ಏಕಾಗ್ರತೆಯಿಂದ ಗುರಿ ಸಾಧನೆ ಸಾಧ್ಯ
ಹೊರಗಿನ ಸಾವಿರ ಶತ್ರುಗಳನ್ನು ಜಯಿಸಿ ನಾಶಮಾಡುವುದಕ್ಕಿಂತ ಒಳಗಿರುವ ಒಂದೇ ಶತ್ರುವಾಗಿದ್ದ ಮನಸ್ಸನ್ನು ಜಯಿಸಿದವನೇ ವಿಜಯಿ” –ಗೌತಮ ಬುದ್ಧ.
ನಾವು ಏನನ್ನಾದರೂ ಮಾಡಬಹುದು. ಸಮಸ್ತ ಜಗತ್ತನ್ನೇ ಗೆಲ್ಲಬಹುದು. ಆದರೆ ನಮ್ಮ ಮನಸ್ಸನ್ನು ಹಿಡಿದು ನಿಲ್ಲಿಸುವುದು ಬಲು ಕಷ್ಟ. ”ಕ್ಷಣ ಚಿತ್ತ ಕ್ಷಣ ಪಿತ್ತ” ಎಂಬಂತಿರುವ ಮನಸ್ಸು ಈಗಿದ್ದಂತೆ ಇನ್ನೊಂದು ಕ್ಷಣವಿರುವುದಿಲ್ಲ. ಅದಕ್ಕಾಗಿಯೇ ಮನಸ್ಸನ್ನು ಮರ್ಕಟಗಳಿಗೆ, ಲಗಾಮು ಇಲ್ಲದ ಕುದುರೆಗಳಿಗೆ ಹಾಗೂ ಪಾದರಸಕ್ಕೆ ಹೋಲಿಸಲಾಗುತ್ತದೆ. ಇಂತಹ ಮನಸ್ಸನ್ನು ಮತ್ತು ಇಂದ್ರಿಯ ಗಳನ್ನು ಹತೋಟಿಯಲ್ಲಿಟ್ಟು ಕೊಳ್ಳುವುದೇ ಏಕಾಗ್ರತೆ (Concentration). ಮನದಲ್ಲಿ ವಿಕಾರ ಮತ್ತು ಅನಗತ್ಯ ಚಾಂಚಲ್ಯ ಉಂಟಾಗದಿರುವುದೇ ಏಕಾಗ್ರತೆ. ಒಂದೇ ವಿಷಯದಲ್ಲಿ ಗಮನವನ್ನು ಕೇಂದ್ರೀಕರಿಸುವುದು. ಇದುವೇ ಮನಸ್ಸಿನ ದೃಢತೆ. ಏಕಾಗ್ರತೆಯನ್ನು ಸಾಧಿಸುವುದು ಅಷ್ಟು ಸುಲಭವಲ್ಲ. ಅದು ಒಂದು ಬಗೆಯ ಕಠಿಣ ತಪಸ್ಸಿದ್ದಂತೆ.
