ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧ ; ಮುಂದೇನು?

ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧ ; ಮುಂದೇನು?

ಜುಲೈ ೧ ರಿಂದ ದೇಶದಾದ್ಯಂತ ಏಕ ಬಳಕೆಯ (Single Used Plastic) ಪ್ಲಾಸ್ಟಿಕ್ ವಸ್ತುಗಳ ನಿಷೇಧ ಜಾರಿಯಾಗಲಿದೆ. ನಮ್ಮ ದೈನಂದಿನ ಜೀವನದಲ್ಲಿ ಪ್ಲಾಸ್ಟಿಕ್ ಎಂಬುವುದು ಇಂದು ಅವಿಭಾಜ್ಯ ಅಂಗವೇ ಆಗಿ ಹೋಗಿದೆ. ಪ್ಲಾಸ್ಟಿಕ್ ಒಂದು ಪೆಡಂಭೂತದಂತೆ ಕಾಡಲು ಶುರುವಾದಾಗ ಪ್ಲಾಸ್ಟಿಕ್ ನಿಷೇಧ ಎಂಬ ಗುಮ್ಮ ಕಾಣಿಸತೊಡಗಿದೆ. ಈ ಪ್ಲಾಸ್ಟಿಕ್ ನಿಷೇಧ ಮೊದಲೇ ಇದ್ದದ್ದೇ. ಭಾರತದ ಹಲವಾರು ರಾಜ್ಯಗಳಲ್ಲಿ ಈಗಾಗಲೇ ಪ್ಲಾಸ್ಟಿಕ್ ನಿಷೇಧ ಜಾರಿಯಲ್ಲಿದೆ. ಸಮಸ್ಯೆ ಏನೆಂದರೆ ಒಂದೆಡೆ ೪೦ ಮೈಕ್ರಾನ್ ಗಿಂತ ಹೆಚ್ಚಿನ ಪ್ಲಾಸ್ಟಿಕ್ ಬಳಸ ಬಹುದಾದರೆ, ಮತ್ತೊಂದೆಡೆ ೫೦ ಮೈಕ್ರಾನ್ ಗಿಂತ ಹೆಚ್ಚಿನ ಪ್ಲಾಸ್ಟಿಕ್ ಬಳಕೆ ಮಾಡಬಹುದಾಗಿದೆ. ಈಗ ೧೦೦ ಮೈಕ್ರಾನ್ ಗಳಿಗಿಂತ ಅಧಿಕ ದಪ್ಪಗಿರುವ ಪ್ಲಾಸ್ಟಿಕ್ ವಸ್ತುಗಳನ್ನು ಮಾತ್ರ ಬಳಸ ಬಹುದು ಎಂದು ಅಪ್ಪಣೆಯಾಗಿದೆ. ಆದರೆ ದೊಡ್ಡ ಸಮಸ್ಯೆ ಏನೆಂದರೆ ನಾವು ಇನ್ನೂ ಪ್ಲಾಸ್ಟಿಕ್ ವಸ್ತುಗಳಿಗೆ ಸರಿಯಾದ ಪರ್ಯಾಯವನ್ನೇ ಕಂಡು ಹಿಡಿದಿಲ್ಲ.

