ಎಷ್ಟೋ - ಅಷ್ಟು
ಜಗತ್ತು ನಮ್ಮ ಸುತ್ತಮುತ್ತ ಅನಂತವಾಗಿ ಹರಡಿಕೊಂಡಿದೆ. ಬಹಳ ದೊಡ್ಡದು. ಮನುಷ್ಯನ ಬದುಕಿಗೆ ಏನು ಏನು ಬೇಕು? ಎಲ್ಲ ಇದೆ. ಅದನ್ನು ಅನುಭವಿಸಲು ಏನು ಬೇಕು? ಅದನ್ನು ನಿಸರ್ಗದಿಂದ ಪಡೆದುಕೊಂಡಿದ್ದೇವೆ. ಇದೊಂದು ದೇಹ, ಒಳಗೊಂದು ಮನಸ್ಸು. ಅದರ ಹಿಂದೆ ಅರಿವು, ಜ್ಞಾನ, ಚೇತನ ಇಂದ್ರಿಯಗಳು ಇವೆ. ಇವೆಲ್ಲ ನಿಸರ್ಗ ನೀಡಿದ ಕಾಣಿಕೆ. ಇವುಗಳ ಮೂಲಕ ಹೊರಗಿನ ಜಗತ್ತನ್ನು ಅನುಭವಿಸುತ್ತೇವೆ. ಇವು ಇಲ್ಲ, ಅನುಭವ ಇಲ್ಲ. ಯಾವ ಯಾವ ಇಂದ್ರಿಯಗಳು ಇದಾವೆ?. ಆಯಾ ಇಂದ್ರಿಯಗಳಿಗೆ ತಕ್ಕ ವಸ್ತು ಹೊರಗಡೆ ಇದೆ. ಈಗ ನನಗೆ ಎರಡು ಕಣ್ಣಿವೆ. ಆ ಕಣ್ಣಿಗೆ ಬೇಕಾದ ರೂಪ, ಬಣ್ಣ, ಗಾತ್ರ ಮತ್ತು ಆಕಾರ ಹೊರ ಜಗತ್ತಿನಲ್ಲಿ ಇದೆ. ನಮಗೆ ಎರಡು ಕಿವಿ ಇವೆ, ಹೊರಗೆ ಶಬ್ದ ಜಗತ್ತು ಇದೆ. ನಮಗೆ ನಾಲಿಗೆ ಇದೆ, ಹೊರಗೆ ಬಗೆ ಬಗೆಯ ಸವಿ ಸವಿಯಾದ ರುಚಿಗಳು ಇವೆ. ನಮಗೆ ಮೂಗಿದೆ, ಅನೇಕ ಬಗೆಯ ಸುವಾಸನೆ ಹೊರಗೆ ಇದೆ. ನಮ್ಮಲ್ಲಿ ಸ್ಪರ್ಶ ಇಂದ್ರಿಯ ಇದೆ, ಸ್ಪರ್ಶಿಸುವ ವಸ್ತು ಹೊರಗೆ ಇದೆ. ನಾವು ಯಾವುದನ್ನೇ ಅನುಭವಿಸಬೇಕಾದರೂ ಅದು ಹೊರಗೆ ಇದೆ. ಅನುಭವಿಸಲು ಬೇಕಾದ ಇಂದ್ರಿಯಗಳು ನಮ್ಮಲ್ಲಿವೆ. ನಿಸರ್ಗ ಅಷ್ಟು ಸುಂದರವಾಗಿ ನಮ್ಮನ್ನು ರೂಪಿಸಿದೆ. ನಾವು 100 ವರ್ಷ ಬದುಕುತ್ತೀವಿ ಅಂದಾಗ, ದೇಹ ಬದುಕಲು, ಮನಸ್ಸು ಸಂತೋಷ ಪಡಲು, ಏನೇನು ಬೇಕು ಅದೆಲ್ಲ ಜಗತ್ತಿನಲ್ಲಿ ಇವೆ. ಅದನ್ನು ನಾವು