ಎಷ್ಟೊಂದ ಚೆಂದಿತ್ತು ನಂಬಾಲ್ಯ

ಎಷ್ಟೊಂದ ಚೆಂದಿತ್ತು ನಂಬಾಲ್ಯ

ಕವನ

ಮಣ್ಣಾಗ ಆಡ್ತಿದ್ವಿ

ಮುಳ್ಳಾಗ ತಿರಗತಿದ್ವಿ

ಬಿಸಲಾಗ ಸುತ್ತಾಡ್ತಿದ್ವಿ

ಉಣ್ಣೂದು ಮರಿತಿದ್ವಿ

ಆದ್ರೂ ಏನೂ ಆಗ್ತಿರ್ಲಿಲ್ಲ

ಎಲ್ರೂ ಚನ್ನಾಗಿರ್ತಿದ್ವಿ

  ಎಷ್ಟೊಂದು ಚೆಂದಿತ್ತು........

 

ಬಾವ್ಯಾಗ ಈಜಾಡ್ತಿದ್ವಿ

ಕೆಸರಾಗ ಉಳ್ಳಾಡ್ತಿದ್ವಿ

ಅಡವ್ಯಾಗ ಅಡ್ಡಾಡ್ತಿದ್ವಿ

ಸಿಕ್ಕಿದ್ದು ಬಾಯಾಡಸ್ತಿದ್ವಿ  ಆದ್ರೂ ಏನೂ ಆಗ್ತಿರ್ಲಿಲ್ಲ ಎಲ್ರೂ ಚನ್ನಾಗಿರ್ತಿದ್ವಿ

    ಎಷ್ಟೊಂದು ಚೆಂದಿತ್ತು..........

 

ಸಾಲೀಗಿ ಹೋಗ್ತಿದ್ವಿ

ಪಾಟಿ ಬಳಪ ಒಯ್ತಿದ್ವಿ

ಪಾಟಿಮ್ಯಾಲ ಬರೀತಿದ್ವಿ

ಬರ್ದಿದ್ದು ಉಗಳ್ಹಚ್ಚಿ ಒರಿಸ್ತಿದ್ವಿ

ಬಳಪಾ ಆಡ್ತದ್ವಿ

ಅದನ್ನ ತಿಂತದ್ವಿ

ಆದ್ರೂ ಏನೂ ಆಗ್ತಿರ್ಲಿಲ್ಲ

ಎಲ್ರೂ ಚನ್ನಾಗಿರ್ತಿದ್ವಿ

    ಎಷ್ಟೊಂದು ಚೆಂದಿತ್ತು..........

 

ಒಳಗ ಕಾಲ್ಹಾಕಿ

ಸೈಕಲ್ ಪೆಡಲ್ ತುಳಿತಿದ್ವಿ

ಎತ್ತಿನ ಗಾಡಿ ಜಿಗದ ಹತ್ತಿದ್ವಿ

ಎಮ್ಮಿ ಮ್ಯಾಲ ಕುಂದರ್ತಿದ್ವಿ

ಗಿಡದಾಗ ಜೋತಾಡ್ತಿದ್ವಿ

ಜೇನ ಬಿಡಸ್ತಿದ್ವಿ

ಹುಳಾ ಕಡಸ್ಕೊಳ್ತಿದ್ವಿ

ಆದ್ರೂ ಏನೂ ಆಗ್ತಿರ್ಲಿಲ್ಲ

ಎಲ್ರೂ ಚನ್ನಾಗಿರ್ತಿದ್ವಿ

    ಎಷ್ಟೊಂದು ಚೆಂದಿತ್ತು..........

 

ಜಾತಿ ಗೀತಿ ಮಾಡ್ತರ್ಲಿಲ್ಲ

ಹೆಣ್ಣು ಗಂಡು ಅಂತಿರ್ಲಿಲ್ಲ

ಗಂಡಾ ಹೆಂಡ್ತಿ ಆಗ್ತಿದ್ವಿ

ಸಂಸಾರ ಆಟ ಆಡ್ತಿದ್ವಿ

ಹಗಲಾ ರಾತ್ರಿ ಓಡಾಡ್ತಿದ್ವಿ

ಮನಿ ಮಠ ಮರೀತಿದ್ವಿ

ಆದ್ರೂ ಏನೂ ಆಗ್ತಿರ್ಲಿಲ್ಲ

ಎಲ್ರೂ ಚನ್ನಾಗಿರ್ತಿದ್ವಿ

    ಎಷ್ಟೊಂದು ಚೆಂದಿತ್ತು..........

 

ಮೊಬೈಲ್ ಕಂಪ್ಯೂಟರ್ ಬಂದಿರ್ಲಿಲ್ಲ

ರೇಡಿಯೋ ಮಾತ್ರ ಕೇಳ್ತಿದ್ವಿ

ಬೇಕ್ರಿ ತಿಂಡಿ ಗೊತ್ತಿರ್ಲಿಲ್ಲ

ಮುಟಗಿ ಥಾಲಿಪಟ್ಟಿ ಸವಿತಿದ್ವಿ

ಹಾಲು ಮಜ್ಗಿ ಕುಡಿತಿದ್ವಿ

ಉಂಡಾಡಿಯಾಗಿ ಅಲಿತಿದ್ವಿ

ಆದ್ರೂ ಏನೂ ಆಗ್ತಿರ್ಲಿಲ್ಲ ಎಲ್ರೂ ಚನ್ನಾಗಿರ್ತಿದ್ವಿ

    ಎಷ್ಟೊಂದು ಚೆಂದಿತ್ತು..........

 

ಹಿಂಗ ಹೇಳ್ತಾ ಹೋದ್ರ

ಮುಗಿಯಾಂಗಿಲ್ಲ ನಮ್ ಕತಿ

ಇರ್ಲಿಲ್ಲ ನಮಗ ಯಾವ ಬಂಧ

ಹಕ್ಕಿಯಂಗ ಹಾರಾಡ್ತಿದ್ವಿ

ನಮ್ಮನ್ನ ಕಾಳಜಿ ಮಾಡಾಕ

ಇರ್ಲಿಲ್ಲ ಪುರಸೊತ್ತ ಹಡದವ್ರೀಗಿ

ಆದ್ರೂ ಏನೂ ಆಗ್ತಿರ್ಲಿಲ್ಲ

ಎಲ್ರೂ ಚನ್ನಾಗಿರ್ತಿದ್ವಿ

    ಎಷ್ಟೊಂದು ಚೆಂದಿತ್ತು ನಂಬಾಲ್ಯ.

        .............

-(ಸಂಗ್ರಹ) ಬಸಯ್ಯ ಗ. ಮಳಿಮಠ

ರೂಪದರ್ಶಿ ಮಕ್ಕಳು: ಚಾಹಲ್, ಆರ್ಯನ್ ಮತ್ತು ಸ್ನೇಹಿತರು, ಕುಂಪಲ

ಚಿತ್ರ್