ಏಕಕಾಲದಲ್ಲಿ ಎರಡು ಜಿಮೇಲ್ ಖಾತೆಗಳಿಗೆ ಲಾಗಿನ್ ಆಗಬಹುದೇ?

ಏಕಕಾಲದಲ್ಲಿ ಎರಡು ಜಿಮೇಲ್ ಖಾತೆಗಳಿಗೆ ಲಾಗಿನ್ ಆಗಬಹುದೇ?

ಬರಹ

ಏಕಕಾಲದಲ್ಲಿ ಎರಡು ಜಿಮೇಲ್ ಖಾತೆಗಳಿಗೆ ಲಾಗಿನ್ ಆಗಬಹುದೇ?

ಒಂದೇ ಬ್ರೌಸರ್ ತೆರೆದು,ಒಂದು ಮಿಂಚಂಚೆ ಖಾತೆಗೆ ಲಾಗಿನ್ ಆದೊಡನೆ,ಇನ್ನೊಂದು ಖಾತೆಯಿಂದ ಲಾಗೌಟ್ ಆಗುವುದು ಸಾಮಾನ್ಯ.ಹಲವು ಬಳಕೆದಾರರು ಒಂದಕ್ಕಿಂತ ಹೆಚ್ಚು ಜಿಮೇಲ್ ಖಾತೆಯನ್ನು ಹೋಂದಿರುವುದು ಈಗ ಸಾಮಾನ್ಯವಾಗಿರುವುದರಿಂದ ಈ ಸೌಲಭ್ಯವನ್ನು ಗೂಗಲ್ ನೀಡಲಾರಂಭಿಸಿದೆ.ಮಿಂಚಂಚೆಯ ಜತೆಗೆ ಇತರ ಗೂಗಲ್ ಸೇವೆಗಳಿಗೂ ಪ್ರವೇಶ ಪಡೆಯುವುದು,ಸಹ ಸಾಧ್ಯವಾದರೂ, ಸದ್ಯಕ್ಕೆ, ಈ ರೀತಿಯ ಏಕಕಾಲದ ಪ್ರವೇಶ ಸಾಧ್ಯವಾಗದೆ ಹೋಗಬಹುದು ಎಂದು ಗೂಗಲ್ ಕಿವಿಮಾತು ಹೇಳಿದೆ.ಈ ಸವಲತ್ತು ಸಿಗಲು,ಮೊದಲಾಗಿ ಗೂಗಲ್‌ನ ಖಾತೆಯ ಸಿದ್ಧತೆಗಳಲ್ಲಿ "ಬಹುಖಾತೆಗಳನ್ನು ಸಾಧ್ಯವಾಗಿಸಬೇಕು.ಇದಕ್ಕೆ google.com/accounts ವಿಳಾಸ ನೋಡಿ.
---------------------------------------------------
ಟ್ವಿಟರ್ ಚಿಲಿಪಿಲಿ
*ನಾನೂ ನಿನಗೊಂದು ಬಾರಿಸಿದರೆ,ಗೂಗಲ್ ಶೋಧ ಕೂಡಾ ನಿನ್ನನ್ನು ಹುಡುಕಿಕೊಡಲು ವಿಫಲವಾಗುತ್ತೆ:ರಜನಿಕಾಂತ್ ಸಂಭಾಷಣಾ ವೈಖರಿಯ ಬಗೆಗಿನ ಜೋಕ್.
*ಟಿವಿ ನನಗೆ ಕಲಿಕೆಗೆ ಬಹಳ ಸಹಾಯ ಮಾಡುತ್ತ.ದೆಯಾರಾದರೂ ಟಿವಿ ಆನ್ ಮಾಡಿದ್ರೆ,ನಾನು ಮತ್ತೊಂದು ಕೋಣೆಗೆ ಹೋಗಿ ಪುಸ್ತಕ ಹಿಡಿದು ಕೂರೋಣ ಅನಿಸುವುದರಿಂದ!
*ಹೆಚ್ಚು ಅಕ್ರಮ ಮಾಡಿದವರಿಗೆ ಕೊಡಬಹುದಾದ ಪ್ರಶಸ್ತಿ ಯಾವುದು?ವಿಕ್ರಮಾದಿತ್ಯ..ಅಲ್ಲಲ್ಲ...ಅಕ್ರಮಾದಿತ್ಯ!