ಬಳಸಿಕೊಳ್ಳಬೇಕಾಗಿದೆ. ಹೇಗೆ ಬಳಸಬೇಕೆಂದರೆ? ನಮ್ಮ ಇಂದ್ರಿಯಗಳು ಅರಳಬೇಕು ಹಾಗೆ ಬಳಸಬೇಕು. ಏಕೆ?. ಅದರಿಂದ ನಮ್ಮ ಮನಸ್ಸು ಸಂತೋಷ ಅನುಭವಿಸುತ್ತದೆ, ಅದಕ್ಕೆ ನಾವೆಲ್ಲ ಕಷ್ಟ ಪಡುವುದು. ಏಕೆ ನೋಡೋದು?. ಏಕೆ ಕೇಳೋದು?. ಏಕೆ ಮಾಡೋದು?. ಏಕೆ?. ಸಂತೋಷಪಡುವುದಕ್ಕೆ ಅಲ್ಲವೇ. ಊಟ ಮಾಡುತ್ತೇವೆ ಏಕೆ?. ಸಂತೋಷ ಪಡುವುದಕ್ಕೆ. ಒಂದು ಕೆಲಸ ಮಾಡುತ್ತೇವೆ ಏಕೆ? ಅದರಿಂದ ಸಂತೋಷ ಆಗುತ್ತದೆ ಅದಕ್ಕೆ. ಈ ಸಂತೋಷಕ್ಕಾಗಿ ಇವುಗಳನ್ನೆಲ್ಲ ಬಳಸಬೇಕಾಗಿದೆ. ದೇವರು ಸುಂದರ ಅದ್ಭುತ ಜಗತ್ತನ್ನು ನಿರ್ಮಾಣ ಮಾಡಿ, ನಮ್ಮನ್ನು ಈ ಭೂಮಿ ಮೇಲೆ ಕಳುಹಿಸಿದ. ನೀವೇನು ಮಾಡಬೇಡ, ನಾನೇನು ಕೊಟ್ಟಿದ್ದೀನಿ ಅದನ್ನು ನೋಡಿ, ಕೇಳಿ ಆನಂದ ಪಡಿ ಅಂತ ಹೇಳಿದನು. ನಾವು ಅದಕ್ಕಾಗಿ ಬಂದವರು. ನಾವೇನು ನೀರು ತಯಾರು ಮಾಡಕ್ಕೆ ಬರುತ್ತದೆ ಏನು?. ನಮಗೆ ಮಣ್ಣು ತಯಾರು ಮಾಡಕ್ಕೆ ಬರುತ್ತದೆ ಏನು?. ಗಾಳಿ ತಯಾರು ಮಾಡಿ ಬೀಸುವಂಗೆ ಮಾಡಕ್ಕೆ ಆಗುತ್ತದೆಯೇ ?. ಇಲ್ಲ. ಗಾಳಿ ಇದೆ. ನೀರು ಇದೆ. ಮಣ್ಣು ಇದೆ. ಬೆಳಕು ಇದೆ. ಇವುಗಳನ್ನು ಬಳಸುವುದು ಅಷ್ಟೇ.
ಈಗಾಗಲೇ ಗಿಡ, ಮರ, ಪಕ್ಷಿ ಇದೆ. ನಮಗೆ ಯಾವುದು ಬೇಕೊ ಆ ಗಿಡ ಬೆಳೆಸಿ, ಅದರ ಫಲ ನಾವು ತಿಂದು, ನಿಸರ್ಗವನ್ನು ಸುಂದರ ಮಾಡಿದರೆ ಸಾಕು. ನಮ್ಮಿಂದ ನಿಸರ್ಗ ಬಹಳ ಬಯಸುವುದಿಲ್ಲ. ಅದು ಏನನ್ನು ಬಯಸುತ್ತದೆ?. ಅದು ಹೇಳುತ್ತದೆ. ನಾನು ಕೊಟ್ಟಿರುವುದನ್ನು ಅನುಭವಿಸು ಅಂತ.
