ಏಕಾಂಗಿ ಮಹಿಳೆಯೊಬ್ಬಳ ಬದುಕಿನ ಪಯಣ
ಇಂಗ್ಲೆಂಡಿನ ಪ್ರಸಿದ್ಧ 'ಬ್ಲೂಮ್ಸ್ ಬರಿ' ಪಬ್ಲಿಕೇಷನ್ ಗೊಂದು ಬರಹ ತಲುಪುತ್ತದೆ. ಅದು ಪ್ರಕಾಶಕರ ಮೇಲೆ ಪ್ರಭಾವ ಬೀರದೆ, ತಿಪ್ಪೆಗೆಸೆಯಲ್ಪಟ್ಟಿತ್ತು. ಪ್ರಕಾಶಕರ ಎಂಟು ವರ್ಷದ ಮಗಳು ಅಚಾನಕ್ ಅದನ್ನು ಕೈಗೆತ್ತಿಕೊಳ್ಳುತ್ತಾಳೆ. ಪುಟ್ಟ ಹುಡುಗಿ ಬರಹದ ಮೇಲೆ ಕಣ್ಣಾಡಿಸುತ್ತಿದ್ದಂತೆ ಆಕರ್ಷಿತಗೊಳ್ಳುತ್ತಾಳೆ. ಆ ಬರಹವನ್ನು ಅಂತ್ಯ ತನಕವೂ ಆಸಕ್ತಿಯಿಂದ ಓದುತ್ತಾಳೆ. ಮಗಳ ಖುಷಿ ಕಂಡು ಚಕಿತಗೊಂಡ ಪ್ರಕಾಶಕ ಅದನ್ನು ಮುದ್ರಿಸಲು ಕೈಗೆತ್ತಿಕೊಳ್ಳುತ್ತಾನೆ...
"ಸಾಧನೆಗೆ ಅಸಾಧ್ಯವಾದದ್ದು ಇರದು, ಸಾಧಿಸುವ ಛಲ ನಮಗಿರಬೇಕು". ನಿರ್ಧಿಷ್ಟ ಗುರಿ ಇರಬೇಕು. ಅದಕ್ಕೊಂದು ದಾರಿಯ ಆಯ್ಕೆ ನಮ್ಮದಾಗಿರಬೇಕು. ಬದುಕಿನ ಚಿಕ್ಕ ಪುಟ್ಟ ನಗಣ್ಯ ಸಮಸ್ಯೆಗಳಿಗೆ ಅತಿರೇಖದ ಸ್ಪಂದನೆ ನಮ್ಮನ್ನು ಅಧೀರರನ್ನಾಗಿಸುತ್ತದೆ. ಹುಟ್ಟುವಾಗ ಬರಿಗೈ ನಮ್ಮದಾಗಿದ್ದರೂ, ಸಾಯುವಾಗ ಸಾಧಕರ ಸಾಲಿನಲ್ಲಿರಬೇಕು. ಆತ್ಮಹತ್ಯೆಯೇ ತನ್ನೆಲ್ಲಾ ಸಮಸ್ಯೆಗೆ ಪರಿಹಾರವೆಂದು, ಬಗೆದು, ಕೊನೆ ನಿಮಿಷದಲ್ಲಿ ದೃಢ ನಿರ್ಧಾರ ತಾಳಿ ವಿಖ್ಯಾತರಾದವರು ಅನೇಕ.
ಆರರ ಹರೆಯದ ಪುಟ್ಟ ಹುಡುಗಿಯೊಬ್ಬಳು, ಮೊಲದ ಬಗ್ಗೆ ಕಥೆಯೊಂದನ್ನು ಬರೆಯುತ್ತಾಳೆ. ಅಮ್ಮನ ಮಡಿಲಲ್ಲಿ ಕುಳಿತ ಬಾಲಕಿ ತಾನು ಬರೆದ ಮೊದಲ ಕಥೆಯನ್ನು ಓದುತ್ತಾಳೆ. ಅಮ್ಮನಿಗೆ ಅಪಾರ ಸಂತಸವಾಗುತ್ತದೆ. ಆಕೆಯನ್ನು ಅಪ್ಪಿಕೊಂಡು ಮಗಳ ಬಗ್ಗೆ ಮೆಚ್ಚುಗೆ ಸೂಚಿಸುತ್ತಾಳೆ. ಅಮ್ಮನ ಮಾತುಗಳು ಆಕೆಯಲ್ಲಿ ಶಕ್ತಿ ತುಂಬಿತು. ಬರೆಯುವುದು ಆಕೆಯ ಹವ್ಯಾಸವಾಗಿ ಮುಂದುವರಿಯಿತು. ಆಕೆಯ ಕಲ್ಪನಾ ಲೋಕ ಅದ್ಭುತವಾಗಿತ್ತು. ತನ್ನ ಕಾಲ್ಪನಿಕ ಯೋಚನೆಗಳನ್ನು ಪುಸ್ತಕದಲ್ಲಿ ಬರೆಯತೊಡಗಿದಳು..
