ಏ(ಇ)ರಿದ ಬಿಸಿಲಿನ ತಾಪ; ಪುನಗು ಮರಿ ‘ನೆಲ’ಕ್ಕೊ(ಕೊ)ರಗಿತು.

ಏ(ಇ)ರಿದ ಬಿಸಿಲಿನ ತಾಪ; ಪುನಗು ಮರಿ ‘ನೆಲ’ಕ್ಕೊ(ಕೊ)ರಗಿತು.

ಬರಹ

ಏಳು ಗುಡ್ಡಗಳು ಹಾಗು ಏಳು ಕೆರೆಗಳಿಂದ ಆವೃತವಾಗಿದ್ದ, ಒಂದು ಕಡೆ ಮಲೆನಾಡಿನ ಹಸುರಿಗೆ ಸೆರಗೊಡ್ಡಿ ಮತ್ತೊಂದೆಡೆಗೆ ಬಯಲು ಸೀಮೆಗೆ ಆಸರೆ ಇತ್ತಿದ್ದ ‘ಛೋಟಾ ಮಹಾಬಳೇಶ್ವರ’ ಖ್ಯಾತಿಯ ಧಾರವಾಡದಲ್ಲಿ ಈಗ ನೆತ್ತಿಯ ನೆತ್ತರು ಸುಡುವಷ್ಟು ಬಿಸಿಲು. ಉಸಿರಾಡಲು ಆಗದಷ್ಟು ಪ್ರಳಯಾಂತಕ ಬಿಸಿ ಗಾಳಿ ಜೀವ ಹಿಂಡುತ್ತಿದೆ. ಧಾರವಾಡಿಗರು ಕಳೆದ ಐದು ದಶಕಗಳ ಇತಿಹಾಸದಲ್ಲೇ ಈ ಪರಿಯ ಬಿಸಿಲಿನ ಝಳ ಅನುಭವಿಸಿರಲಿಲ್ಲ.

ಇದ್ದ ಗುಡ್ಡಗಳನ್ನು, ಕೆರೆಗಳನ್ನೆಲ್ಲ ಬಡಾವಣೆ ನಿರ್ಮಿಸುವ ಹಣವುಳ್ಳವರು ನುಂಗಿ ನೀರು ಕುಡಿದಿದ್ದಾರೆ. ಅಭಿವೃದ್ಧಿಯ ಹೆಸರಿನ ರಸ್ತೆಗೆ ನೂರಾರು ವರ್ಷಗಳಷ್ಟು ಹಿರಿದಾದ ಮರಗಳು ಆಹುತಿಯಾಗಿವೆ. ಧಾರವಾಡ ಮನುಷ್ಯರು ತಮ್ಮ ಸುಖಕ್ಕಾಗಿ ಮಾಡಿದ ಈ ಎಲ್ಲ ಅಧ್ವಾನಗಳಿಗೆ ಈಗ ಇಲ್ಲಿನ ಪ್ರಾಣಿಗಳು ಪರಿತಪಿಸುವಂತಾಗಿದೆ. ಕಾರಣ ನಮಗೆಲ್ಲ ಸೂರಿದೆ ಅವುಗಳಿಗೆ? ಈ ಕಾಂಕ್ರೀಟ್ ನಾಡಿನಲ್ಲಿ ಅವುಗಳಿಗೆ ಬಾಯಾರಿಕೆಯಾದರೆ ಒಂದು ತೊಟ್ಟು ನೀರು ಸಹ ಸಿಗದಂತೆ ನೀರಿನ ಟ್ಯಾಂಕ್ ಅಟ್ಟದ ಮೇಲೇರಿಸಿ, ಹಳೆಯ ಬಾಯ್ದೆರೆದ ಟ್ಯಾಂಕ್ ಗಳಿಗೆ ಟೆರೆಸ್ ಸೋರಿಕೆ ಕಾರಣ ನೀರು ತುಂಬಿಸುವುದನ್ನು ನಿಲ್ಲಿಸಿ ತಿಲಾಂಜಲಿ ನೀಡಲಾಗಿದೆ.

ಹೀಗೆ ಯಾರದೋ ತಪ್ಪಿಗೆ ಇನ್ನಾರದ್ದೋ ತಲೆದಂಡ.