ಒಂದು ಕಾಗೆ ಇತ್ತು. ಅದು ಗೂಡು ಕಟ್ಟುತ್ತದೆ. ನಿಮಗೆ ಗೊತ್ತಿದೆ. ಹೇಗೆಂದರೆ ಮುಳ್ಳು ಕಂಟಿ ತಂದು ಮಾಡುತ್ತದೆ. ಅದೇನು ಬಹಳ ಸುಂದರ ಇರುವುದಿಲ್ಲ. ಅದು ತನಗೆ ಏನು ಗೊತ್ತು?. ಅಷ್ಟು ಮಾಡುತ್ತದೆ. ಆ ಗೂಡಿನಲ್ಲಿ ಕೋಗಿಲೆ ಮೊಟ್ಟೆ ಇಡುತ್ತದೆ. ಕೋಗಿಲೆ ಗೂಡು ಕಟ್ಟುವುದಿಲ್ಲ. ಕೇವಲ ಹಾಡುತ್ತದೆ. ಕಾಗೆ ಹಾಡುವುದಿಲ್ಲ, ಗೂಡು ಕಟ್ಟುತ್ತದೆ. ಕಾಗೆ, ಕೋಗಿಲೆಯ ಮೊಟ್ಟೆಗೆ ಶಾಖ ಕೊಟ್ಟು, ಮರಿಯಾದ ಮೇಲೆ ಉಣಿಸಿ, ತಿನಿಸಿ, ದೊಡ್ಡದಾದ ಮೇಲೆ, ಗೂಡಿನಿಂದ ಹೊರ ಹಾಕುತ್ತದೆ. ಆಗ ಒಬ್ಬ ಬುದ್ಧಿವಂತ ಕಾಗೆಗೆ ಕೇಳಿದ, ಏನೋ ನಿನ್ನ ಬದುಕು ಅದೆಷ್ಟು ಹದಗೆಟ್ಟಿದೆ? ಕೆಟ್ಟ ಮೈ, ಕೆಟ್ಟ ಬಣ್ಣ, ಯಾರು ನೋಡಬಾರದು, ಯಾರು ಕೇಳಬಾರದು. ಮತ್ತೆ ನೀನು ಜಗತ್ತಿಗೆ ಬಂದು ಮಾಡಿದ್ದಾದರೂ ಏನು?. ಮುಳ್ಳಿನ ಕಂಟಿ ತಂದು ಮನೆ ಕಟ್ಟಿದ್ದು ಬಿಟ್ರೆ, ಇನ್ನೇನು ಮಾಡಿದ್ದಿ?. ಅಂದನು. ಆಗ ಕಾಗೆ ಹೇಳಿತು, ಮಹಾನುಭಾವ, ನಾನು ಏತಕ್ಕೆ ಬಂದಿದ್ದೇನೆ ? ಅದನ್ನು ಮಾಡುತ್ತಾ ಇದ್ದೇನೆ. ನಾನು ಬಂದಿದ್ದು ಗೂಡು ಕಟ್ಟಿ, ಕೋಗಿಲೆ ಮೊಟ್ಟೆಗೆ ಶಾಖ ಕೊಟ್ಟು, ಅದರ ಮರಿ ಜೋಪಾನ ಮಾಡೋದಿಕ್ಕೆ ಹಾಗೂ ನಿಮ್ಮ ಕೊಳೆಯನ್ನ ಸ್ವಚ್ಛ ಮಾಡೋದಿಕ್ಕೆ. ಇಲ್ಲದೆ ಇದ್ದರೆ ನಿಸರ್ಗ ಕೋಗಿಲೆ ಧ್ವನಿಯಿಂದ ತುಂಬಿ ಹೋಗುತ್ತಿತ್ತೇನು?. ಕೋಗಿಲೆ ಯಾಕೆ ಹಾಡುತ್ತದೆ ? ಅದರ ಚಿಂತೆ ಬಿಡಿಸಿದ್ದೇನೆ. ಅದರ ಮರಿ ಜೋಪಾನ ಮಾಡಿ ಹೊರ ಹಾಕಿದ್ದೀನಿ. ಅದು ಹಾಡ್ಕೋತ ಇರುತ್ತದೆ. ಅದು ಗೂಡು ಕಟ್ಟಿ, ಮರಿ ಸಾಕೋದಿಕ್ಕೆ ವೇಳೆ ವ್ಯಯ ಮಾಡಬಾರದು ಅಂತ, ಅದಕ್ಕೆ ನಾನು ಗೂಡು ಕಟ್ಟಿ, ಅದರ ಮರಿ ರಕ್ಷಿಸುತ್ತಾ ಇದ್ದೀನಿ. ನನ್ನ ಮೈ ಬಣ್ಣ ಕಪ್ಪು ಇರಬಹುದು. ನನಗೆ ಬಹಳ ಕಲೆ ಬರಲಿಕ್ಕೆ ಇಲ್ಲ. ನನ್ನ ದ್ವನಿ ಸರಿ ಇಲ್ಲ. ಅಂದ ಮಾತ್ರಕ್ಕೆ ನನ್ನ ಜೀವನ ವ್ಯರ್ಥ ಅಲ್ಲ. ನೀವು ಜಗತ್ತಿನಲ್ಲಿ ಮನಸ್ಸು ಇದ್ದರೆ ಅದ್ಭುತ ಮಾಡಬಹುದು. ನಾನು ರಕ್ಷಣೆ ಮಾಡದೇ ಇದ್ರೆ, ನಿಸರ್ಗದಲ್ಲಿ ಇಂತಹ ಮಧುರ ಧ್ವನಿ ಎಲ್ಲಿ ಕೇಳಿಸುತ್ತಿತ್ತು?. ನಿಸರ್ಗ ದೇವತೆ ನನಗೇನು ಕೊಟ್ಟಿತು?. ಅದನ್ನು ಬಳಸಿಕೊಂಡೆ. ಎಷ್ಟು ಚಂದ ಮಾಡಿದ್ದೀನಿ ಈ ಜಗತ್ತನ್ನು?. ಬುದ್ಧಿ ಬಳಸಿ, ಜಗತ್ತು ಸುಂದರ ಮಾಡುವುದು. ಗೂಡು ಕಟ್ಟೋದು ಬಿಟ್ಟರೆ, ಉಳಿದಿದ್ದು ಎಲ್ಲ ಇದೆ.
