ಎಸ್.ಎಸ್.ಎಲ್.ಸಿ. ಮಕ್ಕಳಿಗೆ ಗಣಿತ ಹೊರೆಯಾಗದಿರಲಿ

ಎಸ್.ಎಸ್.ಎಲ್.ಸಿ. ಮಕ್ಕಳಿಗೆ ಗಣಿತ ಹೊರೆಯಾಗದಿರಲಿ

ಮತೊಮ್ಮೆ ಪರೀಕ್ಷೆ ಬರುತ್ತಿದೆ. ಅದೂ ಪಬ್ಲಿಕ್ ಪರೀಕ್ಷೆ. ಹೌದು ನಿಮಗಿದು ಹೊಸತು. ಆದರೆ ನಮಗೆ ಪ್ರತಿ ಬಾರಿಯಂತೆ ಇದು ಮಾಮೂಲಿ. ನೀವು ನಿಮ್ಮ ಶಾಲೆಯಲ್ಲಿ ಬರೆದ ಪರೀಕ್ಷೆಗಳಿಗೆ ಲೆಕ್ಕವಿಲ್ಲ. ಇದು ಅದಕ್ಕಿಂತ ಭಿನ್ನವೇನೂ ಅಲ್ಲವೇ ಅಲ್ಲ. ಪರೀಕ್ಷೆಯ ಸ್ಥಳ ಮತ್ತು ಪರೀಕ್ಷೆ ಮಾಡುವ ವ್ಯಕ್ತಿಗಳ ಬದಲಾವಣೆ ಹೊರತು ಪಡಿಸಿದರೆ ಹಿಂದಿನ ಪರೀಕ್ಷೆಗೂ ಈ ಪರೀಕ್ಷೆಗೂ ಏನೇನೂ ಬದಲಾವಣೆ ಇರದು. ಆದ್ದರಿಂದ ಭಯ, ಆತಂಕ, ದುಗುಡಗಳಿಲ್ಲದೆ ಪರೀಕ್ಷೆ ಬರೆಯಿರಿ. ಒಂದಂತೂ ಸತ್ಯ ನೀವು ಪ್ರಮಾಣಿಕವಾಗಿ ಪರೀಕ್ಷೆ ತಯಾರಿ ನಡೆಸಿ, ಬರೆದದ್ದೇ ಆದರೆ ನಿರೀಕ್ಷೆ ಮಾಡಿರುವುದಕ್ಕಿಂತ ಹೆಚ್ಚು ಅಂಕ ಖಂಡಿತಾ ಬರುತ್ತದೆ. ಹಾಗಾಗಿ ಧೈರ್ಯವಾಗಿ ಪರೀಕ್ಷೆ ಬರೆಯಿರಿ.

ಅಂದವಾದ ಬರಹ, ಅದರಲ್ಲಿ ಸ್ವಲ್ಪ ತಿರುಳು ಅಧಿಕ ಅಂಕ ತಂದು ಕೊಡುವುದು ನಿಸ್ಸಂಶಯ. ಅದರಲ್ಲೂ ಗಣಿತ ವಿಷಯದಲ್ಲಿ ಸ್ವಲ್ಪ ಯೋಚನೆ ಮತ್ತು ಯೋಜನೆ ನಿಮ್ಮಲ್ಲಿದ್ದರೆ ಉತ್ತಮ ಅಂಕ ಪಡೆಯುವುದು ಕಷ್ಟವಲ್ಲ. ಒಟ್ಟು 14 ಪಾಠಗಳ ಕಲಿಕೆ ಕ್ರಮ ಬದ್ಧವಾಗಿದ್ದರೆ ಗಣಿತ ಇತರ ವಿಷಯಗಳಿಗಿಂತ ಸುಲಭ ಆಗಬಲ್ಲುದು. ಆದರೆ ಕಲಿಕೆ ಹಳಿ ತಪ್ಪಿದಾಗ, ಕಡೆ ಗಳಿಗೆಯಲ್ಲಿ ಗಣಿತ ಭೂತವಾಗಿ ಕಾಡಬಹುದು. ಇದೀಗ ಗಣಿತದಲ್ಲಿ ಕನಿಷ್ಠ ಉತೀರ್ಣ ಗೊಳ್ಳಲು ಕಡೆ ಕ್ಷಣದಲ್ಲಿ ನಿಮ್ಮ ಕಲಿಕೆ ಹೇಗಿರಬೇಕು? ಈ ಬಗ್ಗೆ ಕೆಲವು ಟಿಪ್ಸ್ ಗಳನ್ನು ಕೊಡುತ್ತಿದ್ದೇನೆ.