ಇಲ್ಲಿನ ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯದ ಆವರಣದಲ್ಲಿ ಕಳೆದ ಸೋಮವಾರ ಪುನುಗು ಬೆಕ್ಕಿನ ಮರಿಯೊಂದು ತಲೆ ಸುತ್ತಿ, ಜ್ವರದಿಂದ ಬಳಲಿ ಧರಾಶಾಯಿಯಾದ ಅಸಹಾಯಕ ಸ್ಥಿತಿಯಲ್ಲಿ ಪತ್ತೆಯಾಯಿತು. ಸದಾ ಗಿಡದ ತುತ್ತ ತುದಿಯಲ್ಲಿ ವಿರಾಜಮಾನವಾಗಿ, ಬಹುತೇಕ ಜನರ ಕಣ್ಣಿಗೆ ಬೀಳದೇ ಮರೆಯಲ್ಲಿ ಇರುತ್ತಿದ್ದ ಪುನಗಿನ ಮರಿಗೆ ಬಿಸಿಲಿನ ಝಳ ತೀವ್ರವಾಗಿ ಬಾಧಿಸಿ ಗಿಡದ ತುತ್ತ ತುದಿಯಿಂದ ಆಯತಪ್ಪಿ ಕೆಳಗೆ ಬಿದ್ದಿತ್ತು. ಬಿದ್ದ ರಭಸಕ್ಕೆ ಕಾಲಿಗೂ ತೀವ್ರ ಗಾಯವಾಗಿತ್ತು. ಕಿರುಚುವ ಸ್ಥಿತಿಯಲ್ಲೂ ಇರದೇ, ‘ಡಿ-ಹೈಡ್ರೇಶನ್’ ಸಮಸ್ಯೆಯಿಂದ ಜೀವನ್ಮರಣದ ಮಧ್ಯೆ ಹೋರಾಟ ನಡೆಸಿತ್ತು.

ಪರಿಸ್ಥಿತಿ ಗಮನಿಸಿದ ಮಹಾವಿದ್ಯಾಲಯದ ಗ್ರಂಥಪಾಲಕರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದರು. ಅಷ್ಟರಲ್ಲಿಯೇ ಕೆಲ ವಿದ್ಯಾರ್ಥಿಗಳು ಕಚ್ಚುವುದೇನೋ ಎಂಬ ಭಯದಿಂದ ನೀರು, ಬಿಸ್ಕಿತ್ ಮರಿ ಪುನಗಿನ ಮುಂದೆ ಒಡ್ಡಿ ಬದುಕಿಸಿಕೊಳ್ಳುವ ಪ್ರಯತ್ನ ಮಾಡಿದರು. ಅರ್ಧ ಗಂಟೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ಸ್ವತ: ಗ್ರಂಥಪಾಲಕರೆ ಎತ್ತಿ, ರಟ್ಟಿನ ಪೆಟ್ಟಿಗೆಯೊಳಗೆ ಹಾಕಿ ಅರಣ್ಯ ಪಾಲಕರಿಗೆ ನೀಡಿದರು.

ಕೂಡಲೇ ಅದನ್ನು ಪಶು ವೈದ್ಯರ ಬಳಿ ಒಯ್ದು ಸೂಕ್ತ ಚಿಕಿತ್ಸೆ ಕೊಡಿಸಿ ಕಿತ್ತೂರು ರಾಣಿ ಚೆನ್ನಮ್ಮ ಮೃಗಾಲಯದಲ್ಲಿ ಇಡಲಾಯಿತು. ತುಸು ಚೇತರಿಸಿ ಕೊಂಡಂತೆ ಕಂಡು ಬಂದ ಪುನಗು ಮರಿ ಪಂಜರದ ಒಳಗೆ ಲವಲವಿಕೆ ಓಡಾಡುತ್ತಿದೆ. ಇನ್ನೆರಡು ದಿನಗಳಲ್ಲಿ ಆ ಮರಿಯನ್ನು ಸಮೀಪದ ಅಳ್ನಾವರ ಕಾಡಿಗೆ ಬಿಟ್ಟು ಬರುವುದಾಗಿ ಅರಣ್ಯ ಪಾಲಕರು ತಿಳಿಸಿದ್ದಾರೆ. ಅಂತೂ ನಾವು ಮಾಡಿದ ತಪ್ಪಿನ ಪ್ರಾಯಶ್ಚಿತ್ತಕ್ಕಾದರೂ ಈ ಕೆಲಸ ಮಾಡಿದ ಧನ್ಯತೆ ಅನುಭವಿಸಿದಂತಾಯಿತು.