ಪ್ಲಾಸ್ಟಿಕ್ ಭೂಮಿಯ ಮಣ್ಣಿನಲ್ಲಿ ಕರಗಲು ಶತಮಾನಗಳೇ ಬೇಕಾಗಬಹುದು ಎಂದು ವಿಜ್ಞಾನ ಹೇಳುತ್ತದೆ. ಆದರೆ ಮಣ್ಣಿನಲ್ಲಿ ಕರಗುವ ಪ್ಲಾಸ್ಟಿಕ್ ತಯಾರಿಕೆಗೆ ನಮ್ಮ ಸರಕಾರಗಳು ಸರಿಯಾದ ಉತ್ತೇಜನವನ್ನೇ ನೀಡಲಿಲ್ಲ. ಕೋವಿಡ್ ಸಮಯದಲ್ಲಂತೂ ಪ್ಲಾಸ್ಟಿಕ್ ಬಳಕೆ, ಅದರಲ್ಲೂ ಕೈಚೀಲ ಅಥವಾ ಕ್ಯಾರಿಬ್ಯಾಗ್ ಗಳು ಯಾವುದೇ ನಿಯಂತ್ರಣವಿಲ್ಲದೇ ಮಾರುಕಟ್ಟೆಗೆ ಬಂದವು. ಅವುಗಳು ಎಷ್ಟು ತೆಳುವಾಗಿದ್ದವೆಂದರೆ ಒಮ್ಮೆ ಬಳಸಲೂ ಕಷ್ಟವಾಗುವಂತಿತ್ತು. ಆದರೆ ಕರಗಲು ಮಾತ್ರ ವರ್ಷಗಳೇ ಹಿಡಿಯಬಹುದು. ಇದೇ ಸಮಸ್ಯೆ.

ಪರಿಸರ ಮಂತ್ರಾಲಯದ ಅಡಿಯಲ್ಲಿ ಬರುವ CPCB (Central Pollution Control Board) ಅಂದರೆ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯವರು ಹೊರಡಿಸಿರುವ ಸೂಚನೆಯಂತೆ ಮುಂದಿನ ಜುಲೈ ೧ರಿಂದ ಏಕ ಬಳಕೆಯ ಪ್ಲಾಸ್ಟಿಕ್ ಗಳು ನಿಷೇಧದ ವ್ಯಾಪ್ತಿಗೆ ಬರಲಿವೆ. ಏಕ ಬಳಕೆಯ ಪ್ಲಾಸ್ಟಿಕ್ ಬಳಕೆಯಿಂದಾಗಿ ಭೂಮಿ ಕಲುಷಿತವಾಗುತ್ತಿದೆ. ಪರಿಸರ ಹಾಳಾಗುತ್ತಿದೆ. ಎಲ್ಲೆಡೆ ಪ್ಲಾಸ್ಟಿಕ್ ತ್ಯಾಜ್ಯಗಳು ರಾರಾಜಿಸುತ್ತಿರುವುದನ್ನು ಗಮನಿಸಿ ಈ ನಿರ್ಧಾರಕ್ಕೆ ಕೇಂದ್ರ ಸರಕಾರವು ಬಂದಿದೆ. ಪ್ರತೀ ವರ್ಷ ಭಾರತದ ದೇಶದಲ್ಲಿ ೩.೫ ಮಿಲಿಯನ್ ಟನ್ ಪ್ಲಾಸ್ಟಿಕ್ ಕಸ ಉತ್ಪಾದನೆಯಾಗುತ್ತಿದೆ. ೨೦೨೧ರ ಒಂದು ವರದಿಯ ಪ್ರಕಾರ ಕಳೆದ ಐದು ವರ್ಷಗಳಲ್ಲಿ ನಮ್ಮಲ್ಲಿ ಉತ್ಪಾದನೆಯಾಗುವ ಪ್ಲಾಸ್ಟಿಕ್ ಕಸದ ಪ್ರಮಾಣ ದುಪ್ಪಟ್ಟಾಗಿದೆಯಂತೆ. ಪ್ರತೀ ವರ್ಷ ಶೇ.೨೧.೮ ಅನುಪಾತದಲ್ಲಿ ಕಸದ ಪ್ರಮಾಣ ಹೆಚ್ಚುತ್ತಿದೆ. 