1. ಒಂದು ಅಂಕದ ಬಹು ಆಯ್ಕೆಯ 8 ಪ್ರಶ್ನೆಗಳಲ್ಲಿ ಕನಿಷ್ಠ 4 ಅಂಕಗಳನ್ನು ಪಡೆಯುವುದು.

2. ಒಂದು ಅಂಕದ 8 ಪ್ರಶ್ನೆಗಳಲ್ಲಿ ಕನಿಷ್ಠ 4 ಅಂಕಗಳನ್ನು ಪಡೆಯುವುದು.

3. ಎರಡು ಅಂಕಗಳ 8 ಪ್ರಶ್ನೆಗಳಲ್ಲಿ 6 ಪ್ರಶ್ನೆಗಳನ್ನು ಸರಿಯಾಗಿ ಉತ್ತರಿಸುವುದು.

4. ಮೂರು ಅಂಕಗಳ 9 ಪ್ರಶ್ನೆಗಳಲ್ಲಿ ಕನಿಷ್ಠ 4 ನ್ನು ಉತ್ತರಿಸುವುದು.

5. ನಾಲ್ಕು ಅಂಕಗಳ 4 ಪ್ರಶ್ನೆಗಳಲ್ಲಿ ಕನಿಷ್ಠ 2 ಉತ್ತರಿಸುವುದು.

6. 5 ಅಂಕಗಳಿಗೆ ಪ್ರಮೇಯ ಕೇಳಿದರೆ ಉತ್ತರಿಸುವುದು.

ಬಹು ಆಯ್ಕೆಯ ಮತ್ತು ಒಂದು ಅಂಕದ ಪ್ರಶ್ನೆಗಳು ಈ ಕೆಳಗಿನವುಗಳ ಮೇಲೆ ಬರಬಹುದಾದ ಸಾಧ್ಯತೆಗಳು ಅಧಿಕವಾಗಿವೆ.

1. ಅವಿಭಾಜ್ಯ ಮತ್ತು ಸಂಯುಕ್ತ ಸಂಖ್ಯೆಗಳು.

2. ಅಂಕಗಣಿತದ ಮೂಲ ಪ್ರಮೇಯ.

3. ಒಂದು ಸಂಖ್ಯೆಯನ್ನು ಅವಿಭಾಜ್ಯ ಅಪವರ್ತನಗಳ ಗುಣಲಬ್ಧವಾಗಿ ವ್ಯಕ್ತಪಡಿಸುವುದು.

4. ಎರಡು ಸಂಖ್ಯೆಗಳ ಮ. ಸಾ. ಅ. ಮತ್ತು ಲ. ಸಾ.ಅ. ಬರೆಯುವುದು. 

5. ವರ್ಗ ಬಹುಪದೋಕ್ತಿಯ ಆದರ್ಶ ರೂಪ.

6. ಬಹುಪದೋಕ್ತಿಯ ಡಿಗ್ರಿ.

7. ವರ್ಗ ಬಹುಪದೋಕ್ತಿಯ ಶೂನ್ಯತೆಗಳ ಮೊತ್ತ ಮತ್ತು ಗುಣಲಬ್ದ.

8. ಶೂನ್ಯತೆ ಗಳ ಮೊತ್ತ ಮತ್ತು ಗುಣಲಬ್ದ ಕೊಟ್ಟಾಗ ವರ್ಗ ಬಹುಪದೋಕ್ತಿಯನ್ನು ಬರೆಯುವುದು.

9. ಏಕಕಾಲಿಕ ಸಮೀಕರಣಗಳ ಸಾಮಾನ್ಯ ರೂಪ.

10. ಏಕಕಾಲಿಕ ಸಮೀಕರಣಗಳ ಸಹಗುಣಕಗಳ ಅನುಪಾತಗಳು.

11. ವರ್ಗ ಸಮೀಕಾರಣದ ಆದರ್ಶರೂಪ.

12. ವರ್ಗಸಮೀಕರಣದ ಶೋಧಕ.

13. ಸಮಾಂತರ ಶ್ರೇಡಿಯ ಸೂತ್ರಗಳು.

14. n ನೇ ಪದ ಕೊಟ್ಟಾಗ ಒಂದು ಪದವನ್ನು ಕಂಡು ಹಿಡಿಯುವುದು.

15. ಮೂರು ಪದಗಳನ್ನು ಕೊಟ್ಟಾಗ ಮಧ್ಯದ ಪದ ಕಂಡುಹಿಡಿಯುವುದು.