ಅಜ್ಜಿಯ ಮಡಿಲಲ್ಲಿ ಕುಳಿತು ಕಥೆಗಳನ್ನು ಕೇಳುತ್ತಿದ್ದ ಆಕೆಗೆ ಅಜ್ಜಿ ಅಂದರೆ ಪಂಚಪ್ರಾಣ. ಅಜ್ಜಿ ಹೇಳುತ್ತಿದ್ದ ಒಂದೊಂದು ಕಥೆಯೂ ಆಕೆಯ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಿತ್ತು. 'ನಮ್ಮದು ಇಂದು ವಿಭಕ್ತ ಕುಟುಂಬದಲ್ಲಿ ಯಾಂತ್ರಿಕ ಜೀವನ. ಅಜ್ಜಿ, ಅಜ್ಜ ಎಂಬ ಎರಡು ಜೀವಗಳು ನಮಗೆ ಸವಕಲು ನಾಣ್ಯಗಳಾಗಿವೆ. ನಮ್ಮ ಸಂಬಂಧಗಳು ರುಚಿ ಕಳೆದುಕೊಂಡಿವೆ. ತಂತ್ರಜ್ಞಾನದ ದಾಸರಾಗಿ ನಿರ್ಜೀವ ವಸ್ತುಗಳನ್ನು ಅಪ್ಪಿಕೊಂಡು ಬದುಕುತ್ತಿದ್ದೇವೆ. ಅಜ್ಜಿ ಕಥೆಗಳ ಸೌಂದರ್ಯ ಮಾಯವಾಗಿ ವಾಟ್ಸ್ಆಪ್ ಕಥೆಗಳು ತಲೆಪೂರ್ತಿ ತುಂಬಿಕೊಂಡಿವೆ. ಜೀವವಿದ್ದೂ, ಜೀವವಿಲ್ಲದ ವಸ್ತುಗಳೊಂದಿಗೆ ವ್ಯವಹರಿಸುತ್ತಿರುವ ನಾವು, ಜೀವಂತವಿರುವ, ಬದುಕಿಗೆ ತಮ್ಮ ಅನುಭವಗಳನ್ನು ಧಾರೆಯೆರೆಯಬೇಕಾದ ಅಜ್ಜ, ಅಜ್ಜಿ ವೃದ್ದಾಶ್ರಮದಲ್ಲಿ ಜಪಧಾರಿಗಳಾಗಿರುವುದು ಖೇದಕರ.' ಇತ್ತ ಬಾಲಕಿ ದಿನದ ಹೆಚ್ಚಿನ ಸಮಯ ಅಜ್ಜಿಯೊಂದಿಗೇ ಕಳೆಯುತ್ತಿದ್ದಳು. ಆಕೆಯ ಹದಿನೈದರ ಹರೆಯದಲ್ಲೇ ಅಜ್ಜಿಯ ಸಾವು. ತನ್ನನ್ನು ಮುದ್ದಾಡಿಸಿ, ಕಥೆ ಹೇಳುತ್ತಿದ್ದ ಅಜ್ಜಿಯ ಸಾವು ಅವಳಿಗೆ ಅಘಾತ ನೀಡಿತು. ಅಜ್ಜಿಯ ಅಗಲುವಿಕೆಯ ಬೆನ್ನಲ್ಲೇ ಅವಳ ತಾಯಿಗೆ ಮೆದುಳಿನ ಅನಾರೋಗ್ಯ ಭಾದಿಸಿ, ಚಿಕಿತ್ಸೆ ಫಲಕಾರಿಯಾಗದೆ ಪ್ರಾಣಬಿಟ್ಟಳು. ಅಮ್ಮನ ಸಾವಿಗಿಂತ ಮುಂಚೆಯೇ, ಅಮ್ಮನೊಂದಿಗೆ ಜಗಳ ಮಾಡಿದ ಅಪ್ಪ ಆಕೆಯನ್ನು ತೊರೆದಿದ್ದ.
