ಎ ಮಾಂಕ್ ವಿತ್ ವಿಲ್ ಪವರ್

ಎ ಮಾಂಕ್ ವಿತ್ ವಿಲ್ ಪವರ್

 

೧೮೬೩, ಪ್ರಥಮ ಸ್ವಾತಂತ್ರ್ಯ ಸಂಗ್ರಾಮವಾದ ಆರು ಸಂವತ್ಸರಗಳ ನಂತರ, ಭರತಖಂಡ ಅಂಧಕಾರದಲ್ಲಿ ತೇಲುತ್ತಿದ್ದ ಸಮಯ. ಇಂಗ್ಲೆಂಡಿನಿಂದ ಸಾಂಬಾರ ಪದಾರ್ಥಗಳನ್ನು ಮಾರಲೆಂದು ಬಂದ ಬ್ರಿಟಿಷರು ಭರತಖಂಡವನ್ನು ದಾಸ್ಯ ಶೃಂಖಲೆಯಲ್ಲಿರಿಸಿ ಅಟ್ಟಹಾಸದಿಂದ ಮೆರೆಯುತ್ತಿದ್ದ ಸಮಯ. ಭಾರತೀಯರ ಸ್ವಾಭಿಮಾನವು ಅಧಃಪತನಗೊಳ್ಳುತ್ತಿದ್ದ ಸಮಯ. ಸ್ವಂತಿಕೆ ಎಂಬುದು ಕರಗಿ ಪಾಶ್ಚಾತ್ಯರ ಅನುಕರಣೆ ಮಾಡಲು ಮುಂದಾದ ಸಮಯ. ಕ್ರೈಸ್ತ ಮಿಷನರಿಗಳಿಂದ, ಅವರು ಒಡ್ಡುತ್ತಿದ್ದ ಆಮಿಷಗಳಿಗೆ ಬಲಿಯಾಗಿ ತಮ್ಮ ಧರ್ಮವನ್ನು ತ್ಯಜಿಸಿ ಹಿಂದೂಗಳು ಕ್ರೈಸ್ತರಾಗುತ್ತಿದ್ದ ಸಮಯ. ಸ್ವಾತಂತ್ರ್ಯವನ್ನು ಗಳಿಸಿ ಬ್ರಿಟಿಷರನ್ನು ಭಾರತದಿಂದ ಓಡಿಸಲು ಬೇಕಾದ ಇಚ್ಚಾಶಕ್ತಿಯನ್ನು ಕಳೆದುಕೊಂಡು ಅಸಹಾಯಕತೆಯಿಂದ ನಿರ್ವೀರ್ಯರಾಗಿದ್ದ ಸಮಯ. ಇಂತಹ ಸಮಯದಲ್ಲಿ ಭರತಖಂಡದ ಉದ್ಧಾರಕ್ಕಾಗಿಯೇ ಜನಿಸಿದ, ತಮ್ಮ ದೇಶದ ಯುವಶಕ್ತಿಯ ಸುಪ್ತ ಮನಸ್ಸಿನಲ್ಲಿ ಅಡಗಿದ್ದ ಸಿಂಹ ಸದೃಶ ವ್ಯಕ್ತಿತ್ವವನ್ನು ತೋರಿಸಿಕೊಡಲು ಜನಿಸಿದ, ಹಿಂದೂ ಧರ್ಮದ ಸಾರವನ್ನು ಇಡೀ ಪ್ರಪಂಚಕ್ಕೆ ತಿಳಿಸಿ ಅಲ್ಪಾಯುಷಿಯಾಗಿ ಬಾಳಿದರೂ ತಾನು ನಿರ್ವಹಿಸಬೇಕಾದ ಕರ್ತವ್ಯವನ್ನು ಕೇವಲ ಮೂವತ್ತೊಂಬತ್ತೂವರೆ ವರ್ಷದ ಆಯಸ್ಸಿನಲ್ಲಿ ಮುಗಿಸಿ ಸಾವಿರಾರು ವರ್ಷ ಉಳಿಯುವ ಆದರ್ಶಗಳನ್ನು ಪ್ರಪಂಚದುದ್ದಕ್ಕೂ ಸಾರಿದ ವೀರ ಸನ್ಯಾಸಿ, ವಿಶ್ವಮಾನವರಾದ ಸ್ವಾಮಿ ವಿವೇಕಾನಂದರ ಬಾಳಿನ ಒಂದು ಸಣ್ಣ ಇಣುಕು ನೋಟ ಲೇಖನ.

ಸ್ವಾಮಿ ವಿವೇಕಾನಂದರು ಹುಟ್ಟಿದ್ದು ೧೮೬೩ ಜನವರಿ ೧೨ ರಂದು, ಕಲ್ಕತ್ತದಲ್ಲಿ. ತಂದೆ ವಿಶ್ವನಾಥ ದತ್ತ. ತಾಯಿ ಭುವನೇಶ್ವರಿ ದೇವಿಯವರ ಪುತ್ರರಾದ ಇವರ ಜನ್ಮ ನಾಮ ವೀರೇಶ್ವರ ಮತ್ತು ಬಳಕೆಯ ನಾಮ ನರೇಂದ್ರನಾಥ ದತ್ತ. ನರೇಂದ್ರನ ಅಜ್ಜ ದುರ್ಗಾಚರಣ. ಈತ ಪರ್ಷಿಯನ್ ಮತ್ತು ಸಂಸ್ಕೃತ ಭಾಷೆಗಳಲ್ಲಿ ಪಂಡಿತರಾಗಿದ್ದು ಸನ್ಯಾಸದಲ್ಲಿ ತಡೆಯಲಸಾಧ್ಯವಾದ ಆಕರ್ಷಣೆ. ಬುದ್ಧನಂತೆಯೇ, ಕುವರನೊಬ್ಬನ ಜನನಾನಂತರ ತನ್ನ ಇಪ್ಪತ್ತೈದನೇ ವಯಸ್ಸಿನಲ್ಲಿ ಸನ್ಯಾಸಿಯಾಗಿ ಹೊರಟುಹೋದರು. ಅದೇ ರಕ್ತದಲ್ಲಿ ಜನಿಸಿದ ನರೇಂದ್ರನಿಗೆ ಬಾಲ್ಯದಿಂದಲೇ ಧ್ಯಾನ, ಜಪತಪಗಳಲ್ಲಿ ಹೆಚ್ಚು ಆಸಕ್ತಿ. ಒಮ್ಮೆ ಸೀತಾರಾಮರ ವಿಗ್ರಹವನ್ನು ಕೊಂಡು ತಂದು ಕೋಣೆಯಲ್ಲಿಟ್ಟು ಧ್ಯಾನಮಗ್ನನಾದ. ಮನೆಯೆಲ್ಲ ಹುಡುಕಿ, ನರೇಂದ್ರನನ್ನು ಕಾಣದೆ ತಂದೆ ತಾಯಿಗಳು ಚಿಂತಾಕ್ರಾಂತರಾದರು. ಕೊನೆಗೆ, ಒಳಗಿನಿಂದ ಅಗುಳಿ ಹಾಕಿದ್ದ ಕೋಣೆಯ ಬಾಗಿಲನ್ನು ಒಡೆದು ನೋಡಿದರೆ ಧ್ಯಾನಲೀನನಾಗಿ ಯಾವುದರ ಪರಿವೆಯೂ ಇಲ್ಲದೆ ಕುಳಿತಿದ್ದ ನರೇಂದ್ರ.

೧೮೮೪ ರಲ್ಲಿ ನರೇಂದ್ರ ಬಿ.ಎ ಪರೀಕ್ಷೆಯಲ್ಲಿ ತೇರ್ಗಡೆಯಾದ. ನರೇಂದ್ರನ ವ್ಯಾಸಂಗ ಪಠ್ಯ ಪುಸ್ತಕಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ. ಇಂಗ್ಲಿಷ್ ಮತ್ತು ಬಂಗಾಳಿ ಸಾಹಿತ್ಯದ ಎಲ್ಲ ಪ್ರಮುಖ ಗ್ರಂಥಗಳನ್ನೂ, ಪಾಶ್ಚಾತ್ಯ ತರ್ಕಶಾಸ್ತ್ರದ ಎಲ್ಲ ಮೇರು ಕೃತಿಗಳನ್ನೂ, ಪ್ರಮುಖ ಇತಿಹಾಸದ ಗ್ರಂಥಗಳನ್ನೂ ಅಭ್ಯಸಿಸಿ ಕರತಲಾಮಲಕ ಮಾಡಿಕೊಂಡಿದ್ದ. ಹರ್ಬರ್ಟ್ ಸ್ಪೆನ್ಸರ್, ಕಾಂಟ್, ಷೋಪೆನ್ಹಾರ್, ಜಾನ್ ಸ್ಟೂಯರ್ಟ್ ಮಿಲ್, ಆಗಸ್ಟ್ ಕಾಂಟೆ - ಇವರೆಲ್ಲರ ಕೃತಿಗಳನ್ನು ವಿಮರ್ಶಾತ್ಮಕವಾಗಿ ಅಧ್ಯಯನ ಮಾಡಿದ್ದ. ನರೇಂದ್ರ ಅಹಮದ್ ಖಾನ್ ಮತ್ತು ವೇಣಿಗುಪ್ತರಲ್ಲಿ ನಾಲ್ಕೈದು ವರ್ಷ ಶಾಸ್ತ್ರೀಯ ಸಂಗೀತಾಭ್ಯಾಸ ಮಾಡಿ ಉತ್ತಮ ಗಾಯಕನಾಗಿದ್ದನು. ಆ ಎಳೆಯ ವಯಸ್ಸಿನಲ್ಲೇ ಭಾರತೀಯ ಸಂಗೀತ ಶಾಸ್ತ್ರದ ತತ್ತ್ವ ಮತ್ತು ತಂತ್ರಗಳನ್ನು ಕುರಿತು ಧೀರ್ಘವಾಗಿ ಚರ್ಚಿಸಿ ಸ್ನೇಹಿತನೊಬ್ಬನಿಂದ ರಚಿತವಾದ ಬಂಗಾಳಿ ಗೀತೆಗಳ ಸಂಕಲನವೊಂದಕ್ಕೆ ವಿದ್ವತ್ಪೂರ್ಣವಾದ ಪೀಠಿಕೆಯನ್ನು ಬರೆದಿದ್ದನು.

ನರೇಂದ್ರನಲ್ಲಿ ಆಧ್ಯಾತ್ಮಿಕ ಪ್ರವೃತ್ತಿ ಕ್ರಮೇಣ ಬಲಗೊಂಡು ಅದು ಅವನ ವ್ಯಕ್ತಿತ್ವದ ಮೇಲೆ ಒತ್ತಡ ಬೀರಲಾರಂಭಿಸಿತ್ತು. ಯುವಕ ನರೇಂದ್ರನೀಗ ಎರಡು ವಿಭಿನ್ನ ಆದರ್ಶಗಳನ್ನು ಕಾಣುತ್ತಿದ್ದ. ಪ್ರತಿ ರಾತ್ರಿಯೂ ಮಲಗಿಕೊಂಡಾಗ ಅವನ ಕಣ್ಣಿನ ಮುಂದೆ ಪರಸ್ಪರ ವಿರುದ್ಧ ಸ್ವಭಾವದ ಎರಡು ಅದ್ಭುತ ದೃಶ್ಯಗಳು ಮೂಡಿ ನಿಲ್ಲುತ್ತಿತ್ತು. ಒಂದು ವಿಲಾಸಪೂರ್ಣವಾದ ಭೋಗ ಜೀವನ; ಮತ್ತೊಂದು ಸರ್ವಸಂಗ ಪರಿತ್ಯಾಗಿಯಾದ ಸನ್ಯಾಸಿಯ ಆದರ್ಶವನ್ನು. ಆದರೆ ನರೇಂದ್ರನಿಗೆ ಧೃಡ ನಂಬಿಕೆಯಿತ್ತು. ಈ ಎರಡರಲ್ಲಿ ತಾನು ಯಾವುದೇ ದಾರಿಯನ್ನು ಆರಿಸಿಕೊಂಡರೂ ಅದರಲ್ಲೇ ಯಶಸ್ವಿಯಾಗಿ ಮುನ್ನಡೆದು ಆ ಆದರ್ಶವನ್ನು ಸಿದ್ಧಿಸಿಕೊಳ್ಳಬಲ್ಲೆ ಎಂದು. ಆದರೆ ಅವನಿಗೆ ತ್ಯಾಗ ಜೀವನದ ಚಿತ್ರವೇ ಹೆಚ್ಚು ಆಕರ್ಷಕವಾಗಿ ಕಾಣುತ್ತಿತ್ತು. ಕೊನೆಗೆ ಅವನ ಆಧ್ಯಾತ್ಮಿಕ ವ್ಯಕ್ತಿತ್ವ ಅವನ ಲೌಕಿಕ ವ್ಯಕ್ತಿತ್ವವನ್ನು ಮೆಟ್ಟಿ ನಿಂತು ಸಂಪೂರ್ಣ ಜಯಶಾಲಿಯಾಯಿತು. ಅವನು ಭಗವಂತನ ನೇರ ಸಾಕ್ಷಾತ್ಕಾರಕ್ಕೆ ನೆರವಾಗುವಂತಹ ತ್ಯಾಗಜೀವನವನ್ನೇ ಆರಿಸಿಕೊಂಡ.

