ಏನ್ ತಿಂದ್ರೀ ??

ಏನ್ ತಿಂದ್ರೀ ??

ಬರಹ

ಸಂಜೆ ತಂಪು ಗಾಳಿ ಸೇವನೆಗೆ ಹೊರಟಿದ್ದೆ. ಮನಸ್ಸಿಗೆ ಬಂದ ಹಾಡನ್ನು ಗುನುಗುನಿಸುತ್ತಾ ಹಾಗೇ ನೆಡೆಯಲು ವಕ್ರಮೂತಿ ಸುಂದರೇಶ ಸಿಕ್ಕ. ಹಾಗೇ ಅವನೊಡನೆ ಹೆಜ್ಜೆ ಹಾಕುತ್ತಾ ನನಗೇ ಅರಿವಿಲ್ಲದೆ ಕದಂಬ ರೆಸ್ಟೋರೆಂಟ್’ನಲ್ಲಿ ಕುಳಿತಿದ್ದೆ. ನಾನು ಬಂದದ್ದೇ ಊಟಕ್ಕೇನೋ ಅನ್ನುವಂತೆ ಮಾಣಿ ಎರಡು ಊಟ ತಂದಿಟ್ಟ. ಇನ್ನೇನು ತಟ್ಟೆಗೆ ಕೈ ಹಾಕಬೇಕು, ಅನ್ನುವಷ್ಟರಲ್ಲಿ ಘಂಟೆ ಬಜಾಯಿಸಿತು. ಊಟಕ್ಕೆ ತೊಂದರೆ ಕೊಡುವವರನ್ನು ನಮ್ಮಲ್ಲಿ ’ಅನ್ನ ಕಂಟಕರಾಯ’ ಎಂದು ಕರೆಯುತ್ತಾರೆ. ಈ ಕಂಟಕರಾಯ ಸುಂದರೇಶನ ಸೆಲ್ ಫ಼ೋನೇ ಇರಬೇಕು ಎಂದುಕೊಂಡು ಸುಂದರೇಶನಿಗೆ ಹೇಳಿದೆ ’ಸುಮ್ಮನೆ ಕಿರಿಚುತ್ತಾ ಇದೆ.. ಆಫ಼್ ಮಾಡಿಡು’ ಅಂತ. ಪಕ್ಕದಲ್ಲಿದ್ದ ನನ್ನ ಹೆಂಡತಿ ಮೊಣಕೈಯಿಂದ ನನ್ನ ಜೋರಾಗಿ ತಿವಿದು ಹೇಳಿದಳು ’ಅಲಾರಂ ಗಡಿಯಾರ ನಿಮ್ಮ ಪಕ್ಕ ಇರೋದು.. ನೀವೇ ಆಫ಼್ ಮಾಡಿ’ ಅಂತ. ಆಗಲೇ ಗೊತ್ತಾಗಿದ್ದು ಕದಂಬದ ಊಟ ಒಂದು ಕನಸು ಅಂತ. ಕನಸಿನಲಿ ಊಟಕ್ಕೆಂದು ಎತ್ತಿದ ಕೈಯನ್ನು ಈಗ ಅಲಾರಂ ಗಡಿಯಾರದ ಮೇಲೆ ಬಡಿದು ಶಬ್ದ ನಿಲ್ಲಿಸಿದೆ.

ಇನ್ನೇನು ದಿನ ಆರಂಭ ’ಫ಼್ಲಾಪ್ ಶೋ’ ಇಂದಲೇ ಅಂತ ಅಂದುಕೊಂಡು ಕಣ್ಣು ಉಜ್ಜುತ್ತಾ ಹಾಗೇ ಎದ್ದು ಹೋಗಿ ಬಚ್ಚಲು ಮನೆಯಲ್ಲಿ ಲೈಟು ಹಾಕಿ ಕಣ್ಣು ತೆರೆದೆ. ಹೆದರಿ ಕಿಟಾರನೆ ಕಿರುಚಬೇಕು ಅಂದುಕೊಂಡವನು ಹಾಗೆ ಸುಮ್ಮನಾದೆ. ಕಿರುಚಿದ್ದರೆ ಮಾನ ಹೋಗುವುದು ನಂದೇ ಅಂತ. ಯಾಕೆಂದರೆ ಕನ್ನಡಿಯಲ್ಲಿ ಕಂಡದ್ದು ನನ್ನ ಅರ್ಥಾತ್ ರಾಮಣ್ಣಿ ಸ್ವರೂಪಾನೇ !!! ಈ ದಿನದ ಕೆಟ್ಟ ಆಗು ಹೋಗುಗಳಿಗೆ ಯಾರನ್ನೂ ದೂಷಿಸುವಂತಿಲ್ಲ. ಯಾರಾದರೂ ’ಇವತ್ತು ಯಾರ ಮುಖ ನೋಡಿಕೊಂಡು ಎದ್ದೆ’ ಎಂದು ಕೇಳಿದರೆ ಮಾತ್ರ ಹೇಳುವ ಹಾಗಿಲ್ಲ !