ಈ ಜಗತ್ತಿನಲ್ಲಿ ಮನುಷ್ಯನಾದ ನಮಗೆ ಕಾಗೆಗಿಂತ ಬುದ್ಧಿ ಚೆನ್ನಾಗಿದೆ. ಮನಸ್ಸು ಚೆನ್ನಾಗಿದೆ. ಶರೀರ ಚೆನ್ನಾಗಿದೆ. 10 ಬೆರಳುಗಳು ಇವೆ. ಏನು ಬೇಕಾದರೂ ಮಾಡಬಹುದು ಜಗತ್ತಿನಲ್ಲಿ. ಕಲ್ಲಿನಲ್ಲಿ ಮೂರ್ತಿ ತಯಾರು ಮಾಡುವಲ್ಲವು. ಆಕಾಶದಾಗೆ ಹಾರಬಲ್ಲೆವು, ಭೂಮಿ ಒಳಗೆ ಹೋಗಬಲ್ಲೆವು. ಬೆಟ್ಟವನ್ನು ಆಕ್ರಮಿಸಬಲ್ಲೆವು. ಇಷ್ಟೆಲ್ಲಾ ಶಕ್ತಿ ಸಾಮರ್ಥ್ಯ ನಮ್ಮಲ್ಲಿದ್ದು, ಬದುಕಲು ಬರಲಿಲ್ಲ ಅಂದರೆ ಹೇಗೆ?. ಕಾಗೆ, ಕೋಗಿಲೆ ಅಷ್ಟು ಚೆಂದಾಗಿ ಬದುಕುತ್ತವೆ. ಅವೇನು ಬಹಳ ಸಂಗ್ರಹ ಮಾಡುವುದಿಲ್ಲ. ಖಾತೆಯಲ್ಲಿ ಹಣ ಇಟ್ಟಿಲ್ಲ.
ಏನು ಹಾಡುತ್ತವೆ, ಹಾರುತ್ತವೆ ?. ಇದು ಕಲೆ. ನಿಸರ್ಗ ಹೇಳುತ್ತೆ, ನಾನು ಎಲ್ಲಾ ಮಾಡಿದ್ದೇನೆ. ಹೂ ತಯಾರಿಸಿದ್ದೇನೆ, ಒಂದಷ್ಟು ವಾಸನೆ ನೋಡು. ಹಣ್ಣು ತಯಾರು ಮಾಡಿದ್ದೇನೆ, ನೀನು ತಿಂದು ಇನ್ನೊಬ್ಬರಿಗೂ ಹಂಚು, ಸಂತೋಷಪಡು ಅಂತ ಕಳಿಸಿದ್ದೇನೆ ವಿನಹ ಬರೀ ಸಂಗ್ರಹ ಮಾಡೋದಿಕ್ಕೆ ಅಲ್ಲ. ಇರೋದನ್ನ ಚೆನ್ನಾಗಿ ಬಳಸಿಕೊಂಡು ಬದುಕುವುದು.