ನರೇಂದ್ರನಲ್ಲಿ ಈಗ ಭಗವಂತನ ಸಾಕ್ಷಾತ್ಕಾರಕ್ಕಾಗಿ ಉತ್ಕಟ ವ್ಯಾಕುಲತೆಯುಂಟಾಗಿದೆ. ಆದರೆ ಅವನಿಗೆ ಮೂರ್ತಿಪೂಜೆಯಲ್ಲಿ ನಂಬಿಕೆಯಿರಲಿಲ್ಲ. ಅವನು ಯೋಚಿಸುತ್ತಿದ್ದ, ಭಗವಂತನನ್ನು ತಮ್ಮ ಸಾಧನೆಗಳಿಂದ ಈಗಾಗಲೇ ಕಂಡವರಿರಬಹುದಲ್ಲವೇ? ಅವರನ್ನು ಕೇಳಿದರೆ ಅವರು ತನಗೆ ಭಗವಂತನನ್ನು ತೋರಿಸಿಕೊಡಬಹುದಲ್ಲವೇ! ಎಂದು. ಹಲವಾರು ಧರ್ಮ ಗುರುಗಳ ಬಳಿ ಅವನು ಕೇಳುತ್ತಿದ್ದ ಒಂದೇ ಪ್ರಶ್ನೆಯೆಂದರೆ "ನೀವು ಭಗವಂತನನ್ನು ಕಂಡಿದ್ದೀರಾ?" ಎಂದು. ಆದರೆ ಯಾರ ಬಳಿಯಲ್ಲೂ ಅವನಿಗೆ ಸರಿಯಾದ ಸ್ಪಷ್ಟವಾದ ಉತ್ತರ ಸಿಗಲಿಲ್ಲ.

ಆದರೆ ದೈವಸಂಕಲ್ಪ ಬೇರೆಯೇ ಇತ್ತು. ನರೇಂದ್ರನಿಗೆ ರಾಮಕೃಷ್ಣರ ಮೊದಲ ಪರಿಚಯ ವಿಲಿಯಮ್ ಹೆಸ್ಟಿಯವರ ತರಗತಿಯಲ್ಲಿ. ಹೆಸ್ಟಿಯವರು ವಿಲಿಯಮ್ ವರ್ಡ್ಸ್ವವರ್ತ್ ಅವರ "ದ ಎ‍ಕ್ಸಕರ್ಶನ್" ಎಂಬ ಕವಿತೆಯಲ್ಲಿನ "ಸಮಾಧಿ" ಪದವನ್ನು ವಿವರಿಸುವಾಗ ಸಮಾಧಿಯ ನಿಜವಾದ ಅರ್ಥ ತಿಳಿಯಲು ದಕ್ಷಿಣೇಶ್ವರದ ರಾಮಕೃಷ್ಣರನ್ನೊಮ್ಮೆ ಭೇಟಿ ನೀಡಿ ಎಂದು ಸಲಹೆ ಇತ್ತರು. ನರೇಂದ್ರ ದಕ್ಷಿಣೇಶ್ವರದ ರಾಮಕೃಷ್ಣರನ್ನು ಭೇಟಿಯಾದ ಮೊದಲ ದಿನವೇ ಕೇಳಿದ ಪ್ರಶ್ನೆ ಅದೇ. "ನೀವು ಭಗವಂತನನ್ನು ಕಂಡಿದ್ದೀರಾ?" ಎಂಬುದು. ಆದರೆ ಈ ಸಲ ಸಿಕ್ಕಿದ ಉತ್ತರ ಬೇರೆಯೇ ಆಗಿತ್ತು. "ಹೌದು, ನಾನು ನಿನ್ನನ್ನು ಇಲ್ಲಿ ಕಾಣುವಂತೆಯೇ ದೇವರನ್ನೂ ಕಾಣುತ್ತೇನೆ, ನಿನ್ನೊಡನೆ ಮಾತಾಡುವಂತೆಯೇ ದೇವರೊಡನೆ ಮಾತನಾಡಬಹುದು" ಎಂದು. ಆದರೆ ನರೇಂದ್ರ ಯಾವುದನ್ನೇ ಆಗಲಿ ಪರೀಕ್ಷೆ ಮಡಿದ ನಂತರವೇ ಒಪ್ಪುವವನು. ತನ್ನ ಗುರು ಎಂದು ರಾಮಕೃಷ್ಣರನ್ನು ಅಂಗೀಕರಿಸುವ ಮೊದಲು ಅವರನ್ನು ಹಲವಾರು ರೀತಿಯಲ್ಲಿ ಪರೀಕ್ಷೆ ಮಾಡಿದನು. ರಾಮಕೃಷ್ಣರೂ ಅಷ್ಟೇ, ನರೇಂದ್ರನನ್ನು ಪರೀಕ್ಷಿಸಿದ ನಂತರವೇ ತನ್ನ ಶಿಷ್ಯನನ್ನಾಗಿ ಮಾಡಿಕೊಂಡರು. ಆದರೆ ಈ ಗುರು ಶಿಷ್ಯರ ಭಾಂಧವ್ಯ ನರೇಂದ್ರನನ್ನು ಇಡೀ ವಿಶ್ವಕ್ಕೆ ಸ್ವಾಮಿ ವಿವೇಕಾನಂದರನ್ನಾಗಿ ನೀಡಿತು.

೧೮೮೬ ಆಗಸ್ಟ್ ೧೬ರ ರಾತ್ರಿ ಶ್ರೀ ರಾಮಕೃಷ್ಣರು ಮಹಾಸಮಾಧಿಯನ್ನೈದಿದರು. ಗುರುದೇವರ ಆಜ್ಞಾನುಸಾರ ಅವರ ಮಹಾಸಮಾಧಿಯ ನಂತರ ನಾಯಕತ್ವದ ಹೊಣೆ ನರೇಂದ್ರನ ಮೇಲೆ ಬಿದ್ದಿತು. ತನ್ನನ್ನು ಸೇರಿಸಿ ಒಟ್ಟು ಎಂಟು ಜನ ಯುವಕರು ವಿರಜಾ ಹೋಮ ಮಾಡಿ ಆಜೀವ ಬ್ರಹ್ಮಚರ್ಯ, ದೈವ ಸಾಕ್ಷಾತ್ಕಾರಕ್ಕಾಗಿ ತಮ್ಮನ್ನೇ ಮುಡಿಪಿಟ್ಟುಕೊಳ್ಳುವ ಪ್ರತಿಜ್ಞೆ ಮಾಡಿದರು. ಹಸಿವು ನಿದ್ರೆಗಳನ್ನು ಮರೆತು ಅವರೆಲ್ಲರೂ ಧ್ಯಾನ, ಜಪತಪಗಳಲ್ಲಿ ಮುಳುಗಿದರು. ತಮ್ಮ ಹಳೆಯ ಜೀವನವನ್ನು ಸಂಪೂರ್ಣವಾಗಿ ಬಿಟ್ಟು ಹೊಸ ಜೀವನವನ್ನು ಉಗ್ರ ವೈರಾಗ್ಯದೊಡನೆ ಅವಲಂಬಿಸಿದಂತೆ ಹೊಸ ಹೆಸರುಗಳನ್ನು ತೆಗೆದುಕೊಂಡರು. ಆಗಲೇ ನರೇಂದ್ರನಿಗೆ ಸ್ವಾಮಿ ವಿವೇಕಾನಂದ ಎಂಬ ಮರುನಾಮಕರಣವಾದದ್ದು.

೧೮೮೭ ರಲ್ಲಿ ಸ್ವಾಮಿ ವಿವೇಕಾನಂದರು ಬಾರಾನಗರ ಮಠವನ್ನು ಬಿಟ್ಟು ಪುಣ್ಯಸ್ಥಳಗಳಿಗೆ ಹೊರಟರು. ಈ ಸಮಯದಲ್ಲಿ ಸ್ವಾಮಿಗಳು ಎದುರಿಸಿದ ಕಷ್ಟಗಳು ಒಂದೆರಡಲ್ಲ. ಊರಿಂದ ಊರಿಗೆ ಅಲೆಯುತ್ತ, ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುತ್ತಾ, ಭಿಕ್ಷೆಯಲ್ಲಿ ಹೊಟ್ಟೆ ತುಂಬಿಸಿಕೊಳ್ಳುತ್ತ ಜನಸಾಮಾನ್ಯರ ಕಷ್ಟ ಸುಖಗಳನ್ನು ನೋಡುತ್ತಾ ಅಲೆಯುತ್ತಿದ್ದರು. ಕೆಲವು ದಿನಗಳು ಒಂದು ಹೊತ್ತಿನ ಊಟವು ಸಿಕ್ಕುತ್ತಿರಲಿಲ್ಲ. ಸ್ವಾಮಿ ವಿವೇಕಾನಂದರು ಪ್ರತಿ ಊರಿನಲ್ಲಿಯೂ ಬೇರೆ ಬೇರೆ ಹೆಸರುಗಳನ್ನೂ ಹೇಳಿಕೊಳ್ಳುತ್ತಿದ್ದರು. ಒಂದು ಕಡೆ ವಿವಿಧಿಶಾನಂದ ಎಂದು ಮತ್ತೊಂದು ಕಡೆ ಸಚ್ಚಿದಾನಂದ ಎಂದು ಇನ್ನು ಕೆಲವು ಕಡೆ ಸನ್ಯಾಸಿಯಾದ ತನಗೆ ಯಾವುದೇ ಹೆಸರಿಲ್ಲ ಎಂದು ಹೇಳಿಕೊಳ್ಳುತ್ತಿದ್ದರು. ಆದರೆ, ಈ ಜೀವನವನ್ನು ಅವರು ತುಂಬಾ ಪ್ರೀತಿಸುತ್ತಿದ್ದರು. ಮುಂದೆ ಸ್ವಾಮಿ ವಿವೇಕಾನಂದರು ಜಗತ್ವಿಖ್ಯಾತರಾದಮೇಲೂ ಅವರು ಈ ದಿನಗಳನ್ನು ನೆನೆದು ಆಹಾ! ಎಂತಹ ಸುದಿನಗಳವು ಎಂದು ಭಾವುಕರಾಗುತ್ತಿದ್ದರು.

ಬೌದ್ಧಿಕತೆಗೂ ಆಧ್ಯಾತ್ಮಿಕತೆಗೂ ಬಹಳ ವ್ಯತ್ಯಾಸವಿದೆ. ವಿಚಾರಗಳ ಮೂಲಕ ತಿಳಿಯಬಹುದಾದದ್ದು ಬೌದ್ಧಿಕತೆ; ಆತ್ಮಾನುಭವದ ಮೂಲಕ ತಿಳಿಯಬಹುದಾದದ್ದು ಆಧ್ಯಾತ್ಮಿಕತೆ. ಹಾಗೆಯೇ, ಆಧ್ಯಾತ್ಮಿಕ ಅನುಭವಗಳಿಗೂ ಭಗವತ್ಸಾಕ್ಷಾತ್ಕಾರಕ್ಕೂ ಬಹಳ ವ್ಯತ್ಯಾಸವಿದೆ. ಆಧ್ಯಾತ್ಮಿಕ ಅನುಭವವೆಂಬುದು ಸಾಧಕನು ಸಾಧನೆಯ ಸರಿಯಾದ ಮಾರ್ಗದಲ್ಲಿದ್ದಾನೆ ಎನ್ನುವುದನ್ನು ಸೂಚಿಸುವುದೇ ಹೊರತು ಭಗವತ್ಸಾಕ್ಷಾತ್ಕಾರವನ್ನೇ ಅಲ್ಲ. ನಿಜವಾದ ಸಾಕ್ಷಾತ್ಕಾರ ಆದ ಮೇಲೆ ಇನ್ನು ಅಲ್ಲಿ ಸಂಶಯ ಹೋರಾಟಗಳಿರಬಾರದು. ಅಲ್ಲಿ ದುಃಖದ ಕಿಲುಬೇ ಇರಬಾರದು. ವಿವೇಕಾನಂದರು ಇಂತಹ ಸ್ಥಿತಿಯನ್ನು ತಲುಪಿದ್ದರು.