* "ವಿದ್ಯುತ್ ಕೈಕೊಡಲಿ" ಎಂದು ಮೊದಲಬಾರಿಗೆ ಹಾರೈಸುತ್ತಿರುವೆ.. ("ವಿದ್ಯುತ್ ಕೈಕೊಟ್ಟರೆ ನೇಣು ಹಾಕಿಕೊಳ್ಳುತ್ತೇನೆ" ಎಂದು ಓರ್ವನ ಟ್ವಿಟರ್ ಸಂದೇಶಕ್ಕೆ ಬಂದ ಮಾರುತ್ತರ)
-----------------------------------------------
ಅಬ್ದುಲ್‌ರ ಹಳೆ ಸೇತುವೆ
http://halesetuve.wordpress.com ಇದು ಭದ್ರಾವತಿ ಮೂಲದ ಅಬ್ದುಲ್ ಅವರ ಬ್ಲಾಗಿನ ಅಂತರ್ಜಾಲ ವಿಳಾಸ.ಸದ್ಯ ಗಲ್ಫಿನಲ್ಲಿ ಉದ್ಯೋಗದಲ್ಲಿರುವ ಅಬ್ದುಲ್ ಲತೀಫ್ ಸಯ್ಯದ್,ಅವರು ಒಂದೂವರೆ ದಶಕಗಳಿಂದ ಅರೇಬಿಯಾವಾಸಿ.ಸಾಹಿತ್ಯಪ್ರೇಮಿಯಾದ ಅಬ್ದುಲ್ ವಿವಿಧ ಪ್ರಾಕಾರಗಳಲ್ಲಿ ಕೈಯಾಡಿಸಿದ್ದಾರೆ.ಬರಹಗಳ ಜತೆ ಚಿತ್ರಗಳು,ನುಡಿಮುತ್ತುಗಳೂ ಬ್ಲಾಗಿನಲ್ಲಿವೆ.ಪಶ್ಚಿಮದ ಕ್ರೌರ್ಯ,ಭಯೋತ್ಪಾದನೆಯ ಬಗ್ಗೆಯೂ ಬರಹಗಳಿವೆ.ಸಂಪದ ತಾಣದಲ್ಲೂ ಇವರ ಬರಹಗಳು,ಪ್ರತಿಕ್ರಿಯೆಗಳು ಧಾರಾಳವಾಗಿವೆ.
--------------------------------------------
ರೂಬಿಕ್‌ಕ್ಯೂಬ್ ಪರಿಹಾರ:ಇಪ್ಪತ್ತೇ ಹೆಜ್ಜೆ
ಯಾವುದೇ ಸ್ಥಿತಿಯಲ್ಲಿರುವ ರೂಬಿಕ್ ಕ್ಯೂಬ್ ಸಮಸ್ಯೆಗೆ ಗರಿಷ್ಠ ಇಪ್ಪತ್ತು ಹೆಜ್ಜೆಗಳೊಳಗೆ ಪರಿಹಾರ ಸಾಧ್ಯವೆಂದು ನಿರೂಪಿಸಲಾಗಿದೆ.ಇದಕ್ಕೆ ಕಂಪ್ಯೂಟರ್ ಸಹಾಯ ಪಡೆಯಬೇಕಾಯಿತು ಎಂದು ಬೇರೆ ಹೇಳಬೇಕಿಲ್ಲವಷ್ಟೇ?ರೂಬಿಕ್ ಕ್ಯೂಬ್ 1974ರಲ್ಲಿ ಹಂಗೇರಿಯ ಎಮೋ ರೂಬಿಕ್ ಎಂಬಾತ ಅನ್ವೇಷಿಸಿದ.ಸಾವಿರ ದಶಲಕ್ಷ ವಿವಿಧ ಸ್ಥಿತಿಗಳಲ್ಲಿ ರೂಬಿಕ್ ಕ್ಯೂಬ್ ಇರುವ ಸಾಧ್ಯತೆಯಿದ್ದರೂ,ಅದನ್ನು ಗರಿಷ್ಠ ಇಪ್ಪತ್ತು ಬಾರಿ ತಿರುಗಿಸಿ,ರೂಬಿಕ್ ಕ್ಯೂಬ್ ಪ್ರತಿ ಮುಖದಲ್ಲೂ ಪ್ರತ್ಯೇಕ ಬಣ್ಣ ಹೊಂದುವಂತೆ ಏರ್ಪಡಿಸಲು ಸಾಧ್ಯವೆಂದು,ಗೂಗಲ್ ಕಂಪೆನಿಯ ಕಂಪ್ಯೂಟರುಗಳ ಸಮೂಹವನ್ನು ಬಳಸಿ ಸಿದ್ಧ ಪಡಿಸಿದವರು ಕೆಂಟ್ ವಿಶ್ವವಿದ್ಯಾಲಯದ ಗಣಿತಜ್ಞ ಪ್ರೊಫೆಸರ್ ಮೊರ್ಲಿ ದ್ರಾವಿಡ್ಸನ್.ಇದುವರೆಗೆ ನಲ್ವತ್ತು ಕೋಟಿ ರೂಬಿಕ್ ಕ್ಯೂಬ್‌ಗಳು ಮಾರಾಟವಾಗಿವೆ ಎಂದು ಅಂದಾಜು.ಏಳು ಸೆಕೆಂಡುಗಳಿಗಿಂತ ತುಸು ಹೆಚ್ಚು ಸಮಯದಲ್ಲಿ ಸವಾಲನ್ನು ಬಿಡಿಸಿ,ದಾಖಲೆ ಮಾಡಿದವರಿದ್ದಾರೆ.
