ಎಸ್ ಬಿ ಐ ಕೋರಿಕೆ ಪ್ರಶ್ನಾರ್ಹ

ಎಸ್ ಬಿ ಐ ಕೋರಿಕೆ ಪ್ರಶ್ನಾರ್ಹ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು (ಎಸ್ ಬಿ ಐ) ಚುನಾವಣಾ ದೇಣಿಗೆಗಳ ವಿವರಗಳನ್ನು ನೀಡಲು ಸಮಯ ವಿಸ್ತರಣೆಗಾಗಿ ಸುಪ್ರೀಂ ಕೋರ್ಟ್ ಗೆ ಮಾಡಿಕೊಂಡಿರುವ ಕೋರಿಕೆ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿದೆ. ಸುಪ್ರೀಂ ಕೋರ್ಟ್ ಇಪ್ಪತ್ತು ದಿನಗಳ ಹಿಂದೆ ಕೇಳಿದ್ದಂಥ ವರದಿಗೆ, ಎಸ್ ಬಿ ಐ ಆ ಸಂದರ್ಭದಲ್ಲಿ ಇದೇ ಉತ್ತರ ನೀಡಬಹುದಿತ್ತು. ಆದರೆ, ಗಡುವಿನ ಹೊಸ್ತಿಲಿನಲ್ಲಿ ನಿಂತುಕೊಂಡು ಎಸ್ ಬಿ ಐ ಮಾಡಿಕೊಂಡಿರುವ ‘ಸಮಯಾವಕಾಶದ ಕೋರಿಕೆ' ಹಿಂದೆ ಯಾವುದಾದರೂ ಒತ್ತಡವಿದೆಯೇ ಎಂಬ ಪ್ರಶ್ನೆ ಉದ್ಭವಿಸಿರುವುದು ಸ್ಪಷ್ಟ.

ಎಸ್ ಬಿ ಐ ಹೇಳುವಂತೆ, ‘ಚುನಾವಣಾ ದೇಣಿಗೆ ನೀಡಿದ ಮತ್ತು ಬಾಂಡ್ ರೂಪದಲ್ಲಿ ಸ್ವೀಕರಿಸಿದ ಖಾತೆಗಳ ವಿವರಗಳನ್ನು ಡಿಜಿಟಲ್ ಹಾಗೂ ಭೌತಿಕ ಸ್ವರೂಪದಲ್ಲಿ ಸಂಗ್ರಹಿಸಿಡಲಾಗಿದೆ. ಅವುಗಳನ್ನು ಹೊಂದಿಸಿ ನೋಡಬೇಕು. ಈ ಪ್ರಕ್ರಿಯೆಗೆ ಜೂನ್ ೩೦ರವರೆಗೆ ಸಮಯ ಬೇಕು' ಎಂದಿದೆ. ಎಸ್ ಬಿ ಐ ನ ಈ ವಾದವನ್ನು ಘನ ನ್ಯಾಯಾಲಯ ಒಪ್ಪುತ್ತದೆಯೇ ಎಂಬುದು ಪ್ರಶ್ನೆ. ಏಕೆಂದರೆ, ಎಸ್ ಬಿ ಐ ನ ಸಂಪೂರ್ಣ ಕಾರ್ಯ ಚಟುವಟಿಕೆಗಳು ಡಿಜಿಟಲೀಕರಣಗೊಂಡಿವೆ ಎಂದು ಬ್ಯಾಂಕ್ ಆಗಾಗ್ಗೆ ಹೇಳಿಕೊಳ್ಳುತ್ತಲೇ ಇರುತ್ತದೆ. ಯಾವುದೇ ಖಾತೆಯ ವಹಿವಾಟಿನ ವಿವರಗಳು ಮೌಸ್ ನ ಒಂದು ಕ್ಲಿಕ್ ನಲ್ಲಿ ಕಾಣಸಿಗುತ್ತವೆ. ೪೨ ಕೋಟಿ ಗ್ರಾಹಕರ ಖಾತೆಗಳನ್ನು ನಿರ್ವಹಿಸುವ ಬ್ಯಾಂಕ್ ಗೆ ೨೨,೨೧೭ ಬಾಂಡ್ ಗಳ ವಿವರಗಳನ್ನು ತೆಗೆಯಲು, ಆ ಲೆಕ್ಕಗಳನ್ನು ಇತ್ಯರ್ಥಗೊಳಿಸಲು ಏಕೆ ಇಷ್ಟು ಸುದೀರ್ಘ ಸಮಯ ತೆಗೆದುಕೊಳ್ಳುತ್ತದೆ?

