ಏನು ಮಾಡಿ ಬಂದೆ..?

ಏನು ಮಾಡಿ ಬಂದೆ..?

ಕವನ

ಬಾಲಕೃಷ್ಣ ಏಕೆ ಹೀಗೆ ಬಂದು ಮಡಿಲು ಸೇರಿದೆ

ಎಲ್ಲಿ ಏನು ಯಾರಿಗೆಲ್ಲ ತಂಟೆಯನ್ನು ಮಾಡಿದೆ

 

ಅಲ್ಲಿ ಇಲ್ಲಿ ಬೆಣ್ಣೆ  ಮುದ್ದೆ ಕದ್ದು ಮೆದ್ದು ಬಂದೆಯಾ

ಸುಮ್ಮನಿರುವ ಕಂದನಲ್ಲ ನನಗೆ ಏಕೋ ಸಂಶಯ

 

ಉರಗ ಹಿಡಿದು ಶಿರವ ಮೆಟ್ಟಿ ನೃತ್ಯವಾಡಿ ಬಂದೆಯಾ

ದುರುಳ ದನುಜರನ್ನು ಅಟ್ಟಿ ಮುಷ್ಟಿಯಲ್ಲಿ ಕೊಂದೆಯಾ

 

ಹಸಿವಿನಿಂದ ನೊಂದೆಯೇನು ಕೊಂಚ ಹಾಲು ನೀಡಲೇ

ತಿನುವೆಯೇನು ಮುದ್ದೆ ಬೆಣ್ಣೆ ತಂದು ಕೊಡಲೆ ಈಗಲೆ

 

ತುಂಟ ಕಂದ ಸುಮ್ಮನಿರಲು ತಾಯಿ ಮನದೆ ತಳಮಳ

ನೂರು ಪ್ರಶ್ನೆ ಉದಿಸಿ ಮನದೆ ಯಶೋದೆಗಿಂದು ಕಳವಳ||

 

-ಪೆರ್ಮುಖ ಸುಬ್ರಹ್ಮಣ್ಯ ಭಟ್ 

ಚಿತ್ರ್