ಬಾಗಿಲು ಭದ್ರವಾಗಿ ಹಾಕಿಕೊಂಡು ಹಲ್ಲು ಉಜ್ಜಿ ಬಾಯಿ ಮುಕ್ಕಳಿಸಿ ಶಬ್ದವಾಗದ ಹಾಗೆ ಉಗಿದೆ. ಶಬ್ದವಾದರೆ, ನಿದ್ರಾಭಂಗವಾಯಿತೆಂದು ಅವಳ ಕೈಯಲ್ಲಿ ಉಗಿಸಿಕೊಳ್ಳಬೇಕಾಗುತ್ತೆ, ಅದಕ್ಕೆ. ಮೈಮೇಲೆ ರಕ್ಷಾಕವಚದಂತಿದ್ದ ಒಂದೆಳೆ ದಪ್ಪನೆಯ ಕೊಳೆಯನ್ನು ಸ್ನಾನ ಮಾಡಿ ತೊಳೆದು, ಕನ್ನಡಿ ಮುಂದೆ ನಿಲ್ಲಲು, ನನ್ನ ರೂಪಿಗೆ ನಾನೇ ಸೋತೆ. ನನ್ನ ರೂಪಿಗೆ ಮನ ಸೋತು ನನ್ನ ಬಳಿ ಬರುವ ಇನ್ನೊಂದು ಜೀವಿ ಅಂದರೆ, ಅದು ಸೊಳ್ಳೆ ಮಾತ್ರ.

ನಂತರ ಅಡಿಗೆ ಮನೆಗೆ ನೆಡೆದು, ಲೈಟಾಗಿ ಒಂದು ಸಣ್ಣ ತಂಬಿಗೆ ಕಾಫಿ ಮಾಡಿ ಸಶಬ್ದವಾಗಿ ಕುಡಿದು, ಹಿಂದಿನ ದಿನದ ಉಪ್ಪಿಟ್ಟು ತಿಂದು, ಬಹಳ ಹಸಿದಿದ್ದ ಹೊಟ್ಟೆಯನ್ನು ಸರಿದಾರಿಗೆ ತಂದೆ. ಯಾಕೋ ಇತ್ತೀಚೆಗೆ ಯಾವ ಪ್ಯಾಂಟೂ ಸರಿ ಇಲ್ಲ. ಹೊಟ್ಟೆಗೆ ಬಿಗಿಯುತ್ತೆ. ಏನು ಮಾಡೊದು ನಾವು ತಿನ್ನೋದು ಅನ್ನ ನೋಡಿ ಅದಕ್ಕೆ. ತಿಂದ ಅನ್ನ ಭಾರ ಹೆಚ್ಚಿ, ಸೀದ ಹೊಟ್ಟೆಗೆ ನೆಡೆದು ಅಲ್ಲೇ ಅರೆಸ್ಟ್ ಆಗಿ ಬಿಡುತ್ತೆ. ಹಾಗಾಗಿ ನಮಗೆ ಕೈ-ಕಾಲು ಸಣ್ಣ ಹೊಟ್ಟೆ ದಪ್ಪ !!

ಸರಿ ಇನ್ನೇನು, ಹಿಂದಿನ ದಿನವೇ ತುಂಬಿಸಿದ್ದ ಡಬ್ಬಿ (ಗಳು) ತಂಗಳಡಬ್ಬಿಯಿಂದ ಹೊರ ತೆಗೆದುಕೊಂಡು ಮನೆಯಿಂದ ಹೊರಟೆ. ನನಗೆ ದಾರಿಯಲ್ಲಿ ನೆಡೆದು ಹೋಗುವಾಗ ಸುಮ್ಮನೆ ಹೋಗಲು ಆಗಲ್ಲ. ಸುತ್ತಲೂ ಏನು ನೆಡೆಯುತ್ತಿದೆ ಎಂದು ನನ್ನ ಪಂಚೇಂದ್ರಿಯಗಳು ಸದಾ ತೆರೆದಿರುತ್ತದೆ. ಯಾರದೋ ಮನೆಯ ಬಾಗಿಲು ತೆಗೆದಿತ್ತು. ಮನೆಯಿಂದ ಘಮ ಘಮನೆ ಒಗ್ಗರಣೆ ವಾಸನೆ ಬರುತ್ತಿತ್ತು. ಮನೆ ಯಜಮಾನ ಪುಣ್ಯ ಮಾಡಿದ್ದ, ಬಿಸಿ ಬಿಸಿ ಊಟ ತೆಗೆದುಕೊಂಡು ಹೋಗುವುದಕ್ಕೆ ಎಂದು ಅಂದುಕೊಳ್ಳುತ್ತಿದ್ದಂತೆಯೇ, ಮನೆಯಾಕೆ ಟ್ರಿಮ್ಮಾಗಿ ಡ್ರಸ್ ಮಾಡಿಕೊಂಡು ಮನೆಯಿಂದ ಹೊರಟಳು. ಹಿಂದೆಯೇ ಬಂದ ಆಕೆಯ’ ಲುಂಗಿ ಉಟ್ಟ ಗಂಡ’ ಗೇಟ್ ಹಾಕಿಕೊಂಡು ಒಳಗೆ ಹೋಗಿ ಬಾಗಿಲು ಹಾಕಿಕೊಂಡ !! ಪತ್ನಿಯೇ ಪ್ರತ್ಯಕ್ಷ ದೈವ.