ಪುನುಗು ಇಲಿ: ಬೆಕ್ಕಲ್ಲ! -ವಾಸ್ತವದಲ್ಲಿ ಪುನುಗು ಬೆಕ್ಕು ಎಂದು ಕರೆಯಲ್ಪಡುವ ಈ ವಿಶಿಷ್ಟ ಪ್ರಾಣಿ ಬೆಕ್ಕಿನ ಕುಟುಂಬಕ್ಕೆ ಸೇರಿದ್ದಲ್ಲ. ಇಲಿಯ ಜಾತಿಗೆ ಸೇರಿದ ಪುನುಗು ಇಲಿ. ರಾತ್ರಿಯ ವೇಳೆ ಮಾತ್ರ ಆಹಾರ ಹೆಕ್ಕಲು ಹೊರಡುವ ಈ ಪುನುಗು ಬೆಳಗಿನ ವೇಳೆಯಲ್ಲಿ ತನ್ನ ಚಟುವಟಿಕೆಗಳನ್ನು ನಿಷೇಧಿಸಿರುತ್ತದೆ. ಆದರೆ ಕಣ್ಣು ಎರಡೂ ಹೊತ್ತಿನಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಇಲಿಗಳ ತರಹ ಬಿಲ ಅಥವಾ ಪೊದೆ, ಕುರುಚಲ ಗಿಡಗಳ ಮಂದೆಯಲ್ಲಿ ವಾಸ. ಮಳೆ ಕಾಡುಗಳಲ್ಲಿ ಕುರುಚಲು ಗಿಡಗಳ ಪೊದೆಗಳಲ್ಲಿ ಮತ್ತು ಕಲ್ಲು ಬಂಡೆಗಳ ಕೆಳಗಿನ ಪೊಟರೆಗಳನ್ನು ತನ್ನ ಮನೆಯಾಗಿಸಿಕೊಂಡು ಇದು ಬದುಕುತ್ತದೆ. ಹಿಂದಿ ಭಾಷೆಯಲ್ಲಿ ಈ ಬೆಕ್ಕನ್ನು ‘ಸ್ಮಶಾನ ಚೇಳು’ ಎಂದು ಸಹ ಕರೆಯಲಾಗುತ್ತದೆ.

ಜನ ವಸತಿಯಿಂದ ಹಾಗು ಇತರೆ ಪ್ರಾಣಿಗಳ ಆವಾಸದಿಂದ ತೀರ ದೂರ ಇರಲು ಬಯಸುವ ಈ ಪ್ರಾಣಿ ಅತ್ಯಂತ ಸಂಕೋಚದ ಹಾಗು ನಾಚಿಕೆ ಸ್ವಭಾವದ್ದು. ಹಣ್ಣುಗಳೆಂದರೆ ಪುನುಗಿಗೆ ತೀರ ಇಷ್ಟ. ಅದರಲ್ಲೂ ಕಾಫಿ ತೋಟದ ಕೆಂಪು ಕಾಫಿ ಹಣ್ಣುಗಳೆಂದರೆ ತೀರ ಅಚ್ಚುಮೆಚ್ಚು. ಪಶ್ಚಿಮ ಘಟ್ಟಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಸಿಗುವ ಪುನಗು ಬೆಕ್ಕುಗಳು ಇಲಿ, ಹಲ್ಲಿ, ಚಿಕ್ಕ ಪಕ್ಷಿಗಳು, ಹಕ್ಕಿ ಗೂಡಿನ ತತ್ತಿಗಳು ಮತ್ತು ಕೀಟಗಳನ್ನು ಸಹ ತಿನ್ನುತ್ತವೆ. ಭೂಮಿ ಹಾಗು ಗಿಡ ಎರಡರ ಮೇಲೂ ವಾಸ ಮಾಡಬಲ್ಲ ಈ ಬೆಕ್ಕು ಶಾಖಾ ಹಾಗು ಮಾಂಸಾಹಾರಿ.

