ಏಮಿ ಡೈಕೆನ್ : ಅಸೀಮ ಮನೋಬಲದ ಸಾಹಸಿ

ಏಮಿ ಡೈಕೆನ್ : ಅಸೀಮ ಮನೋಬಲದ ಸಾಹಸಿ

ಏಮಿ ವಾನ್ ಡೈಕೆನ್ (Amy Van Dyken) ಎಂಬ ಮಹಿಳೆಯ ಬಗ್ಗೆ ನೀವು ಕೇಳಿರುವಿರಾ? ಬಹುತೇಕರು ಇಲ್ಲ ಎಂದೇ ಉತ್ತರ ಕೊಡುವರು. ಇತ್ತೀಚೆಗೆ ನಾನು ಮನೆಯಲ್ಲಿದ್ದ ಹಳೆಯ ‘ಕಸ್ತೂರಿ' ಪತ್ರಿಕೆಯನ್ನು ಗಮನಿಸುತ್ತಿದ್ದಾಗ ಡಾ.ಕೆ.ಚಿದಾನಂದ ಗೌಡ ಎಂಬವರು ಬರೆದ ‘ಎಮಿ ಡೈಕೆನ್' ಅವರ ಬಗೆಗಿನ ಕಿರು ಲೇಖನವನ್ನು ಗಮನಿಸಿದೆ. ಅದನ್ನು ಓದಿ ಅವರ ಮನೋಸ್ಥೈರ್ಯದ ಕಾರ್ಯಗಳನ್ನು ಗಮನಿಸಿ ತುಂಬಾನೇ ಪ್ರಭಾವಿತನಾದೆ. ಎಮಿ ಡೈಕೆನ್ ಬಗ್ಗೆ ಅಂತರ್ಜಾಲದಲ್ಲಿ ಜಾಲಾಡಿದೆ. ಹಲವಾರು ಮಾಹಿತಿಗಳು ಸಂಗ್ರಹವಾದುವು. ಎಮಿ ಡೈಸನ್ ಬಗ್ಗೆ, ಅವರ ಸಾಧನೆಗಳ ಬಗ್ಗೆ, ಅವರಿಗಾದ ಭೀಕರ ಅಪಘಾತ, ನಂತರದ ಬದುಕು ಬಗ್ಗೆ ಅವರ ಮಾತುಗಳಲ್ಲೇ ಕೇಳುವ ಬನ್ನಿ. 

***

“ನಾನೀಗ ಅಪಘಾತದ ಮೊದಲಿಗಿಂತಲೂ ಗಟ್ಟಿ ವ್ಯಕ್ತಿ ಆಗಿದ್ದೇನೆ" ಎಂದು ನಾನು ಚೀರಿ ಚೀರಿ ಹೇಳಿದೆ. ನನ್ನ ಮಾತುಗಳು ಕೇಳುತ್ತಿದ್ದವರು ಇವಳಿಗೆ ಹುಚ್ಚೇ ಹಿಡಿಯಿತೇನೋ ಎಂದು ಅನಿಸಿರಬಹುದು. ಆದರೆ ನಾನು ನನ್ನ ಮನಸ್ಸನ್ನು ಗಟ್ಟಿ ಮಾಡಿಕೊಂಡಿದ್ದೆ. ಆಸ್ಪತ್ರೆಯ ಹಾಸಿಗೆಯ ಮೇಲೆ ಎರಡು ತಿಂಗಳು ಕಳೆದ ನನಗೆ ಕೆಲವು ಧೃಢ ನಿರ್ಧಾರಗಳನ್ನು ತೆಗೆದುಕೊಂಡು ಇಂತಹ ಮಾತುಗಳನ್ನು ಆಡಲು ಸಾಧ್ಯವಾಯಿತು ಎಂದು ನನಗೆ ಈಗಲೂ ಅನಿಸುತ್ತಿದೆ. ಕೊಲರಾಡೋದ ಕ್ರೇಗ್ ಆಸ್ಪತ್ರೆಯಿಂದ ಬಿಡುಗಡೆಗೊಳ್ಳುವ ಸಮಯದಲ್ಲಿ ನಾನಾಡಿದ ಈ ಮಾತುಗಳು ಆ ಸಮಯದಲ್ಲಿ ಎಲ್ಲರಲ್ಲೂ ಆಶ್ಚರ್ಯವನ್ನು ಮೂಡಿಸಿದ್ದವು. ಆದರೆ ನನಗೆ ನನ್ನ ಮೇಲೆ ವಿಶ್ವಾಸ ಬೆಳೆದಿತ್ತು. ನಾನು ಬದುಕಿನಲ್ಲಿ ಏನಾದರೂ ಸಾಧಿಸಬಲ್ಲೆ ಎಂದು ಅನಿಸತೊಡಗಿತ್ತು. ಅದಕ್ಕಿಂತಲೂ ಜಾಸ್ತಿ ನನಗೇನು ಬೇಕಿತ್ತು. ಇದು ೨೦೧೪ರ ಕಥೆ. ನನ್ನ ಬಗ್ಗೆ ನಿಮಗೆ ತಿಳಿಯಬೇಕಾದರೆ ನಾವು ಇನ್ನೂ ಹಿಂದೆ ಹೋಗಬೇಕು. 