ಸೈಕಲ್ಲಿನ ಮೇಲೆ ಸೊಪ್ಪು ಮಾರುವ ತಲೆನರೆತ ಮುದುಕ, ಗಾಡಿನೂಕಿಕೊಂಡು ತರಕಾರಿ ಮಾರುವ ಹುಡುಗ ಹೀಗೇ ಹತ್ತುಹಲವಾರು ಜನ ತಮ್ಮ ಹೊಟ್ಟೆಹೊರೆಯಲು ಇನ್ನೊಬರ ಹೊಟ್ಟೆ ತುಂಬಿಸುವ ಮಂದಿ, ನನ್ನ ದಿನನಿತ್ಯದ ಖಾಯಂ ದಾರಿಹೋಕರು. ಹಾದು ಹೋದಂತೆ ಕಾಕಾ ಅಂಗಡಿ ಸಿಕ್ಕಿತು. ಇನ್ನೂ ಸರಿಯಾಗಿ ಮುಖವೂ ತೊಳೆಯದ ಹಲವಾರು ಸುಂದರ ಕರಿವದನಗಳು ಕಾಕಾ ಅಂಗಡಿಯ ಟೀ ಕುಡಿಯುತ್ತಾ ಕುಳಿತಿದ್ದರು. ಮಗನ ಡಬ್ಬಿಗೆ ಬ್ರೆಡ್ ಇಡಲು ಕಾಕಾ ಅಂಗಡಿಯ ಬ್ರೆಡ್ ತೆಗೆದುಕೊಂಡು ಧಡಗುಟ್ಟುತ್ತಾ ಹೊರಟ ಹೆಂಗಸು ನನ್ನನ್ನು ಹೆಚ್ಚೂ ಕಮ್ಮಿ ನೂಕಿಕೊಂಡೇ ಹೋದಳು. ಎಷ್ಟೋ ಸಾರಿ ಅನ್ನಿಸುತ್ತೆ ಜನರಿಗೆ ನಾನು ಇರುವುದೇ ಕಾಣುವುದಿಲ್ಲ ಅಂತ. ನನ್ನ ಸ್ನೇಹಿತ ಕೇಳ್ತಾನೆ ’ಅಲ್ವೋ ಅಷ್ಟು ತಿಂತೀಯಲ್ಲ, ಎಲ್ಲ ಎಲ್ಲಿ ಹೋಗುತ್ತೆ’ ಅಂತ. ನನಗೆ ಗೊತ್ತಿದ್ದರಲ್ವೇ ಅವನಿಗೆ ಹೇಳಲಿಕ್ಕೆ. ಒಮ್ಮೆ ಹೀಗೇ, ನಮ್ಮ ಆಫ಼ೀಸಿನಲ್ಲಿ ’ರಕ್ತದಾನ ಶಿಬಿರ’ ಏರ್ಪಡಿಸಿದ್ದರು. ಸರಿ ನಾನೂ ಹೋದೆ. ಅಲ್ಲಿದ್ದ ನಿರ್ವಾಹಕ ನನ್ನ ಬಳಿ ಬಂದು, ಅನುಕಂಪದಿಂದ ಹೇಳಿದ ’ಇದು ರಕ್ತ ತೆಗೆದುಕೊಳ್ಳುವ ಶಿಬಿರ, ಕೊಡುವುದಕ್ಕಲ್ಲ, ಸಾರಿ’ ಅಂತ. ಅಂದೇ ಕೊನೆ, ಮತ್ತೊಮ್ಮೆ ಆ ಪ್ರಯತ್ನ ಮಾಡಲಿಲ್ಲ.