ಈ ಸಮಸ್ಯೆ ಕೇವಲ ಭಾರತ ದೇಶದದ್ದು ಮಾತ್ರವಲ್ಲ, ಇಡೀ ವಿಶ್ವದಲ್ಲಿ ಈ ಸಮಸ್ಯೆಯಿದೆ. ಅಂತರಾಷ್ಟ್ರೀಯ ನೈಸರ್ಗಿಕ ಸಂರಕ್ಷಣಾ ಒಕ್ಕೂಟದ ವರದಿಗಳ ಪ್ರಕಾರ ವಿಶ್ವದಾದ್ಯಂತ ೩೦೦ ಮಿಲಿಯನ್ ಟನ್ ಪ್ಲಾಸ್ಟಿಕ್ ಕಸ ಉತ್ಪಾದನೆಯಾಗುತ್ತಿದೆ. ಅದರಲ್ಲಿ ೧೪ ಮಿಲಿಯನ್ ಟನ್ ಪ್ಲಾಸ್ಟಿಕ್ ತ್ಯಾಜ್ಯ ಸಾಗರಗಳಿಗೆ ಸೇರಿ ಅಲ್ಲಿಯ ಜಲಚರಗಳಿಗೆ ಕಂಟಕವಾಗುತ್ತಿದೆ. ಇವುಗಳನ್ನೆಲ್ಲಾ ಗಮನಿಸಿದ ಭಾರತ ಸರಕಾರ ಈಗ ಏಕ ಬಳಕೆಯ ಪ್ಲಾಸ್ಟಿಕ್ ಅನ್ನು ನಿಷೇಧ ಮಾಡುವ ಕ್ರಮಕೈಗೊಳ್ಳಲು ಅನುವಾಗುತ್ತಿದೆ. 

ಇನ್ನು ಜುಲೈ ಒಂದರಿಂದ ಏಕಬಳಕೆಯ ಪ್ಲಾಸ್ಟಿಕ್ ಸಾಮಾಗ್ರಿಗಳ ಉತ್ಪಾದನೆ, ಸಾಗಾಟ, ಮಾರಾಟ, ಉಪಯೋಗ ಎಲ್ಲವನ್ನೂ ನಿಷೇಧ ಮಾಡಲಾಗಿದೆ. ನಿಷೇಧಕ್ಕೆ ಒಳಗಾಗಿರುವ ವಸ್ತುಗಳ ಪಟ್ಟಿ ತುಂಬಾನೇ ದೊಡ್ಡದಿದೆ. ಏಕೆಂದರೆ ನಾವು ಪ್ಲಾಸ್ಟಿಕ್ ಸಾಮಾಗ್ರಿಗಳನ್ನು ಪ್ರತಿಯೊಂದು ವಿಷಯಕ್ಕೂ ಬಳಸುತ್ತಾ ಬಂದಿದ್ದೇವೆ. ಬಹುತೇಕ ಉತ್ಪಾದಕರೂ ಇತರೆ ವಸ್ತುಗಳನ್ನು ಹೊರಗಿಟ್ಟು ಪ್ಲಾಸ್ಟಿಕ್ ವಸ್ತುಗಳನ್ನೇ ಉಪಯೋಗಿಸುತ್ತಿದ್ದಾರೆ. ಏಕೆಂದರೆ ಪ್ಲಾಸ್ಟಿಕ್ ಎಲ್ಲಾ ಸಾಮಾಗ್ರಿಗಳಿಗಿಂತ ಅಗ್ಗ. ಈಗ ನಾವು ಯಾವೆಲ್ಲಾ ವಸ್ತುಗಳು ನಿಷೇಧದ ವ್ಯಾಪ್ತಿಗೆ ಬರುತ್ತದೆ ಎಂಬುವುದನ್ನು ಗಮನಿಸೋಣ.

೧ ಪ್ಲಾಸ್ಟಿಕ್ ಕಡ್ಡಿಗಳು(Plastic Sticks): ಇವುಗಳನ್ನು ಹೆಚ್ಚಾಗಿ ಕಿವಿಯನ್ನು ಸ್ವಚ್ಛಗೊಳಿಸುವ ಇಯರ್ ಬಡ್, ಬಲೂನ್ ಕಟ್ಟಲು, ಐಸ್ ಕ್ಯಾಂಡಿ ಮತ್ತು ಐಸ್ ಕ್ರೀಮ್ ಗಳಲ್ಲಿ ಬಳಸಲಾಗುತ್ತಿದೆ.

