ಎಸಿಬಿ ರದ್ದು : ಭ್ರಷ್ಟಾಚಾರ ನಿಗ್ರಹಕ್ಕೆ ಮರಳಿ ದೊರೆತ ಬಲ

ಎಸಿಬಿ ರದ್ದು : ಭ್ರಷ್ಟಾಚಾರ ನಿಗ್ರಹಕ್ಕೆ ಮರಳಿ ದೊರೆತ ಬಲ

ಎಂಟು ವರ್ಷಗಳ ಹಿಂದೆ ರಾಜ್ಯದಲ್ಲಿ ಲೋಕಾಯುಕ್ತ ಸಂಸ್ಥೆಗಿದ್ದ ತನಿಖಾಧಿಕಾರವನ್ನು ಹಿಂಪಡೆದು ಸರ್ಕಾರದ ಅಧೀನದಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಎಂಬ ಸಂಸ್ಥೆಯನ್ನು ಅಂದಿನ ಸರ್ಕಾರ ಸ್ಥಾಪನೆ ಮಾಡಿದ್ದ ನಿರ್ಧಾರವನ್ನು ಹೈಕೋರ್ಟ್ ರದ್ದುಪಡಿಸುವ ಮೂಲಕ ರಾಜ್ಯದಲ್ಲಿ ಭ್ರಷ್ಟಾಚಾರ ನಿಯಂತ್ರಣಕ್ಕೆ ತಾತ್ವಿಕವಾಗಿ ಮರಳಿ ಶಕ್ತಿ ತುಂಬಿದಂತಾಗಿದೆ. ಎಸಿಬಿ ರಚನೆಗೆ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಎಕ್ಸಿಕ್ಯೂಟಿವ್ ಆರ್ಡರ್ ಹೊರಡಿಸಿದ್ದೇ ಕಾನೂನುಬದ್ಧವಾಗಿಲ್ಲ. ಹಾಗೆಯೇ ಲೋಕಾಯುಕ್ತ ಪೋಲೀಸರಿಗಿದ್ದ ತನಿಖಾಧಿಕಾರವನ್ನು ಇದೇ ಕಾಯ್ದೆಯಡಿ ಹಿಂಪಡೆದು ಎಸಿಬಿಗೆ ವರ್ಗಾವಣೆ ಮಾಡಿದ್ದೂ ಕಾನೂನುಬದ್ಧವಾಗಿಲ್ಲ ಎಂಬ ಕಾರಣಗಳನ್ನು ಹೈಕೋರ್ಟ್ ನೀಡಿದೆ. ಅಷ್ಟೇ ಅಲ್ಲ, ಎಸಿಬಿಯ ಪೋಲೀಸ್ ವಿಭಾಗಕ್ಕಿದ್ದ ತನಿಖಾಧಿಕಾರವನ್ನು ಯಥಾವತ್ತು ಲೋಕಾಯುಕ್ತದ ಪೋಲೀಸ್ ವಿಭಾಗಕ್ಕೆ ಮರಳಿ ನೀಡಬೇಕು ಮತ್ತು ಎಸಿಬಿ ತನಿಖೆ ನಡೆಸುತ್ತಿದ್ದ ಎಲ್ಲಾ ಕೇಸುಗಳನ್ನೂ ಇನ್ನು ಮುಂದೆ ಲೋಕಾಯುಕ್ತ ಪೋಲೀಸರಿಂದ ತನಿಖೆ ನಡೆಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ. ಸರ್ಕಾರಿ ಅಧಿಕಾರಿಗಳು ನಡೆಸುವ ಭ್ರಷ್ಟಾಚಾರವನ್ನು ಸರ್ಕಾರದ ಅನುಮತಿ ಪಡೆದೇ ತನಿಖೆ ನಡೆಸಬೇಕೆಂಬ ಎಸಿಬಿಯ ವ್ಯವಸ್ಥೆ ಸರಿ ಇಲ್ಲ ಎಂಬ ಆಕ್ಷೇಪ ಎಲ್ಲರದ್ದಾಗಿತ್ತು. ಎಸಿಬಿಯ ಸಂರಚನೆಯಲ್ಲಿ ಭ್ರಷ್ಟಾಚಾರದ ತನಿಖೆ ಎಂಬುದು ಕೂಡ ರಾಜಕೀಯ ಅಸ್ತ್ರವೇ ಆಗುವುದಕ್ಕೆ ಎಲ್ಲ ಅವಕಾಶಗಳಿದ್ದವು. ಅದು ಹಾಗೇ ನಡೆದಿತ್ತು ಕೂಡ. ಅಂತಹ ವ್ಯವಸ್ಥೆ ಇನ್ನುಮುಂದೆ ಇಲ್ಲದಿರುವುದರಿಂದ ಭ್ರಷ್ಟಾಚಾರದ ಕಡಿವಾಣಕ್ಕೆ ಈಗಿನದ್ದಕ್ಕಿಂತ ಉತ್ತಮ ವ್ಯವಸ್ಥೆಯೊಂದನ್ನು ಜನರು ನಿರೀಕ್ಷಿಸಬಹುದು.

ಹಾಗಂತ ಲೋಕಾಯುಕ್ತಕ್ಕೆ ಮರಳಿ ತನಿಖಾಧಿಕಾರ ದೊರೆತಾಕ್ಷಣ ಎಲ್ಲವೂ ಸರಿಯಾಗುತ್ತದೆ ಎಂದೇನಲ್ಲ. ಹಿಂದೆ ಲೋಕಾಯುಕ್ತಕ್ಕೆ ತನಿಖಾಧಿಕಾರ ಇದ್ದಾಗಲೂ ಭ್ರಷ್ಟಾಚಾರ ನಿಂತಿರಲಿಲ್ಲ. ಆದರೆ ಲೋಕಾಯುಕ್ತವೆಂಬುದು ಸ್ವಾಯತ್ತ ಸಂಸ್ಥೆ. ಅದರ ಮುಖ್ಯಸ್ಥರು ಹಾಗೂ ತನಿಖಾ ವಿಭಾಗದ ಮುಖ್ಯಸ್ಥರು ಪ್ರಾಮಾಣಿಕರೂ ದಕ್ಷರೂ ಆಗಿದ್ದರೆ ಭ್ರಷ್ಟಾಚಾರಕ್ಕೆ ದೊಡ್ಡ ಪ್ರಮಾಣದಲ್ಲಿ ಕಡಿವಾಣ ಹಾಕಲು ಸಾಧ್ಯವಿದೆ. ಎಸಿಬಿ ಅಡಿ ಅದು ಸಾಧ್ಯವಿರಲಿಲ್ಲ. ಹೀಗಾಗಿ ಈಗಿನದು ಒಂದು ಸುಧಾರಣಾತ್ಮಕ ಆದೇಶವಂತೂ ಹೌದು. ಆದರೆ ಲೋಕಾಯುಕ್ತದ ಅಧಿಕಾರ ಹಾಗೂ ಮೂಲಸೌಕರ್ಯಗಳಿಗೆ ಮಿತಿಗಳಿವೆ. ಅದನ್ನು ಸರಿಪಡಿಸಲು ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ. ಆ ಸೂಚನೆಯನ್ನು ಸರ್ಕಾರ ಪ್ರಾಮಾಣಿಕವಾಗಿ ಪಾಲಿಸಬೇಕು. ಇನ್ನು, ಹೈಕೋರ್ಟ್ ತೀರ್ಪಿನ ವಿರುದ್ಧ ಸರ್ಕಾರ ಸುಪ್ರೀಂಕೋರ್ಟ್ ಗೆ ಹೋಗುವ ಸಾಧ್ಯತೆಗಳೂ ಇವೆ. ಆದರೆ, ಬಿಜೆಪಿಯ ಚುನಾವಣಾ ಪ್ರಣಾಳಿಕೆಯಲ್ಲಿ ಎಸಿಬಿ ರದ್ದುಪಡಿಸಿ ಲೋಕಾಯುಕ್ತಕ್ಕೆ ತನಿಖಾಧಿಕಾರವನ್ನು ಮರಳಿ ಕೊಡಿಸುವ ಭರವಸೆಯೂ ಇತ್ತೆಂಬುದನ್ನು ನೆನಪಿಡಬೇಕು.

ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೧೨-೦೮-೨೦೨೨