ಎಸ್.ಎನ್.ಪಂಜಾಜೆ ಇನ್ನು ನೆನಪು ಮಾತ್ರ

ಎಸ್.ಎನ್.ಪಂಜಾಜೆ ಇನ್ನು ನೆನಪು ಮಾತ್ರ

ಯಕ್ಷಗಾನ ಕ್ಷೇತ್ರವನ್ನು ಸ್ವಯಿಚ್ಛೆಯಿಂದ ಬೆಳೆಸಿದ ಮಹನೀಯರಲ್ಲಿ ಸೂರ್ಯನಾರಾಯಣ ಪಂಜಾಜೆಯವರ ಹೆಸರು ದಾಖಲೆಯಾಗಿ ಉಳಿಯುತ್ತದೆ. ಪಂಜಾಜೆ ಕೇರಳ ಕರ್ನಾಟಕದ ಗಡಿ ಪ್ರದೇಶದ ಊರು.ಇವರ ತೀರ್ಥರೂಪರೂಪರಾದ ಪಂಜಾಜೆ ಶಂಕರ ಭಟ್ಟರು ಘನವಿದ್ವಾಂಸರು.. ಸುಶಿಕ್ಷಿತ ವಲಯದ ಹಿನ್ನೆಲೆ, ಯಕ್ಷಗಾನದ ನೆಲೆಯಿಂದ ಬಂದ ಭಟ್ಟರು ಆತ್ಮೀಯರ ಬಳಗದಲ್ಲಿ ಸೂರ್ಯಣ್ಣ ಎಂದೇ ಪ್ರಖ್ಯಾತರು. ಶಿಕ್ಷಣದ ಕಾಲದ ನಂತರ ಕಲಾಸಕ್ತರಾಗಿ ಸಾಕಷ್ಟು ಕೆಲಸವನ್ನು ಮಾಡಿದ ಇವರು ಬೆಂಗಳೂರನ್ನು ಕಾರ್ಯಕ್ಷೇತ್ರವಾಗಿಸಿಕೊಂಡು ಯಕ್ಷಗಾನದ ವಿವಿಧ ಪ್ರಕಾರಗಳನ್ನು ಪ್ರಚುರಗೊಳಿಸುವ, ಪ್ರಯೋಗಕ್ಕೊಗ್ಗಿಸುವ, ತರಬೇತಿ ನೀಡುವ, ಸಂಘಟನೆಯ ಮೂಲಕ ಪ್ರದರ್ಶನಕ್ಕೆ ಅನುವು ಮಾಡುವ ವಿಸ್ತೃತ ಕಾರ್ಯಕ್ಕೆ ತೊಡಗಿದರು.ಕರ್ನಾಟಕ ಸಾಂಸ್ಕೃತಿಕ ಕಲಾ ಪ್ರತಿಷ್ಠಾನ ( ರಿ) ಇದು ಪಂಜಾಜೆಯವರು ಕಟ್ಟಿದ ಕಲಾ ಸಂಸ್ಥೆ.
ದೂರದರ್ಶನದಲ್ಲಿ ಊರಿನ ಹಲವು ತಂಡಗಳಿಗೆ ಪ್ರದರ್ಶನಾವಕಾಶವನ್ನು ಕಲ್ಪಿಸಿದುದು,ತಾಳಮದ್ದಲೆಗಳನ್ನು ಏರ್ಪಡಿಸಿದುದು,ಅನೇಕ ಹಿರಿಯ ಕಲಾವಿದರನ್ನು ಪರಿಚಯಿಸಿದುದು ...ಹೀಗೆ ಯಕ್ಷ ವಲಯವನ್ನು ಹೊರಲೋಕಕ್ಕೆ ಪರಿಚಯಿಸುವಲ್ಲಿ ಇವರ ಕೊಡುಗೆ ಬಹುದೊಡ್ಡದು.ತೆಂಕುತಿಟ್ಟಿನ ಯಕ್ಷಗಾನ ತಂಡವನ್ನು ಅಮೇರಿಕಕ್ಕೆ ಕರೆದುಕೊಂಡುಹೋದುದು ಇನ್ನೊಂದು ಕೊಡುಗೆ.ಮಹಿಳಾ ತಾಳಮದ್ದಲೆ, ತರಬೇತಿಯನ್ನು ಸ್ವತಃ ಕಲಾವಿದರಾಗಿ ನಡೆಸಿದರು.ಬಯಲಾಟಕ್ಕೆ ಬೇಕಾದ ವೇಷಭೂಷಣಗಳನ್ನು ಒದಗಿಸುತ್ತಿದ್ದರು. ಹೀಗೆ ಯಕ್ಷಗಾನಕ್ಕೆ ಪರಿಚಿತವಲ್ಲದ ಬೆಂಗಳೂರಿನಲ್ಲಿ ಯಕ್ಷಗಾನದ ಬೆಳವಣಿಗೆಗೆ ದೊಡ್ಡಕೊಡುಗೆ ಪಂಜಾಜೆಯವರದ್ದಿದೆ.