೨. ದಿನಬಳಕೆಯ ವಸ್ತುಗಳು (Cutlery): ಇವುಗಳ ಬಳಕೆಯನ್ನು ಹೆಚ್ಚಾಗಿ ಬೀದಿ ಬದಿಯ ಆಹಾರ ಮಾರುವ ವ್ಯಾಪಾರಸ್ಥರು (ಫಾಸ್ಟ್ ಫುಡ್) ಮಾಡುತ್ತಾರೆ. ಉದಾಹರಣೆಗೆ ಪ್ಲಾಸ್ಟಿಕ್ ಲೋಟಗಳು, ಚಮಚ ಹಾಗೂ ಮುಳ್ಳು ಚಮಚ (Forks), ಪ್ಲಾಸ್ಟಿಕ್ ಚೂರಿಗಳು, ಸ್ಟ್ರಾಗಳು ಇತ್ಯಾದಿ.

೩. ಪ್ಯಾಕಿಂಗ್ ವಸ್ತುಗಳು: ಇವುಗಳ ಬಳಕೆಯನ್ನು ಹೆಚ್ಚಾಗಿ ಸಿಹಿತಿಂಡಿ ಮಾರಾಟಗಾರರು ಹಾಗೂ ಹಣ್ಣುಗಳನ್ನು ಮಾರಾಟ ಮಾಡುವವರು ಮಾಡುತ್ತಾರೆ. ಸಿಹಿತಿಂಡಿಯನ್ನು ಕಟ್ಟಿಕೊಡಲು ಬಳಸುವ ಪ್ಲಾಸ್ಟಿಕ್ ಡಬ್ಬಿಗಳು ಹಾಗೂ ಹಣ್ಣುಗಳು ತಾಜಾ ಉಳಿಯಲು ಸುತ್ತುವ ಪ್ಲಾಸ್ಟಿಕ್ ರಾಪರ್ ಗಳನ್ನು ನಿಷೇಧದ ಪಟ್ಟಿಯಲ್ಲಿ ಸೇರಿಸಲಾಗಿದೆ. ಇದರ ಜೊತೆಯಲ್ಲಿ ಸಿಗರೇಟು ಪ್ಯಾಕೇಟ್ ಹೊರಗಡೆ ಸುತ್ತಿರುವ ತೆಳು ಪ್ಲಾಸ್ಟಿಕ್ ಹಾಳೆ, ಪ್ಲಾಸ್ಟಿಕ್ ಆಹ್ವಾನ ಪತ್ರಿಕೆಯ ಹಾಳೆಗಳು ಇವುಗಳನ್ನೂ ನಿಷೇಧ ಮಾಡಲಾಗಿದೆ. 

೪. ಥರ್ಮಾಕಾಲ್ (Polystyrene) : ಥರ್ಮಾಕಾಲ್ ವಸ್ತುವಿನಿಂದ ತಯಾರಿಸಿದ ಕಪ್ ಹಾಗೂ ಪ್ಲೇಟ್ ಗಳನ್ನೂ ನಿಷೇಧಿಸಲಾಗಿದೆ. ಇವುಗಳೂ ಮಣ್ಣಿನಲ್ಲಿ ಕರಗುವುದಿಲ್ಲ.

೫. ಪ್ಲಾಸ್ಟಿಕ್ ಹಾಗೂ ಪಿವಿಸಿ ಬ್ಯಾನರ್ (Flex banners) : ದೊಡ್ಡ ದೊಡ್ಡ ಜಾಹೀರಾತುಗಳ ಪ್ರದರ್ಶನಕ್ಕಾಗಿ ಬಳಸುವ ಪ್ಲಾಸ್ಟಿಕ್ ಬ್ಯಾನರ್ ಹಾಗೂ ಫ್ಲೆಕ್ಸ್ ಗಳನ್ನು ನಿಷೇಧ ಮಾಡಲಾಗಿದೆ. ಪ್ಲಾಸ್ಟಿಕ್ ಕೈಚೀಲಗಳು, ಪ್ಲಾಸ್ಟಿಕ್ ಲೇಪಿತ ಅಥವಾ ಹೊಂದಿದ ಕೈಚೀಲಗಳು, ಪ್ಲಾಸ್ಟಿಕ್ ನಿಂದ ತಯಾರಿಸಿದ ನೀರಿನ ಪ್ಯಾಕೇಟ್ ಗಳ ದಪ್ಪ ೧೦೦ ಮೈಕ್ರಾನ್ ಗಳಿಗಿಂತ ಕಮ್ಮಿ ಇದ್ದರೆ ನಿಷೇಧದ ವ್ಯಾಪ್ತಿಗೆ ಬರುತ್ತದೆ.   

