ಏಕಾದಶಿ ದೇವಿ (ಮುರಾಸುರ ವಧೆ)

ಏಕಾದಶಿ ದೇವಿ (ಮುರಾಸುರ ವಧೆ)

ಕವನ

ಚಂದ್ರಾವತಿ ಪುರದರಸ ನಾಡಿಜಂಘ ಬಲಶಾಲಿ

ಪಟ್ಟದರಾಣಿ ಮೇಘಮುಖಿ ಸುಶೀಲೆ ಸುಕೋಮಲೆ

ಪರಶಿವನ ಆರಾಧನೆ ವ್ರತ ಪೂಜೆ ಧ್ಯಾನ

ವರಪ್ರಸಾದ ಮುರನೆಂಬ ಸುಕುಮಾರನ ಜನನ

 

ಅಸುರ ಗುರು ಶುಕ್ರಚಾರ್ಯರ ಪರಮಶಿಷ್ಯ

ಅರುವತ್ತನಾಲ್ಕು ವಿದ್ಯೆಯಲಿ ಪರಿಣತ

ಸಕಲಕಲಾವಲ್ಲಭ ಯುವರಾಜ

ಪಟ್ಟಾಭಿಷಕ್ತ ರಾಜ್ಯವಿಸ್ತಾರವೇ ಕನಸಿನ ಸೂತ್ರ

 

ತಂದೆಯ ಮರಣದ ಸೇಡಿನ ಕಿಡಿ

ತಾಯಿಯ ಅಲ್ಪಬುದ್ಧಿಯ ಮಾತಿನ ಗುಡಿ

ಶಿವಶಂಕರನ ವರದ ಬಲದ ತಾಕತ್ತು

ಸುರಪನ ಮೇಲೆ ಕಾಳಗ ಸಾರಿತ್ತು

 

ಪುರಂದರನ ಸೋಲಿಸಿ ಸ್ವರ್ಗ ವಶವಾಗಲು

ದೇವತೆಗಳ ಪೀಡಿಸಿ ಕಾನನಕ್ಕಟ್ಟಲು

ಮೆರೆದನು ಸುರ ಸಿಂಹಾಸನದಿ ಅಹಮಿನಲಿ

ಸೊಕ್ಕು ಮಿತಿ ಮೀರಿ ಏರಲು ದರ್ಪದಲಿ

 

ಸುರಪನು ಶ್ರೀಹರಿಗೆ ಶರಣಾಗಲು

ಅಭಯವ ನೀಡುತ ಮರೆ ಮಾಚಲು

ಯುದ್ಧದಲಿ ಸೋತಂತೆ ನಟಿಸಲು

ಮೆಲ್ಲನೆ ತುಹಿನಾದ್ರಿಯ ತಪ್ಪಲಿಗೆ ಬರಲು

 

ಆದಿಮಾಯೆ ದೇವಿಯ ಸ್ತುತಿಸಲು

ಹರಿಯ ಮೊಗದಿಂದ ದಿವ್ಯತೇಜಸ್ಸು ಹೊಮ್ಮಲು

ಅಷ್ಟಭುಜೆ ತ್ರಿಶೂಲಪಾಣಿ  ಜಡಜಾಕ್ಷಿ ನಿಲ್ಲಲು

ಮುರನಿಗೆದುರಾಗಿ ಕಾಳಗದಿ ನಿಂದಳು

 

ದೇವಿ ಸೌಭಾಗ್ಯವತಿಯ ಖಳನು ಬಯಸಲು

ಖೂಳನ ಮೆಟ್ಟಿ ತ್ರಿಶೂಲದಿ ಕೊಲ್ಲಲು

ಪ್ರಥಮ ಏಕಾದಶಿಯಂದು ಪ್ರತ್ಯಕ್ಷವಾಗಲು

ಮುಂದೆ ಭಕುತರ ಹರಸುವ ವರ ಕರುಣಿಸಲು

 

ಏಕಾದಶಿ ದೇವಿಯೆಂದು ಪ್ರಸಿದ್ಧಳಾಗಲು

ಚಂದ್ರಾವತಿ ಪುರದ ಮನುಜರ ರಕ್ಷಿಸಿದಳು

ದೇವೇಂದ್ರಗೆ ಇಂದ್ರ ಪದವಿಯ ಮರಳಿ ಒಪ್ಪಿಸಿದಳು

ಹರಿ ಸಂಕೀರ್ತನೆ ಧ್ಯಾನ ಭಜನೆ ಪೂಜೆಯಲಿ ಧನ್ಯವಾಗಲು

 

-ರತ್ನಾ ಕೆ.ಭಟ್,ತಲಂಜೇರಿ

(ಏಕಾದಶಿ ದೇವಿ ಮಹಾತ್ಮೆ ಕಥೆ ಅಥವಾ ಮುರಾಸುರ ವಧೆ)

ಚಿತ್ರ್