16. ಸಾಮಾನ್ಯ ವ್ಯತ್ಯಾಸ ಬರೆಯುವುದು.

17. ಮೂ. ಸ. ಪ್ರ. ಮತ್ತು ಅದರ ವಿಲೋಮದ ನಿರೂಪಣೆ.

18. ದೂರ ಸೂತ್ರ, ಭಾಗ ಪ್ರಮಾಣ ಸೂತ್ರ, ಮಧ್ಯ ಬಿಂದು ಸೂತ್ರ.

19. ಮೂಲಬಿಂದುವಿನಿಂದ ಒಂದು ಬಿಂದುವಿಗಿರುವ ದೂರ.

20. ತ್ರಿಕೊನಮಿತಿಯ ಅನುಪಾತಗಳು.

21. ತ್ರಿಕೊನಮಿತಿಯ ನಿರ್ದಿಷ್ಟ ಕೊನದ ಅನುಪಾತಗಳು.

22. ಸ್ಪರ್ಶಕ, ಛೇದಕ, ಸ್ಪರ್ಶಬಿಂದು.

23. ಸ್ಪರ್ಶಕ ಎಳೆದಾಗ ಉಂಟಾಗುವ ಕೋನಗಳು.

24. ತ್ರಿಜ್ಯಾಂತರ ಖಂಡದ ವಿಸ್ತೀರ್ಣ ಮತ್ತು ಕಂಸದ ಉದ್ದದ ಸೂತ್ರ.

25. ಸಿಲಿಂಡರ್, ಶಂಕು, ಅರ್ಧಗೋಳ, ಗೋಳ ಇವುಗಳ ಪಾರ್ಶ್ವ ಮತ್ತು ಪೂರ್ಣ ಮೇಲ್ಮಾಯಿ ವಿಸ್ತೀರ್ಣದ ಸೂತ್ರಗಳು.

26. ಸಂಭವನೀಯತೆ ಸೂತ್ರ.

27. ಪೂರಕ ಘಟನೆಯ ಸಂಭವನೀಯತೆ.

28. ಖಚಿತ ಮತ್ತು ಅಸಂಭವ ಘಟನೆ.

ಎರಡು ಅಂಕಗಳಿಗೆ ಈ ಕೆಳಗಿನ ವಿಷಯಗಳಿಗೆ ಮಹತ್ವ ಇರಲಿ.

1. ಅಭಾಗಲಬ್ಧ ಸಂಖ್ಯೆ ಎಂದು ಸಾಧಿಸಿ (ಉದಾ :2+ವರ್ಗಮೂಲ 5)

2. ಅವಿಭಾಜ್ಯ ಅಪವರ್ತನ ವಿಧಾನದಿಂದ ಮ.ಸಾ.ಅ ಅಥವಾ ಲ.ಸಾ.ಅ ಕಂಡುಹಿಡಿಯಿರಿ.

3. ಬಹುಪದೋಕ್ತಿಯ ಶೂನ್ಯತೆ ಕಂಡುಹಿಡಿಯಿರಿ.

4. ವರ್ಜ್ಯ ವಿಧಾನದಿಂದ ಏಕಕಾಲಿಕ ಸಮೀಕರಣ ಬಿಡಿಸಿ.

5. ವರ್ಗಸಮಿಕರಣವನ್ನು ಅಪವರ್ತನ ವಿಧಾನದಿಂದ ಬಿಡಿಸಿ.

6. ಶೋಧಕಕ್ಕೆ ಸಂಭಂದಿಸಿದ ಒಂದು ಲೆಕ್ಕ.

7. ಸಮಾತರ ಶ್ರೇಢಿಯ n ನೇ ಪದ ಕಂಡುಹಿಡಿಯಿರಿ.

8. ಸಮಾತರ ಶ್ರೇಢಿಯ ಮೊದಲ n ಪದಗಳ ಮೊತ್ತ ಕಂಡುಹಿಡಿಯಿರಿ.

7. ಬಾಹುಗಳ ಅನುಪಾತಕ್ಕೆ ಸಂಭಂದಿಸಿದ ಒಂದು ಲೆಕ್ಕ..

8. ಎರಡು ಬಿಂದುಗಳ ನಡುವಿನ ದೂರ ಕಂಡುಹಿಡಿಯುವುದು.

9. ಲಂಬಕೋನ ತ್ರಿಭುಜದ ಚಿತ್ರದಲ್ಲಿ ತ್ರಿಕೋನ ಮಿತಿ ಅನುಪಾತ ಬರೆಯುವುದು.