ನನ್ನ ಹೆಸರು ಏಮಿ ವಾನ್ ಡೈಕೆನ್. ನಾನು ಹುಟ್ಟಿದ್ದು ಫೆಬ್ರವರಿ ೧೫, ೧೯೭೩ರಲ್ಲಿ. ಬಾಲ್ಯದಲ್ಲಿ ನನಗೆ ಅಸ್ತಮಾ ಕಾಟ ತುಂಬಾನೇ ಜೋರಾಗಿತ್ತು. ನಾವಿರುವ ಸ್ಥಳವು ತುಂಬಾನೇ ತಂಪಾಗಿದ್ದುದರಿಂದ ನನಗೆ ಉಸಿರಾಡಲು ಯಾವಾಗಲೂ ಸಮಸ್ಯೆಯಾಗುತ್ತಿತ್ತು. ಇದಕ್ಕೆ ನಮ್ಮ ಕುಟುಂಬದ ವೈದ್ಯರು ಒಂದು ಪರಿಹಾರವನ್ನು ತಿಳಿಸಿದರು. ನೀರಿನಲ್ಲಿ ಈಜಾಡಲು ಶುರು ಮಾಡಿದರೆ ನಿನ್ನ ಅಸ್ತಮಾ ಖಂಡಿತವಾಗಿಯೂ ಹಿಡಿತಕ್ಕೆ ಬರುತ್ತದೆ ಎಂದು ಅವರು ತಿಳಿಸಿದಾಗ, ನಾನು ಈಜು ಕಲಿಯಲು ಪ್ರಾರಂಭಿಸಿದೆ. ಈಜು ಕಲಿಯುವಿಕೆಯಿಂದ ನನ್ನ ಶ್ವಾಸಕೋಶಗಳು ಬಲಯುತವಾದವು. ಇದರಿಂದ ನನ್ನ ಅಸ್ತಮಾ ಕಾಯಿಲೆ ಹಿಡಿತಕ್ಕೆ ಬಂತು. ಈಜು ನನಗೆ ಹೊಸ ಜೀವನ ನೀಡಿತು ಎಂದರೆ ತಪ್ಪಾಗಲಾರದು. ನನ್ನ ಆರೋಗ್ಯದ ಸಮಸ್ಯೆಗಳು ಪರಿಹಾರವಾದುವು. ನೀರಿನಲ್ಲಿ ದಿನಾಲೂ ಈಜುತ್ತಿದ್ದೆನಲ್ಲಾ, ನನಗೂ ಈಜಿನ ಮೇಲೆ ಆಸಕ್ತಿ ಕುದುರಿತು. ಮೊದಮೊದಲು ಆರೋಗ್ಯದ ಸುಧಾರಣೆಗೆ ಮಾಡುತ್ತಿದ್ದ ಈಜು ನಂತರದ ದಿನಗಳಲ್ಲಿ ನನಗೆ ಹೊಸದಾದ ಒಂದು ಲೋಕವನ್ನೇ ತೋರಿಸೀತು ಎಂದು ನಾನೂ ಅಂದಾಜು ಮಾಡಿರಲಿಲ್ಲ. 