ನಂತರ ಸ್ವಾಮಿ ವಿವೇಕಾನಂದರು ತಮ್ಮ ಶಿಷ್ಯರಿಗೆಲ್ಲ ಹೇಳಿ ಬಾರಾನಗರ್ ಮಠವನ್ನು ಬಿಟ್ಟು ಇಡೀ ದೇಶವೆಲ್ಲಾ ಸಂಚರಿಸಿದರು. ಭಾರತೀಯರ ದುಃಖ ದಾರಿದ್ಯವನ್ನು ಕಣ್ಣಾರೆ ಕಂಡರು. ಕಂಡು ಕಣ್ಣೀರಿಟ್ಟರು. ಎಷ್ಟೋ ಜನ ಕೇವಲ ತಮ್ಮ ಮುಕ್ತಿಗಾಗಿ ಹೋರಾಡುತ್ತಿದ್ದಾರೆ, ತಮ್ಮ ಸ್ವಾರ್ಥಕ್ಕಾಗಿ ಸೆಣೆಸಾಡುತ್ತಿದ್ದಾರೆ. ಆದರೆ ಇವರಲ್ಲಿ ಜಾಗೃತಿ ಮೂಡಿಸಬೇಕು. ಇಡೀ ದೇಶದ ಕೊನೆಯ ದರಿದ್ರ ನಾರಾಯಣನ ಸೇವೆಗೆ ದೇಶ ಸಿದ್ಧರಾಗಬೇಕಿದೆ. ಎಲ್ಲರ ಮುಕ್ತಿಗಾಗಿ ಶ್ರಮಿಸಬೇಕಾಗಿದೆ. ಅದನ್ನು ಭಾರತೀಯ ಜನಮನದಲ್ಲಿ ಮೂಡಿಸುವುದೇ ತನ್ನ ಮುಖ್ಯ ಕರ್ತವ್ಯ ಎಂದು ಸ್ವಾಮೀಜಿ ಅರಿತುಕೊಂಡರು. ಆಗಲೇ ಅವರಿಗೆ ಅಮೇರಿಕಾದಲ್ಲಿ ಸರ್ವಧರ್ಮ ಸಮ್ಮೇಳನ ನಡೆಯುತ್ತಿರುವ ಸಮಾಚಾರ ತಿಳಿಯಿತು. ಖೇತ್ರೀಯ ಮಹಾರಾಜ ಅಜಿತ್ ಸಿಂಗನ ಸಹಾಯದಿಂದ ಸ್ವಾಮೀಜಿ ಅಮೇರಿಕಾ ಪ್ರವಾಸ ಕೈಗೊಂಡರು. ಅವರ ಉದ್ದೇಶ ಸ್ಪಷ್ಟವಿತ್ತು; ಪಾಶ್ಚಾತ್ಯರಿಗೆ ಅದ್ಭುತ ಆಧ್ಯಾತ್ಮಿಕತೆಯ ಅವಶ್ಯಕತೆ ಇದೆ ಮತ್ತು ಭಾರತದಲ್ಲಿ ಆಧ್ಯಾತ್ಮಿಕತೆಗೆ ಕೊರತೆಯಿಲ್ಲ. ಇರುವುದೆಲ್ಲ ಇಚ್ಛಾ ಶಕ್ತಿಯ ಮತ್ತು ಆರ್ಥಿಕತೆಯ ಕೊರತೆ. ಸ್ವಾಮಿ ವಿವೇಕಾನಂದರು ನಿರ್ಧರಿಸಿದರು, ಪಾಶ್ಚಾತ್ಯರಿಗೆ ವೇದಾಂತದ ತತ್ತ್ವವನ್ನು ತಿಳಿಸಿ ಆಧ್ಯಾತ್ಮಿಕತೆಯನ್ನು ಪಸರಿಸಿ ತಾವು ಭಾರತಕ್ಕೆ ಬೇಕಾದ ಆರ್ಥಿಕ ನೆರವನ್ನು ಸಂಪಾದಿಸಬೇಕು ಎಂದು.

ಸ್ವಾಮೀಜಿಯವರಿಗೆ ಮೂರ್ತಿಪೂಜೆಯಲ್ಲಿ ನಂಬಿಕೆ ಇರಲಿಲ್ಲ ಎಂದು ಮೊದಲು ನಾವು ತಿಳಿದೆವು. ಆದರೆ ಶ್ರೀ ರಾಮಕೃಷ್ಣರ ಸಹಸಂಘದಿಂದ ಸ್ವಾಮೀಜಿಯವರಿಗೆ ಮೂರ್ತಿ ಪೂಜೆಯೂ ದೈವ ಸಾಕ್ಷಾತ್ಕಾರದ ಒಂದು ದಾರಿ ಎಂಬುದು ಮನವರಿಕೆಯಾಯಿತು. ಭಗವದ್ಗೀತೆಯಲ್ಲಿ ಶ್ರೀ ಕೃಷ್ಣನು ಹೇಳಿರುವಂತೆ ಭಕ್ತರು ಯಾವುದೇ ಮಾರ್ಗದಲ್ಲಿ ನನ್ನನ್ನರಸಿ ಬಂದರೂ ನಾನು ಅವರನ್ನು ಅದೇ ದಾರಿಯಲ್ಲೇ ಸ್ವೀಕರಿಸುತ್ತೇನೆ. ಬೇರೆ ಬೇರೆ ನದಿಗಳು ಸಾಗರವನ್ನು ಸೇರಿ ಒಂದಾಗುವಂತೆ ಬೇರೆ ಬೇರೆ ದಾರಿಯಲ್ಲಿ ಭಕ್ತರು ನನ್ನನ್ನೇ ಸೇರಲು ಬರುತ್ತಿದ್ದಾರೆ ಎಂಬುದನ್ನು ಸ್ವಾಮೀಜಿ ಒಪ್ಪಿದರು. ಇದಕ್ಕೆ ಒಂದು ಉದಾಹರಣೆಯನ್ನು ಸ್ವಾಮೀಜಿಗೂ ಆಲ್ವರ್ ಮಹಾರಾಜ ಮಂಗಳಸಿಂಗನಿಗೂ (ನಡೆದ ಸಂಭಾಷಣೆಯಲ್ಲಿ ನೋಡಬಹುದು:

ಮಂಗಳಸಿಂಗ: "ಸ್ವಾಮೀಜಿ ಮಹಾರಾಜ್ ನನಗೆ ಮೂರ್ತಿಪೂಜೆಯಲ್ಲಿ ನಂಬಿಕೆ ಇಲ್ಲ. ನನ್ನ ಗತಿ ಏನು"?

ಸ್ವಾಮೀಜಿ: "ನಿಜವಾಗಿ ನೀನು ತಮಾಷೆ ಮಾಡುತ್ತಿದ್ದೀಯೆ".

ಮಂಗಳಸಿಂಗ: "ಇಲ್ಲ ಸ್ವಾಮೀಜಿ, ನಿಜವಾಗಿ ಇಲ್ಲ. ಮಿಕ್ಕವರಂತೆ ನಾನು ಕಲ್ಲು, ಮಣ್ಣು, ಮರ, ಲೋಹಗಳನ್ನು ದೇವರೆಂದು ಪೂಜಿಸಲಾರೆ. ಇದರಿಂದ ನನಗೆ ಪರದಲ್ಲಿ ಕೆಡಕಾಗುತ್ತದೆಯೇ"?

ಸ್ವಾಮೀಜಿ: "ಸರಿಯೇ, ಪ್ರತಿಯೊಬ್ಬರೂ ಅವರವರ ನಂಬಿಕೆಯಂತೆ ಅವರವರ ಧಾರ್ಮಿಕ ಆದರ್ಶಗಳನ್ನು ಅನುಸರಿಸಬೇಕು".

ಸುತ್ತ ನಿಂತಿದ್ದ ಸ್ವಾಮೀಜಿಯ ಭಕ್ತರಿಗೆ ಸ್ವಾಮೀಜಿಗೆ ಮೂರ್ತಿಪೂಜೆಯಲ್ಲಿ ಎಂತಹ ವಿಶ್ವಾಸವಿದೆ ಎಂದು ಗೊತ್ತಿತ್ತು. ಸಪ್ಪೆಯಾದ ಉತ್ತರದಿಂದ ಅವರಿಗೆ ಆಶಾಭಂಗವಾಯಿತು. ಆದರೆ ಸ್ವಲ್ಪ ಹೊತ್ತಿನಲ್ಲೇ, ಸ್ವಾಮೀಜಿ ತಮ್ಮ ಉತ್ತರವನ್ನು ಇನ್ನೂ ಮುಗಿಸಿಲ್ಲವೆಂಬುದು ಕಂಡಿತು. ಮಹಾರಾಜರ ಫೋಟೋ ಒಂದು ಗೋಡೆಯ ಮೇಲಿತ್ತು. ಅದನ್ನು ತೆಗೆದುಕೊಡುವಂತೆ ಸ್ವಾಮೀಜಿ ಕೇಳಿದರು. ನಂತರ ಮಂತ್ರಿಗಳಿಗೆ ಹಾಗು ಅಲ್ಲಿ ನೆರೆದಿದ್ದ ಇತರ ಜನರಿಗೆ ಫೋಟೋ ಮೇಲೆ ಉಗುಳುವಂತೆ ಹೇಳಿದರು. ಇದರಿಂದ ದಿಗ್ಭ್ರಾಂತರಾದ ಜನ "ಏನು ಸ್ವಾಮಿ ನೀವು ಹೇಳುತ್ತಿರುವುದು? ಇದು ನಮ್ಮ ಮಹಾರಾಜರ ಫೋಟೋ" ಎಂದು ಗಾಬರಿಯಲ್ಲಿ ಹೇಳಿದರು. ಸ್ವಾಮೀಜಿ ಮಹಾರಾಜರ ಕಡೆಗೆ ತಿರುಗಿ "ನೋಡು ಮಹಾರಾಜಾ, ಒಂದು ದೃಷ್ಟಿಯಿಂದ ಇದು ನೀನಲ್ಲ. ಇನ್ನೊಂದು ದೃಷ್ಟಿಯಿಂದ ಇದು ನೀನೆ. ಆದುದರಿಂದ ಇದರ ಮೇಲೆ ಉಗುಳಿ ಎಂದು ಹೇಳಿದಾಗ ನಿನ್ನ ಸೇವಕರಿಗೆ ಗಲಿಬಿಲಿಯಾಯಿತು. ಇದು ನಿನ್ನ ನೆರಳು ಮಾತ್ರ ಆದರೆ, ಇದು ನಿನ್ನ ಜ್ಞಾಪಕ ತರುತ್ತದೆ. ಆದುದರಿಂದಲೇ ಇದನ್ನು ಕಂಡರೆ ಜನರಿಗೆ ನಿನ್ನನ್ನು ಕಂಡಷ್ಟೇ ಗೌರವ; ಅದೇ ರೀತಿ, ಕಲ್ಲು, ಲೋಹದ ಮೂರ್ತಿಗಳನ್ನು ಪೂಜಿಸುವ ಭಕ್ತರಿಗೆ. ಆದುದರಿಂದಲೇ ಅದನ್ನು ನೋಡಿದಾಗ ಅವರಿಗೆ ಅವರ ಇಷ್ಟ ದೈವದ ನೆನಪು ಬರುತ್ತದೆ. ಅದನ್ನು ಕಲ್ಲೇ, ಮರವೇ ಎಂದು ಅವರು ಪೂಜಿಸುವುದಿಲ್ಲ. ಕಲ್ಲಿನಲ್ಲಿ ಅಥವಾ ಲೋಹದಲ್ಲಿ ಅಡಗಿರುವ ದೇವರ ಚೈತನ್ಯವನ್ನು ಅವರು ಪೂಜಿಸುತ್ತಾರೆ" ಎಂದರು. ಮಹಾರಾಜ ಮಂಗಳಸಿಂಗ "ನನಗೆ ಇದುವರೆಗೂ ಇದರ ಅರಿವಿರಲಿಲ್ಲ, ಇಂದು ನೀವು ನನ್ನ ಕಣ್ಣು ತೆರೆಸಿದಿರಿ" ಎಂದು ಸ್ವಾಮೀಜಿಗೆ ಕೈ ಮುಗಿದ.

ಸ್ವಾಮಿ ವಿವೇಕಾನಂದರ ವಿಶ್ವಧರ್ಮ ಸಮ್ಮೇಳನದ ಭಾಷಣ ಹೇಗಿತ್ತು ಎಂಬುದು ಈಗ ಜನಜನಿತವಾಗಿದೆ. ಅದರ ಬಗ್ಗೆ ಹೆಚ್ಚು ವಿವರಣೆ ಅಗತ್ಯವಿಲ್ಲ ಎಂದು ಭಾವಿಸುತ್ತೇನೆ. ಆದರೆ ಅದರ ಪರಿಣಾಮ ಹೇಗಿತ್ತು ಎಂಬುದನ್ನು ಪಾಶ್ಚತ್ಯರಿಂದಲೇ ತಿಳಿಯೋಣ.