ಇಟಲಿ ದೇಶದಲ್ಲಿ ನಡೆದ ಘಟನೆ. ಒಬ್ಬ ಸಿರಿವಂತ. ಒಂದು ದೊಡ್ಡ ಮನೆ ನಿರ್ಮಿಸಿದ್ದ. ದೊಡ್ಡ ಕಾಂಪೌಂಡ್. ಆ ಕಾಂಪೌಂಡ್ ಮೂಲೆಯಲ್ಲಿ ಒಂದು ದೊಡ್ಡ ಬಂಡೆಕಲ್ಲು ಇತ್ತು. ಆ ಮನೆ ವಠಾರದಲ್ಲಿ ಶ್ರೀಮಂತ ಕುಳಿತಿದ್ದನು. ಆಗ ಒಬ್ಬ ಶಿಲ್ಪಿ, ಆ ದಾರಿಯಲ್ಲಿ ಹೋಗುತ್ತಾ ಇದ್ದನು. ಆ ಬಂಡೆ ನೋಡಿದನು. ಬಹಳ ಸಂತೋಷ ಆಯ್ತು. ಆಗ ಶಿಲ್ಪಿ, ಆ ಮಾಲೀಕನ ಹತ್ತಿರ ಬಂದು, ಒಂದು ಸಹಾಯ ಮಾಡಿ ಅಂದನು. ಏನು ಬೇಕು? ಅಂತ ಮಾಲೀಕ ಕೇಳಿದ. ಆಗ ಶಿಲ್ಪಿ ಹೇಳಿದ. ಏನಿಲ್ಲ ಆ ಮೂಲೆಯಲ್ಲಿ ಬಂಡೆ ಇದೆಯಲ್ಲ, ಅದನ್ನು ಕೊಡುತ್ತೀರಾ ಎಂದು ಕೇಳಿದನು. ಮಾಲೀಕ ಹೇಳಿದ ಅದೇನು ಕೆಲಸಕ್ಕೆ ಬರೋದಿಲ್ಲ ಅಂದ. ಆಗ ಶಿಲ್ಪಿ ಹೇಳಿದ, ನಿಮಗೆ ಕೆಲಸ ಬರುವುದಿಲ್ಲ, ಅದರಲ್ಲಿ ನಾನು ಏನೊ ಮಾಡಬಲ್ಲೆ, ಕೊಡಿ ಎಂದನು. ಶಿಲ್ಪಿಗೆ ಕಂಡಿದ್ದು ಬೇರೆ. ಮಾಲೀಕನಿಗೆ ಕಂಡಿದ್ದು ಬೇರೆ. ಮಾಲೀಕನಿಗೆ ಕೆಲಸಕ್ಕೆ ಬಾರದ ಕಲ್ಲು ಕಂಡಿತು. ಆಗ ಮಾಲಿಕ ಆ ಶಿಲ್ಪಿ ಎಲ್ಲಿಗೆ ಕೇಳಿದನೋ, ಅಲ್ಲಿಗೆ ಆ ಬಂಡೆ ಕಳುಹಿಸಿದನು. ಎಂತ ಜನ ಇದ್ದಾರೆ ಅಂದಮಾಲಿಕ ?. ಏನೂ ಉಪಯೋಗ ಇಲ್ಲದ ಕಲ್ಲು ಬೇಡ್ತಾನೆ. ಏನಾದರೂ ಬೇರೆ ಕೇಳಿದ್ರೆ ಕೊಡುತ್ತಿದ್ದೆ. ಎಂಥ ವಿಚಿತ್ರ ಮನುಷ್ಯ ಅಂದ?. ಆ ಶಿಲ್ಪಿ ಬೇರಾರು ಅಲ್ಲ ಮೈಕಲ್ ಎಂಜೆಲೊ ಎನ್ನುವ ಶ್ರೇಷ್ಠ ಶಿಲ್ಪಿ. ಅದು ಮಾಲೀಕನಿಗೆ ಗೊತ್ತಿರಲಿಲ್ಲ. ಕೆತ್ತನೆ ಶುರು ಮಾಡಿದ. ಕೆತ್ತನೆಯಲ್ಲಿ ಮಗ್ನನಾಗಿದ್ದನು. ದಿನಗಳು ಕಳೆದು