ಯಕ್ಷಗಾನ ಸಾಹಿತ್ಯಕ್ಕೆ ಪಂಜಾಜೆಯವರ ಕೊಡುಗೆ ಅನನ್ಯ. ಅಕಾಡೆಮಿಯಂತಹ ಸಂಸ್ಥೆ ನಡೆಸಬಹುದಾದ ಅಖಿಲಭಾರತ ಯಕ್ಷಗಾನ ಸಾಹಿತ್ಯ ಸಮ್ಮೇಳನಗಳನ್ನು ನಾಡಿನೆಲ್ಲೆಡೆ ಹದಿನೈದು ಬಾರಿ ನಡೆಸಿದ ಏಕಾಂಗ ಸಾಹಸ ಇವರದ್ದು. ಪ್ರತೀವರ್ಷ ವಿದ್ವಾಂಸರ ಸಹಯೋಗದಲ್ಲಿ ಆಯೋಜಿಸುತ್ತಿದ್ದ ಸಮ್ಮೇಳನಗಳನ್ನು ಈ ವರ್ಷ ಧರ್ಮಸ್ಥಳದಲ್ಲಿ ನೆರವೇರಿಸಿ ನಿಲ್ಲಿಸಬೇಕೆಂದಿದ್ದರು. ಶಿವಮೊಗ್ಗದಲ್ಲಿ ನಡೆದ ಹನ್ನೊಂದನೆಯ ಸಮ್ಮೇಳನದಲ್ಲಿ ಸರ್ವಾಧ್ಯಕ್ಷನಾಗಿದ್ದ ನನ್ನ ಅನುಭವದಲ್ಲಿ ಹೇಳುವುದಾದರೆ ಇದೊಂದು ಅಪೂರ್ವ ಸಾಹಸ. ನಾಡಿನ ಖ್ಯಾತ ವಿದ್ವಾಂಸರು, ಮಠಾಧೀಶರು, ರಾಜಕಾರಿಣಿಗಳು , ಕಲಾಭಿಜ್ಞರು ,ಕಲಾವಿದರು,ಸಾಹಿತಿಗಳು ..ಅಂದು ಭಾಗವಹಿಸಿದ್ದರು. ವಿವಿಧ ಗೋಷ್ಠಿಗಳು ಯಕ್ಷಗಾನದೊಂದಿಗೆ ಸಹ ಕಲೆಗಳಾದ ದೊಡ್ಡಾಟ, ಸಣ್ಣಾಟ, ತೊಗಲುಬೊಂಬೆಯಾಟ, ಕೃಷ್ಣ ಪಾರಿಜಾತ ,ಘಟ್ಟದಕೋರೆ ತೆಂಕು- ಬಡಗು ಯಕ್ಷಗಾನ, ತಾಳಮದ್ದಲೆ, ಇತ್ಯಾದಿಗಳ ಪ್ರದರ್ಶನಗಳನ್ನು ಆಯಾ ವಿಷಯಗಳ ತಜ್ಞರ ಗೋಷ್ಠಿಗಳೊಂದಿಗೆ ಮೂರು ದಿನಗಳ ಕಾರ್ಯಕ್ರಮಗಳಲ್ಲಿ ಸಂಯೋಜಿಸಿದ್ದರು. ವಿಶೇಷವೆಂದರೆ ಈ ಸಮ್ಮೇಳನಗಳು ಲಕ್ಷಲಕ್ಷ ಖರ್ಚಿನ ವಿಚಾರದ್ದು. ಹೇಗೆ ನಿರ್ವಹಿಸುತ್ತೀರಿ ಎಂದರೆ ನಕ್ಕು ಹೇಗೋ ಆಗುತ್ತದೆ ಎಂದು ಬಿಡುತ್ತಿದ್ದರು. ಈ ವಿಚಾರದಲ್ಲಿ ಅತ್ಯುತ್ಸಾಹದಲ್ಲಿ ಭಾಗವಹಿಸುವ ಅವರ ಶ್ರೀಮತಿಯವರ, ಮಕ್ಕಳ, ಬಂಧುಗಳ ಪ್ರೋತ್ಸಾಹವೂ ಮುಖ್ಯವಾಗಿತ್ತು.
ಯಕ್ಷಗಾನ ಸಮ್ಮೇಳನಗಳು ಹೇಗೆ ನಡೆದವು ಎಂಬುದಕ್ಕೆ ಆಯಾ ವರ್ಷಗಳಲ್ಲಿ ವಿದ್ವಾಂಸರ ಪ್ರೌಢ ಚಿಂತನೆಗಳಿಂದ ಕೂಡಿದ ಸ್ಮರಣಸಂಚಿಕೆಗಳೇ ಸಾಕ್ಷಿಯಾಗಿವೆ. ಪ್ರತೀ ಸಮ್ಮೇಳನದ ಸಾಕಷ್ಟು ಪೂರ್ವದಲ್ಲೇ ಈ ಸಂಚಿಕೆಯೂ ಸಿದ್ಧವಾಗಿರುತ್ತಿತ್ತು. ಶಿವಮೊಗ್ಗದ ಸಮ್ಮೇಳನದ ಸ್ಮರಣ ಸಂಚಿಕೆ ಗೆ 'ಕಿರೀಟ' ಎಂಬ ಅರ್ಥಪೂರ್ಣ ಹೆಸರಿತ್ತು.
ಯಕ್ಷಗಾನದ ನಿಜಾರ್ಥದ ಸೇವಕ, ತನ್ನ ಬದುಕನ್ನು ಕಲೆಗಾಗಿ ಶ್ರಮಿಸಿದ, ಸವೆಸಿದ ಪಂಜಾಜೆಯವರ ಹಿರಿಯರನ್ನು ಸ್ಮರಿಸೋಣ. ಯಕ್ಷಗಾನದ ಅದೃಷ್ಟ, ಇಂತಹ ನಿತ್ಯಸ್ಮರಣೀಯರು ಕಲೆಗಾಗಿ ಕೊಟ್ಟ ಕೊಡುಗೆ ವಿಶೇಷ.ಅದು ಕಲೆಯನ್ನು ಬೆಳೆಸುವ ಕಲಾ ಪ್ರೀತಿ.

- ಶ್ರೀಧರ ಡಿ. ಎಸ್ (ಲೇಖಕ, ಯಕ್ಷಗಾನ ಕಲಾವಿದ, ಸಂಘಟಕ)