ನನ್ನ ಈಜಿನ ವೇಗವು ಗಮನಾರ್ಹವಾಗಿ ಸುಧಾರಣೆಯಾಗುತ್ತಿತ್ತು. ಕಾಲೇಜು ಸ್ವರ್ಧೆಗಳಲ್ಲಿ ನಾನು ಯಾವಾಗಲೂ ಪ್ರಥಮಳಾಗಿಯೇ ಇದ್ದೆ. ನನ್ನ ದೇಹದ ಎತ್ತರವೂ ಇದಕ್ಕೆ ಪೂರಕವಾಗಿತ್ತು. ಆರು ಅಡಿ ಎತ್ತರವಿದ್ದುದರಿಂದ ನಾನು ಸುಲಭವಾಗಿ ಮತ್ತು ಸರಾಗವಾಗಿ ಈಜಾಡುತ್ತಿದ್ದೆ. ಬಟರ್ ಫ್ಲೈ ಮತ್ತು ಫ್ರೀ ಸ್ಟೈಲ್ ಈಜುಗಳು ನನ್ನ ಮೆಚ್ಚಿನ ಪ್ರಕಾರಗಳಾಗಿದ್ದವು. ೧೯೯೨ರ ಬೇಸಿಗೆ ಒಲಂಪಿಕ್ಸ್ ಗಾಗಿ ಅಮೇರಿಕಾ ತಂಡಕ್ಕೆ ಆಯ್ಕೆಯಾಗುವುದನ್ನು ನಾನು ಜಸ್ಟ್ ಮಿಸ್ ಮಾಡಿಕೊಂಡೆ. ಒಲಂಪಿಕ್ ಟ್ರಯಲ್ ಪಂದ್ಯದಲ್ಲಿ ನಾನು ೫೦ ಮೀಟರ್ ಫ್ರೀಸ್ಟೈಲ್ ಈಜಿನಲ್ಲಿ ನಾಲ್ಕನೆಯವಳಾಗಿ ಗುರಿ ಮುಟ್ಟಿದುದರಿಂದ ಆ ವರ್ಷದ ಒಲಂಪಿಕ್ ಟಿಕೆಟ್ ನನ್ನ ಕೈ ತಪ್ಪಿತ್ತು. ಆದರೆ ಈ ಸೋಲು ನನ್ನ ಮನಸ್ಥೈರ್ಯವನ್ನು ಕುಗ್ಗಿಸಲಿಲ್ಲ. ನಾನು ನನ್ನ ತರಭೇತಿಯನ್ನು ಇನ್ನಷ್ಟು ಕಠಿಣಗೊಳಿಸುತ್ತಾ ಬಂದೆ. ೧೯೯೪ರಲ್ಲಿ ನನ್ನ ಸಾಧನೆ ಅತ್ಯುನ್ನತ ಮಟ್ಟದಲ್ಲಿತ್ತು. ಇದನ್ನು ಗಮನಿಸಿ ನನಗೆ ಆ ವರ್ಷದ NCAA ವರ್ಷದ ಮಹಿಳಾ ಈಜು ಪಟು ಪ್ರಶಸ್ತಿ ನೀಡಿ ಗೌರವಿಸಲಾಯಿತು. ೧೯೯೫-೯೬ರಲ್ಲಿ ಅಮೇರಿಕಾದ ‘ಸ್ವಿಮ್ಮರ್ ಆಫ್ ದಿ ಇಯರ್’ ಪ್ರಶಸ್ತಿಯೂ ನನ್ನನ್ನು ಹುಡುಕಿಕೊಂಡು ಬಂತು.