---------------------------------------------------------
ಪ್ರಾರ್ಥನೆ ಸಮಯ ತಿಳಿಸುವ ಮೊಬೈಲ್
ಐಫೋನ್‌ನಂತಹ ಮೊಬೈಲ್ ಫೋನ್‌ಗಳಲ್ಲಿ ವಿವಿಧ ತಂತ್ರಾಂಶಗಳನ್ನು ಸ್ಥಾಪಿಸಿ,ಅದರಿಂದ ಲಾಭ ಪಡೆಯಬಹುದು.ಅವುಗಳಲ್ಲಿ ಸದ್ಯ ಸುದ್ದಿಯಲ್ಲಿರುವುದು,ಮುಸ್ಲಿಮ್ ಧರ್ಮಾನುಯಾಯಿಗಳಿಗೆ ಪ್ರಾರ್ಥನೆಯ ಸಮಯದಲ್ಲಿ ಸೂಚನೆ ನೀಡುವ ತಂತ್ರಾಂಶ.ದೈನಂದಿನ ಪ್ರಾರ್ಥನೆಯ ಹೊತ್ತಾದೊಡನೆ ಅಲಾರಂ ಮೊಳಗಿಸುವಂತೆ ಏರ್ಪಡಿಸಲು ಇದು ಅನುವು ಮಾಡುತ್ತದೆ.ಮೆಕ್ಕಾ ಕಡೆಗೆ ಮುಖ ಮಾಡಿ,ಪ್ರಾರ್ಥನೆ ಮಾಡಲು ನೆರವಾಗುವ ಐಫೋನ್ ತಂತ್ರಾಂಶವೂ ಇದೆ.ಇದು ವ್ಯಕ್ತಿ ತಿರುಗಿದಂತೆಲ್ಲಾ ದಿಕ್ಕು ತೋರಿಸುವ ಕಂಪಾಸನ್ನು ತೆರೆಯ ಮೇಲೆ ಮೂಡಿಸುತ್ತದೆ.ಕಂಪಾಸಿನ ಮಿಥ್ಯಾ ಪಾಯಿಂಟರ್ ಸರಿಯಾದ ದಿಕ್ಕನ್ನು ಹಸುರು ಬಣ್ಣಕ್ಕೆ ಬದಲಾಗುವ ಮೂಲಕ ಸೂಚಿಸುತ್ತದೆ.ತಪ್ಪು ದಿಕ್ಕಿಗೆ ಹಿಡಿದಾಗ,ಸೂಚಕ ಕೆಂಪು ಬಣ್ಣ ಇರುತ್ತದೆ.ಇನ್ನೊಂದು ಮೊಬೈಲ್ ತಂತ್ರಾಂಶ ಸಮೀಪದ ಮಸೀದಿಯನ್ನು ನಕಾಶೆಯಲ್ಲಿ ಗುರುತಿಸಿ,ವ್ಯಕ್ತಿ ಇರುವೆಡೆಯಿಂದ ಅತ್ತ ಸಾಗಲು ದಾರಿ ತೋರಿಸುತ್ತದೆ.ಇದು ಗೂಗಲ್ ಮ್ಯಾಪಿನ ಸಹಾಯ ಪಡೆಯುವ ತಂತ್ರಾಂಶ.ಈ ತಂತ್ರಾಂಶಗಳನ್ನು ಇಳಿಸಿಕೊಳ್ಳಲು ಸಣ್ಣ ಮೊತ್ತವನ್ನು ಪಾವತಿಸಬೇಕಾಗುತ್ತದೆ.ಐಫೋನ್‌ನ ತಂತ್ರಾಂಶಗಳನ್ನು ಆನ್‌ಲೈನಿನಲ್ಲಿ ಐಸ್ಟೋರುಗಳಿಂದ ಇಳಿಸಿಕೊಳ್ಳಬಹುದು.