ಎಲ್ಲರನ್ನೂ ಕಳೆದುಕೊಂಡ ಆಕೆ ಏಕಾಂಗಿ. ಸಾಂತ್ವಾನದ ನಾಲ್ಕು ಮಾತುಗಳನ್ನಾಡಲು ತನ್ನವರಿಲ್ಲ.. ಸಂತೈಸುವ ಕೈಗಳಿಲ್ಲ. ಜೀವನ ಬರಡಾಗಿತ್ತು. ಆಕೆ ತೀರಾ ಮಾನಸಿಕ ಒತ್ತಡಕ್ಕೆ ಗುರಿಯಾದಳು. ಯಾರಿಗಾಗಿ ಬದುಕಬೇಕು? ಏಕೆ ಬದುಕಬೇಕು? ಹೇಗೆ ಬದುಕಬೇಕು? ಈ ಪ್ರಶ್ನೆಗಳಿಗೆ ಅವಳಲ್ಲಿ ಉತ್ತರವಿರಲಿಲ್ಲ. ಮಾನಸಿಕವಾಗಿ ಕುಗ್ಗಿ ಹೋಗಿದ್ದ ಆಕೆ ಆತಹತ್ಯೆಯ ಯೋಚನೆ ಮಾಡುತ್ತಾಳೆ. ಒಂದೆಡೆ ತಮಗಾಗಿ ಕಷ್ಟ ಪಡುವ ಅಮ್ಮ, ಇನ್ನೊಂದೆಡೆ ಶ್ರಮ ಪಡುವ ಅಪ್ಪ, ಮತ್ತೊಂದೆಡೆ ಜೀವನ ಮಾರ್ಗ ತೋರಿಸುವ ಗುರು, ಇಷ್ಟಿದ್ದೂ, ಕ್ಷುಲ್ಲಕ ಕಾರಣಕ್ಕೆ ಅಮೂಲ್ಯ ಬದುಕಿಗೆ ಅಂತ್ಯಗೊಳಿಸಲು ಸಜ್ಜಾಗುವ ದುರ್ಬಲ ಮನೋಸ್ಥಿತಿಯ ಹಲವು ಮಕ್ಕಳನ್ನು ಕಂಡಾಗ, ಅದೃಷ್ಟಹೀನಳಾದ ಆ ಬಾಲಕಿಯ ನಿರ್ಧಾರ ವಿಶೇಷವೇನೂ ಆಗಿರಲಿಲ್ಲ.
ಆತ್ಮಹತ್ಯೆಗೆ ಮಾನಸಿಕವಾಗಿ ಸಜ್ಜಾದ ಆಕೆ ಪತ್ರಿಕೆಯೊಂದರ ಪ್ರಕಟಣೆ ಓದುತ್ತಾಳೆ. ಪೋರ್ಚ್ ಗಲ್ ನಲ್ಲಿ ಸಂಸ್ಥೆಯೊಂದಕ್ಕೆ ಶಿಕ್ಷಕಿಯೊಬ್ಬಳ ಬೇಡಿಕೆ ಇರುತ್ತದೆ. ಸಾಯುವ ನಿರ್ಧಾರದಿಂದ ಹಿಂದೆ ಸರಿದು, ಆಕೆ ಪೋರ್ಚ್ ಗಲ್ ನತ್ತ ಪ್ರಯಾಣಿಸಿದ ಆಕೆ ಹೊಸ ಜೀವನವೊಂದನ್ನು ಕಂಡುಕೊಳ್ಳಬೇಕಿತ್ತು. ಪ್ರಯಾಣದ ಉದ್ದಕ್ಕೂ ಅದೇನೋ ಯೋಚನೆಗಳು. ಅದೆಷ್ಟೋ ನಿರೀಕ್ಷೆಗಳು. ತನ್ನವರು ಯಾರೂ ಇಲ್ಲದ ಏಕಾಂಗಿ ಬದುಕಿನ ನೂರಾರು ಬಯಕೆಗಳೊಂದಿಗೆ, ಪೋರ್ಚ್ ಗಲ್ ತಲುಪಿದ ಆಕೆ ಕೆಲಸಕ್ಕೆ ಸೇರಿಕೊಂಡಳು.