ಆದರೆ ನನ್ನ ಗುರಿ ಇದ್ದುದು ೧೯೯೬ರ ಒಲಂಪಿಕ್ಸ್ ಪಂದ್ಯಾವಳಿಗಳ ಮೇಲೆ. ಯಾವ ಒಲಂಪಿಕ್ ಕೂಟವನ್ನು ೧೯೯೨ರಲ್ಲಿ ನಾನು ಕೂದಲೆಳೆಯ ಅಂತರದಲ್ಲಿ ಮಿಸ್ ಮಾಡಿಕೊಂಡೆನೋ, ೧೯೯೬ರಲ್ಲಿ ಅದರಲ್ಲಿ ಪಾಲ್ಗೊಳ್ಳುವ ಮೂಲಕ ಈಡೇರಿಸಿಕೊಳ್ಳಬೇಕು ಮತ್ತು ದೇಶಕ್ಕಾಗಿ ಪದಕಗಳನ್ನು ಗೆಲ್ಲಬೇಕೆಂಬ ಆಶೆ ತುಂಬಾನೇ ಇತ್ತು. ಅಟ್ಲಾಂಟಾದಲ್ಲಿ ಜರುಗಿದ ಈ ಒಲಂಪಿಕ್ ಕೂಟದಲ್ಲಿ ನಾನು ಈಜು ಸ್ಪರ್ಧೆಯಲ್ಲಿ ನಾಲ್ಕು ಸ್ವರ್ಣ ಪದಕಗಳನ್ನು ಮುಡಿಗೇರಿಸಿಕೊಂಡೆ. ನನ್ನ ಪ್ರತಿಜ್ಞೆಯನ್ನು ಈ ಮೂಲಕ ನಾನು ತೀರಿಸಿಕೊಂಡೆ. ಜನರೂ ನನ್ನನ್ನು ಗುರುತಿಸಲಾರಂಬಿಸಿದರು. ದೇಶಕ್ಕಾಗಿ ಸ್ವರ್ಣ ಗೆದ್ದದ್ದು ನನಗೂ ತುಂಬಾನೇ ಖುಷಿ ಕೊಟ್ಟಿತು.ಇದರಿಂದಾಗಿ ನನಗೆ ಹಲವಾರು ಪ್ರಶಸ್ತಿಗಳೂ, ಸನ್ಮಾನಗಳೂ ಲಭಿಸಿದವು. ನಾನು ‘ಗ್ಲಾಮರ್'ಪತ್ರಿಕೆಯ ಟಾಪ್ ೧೦ ಮಹಿಳಾ ಕ್ರೀಡಾಪಟುಗಳಲ್ಲಿ ಒಬ್ಬಳಾಗಿದ್ದೆ. ನನ್ನ ಲೇಖನಗಳು ಪತ್ರಿಕೆಯಲ್ಲಿ ಬಂದವು. 

೧೯೯೮ರಲ್ಲಿ ಪರ್ತ್ ನಲ್ಲಿ ನಡೆದ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ನಾನು ಮೂರು ಬಂಗಾರದ ಪದಕಗಳನ್ನು ಗೆದ್ದುಕೊಂಡೆ. ೨೦೦೦ ಸಿಡ್ನಿ ಒಲಂಪಿಕ್ಸ್ ನಲ್ಲಿ ೨ ಬಂಗಾರದ ಪದಕಗಳನ್ನು ಗೆದ್ದೆ. ದೇಶೀಯ ಈಜು ಮಂದ್ಯಾವಳಿಗಳಲ್ಲೂ ನಾನು ಹಲವಾರು ಪದಕಗಳನ್ನು ಗೆದ್ದುಕೊಂಡೆ. ೨೦೦೦ದ ಸಮಯಕ್ಕೆ ನನಗಿನ್ನು ಈಜು ಸಾಕು ಎಂದೆಣಿಸತೊಡಗಿತು. ನಾನು ಈಜು ಸ್ಪರ್ಧೆಗಳಿಂದ ನಿವೃತ್ತಿಯನ್ನು ತೆಗೆದುಕೊಂಡೆ. ರಾಷ್ಟ್ರೀಯ ಫುಟ್ಬಾಲ್ ಲೀಗ್ ನ ಆಟಗಾರ ಟಾಮ್ ರೌನ್ (Tom Rouen) ಜೊತೆ ನಾನು ವಿವಾಹ ಮಾಡಿಕೊಂಡೆ. ನಂತರದ ದಿನಗಳಲ್ಲಿ ನಾನು ನನ್ನ ಸಾಧನೆ ಮತ್ತು ಸಾಗಿ ಬಂದ ಹಾದಿಯ ಬಗ್ಗೆ ಉಪನ್ಯಾಸಗಳನ್ನು ನೀಡಲು ಪ್ರಾರಂಭಿಸಿದೆ. ರೇಡಿಯೋದಲ್ಲೂ ನಾನು ಕಾರ್ಯಕ್ರಮಗಳನ್ನು ನೀಡಿದೆ. ಹೀಗೆಯೇ ವರ್ಷಗಳು ಸಾಗತೊಡಗಿದವು.