ವಿದ್ಯಾರ್ಥಿಯಾದವನು ವಿದ್ಯಾರ್ಜನೆಯನ್ನೂ ಒಂದು ತಪಸ್ಸು ಎಂದು ಭಾವಿಸಬೇಕು. ಓದುವ ಸಮಯದಲ್ಲಿ ಮನಸ್ಸನ್ನು ನಾನಾ ಕಡೆ ಹರಿಯ ಬಿಟ್ಟರೆ ವಿಷಯ ಗ್ರಹಿಕೆ ಆಗದು. ಕಲಿಕೆಯಲ್ಲಿ ಆಸಕ್ತಿ, ಗಮನ ಕಡಿಮೆಯಾಗುತ್ತಿದೆ ಎಂದರೆ ಏಕಾಗ್ರತೆ ಇಲ್ಲ ಎಂದರ್ಥ. ಇದು ಸಾಮಾನ್ಯವಾಗಿ ಹೆಚ್ಚಿನ ವಿದ್ಯಾರ್ಥಿಗಳ ಸಮಸ್ಯೆ. ನಮ್ಮ ಶಿಕ್ಷಕರು ಪಾಠ ಮಾಡುವಾಗ ನಾವು ಎಲ್ಲೆಲ್ಲೋ ನೋಡುತ್ತಿದ್ದರೆ “ಎಲ್ಲೆಲ್ಲೋ ಗಮನ ಕೊಡಬೇಡಿ. ಕೇಳಿದ್ದು ಮನಸ್ಸಿಗೆ ನಾಟದು. ನಿಮ್ಮ ಕಣ್ಣು, ಮನಸ್ಸು ಪೂರ್ತಿ ಪಾಠದ ಕಡೆಗೆ ಇರಲಿ. ಹೇಗೆಂದರೆ ಕುದುರೆಯ ಕಣ್ಣಿಗೆ ಪಟ್ಟಿ ಕಟ್ಟಿದರೆ ಹೇಗಿರುತ್ತದೋ ಹಾಗೆಯೇ ಇತ್ತ ಕಡೆ ಲಕ್ಷ್ಯವಿರಬೇಕು” ಎನ್ನುತ್ತಿದ್ದರು. ಒಂದು ವಿಷಯದಲ್ಲಿ ನಾವು ಶ್ರದ್ಧೆಯಿಂದ ತೊಡಗಿ ಕೊಳ್ಳುತೇವೋ ಅಲ್ಲಿಯವರೆಗೆ ಬೇರೊಂದು ಯೋಚನೆ ಬರಲಾರದು, ಬರಬಾರದು ಕೂಡಾ. ಬೇರೊಂದು ವಿಷಯದ ಕಡೆಗೆ ಮನಸ್ಸು ವಾಲಿತೆಂದರೆ ಮಾಡುವ ಕೆಲಸದಲ್ಲಿ ಶ್ರದ್ಧೆ ಕಡಿಮೆಯಾಯಿತೆಂದೇ ಅರ್ಥ. ಕಲಿಕೆಯಿಂದ ವಿಚಲಿತರಾದಂತೆ ಇತರ ವಿಷಯಗಳು ಗಮನಕ್ಕೆ ಬರುತ್ತವೆ. ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ನಿರ್ದಿಷ್ಟ ಗುರಿಯಿದ್ದು ಅದನ್ನು ಸಾಧಿಸಲು ದೃಢತೆ ಬೇಕು. ಕಣ್ಣಿಗೆ ಪಟ್ಟಿ ಕಟ್ಟಿಸಿಕೊಂಡ ಕುದುರೆಯ ಲಕ್ಷ್ಯವು ಮುಂದೆ ಸಾಗಲಿರುವ ದಾರಿಯಲ್ಲೇ ಇರುವಂತೆ ನಮ್ಮ ಗಮನ ಗುರಿಯ ಕಡೆಗಿರಬೇಕು. ಮಹಾಭಾರತದಲ್ಲಿ ಬರುವ ಬಿಲ್ವಿದ್ಯೆಯ ಪರೀಕ್ಷೆಯಲ್ಲಿ ಇತರರ ಕಣ್ಣಿಗೆ ಮರ, ಗೆಲ್ಲು, ಎಲೆ, ಕಾಯಿ, ಹೂವು ಕಂಡರೆ ಅರ್ಜುನನಿಗೆ ಕಂಡದ್ದು ತಾನು ಗುರಿಯಿಟ್ಟ ಹಕ್ಕಿಯ ಕಣ್ಣು ಮಾತ್ರ. ಇದಕ್ಕೆ ಕಾರಣ ಏಕಾಗ್ರತೆ. ಹಿಡಿದ ಗುರಿಯ ಸಾಧಿಸುವಛಲ, ಆತ್ಮವಿಶ್ವಾಸ. ವಿದ್ಯಾರ್ಥಿಗಳಿಗೆ ಬೇಕಾದುದು ಇಂತಹ ಏಕಾಗ್ರತೆ.
