ಏನೋ ಮಾಡಲು ಹೋಗಿ...

ಏನೋ ಮಾಡಲು ಹೋಗಿ...

ನೀವು ಜೈನ ಮುನಿಯೇ ಆಗಿರಿ, ಬೌದ್ದ ಸನ್ಯಾಸಿಯೇ ಆಗಿರಿ, ಮಸೀದಿಯ ಮೌಲ್ವಿಯೇ ಆಗಿರಿ, ಕ್ರಿಶ್ಚಿಯನ್ ಪಾದ್ರಿಯೇ ಆಗಿರಿ, ದೇವಸ್ಥಾನದ ಪೂಜಾರಿಯೇ ಆಗಿರಿ, ಮಠದ ಸ್ವಾಮಿಗಳೇ ಆಗಿರಿ, ಸಿಖ್ ಸಂತರೇ ಆಗಿರಿ ನಿಮ್ಮ ವೃತ್ತಿ ಮತ್ತು ಹವ್ಯಾಸ ಹಾಗು ಒಡನಾಟ ಅದಕ್ಕೆ ಸಂಬಂಧಿಸಿದ ವ್ಯಕ್ತಿ ಮತ್ತು ಸಂಸ್ಥೆಗಳೊಂದಿಗೆ ಹೆಚ್ಚಾಗಿ ಇರಲಿ.

ನಿಮ್ಮ ಮನೋಭಾವಕ್ಕೆ ವಿರುದ್ಧವಾದ ಸೆಕ್ಸ್, ಫೈನಾನ್ಸ್, ಪೊಲಿಟಿಕ್ಸ್ ವಿಷಯಗಳಲ್ಲಿ ಆದಷ್ಟು ದೂರವಿರಿ. ಅವಶ್ಯಕತೆಗಿಂತ ಹೆಚ್ಚು ಅದರಲ್ಲಿ ಮುಳುಗಬೇಡಿ. ಏಕೆಂದರೆ ಅದು ನಿಮ್ಮ ಕೆಲಸವಲ್ಲ ಮತ್ತು ನೀವು ಅದರಲ್ಲಿ ಪರಿಣಿತರು ಅಲ್ಲ. ಬಹುಬೇಗ ನೀವು ಅದರಲ್ಲಿ ಸಿಲುಕಿ ವಂಚಿತರಾಗುವಿರಿ. ಸಾಮಾನ್ಯ ಜನ ಇದರಲ್ಲಿ ನಿಮಗಿಂತ ಹೆಚ್ಚು ಪರಿಣಿತರು. ನೀವು ಅವರನ್ನು ಶೋಷಿಸಲು ಹೋಗಿ ನೀವೇ ಅದರಲ್ಲಿ ಸಿಲುಕಿ ನಾಶವಾಗುವಿರಿ. ಏಕೆಂದರೆ ನೀವು ಹೆಚ್ಚು ಆಧ್ಯಾತ್ಮಿಕ ಲೋಕದಲ್ಲಿ ಮುಳುಗಿ ವ್ಯಾವಹಾರಿಕ ಜಗತ್ತಿನಿಂದ ದೂರವಿರುವಿರಿ. ಈ ಮೂರು ವಿಭಾಗಗಳ ಆಕರ್ಷಣೆಗೆ ಒಳಗಾಗದರೆ ಒಂದಲ್ಲ ಒಂದು ದಿನ ಅದರ ದುಷ್ಪರಿಣಾಮಕ್ಕೆ ಬಲಿಯಾಗುವಿರಿ ಎಷ್ಟೇ ಎಚ್ಚರ ವಹಿಸಿ ನಾವು ಮಹಾ ಬುದ್ದಿವಂತರು ಎಂದು ಭಾವಿಸಿದ್ದರು ಕೂಡ. ವ್ಯಾಮೋಹಗಳನ್ನು ಅನುಭವಿಸಿ ಜಯಿಸುವುದು ತುಂಬಾ ಕಷ್ಟ.

ಅದರಿಂದಾಗಿಯೇ ಅನೇಕ ಧಾರ್ಮಿಕ ನಾಯಕರ ಹಗರಣಗಳು ಸುಲಭವಾಗಿ ಹೊರ ಬರುತ್ತಿದೆ ಮತ್ತು ಹೊರ ಬರಲು ಹವಣಿಸುತ್ತಿರುವ ಅನೇಕ ಪ್ರಕರಣಗಳು ಈಗಲೂ ಸರತಿಯ ಸಾಲಿನಲ್ಲಿ ಕಾಯುತ್ತಿವೆ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಇತ್ತೀಚಿನ ವರ್ಷಗಳ ಕೆಲವು ಘಟನೆಗಳನ್ನು ನೆನಪಿಸಿಕೊಳ್ಳುವುದಾದರೆ,..