ಹೋದವು. ಅಲ್ಲೊಬ್ಬ ಡೇವಿಡ್ ಎನ್ನುವ ಹುಡುಗ ಇದ್ದ. ಆತನ ಶಿಲ್ಪವನ್ನೇ ಕೆತ್ತಿದ್ದನು. ಅದ್ಭುತ ಸುಂದರ ರೂಪ ತಾಳಿತ್ತು.. ಆ ಬಳಿಕ ಪ್ರದರ್ಶನಕ್ಕೆ ಇಟ್ಟನು. ಇಡೀ ಇಟಲಿ ದೇಶದ ಜನ ಶಿಲ್ಪ ನೋಡಲು ಬರುತ್ತಿದ್ದರು. ಜಗತ್ತು ಕೊಂಡಾಡುತ್ತಿತ್ತು. ಆ ಬಳಿಕ ಆ ಶಿಲ್ಪ ನೋಡಲು ಆ ಮಾಲಿಕ ಹೋದನು. ನೋಡುತ್ತಾನೆ. ಅದೇ ಹುಡುಗ ಕುಳಿತಿದ್ದ. ಶಿಲ್ಪಿ, ಮಾಲೀಕನ ನೋಡಿ ಹೇಳಿದ, ನಿಮ್ಮ ಮನೆಯ ಮೂಲೆಯಲ್ಲಿ ಬಿದ್ದಿತಲ್ಲ, ಅದೇ ಕಲ್ಲು ಇದು ಅಂದನು. ನಿಮ್ಮ ದೃಷ್ಟಿಯಲ್ಲಿ ಕೆಲಸಕ್ಕೆ ಬಾರದ ಕಲ್ಲು. ಇಂದು ಇದರ ಬೆಲೆ ಕೋಟಿಗಟ್ಟಲೆ. ಬೆಲೆ ಇಲ್ಲದ ಕಲ್ಲಿನಲ್ಲಿ, ಕೋಟಿಗಟ್ಟಲೆ ಬೆಲೆ ಬಾಳುವ ಮೂರ್ತಿ ಕೆತ್ತಿದ್ದನು. ಆ ಮೂರ್ತಿ ಈಗಲೂ ನೋಡಿದರೆ ಕಣ್ಣು ಮಿಟುಗಿಸಿದಂತೆ, ತುಟಿ ಚಲಿಸಿದಂತೆ ಭಾಸವಾಗುತ್ತದೆ. ಇದನ್ನು ಮಾಡಿದ್ದು ಇದೇ 10 ಬೆರಳುಗಳು. ಮನುಷ್ಯ ತನ್ನ ಕೈ ಬುದ್ಧಿ ಮನಸ್ಸು ಬಳಸಿದರೆ, ಕಲ್ಲಿನಲ್ಲಿ ಸೌಂದರ್ಯ ಮೂಡಿಸಬಹುದು.
ಅದೇ ರೀತಿ ಇನ್ನೊಬ್ಬ ಮನುಷ್ಯ ಇದ್ದಾನೆ. ಇದೇ ಕೈಯಲ್ಲಿ ಕಲ್ಲು ತೆಗೆದುಕೊಂಡು ಇಂತಹ ಸುಂದರ ಮೂರ್ತಿಯನ್ನೇ ಹಾಳು ಮಾಡುತ್ತಾನೆ. ಇಲ್ಲಿ ಮೂರು ಜನ. ಮೈಕಲ್ ಎಂಜೆಲೊ, ಮಾಲೀಕ ಮತ್ತು ಹಾಳು ಮಾಡುವವ. ಇದರಲ್ಲಿ ಸಂತೋಷ ಪಡುವವ ಮೈಕಲ್ ಎಂಜೆಲೊ. ಹೃದಯವಂತರು ಸಂತೋಷ ಪಡುತ್ತಾರೆ. ಹೃದಯ ಇಲ್ಲದವರು ನಾಶ ಮಾಡುತ್ತಾರೆ. ಜಗತ್ತು ಅದ್ಬುತ ಇದೆ. ಮನುಷ್ಯ ಜಾಣ ಇದ್ದಾನೆ. ಇರುವಲ್ಲೇ ಸ್ವರ್ಗ ಇಲ್ಲದಿದ್ದರೆ, ಇರುವಲ್ಲೇ ನರಕವಾಗುತ್ತಿದೆ. ನಾಶ ಮಾಡಿದರೆ ನರಕ. ಮನುಷ್ಯ ವಿಚಾರ ಮಾಡಬೇಕು. ಏನು ಮಾಡಿದರೆ ಜೀವನ ಸುಂದರ ಆಗುತ್ತಿದೆ ಅಂತ. ಜಗತ್ತು ಸುಂದರ ಇದೆ. ನೋಡೋ ಕಣ್ಣು ಸುಂದರ ಇರಬೇಕಾಗುತ್ತದೆ. ಜಗತ್ತು ಅದ್ಬುತ ಇದೆ. ಕೇಳೋ ಕಿವಿ ಚೆನ್ನಾಗಿರಬೇಕು, ಮನಸ್ಸು ಸುಂದರ ಇರಬೇಕು. ಜೀವಿಗಳನ್ನು, ಜನರನ್ನು ಪ್ರೀತಿಸುವವರಾಗಿದ್ದರೆ ಕೊರತೆ ಏನದೆ ?. ಸ್ವರ್ಗ ನರಕ ಬೇರಿಲ್ಲ , ಇಲ್ಲೇ ಇದೆ. ನಾವು ಒಳ್ಳೆಯ ಮನುಷ್ಯನಿಂದ ಇದ್ದರೆ ಸ್ವರ್ಗ. ಮನಸ್ಸು ಕೆಟ್ಟಿದ್ದರೆ ನರಕವಾಗುತ್ತದೆ. ಇದೇ ಜೀವನ. ಕೈ ಸುಂದರವಾಗಿ ಬಳಸಿದರೆ, ಸುಂದರ ಮೂರ್ತಿ ತಯಾರಾಗುತ್ತದೆ. ಕೈ ಸರಿಯಾಗಿ ಬಳಸದೆ ಇದ್ದರೆ, ಸುಂದರ ಮೂರ್ತಿ ನಾಶವಾಗುತ್ತದೆ. ಈ ಜಗತ್ತು ಸುಂದರಗೊಳಿಸುವ ಕಲೆ ಕೈ , ಮನಸ್ಸು, ಬುದ್ದಿಯಲ್ಲಿರಬೇಕು. ಸಾಕು ಸ್ವರ್ಗಕ್ಕೆ.
ನನಗೆ ಸುಂದರ ಶಿಲ್ಪ ಮಾಡಲು ಬರುವುದಿಲ್ಲ ಅಂತ ಇಟ್ಟುಕೊಳ್ಳಿ. ಆದರೆ ನೋಡಿ ಸಂತೋಷ ಪಡಬಹುದಲ್ಲ. ಇಲ್ಲಿ ಮೂರು ರೀತಿ ಜನ. ಗೊತ್ತಿದ್ದವ ಸುಂದರ ರೂಪ ಮಾಡುತ್ತಾನೆ. ಗೊತ್ತಿಲ್ಲದವ ನೋಡಿ ಸಂತೋಷ ಪಡುತ್ತಾನೆ. ಮತ್ತೊಬ್ಬ ನಾಶ ಮಾಡಿ ಸಂತೋಷ ಪಡುತ್ತಾನೆ. ನಮಗೆ ಮಾಡೋದಕ್ಕೆ ಬರದಿದ್ದರೆ, ಮಾಡಿದ್ದನ್ನು ನಾಶ ಮಾಡಬಾರದು. ಮಾಡಿದ್ದನ್ನು ನೋಡಿ ಆನಂದ ಪಡಬೇಕು. ಇಂಥ ಮನಸ್ಸಿದ್ದರೆ ಜೀವನ ಸ್ವರ್ಗ ಆಗುತ್ತದೆ. ಆದರೆ ನಮ್ಮ ಮನಸ್ಸು ಯಾಕೆ ಕುರೂಪ ಆಗ್ತದೆ ಅಂದ್ರೆ ಎರಡು ಕಾರಣಕ್ಕೆ ಕುರುಪವಾಗುತ್ತದೆ.