ಸಮ್ಮೇಳನದ ಅನೇಕ ಪ್ರೇಕ್ಷಕರಿಗೆ ಸ್ವಾಮೀಜಿಯವರು ಕ್ರೈಸ್ತಧರ್ಮದಲ್ಲಿ ಹಳೆಯ ಕೊಳೆಯಾಗಿ ಪರಿಣಮಿಸಿದ್ದ ಸಂಪ್ರದಾಯಸ್ಥ ಆಲೋಚನೆಯನ್ನು ಚುಚ್ಚಿ ಕ್ರೈಸ್ತರು ಎಚ್ಚೆತ್ತುಕೊಳ್ಳುವಂತೆ ಮಾಡಿದ ಮಹಾನುಭಾವರಂತೆ ಕಂಡರು. ಸರ್ ಹಿರಮ್ ಮ್ಯಾಕ್ಸಿಮ್ ಇಂಥವರಲ್ಲೊಬ್ಬ. ಇವನು ಇಪ್ಪತ್ತು ವರ್ಷಗಳ ಬಳಿಕ ತಾನು ಬರೆದ “Li Hung chang’s scrap-book” ಎಂಬ ಪುಸ್ತಕದ ಮುನ್ನುಡಿಯಲ್ಲಿ ಸಮ್ಮೇಳನದ ಮತ್ತು ಅದರ ಪರಿಣಾಮದ ಬಗ್ಗೆ ಹೀಗೆ ಬರೆಯುತ್ತಾನೆ:

"ಕೆಲ ವರ್ಷಗಳ ಹಿಂದೆ ಚಿಕಾಗೋದಲ್ಲಿ ಒಂದು ಸರ್ವಧರ್ಮ ಸಮ್ಮೇಳನ ನಡೆಯಿತು. ಇಂಥದೊಂದು ನಡೆಯಲು ಸಾಧ್ಯವೇ ಇಲ್ಲವೆಂದು ಕೆಲವರು ಹೇಳಿದ್ದರು. ಪ್ರತಿಯೊಂದು ಮತವೂ ಸಂಪೂರ್ಣ ಸತ್ಯವಾಗಿದ್ದು ಇತರ ಎಲ್ಲವೂ ಸಂಪೂರ್ಣ ತಪ್ಪಾಗಿರುವಾಗ ಯಾವುದೇ ಬಗೆಯ ಒಪ್ಪಂದಕ್ಕೆ ಬರಲು ಹೇಗೆ ತಾನೇ ಸಾಧ್ಯ? ಆದರೂ ಸಮ್ಮೇಳನ ನಡೆಯಿತು ಮತ್ತು ಅಮೆರಿಕಾದ ಜನತೆಗೆ ಪ್ರತಿ ವರ್ಷವೂ ಹತ್ತು ಲಕ್ಷ ಡಾಲರ್ ಗೂ ಹೆಚ್ಚು ಹಣವನ್ನು ಮಿಗಿಸಿಕೊಟ್ಟಿತು. ಇದೆಲ್ಲವೂ ಸಾಧ್ಯವಾದದ್ದು ಒಬ್ಬ ಧೀರ, ಪ್ರಾಮಾಣಿಕ ಮನುಷ್ಯನಿಂದ. ಅವನೇ ಕಲ್ಕತ್ತಾದಿಂದ ಬಂದಿದ್ದ ಸನ್ಯಾಸಿ. ವಿವೇಕಾನಂದ. ಈತನದು ಅತ್ಯಂತ ಪ್ರಭಾವಶಾಲಿ ವ್ಯಕ್ತಿತ್ವ. ಅಪರಿಮಿತ ಜ್ಞಾನ. ವೆಬ್ ಸ್ಟರ್ ಪ್ರದವೀಧರನಂತೆ ಇಂಗ್ಲಿಷ್ ಮಾತನಾಡಬಲ್ಲವನು. ಸಮ್ಮೇಳನದಲ್ಲಿ ಇತರ ಎಲ್ಲ ಪ್ರತಿನಿಧಿಗಳಿಗಿಂತಲೂ ಅತಿ ಹೆಚ್ಚು ಸಂಖ್ಯೆಯಲ್ಲಿದ್ದ ಅಮೆರಿಕನ್ ಪ್ರಾಟೆಸ್ಟೆಂಟರು ತಮ್ಮ ಕೆಲಸ ಬಹಳ ಸುಲಭವಾಗಿರುತ್ತದೆಂದು ಮೊದಲು ಭಾವಿಸಿದ್ದರು. 'ನಿನ್ನನ್ನು ಹೇಗೆ ನಿರ್ನಾಮ ಮಾಡುತ್ತೇನೆ ನೋಡುತ್ತಿರು!' ಎಂಬ ಧೋರಣೆಯಿಂದ ಕಾರ್ಯವನ್ನು ಪ್ರಾರಂಭಿಸಿದರು. ಆದರೆ ಅವರ ಬಳಿಯಿದ್ದ ಸರಕೆಂದರೆ ಅದೇ ಚರ್ವಿತ ಚರ್ವಣವಾದ ಗೊಡ್ಡು ಕಥೆಗಳು...

"ಆದರೆ ಯಾವಾಗ ವಿವೇಕಾನಂದರು ಮಾತನಾಡಿದರೋ, ಆಗ ಅವರಿಗೆ ಗೊತ್ತಾಯಿತು - ತಾವೊಬ್ಬ ನೆಪೋಲಿಯನ್ ನನ್ನುಎದುರಿಸಬೇಕಾಗಿದೆ ಎಂದು. ವಿವೇಕಾನಂದರ ಪ್ರಥಮ ಭಾಷಣವೇ ಹೊಸ ದಿಗಂತವೊಂದನ್ನು ತೋರಿಸಿಕೊಟ್ಟಿತು. ಅವರಾಡಿದ ಪ್ರತಿಯೊಂದು ಪದವನ್ನು ವರದಿಗಾರರು ಎಚ್ಚರಿಕೆಯಿಂದ ಆಲಿಸಿ, ದೇಶದ ಮೂಲೆ ಮೂಲೆಯ ಸಾವಿರಾರು ಪತ್ರಿಕೆಗಳಿಗೆ ತಂತಿ ಮೂಲಕ ಕಳಿಸಿದರು. ವಿವೇಕಾನಂದರು ಅಂದಿನ ಸಿಂಹವಾದರು. ಶೀಘ್ರದಲ್ಲೇ ಅಸಂಖ್ಯಾತ ಜನ ಅವರ ಹಿಂಬಾಲಕರಾದರು. ಅವರ ಭಾಷಣವನ್ನು ಕೇಳಲು ಬಂದ ಜನರಿಗೆ ಯಾವ ಸಭಾಂಗಣವೂ ಸಾಲುತ್ತಿರಲಿಲ್ಲ. ಅಮೆರಿಕಾದ ಕ್ರೈಸ್ತರು, ಏಷ್ಯಾದ ಬಡ 'ಅನಾಗರಿಕ' ಆತ್ಮವನ್ನು ರಕ್ಷಿಸಲು ಲಕ್ಷಾಂತರ ಡಾಲರುಗಳನ್ನು ಅರೆ ಶಿಕ್ಷಿತ ಮೂರ್ಖರನ್ನೂ (ಧರ್ಮ ಪ್ರಚಾರಕರು) ಕಳಿಸಿಕೊಡುತ್ತಿದ್ದರು. ಇಂತಹ ರಕ್ಷಣೆಯಿಂದ ತಪ್ಪಿಸಿಕೊಂಡು ಉಳಿದವರಲ್ಲೊಬ್ಬರು (ಸ್ವಾಮಿ ವಿವೇಕಾನಂದರು) ಇಲ್ಲಿದ್ದರು. ಅಮೆರಿಕಾದ ಎಲ್ಲ ಪಾದ್ರಿಗಳೂ ಪ್ರಚಾರಕರೂ ಒಟ್ಟಾರೆ ತಿಳಿದುದಕ್ಕಿಂತ ಹೆಚ್ಚಿನ ಧರ್ಮವನ್ನೂ ತತ್ತ್ವಜ್ಞಾನವನ್ನು ಈತ ಬಲ್ಲವನಾಗಿದ್ದ. ಜನರಿಗೆ ನಿಜಕ್ಕೂ ಒಪ್ಪಿಗೆಯಾಗುವಂತಹ ರೀತಿಯಲ್ಲಿ ಪ್ರಥಮ ಬಾರಿಗೆ ಈತ ಧರ್ಮವನ್ನು ಬೋಧಿಸಿದ. ಜನರು ಎಂದೂ ಊಹಿಸಿರದಿದ್ದಷ್ಟು ಸತ್ತ್ವ ಅದರಲ್ಲಿತ್ತು. ಬಗ್ಗೆ ವಾದಕ್ಕೆ ಎಡೆಯೇ ಇರಲಿಲ್ಲ. ಬೆಕ್ಕು ಇಲಿಯೊಂದಿಗೆ ಆಟವಾಡುವಂತೆ ಈತ ಕ್ರೈಸ್ತ ಮಿಷನರಿಗಳೊಂದಿಗೆ ಆಡಿದ. ಅವರು ದಿಗ್ಬ್ರಾಂತದರು. ಅವರಿಗೇನು ಮಾಡಲು ಸಾಧ್ಯವಿತ್ತು? ಅಂಥವರು ಯಾವಾಗಲೂ ಮಾಡುವುದನ್ನೇ ಮಾಡಿದರು. ಈತನನ್ನು ದೆವ್ವದ ಪ್ರತಿನಿಧಿಯೆಂದು ದೂಷಿಸಿದರು. ಆದರೆ ಆಗಬೇಕಾದ್ದು ಆಗಿಹೋಗಿತ್ತು. ಬೀಜವನ್ನು ಬಿತ್ತಿ ಆಗಿತ್ತು. ಅಮೆರಿಕನ್ನರು ಚಿಂತಿಸಲಾರಂಭಿಸಿದರು. ಅವರು ತಮ್ಮಷ್ಟಕ್ಕೆ ಹೇಳಿಕೊಂಡರು 'ಇವರಂತಹ ಜನರಿಗೆ ಬೋಧಿಸುವುದಕ್ಕಾಗಿ, ಇವನಿಗೆ ಹೋಲಿಸಿದರೆ ಧರ್ಮವನ್ನು ಏನೇನೂ ಅರಿಯದ ನಮ್ಮ ಮಿಷನರಿಗಳನ್ನು ಕಳಿಸಿ ಹಣವನ್ನು ಪೋಲು ಮಾಡೋಣವೇ? ಎಂದಿಗೂ ಇಲ್ಲ! ತತ್ಪರಿಣಾಮವಾಗಿ, ಮಿಷನರಿಗಳ ಆದಾಯ ವರ್ಷಕ್ಕೆ ಹತ್ತು ಲಕ್ಷಕ್ಕೂ ಹೆಚ್ಚು ಡಾಲರ್ ಗಳಷ್ಟು ಕಡಿಮೆಯಾಯಿತು...