ಸರಿ, ಬಸ್ಸು ಬಂತು, ಹತ್ತಿ ನಾನು ಹೋಗಬೇಕಾದ ಸ್ಥಳಕ್ಕೆ ಟಿಕೀಟು ಕೊಂಡು ಸುಮ್ಮನೆ ಯಾಕೆ ಟೈಮ್ ವೇಸ್ಟೂ ಅಂತ ಚೂಯಿಂಗ್ ಗಂ ಜಗಿಯುತ್ತಾ ಸಾಗಿದೆ. ಹಾದಿಯುದ್ದಕ್ಕೂ ಹತ್ತು ಹಲವು ರೆಸ್ಟೋರೆಂಟ್’ಗಳು ಕಣ್ಣಿಗೆ ಬಿತ್ತು. ಆ ಪಾರ್ಟಿ ಈ ಪಾರ್ಟಿ ಅಂತ ಹಲವಾರು ರೆಸ್ಟೋರೆಂಟ್’ಗಳಿಗೆ ನುಗ್ಗಿದ್ದೇನೆ. ಅದಕ್ಕೆ ನನ್ನ ಪತ್ನಿ, ಅದೇ ವಿಶಾಲೂ, ಒಮ್ಮೆ ಕೇಳಿದ್ದಳು ’ಅಲ್ಲಾ, ಬರೀ ನೀವೇ ತಿಂದುಕೊಂಡು ಬಂದು ಅಲ್ಲಿಗೆ ಹೋಗಿದ್ದೆ ಇಲ್ಲಿಗೆ ಹೋಗಿದ್ದೆ ಅಂತ ಹೇಳ್ತೀರಲ್ಲಾ, ನನ್ನನ್ನೂ ಕರೆದುಕೊಂಡು ಹೋಗೋದು ತಾನೇ?’ ಅಂತ. ಅದಕ್ಕೆ ನಾನು ಹೇಳಿದ್ದೆ ’ಯಾರಾದರೂ ಕೊಡಿಸಿದರೆ ತಿನ್ನೋಕೆ ಚೆನ್ನ. ನಾವೇ ಹೋಗಿ ತಿನ್ನೋದಕ್ಕೆ ಚೆನ್ನಾಗಿರೋಲ್ಲ’ ಅಂತ.

ಆಫೀಸ್ ತಲುಪಿ ಒಂದು ಘಂಟೆ ಕೆಲಸ ಮಾಡುತ್ತಿದ್ದಂತೆ ಒಂದು ರೀತಿ ಸಂಕಟ. ಏನೋ ದು:ಖ, ಉಮ್ಮಳಿಸಿಬಂದಂತೆ. ಇಲ್ಲ, ನನಗೇನೂ ಆಗಿಲ್ಲ. ಕಾಫಿ ಕುಡಿಯಬೇಕು ಅನ್ನಿಸಿದಾಗ ಹೀಗೆ ಆಗುವ ಸಂಭವವಿದೆ ! ಸರಿ ಎದ್ದು ನೆಡೆದು ಕಾಫೀ ರೂಮಿಗೆ ಹೋಗಿ, ಬಿಟ್ಟಿ ಕಾಫ಼ಿಯನ್ನು ಲೋಟದ ತುಂಬ ತುಂಬಿಕೊಂಡು ಹೊರಟೆ. ಅಲ್ಲೇ ಇಬ್ಬರು ಹೆಂಗಸರು ಸಿಕ್ಕಾಪಟ್ಟೆ ನಗುತ್ತಾ ಮಾತನಾಡುತ್ತಿದ್ದರು. ’ಮಧ್ಯೆ ಮಧ್ಯೆ ಪಾನೀಯಂ ಸಮರ್ಪಯಾಮಿ’ ಅಂತ ಕೋಕ್ ಕುಡಿಯುತ್ತಲಿದ್ದರು. ಅದೇನು ಬೆಳಗಿನ ಹೊತ್ತಲ್ಲಿ ಈ ರೀತಿ ಮಾತನಾಡುತ್ತ ನಿಲ್ಲುವುದೇ, ಟೈಮ್ ಸೆನ್ಸ್ ಇಲ್ಲ ಜನಕ್ಕೆ ಎಂದು ಅಂದುಕೊಂಡು ಮುಂದೆ ಸಾಗಲು, ಸುಂದರೇಶ ಸಿಕ್ಕ.