ಪುನಗು ಬೆಕ್ಕಿನ ಬೆವರಿನಲ್ಲಿ ಸುವಾಸನೆ ಇದೆ. ಹಳದಿ ಬಣ್ಣದಿಂದ ಕೂಡಿರುವ ಸುವಾಸನೆಯುಕ್ತ ಬೆವರು ಜೇನುತುಪ್ಪದಂತೆ ಗೋಚರಿಸುತ್ತದೆ. ಇದನ್ನು ಸುವಾಸನೆ (ಸೇಂಟ್) ದ್ರವ್ಯಗಳಲ್ಲಿ ಸುವಾಸನೆಯನ್ನು ಸ್ಥಿರಗೊಳಿಸುವ ಮಾಧ್ಯಮವಾಗಿ ಬಳಸಲಾಗುತ್ತದೆ. ಕಾಮ ಪ್ರಚೋದಕ ಔಷಧಿಯಾಗಿ ಸಹ ಉಪಯೋಗಿಸಲಾಗುತ್ತದೆ. ಹಾಗಾಗಿ ಅದನ್ನು ತೀವ್ರ ಹಿಂಸೆಗೂ ಒಳಪಡಿಸಿ ಬೆವರಿನ ಸ್ರಾವ ಹೆಚ್ಚುವಂತೆ ಬಾಹ್ಯ ಒತ್ತಡ ಸಹ ಹೇರಲಾಗುತ್ತದೆ. ಸದ್ಯ ವಿನಾಶದ ಅಂಚಿಗೆ ಪುನುಗು ಬೆಕ್ಕು/ಇಲಿ ಹೋಗಲು ಬಲವಾದ ಕಾರಣ ಇದು.

‘ವಿವಿರಿಡೇ’ ಕುಟುಂಬಕ್ಕೆ ಸೇರಿದ ಪುನುಗಿಗೆ ಆಂಗ್ಲ ಭಾಷೆಯಲ್ಲಿ ‘ಸಿವೆಟ್ ಕ್ಯಾಟ್’ (Civet Cat) ಎಂದು ಕರೆಯಲಾಗುತ್ತದೆ. ಪ್ರಾಯಕ್ಕೆ ಬಂದ ಪುನುಗು ಬೆಕ್ಕು ೧ ರಿಂದ ೩ ಅಡಿ ಉದ್ದವಿರುತ್ತದೆ. ೮ ರಿಂದ ೯ ಪೌಂಡ್ ತೂಗಬಲ್ಲುದು ಎನ್ನುತ್ತಾರೆ ವನ್ಯ ಪ್ರಾಣಿ ತಜ್ಞರು. ಕಪ್ಪು ಬಣ್ಣದಿದ್ದು ಪ್ರಾಯಕ್ಕೆ ಬರುತ್ತ ಕಂದು ಮಿಶ್ರಿತ ಕಪ್ಪು ಬಣ್ಣಕ್ಕೆ ಅದರ ದೇಹ ಹಾಗು ತುಪ್ಪಳ ಬಣ್ಣ ತಿರುಗುತ್ತದೆ.

ಆದರೆ ಈ ಕಾಲೇಜಿನ ಆವರಣದಲ್ಲಿ ಹಣ್ಣಿನ ಗಿಡಗಳಿಲ್ಲ. ಆದರೆ ನೂರಾರು ವರ್ಷಗಳಷ್ಟು ಹಳೆಯದಾದ ಮರಗಳಿವೆ. ಆದರೂ ಪುನಗು ಇಲ್ಲಿಗೆ ಭೇಟಿ ನೀಡಿತ್ತು ಎಂಬುದು ಸೋಜಿಗ. ಇಲ್ಲಿನ ವಸತಿ ಗೃಹಗಳಲ್ಲಿ ವಾಸ ಮಾಡುವ ಮಕ್ಕಳ ಪ್ರಕಾರ ಹಲವಾರು ಬಾರಿ ಈ ಪುನಗು ಬೆಕ್ಕುಗಳು ರಾತ್ರಿಯ ವೇಳೆ ರಸ್ತೆಗಿಳಿದು ಆಹಾರ ಹೆಕ್ಕುತ್ತ ಕುಳಿತಿರುತ್ತವೆ.

ಇನ್ನಾದರೂ ನಮ್ಮ ಮನೆಗಳ ಸುತ್ತ ಹಣ್ಣಿನ ಗಿಡಗಳನ್ನು ನೆಡೋಣ. ಪ್ರಾಣಿ-ಪಕ್ಷಿಗಳಿಗೆ ಕುಡಿಯಲು ನೀರಿನ ವ್ಯವಸ್ಥೆ ಕಲ್ಪಿಸೋಣ. ಅಲ್ಲಲ್ಲಿ ಕಾಳು ಕಡಿಗಳ ಪೊಟ್ಟಣ ಕಟ್ಟಿ ಬಹುತೇಕ ನಮ್ಮನ್ನೇ ಆಶ್ರಯಿಸುವ ಅನಿವಾರ್ಯ ಸ್ಥಿತಿ ತಲುಪಿರುವ ಅಸಹಾಯಕ ಮೂಕ ಪ್ರಾಣಿಗಳ ಮೂಕ ರೋದನಕ್ಕೆ ದನಿಯಾಗೋಣ.