ಏನೆಂದು ಹೆಸರಿಡಲಿ ಕೃಷ್ಣ...

ಏನೆಂದು ಹೆಸರಿಡಲಿ ಕೃಷ್ಣ...

ಕವನ

ನನ್ನ ನಿನ್ನ ನಡುವಿನ ಅನುಬಂಧಕೆ
ಏನೆಂದು ಹೆಸರಿಡಲಿ ಕೃಷ್ಣ
ಬಂಧಗಳ ಸರಮಾಲೆ ಬಿಡಿಸುವ
ಬಾಂಧವ್ಯಕೆ ಹೆಸರೇನು ಕೃಷ್ಣ.....

ಗೆಳತಿಯರ ಜೊತೆ ನಲಿದಾಡುವಾಗ
ನೆನಪಾಗುವ ನನ್ನ  ಬಾಲ ಕೃಷ್ಣ
ಹರೆಯದ ಹುರುಪಿನ ದಿನಗಳು
ಮನ ಆವರಿಸಿದ ರಾಧಾ ಕೃಷ್ಣ

ಅಕ್ಕರೆಯ ಅಪ್ಪನ ಅರಮನೆಯಲ್ಲಿ
ಜಗ ಪೊರೆದ  ದ್ವಾರಕಾಧೀಶ ನ ನೆನಪು
ಹಸೆಮಣೆ ಏರಿ ಕುಳಿತು ಕಣ್ಣರಳಿಸಿದಾಗ
ಕಂಡದ್ದು ಪ್ರೀತಿಯ ರುಕ್ಮಿಣಿ ರಮಣ.  

ನವಮಾಸ ಹೊತ್ತು ಹೆತ್ತು ಕಂದನ 
ಲಾಲಿಸುವಾಗ   ಕಂಡದ್ದು ಯಶೋದಾ ಕೃಷ್ಣ
ಅಂಬೆಗಾಲಿಕ್ಕಿ  ನಲಿದಾಡುವಾಗಾ ಕಂದ,
ನೆನಪಾಗುವ ನಂದ ಗೋಪಾಲ

ಕಷ್ಟಗಳ ಮಳೆ ಸುರಿದಾಗ ಆಸರೆಯಾದ
ಕುಂತಿಯ ಭರವಸೆಯ ಕೃಷ್ಣ
ತನ್ನವರು ಯಾರೆಂದು ಕಳವಳಗೊಂಡಾಗ
ಭ್ರಾತೃತ್ವ ತೋರಿ ಮೆರೆದ ದ್ರೌಪದಿ ಕೃಷ್ಣ

ಕರ್ತವ್ಯದ ಕಾರ್ಯ ನಿರ್ವಹಿಸುವಾಗ
ನೆನಪಾಗುವ ವಿದುರನ ಭಕ್ತಿಯ ಕೃಷ್ಣ
ಜ್ಞಾನದ ಬೆಳಕು ಅರಸಿ ಹೊರಟಾಗ
ಕಾಣುವೆ ಅಂತರಂಗದಲ್ಲಿ  ಪರಮಾತ್ಮ ಕೃಷ್ಣ

ಪ್ರತೀಯೊಂದು ಬಂಧನದಲ್ಲಿಯು ನಿನ್ನ
ಅನುಬಂಧದ  ಆಲಿಂಗನ
ಅನುಬಂಧಗಳಲ್ಲಿ  ನಿನ್ನ ಪ್ರೀತಿಯ
ಬಂಧದ ಈ ಪರಮಾನಂದದ ಕ್ಷಣ

ನನ್ನ ನಿನ್ನ ನಡುವಿನ ಅನುಬಂಧಕೆ
ಏನೆಂದು ಹೆಸರಿಡಲಿ ಕೃಷ್ಣ
ಬಂಧಗಳ ಸರಮಾಲೆ ಬಿಡಿಸುವ
ಬಾಂಧವ್ಯಕೆ ಹೆಸರೇನು ಕೃಷ್ಣ.....

ಕೃಷ್ಣಾoಗಿನಿ