ಎಂದಿನಂತೆ ಕೆಫೆಯಲ್ಲಿ ಕಾಫಿ ಸವಿಯುತ್ತಿದ್ದ ಆಕೆಗೆ ಒಂದು ದಿನ ಟಿವಿ ಸಂದರ್ಶಕನೊಬ್ಬನ ಪರಿಚಯವಾಯಿತು. ಅವರಿಬ್ಬರ ಆಲೋಚನೆಗಳು ಪರಸ್ಪರ ಕೂಡುತ್ತಿದ್ದವು. ಮತ್ತೆ ಮತ್ತೆ ಭೇಟಿಯಾಗುತ್ತಿದ್ದ ಅವರು ವರ್ಷದೊಳಗೆ ಸತಿ ಪತಿಗಳಾದಾಗ, ಆಕೆಯ ಜೀವನದ ಮತ್ತೊಂದು ಮಜಲು ಆರಂಭಗೊಳ್ಳುತ್ತದೆ. ಇದು ಬಳಲಿ ಬೆಂಡಾಗಿದ್ದ ಆಕೆಯ ಬದುಕಿಗೆ ಬೆಳಕಿನ ಸಿಂಚನವಾಗಿತ್ತು. ಪ್ರೀತಿಸುವ ಗಂಡನೊಂದಿಗೆ ಸುಂದರ ಬದುಕಿನಲ್ಲಿ, ಆಕೆ ಹೆಣ್ಣು ಮಗುವಿಗೆ ಜನ್ಮನೀಡುತ್ತಾಳೆ. ಕಷ್ಟದ ಪೊರೆ ತೊರೆದು, ಸುಖದ ಬಾಳು ತನ್ನದಾದ ಬಗ್ಗೆ ದೇವರಿಗೆ ಧನ್ಯತೆ ಅರ್ಪಿಸುತ್ತಿದ್ದಳು.
ಆಕೆಯ ನೆಮ್ಮದಿ ಬಹುಕಾಲ ಉಳಿಯಲಿಲ್ಲ. ಅವರ ಸುಂದರವಾಗಿದ್ದ ಬದುಕಿನಲ್ಲಿ ಬಿರುಕು ಮೂಡಿತು. ಆ ಬಿರುಕು ಹೆಚ್ಚಾಗುತ್ತಾ ಹೋದಾಗ ಮತ್ತೆ ದುರಸ್ತಿ ಅಸಾಧ್ಯವಾಯಿತು. ಕಡೆಗೊಂದು ದಿನ ಗಂಡ ಆಕೆಯನ್ನು ಮನೆಯಿಂದ ಹೊರಗಟ್ಡಿಯೇ ಬಿಟ್ಟ. ತನ್ನವರು ಯಾರೂ ಇಲ್ಲದ ಊರೊಂದರಲ್ಲಿ ಮಗುವಿನೊಂದಿಗೆ ಬೀದಿಪಾಲಾದ ಆಕೆಯ ಬದುಕು ಅಸಹನೀಯವಾಗಿತ್ತು. ತನ್ನ ಮಗಳ ಸಹಿತ ತನ್ನೂರಿಗೆ ಹೊರಟು ಬಂದಳು. ಅವಳ ಮನೆ ಮಾರಾಟವಾಗಿ ಹೋಯಿತು. ಬದುಕುವ ದಾರಿಯೇ ಕಾಣದಾಯಿತು. ಗೆದ್ದವಳು ಮತ್ತೆ ಸೋತಿದ್ದಳು. ಮತ್ತೊಮ್ಮೆ ಸಾಯುವುದೇ ಪರಿಹಾರವೆಂದು ಭಾವಿಸಿ ಸಾಯಲು ಸಿದ್ಧಳಾದಳು. ಮಗಳ ನೆನಪು ಆಕೆಯನ್ನು ಸಾವಿನಿಂದ ಹಿಂದಕ್ಕೆ ತಳ್ಳಿತು. ನಿರುದ್ಯೋಗಿ ಭತ್ಯೆ ಪಡೆದು ಮಗಳನ್ನು ಸಾಕುತ್ತಾ ತಾನೂ ಬದುಕಿದಳು. ಮಗಳ ಹೊಟ್ಟೆ ತುಂಬಿಸಲು ತಾನು ಕಡಿಮೆ ತಿನ್ನತೊಡಗಿದಳು.
