ಏನಾಯ್ತು ಮಗಳೇ?

ಏನಾಯ್ತು ಮಗಳೇ?

ಪುಸ್ತಕದ ಲೇಖಕ/ಕವಿಯ ಹೆಸರು
ರವಿ ಬೆಳಗೆರೆ
ಪ್ರಕಾಶಕರು
ಭಾವನಾ ಪ್ರಕಾಶನ, ಪದ್ಮನಾಭನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ.೧೦೦.೦೦, ಮುದ್ರಣ: ೨೦೧೩

ಇದೊಂದು ಪುಟ್ಟ ಪುಸ್ತಕದಲ್ಲಿ ಒಂದು ಕಾಲಕ್ಕೆ ಇಡೀ ರಾಷ್ಟ್ರದ ಕುತೂಹಲ ಕೆರಳಿಸಿದ ಆರುಷಿ ಹತ್ಯಾ ಪ್ರಕರಣದ ವಿವರಗಳಿವೆ. ರವಿ ಬೆಳಗೆರೆಯವರು ಕ್ರೈಂ ಸಾಹಿತ್ಯವನ್ನು ಬಹಳ ಸೊಗಸಾಗಿ ಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ಬರೆಯುತ್ತಾರೆ. ಆದರೆ ಈ ಆರುಷಿ ಹತ್ಯೆಯ ಪುಸ್ತಕವನ್ನು ಸ್ವಲ್ಪ ಗಡಿಬಿಡಿಯಲ್ಲಿ ಬರೆದು ಮುದ್ರಿಸಿದಂತೆ ತೋರುತ್ತದೆ. ಕೆಲವೆಡೆ ಕಥೆ ಓದುತ್ತಾ ಓದುತ್ತಾ ಬೇರೆ ಕಡೆಗೆ ತಿರುಗುತ್ತದೆ. ಆದರೂ ಈ ಪುಸ್ತಕ ಬರೆಯಲು ಅವರು ತೆಗೆದುಕೊಂಡ ಶ್ರಮ ಅಭಿನಂದನೀಯ. ಏಕೆಂದರೆ ಎಲ್ಲೂ ದೊರೆಯದ ವಿವರಗಳು ಹಾಗೂ ಭಾವಚಿತ್ರಗಳು ಪುಸ್ತಕದಲ್ಲಿ ಅಡಗಿವೆ. 