ಸನ್ಯಾಸಿಯಾದವನು ಆತ್ಮರಕ್ಷಣೆ ಮಾಡಿಕೊಳ್ಳಬಾರದೆಂದು ಅವರು ನಂಬಿದ್ದರು. ಅವರೊಮ್ಮೆ ಹೇಳಿದರು. "ನಾನು ಸ್ವಲ್ಪ ಬಿಚ್ಚು ಮಾತಿನವನು. ಆದರೆ ನನ್ನ ಉದ್ದೇಶ ಒಳ್ಳೆಯದು. ನಾನು ನಿಮ್ಮನ್ನು ಹೊಗಳಿ ಉಬ್ಬಿಸಲು ಇಲ್ಲಿಗೆ ಬಂದಿಲ್ಲ. ಅದಲ್ಲ ನನ್ನ ಕೆಲಸ. ಹಾಗೆ ಮಾಡುವುದೇ ನನ್ನ ಉದ್ದೇಶವಾಗಿದ್ದರೆ, ನ್ಯೂಯಾರ್ಕ್ ಒಂದು ಪ್ರಮುಖ ರಸ್ತೆಯಲ್ಲಿ ಅತ್ಯಾಧುನಿಕವಾದ, ತಳುಕಿನ ಭವನವೊಂದನ್ನು ತೆರೆಯುತ್ತಿದ್ದೆ. ನೀವು ನನ್ನ ಮಕ್ಕಳು. ನಿಮಗೆ ನಿಮ್ಮ ಲೋಪದೋಷವನ್ನು, ಪೊಳ್ಳುತನವನ್ನು ತೋರಿಸಿಕೊಡುವುದರ ಮೂಲಕ ನಾನು ನಿಮಗೆ ಅಲ್ಪವ್ಯಕ್ತಿತ್ವವನ್ನು ಮೀರಿ ದೈವತ್ವದೆಡೆಗೆ ನಡೆಯುವ ದಾರಿಯನ್ನು ತೋರಿಸುತ್ತಿದ್ದೇನೆ. ಆದ್ದರಿಂದ ನಾನು ಈಗಿನ ಕ್ರೈಸ್ತ ಧರ್ಮವನ್ನು ಅಥವಾ ನಿಮ್ಮ ನಾಗರಿಕತೆಯ ಆದರ್ಶಗಳನ್ನು, ಇಲ್ಲವೇ ಪಾಶ್ಚಾತ್ಯ ನೈತಿಕ ಮಾನದಂಡದಿಂದ ರೂಪಿಸಲ್ಪಟ್ಟ ನಿಮ್ಮ ವಿಚಿತ್ರ ರೀತಿನೀತಿಗಳನ್ನು ಹೊಗಳಲಾರೆ". ಒಂದು ವಿಷಯದಲ್ಲಿ ನಾವೆಷ್ಟೋ ಮೇಲು - ನಾವು ನಮ್ಮ ಮಕ್ಕಳ ತಲೆಯಲ್ಲಿ ' ಪ್ರಪಂಚವೆಲ್ಲ ಸುಂದರ, ಆದರೆ ಮನುಷ್ಯ ಮಾತ್ರ ಪಾಪಿ' ಎಂಬಂತಹ ದುರ್ಭಾವನೆಗಳನ್ನು ತುಂಬುವುದಿಲ್ಲ. ನಿಮ್ಮ ಧರ್ಮ ಪ್ರಚಾರಕನೊಬ್ಬ ನಮ್ಮನ್ನು ಬಯ್ಯುವಾಗೆಲ್ಲ ಇದನ್ನು ನೆನಪಿಟ್ಟಿರಲಿ; ಇಡೀ ಭಾರತವೇ ಎದ್ದು ನಿಂತು ಹಿಂದೂ ಮಹಾಸಾಗರದ ತಳದಲ್ಲಿರುವ ಕೆಸರನ್ನೆಲ್ಲ ತೆಗೆದುಕೊಂಡು ಪಾಶ್ಚಾತ್ಯ ರಾಷ್ಟ್ರಗಳ ಮೇಲೆ ಎಸೆದರೂ ಕೂಡ, ಅದು ನೀವು ನಮಗೆ ಮಾಡುತ್ತಿರುವ ಅನ್ಯಾಯದಲ್ಲಿ ಸಾವಿರದಲ್ಲೊಂದು ಪಾಲು ಕೂಡ ಇಲ್ಲ. ಏಕೆ, ನಾವೇನಾದರೂ ಪಾಶ್ಚಾತ್ಯರನ್ನು ಮತಾಂತರಗೊಳಿಸಲು ಒಬ್ಬನೇ ಒಬ್ಬ ಮಿಷನರಿಯನ್ನಾದರೂ ಕಳಿಸಿದ್ದೇವೆಯೇ? ನಾವು ನಿಮಗೆ ಹೇಳುವುದಿಷ್ಟೇ; ನಿಮ್ಮ ಧರ್ಮವನ್ನು ನೀವಿಟ್ಟುಕೊಳ್ಳಿ, ಸಂತೋಷ. ಆದರೆ ನಮ್ಮ ಧರ್ಮವನ್ನು ಇಟ್ಟುಕೊಳ್ಳಲು ಬಿಟ್ಟುಬಿಡಿ, ಎಂದು. ನೀವು ನಿಮ್ಮ ಧರ್ಮವನ್ನು ಬಹಳ ಪ್ರಬಲವಾದದ್ದೆಂದು ಹೇಳಿಕೊಳ್ಳುತ್ತೀರಿ. ಅದು ನಿಜವೆಂದೇ ಇಟ್ಟುಕೊಳ್ಳೋಣ. ಆದರೆ ನೀವು ನಿಜಕ್ಕೂ ಎಷ್ಟು ಜನರನ್ನು ಪರಿವರ್ತಿಸಲು ಸಮರ್ಥರಾಗಿದ್ದೀರಿ? ಪ್ರಪಂಚದ ಜನಸಂಖ್ಯೆಯಲ್ಲಿ ಪ್ರತಿ ಆರನೆಯ ವ್ಯಕ್ತಿ ಒಬ್ಬ ಚೀನೀ ಪ್ರಜೆ - ಒಬ್ಬ ಬೌದ್ಧ; ಸರಿ ತಾನೇ? ಅಲ್ಲದೆ ಜಪಾನ್, ಟಿಬೆಟ್, ರಶಿಯಾ, ಸೈಬೀರಿಯಾ, ಬರ್ಮಾ, ಸಯಾಮ್ - ಇವೆಲ್ಲ ಬೇರೆ ಇವೆ..! ನನ್ನ ಮಾತು ನಿಮಗೆ ರುಚಿಸದೆ ಹೋಗಬಹುದು. ಆದರೆ ನೀವು ಕ್ರೈಸ್ತರೆಂದು ಹೇಳಿಕೊಳ್ಳುವ ನೈತಿಕತೆ, ಕ್ಯಾಥೋಲಿಕ್ಕರ ಚರ್ಚ್ ಮತ್ತು ಇನ್ನು ಎಷ್ಟೆಷ್ಟೋ ಅವುಗಳಿಂದಲೇ ಬಂದದ್ದು. ಇದೆಲ್ಲ ಹೇಗೆ ಸಾಧ್ಯವಾಯಿತು? ಅದು ಒಂದು ಹನಿ ರಕ್ತವೂ ಬೀಳದೆ! ನೀವು ಇಷ್ಟೆಲ್ಲಾ ಜಂಭ ಕೊಚ್ಚಿಕೊಳ್ಳುತ್ತೀರಿ; ಆದರೆ ಖಡ್ಗದ ನೆರವಿಲ್ಲದೆ ನಿಮ್ಮ ಕ್ರೈಸ್ತ ಧರ್ಮ ಎಲ್ಲಿ ಯಶಸ್ವಿಯಾಗಿದೆ ಹೇಳಿ? - ಇಡೀ ಜಗತ್ತಿನಲ್ಲಿ ಒಂದೇ ಒಂದು ಸ್ಥಳವನ್ನಾದರೂ ತೋರಿಸಿ ನೋಡೋಣ! ಒಂದೇ ಒಂದು ಸಾಕು, ನನಗೆ ಎರಡು ಬೇಕಿಲ್ಲ. ನಿಮ್ಮ ಪೂರ್ವಜರನ್ನೆಲ್ಲ ಹೇಗೆ ಮತಾಂತರಗೊಳಿಸಲಾಯಿತು ಎಂದು ನನಗೆ ಗೊತ್ತಿದೆ. ಒಂದೋ ಅವರು ಮತಾಂತರಗೊಳ್ಳಬೇಕಾಗಿತ್ತು, ಇಲ್ಲವೇ ಸಾಯಬೇಕಾಗಿತ್ತು. ನಿಮ್ಮ ಧೋರಣೆ ಏನೆಂದರೆ 'ನಾವೇ ಜಗತ್ತಿನ ಏಕೈಕ ಹಕ್ಕುದಾರರು' ಎಂದು. ಏಕೆಂದರೆ ನೀವು ಇತರರನ್ನು ಕೊಲ್ಲಬಲ್ಲವರು! ಅರಬ್ಬರೂ ಹಾಗೆಯೇ ಹೇಳಿ ಜಂಭ ಕೊಚ್ಚಿಕೊಂಡರು. ಈಗೆಲ್ಲಿದ್ದಾರೆ ಅವರು? ಮರಳುಗಾಡಿನಲ್ಲಿ ದರೋಡೆಕೋರರಾಗಿ ಜೀವಿಸುತ್ತಿದ್ದಾರೆ. ರೋಮನ್ನರೂ ಅದನ್ನೇ ಹೇಳುತ್ತಿದ್ದರು. ಈಗ ಅವರೆಲ್ಲಿ? ಆದರೆ ನಾವಿನ್ನೂ ಸ್ಥಿರವಾಗಿ ನಿಂತಿದ್ದೇವೆ. 'ಶಾಂತಿದೂತರೇ ಧನ್ಯರು; ಏಕೆಂದರೆ ಅವರನ್ನು ಭಗವಂತನ ಪುತ್ರರೆಂದು ಕರೆಯಲಾಗುತ್ತದೆ (ಬೈಬಲ್). ಉಳಿದುವೆಲ್ಲ ನೆಲಕ್ಕೆ ಕುಸಿಯುತ್ತವೆ. ಏಕೆಂದರೆ ಅವನ್ನೆಲ್ಲ ಕಟ್ಟಿರುವುದು ಮರಳ ಮೇಲೆ. ಅವು ಹೆಚ್ಚು ಕಾಲ ಬಾಳಲಾರವು”. ದಯವಿಟ್ಟು ನೆನಪಿಡಿ, ಮಾತುಗಳನ್ನು ಸ್ವಾಮಿ ವಿವೇಕಾನಂದರು ಹೇಳಿದ್ದು ಕ್ರೈಸ್ತ ಧರ್ಮದ ಭೂಮಿಯಲ್ಲಿ, ಕ್ರೈಸ್ತರ ನಡುವೆ ನಿಂತು ಇಂತಹ ಮಾತುಗಳನ್ನು ಕೆಚ್ಚೆದೆಯಿಂದ ಸಾರಿದರು. ಆದರೆ ಸ್ವಾಮೀಜಿಯವರಿಗೆ ಕೇವಲ ಕ್ರೈಸ್ತ ಮಿಷನರಿಗಳ ಬಗ್ಗೆ ಅಸಮಾಧಾನವಿತ್ತೇ ವಿನಃ ಕ್ರೈಸ್ತ ಧರ್ಮದ ಮೇಲಲ್ಲ ಮತ್ತು ಕ್ರಿಸ್ತನ ಮೇಲೂ ಅಲ್ಲ. ಇದಕ್ಕೆ ಉದಾಹರಣೆಯಾಗಿ ಸ್ವಾಮೀಜಿಯವರ ಮಾತನ್ನು ಗಮನಿಸಬೇಕು. "ಯೇಸುಕ್ರಿಸ್ತನೇನಾದರೂ ಇಂದಿನ ದಿನ ಬದುಕಿದ್ದಿದ್ದರೆ ನಾನು ಅವನ ಪಾದಗಳನ್ನು ನನ್ನ ಕಣ್ಣೀರಿನಿಂದಲ್ಲ, ನನ್ನ ಹೃದಯದ ರಕ್ತದಿಂದ ತೊಳೆಯುತ್ತಿದ್ದೆ" ಎಂದಿದ್ದರು ಸ್ವಾಮೀಜಿ. ಅಷ್ಟೇ ಅಲ್ಲದೆ, ಅವರು ತಮ್ಮ ಬಳಿ ಯಾವಾಗಲೂ ಎರಡು ಪುಸ್ತಕಗಳನ್ನು ಇಟ್ಟುಕೊಂಡಿರುತ್ತಿದ್ದರು, ಒಂದು ಭವದ್ಗೀತೆ ಮತ್ತೊಂದು ಇಮಿಟೇಷನ್ ಆಫ್ ಕ್ರೈಸ್ಟ್. ಇವೆರಡು ಪುಸ್ತಕಗಳನ್ನು ಸ್ವಾಮೀಜಿ ಬಹಳ ಮೆಚ್ಚಿಕೊಂಡಿದ್ದರು.

ಪಾಶ್ಚಾತ್ಯರ ಮುಂದೆ ನಿಂತು ಸ್ವಾಮಿಗಳು ನೀಡಿದ ಉಪನ್ಯಾಸದ ತುಣುಕೊಂದನ್ನು ಹೇಳದಿದ್ದರೆ ತಪ್ಪಾಗುತ್ತದೆ.