೬. ಇವುಗಳೆಲ್ಲದರ ಜತೆಗೆ ಪ್ಲಾಸ್ಟಿಕ್ ಧ್ವಜ, ಶಾಂಪೂ, ಮಾರ್ಜಕ, ಸೌಂದರ್ಯ ಸಾಮಾಗ್ರಿಗಳ ಬಾಟಲಿಗಳು, ಫೇಸ್ ಮಾಸ್ಕ್ ಇವೆಲ್ಲವೂ ನಿಷೇಧದ ಪಟ್ಟಿಯಲ್ಲಿವೆ.

ಈ ಮೇಲಿನ ಸಾಮಾಗ್ರಿಗಳನ್ನು ನಿಷೇಧ ಮಾಡುವ ಅಗತ್ಯತೆ ಬಹಳ ಇತ್ತು. ಆದರೆ ಈ ಪ್ಲಾಸ್ಟಿಕ್ ವಸ್ತುಗಳನ್ನು ನಿಷೇಧ ಮಾಡುವುದರಿಂದ ಕಾಗದ ಹಾಗೂ ಮರದ ಉಪಯೋಗ ಅಧಿಕವಾಗುತ್ತದೆ. ಇದರಿಂದ ಅರಣ್ಯನಾಶದ ಸಮಸ್ಯೆ ತಲೆದೋರಲಿದೆ ಎಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸುತ್ತಾರೆ. ಹಾಗಾದರೆ ಇದಕ್ಕೆ ಏನು ಪರಿಹಾರೋಪಾಯಗಳಿವೆ?

ನಮ್ಮ ಹಿರಿಯರು ಪ್ಲಾಸ್ಟಿಕ್ ಬಳಕೆಗೆ ಬರುವ ಮೊದಲು ಮಾರುಕಟ್ಟೆಗೆ ಹೋಗುವಾಗ ಸಾಮಾನುಗಳನ್ನು ತರಲು ಮನೆಯಿಂದಲೇ ಬಟ್ಟೆಯ ಚೀಲಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ಕಚೇರಿಗಳಿಗೆ ಹೋಗುವಾಗ ಸ್ಟೀಲ್ ನ ಊಟದ ಬುತ್ತಿಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ಮಣ್ಣಿನ ಮಡಕೆಗಳ ಉಪಯೋಗವೂ ಯಥೇಚ್ಛವಾಗಿತ್ತು. ಇನ್ನು ಮುಂದೆ ನಾವು ಹೊರಗಡೆ ಹೋಗುವಾಗ ಒಂದು ಸಣ್ಣ ಚೀಲವನ್ನು ತೆಗೆದುಕೊಂಡು ಹೋಗುವುದು ಅಪೇಕ್ಷಣೀಯ. ಕೆಲವೊಂದು ವಸ್ತುಗಳನ್ನು (ಮೀನು, ಮಾಂಸ ಇತ್ಯಾದಿ) ಚೀಲದಲ್ಲಿ ತೆಗೆದುಕೊಂಡು ಬರಲು ಕಷ್ಟವಾಗಬಹುದಾದರೂ ಬದಲಾವಣೆಗೆ ಒಗ್ಗಿ ಕೊಳ್ಳುವ ಅನಿವಾರ್ಯತೆ ಇದೆ. 