ರವಿ ಬೆಳಗೆರೆಯವರು ಪುಸ್ತಕದ ಪ್ರಾರಂಭದಲ್ಲಿ ‘ನೆತ್ತರು ಹರಿದ ಹಾದಿಯಗುಂಟ' ಎಂಬ ಅಧ್ಯಾಯದಲ್ಲಿ ಅವರಿಗೆ ಈ ಪುಸ್ತಕ ಬರೆಯಲು ಸಿಕ್ಕ ಪ್ರೇರಣೆ ಹಾಗೂ ಬರೆಯಲು ಕುಳಿತಾಗ ಆದ ಅಡಚಣೆಗಳು ಇವೆಲ್ಲದುದರ ಬಗ್ಗೆ ಬರೆಯುತ್ತಾ ಒಂದೆಡೆ ಹೇಳುತ್ತಾರೆ “ನಾವೇ ಹೆತ್ತ ಹೆಣ್ಣು ಮಗು ಯಾರನ್ನೋ ಪ್ರೀತಿಸಿದರೆ ಸಹಜವಾಗಿಯೇ ಧಾವಂತಗೊಳ್ಳುತ್ತೇವೆ, ಜೀವನ ಪರ್ಯಂತ ಮಾತು ಬಿಡುತ್ತೇವೆ. ಉತ್ತರ ಭಾರತದ ಮರ್ಯಾದಾ ಹತ್ಯೆ (?) ಗಳನ್ನು ನೋಡಿದಾಗ ಮನುಷ್ಯನ ಕ್ರೌರ್ಯ, stupidity, feudal ಮನಸ್ತತ್ವ ಅರ್ಥವಾಗುತ್ತದೆ. ಅವು ಮರ್ಯಾದಾ ಹತ್ಯೆಗಳಲ್ಲ, ಮರ್ಯಾದೆ ಮತ್ತು ಮನುಷ್ಯತ್ವದ ಹತ್ಯೆಗಳು. ಆರುಷಿ ಪ್ರಕರಣ ಅದಕ್ಕಿಂತ ಭಿನ್ನ. ಹದಿನಾಲ್ಕು ತುಂಬಲಿರುವ ಮಗಳು ಮನೆಯ ಆಳಿನೊಂದಿಗೆ ಸುಖದ ಕ್ರೀಡೆಯಲ್ಲಿರುವುದನ್ನು ನೋಡಿದ ತಂದೆ ಭಯಂಕರ ರೀತಿಯಲ್ಲಿ ಇಬ್ಬರನ್ನೂ ಕೊಂದು ಬಿಟ್ಟ. ಅದು ಸರಿಯಾ? ಆ ಕ್ಷಣದ ರಿಯಾಕ್ಷನ್ನಾ? ಈಗಿನ ಮಕ್ಕಳು ಕೆಟ್ಟು ಕೆರ ಹಿಡಿದ್ದಾರಾದ್ದರಿಂದ ಅವರನ್ನು ಶಿಕ್ಷಿಸಲೇ ಬೇಕು ಎಂಬ ಸಿದ್ಧಾಂತದ ಫಲವಾ? What is this? ಆರುಷಿ ಪ್ರಕರಣದ ಬಗ್ಗೆ ಯಾರು ಬೇಕಾದರೂ ಪುಸ್ತಕ ಬರೆಯಬಹುದು, ಮಾತಾಡಬಹುದು. ಆದರೆ ನನಗಿರುವ ಕೊಂಚ ಹೆಚ್ಚಿನ ಹಕ್ಕು ಎಂದರೆ, ನಾನು ಇಬ್ಬರು ಹೆಣ್ಣು ಮಕ್ಕಳ ತಂದೆ. ಇಬ್ಬರವೂ ಪ್ರೇಮ ವಿವಾಹಗಳು. ಅಂತರ್ ಜಾತೀಯ ಮದುವೆಗಳು. ಅವರ ಪ್ರೇಮಗಳಿಗೆ ನಾನು ಸಾಕ್ಷಿ. ಅವರೊಂದಿಗಿನ ಸಲುಗೆ ನನಗೆ ಇವತ್ತಿಗೂ ಬೇರೆಯವರೊಂದಿಗೆ ಸಿಲುಕಿಲ್ಲ. ಪ್ರೇಮಿಸುವ ಕಾಲದಲ್ಲಿ, ಮದುವೆಯಾದ ನಂತರದ ದಿನಗಳಲ್ಲಿ ಅವರ ಮನಸ್ಸುಗಳ ಸ್ಥಿತ್ಯಂತರಗಳನ್ನು ನಾನು ಗಮನಿಸುತ್ತ ಬಂದಿದ್ದೇನೆ. ತುಂಬ ಅಲ್ಲದಿದ್ದರೂ, ಕೊಂಚ ಮಟ್ಟಿಗೆ ಕೆಲವು ಸಲ ಅವರ ಮೇಲೆ ಸಿಟ್ಟು ಮಾಡ್ಕೊಂಡಿದ್ದೇನೆ. ಧಾರೆ ಎರೆದು ಕೊಡುವಾಗ ದೇಹವೆಲ್ಲಾ ಕರಗಿ ಹೋಗುವಂತೆ ಅತ್ತಿದ್ದೇನೆ. ನನಗೆ ತಲವಾರ್ ದಂಪತಿಗಳು, ಅವರ ತಳಮಳ, fit of anger -ಎಲ್ಲಾ ಅರ್ಥವಾಗುತ್ತದೆ. ಆದರೆ ನನಗೆ ಆರುಷಿ ಹೆಚ್ಚು ಅರ್ಥವಾಗುತ್ತಾಳೆ. “ 

ರವಿ ಬೆಳಗೆರೆಯವರು ಈ ಪುಸ್ತಕ ಬರೆಯಲು ಬಹಳ ಶ್ರಮ ವಹಿಸಿದ್ದಾರೆ. ಹಲವಾರು ಫೋಟೋಗಳು, ಕೋರ್ಟು ತೀರ್ಪುಗಳು, ವೈದ್ಯಕೀಯ ವರದಿಗಳು ಎಲ್ಲವನ್ನೂ ಸಂಗ್ರಹಿಸಿ ಮಾಹಿತಿ ಬರೆದಿದ್ದಾರೆ. ಸುಮಾರು ನೂರು ಪುಟಗಳ ಈ ಪುಸ್ತಕ ಒಂದು ಪತ್ತೇದಾರಿ ಕಾದಂಬರಿಯಂತೆ ರೋಚಕವಾಗಿ ಓದಿಸಿಕೊಂಡು ಹೋಗುತ್ತದೆ. ಓದಿ ಮುಗಿಸುವಾಗ ಕೊನೆಯಲ್ಲಿ ಅಗಾಧ ನೋವು ಸಹಾ ಕಾಡುತ್ತದೆ.