"ಚೀನಾ, ಜಪಾನ್ ಮತ್ತು ಸಿಂಹಳದ ಜನರು ಬುದ್ಧನನ್ನು ಒಬ್ಬ ಮಹಾಪುರುಷನೆಂದು ಪರಿಗಣಿಸಿ ಅವನ ಘನ ಸಂದೇಶವನ್ನು ಅನುಸರಿಸಿದರೆ, ಭರತಖಂಡ ಅವನನ್ನು ಅವತಾರಪುರುಷನೆಂದು ಆರಾಧಿಸುತ್ತದೆ. ನಾನು ಬೌದ್ಧ ಧರ್ಮವನ್ನೀಗ ವಿಮರ್ಶಿಸುತ್ತೇನೆ ಎಂದು ನೀವು ಈಗ ತಾನೇ ಕೇಳಿದಿರಿ. ಆದರೆ ನೀವು ಅದರಿಂದ ಇಷ್ಟನ್ನು ಮಾತ್ರ ತಿಳಿದುಕೊಳ್ಳಬೇಕು. ನಾನು ಯಾರನ್ನು ಅವತಾರ ಪುರುಷ ಎಂದು ಪೂಜಿಸುತ್ತೇನೆಯೋ ಅಂತಹ ಬುದ್ಧನನ್ನು ಟೀಕಿಸುವ ಗೋಜಿಗೆ ಹೋಗುವುದಿಲ್ಲ. ಆದರೆ ಅವನ ಶಿಷ್ಯರು ಅವನನ್ನು ಚನ್ನಾಗಿ ಅರಿತುಕೊಳ್ಳಲಿಲ್ಲ ಎಂಬುದು ನಮ್ಮ ಅಭಿಪ್ರಾಯ. ಹಿಂದೂ ಧರ್ಮಕ್ಕೂ ಬೌದ್ಧ ಧರ್ಮಕ್ಕೂ ಇರುವ ಸಂಬಂಧ ಕ್ರೈಸ್ತ ಧರ್ಮಕ್ಕೂ ಯಹೂದ್ಯ ಧರ್ಮಕ್ಕೂ ಇರುವ ಸಂಬಂಧದಂತೆ. ಯೇಸುಕ್ರಿಸ್ತನು ಯಹೂದ್ಯನಾಗಿದ್ದನು; ಬುದ್ಧನು ಹಿಂದೂವಾಗಿದ್ದನು. ಯಹೂದ್ಯರು ಕ್ರಿಸ್ತನನ್ನು ತಿರಸ್ಕರಿಸಿದ್ದು ಮಾತ್ರವಲ್ಲದೆ ಅವನನ್ನು ಶಿಲುಬೆಗೆ ಏರಿಸಿದರು. ಆದರೆ ಹಿಂದೂಗಳು ಶಾಕ್ಯಮುನಿಯನ್ನು ದೇವರೆಂದು ಸ್ವೀಕರಿಸಿ ಆರಾಧಿಸಿದರು. ಯಾವುದನ್ನು ಬುದ್ಧನ ಉಪದೇಶವೆಂದು ಭಾವಿಸುತ್ತೇವೆಯೋ ಅದಕ್ಕೂ ಆಧುನಿಕ ಬೌದ್ಧ ಧರ್ಮಕ್ಕೂ ನಾವು ತೋರುವ ವ್ಯತ್ಯಾಸ ಇದು; ಶಾಕ್ಯಮುನಿ ಹೊಸದೇನನ್ನೋ ಬೋಧಿಸಲು ಬರಲಿಲ್ಲ. ಯೇಸುಕ್ರಿಸ್ತನಂತೆ ಅವನೂ ಪೂರ್ಣಗೊಳಿಸಲು ಬಂದನೇ ಹೊರತು ಹಾಳುಮಾಡುವುದಕ್ಕಲ್ಲ. ಯೇಸುಕ್ರಿಸ್ತನ ವಿಷಯದಲ್ಲಿ ಆಗ ಅವನನ್ನು ಅರ್ಥಮಾಡಿಕೊಳ್ಳದಿದ್ದವರೆಂದರೆ ಆಗ ಇದ್ದ ಯಹೂದ್ಯರು. ಆದರೆ ಬುದ್ಧನ ವಿಷಯದಲ್ಲಿ ಅವನನ್ನು ಅರಿತುಕೊಳ್ಳದಿದ್ದವರೆಂದರೆ ಅವನ ಅನುಯಾಯಿಗಳೇ. ಹೇಗೆ ತಮ್ಮ ಹಳೆಯ ಒಡಂಬಡಿಕೆಯು ಕ್ರಿಸ್ತನಿಂದ ಪರಿಪೂರ್ಣವಾಯಿತೆಂದು ಯಹೂದ್ಯರು ತಿಳಿಯದೆ ಹೋದರೋ, ಹಾಗೆಯೇ ಹಿಂದೂ ಧರ್ಮದ ಸತ್ಯವು ಬುದ್ಧನಿಂದ ಪರಿಪೂರ್ಣತೆಯನ್ನು ಪಡೆಯಿತು ಎಂದು ಬೌದ್ಧರು ತಿಳಿದುಕೊಳ್ಳಲಿಲ್ಲ".

ವರ್ಷಗಳ ಕಾಲ ಅಮೆರಿಕಾದಲ್ಲಿ ಸ್ವಾಮಿಗಳು ನೂರಾರು ಉಪಾನ್ಯಾಸಗಳನ್ನು ನೀಡಿದರು. ಹಿಂದೂ ಧರ್ಮದ ಶ್ರೇಷ್ಠತೆಯನ್ನು ಅಮೇರಿಕಾ ಮತ್ತು ಇಂಗ್ಲೆಂಡ್ ಗಳಲ್ಲಿ ಸಾರಿದರು. ಉಪನ್ಯಾಸಗಳಿಂದ ಬರುತ್ತಿದ್ದ ಹಣವನ್ನು ಸದ್ವಿನಿಯೋಗಿಸಲು ಭಾರತದಲ್ಲಿನ ತಮ್ಮ ಗುರುಭಾಯಿಗಳಿಗೆ ಕಳಿಸಿ ರಾಮಕೃಷ್ಣ ಮಿಷನ್ ಎಂಬ ಸಂಘವನ್ನು ಸ್ಥಾಪಿಸಿದರು. ನಂತರ ಅಮೇರಿಕಾದಿಂದ ತಮ್ಮ ಮಾತೃಭೂಮಿಗೆ ಮರಳಿದರು.

ಇಲ್ಲಿ ಸ್ವಾಮಿ ವಿವೇಕಾನಂದರ ಯೋಚನಾ ಲಹರಿಯ ಬಗ್ಗೆ ಒಂದು ಮಾತು ಹೇಳಲೇಬೇಕು. ಭಾರತದುದ್ದಕ್ಕೂ ಸಂಚರಿಸಿದ ಸ್ವಾಮಿಗಳು ಭಾರತೀಯರ ಬಗ್ಗೆ ಮಾತಾಡುವಾಗ ಭಾರತೀಯರ ಲೋಪ ದೋಷಗಳನ್ನು ಅಂಧ ಶ್ರದ್ಧೆಯನ್ನು ಖಂಡಿಸಿ ತಮ್ಮ ಬದುಕನ್ನು ಸರಿಯಾದ ಮಾರ್ಗದಲ್ಲಿ ಕಟ್ಟಿಕೊಳ್ಳಲು ಕರೆ ನೀಡಿದರು. ಅದೇ ವಿದೇಶೀ ನೆಲದಲ್ಲಿ ಭಾರತವನ್ನು, ಭಾರತೀಯರನ್ನು ಎಂದಿಗೂ ಬಿಟ್ಟು ಕೊಡಲಿಲ್ಲ. ಅಮೇರಿಕಾದಿಂದ ಭಾರತದ ಕಡೆ ಹೊರಡುವಾಗ ಸ್ವಾಮೀಜಿಯವರನ್ನು ಒಂದು ಪ್ರಶ್ನೆ ಕೇಳಲಾಯಿತು. ವರ್ಷಗಳ ತರುವಾಯ ಭಾರತಕ್ಕೆ ಹಿಂದಿರುಗುತ್ತಿದ್ದೀರೇ, ಹೇಗೆನ್ನಿಸ್ತುತ್ತಿದೆ ಎಂದಾಗ ಸ್ವಾಮಿ ವಿವೇಕಾನಂದರ ಉತ್ತರ ಅಪ್ರತಿಮವಾಗಿತ್ತು. "ಇದುವರೆಗೂ ಭಾರತವನ್ನು ಪ್ರೀತಿಸುತ್ತಿದ್ದೆ. ಆದರೆ ಈಗ ಭಾರತವನ್ನು ಪೂಜ್ಯ ಭಾವನೆಯಿಂದ ನೋಡುತ್ತಿದ್ದೇನೆ, ಅಲ್ಲಿ ಬೀಸುವ ಗಾಳಿ, ನೀರು, ಮಣ್ಣು ಎಲ್ಲವು ನನಗೆ ಪವಿತ್ರವಾದದ್ದು ಎನಿಸುತ್ತಿದೆ".

ಭಾರತದಲ್ಲಿ ಸ್ವಾಮಿ ವಿವೇಕಾನಂದರು ಅಮೇರಿಕಾದಲ್ಲಿ ಮಾಡಿದ ಅದ್ಭುತ ಸಾಧನೆಯು ಮನೆಮನೆಯ ಮಾತಾಗಿತ್ತು. ಆದ್ದರಿಂದ, ಅವರು ಭಾರತಕ್ಕೆ ಹಿಂದಿರುಗಿ ಬಂದಾಗ ಭಾರತೀಯರು ನೀಡಿದ ಸ್ವಾಗತ ಅದ್ಭುತವಾಗಿತ್ತು. ಸ್ವಾಮಿಗಳನ್ನು ಸಾಕ್ಷಾತ್ ದೇವರೆಂದು ತಿಳಿದು ಎಲ್ಲೆಲ್ಲಿಯೂ ಅದ್ಭುತವಾದ ಸ್ವಾಗತವನ್ನು ನೀಡಿದ್ದರು. ಸ್ವಾಮಿಗಳ ಮಾತುಗಳನ್ನು ಕೇಳಲು ಭಾರತೀಯರು ಕಾಯುತ್ತಿದ್ದರು. ಸ್ವಾಮಿಗಳು ಕೊಲಂಬೋದಲ್ಲಿ ಹಡಗಿನಿಂದ ಇಳಿದು ಅದ್ಭುತ ಸ್ವಾಗತವನ್ನು ಸ್ವೀಕರಿಸಿದರು. ಅಲ್ಲಿಂದ ಇಡೀ ಭಾರತವನ್ನು ಸಂಚರಿಸಿ ಧರ್ಮ ಜಾಗೃತಿಯನ್ನು ಬಿತ್ತಿದರು.

ಭಾರತೀಯರ ಸಂಸ್ಕೃತಾಧ್ಯಯನ ಮತ್ತು ಇತಿಹಾಸದ ಅಧ್ಯಯನದ ಕುರಿತಾಗಿ ಸ್ವಾಮಿ ವಿವೇಕಾನಂದರು ನುಡಿದ ಅದ್ಭುತ ವಾಣಿಯನ್ನು ತಿಳಿಸಲು ಉತ್ಸುಕನಾಗಿದ್ದೇನೆ:

ಸಂಸ್ಕೃತವನ್ನು ನಿಖರವಾಗಿ ಅಧ್ಯಯನ ಮಾಡುವುದರಿಂದ ಧರ್ಮಗ್ರಂಥಗಳಲ್ಲಿರುವ ಅಮೂಲ್ಯ ವಿಚಾರಗಳನ್ನು ಅರಿತುಕೊಳ್ಳಲು ಸಾಧ್ಯವಾಗುತ್ತದೆ; ಧರ್ಮದ ಮರ್ಮವನ್ನು ಅರಿತುಕೊಂಡಾಗ ಆತ್ಮ ವಿಶ್ವಾಸ ಜಾಗೃತವಾಗುತ್ತದೆ. ತನ್ಮೂಲಕ ಸಮಾಜ ನಿಷ್ಠೆ, ರಾಷ್ಟ್ರಪ್ರಜ್ಞೆ ಕೂಡ ಜಾಗೃತಗೊಳ್ಳುತ್ತದೆ. ಅಂತೆಯೇ ಪಾಶ್ಚಾತ್ಯ ವಿಜ್ಞಾನ-ತಂತ್ರಜ್ಞಾನಗಳನ್ನೂ ಕೂಡ ನಿಖರವಾಗಿ ಅರಿತು ಅಳವಡಿಸಿಕೊಳ್ಳುವುದರ ಮೂಲಕ ಐಹಿಕ ಸಂಪತ್ತನ್ನು ಹೆಚ್ಚಿಸಿಕೊಳ್ಳಬಹುದು. ತನ್ಮೂಲಕ ಭಾರತದ ಪ್ರತಿಯೊಬ್ಬ ಪ್ರಜೆಯೂ ಸಂತುಷ್ಟಿಯ ಜೀವನವನ್ನು ನಡೆಸುವಂತಾಗುತ್ತದೆ. ಆದ್ದರಿಂದಲೇ ಸ್ವಾಮೀಜಿ ಯುವಕರಿಗೆ ಭಾರತೀಯ ಧರ್ಮ-ಸಂಸ್ಕೃತಿಗಳೊಂದಿಗೆ  ಪಾಶ್ಚಾತ್ಯ ವಿಜ್ಞಾನ-ತಂತ್ರಜ್ಞಾನಗಳನ್ನೂ ಅಳವಡಿಸಿಕೊಳ್ಳುವಂತೆ ಮತ್ತು ಕಲಿಯುವುದನ್ನು ನಿಖರವಾಗಿ ಕಲಿಯುವಂತೆ ಹೇಳಿದರು.