ಹೊಸನಗರದ ರಾಘವೇಶ್ವರ ಭಾರತಿಯವರ ಅತ್ಯಾಚಾರ ಹಗರಣ. ಅವರಿಗೆ ಆ ಸಂಬಂಧವನ್ನು ನಿಭಾಯಿಸಲು ಸಾಧ್ಯವಾಗಲಿಲ್ಲ. ಹಾಗೆಯೇ ಐಎಂಎ ಬಹುಕೋಟಿ ಹಗರಣದಲ್ಲಿ ಬೆಂಗಳೂರಿನ ಕೆಲವು ಮುಸ್ಲಿಂ ಮೌಲ್ವಿಗಳು ಜನರನ್ನು ಧರ್ಮದ ಹೆಸರಿನಲ್ಲಿ ವಂಚಿಸಿ ಹಣ ಹೂಡಿಕೆ ಮಾಡುವಂತೆ ಮಾಡಿ  ಅಮಾಯಕ ಜನರನ್ನು ಮೋಸ ಮಾಡಿ ಪೋಲೀಸರಿಗೆ ಸಿಕ್ಕಿಬಿದ್ದರು. ಯಶವಂತ ಪುರದ ಬಳಿಯ ಒಂದು ಚರ್ಚಿನಲ್ಲಿ ಪಾದ್ರಿಯೊಬ್ಬರ ಭೀಕರ ಹತ್ಯೆಯಾಗಿ ಅನೇಕ ತನಿಖೆಗಳ ನಂತರವೂ ನಿಜವಾದ ಅಪರಾಧಿಗಳನ್ನು ಪತ್ತೆ ಹಚ್ಚಲು ಸಾಧ್ಯವಾಗದೆ ಅದು ಇನ್ನೂ ನಿಗೂಢವಾಗಿದೆ. ಹಿಂದಿನ ಪೇಜಾವರ ಮಠದ ವಿಶ್ವೇಶ ತೀರ್ಥರು ಬೆಂಗಳೂರಿನ ಒಬ್ಬರಿಗೆ ಅನಧಿಕೃತವಾಗಿ ಬಡ್ಡಿಗೆ ಹಣ ನೀಡಿ ಅವರು ವಾಪಸ್ಸು ಕೊಡದಿದ್ದಾಗ ರೌಡಿಗಳನ್ನು ಕಳುಹಿಸಿ ಹಲ್ಲೆ ಮಾಡಿಸಿದರು. ಅದು ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿ ಪೇಜಾವರರು ಕ್ಷಮೆ ಯಾಚಿಸಿದರು. ಇತ್ತೀಚೆಗೆ ನೆಲಮಂಗಲದ ಬಳಿಯ ಮಠದಲ್ಲಿ ಹನಿ ಟ್ರ್ಯಾಪ್ ಸುಳಿಗೆ ಸಿಲುಕಿ ಮಠಾಧೀಶರು ಆತ್ಮಹತ್ಯೆ ಮಾಡಿಕೊಂಡರು. ಈಗ ಹಣಕಾಸಿನ ವಿಷಯಕ್ಕೆ ಜೈನ ಧರ್ಮದ ಕಾಮ ಕುಮಾರ ನಂದಿಯವರ ಹತ್ಯೆಯಾಗಿದೆ.