ಚಂಚಲ ಮನಸ್ಸನ್ನು ನಿಗ್ರಹಿಸಿ ಏಕಾಗ್ರತೆ ಸಾಧಿಸುವುದು ಹೇಗೆ?: ಬದುಕಿನ ಗುರಿಸಾಧನೆಗೆ ಬೇಕಾದ ಏಕಾಗ್ರತೆಯನ್ನು ಬೇರೆಯವರಿಂದ ಕೊಡಿಸಲು ಸಾಧ್ಯವಿಲ್ಲ. ನಾವೇ ನಮ್ಮೊಳಗೆ ಅದನ್ನು ಬೆಳೆಸಬೇಕು. ಅದಕ್ಕಾಗಿ ಮನಸ್ಸನ್ನು ಸ್ಥಿರಗೊಳಿಸ ಬೇಕು. ಮನಸ್ಸು ಒಂದು ಸ್ಥಿರವಾಗಿದ್ದರೆ ಹಾವಿನ ವಿಷವೂ ನಮ್ಮನ್ನು ಏನೂ ಮಾಡದು ಅನ್ನುತ್ತಾರೆ. ಇಂದಿನ ಹೆತ್ತವರ ಗೋಳು “ಮಕ್ಕಳು ಸರಿಯಾಗಿ ಓದುವುದಿಲ್ಲ. ಹೆಚ್ಚು ಅಂಕಗಳು ಬರುವುದಿಲ್ಲ”. ಆದರೆ ಮಕ್ಕಳಿಗೆ ಎಷ್ಟು ಓದಿದರೂ ಪರೀಕ್ಷೆಗೆ ಬರೆಯುವಾಗ ನೆನಪಿರುವುದಿಲ್ಲ ಎಂಬ ಚಿಂತೆ. ಮನುಷ್ಯರ ವೈಯಕ್ತಿಕ ಭಿನ್ನತೆಗೆ ಕಾರಣ ಅವರ ಏಕಾಗ್ರತಾ ಶಕ್ತಿ ಎಂಬುದು ಸ್ವಾಮಿ ವಿವೇಕಾನಂದರ ಅಭಿಮತ. ಬಾಲ್ಯ ಮತ್ತು ಪ್ರೌಢ ಹಂತದಲ್ಲಿ ದೊರಕುವ ಶಿಕ್ಷಣ ಬಹಳ ಮಹತ್ವದ್ದು. ಮೂರರ ಬುದ್ಧಿ ನೂರರವರೆಗೆ ಎಂಬ ಮಾತಿದೆ. ಆದ್ದರಿಂದ ಮಕ್ಕಳ ಬದುಕಿಗೆ ನೀತಿ, ಜ್ಞಾನಕೇಂದ್ರಿತ ಶಿಕ್ಷಣ ಕೊಡಬೇಕು. ಜೊತೆಗೆ ಸದೃಢವಾದ, ಆರೋಗ್ಯಕರವಾದ ಶರೀರ ಮತ್ತು ಅದನ್ನು ಹೊಂದಲು ಪೌಷ್ಟಿಕ ಆಹಾರವೂ ಅಗತ್ಯ. ಹೆತ್ತವರೂ ಹೆಚ್ಚೆಚ್ಚು ಅಂಕ ಪಡೆಯಲು ಅತಿಯಾಗಿ ಓದಲು ಮಕ್ಕಳಿಗೆ ಒತ್ತಡ ಹೇರಬಾರದು. ಅತಿಯಾದ ಒತ್ತಡದಲ್ಲಿ 7-8 ಗಂಟೆ ಒಲ್ಲದ ಮನಸ್ಸಿನಲ್ಲಿ ಓದಲು