ಆಕೆ ಕುಳಿತಲ್ಲೇ ಯೋಚಿಸತೊಡಗಿದಳು. ನನಗೆ ಬದುಕಲು ಸಾಧ್ಯವಿಲ್ಲವೇ?. ಆ ಶಕ್ತಿ ನನ್ನಲ್ಲಿ ಇಲ್ಲವೇ? ಜೀವನ ಸಾಗಿಸಲು ಯೋಗ್ಯವಾದ ಯಾವುದೇ ಪ್ರತಿಭೆ ನನ್ನಲ್ಲಿ ಉಳಿದಿಲ್ಲವೇ?... ಯೋಚಿಸುತ್ತಾ ಹೋದಂತೆ ಆಕೆಗೆ ಬಾಲ್ಯದ ನೆನಪುಗಳು ಮತ್ತೆ ಬಂದವು. ಅಮ್ಮನ ಮಡಿಲಲ್ಲಿ ಓದಿದ ಮೊದಲ ಕಥೆ ನೆನಪಾಯಿತು. ಅವಳಿಗೆ ತನ್ನಲ್ಲಿದ್ದ ಬರೆಯುವ ಸಾಮರ್ಥ್ಯ ಮತ್ತೆ ಗರಿಗೆದರಿತು.. ಹೌದು ಆಕೆ ಬರೆಯಬಲ್ಲವಳಾಗಿದ್ದಳು. ಬರಹಗಳಿಂದ ಮಕ್ಕಳ ಮನಸ್ಸನ್ನು ಸೆಳೆಯಬಲ್ಲ ಸಾಮರ್ಥ್ಯ ಆಕೆಗಿತ್ತು. ಆಕೆ ಬರೆಯ ತೊಡಗಿದಳು. ಬರೆಯಲು ಕುಳಿತಾಗ ನೆನಪುಗಳು ಶೂನ್ಯವಾಗುತ್ತಿತ್ತು. ಬರೆಯಲಾರದೆ ಚಡಪಡಿಸ ತೊಡಗಿದಳು. ಆಕೆ ಪ್ರಯತ್ನ ಬಿಡಲಿಲ್ಲ. ಮಗಳಿಗೆ ತೊಂದರೆಯಾಗಬಾರದೆಂದು ಕೆಫೆಯಲ್ಲಿ ಕಪ್ ಕಾಫಿ ಕುಡಿಯುತ್ತಾ ಬರೆಯ ತೊಡಗಿದಳು.
ಒಂದಷ್ಟು ಬರೆದು ಪ್ರಕಾಶಕರಿಗೆ ಕಳುಹಿಸಿಕೊಟ್ಟ ಆಕೆಯ ಬರಹಗಳು ತಿರಸ್ಕೃತಗೊಂಡವು. ಒಂದಲ್ಲ ಅನೇಕ ಮಂದಿ ಆಕೆಯ ಬರಹಗಳನ್ನು ಪ್ರಕಟಣೆಗೆ ಯೋಗ್ಯವಲ್ಲವೆಂದು ಮರಳಿಸಿದರು. ಆಕೆಯಲ್ಲಿ ನಿರಾಸೆಯ ಛಾಯೆ. ಅವಳು ಮಾನಸಿಕವಾಗಿ ಕುಸಿಯುತ್ತಿದ್ದಳು. ಆಗಲೇ ಅವಳ ಬರಹ "ಬ್ಲೂಮ್ಸ್ ಬರಿ ಪಬ್ಲಿಷಿಂಗ್ ಕಂಪೆನಿ ಪ್ರಕಾಶಕನ ಕೈ ಸೇರಿದ್ದು. ತಿಪ್ಪೆಗೆಸೆದಿದ್ದರೂ, ಮಗಳು ಇಷ್ಟಪಟ್ಟ ಕಾರಣಕ್ಕೆ ಪ್ರಕಟಿಸಲು ಹೊರಟ ಪ್ರಕಾಶಕ ಆಕೆಗೆ ಸಂದೇಶ ಕಳುಹಿಸಿ "ನಿಮ್ಮ ಪುಸ್ತಕ ಪಬ್ಲಿಷ್ ಮಾಡ್ತಾ ಇದ್ದೇನೆ. ಆದರೆ ಈ ವೃತ್ತಿಯಲ್ಲಿ ಮುಂದುವರಿದರೆ ನಿಮಗೆ ಭವಿಷ್ಯವಿಲ್ಲ. ಇದನ್ನೇ ವೃತ್ತಿಯಾಗಿಸಬೇಡಿ" ಎಂದು ಅಭಿಪ್ರಾಯ ನೀಡಿದ.