ಮುಖ ಯಾಕೊ ರಸ ತೆಗೆದ ಕಬ್ಬಿನಜಲ್ಲೆಯಂತೆ ಇತ್ತು. ಅಲ್ಲೇ ನಿಂತು, ಏನೆಂದು ವಿಚಾರಿಸಿದೆ. ನೆನ್ನೆ ಯಾವುದೋ ಕೆಟ್ಟ ಹೋಟಲ್’ನಲ್ಲಿ ಊಟ ಮಾಡಿದನಂತೆ. ಆ ಊಟ ಬೆಳಗಿನವರೆಗೂ ಜೀರ್ಣವಾಗಲು ಪ್ರಯತ್ನಿಸಿ ಸೋತು ಕೊನೆಗೆ ಇವನ ಮೇಲೆ ದಾಳಿ ಮಾಡಿದೆ. ಆಫ಼ೀಸಿಗೆ ಬಂದ ಅರ್ಧ ಘಂಟೆಯಲ್ಲಿ ನಾಲ್ಕು ಬಾರಿ ಟಾಯ್ಲೆಟ್ ದರ್ಶನವಾಯಿತಂತೆ. ನಾನು ಸಮಾಧಾನ ಮಾಡಿದೆ ’ಅದೆಲ್ಲ ತಲೆ ಹಚ್ಚಿಕೊಳ್ಳಬೇಡ, ಕೆಲಸದ ಕಡೆ ಗಮನ ಕೊಡು’ ಅಂತ. ನಾನೇನು ತಪ್ಪು ಹೇಳಿದೆನೋ ಗೊತ್ತಾಗಲಿಲ್ಲ, ಸುಂದರೇಶ ಮಾತ್ರ ತನ್ನ ಸಂಕಟದಲ್ಲೂ ಕೆಟ್ಟ ನೋಟ ಬೀರಿ ಧಡ ಧಡ ನೆಡೆದ, ಟಾಯ್ಲೆಟ್’ಗೆ.

ಮತ್ತೆ ಸೀಟಿನ ಮೇಲೆ ಕಾಫಿ ಹೀರುತ್ತ ಕುಳಿತೆ. ಸುಮ್ಮನೆ ಕಾಫ಼ಿ ಕುಡಿಯಲಿಕ್ಕೆ ಆಗುತ್ತ ? ಅದಕ್ಕೇ, ಡ್ರಾ’ನಲ್ಲಿದ್ದ ಪಾರ್ಲೆ-ಜಿ ಬಿಸ್ಕೇಟ್ ಅನ್ನು ಅದ್ದಿಕೊಂಡು ಅರ್ಧ ಪೊಟ್ಟಣ ಖಾಲಿ ಮಾಡುವ ಹೊತ್ತಿಗೆ ಕಾಫಿ ಥಣ್ಣಗೆ ಆಗಿತ್ತು. ಸರಿ, ಚೆಲ್ಲಲಿಕ್ಕೆ ಮತ್ತೆ ಯಾರು ಎದ್ದು ಹೋಗ್ತಾರೆ ಎಂದು ಹಾಗೇ ಕುಡಿದೆ. ಈ ವಿಶೇಷ ಗುಣದಿಂದಾಗಿ ಈಗ ಏನಾಗಿದೆ ಅಂದರೆ, ನಮ್ಮ ಮನೆಯಲ್ಲಿ ಏನಾದರೂ ಅನ್ನ ಮಿಕ್ಕರೆ ನನ್ನ ಕೇಳಿ, ನನಗೂ ಬೇಡ ಅಂದರೆ ತೊಟ್ಟಿಗೆ ಹಾಕುತ್ತಾರೆ. ನನಗಿಂತ ಮುಂಚೆ ನಮ್ಮ ಪಕ್ಕದ ಮನೆ ಟಾಮಿಗೆ ಕೇಳ್ತಾರೇನೋ ಗೊತ್ತಿಲ್ಲ !

