ಏನಿದು ಕಿವಿಯಲ್ಲಿ ಸದ್ದು?!

ಲಿಫ್ಟ್ ನಲ್ಲಿ ಅಥವಾ ವಿಮಾನದಲ್ಲಿ ನೀವು ತ್ವರಿತವಾಗಿ ಮೇಲಕ್ಕೆ ಅಥವಾ ಕೆಳಕ್ಕೆ ಹೋಗುವಾಗ ನಿಮ್ಮ ಕಿವಿಯಲ್ಲಿ ಎಂದಾದರೂ ಥಟ್ಟನೇ ಸಿಡಿಯುವ ಸಪ್ಪಳವಾಗಿದೆಯೇ? ವಾತಾವರಣವು ನಮ್ಮ ದೇಹದ ಎಲ್ಲ ಭಾಗಗಳ ಮೇಲೆ ಒತ್ತಡವನ್ನು ಹಾಕುತ್ತಲೇ ಇರುತ್ತದೆ. ಎತ್ತರ ಕಡಿಮೆ ಇರುವಾಗ ವಾತಾವರಣದ ಒತ್ತಡ ಹೆಚ್ಚಿರುತ್ತದೆ. ದೇಹದೊಳಗಿನ ಗಾಳಿಯು ಹೊರಗಿನ ವಾತಾವರಣಕ್ಕೆ ಅದೇ ಪ್ರಮಾಣದ ಒತ್ತಡವನ್ನು ಹಾಕುವುದರಿಂದ ನಮಗೆ ಸಾಮಾನ್ಯವಾಗಿ ಇದರ ಅನುಭವವಾಗಿರುವುದಿಲ್ಲ. ನೀವು ಹೆಚ್ಚಿನ ಎತ್ತರದಿಂದ ತ್ವರಿತವಾಗಿ ಕೆಳಗೆ ಬಂದಾಗ ನಿಮ್ಮ ಕಿವಿಯ ತಮಟೆಗಳು ವಾತಾವರಣದಿಂದ ಹೆಚ್ಚಿನ ಒತ್ತಡವನ್ನು ಅನುಭವಿಸುತ್ತವೆ. ಹೀಗಾಗಿ ಅವುಗಳು ಒಳಕ್ಕೆ ತಳ್ಳಲ್ಪಡುತ್ತವೆ. ಒಳಕಿವಿಗೆ ಸ್ವಲ್ಪ ಗಾಳಿಯನ್ನು ಸಾಗಿಸುವ ಮೂಲಕ ಕಿವಿಯ ತಮಟೆಯ ಎರಡೂ ಬದಿಗಳಲ್ಲಿನ ಒತ್ತಡವನ್ನು ಸಮತೋಲನಗೊಳಿಸಿ ಒತ್ತಡವನ್ನು ಸರಿದೂಗಿಸಲು ನಿಮ್ಮದೇಹವು ಪ್ರಯತ್ನಿಸುತ್ತದೆ. ಆಕಳಿಸುವುದು, ಚೂಯಿಂಗ್ ಗಮ್ ಜಗಿಯುವುದು, ಅಥವಾ ನಿಮ್ಮ ಮೂಗು ಮತ್ತು ಬಾಯಿಯನ್ನು ಮುಚ್ಚಿ ಹಿಡಿದಿಟ್ಟುಕೊಳ್ಳುವುದು. ಹೀಗೆ ಏನಾದರೂ ಮಾಡಿ. ಸಂಪರ್ಕಿಸುವ ಸಣ್ಣ ನಾಳಗಳಿಗೆ ಗಾಳಿಯು ವರ್ಗಾವಣೆಯಾಗಿ ಒತ್ತಡವು ಹಂಚಿಕೆಯಾಗುತ್ತದೆ. ಈ ಮೂಲಕ ಕಿವಿಯಲ್ಲಿ ಗುಂಯ್ ಗುಡುವ ಶಬ್ಧ ಉಂಟಾಗದಂತೆ ತಡೆಯಬಹುದು.