ಜೂನ್ 1997 ರಲ್ಲಿ ನತದೃಷ್ಟೆಯ ಬರಹ, ಪುಸ್ತಕ ರೂಪದಲ್ಲಿ ಪ್ರಕಟಣೆಯಾಯಿತು. "ಹ್ಯಾರಿಪಾಟರ್ ಆಂಡ್ ಫಿಲೋಸೋಫರ್ಸ್ ಸ್ಟೋನ್" ಎಂಬ ಹೆಸರಿನಲ್ಲಿ ಪ್ರಕಟಗೊಂಡ ಆ ಪುಸ್ತಕ ಜಗತ್ತಿನಲ್ಲೇ ಸಂಚಲನ ಮೂಡಿಸಿತು. ತಿಪ್ಪೆಗೆಸೆದಿದ್ದ ಬರಹವೊಂದು ಐದೇ ತಿಂಗಳಲ್ಲಿ "ನೆಸ್ಲೆ ಸ್ಮಾರ್ಟೀಸ್ ಬುಕ್" ಪ್ರಶಸ್ತಿಯನ್ನು ಪಡೆಯಿತು. ಆಕೆಯೊಂದು ಇತಿಹಾಸವಾದಳು. "One of the best selling author of all time" ಎಂಬ ಹೆಗ್ಗಳಿಕೆ ಅವಳದ್ದಾಯಿತು. ಆಕೆಯ ಏಳು ಪುಸ್ತಕಗಳ ಸರಣಿ 450 ಮಿಲಿಯನ್ ಪ್ರತಿಗಳು ಮಾರಾಟವಾಗಿ ನವ ದಾಖಲೆ ಸೃಷ್ಟಿಯಾಗುತ್ತಿದ್ದಂತೆ, ಆರಂಭದಲ್ಲೇ ಆಕೆಯ ಬರಹಗಳನ್ನು ತಿರಸ್ಕರಿಸಿದ್ದ ಮಂದಿ ಕೈ ಹಿಸುಕಿಕೊಳ್ಳಬೇಕಾಯಿತು. ಹ್ಯಾರಿಪಾಟರ್ ಪುಸ್ತಕದಿಂದ ಆಕೆ ಗಳಿಸಿದ್ದು 7.7 ಬಿಲಿಯನ್. 2004ರಲ್ಲಿ ಪೋರ್ಬ್ಸ್ ಮ್ಯಾಗಝಿನ್ ಅವಳನ್ನು "ಜಗತ್ತಿನ ಪ್ರಥಮ ಬಿಲಿಯನೇರ್ ರೈಟರ್" ಎಂದು ಕರೆಯಿತು.
ಕಷ್ಟದ ಹಾದಿ ಸವೆಸಿದವಳು, ಎರಡೆರಡು ಬಾರಿ ಸಾವಿನ ಕದ ತಟ್ಟಿದ ಏಕಾಂಗಿ ಮಹಿಳೆಯೊಬ್ಬಳು ಎದ್ದು ನಿಂತದ್ದು ಅದ್ಭುತ. ಜೆ.ಕೆ.ರೋವ್ಲಿಂಗ್ ರ ಮರೆಯಲಾರದ ಜೀವನಗಾಥೆಯಿದು. ಸೋತಾಗ ಕುಗ್ಗಿ ಹೋಗುವ ಮಂದಿಗೆ, ಗೆಲ್ಲುವ ಛಲವಿಲ್ಲದ ಜನರಿಗೆ ರೋವ್ಲಿಂಗ್ ಎಂದೆಂದಿಗೂ ಮಾದರಿ. ಗೆದ್ದಾಗ ಆಕೆ ಬೀಗಲಿಲ್ಲ. ತಾನು ಸವೆಸಿದ ಹಾದಿಯನ್ನು ಮರೆಯಲಿಲ್ಲ. ತನ್ನ ಸಂಪಾದನೆಯನ್ನು ತನ್ನಂತಹ ಅಸಹಾಯಕರ ಸೇವೆಗಾಗಿ ಯಥೇಚ್ಛವಾಗಿ ದಾನಗೈದು, ಕೋಟಿ ಕೋಟಿ ಸಂಪಾದಿಸಿ, ತಾನೂ ಮತ್ತು ತನ್ನ ಮಕ್ಕಳಿಗೆ ಮಾತ್ರ ಸೀಮಿತಗೊಂಡ ಅದೆಷ್ಟೋ ಮಂದಿಯ ಮಧ್ಯೆ ಮಿನುಗುತಾರೆಯಾಗಿ ಬದುಕುತ್ತಿದ್ದಾಳೆ.
-ಯಾಕೂಬ್ ಎಸ್ ಕೊಯ್ಯೂರು, ಬೆಳ್ತಂಗಡಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