--------------------------------------------
ನೋಕಿಯಾ:ಟಾಪ್
ಮೊಬೈಲ್ ಸಾಧನಗಳ ಮಾರಾಟದಲ್ಲಿ ನೋಕಿಯಾ ಜಗತ್ತಿನಲ್ಲೇ ಪ್ರಥಮ ಸ್ಥಾನದಲ್ಲಿದೆ.ಮಾರುಕಟ್ಟೆಯ ಸುಮಾರು ಮೂವತ್ತೈದು ಶೇಕಡಾ ಪಾಲನ್ನು ಹೊಂದುವ ಮೂಲಕ,ನೋಕಿಯಾ ತನ್ನ ಜನಪ್ರಿಯತೆಯನ್ನು ಈ ವರ್ಷವೂ ಉಳಿಸಿಕೊಂಡಿದೆ.ಉಳಿದಂತೆ ಸ್ಯಾಮ್‌ಸಂಗ್,ಎಲ್ಜಿ,ಬ್ಲಾಕ್‌ಬೆರಿ ತಯಾರಕ ರಿಮ್,ಸೋನಿ ಎರಿಕ್ಸನ್,ಮೊಟೊರೊಲಾ,ಆಪಲ್ ಕಂಪೆನಿಗಳು ನಂತರದ ಸ್ಥಾನ ಪಡಿದಿವೆ.ಇನ್ನು ಮೊಬೈಲ್ ಫೋನುಗಳಲ್ಲಿ ಬಳಸಲಾಗುವ ಕಾರ್ಯನಿರ್ವಹಣಾ ತಂತ್ರಾಂಶಗಳ ಪೈಕಿ,ಸಿಂಬಿಯನ್ ಶೇಕಡಾ ನಲುವತ್ತೊಂದು ಪಾಲು ಪಡೆದಿದೆ.ಶೇಕಡಾ ಹದಿನೇಳು ಪೋನುಗಳಲ್ಲಿ ಆಂಡ್ರಾಯಿಡ್ ಬಳಸಲಾಗುತ್ತದೆ.ವಿಂಡೋಸ್ ವ್ಯವಸ್ಥೆಯನ್ನು ಶೇಕಡಾ ಐದರಲ್ಲಿ,ಲಿನಕ್ಸನ್ನು ಶೇಕಡಾ ಎರಡೂವರೆ ಪೋನುಗಳಲ್ಲಿ ಬಳಸಲಾಗುತ್ತಿದೆ.ಅಂದಹಾಗೆ ಮಾರಾಟವಾಗುವ ಪೋನುಗಳಲ್ಲಿ ಅರೆವಾಸಿ ಪೋನುಗಳು ಸ್ಮಾರ್ಟ್‌ಪೋನುಗಳು.
-----------------------------------------------------------------
ಬ್ಲ್ಯಾಕ್‌ಬೆರಿ ವಿವಾದ:ಮಾಸಾಂತ್ಯ ಗಡುವು
ಬ್ಲ್ಯಾಕ್‌ಬೆರಿ ಮೊಬೈಲ್ ಹ್ಯಾಂಡ್‍ಸೆಟ್ ಏರ್‌ಟೆಲ್ ಮತ್ತು ವೊಡಾಫೋನ್ ಜಾಲಗಳಲ್ಲಿ ಹೆಚ್ಚು ಬಳಕೆಯಾಗುವ ಸಾಧನವಾಗಿದೆ.ಬ್ಲ್ಯಾಕ್‌ಬೆರಿ ಕಂಪೆನಿಯು ಕೆನಡಾದ ರಿಮ್ ಎನ್ನುವ ಕಂಪೆನಿಯದ್ದು.ಈ ಸಾಧನವನ್ನು ಎಸೆಮ್ಮೆಸ್ ಕಳುಹಿಸಲು,ಧ್ವನಿ ಕರೆಗಳನ್ನು ,ಅಂತರ್ಜಾಲ ಜಾಲಾಡಲು ಬಳಸಬಹುದು.ಜತೆಗೆ ಮಿಂಚಂಚೆ ಕಳುಹಿಸಲು ಮತ್ತು ದಿಡೀರ್ ಸಂದೇಶ ರವಾನೆಗೂ ಇದು ಅವಕಾಶ ನೀಡುತ್ತದೆ.