ಎಸ್ ಬಿ ಐ ಜೂನ್ ಅಂತ್ಯದವರೆಗೆ ಕೇಳಿರುವ ಕಾಲಾವಕಾಶದ ಒಳಗಾಗಿ, ಲೋಕಸಭೆ ಚುನಾವಣೆ ಕೂಡ ಮುಗಿಯಲಿದೆ. ಈ ಹೊತ್ತಿನಲ್ಲಿ ಚುನಾವಣಾ ದೇಣಿಗೆ ನೀಡಿರುವ ಹೆಸರುಗಳ ಬೆನ್ನೇರಿ ಬರುವ ರಾಜಕೀಯ ವಿವಾದ ತಪ್ಪಲಿದೆ ಎಂಬ ಲೆಕ್ಕಾಚಾರವನ್ನು ಎಸ್ ಬಿ ಐ ಇಟ್ಟುಕೊಂಡಿದೆಯೇ? ಕೆಲವರ ಈ ವಾದವನ್ನು ನಿರ್ಲಕ್ಷಿಸುವಂತಿಲ್ಲ. ಕಳೆದ ೫ ವರ್ಷಗಳಲ್ಲಿ ಆಡಳಿತ ಪಕ್ಷವು ಗರಿಷ್ಟ ಚುನಾವಣಾ ದೇಣಿಗೆ ಪಡೆದಿರುವುದರಿಂದ, ಪ್ರತಿಪಕ್ಷಗಳಿಗೆ ಈ ಬಗ್ಗೆ ಬೆರಳು ತೋರಿಸಲು ಅವಕಾಶ ಸಿಕ್ಕಂತಾಗಿರುವುದು ಸ್ಪಷ್ಟ.

ಕೇಂದ್ರ ಸರಕಾರ ಕೂಡ ಸುಪ್ರೀಂ ಕೋರ್ಟ್ ಎತ್ತಿರುವ ತಕರಾರಿನ ವಿರುದ್ಧ ಮೇಲ್ಮನವಿಗೆ ಧಾವಿಸಬಹುದಿತ್ತು. ಎಲೆಕ್ಟೋರಲ್ ಬಾಂಡ್ ಸ್ವೀಕಾರವೇನು ಕದ್ದುಮುಚ್ಚಿ ಜಾರಿಗೊಳಿಸಿದ್ದೇನಲ್ಲ, ಸರಕಾರ ಕೂಡ ಕಾಯಿದೆ-ಕಾನೂನು ಪ್ರಕಾರವೇ ಇದನ್ನು ಜಾರಿ ಮಾಡಿದ್ದು, ‘ಚುನಾವಣೆಯ ಸಂದರ್ಭದಲ್ಲಿ ಬಾಂಡ್ ದೇಣಿಗೆ ವಿವರ ಬಹಿರಂಗಪಡಿಸುವುದು ಬೇರೆ ರೀತಿಯ ಪರಿಣಾಮ ಬೀರಬಹುದು.” ಎಂದು ವಾದ ಮುಂದಿಟ್ಟಿದ್ದಿದ್ದರೂ ಸುಪ್ರೀಂ ಪೀಠ ಅದನ್ನು ಆಲಿಸಿ, ತನ್ನ ನಿಲುವನ್ನು ಮುಂದೂಡುತ್ತಿತ್ತೇನೋ, ಆದರೆ, ಅಂಥ ಪಾರದರ್ಶಕ ಹೆಜ್ಜೆಯನ್ನೂ ಸರಕಾರ ಇಲ್ಲಿ ಇಟ್ಟಿಲ್ಲವೇಕೆ ಎನ್ನುವ ಪ್ರಶ್ನೆಯೂ ಬಾಕಿ ಉಳಿದಿದೆ.

ಒಟ್ಟಾರೆ, ಚುನಾವಣಾ ಬಾಂಡ್ ವಿಚಾರದಲ್ಲಿ ಜನಸಾಮಾನ್ಯರಲ್ಲಿ ಮೂಡಿರುವ ಈ ಗೊಂದಲಗಳಿಗೆ ತೆರೆ ಎಳೆಯಲು ಸುಪ್ರೀಂ ಕೋರ್ಟ್ ಮುಂದಾಗಬೇಕು. ಮುಕ್ತತೆ, ಪಾರದರ್ಶಕತೆ ಎನ್ನುವುದು ಪ್ರಜಾಪ್ರಭುತ್ವದ ಸೌಂದರ್ಯಗಳಲ್ಲೊಂದು. ಈ ಸೌಂದರ್ಯವನ್ನು ವ್ಯವಸ್ಥೆ ಕಾಪಾಡಿಕೊಳ್ಳಲಿ ಎನ್ನುವುದು ಜನರ ಆಶಯ.

ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೦೭-೦೩-೨೦೨೪ 

ಚಿತ್ರ ಕೃಪೆ: ಅಂತರ್ಜಾಲ ತಾಣ