ಈಗಿರುವ ಭಾರತದ ಇತಿಹಾಸವೆಲ್ಲ ಅವ್ಯವಸ್ಥಿತ. ಅದರ ಕಾಲಾನುಕ್ರಮಣಿಕೆಯೂ ನಿಖರವಾಗಿಲ್ಲ. ಪಾಶ್ಚ್ಯಾತ್ಯರು ಬರೆದ ಚರಿತ್ರೆಯು ನಮ್ಮ ಮನಸ್ಸನ್ನು ದುರ್ಬಲಗೊಳಿಸುತ್ತಿದೆಯಷ್ಟೆ. ಏಕೆಂದರೆ ಅದು ಮೊದಲಿನಿಂದ ಕಡೆಯವರೆಗೂ ನಮ್ಮ ಅವನತಿಯನ್ನಷ್ಟೇ ಹೇಳುತ್ತದೆ. ನಮ್ಮ ಧರ್ಮ-ಸಂಸ್ಕೃತಿ ತತ್ತ್ವವನ್ನು, ಆಚಾರ ವಿಚಾರ ಸಂಪ್ರದಾಯಗಳನ್ನು ಅರ್ಥಮಾಡಿಕೊಳ್ಳಲಾರದ ವಿದೇಶೀಯರು, ಪೂರ್ವಗ್ರಹ ಪೀಡಿತವಲ್ಲದ ಪ್ರಾಮಾಣಿಕ - ನಿಷ್ಪಕ್ಷಪಾತ ಚರಿತ್ರೆಯನ್ನು ಬರೆಯಲು ಹೇಗೆ ಸಾಧ್ಯ? ಸ್ವಾಭಾವಿಕವಾಗಿಯೇ ಎಷ್ಟೋ ತಪ್ಪು ತಿಳುವಳಿಕೆಗಳು, ತಪ್ಪು ತೀರ್ಮಾನಗಳು ಅವುಗಳಲ್ಲಿ ನುಸುಳಿವೆ. ಆದರೆ ನಮ್ಮ ಪ್ರಾಚೀನ ಇತಿಹಾಸ ಸಂಶೋಧನಾ ಕಾರ್ಯದಲ್ಲಿ ಮುಂದುವರಿಯುವುದು ಹೇಗೆಂಬುದನ್ನು ಐರೋಪ್ಯರೆ ನಮಗೆ ತೋರಿಸಿಕೊಟ್ಟಿದ್ದಾರೆ. ಇತಿಹಾಸ ಸಂಶೋಧನೆಯ ನೂತನ ಮಾರ್ಗವನ್ನು ಸ್ವತಂತ್ರವಾಗಿ ಅನ್ವೇಷಿಸುವ ಕೆಲಸ ನಮಗೆ ಸೇರಿದ್ದು. ವೇದಗಳನ್ನು ಪುರಾಣಗಳನ್ನು ಮತ್ತು ಪ್ರಾಚೀನ ಐತಿಹಾಸಿಕ ದಾಖಲೆಗಳನ್ನು ಅಧ್ಯಯನ ಮಾಡಿ ಅದರ ಸಹಾಯದಿಂದ ನಿಷ್ಪಕ್ಷವಾದ, ಸಹಾನುಭೂತಿಪೂರ್ವಕವಾದ ಮತ್ತು ಸ್ಪೂರ್ತಿದಾಯಕವಾದ ನಮ್ಮ ನಾಡಿನ ಇತಿಹಾಸವನ್ನು ಬರೆಯಬೇಕು. ಇದನ್ನು ನಮ್ಮ ಜೀವನಾವಧಿಯ ಕಾರ್ಯವಾಗಿ ಮಾಡಿಕೊಳ್ಳಬೇಕು; ಭಾರತದ ಇತಿಹಾಸವನ್ನು ಬರೆಯಬೇಕಾಗಿರುವುದು ಭಾರತೀಯರು. ಆದ್ದರಿಂದ ಕಾಲಗರ್ಭದಲ್ಲಿ ಕಣ್ಮರೆಯಾಗಿರುವ ನಮ್ಮ ಅಮೂಲ್ಯ ಸಂಪತ್ತನ್ನು ಮರಳಿ ಪಡೆಯುವವರೆಗೂ ಸುಮ್ಮನಾಗುವುದಿಲ್ಲ. ಅದರಂತೆಯೇ, ಪ್ರಾಚೀನ ಭಾರತದ ವೈಭವವನ್ನು ಜನಮನದಲ್ಲಿ ಪುನಃ ಸ್ಥಾಪಿಸುವವರೆಗೂ ನಿಮ್ಮ ಕಾರ್ಯವನ್ನು ನಿಲ್ಲಿಸಬೇಡಿ. ನಿಜವಾದ ರಾಷ್ಟ್ರೀಯ ಶಿಕ್ಷಣವೆಂದರೆ ಅದು. ಇಂತಹ ರಾಷ್ಟ್ರೀಯ ಶಿಕ್ಷಣದ ಪ್ರಗತಿಯೊಂದಿಗೆ ನಿಜವಾದ ರಾಷ್ಟ್ರ ಪ್ರಜ್ಞೆಯೂ ಜಾಗೃತವಾಗುತ್ತದೆ.

ಪ್ರತಿಯೊಬ್ಬ ರಾಷ್ಟ್ರಕನಲ್ಲೂ ರಾಷ್ಟ್ರಭಾವ ಜಾಗೃತವಾಗಿ ಅವನೊಬ್ಬ ಕೆಚ್ಚೆದೆಯ ಪ್ರಜೆಯಾಗಿ ನಿರ್ಮಾಣಗೊಳ್ಳಬೇಕಾದರೆ ಅವನಲ್ಲಿ ರಾಷ್ಟ್ರದ ಇತಿಹಾಸ ಪ್ರಜ್ಞೆ ಎಚ್ಚೆತ್ತಿರಬೇಕಾಗುತ್ತದೆ. ಅಂತಹ ಪ್ರಜ್ಞೆಯನ್ನು ಬಡಿದೆಬ್ಬಿಸಲು ಸತ್ತ್ವಪೂರ್ಣವಾದ ಇತಿಹಾಸವನ್ನು ಬರೆದು ಜನತೆಯ ಮುಂದಿಡಬೇಕಾಗಿದೆ. ಹಿಂದೂ ಧರ್ಮ ಸಂಸ್ಕೃತಿಯ ಪರಿಚಯವಿರುವ ಭಾರತೀಯರೇ ಅಂತಹ ಸತ್ತ್ವಪೂರ್ಣ ಇತಿಹಾಸವನ್ನು ಬರೆಯಬೇಕು ಎಂದು ನಾಡಿಗೆ ಕರೆ ನೀಡಿದರು.

ಪರಿಸರ-ಪರಿಸ್ಥಿತಿಗಳು ಮನುಷ್ಯನನ್ನು ಕೆಳಕ್ಕೆ ಒತ್ತುತ್ತಲೇ ಇರುತ್ತವೆ. ಗುರುತ್ತ್ವಾಕರ್ಷಣೆಯು ವಸ್ತುಗಳನ್ನು ಕೆಳಕ್ಕೆಳೆಯುವಂತೆ. ಇವುಗಳನ್ನು ಎದುರಿಸಿ ನಿಂತು ಹೊರಡುವುದೇ ಜೀವನ. ಇವುಗಳಿಗೆ ಶರಣಾಗಿ ಸೋಲನ್ನೊಪ್ಪಿಕೊಳ್ಳುವುದು ಮರಣಕ್ಕೆ ಸಮಾನ. ಪ್ರತಿಯೊಬ್ಬ ಜೀವಿಯು ಅರಿತುಕೊಳ್ಳಬಹುದಾದ ಪ್ರಥಮ, ಪ್ರಮುಖ ಪಾಠವಿದು.

ಸನ್ಯಾಸಿಯ ಜೀವನದ ಬಗ್ಗೆ ವಿವರಿಸುತ್ತಾ ಸ್ವಾಮಿ ವಿವೇಕಾನಂದರು ಹೇಳುತ್ತಾರೆ: "ನೆನಪಿಡಿ, ಸನ್ಯಾಸಿಗಳ ಜೀವನವೆಂಬುದು ಕೇವಲ ಸ್ವಂತ ಮುಕ್ತಿಗಲ್ಲದೆ ಇತರರ ಶ್ರೇಯಸ್ಸಿಗಾಗಿಯೂ ಮುಡಿಪಾಗಿರಬೇಕು - ಆತ್ಮನೋ ಮೋಕ್ಷಾರ್ಥಂ ಜಗದ್ಧಿತಾಯ - ಸನ್ಯಾಸಿಯ ಜೀವನವೇ ಜಗತ್ತಿನ ಹಿತಕ್ಕಾಗಿ. ಸನ್ಯಾಸಿಯ ತ್ಯಾಗ ಜೀವನ ಕೋಟಿಗಟ್ಟಲೆ ನಿರ್ಭಾಗ್ಯರ ದುಃಖವನ್ನು ದೂರಗೊಳಿಸುವುದಕ್ಕಾಗಿ. ಸನ್ಯಾಸಿಯ ತ್ಯಾಗ ಜೀವನವು ವಿಧವೆಯರ ಕಣ್ಣೀರನ್ನು ಒರೆಸುವುದಕ್ಕಾಗಿ. ಸನ್ಯಾಸಿಯ ಜೀವನವು ಪುತ್ರ ಶೋಕದಿಂದ ಪ್ರಲಾಪಿಸುತ್ತಿರುವ ಮಾತೆಯರ ಹೃದಯಕ್ಕೆ ಸಾಂತ್ವನ ನೀಡುವುದಕ್ಕಾಗಿ. ಸನ್ಯಾಸಿಯ ಜೀವನವು ಅಜ್ಞಾನಿಗಳಿಗೆ - ದೀನ ದಲಿತರಿಗೆ ಅಸಹಾಯಕರಿಗೆ ಜೀವನೋಪಾಯವನ್ನು ಕಲ್ಪಿಸಿ ಅವರನ್ನು ಸ್ವಾವಲಂಬಿಗಳನ್ನಾಗಿಸುವುದಕ್ಕೆ. ಸನ್ಯಾಸಿಯ ಜೀವನವು ಮೇಲು-ಕೀಳು ಬಡವ-ಬಲ್ಲಿದ ಎಂಬ ತಾರತಮ್ಯವಿಲ್ಲದೆ ಶಾಸ್ತ್ರಗಳ ಬೋಧನೆಯನ್ನು ಪ್ರಸಾರ ಮಾಡುವುದಕ್ಕಾಗಿ. ಸನ್ಯಾಸಿಯ ಜೀವನವು ಸಕಲ ಜೀವರಲ್ಲಿ ಪರಬ್ರಹ್ಮ ಎಂಬ ಸಿಂಹವನ್ನು ಜಾಗೃತಗೊಳಿಸುವುದಕ್ಕಾಗಿ"!