ಮಿಂಚಂಚೆ ಮತ್ತು ದಿಡೀರ್ ಸಂದೇಶ ರವಾನೆಯಾಗುವಾಗ,ಮಾಹಿತಿ ಕದಿಯುವವರಿಗೆ ಅರ್ಥವಾಗದಂತೆ ಗೂಢಲಿಪಿಯಲ್ಲಿ ಸಂದೇಶಗಳನ್ನು ರವಾನಿಸುವ ವ್ಯವಸ್ಥೆ ಬ್ಲ್ಯಾಕ್‌ಬೆರಿಯಲ್ಲಿದೆ.ಈ ಸೇವೆಯೇ ಬ್ಲ್ಯಾಕ್‌ಬೆರಿ ವಿವಾದದ ಹೇತು.ಈ ಗೂಢಲಿಪಿಗೆ ಬಳಸುವ ಕ್ರಮವಿಧಿಯನ್ನು ತನಗೆ ನೀಡಬೇಕು ಎನ್ನುವುದು ಭಾರತ ಸರಕಾರದ ನಿಲುವು.ಅದನ್ನು ಅಂತಾರ್ರಾಷ್ಟ್ರೀಯವಾಗಿ ಬಳಸುವುದರಿಂದ ಮತ್ತು ಗೂಢಲಿಪೀಕರಣಕ್ಕೆ ಬಳಸುವ ಕೀಲಿಯನ್ನು ಬಳಕೆದಾರರೇ ನಿರ್ಧರಿಸುವುದರಿಂದ,ಸರಕಾರದ ಬೇಡಿಕೆಯನ್ನು ಈಡೇರಿಸಲಾಗದು ಎನ್ನುವುದು ಕಂಪೆನಿಯ ನಿಲುವು.ಬ್ಲ್ಯಾಕ್‌ಬೆರಿಯು ತನ್ನ ಸರ್ವರ್‌ಗಳನ್ನು ಭಾರತದಲ್ಲೇ ಸ್ಥಾಪಿಸಿ,ಇಲ್ಲಿನ ಬಳಕೆದಾರರಿಗೆ ಸೇವೆ ನೀಡಿದರೂ ನಡೆದೀತು ಎನ್ನುವ ರಿಯಾಯಿತಿಯನ್ನೂ ಸರಕಾರ ನೀಡಿದೆ.ತಿಂಗಳ ಅಂತ್ಯಕ್ಕೆ ತನ್ನ ಅಪೇಕ್ಷೆಯನ್ನು ಈಡೇರಿಸಬೇಕು,ಇಲ್ಲವಾದರೆ ಮಿಂಚಂಚೆ ಮತ್ತು ಮೆಸೆಂಜರ್ ಸೇವೆಯನ್ನು ತಡೆಯ ಬೇಕಾದೀತು ಎಂದು ಸರಕಾರದ ಸದ್ಯದ ಪಟ್ಟು.ಉಳಿದ ಎಸೆಮ್ಮೆಸ್,ಧ್ವನಿಕರೆಗಳು,ಅಂತರ್ಜಾಲ ಸೇವೆಗಳನ್ನು ನೀಡುವ ಬಗ್ಗೆ ಸರಕಾರದ ಅಡ್ಡಿಯಿಲ್ಲದಿರುವುದರಿಂದ ದಶಲಕ್ಷ ಸಂಖ್ಯೆಯಲ್ಲಿರುವ ಈ ಸಾಧನದ ಬಳಕೆದಾರರಿಗೆ ಸೆಟ್ಟನ್ನು ಅಟ್ಟಕ್ಕೆಸೆಯುವ ಭಯವಿಲ್ಲ.ಅಂದಹಾಗೆ ಈ ಸೆಟ್‌ಗಳನ್ನು ಮಾರಾಟಮಾಡಿ ಕೈತೊಳೆದುಕೊಳ್ಳಲು ಮಾರಾಟಗಾರರು ವಿಶೇಷ ಕಡಿತದ ಮಾರಾಟಕ್ಕೆ ಶರಣು ಹೋಗಿದ್ದಾರೆ.ಉಳಿದ ಸೆಟ್‌ಗಳ ತಯಾರಕರು ಸಂದೇಶದ ಗೌಪ್ಯತೆಯನ್ನು ಕಾಪಾಡುವ ಸೇವೆಗಳನ್ನು ಸೇವಾಜಾಲಗಳಿಗೇ ಬಿಟ್ಟಿರುವ ಕಾರಣ ಸಮಸ್ಯೆಯಿಂದ ಮುಕ್ತರಾಗಿದ್ದಾರೆ.
*ಅಶೋಕ್‌ಕುಮಾರ್ ಎ