ಮಧ್ಯಾನ್ನ ಹನ್ನೆರಡೂವರೆ ಸಮಯ. ಹೊಟ್ಟೆ ಚುರುಗುಟ್ಟಹತ್ತಿತು. ಸೊಪ್ಪು-ಕಾಳು ಹುಳಿ ಅನ್ನ, ಸಣ್ಣ ಡಬ್ಬಿಯಲ್ಲಿ ಕರಿದ ಮೆಣಸಿನಕಾಯಿ ಹಾಗೂ ಕವರಿನಲ್ಲಿದ್ದ ಹಪ್ಪಳ ಹೊರತೆಗೆದೆ. ಒಂದು ಚೂರೂ ಬಿಡದೆ ಎಲ್ಲವನ್ನು ತಿಂದು ಕಡೆಯಲ್ಲಿ ಮೊಸರನ್ನ ಮುಗಿಸಿ, ಸಣ್ಣಗೆ ತೇಗಿ. ನೀರು ಕುಡಿದೆ. ಇಂದಿನ ಲಂಚ್ ಆಯಿತು. ಹಾಗೇ ಸಣ್ಣ ವಾಕ್ ಹೊರಟು ಮತ್ತೆ ಗೂಡು ಸೇರಿದೆ. ಊಟವಾದ ಮೇಲೆ ಇರಲಿ ಅಂತ ಸ್ವಲ್ಪ ಅಡಿಕೆ ಬಾಯಿಗೆ ಹಾಕಿದೆ. ಒಂದು ಘಂಟೆ ಹೊತ್ತು ಕೆಲಸ ಮಾಡುತ್ತಿದ್ದಂತೆ ಮತ್ತೆ ಅದೇ ರೀತಿ ಸಂಕಟ ಶುರುವಾಯಿತು. ಎದ್ದು ಹೋಗಿ ಚಹಾ ತಯಾರಿಸಿಕೊಂಡು ಕುಳಿತೆ. ಬಿಸಿ ಬಿಸಿ ಚಹಾ ಸೇವನೆ ಆದ ಮೇಲೆ ಮನಸ್ಸು ಸ್ವಲ್ಪ ಫ್ರೆಶ್ ಆಯಿತು. ನಾಲ್ಕು ಘಂಟೆ ಹೊತ್ತಿಗೆ ಏನಾದರೂ ಬಾಯಾಡಿಸಬೇಕೆನ್ನಿಸಿ ಮತ್ತೆ ಡ್ರಾ ತೆಗೆದು ನೋಡಿದೆ. ಬೆಳಿಗ್ಗೆ ತಿಂದ ಬಿಸ್ಕೇಟಿನ ಉಳಿದರ್ಧ ಪ್ಯಾಕೆಟ್ ನನ್ನತ್ತಲೇ ನೋಡುತ್ತ ’ಖಂಡವಿದೆಕೋ ಮಾಂಸವಿದೆಕೋ ಗುಂಡಿಗೆಯ ಬಿಸಿರಕ್ತವಿದೆಕೋ’ ಎಂದು ಆಕ್ರಂದನ ಮಾಡುತ್ತಿದೆಯೇನೋ ಅನ್ನಿಸಿ ಥಟ್ಟನೆ ಡ್ರಾ ಮುಚ್ಚಿ, ಇನ್ನೊಂದು ಡ್ರಾ ತೆಗೆದೆ ! ಜೀವನದಲ್ಲಿ ಸ್ವಲ್ಪ ವೆರೈಟಿ ಇರಬೇಕು. ಬೆಳಿಗ್ಗೆ ತಿಂದದ್ದನ್ನೇ ಈಗಲೂ ತಿನ್ನಲಿಕ್ಕೆ ಆಗುತ್ತಾ?