ವೇದಗಳ ಜೊತೆ ಭಾರತೀಯರು ಬೆಸೆದುಕೊಂಡಿರುವಂತಹ ಸಂಭಂದವು ಅತಿ ಶ್ರೇಷ್ಠವಾದುದು ಎಂದು ಸ್ವಾಮೀಜಿ ಹೇಳುತ್ತಾರೆ. ಸಮಸ್ತ ಹಿಂದೂಗಳಿಗೂ ಪವಿತ್ರವಾದ ಗ್ರಂಥಗಳೆಂದರೆ ವೇದಗಳು. ಮತ್ತು ಎಲ್ಲ ಪಂಥಗಳಿಗೂ ವೇದಗಳೇ ಅಂತಿಮ ಪ್ರಮಾಣ. ಆದ್ದರಿಂದ, ಸ್ವಾಮೀಜಿ ಹೇಳುತ್ತಾರೆ - ಮೊದಲನೆಯದಾಗಿ ನಾವೆಲ್ಲರೂ "ವೇದಗಳ ಹೆಸರಿನಲ್ಲಿ" ಸಹೋದರರು. ಎರಡನೆಯದಾಗಿ, ನಾವು ಪ್ರತಿಯೊಬ್ಬರೂ ದೇವರನ್ನು ಒಪ್ಪುತ್ತೇವೆ. ದೇವರ ಕಲ್ಪನೆಗಳು ಪರಸ್ಪರ ಎಷ್ಟೇ ಭಿನ್ನವಾಗಿರಬಹುದು. ಆದರೆ ಯಾವುದೂ ತುಚ್ಚವಾದದ್ದಲ್ಲ. ನೆನಪಿಡಿ, ಮೂರನೆಯದಾಗಿ ಇತರ ಎಲ್ಲ ಧರ್ಮಗಳು ಸಾರುವುದೇನೆಂದರೆ ಜಗತ್ತು ಇಂತಿಷ್ಟು ಸಾವಿರ ವರ್ಷಗಳ ಹಿಂದೆ ಸೃಷ್ಟಿಸಲ್ಪಟ್ಟಿತು ಮತ್ತು ಇಂತಿಷ್ಟು ಸಾವಿರ ವರ್ಷಗಳ ಬಳಿಕ ಅದು ಶಾಶ್ವತವಾಗಿ ನಾಶವಾಗುತ್ತದೆ ಎಂದು. ಆದರೆ ಸಮಸ್ತ ಹಿಂದೂಗಳೂ ನಂಬುವುದೇನೆಂದರೆ, ಸೃಷ್ಟಿಯು ಆದ್ಯಂತರಹಿತವಾದುದು ಎಂದು. ಹಿಂದೂಗಳೆಲ್ಲರೂ ಒಪ್ಪುವ ಇನ್ನೊಂದು ಅಂಶವೇನೆಂದರೆ, ಮನುಷ್ಯನು ಕೇವಲ ಅವನ ದೇಹವಲ್ಲ ಅಥವಾ ಮನಸ್ಸೂ ಅಲ್ಲ. ಅವನು ಇವೆರಡನ್ನೂ ಮೀರಿದ ಆತ್ಮವೆಂಬ ವಸ್ತು ಎಂದು. ಅಲ್ಲದೆ ಹಿಂದೂ ಧರ್ಮದಲ್ಲಿ ಮಾತ್ರವೇ ಕಂಡುಬರುವ ಒಂದು ತತ್ತ್ವವೆಂದರೆ, ಮುಕ್ತಿಯ ಕಲ್ಪನೆ. ಇತರೆಲ್ಲ ಧರ್ಮಗಳು ಬೋಧಿಸುವ ಅತ್ಯುನ್ನತ ಆದರ್ಶವೆಂದರೆ ಸ್ವರ್ಗ. ಸ್ವರ್ಗವೆಂದರೆ ಮತ್ತಷ್ಟು ಭೋಗ. ಆದರೆ ಮುಕ್ತಿಯೆಂದರೆ ಇಂದ್ರಿಯ ಭೋಗಗಳೆಲ್ಲವನ್ನೂ ಮೀರಿದ ಅತ್ಯುನ್ನತ ಸ್ಥಿತಿ. ಅಲ್ಲದೆ, 'ಆತ್ಮವು ಸಹಜವಾಗಿಯೇ ಪರಿಶುದ್ಧವಾದುದು. ಅನಂತ ಶಕ್ತಿಯುಳ್ಳದ್ದು' ಎಂಬ ತತ್ತ್ವವನ್ನು ಹಿಂದೂ ಧರ್ಮ ಮಾತ್ರವೇ ಬೋಧಿಸುವುದು. ನಾವು ಪ್ರತಿಯೊಬ್ಬರೂ ಸರ್ವಶಕ್ತನಾದ ಭಗವಂತನ ಮಕ್ಕಳು, ಅನಂತ ಜ್ಯೋತಿಯ ಕಿಡಿಗಳು ಎಂಬುದನ್ನರಿಯಬೇಕು ಎಂದು ಸ್ವಾಮೀಜಿ ಸಾರಿದರು.

ಸ್ವಾಮೀಜಿಯವರು ತಮ್ಮ ನಾಡಿನ, ತಮ್ಮ ಜನರ ಸಂಸ್ಕೃತಿ ಸಂಪ್ರದಾಯಗಳ ಗರಿಮೆಯನ್ನು ಯಾವುದೇ ಅಕಾರಣ ಟೀಕೆಯಿಂದ ರಕ್ಷಿಸಲು ಸದಾ ಸಿದ್ಧರಾಗಿರುತ್ತಿದ್ದರು. ತಮ್ಮ ದೇಶ ಬಾಂಧವರಿಗೆ ಸಂಬಂಧಿಸಿದ ಯಾವುದೇ ಆಗಲಿ ತೆರೆದ ಮನಸ್ಸಿನಿಂದ, ಸಹೃದಯತೆಯಿಂದ ಸ್ವೀಕರಿಸಿದರೋ ಸರಿ; ಇಲ್ಲದೆ ಹೋದರೆ, ಅದಕ್ಕೆ ವಿರುದ್ಧವಾಡಿದವರನ್ನು ಸದೆ ಬಡಿಯಲು ಸದಾ ಸಿದ್ಧ. ವಿಷಯದಲ್ಲಿ ಸ್ವತಃ ಅವರ ಶಿಷ್ಯರಿಗೂ ವಿನಾಯಿತಿಯಿಲ್ಲ. ಭಾರತವನ್ನು ಆಧ್ಯಾತ್ಮಿಕ ದೃಷ್ಟಿಕೋನದಿಂದ ನೋಡಬೇಕೆಂಬುದು ಸ್ವಾಮೀಜಿಯವರ ವಾದ. ಭಾರತವು ಅವನತಿ ಹೊಂದಿರುವ ವಿಷಯ ಅವರಿಗೆ ಚನ್ನಾಗಿ ತಿಳಿದಿರುವಂಥದೇ. ಆದರೆ, ಹಿಂದೂ ಧರ್ಮವು ಸತ್ತು ಹೋಗಿದೆ ಎನ್ನುವ ಧಾಟಿಯಲ್ಲಿ ಯಾರಾದರೂ ಮಾತಾಡಿದರೆ ಅದನ್ನವರು ಉಗ್ರವಾಗಿ ಖಂಡಿಸುತ್ತಿದ್ದರು. ಏಕೆಂದರೆ, ನವ ತಾರುಣ್ಯದಿಂದ ಕೂಡಿದ ಪ್ರಗತಿಶೀಲ ಜನಾಂಗ ಮಾತ್ರವೇ ಪರಧರ್ಮಗಳ ಪರರಾಷ್ಟ್ರಗಳ ವಿನೂತನ ಭಾವನೆಗಳನ್ನು ಸ್ವೀಕರಿಸಬಲ್ಲರು, ಅರಗಿಸಿಕೊಳ್ಳಬಲ್ಲರು. ಭಾರತವು ತನ್ನಲ್ಲಿ ಸಾಮರ್ಥ್ಯವಿರುವುದನ್ನು ತೋರಿಸಿ ಕೊಟ್ಟಿದೆ. ಆದ್ದರಿಂದ ಅದು ನಿರ್ವೀರ್ಯವಾಗಿಲ್ಲ, ನಿರ್ಜೀವವಾಗಿಲ್ಲ ಎಂಬುದು ಸ್ವಾಮೀಜಿಯವ ವಾದ. ಹಿಂದೂ ಧರ್ಮದ ಆದರ್ಶಗಳನ್ನು, ಮೌಲ್ಯಗಳನ್ನು ಅಧ್ಯಯನ ಮಾಡಿದಾಗ, ಅದು ತಾರುಣ್ಯಭರಿತವಾದ, ವೀರ್ಯವತ್ತಾದ ಹಾಗು ಅದ್ಭುತ ಸಾಧ್ಯತೆಗಳಿಂದ ಕೂಡಿದ ಧರ್ಮವೆಂಬುದು ಸ್ಪಷ್ಟವಾಗುತ್ತದೆ ಎನ್ನುತ್ತಾರೆ ಸ್ವಾಮೀಜಿ.

ಹೀಗೆ ಹಿಂದೂ ಧರ್ಮದ ಸಾರವನ್ನು ಸಂಪೂರ್ಣವಾಗಿ ಅರಿತು ದೇಶದಾದ್ಯಂತ ತಮ್ಮ ಆದರ್ಶವನ್ನು ಪಸರಿಸಿ ಯುವಕರನ್ನು ನವಶಕ್ತಿ ಚೈತನ್ಯದಿಂದ ಉದ್ಧರಿಸಿದ ಸ್ವಾಮೀಜಿಯವರಿಗೆ ತಮ್ಮದೇ ಆದ ಆರೋಗ್ಯದ ಸಮಸ್ಯೆಯಿತ್ತು. ತಮ್ಮ ಶರೀರ ದಿನೇ ದಿನೇ ಜರ್ಜರಿತವಾಗುತ್ತಿರುವುದು ಸ್ವಾಮೀಜಿಗೆ ತಿಳಿಯುತ್ತಿತ್ತು. ಅಷ್ಟೇ ಅಲ್ಲದೇ ತಾವು ಇಷ್ಟೇ ದಿನ ಬದುಕಿರುವುದು ಎಂಬುದು ಸಹ ಅವರಿಗೆ ತಿಳಿದಿತ್ತು. ಅವರ ದೇಹ ಹಲವಾರು ಅನಾರೋಗ್ಯದಿಂದ ಬಳಲುತ್ತಿತ್ತು. ಶ್ರೀಮತಿ ಸಾರ ಬುಲ್ ಎಂಬುವವರಿಗೆ ಬರೆದ ಒಂದು ಪತ್ರದಲ್ಲಿ ಬರೆದರು: "ಇಲ್ಲಿನ ಉತ್ಸವ ಸಂಭ್ರಮಗಳೆಲ್ಲ ಮುಗಿದವು. ಅಥವಾ ನನ್ನ ಅರೋಗ್ಯ ಸಂಪೂರ್ಣ ಹದಗೆಟ್ಟಿದ್ದರಿಂದ ನಾನೇ ಅವುಗಳನ್ನು ಮೊಟಕುಗೊಳಿಸಿದೆ ಎನ್ನಬೇಕು. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಮಾಡಿದ ನಿರಂತರ ಕಾರ್ಯಗಳಿಂದ ಮತ್ತು ಭಾರತದಲ್ಲಿ ಒಂದು ತಿಂಗಳ ಕಾಲ ಮಾಡಿದ ನಿರಂತರ ಪ್ರಯಾಣ - ಭಾಷಣ - ಸಂಭಾಷಣೆಗಳಿಂದ ಉಂಟಾದ ಅತೀವ ಶ್ರಮದ ಫಲವಾಗಿ ನನ್ನ ಬಂಗಾಳೀ ಶರೀರಕ್ಕೆ ಸಿಕ್ಕಿದ ಫಲ ಡಯಾಬಿಟೀಸ್ - ಇದು ತನ್ನನ್ನು ಆಹುತಿ ತೆಗೆದುಕೊಳ್ಳದೆ ಬಿಡುವುದಿಲ್ಲ. ಪಥ್ಯಪಾನ, ಮಿದುಳಿಗೆ ಸಂಪೂರ್ಣ ವಿಶ್ರಾಂತಿ - ಇವುಗಳಿಂದ ಮಾತ್ರವೇ ನನ್ನ ಕೊನೆಯ ದಿನವನ್ನು ಸ್ವಲ್ಪ ಮುಂದೂಡಬಹುದಾಗಿದೆ. ಈಗ ಡಾರ್ಜಿಲಿಂಗ್ನಲ್ಲಿ ಮಿದುಳಿಗೆ ವಿಶ್ರಾಂತಿಯನ್ನು ಕೊಡಿಸುತ್ತಿದ್ದೇನೆ".

ವಿಶ್ರಾಂತಿಯಿಂದ ಸ್ವಾಮೀಜಿಯವರ ಶರೀರಕ್ಕೆ ಎಷ್ಟೋ ಅನುಕೂಲವಾಯಿತಾದರೂ ಅದು ಅವರಿಗೆ ಅಸಹನೀಯವಾಗಿ ಪರಿಣಮಿಸಿತ್ತು. ಪ್ರಚಂಡ ಕ್ರಿಯಾಶೀಲರಾದ ಅವರಿಗೆ ಹೀಗೆ ಮೈಗಳ್ಳರಂತೆ ಕುಳಿತುಕೊಳ್ಳುವುದೆಂದರೆ ಮರಣಕ್ಕಿಂತಲೂ ಕಡೆ. ಡಾಕ್ಟರ್ ಏನೇ ಹೇಳಿದರೂ ಎಷ್ಟೇ ಹೇಳಿದರೂ ಸ್ವಾಮೀಜಿ ಗಾಢವಾಗಿ ಆಲೋಚನೆ ಮಾಡದೇ ಶಾಂತವಾಗಿ ಕುಳಿತುಕೊಳ್ಳಲು ಸಾಧ್ಯವೇ ಇರಲಿಲ್ಲ

ಕರ್ಮಯೋಗ, ರಾಜಯೋಗ, ಭಕ್ತಿಯೋಗ ಮತ್ತು ಜ್ಞಾನಯೋಗಗಳೆಲ್ಲವೂ ಸ್ವಾಮೀಜಿಯವರಲ್ಲಿ ಮಿಳಿತವಾಗಿತ್ತು. ಅವರು ಇದ್ದಷ್ಟು ದಿನವೂ ಕರ್ಮ ಮಾಡಿಯೇ ತಮ್ಮ ದೇಹವನ್ನು ಕೊನೆಗೊಳಿಸಿದರು. ೧೯೦೨ ಜುಲೈ ರಂದು ಸ್ವಾಮೀಜಿ ಮಹಾಸಮಾಧಿಯನ್ನೈದಿದರು.