ಆರಂಭಿಸಿದರೆ ಏಕಾಗ್ರತೆ ಬರಲು ಸಾಧ್ಯವಿಲ್ಲ. ಸಾಧ್ಯವಾದಷ್ಟೂ ನಿಶ್ಯಬ್ಧವಾಗಿರುವ ಪ್ರಾತಃಕಾಲ ಓದಲು ಸೂಕ್ತವಾಗಿದೆ. ರಾತ್ರಿಯ ನಿದ್ದೆಯಿಂದ ಎದ್ದ ಪ್ರಶಾಂತ ಮನ ಬಹು ಸುಲಭವಾಗಿ ಆ ವೇಳೆಯಲ್ಲಿ ಹಿಡಿತಕ್ಕೆ ಬರುತ್ತದೆ. ನಿತ್ಯವೂ ಸರಳವಾದ ಧ್ಯಾನ, ಯೋಗ, ಪ್ರಾಣಾಯಾಮ, ಪ್ರಾರ್ಥನೆಯೊಂದಿಗೆ ಮನಸ್ಸು, ದೇಹ ಸಿದ್ಧಗೊಳಿಸಿ ಓದು, ಬರವಣಿಗೆ ಮಾತ್ರವಲ್ಲ ಯಾವುದೇ ಕೆಲಸವನ್ನೂ ಮಾಡಲು ಏಕಾಗ್ರತೆ ಬರುತ್ತದೆ. ಒಂದು ಸಮಯದಲ್ಲಿ ಒಂದೇ ಕೆಲಸ ಮಾಡಬೇಕೇ ಹೊರತು ಅದನ್ನು ಅರ್ಧದಲ್ಲಿ ಬಿಟ್ಟು ಬೇರೆ ಕೆಲಸಕ್ಕೆ ಹೋಗಬಾರದು. ಪಾಠ ಓದಲು ಪುಸ್ತಕ ಬಿಡಿಸುತ್ತಾರೆ. ಲೆಕ್ಕ ಮಾಡಬೇಕು ಎಂಬ ನೆನಪಾಗಿ ಲೆಕ್ಕ ಮಾಡುತ್ತಿರುವಾಗ ಗೆಳೆಯರು ಕರೆದರು ಎಂದು ಎಲ್ಲವನ್ನೂ ಅರ್ಧಕ್ಕೆ ನಿಲ್ಲಿಸಿ ಆಟಕ್ಕೆ ಹೋಗುವುದು ಚಂಚಲ ಮನಸ್ಸಿನ ಮಕ್ಕಳ ಪಾಡು. ರಣರಂಗದಲ್ಲಿ ವೀರಯೋಧನು ಹೇಗೆ ವೈರಿಬಣದ ಒಬ್ಬೊಬ್ಬರನ್ನೇ ಸದೆ ಬಡಿದು ಮುಂದೆ ಸಾಗುವಂತೆ ವಿದಾರ್ಥಿಗಳಲ್ಲಿಯೂ ಹಿಡಿದ ಒಂದೊಂದೇ ಕೆಲಸವನ್ನು ಬಿಡದೆ ಚೆನ್ನಾಗಿ ಮಾಡಿ ಮುಗಿಸಿಯೇ ಇನ್ನೊಂದು ಕೆಲಸದಲ್ಲಿ ತೊಡಗುವ ಛಲ ‐-ಬಲ ಬೇಕು. ಆಟದ ಸಮಯದಲ್ಲಿ ಆಟವನ್ನೂ ಆಡಬೇಕು. ಅದು ಮನಸ್ಸನ್ನು ಪ್ರಫುಲ್ಲಗೊಳಿಸಿ ಹತೋಟಿಯಲ್ಲಿಡಲು ಸಾಧ್ಯ.