10. ಸಂಭವನೀಯತೆ ಸಂಬಂಧಿಸಿದ ಒಂದು ಲೆಕ್ಕ

ಮೂರು ಅಂಕಗಳಿಗೆ ಈ ಕೆಳಗಿನವುಗಳಿಗೆ ಹೆಚ್ಚು ಮಹತ್ವ ಇರಲಿ..

1. ಅಭಾಗಲಬ್ಧ ಸಂಖ್ಯೆ ಎಂದು ಸಾಧಿಸಿ ( ಉದಾ: ವರ್ಗಮೂಲ 5)

2. ಬಹುಪದೋಕ್ತಿಯ ಶೂನ್ಯತೆ ಕಂಡುಹಿಡಿದು ಸಹಗುಣಕದೊಂದಿಗೆ ಸಂಬಂಧ ತಾಳೆ ನೋಡುವುದು.

3. ಭಾಗಪ್ರಮಾಣಸೂತ್ರದ ಒಂದು ಲೆಕ್ಕ.

4. ಸರಾಸರಿ, ಬಹುಲಕ ಅಥವಾ ಮಧ್ಯಾಂಕ ಕಂಡುಹಿಡಿಯಿರಿ.

5. ವೃತ್ತದ ಮೇಲಿನ ಪ್ರಮೇಯ.

6. ಸಂಭವನೀಯತೆ ಸಂಬಂಧಿಸಿದ ಒಂದು ಲೆಕ್ಕ.

ನಾಲ್ಕು ಅಂಕಗಳಿಗೆ…

1.ಪ್ರಮೇಯ (5 ಅಂಕಗಳಿಗೆ ಬರಲೂ ಬಹುದು)

2. ಏಕಕಾಲಿಕ ಸಮೀಕರಣವನ್ನು ನಕ್ಷೆಯ ಸಹಾಯದಿಂದ ಬಿಡಿಸಿ.

ವಿದ್ಯಾರ್ಥಿಗಳೇ ಈ ಮೇಲಿನ ಅಂಶಗಳನ್ನು ಗಮನದಲ್ಲಿಟ್ಟು ಅಧ್ಯಯನ ಮಾಡಿದರೆ ಕನಿಷ್ಠ 40-50 ಅಂಕಗಳನ್ನು ನಿಸ್ಸಂಶಯವಾಗಿ ಪಡೆಯಬಹುದು.

ಬಿಸಿಲಿನ ತಾಪ ವಿಪರೀತವಾಗಿದ್ದು ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ. ಯಾವುದೇ ಸಾಫ್ಟ್ ಡ್ರಿಂಕ್ಸ್ ಹಾಗೂ ಜಂಕ್ ಫುಡ್ ಗಳನ್ನು ತಿನ್ನುವುದರಿಂದ ದೂರವಿರಿ. ಸಾಕಷ್ಟು ನೀರು ಕುಡಿಯಿರಿ. ಮಜ್ಜಿಗೆ ಹಾಗೂ ಸಾಧ್ಯವಿದ್ದರೆ ಎಳನೀರು ಸೇವಿಸಿ. ಲಿಂಬೆ ಹಣ್ಣಿನ ಪಾನಕ (ಕಡಿಮೆ ಸಕ್ಕರೆ ಬಳಸಿ) ಸೇವಿಸಿ.

ತೀರಾ ನಿದ್ದೆಗೆಡುವುದು ಉತ್ತಮವಲ್ಲ. ಇನ್ನುಳಿದ ದಿನಗಳಲ್ಲಿ ಶಿಸ್ತು ಬದ್ಧವಾಗಿ ಅಧ್ಯಯನ ಮಾಡಿದರೆ ಯಶಸ್ಸು ನಿಮ್ಮದಾಗಲಿದೆ. ನಿಮ್ಮ ಭವಿಷ್ಯವನ್ನು ರೂಪಿಸುವವರು ನೀವೇ ಆಗಿರುತ್ತೀರಿ... ಎಂಬುವುದು ನೆನಪಿರಲಿ. ನಾವೆಲ್ಲರೂ ಕೇವಲ ಸಲಹೆಗಳ ಮೂಲಕ ದಾರಿ ತೋರಬಹುದಷ್ಟೇ. ಎಲ್ಲರಿಗೂ All the best.

-ಯಾಕೂಬ್ ಎಸ್ ಕೊಯ್ಯೂರು, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮುಖ್ಯ ಶಿಕ್ಷಕರು, ಬೆಳ್ತಂಗಡಿ 

ಚಿತ್ರ ಕೃಪೆ: ಇಂಟರ್ನೆಟ್ ತಾಣ