ಏನೇನು ಚೆಂದ ಇದೆ ಅದೆಲ್ಲ ನನ್ನದೇ ಆಗಬೇಕು. ನನ್ನದು ಆಗಲಿಲ್ಲ ಅಂದರೆ ಅದನ್ನು ನಾಶ ಮಾಡುತ್ತಾನೆ. ಎಲ್ಲಾ ನಮ್ಮದಾಗಲು ಸಾಧ್ಯವಿದೆಯೇ?. ಎಲ್ಲಾ, ಎಲ್ಲರಿಗೂ ಸಿಗೋದಿಲ್ಲ. ಎಷ್ಟಿದೆ ಅಷ್ಟರಲ್ಲಿ ಸಂತೋಷ ಪಡಬೇಕು. ಆದರೆ ನಮ್ಮ ಮನಸ್ಸು ಚೆಂದಾಗಿರೋದು ಕಂಡರೆ ನನ್ನದಾಗಬೇಕು ಅನಿಸುತ್ತದೆ. ಆ ಬಳಿಕ ಹೋರಾಟ ಶುರು ಮಾಡುತ್ತಾರೆ. ಮನಸ್ಸು ಸಂತೋಷ ಪಡಲು ಅಸಮರ್ಥ ಆಗುತ್ತದೆ. ಈಗ ದಾರಿಯಲ್ಲಿ ನಡೆಯುತ್ತಾ ಹೊರಟಿದ್ದೇವೆ. ಒಬ್ಬ ಸೈಕಲ್ ನವ ಬಂದರೆ, ಅದನ್ನು ನೋಡಿ, ನನ್ನ ಹತ್ತಿರ ಸೈಕಲ್ ಇರಬೇಕು ಅನಿಸುತ್ತದೆ. ಮುಂದೆ ಮೋಟಾರ್ ಬೈಕ್ ಕಂಡರೆ, ಅದು ನನ್ನ ಹತ್ತಿರ ಇರಬೇಕು ಅನಿಸುತ್ತದೆ. ಕಾರು ನೋಡಿದ್ರೆ, ಅದು ಕೂಡ ನನ್ನ ಬಳಿ ಇರಬೇಕು ಅನಿಸುತ್ತದೆ, ಹೀಗೆ ನಮ್ಮದು ಮಾಡಿಕೋಬೇಕು ಅಂತ ಪ್ರಯತ್ನ ಮಾಡಿಕೊಡುತ್ತಾ ಹೋದರೆ, ಜೀವನದಲ್ಲಿ ಅನುಭವಿಸುವುದು ಯಾವಾಗ. ಈ ಕ್ಷಣ ನನ್ನಲ್ಲಿ ಇಲ್ಲದಿದ್ದರೆ ಸೈಕಲ್, ಕಾರ್, ನೋಡಿ ಆನಂದ ಪಡೋದಿಕ್ಕೆ ಆಗ್ತದೆ. ದೇವರು ಎಲ್ಲಾ ಕೊಡದಿದ್ದರೂ, ನೋಡಿ ಸಂತೋಷ ಪಡುವ ಹೃದಯ ಕೊಟ್ಟಿದ್ದಾನಲ್ಲ ಸಾಕಲ್ಲ. ಇನ್ನೊಬ್ಬರ ಮನೆ, ತೋಟ ನೋಡಿ ನನಗಿಲ್ಲವಲ್ಲ ಅಂದ್ರೆ ಸಂತೋಷ ಹೋಯ್ತು. ಯಾರು ಏನೇನು ಮಾಡುತ್ತಾರೆ ಹಾಗೆ ನಾವು ಮಾಡಿಕೊತ್ತ ಹೋದರೆ ಅನುಭವಿಸಲು ಆಗುವುದಿಲ್ಲ. ಈಗ ಅಂಗಡಿಗೆ ಹೋದ್ರೆ, ನೋಡಿದ ಕೂಡಲೇ, ಅದು ಒಂದು ತೆಗೆದುಕೊಳ್ಳುವುದು, ಇದು ಒಂದು ತೆಗೆದುಕೊಳ್ಳುವುದು, ಹೀಗೆ ಕಂಡ ಕಂಡದೆಲ್ಲ ಕೊಂಡುಕೊಂಡರೆ, ಮನೆ ಸಣ್ಣದು. ಜಾಗ ಇಲ್ಲ. ಆದರೂ ಕೊಂಡುಕೊಂಡು ಅಂದ್ರೆ, ಮನಸ್ಸಿನಲ್ಲಿ ಕುರೂಪ. ನೋಡಿದ್ದೆಲ್ಲ ಬೇಕು ಅನಿಸಿದರೆ ಜೀವನ ಕೆಡೋದಕ್ಕೆ ಶುರುವಾಗುತ್ತದೆ. ಎಷ್ಟು ಬೇಕೊ ಅಷ್ಟು ಇದ್ದರೆ ಜೀವನ ಸ್ವರ್ಗ.
-ಎಂ.ಪಿ. ಜ್ಞಾನೇಶ್, ಮಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