ಇಂದಿನ ಆಧುನಿಕ ತಂತ್ರಜ್ಞಾನದ ದಿನಗಳಲ್ಲಿ ವಿದ್ಯಾರ್ಥಿಗಳು ಸಾಮಾಜಿಕ ಮಾಧ್ಯಮಗಳಾದ ಟಿವಿ, ಕಂಪ್ಯೂಟರ್, ಮೊಬೈಲ್ ಗಳ ದಾಸರಾಗಿ, ಯೂಟ್ಯೂಬ್, ಫೇಸ್ಬುಕ್, ಮೊಬೈಲ್ ಗೇಮ್ಸ್ ಗಳು, ದುಷ್ಚಟಗಳಿಗೆ ತುತ್ತಾಗಿ ಶಿಕ್ಷಣ ಸಂಪೂರ್ಣ ಮೂಲೆ ಗುಂಪಾಗುವುದರ ಜೊತೆಗೆ, ನಕಾರಾತ್ಮಕ ಚಿಂತನೆ, ಮಾನಸಿಕ, ದೈಹಿಕ ಅನಾರೋಗ್ಯ, ಆತ್ಮಹತ್ಯೆಗಳು ಸಾಮಾನ್ಯವಾಗಿ ಬಿಟ್ಟಿವೆ. ಪುಸ್ತಕ ಗಳನ್ನು ಓದಲು ಆಸಕ್ತಿ ತೀರಾ ಕಡಿಮೆ. ಮುಂದಿನ ಹಂತಕ್ಕೆ ಒಯ್ಯುವ ಬುತ್ತಿಯಂಥ ಉತ್ತಮ ಹವ್ಯಾಸಗಳೂ, ಸೃಜನಶೀಲತೆಯೂ ಕಡಿಮೆ. ಮಕ್ಕಳಲ್ಲಿ ಮಗುವಿನ ಮನಸ್ಸು ಮಾಯವಾಗಿ, ಬಾಲ್ಯ ಸಹಜ ಆಟೋಟ, ಚಟುವಟಿಕೆಗಳು, ನೈತಿಕ ಮೌಲ್ಯಗಳ ಕೊರತೆ ಎದ್ದು ಕಾಣಿಸುವುದು. ಕೇವಲ ಮಾಹಿತಿಗಳ ದೊಡ್ಡ ಭಂಡಾರವಾಗಿರುವ ಇಂದಿನ ಶಿಕ್ಷಣಕ್ಕೆ ಸಾಮಾಜಿಕ ಜಾಲತಾಣಗಳ ಬಳಕೆ ಅನಿವಾರ್ಯವಾದರೂ, ಹೆತ್ತವರೂ, ಶಿಕ್ಷಕರೂ ಈ ಬಗ್ಗೆ ಗಮನ ಹರಿಸಿ ನಿಗದಿತ ಅವಧಿಯಲ್ಲಿ ಹಿರಿಯರ ಉಪಸ್ಥಿತಿಯಲ್ಲಿ ಇವುಗಳ ಬಳಕೆ ಮಾಡುವಂತೆ ನೋಡಿಕೊಂಡು ಅವರಲ್ಲಿ ನೈತಿಕ ಮೌಲ್ಯ, ಉತ್ತಮ ಸಂಸ್ಕಾರ ಗಳನ್ನು ಹಾಗೂ ಜೀವನಪಾಠಗಳನ್ನು ಬೆಳೆಸುವತ್ತ ಪ್ರಯತ್ನಿಸಬೇಕು. ಜೊತೆಗೆ ಶಾಲೆಯ ಪಠ್ಯಕ್ರಮ ದಲ್ಲಿ ನೈತಿಕ ಮೌಲ್ಯಗಳ ಪಾಠಗಳನ್ನೂ ಅಳವಡಿಸಿಕೊಳ್ಳುವ ಅನಿವಾರ್ಯತೆ ಇದೆ. ಉತ್ತಮ ಜ್ಞಾನ ಹಾಗೂ ಸಂಸ್ಕಾರವನ್ನು ನೀಡುವಲ್ಲಿ ಹೆತ್ತವರು, ಸಮಾಜ, ಶಿಕ್ಷಣ ಸಂಸ್ಥೆ ಹಾಗೂ ಶಿಕ್ಷಕರು ಎಲ್ಲರೂ ಜವಾಬ್ದಾರರು. ವಿದ್ಯಾಕಾಂಕ್ಷಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ, ಬುದ್ಧಿ ಮತ್ತು ಮನಸ್ಸು ವಿಭಿನ್ನ ಧ್ರುವ ಗಳಾಗದೆ, ಸ್ಥಿರವಾಗಿಟ್ಟುಕೊಂಡು, ಅನನ್ಯ ಏಕಾಗ್ರತೆಯಿಂದ ಪ್ರಾಮಾಣಿಕವಾಗಿ ಪ್ರಯತ್ನಿಸಿದರೆ ಮಾತ್ರ ಯಶಸ್ಸನ್ನು ಸಾಧಿಸಬಹುದು.
-ಎ. ಪೂರ್ಣಿಮಾ ಕಾಮತ್, ಸುರತ್ಕಲ್
ಚಿತ್ರ ಕೃಪೆ: ಇಂಟರ್ನೆಟ್ ತಾಣ