ಏಕಬಳಕೆಯ ಪ್ಲಾಸ್ಟಿಕ್ ಗಳನ್ನು ಈಗಾಗಲೇ ಹಲವಾರು ದೇಶಗಳು ನಿಷೇಧ ಮಾಡಿವೆ. ಹಾಗಾದರೆ ಇದಕ್ಕೆ ಇರುವ ಪರ್ಯಾಯೋಪಾಯಗಳೇನು? ಪ್ಲಾಸ್ಟಿಕ್ ಕಡ್ಡಿಗಳ ಬದಲಾಗಿ ಮರದ ಕಡ್ಡಿಗಳನ್ನು ಬಳಕೆ ಮಾಡಬಹುದು. ಸ್ಟ್ರಾ ಬದಲಿಗೆ ಈಗಾಗಲೇ ಪೇಪರ್ ಸ್ಟ್ರಾಗಳು ಹಾಗೂ ಬಿದಿರಿನ ಸ್ಟ್ರಾಗಳು ಮಾರುಕಟ್ಟೆಗೆ ಬಂದಿವೆ. ಬಿದಿರಿನ ಟೂತ್ ಬ್ರಷ್ ಸಹ ಮಾರುಕಟ್ಟೆಯಲ್ಲಿದೆ. ಪ್ಲಾಸ್ಟಿಕ್ ಪ್ಲೇಟ್ ಬದಲಿಗೆ ಅಡಿಕೆ ಹಾಳೆಯ ತಟ್ಟೆಗಳನ್ನು ಬಳಕೆ ಮಾಡಬಹುದು. ಕೂತು ಉಣ್ಣುವಿರಾದರೆ ಬಾಳೆ ಎಲೆಗಳನ್ನು ಬಳಸಬಹುದು. ಸ್ಟೀಲ್ ಪಾತ್ರೆಗಳ ಬಳಕೆ ಅನುಕೂಲವೂ ಹೌದು, ಆರೋಗ್ಯದಾಯಕವೂ ಹೌದು. ಈಗಾಗಲೇ ಮಣ್ಣಿನಲ್ಲಿ ೨-೩ ತಿಂಗಳಲ್ಲಿ ಕರಗಿ ಹೋಗುವ ಪ್ಲಾಸ್ಟಿಕ್ ಕೈಚೀಲಗಳನ್ನು ಸಂಶೋಧಕರು ಕಂಡು ಹಿಡಿದಿದ್ದಾರೆ. ಪ್ರಾಯೋಗಿಕವಾಗಿ ಕೆಲವು ದೇವಾಲಯಗಳಲ್ಲಿ ಬಳಕೆಗೆ ಬಂದಿದೆ. ಸ್ವಲ್ಪ ದುಬಾರಿಯಾದರೂ (ಒಂದಕ್ಕೆ ೨ ರೂ.) ಬಟ್ಟೆಯ ಚೀಲದ್ದಷ್ಟಲ್ಲ. ಇಂತಹ ಉದ್ದಿಮೆಗಳನ್ನು ಪ್ರಾರಂಭಿಸಲು ಸರಕಾರ ಬೆಂಬಲ ನೀಡಬೇಕು. ಈಗಾಗಲೇ ಪ್ಲಾಸ್ಟಿಕ್ ನಿಷೇಧ ಕಟ್ಟುನಿಟ್ಟಾಗಿ ಜಾರಿಗೆ ಬಂದರೆ ಸುಮಾರು ೮೮ ಸಾವಿರ ಘಟಕಗಳಿಗೆ ಬೀಗಮುದ್ರೆ ಬೀಳಲಿದೆಯಂತೆ. ಇದರ ಜೊತೆ ಲಕ್ಷಾಂತರ ಜನರು ನಿರುದ್ಯೋಗಿಗಳಾಗಲಿದ್ದಾರೆ. ಇದು ಮತ್ತೊಂದು ಸಮಸ್ಯೆಗೆ ದಾರಿ ಮಾಡಿಕೊಡಲಿದೆ. ಇವುಗಳಿಗೆಲ್ಲಾ ಪರಿಹಾರೋಪಾಯಗಳನ್ನು ಸರಕಾರ ಕಂಡುಕೊಳ್ಳಬೇಕಾಗಿದೆ. 

(ಆಧಾರ) ಚಿತ್ರ ಕೃಪೆ: ಅಂತರ್ಜಾಲ ತಾಣ