ ನಲ್ವತ್ತು ಲಕ್ಷದ ಎಂಭತ್ತು ಸಾವಿರ ರೂಪಾಯಿಗಳು. ಬಂದವನೆ ಹೆಂಡತಿಗೆ ಇಪ್ಪತ್ತು ಲಕ್ಷ ಕೊಟ್ಟು , ಉಳಿದ ಇಪ್ಪತ್ತು ಲಕ್ಷ ಎಲ್ಲರ ಮುಂದೆ ಹಿಡಿದ. ಮಗಳು ಐದು ಲಕ್ಷ ತಕ್ಕೊಂಡು ತನ್ನ ಬ್ಯಾಗ್ ನಲ್ಲಿಟ್ಟುಕೊಂಡಳು. ಉಳಿದ ಹದಿನೈದು ಲಕ್ಷವನ್ನು ಅತ್ತೆ ಹೆಸರಿನಲ್ಲಿ ಬಾಂಡ್ ಮಾಡೋಣ ಎಂಬ ಸಲಹೆಯನ್ನು ಸೊಸೆ ಕೊಟ್ಟಳು. ನೀನು ಐದು ಲಕ್ಷ ತಗೊ ಎಂದು ಸೊಸೆಯ ಕೈಗೆ ಕೊಟ್ಟಳು ಅತ್ತೆ. ಬೇಡ ನನಗೆ ಬೇಡ ಎಂದ ಸೊಸೆಗೆ ಒತ್ತಾಯ ಮಾಡಿ ಕೈಗಿಟ್ಟಳು. ಹತ್ತು ಲಕ್ಷ ರೂಪಾಯಿಗಳ ಬಾಂಡನ್ನು ಅಮ್ಮನ ಮುಂದೆ ತಂದು ಕೊಟ್ಟ ಮಗ. ಅದನ್ನು ಕಣ್ಣಿಗೆ ಒತ್ತಿಕೊಂಡು ಸಾಯೊ ಕಾಲದಲ್ಲಿ ನನ್ನ ಗಂಡ ಬಿಟ್ಟು ಹೋಗಿದ್ದು ಎಂದು ಕಣ್ಣೀರು ಹಾಕಿದಳು ಹೆಂಡತಿ.
ಏಳನೇಯ ದಿನ ಸ್ನೇಹಿತರೆಲ್ಲ ಸೇರಿ ಸಂತಾಪ ಸಭೆ ನಡೆಸಿದರು. ನನ್ನ ಫೋಟೋಗೆ ಹೂವಿನ ಹಾರ ಹಾಕಿ ತಮಗೆ ತಿಳಿದದ್ದನ್ನು ಮಾತಾಡಿ ಸಂತಾಪ ಸಭೆಯನ್ನು ಮುಗಿಸಿದರು. ಕೊನೆಗೆ ನನ್ನ ಹೆಸರಲ್ಲಿ ಸಮೋಸ ತಿಂದು, ಕಾಫಿ ಕುಡಿದು ಸಭೆಯನ್ನು ಮುಗಿಸಿದರು. ಹದಿಮೂರನೇಯ ದಿನದ ಎಲ್ಲಾ ಕಾರ್ಯ ಮುಗಿಸಿ, ಹದಿನಾಲ್ಕನೇಯ ದಿನ ಮಗಳು ಊರಿಗೆ ಹೊರಟು ನಿಂತಳು. ಮಗಳನ್ನು ಕಳುಹಿಸಿದ ಮರುದಿನ ಮಗ ಸೊಸೆ ಊರಿಗೆ ಹೋಗಲು ತಯಾರಾಗಿ ನಿಂತರು. ಇನ್ನೊಂದು ವಾರ ಇದ್ದು ಹೋಗಿ ಎಂದ ಅವರಮ್ಮನ ಮಾತಿಗೆ ಅಫೀಸಿನಲ್ಲಿ ಕೆಲಸ ಇದೆ , ರಜೆ ಇಲ್ಲ. ನಿನ್ನ ಮೊಮ್ಮಗನ ಶಾಲೆ ಬೇರೆ ಮತ್ತೆ ಬರುತ್ತೇವೆ ಎಂದು ಹೊರಟರು.
ಮನೇಲಿ ಹೆಂಡತಿ ಒಬ್ಬಳೆ. ಅಕ್ಕಪಕ್ಕದ ಮನೆ ಹುಡುಗರು ಬಂದು ಟಿ.ವಿ ಯಲ್ಲಿ ಕ್ರಿಕೆಟ್ ಮ್ಯಾಚ್ ಹಾಕಿದರು.ಅವರ ಜೊತೆ ಆ ಮ್ಯಾಚ್ ಗಳನ್ನು ನೋಡ್ತಾ ಕುಳಿತ್ತಿರುತ್ತಿದ್ದ ಹೆಂಡತಿ ಆಮೇಲೆ ಒಂದೊಂದೇ ಧಾರಾವಾಹಿಗಳಲ್ಲಿ ಮಗ್ನಳಾದಳು. ಬರುವ ಪೆನ್ಷನ್ ಹಣದಲ್ಲಿ ತನಗೆ ಇಷ್ಟವಾದನ್ನು ಮಾಡಿಕೊಂಡು, ಅಕ್ಕಪಕ್ಕದವರ ಜೊತೆ ಶಾಪಿಂಗ್, ಎಂದು ಸುತ್ತಾಡಿ ಸಮಯ ಕಳೆಯ ತೊಡಗಿದಳು.
ಮೂವತ್ತಾರು ವರ್ಷಗಳ ಕಾಲ ದುಡಿದು ನನಗೆ ಅಂತ ಏನನ್ನು ಬಯಸದೆ ಕೂಡಿಟ್ಟ ಹಣದಲ್ಲಿ ಎಲ್ಲರೂ ಸಂತೋಷ ಪಟ್ಟರು .ಆ ಸಂತೋಷದಲ್ಲಿ ನನ್ನನ್ನು ಸಂಪೂರ್ಣವಾಗಿ ಮರೆತು ಹೋದರು. ನಾನೊಬ್ಬ ಅವರ ಜೊತೆಗಿದ್ದೆ ಎಂಬುದು ಅವರ ಮನದಿಂದ ಬಹುದೂರ ಹೋಯಿತು. ನನ್ನ ಇರುವಿಕೆಗೆ ಸಾಕ್ಷಿಯಾಗಿ, ನನ್ನ ನಗು ಮುಖದ ಫೋಟೋ ಗೋಡೆಯ ಮೇಲೆ ಅನಾಥವಾಗಿ ನೇತಾಡುತ್ತಿತ್ತು. ಸತ್ತ ಹದಿಮೂರನೇಯ ದಿನ ಹಾಕಿದ ಹೂವಿನ ಹಾರ ವರ್ಷವಾದರೂ ಹಾಗೆ ಫೋಟೋಗೇ ಅಂಟಿ ಕೊಂಡಿತ್ತು.
ಬದುಕು ಅಂದ್ರೆ ಇಷ್ಟೇ. ಅರುವತ್ತು ವರ್ಷ ಬಾಳಿದರು ಆರು ನಿಮಿಷದಲ್ಲಿ ಮರೆತು ಹೋಗ್ತಾರೆ. ಏನುಮಾಡಿದರೂ, ಎಷ್ಟು ಮಾಡಿದರೂ ಜೀವನ ಅಂದ್ರೆ ಇಷ್ಟೇ ಅಲ್ವೆ?!
(ಸಂಗ್ರಹ) -ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ
ಚಿತ್ರ ಕೃಪೆ: ಇಂಟರ್ನೆಟ್ ತಾಣ