ಹಣ ಕೇಂದ್ರಿತ ಸಮಾಜದಲ್ಲಿ ಬದುಕನ್ನು ನಿಭಾಯಿಸುವುದು ಅಷ್ಟು ಸುಲಭವಲ್ಲ. ಯಾವ ರೀತಿಯಲ್ಲಿ ಯಾವ ರೂಪದಲ್ಲಿಯಾದರು ಸರಿ ಹಣ ಹೊಂದಿಸಲು ಬಹಳಷ್ಟು ಜನ ಕಷ್ಟ ಪಡುತ್ತಾರೆ. ಅದರಲ್ಲಿ ಅತಿಹೆಚ್ಚು ಚಾಲ್ತಿಯಲ್ಲಿರುವುದು ಸಾಲ. ಸಾಲ ಪಡೆಯುವಾಗ ಅತ್ಯಂತ ವಿನಯವಾಗಿರುವ ವ್ಯಕ್ತಿಗಳು ಅದು ಖರ್ಚಾದ ನಂತರ ಅನೇಕ ವೇಳೆ ಅವರು ನಿರೀಕ್ಷಿಸಿದ ರೀತಿಯಲ್ಲಿ ಹಣ ಸಂಗ್ರಹವಾಗದೇ ಇರುವಾಗ ಸಾಲ ಮರುಪಾವತಿ ಮಾಡಲು ಸಾಧ್ಯವಾಗುವುದಿಲ್ಲ. ಆಗ ಸುಳ್ಳು ವಂಚನೆ ಘರ್ಷಣೆ ಪ್ರಾರಂಭವಾಗುತ್ತದೆ. ಅನೇಕ ಪ್ರಕರಣಗಳಲ್ಲಿ ಗಲಾಟೆಗಳು, ಪರಾರಿಯಾಗುವುದು, ಪೋಲೀಸ್ ಮತ್ತು ನ್ಯಾಯಾಲಯದ ಮೆಟ್ಟಿಲು ಹತ್ತುವುದು ನಡೆಯುತ್ತದೆ. ಆದರೆ ಕೆಲವು ಅಪರೂಪದ ಪ್ರಕರಣಗಳಲ್ಲಿ ಕ್ರಿಮಿನಲ್ ಮನಸ್ಥಿತಿಯ ಜನ ಕೊಲೆಯಂತ ಕ್ರಮಕ್ಕೆ ಮುಂದಾಗುತ್ತಾರೆ. ಹಣ ಕೊಟ್ಟವರು ನಿರೀಕ್ಷಿಸದ ರೀತಿಯಲ್ಲಿ ಹತ್ಯೆಯಾಗುತ್ತಾರೆ. ಇಲ್ಲಿ ಕೆಲವೊಮ್ಮೆ ಹಣ ಕೊಟ್ಟವರು ಸಹ ಬೇರೆ ಬೇರೆ ರೀತಿಯಲ್ಲಿ ಹಣ ಪಡೆದವರಿಗೆ ಅತಿಯಾದ ಹಿಂಸೆ  ದೌರ್ಜನ್ಯಗಳನ್ನು ಎಸಗಿರುವ ಸಾಧ್ಯತೆಯೂ ಇರಬಹುದು. ಹುಬ್ಬಳ್ಳಿಯಲ್ಲಿ ಕೊಲೆಯಾದ ಚಂದ್ರಶೇಖರ್ ಎಂಬ ವಾಸ್ತು ತಜ್ಞರು ಇದಕ್ಕೆ ಒಂದು ಉದಾಹರಣೆ.

ಆದ್ದರಿಂದ ಧಾರ್ಮಿಕ ಮುಖಂಡರು ಮೊದಲು ಅರಿಯಬೇಕಾದ ವಿಷಯವೆಂದರೆ, ಈ ಸಮಾಜ ಬದಲಾಗುತ್ತಿದೆ. ಹಿಂದಿನ ಮೌಲ್ಯಗಳು ಈಗ ಉಳಿದಿಲ್ಲ.‌ ಧಾರ್ಮಿಕ ನಾಯಕರ ಬಗ್ಗೆ ಸಹ ಮೊದಲಿನ ಗೌರವ ಭಕ್ತಿ ಇಲ್ಲ.‌ ವ್ಯವಹಾರವೇ ಪ್ರಧಾನ. ಅದನ್ನು ಅರಿತು ಅತ್ಯಂತ ಸರಳ ಸಹಜ ಮತ್ತು ಪ್ರೀತಿಯ ಬದುಕನ್ನು ಅಳವಡಿಸಿಕೊಳ್ಳುವುದು ಮುಖ್ಯವಾಗುತ್ತದೆ.

ಈ ಸಮಾಜದಲ್ಲಿ ಉಪಕಾರಕ್ಕೆ ಪ್ರತ್ಯುಪಕಾರ ಇರುತ್ತದೆ ಎಂಬುದು ಎಷ್ಟು ನಿಜವೋ ಅದಕ್ಕೆ ವಿರುದ್ಧವಾದ ಅಪಕಾರ ಸಹ ಇರುತ್ತದೆ ಎಂಬುದನ್ನು ಮರೆಯಬಾರದು. ಬೆನ್ನಿಗೆ, ಹೃದಯಕ್ಕೆ ಚೂರಿ ಹಾಕುವ ಹಿತೈಷಿಗಳ ದಂಡೇ ಸದಾ ಚಟುವಟಿಕೆಗಳಿಂದ ಇರುತ್ತದೆ. ಅದೇ ಒಂದು ವಿದ್ಯೆ ಮತ್ತು ಅಭ್ಯಾಸವಾಗಿದೆ. ಆದ್ದರಿಂದ ಸಾಮಾನ್ಯವಾಗಿ ಮತ್ತು ವ್ಯಾವಹಾರಿಕವಾಗಿ ಯಾರು ಯಾವ ಕೆಲಸದಲ್ಲಿ ಪರಿಣಿತರೋ ಅದನ್ನೇ ಮಾಡಬೇಕು. ಒಳ್ಳೆಯ ಸಮಾಜಮುಖಿ ಕೆಲಸಗಳನ್ನು ಮಾತ್ರ ಯಾರು ಯಾವಾಗ ಬೇಕಾದರೂ ಮಾಡಬಹುದು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದ.....

-ವಿವೇಕಾನಂದ ಎಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