ಮತ್ತೊಂದು ಡ್ರಾನಲ್ಲಿದ್ದ ಚಿಪ್ಸ್ ತೆಗೆದು ಒಂದು ಪ್ಲೇಟಿಗೆ ಸುರಿದುಕೊಂಡು ತಿನ್ನುತ್ತ ಮಧ್ಯೆ ಮಧ್ಯೆ ಕೆಲಸವೂ ಮಾಡುತ್ತಿದ್ದೆ !! ಸಂಜೆ ಮನೆಗೆ ಹೊರಟೆ. ಬಸ್ ಸ್ಟಾಪಿಗೆ ನೆಡೆದರೆ ಅಲ್ಲಿ ಹೊರೆ ಜನ. ದಿನವೂ ಎಲ್ಲರೂ ಎಲ್ಲಿ ಹೋಗ್ತಾರೋ ಗೊತ್ತಿಲ್ಲ. ಇನ್ನು ನನಗೆ ಬಸ್ ಸಿಕ್ಕು ಮನೆಗೆ ತಲಪುವುದು ಕನಿಷ್ಟ ಇನ್ನೊಂದು ಘಂಟೆಯದರೂ ಆಗುತ್ತದೆ. ಗಾಡಿ ಕೊಳ್ಳೊಣ ಅಂದರೆ, ವಿಶಾಲೂ ಹೇಳ್ತಾಳೆ "ಗಾಳಿ ಜೋರಾಗಿ ಬೀಸಿದರೆ ನೀವೇ ಹಾರಿಹೋಗ್ತೀರಾ, ಈ ಬಾಡಿಗೆ ಗಾಡಿ ಬೇಡ. ಭದ್ರವಾಗಿ ಬಸ್’ನಲ್ಲಿ ಹೋಗಿ/ಬನ್ನಿ ಅಂತ" ಸರಿ, ಸುಮ್ಮನೆ ನಿಲ್ಲುವುದು ಹೇಗೆ. ಕಡಲೆಕಾಯಿ ಕೊಂಡು ಸಿಪ್ಪೆಯನ್ನು ಸುತ್ತಲೂ ಹಾಕಿಕೊಂಡು ಒಂದು ರೀತಿ ನೆಮ್ಮದಿಯಾಗಿ ಸ್ವಾತಂತ್ರ್ಯವನ್ನು ಅನುಭವಿಸುತ್ತ ಟೈಮ್ ಪಾಸ್ ಮಾಡುತ್ತಿದ್ದೆ. ಕೊನೆಯ ಬೀಜ ಇನ್ನೇನು ಬಾಯಿ ಹಾಕಿಕೊಳ್ಳಬೇಕು ಅನ್ನುವಾಗ ಯಾರೋ ಹಿಂದಿನಿಂದ ಗುದ್ದಿ ಹಾದು ಹೋದರು. ಅವರೇನು ’ಸಾರಿ’ ಅಂದರೋ ’ಸಾಯ್ರೀ’ ಅಂದರೋ ಅರ್ಥವಾಗಲಿಲ್ಲ !! ಒಂದು ಸೇರು ಕಡ್ಲೇಕಾಯಿ ತಿಂದಿದ್ದರೂ ಈ ಒಂದು ಬೀಜ ಕೈಜಾರಿ ಹೋಯ್ತಲ್ಲ ಅನ್ನೋ ಸಂಕಟದಲ್ಲಿ ಅದನ್ನು ತೆಗೆದುಕೊಳ್ಳೋಣಾ ಅಂತ ಬೀದಿ ಇಳಿದೆ. ಗಕ್ಕನೆ ಬ್ರೇಕ್ ಹಾಕಿದ ಬೈಕುವಾಲ ಗದರಿದ ’ಸಾಯೋಕೆ ನನ್ನ ಗಾಡೀನೇ ಬೇಕೇನ್ರೀ. ಅಲ್ಲಿ ನೋಡಿ ಲಾರಿ ಬರ್ತಿದೆ’ ಅಂತ ಬೈದು, ಕಡಲೇ ಬೀಜದ ಮೇಲೇ ಹೋಗುವುದೇ? ನನ್ನ ಹೃದಯದ ಮೇಲೇ ಹಾದು ಹೋದ ಹಾಗಾಯ್ತು. ಥತ್ ಪಾಪಿ ಎಂದುಕೊಂಡು ನಂತರ ಬಂದ ಬಸ್ಸಿಗೆ ಹತ್ತಿ, ಮನೆ ತಲುಪಿದೆ.

ಕೈ-ಕಾಲು ಮುಖ ತೊಳೆದು ಲೈಟಾಗಿ ಕಾಫಿ ಕುಡಿದು, ಕರಿದ ಅವಲಕ್ಕಿಯನ್ನು ಬಾಯಲ್ಲೇ ಮೆತ್ತಗೆ ಮಾಡಿಕೊಂಡು ತಿಂದೆ. ಗರಿಗರಿ ಅವಲಕ್ಕಿ ಕಡಿದು ತಿಂದರೆ ಟೀವಿಯ ಧಾರಾವಾಹಿ ಡೈಲಾಗ್ ಕೇಳಿಸಲಿಲ್ಲ ಅಂತ ಜನ ಬೈದಾರೂ (ಹಿಡ್ಕೊಂಡು ಹೊಡೆದಾರು) ಅಂತ. ಇಬ್ಬರು ಹೆಂಡಿರು ಪಕ್ಕದಲ್ಲಿದ್ದರೂ ಅಂದು, ಟೀವಿ ಇರದಿದ್ದುರಿಂದ ಸುಧಾಮ ಕೊಟ್ಟ ಅವಲಕ್ಕಿಯನ್ನು ಕೃಷ್ಣನು ಆರಾಮವಾಗಿ ತಿನ್ನಲಿಕ್ಕೆ ಆಯಿತು. ನಾನೂ ಸ್ವಲ್ಪ ಹೊತ್ತು ಹಾಗೇ ಟೀವಿ ಮುಂದೆ ಕೂತೆ. ಅವಲಕ್ಕಿ ಖಾರವಾಯ್ತೋ ಏನೋ ಕಣ್ಣಲ್ಲಿ ಹಾಗೇ ನೀರು ಬಂತು. ’ಎಂತಹ ಹೆಂಗರಳು ನಿಮ್ಮ ಯಜಮಾನರದ್ದು’ ಅಂತ, ದಿನವೂ ನಮ್ಮ ಮನೆಗೆ ಸಂಜೆ ಬಂದು ವಕ್ಕರಿಸುವ ಅನಸೂಯಾ ಬಾಯಿ ನುಡಿದರು. ಅವರ ಮನೆಯಲ್ಲಿ ಮೊಮ್ಮಗ ಓದಿಕೊಳ್ಳಬೇಕು ಅಂತ ನಮ್ಮ ಮನೆಗೆ ಸಂಜೆ ಬಂದು ವಕ್ಕರಿಸುವುದು ಶುರು ಮಾಡಿ ವರ್ಷವಾಯಿತು. ಕಣ್ಣಲ್ಲಿ ನೀರು ತುಂಬಿದ್ದರಿಂದ ನನ್ನ ಮನೆಯಾಕೆ ನನ್ನನ್ನು ನೋಡಿದ ಪರಿ ಅರ್ಥವಾಗಲಿಲ್ಲ. ಕಣ್ಣು ವರೆಸಿಕೊಂಡು ಮತ್ತೆ ಟೀವಿಯ ನೋಟ ಮುಂದುವರೆಸಲು, ಹತ್ತು ಹಲವು ರೀತಿಯ ಅಹಾರ ಪದಾರ್ಥಗಳ ಜಾಹೀರಾತುಗಳು, ಹಸಿವನ್ನು ಬಡಿದೆಬ್ಬಿಸಿತು. ಒಂಬತ್ತೂವರೆಗೆ ಊಟ ಮಾಡಿ, ಆರಿಂಚು ಉದ್ದದ ಬಾಳೇಹಣ್ಣನು ತಿಂದು ಸ್ವಲ್ಪ ಹೊತ್ತು ಕೂತು, ನನ್ನ ಹೆಂಡತಿಯ ಬಾಯಲ್ಲಿ ದಿನದ ಆಗು ಹೋಗುಗಳ ವರದಿ ಕೇಳಿ, ನಂತರ ನನ್ನ ರೂಮಿಗೆ ಹೋದೆ.