***
ನಗಿಸುವ ಅನಿಲ
ನೈಟ್ರಸ್ ಆಕ್ಸೈಡ್ ಅನಿಲವನ್ನು ‘ನಗಿಸುವ ಅನಿಲ' ಎನ್ನುತ್ತಾರೆ ಎನ್ನುವ ವಿಷಯ ಈಗ ಬಹುತೇಕರಿಗೆ ಗೊತ್ತಿದೆ. ಆದರೆ ನಮ್ಮ ಸಿನೆಮಾಗಳಲ್ಲಿ ಈ ಅನಿಲವನ್ನು ಉಪಯೋಗಿಸಿ ತೋರಿಸುವಂತೆ ಆ ಅನಿಲ ನಿಮ್ಮನ್ನು ಜೋರಾಗಿ ಗಹಗಹಿಸಿ ನಗುವಂತೆ ಮಾಡುತ್ತದೆ ಎನ್ನುವುದು ಪೂರ್ಣ ಸರಿಯಲ್ಲ. ಇದನ್ನು ಸಾಮಾನ್ಯವಾಗಿ ವೈದ್ಯಕೀಯ ಮತ್ತು ದಂತ ವೈದ್ಯಕೀಯದ ಕಾರ್ಯವಿಧಾನದಲ್ಲಿ ನಿದ್ರಾಜನಕವಾಗಿ ಬಳಸುತ್ತಾರೆ. ಈ ಅನಿಲವನ್ನು ಉಸಿರಾಡಿದಾಗ ಮನಸ್ಸು ಹಗುರವಾದಂತೆ ಭಾವನೆ ಬರುತ್ತದೆ. ಸಂತೋಷವಾದಂತೆ ಅನಿಸುತ್ತದೆ. ವಿಶ್ರಾಂತಿ ಸಿಕ್ಕಂತೆ ಭಾಸವಾಗುತ್ತದೆ. ನಗಬೇಕೆನಿಸುತ್ತದೆ. ಈ ಎಲ್ಲಾ ಪರಿಣಾಮಗಳನ್ನು ಉಂಟುಮಾಡುವುದರಿಂದ ಇದಕ್ಕೆ ‘ನಗಿಸುವ ಅನಿಲ' ಎಂಬ ಹೆಸರು ಬಂದಿರುತ್ತದೆ. ಇದೊಂದು ಬಣ್ಣ ರಹಿತ ಅನಿಲ. ಇದಕ್ಕೆ ಸುಲಭವಾಗಿ ಬೆಂಕಿ ಹೊತ್ತಿಕೊಳ್ಳುವುದಿಲ್ಲ.
***
ಆಮ್ಲಜನಕದ ಅಣುಗಳ ವೇಗ
ಆಕ್ಸಿಜನ್ ಅಥವಾ ಆಮ್ಲಜನಕ ಅನಿಲದಲ್ಲಿನ ಅಣುಗಳು ಬೇಸಿಗೆಯ ಸಮಯದಲ್ಲಿ ಸರಾಸರಿ ಪ್ರತಿ ಗಂಟೆಗೆ ಸುಮಾರು ೧೬೫೦ ಕಿಲೋಮೀಟರ್ ವೇಗದಲ್ಲಿ ಅಂದರೆ ಒಂದು ಜೆಟ್ ವಿಮಾನಕ್ಕಿಂತ ವೇಗವಾಗಿ ಚಲಿಸುತ್ತದೆ. ಅಷ್ಟು ವೇಗವಾಗಿ ಚಲಿಸುವ ಈ ಆಕ್ಸಿಜನ್ ಅಣುಗಳಿಗೆ ಒಂದು ಕೋಣೆಯನ್ನು ಅತಿ ವೇಗವಾಗಿ ದಾಟಲಾಗುವುದಿಲ್ಲ. ಏಕೆಂದರೆ ಒಂದು ಸೆಕೆಂಡಿನಲ್ಲಿ ಕಡಿಮೆಯೆಂದರೂ ಒಂದು ಬಿಲಿಯನ್, ಅಂದರೆ ೧೦೦ ಕೋಟಿ ಬಾರಿ ಅಣುಗಳು ಪರಸ್ಪರ ಡಿಕ್ಕಿ ಹೊಡೆದುಕೊಂಡಿರುತ್ತವೆ. !
***
(ಮಾಹಿತಿ ಕೃಪೆ: ಸೂತ್ರ ಪತ್ರಿಕೆ)
ಚಿತ್ರ : ಅಂತರ್ಜಾಲ ತಾಣದ ಕೃಪೆ