ಡೈರಿ ಬರೆಯುವ ಹವ್ಯಾಸ ಉಳ್ಳ ನಾನು, ಪೆನ್ನು ಹಿಡಿದು ಡೈರಿಯ ಹಾಳೆ ತೆಗೆದು, ಏನು ಮಾಡಿದೆ ಇಂದು, ಎಂದು ಯೋಚಿಸಿದಾಗ, ಕನಸಿನಲ್ಲಿ ಕಂಡ ಊಟದಿಂದ ಹಿಡಿದು ಈಗ ತಾನೇ ತಿಂದ ಬಾಳೇಹಣ್ಣಿನವರೆಗೂ, ಬರೀ ತಿಂದಿದ್ದು ಬಿಟ್ಟರೆ ಒಬ್ಬರಿಗೆ ಒಂದು ಉಪಕಾರ ಮಾಡಿದ ಕೆಲಸ ನೆನಪಿಗೆ ಬರಲಿಲ್ಲ. ಇಲ್ಲಿಯವರೆಗೂ ಎಷ್ಟು ಬಾರಿ ತಿಂದೆ ಎಂದು ಯೋಚಿಸಿದರೆ, ನಾನೇನು ತಿನ್ನಲಿಕ್ಕೇ ಹುಟ್ಟಿದ್ದೀನೇನೋ ಅಂತ ಅನ್ನಿಸಿತು. ’ಬದುಕಲಿಕ್ಕೆ ತಿನ್ನು, ತಿನ್ನಲಿಕ್ಕೆ ಬದುಕಿರಬೇಡ’ ಅಂತ ಯಾರೋ ಮಹಾನುಭಾವರು ಹೇಳಿದ್ದಾರೆ. ಕನಿಷ್ಟ ನಾಳೆಯಿಂದಾದರೂ ದಿನಕ್ಕೊಂದು ಉಪಕಾರ ಮಾಡಬೇಕು ಎಂದುಕೊಂಡು ಹಾಸಿಗೆಗೆ ಬಂದು ಉರುಳಿದೆ,

ಮನೆಯಾಕೆ ನುಡಿದಳು ’ನಾಳೆ ಏಕಾದಶಿ. ರಾತ್ರಿ ಹೊತ್ತು ಮಾತ್ರ ತಿಂಡಿ ಅಷ್ಟೆ. ಮರೆತು ಆಫೀಸಿನಲ್ಲಿ ಏನಾದರೂ ತಿಂದುಬಿಟ್ಟೀರಾ’ !!

ದಿನಕ್ಕೊಂದು ಉಪಕಾರ ಕಾರ್ಯಕ್ರಮ ಒಂದು ದಿನ ಮುಂದಕ್ಕೆ ಹೋಗಿದೆ !!!