೨೦೧೪ ನನ್ನ ಬದುಕಿನ ಕರಾಳ ವರ್ಷ. ಜೂನ್ ೬ರಂದು ನಾನು ಚಲಾಯಿಸುತ್ತಿದ್ದ ಎಟಿವಿ (All Terrain Vehicle- ATV) ವಾಹನ ಅಪಘಾತವಾಯಿತು. ಇದೊಂದು ವಿಶಿಷ್ಟ ವಾಹನ. ಆದರೆ ನಾನು ಇದನ್ನು ಚಲಾಯಿಸುವುದನ್ನು ಎಂಜಾಯ್ ಮಾಡುತ್ತಿದ್ದೆ. ಆದರೆ ದುರಾದೃಷ್ಟವಶಾತ್ ಆ ದಿನ ನನ್ನ ನಿಯಂತ್ರಣ ತಪ್ಪಿ ನನ್ನ ವಾಹನವು ತಡೆಗೋಡೆಗೆ ಬಡಿದು ಸುಮಾರು ೭-೮ ಅಡಿ ದೂರಕ್ಕೆ ನಾನು ಎಸೆಯಲ್ಪಟ್ಟೆ. ನನಗೆ ನೆನಪಿರುವುದಿಷ್ಟೇ. ನಾನು ಕಣ್ಣು ಬಿಟ್ಟಾಗ ಆಸ್ಪತ್ರೆಯಲ್ಲಿದ್ದೆ. ಆ ಅಪಘಾತದಿಂದ ನನ್ನ ಬೆನ್ನು ಮೂಳೆ ಮತ್ತು ಬೆನ್ನು ಹುರಿಗೆ ತೀವ್ರವಾದ ಏಟಾಗಿದ್ದುದರಿಂದ ಸೊಂಟದ ಕೆಳಗಿನ ಭಾಗದ ಸಂವೇದನೆ ಮತ್ತು ನಿಯಂತ್ರಣವನ್ನು ನಾನು ಕಳೆದುಕೊಂಡಿದ್ದೇನೆ ಎಂದು ವೈದ್ಯರು ತಿಳಿಸಿದರು. ಆ ಸಂದರ್ಭದಲ್ಲಿ ನಾನು ತೀವ್ರವಾಗಿ ಹತಾಶಳಾದೆ. ಆದರೆ ಮರುಕ್ಷಣವೇ ಆ ಶಾಕ್ ನಿಂದ ಚೇತರಿಸಿಕೊಂಡೆ. ನನ್ನ ಸೊಂಟದ ಕೆಳಗಿನ ಭಾಗಗಳು ಪಾರ್ಶ್ವವಾಯು ಪೀಡಿತವಾಗಿದ್ದವು. ನಾನು ಇನ್ನು ಜೀವನ ಪರ್ಯಂತ ಗಾಲಿ ಕುರ್ಚಿಯಲ್ಲೇ ನನ್ನ ಬದುಕನ್ನು ಸಾಗಿಸಬೇಕೆಂಬ ಕಹಿ ಸತ್ಯವನ್ನು ಅರಿತುಕೊಂಡೆ. ಎರಡು ತಿಂಗಳ ಚಿಕಿತ್ಸೆಯ ಬಳಿಕ ನಾನು ಆಸ್ಪತ್ರೆಯಿಂದ ಹೊರ ಬಂದಾಗ ನನ್ನ ಮನೋಬಲ ಅತ್ಯಂತ ಧೃಢವಾಗಿತ್ತು. ಅಪಘಾತದ ಮೊದಲಿಗಿಂತಲೂ ಈಗ ನಾನು ಗಟ್ಟಿಯಾಗಿದ್ದೇನೆ ಎಂದು ಅನಿಸತೊಡಗಿದೆ ನನಗೆ. ನಾನು ಈಗ ಕಾರನ್ನು ಚಲಾಯಿಸಿಕೊಂಡು ಹೋಗುತ್ತೇನೆ. ಮಿತ್ರರ ಜೊತೆ ಹೋಟೇಲ್ ಗಳಿಗೆ ಹೋಗುತ್ತೇನೆ, ನನ್ನ ಇಷ್ಟದ ಕಾಫಿಯನ್ನು ಸೇವಿಸುತ್ತೇನೆ. ಅಪಘಾತದ ಮೊದಲು ಏನೆಲ್ಲಾ ಮಾಡುತ್ತಿದ್ದೆನೋ ಅದನ್ನೆಲ್ಲಾ ಈಗಲೂ ಮಾಡುತ್ತಿದ್ದೇನೆ. ನನ್ನ ಮನೋಬಲ ಇನ್ನಷ್ಟು ಗಟ್ಟಿಯಾಗಿದೆ.

ನನ್ನಂತೆ ಅಸಹಾಯಕ ಸ್ಥಿತಿಯಲ್ಲಿರುವವರಿಗಾಗಿ ಔಷಧಿ ಕಂಡು ಹಿಡಿಯುವ ಗುರಿಯುಳ್ಳ ಸಂಘವೊಂದರ ಜೊತೆ ನಾನು ಕೆಲಸ ಮಾಡುತ್ತಿರುವೆ. ನಾನು ಈಗಲೂ ಹಲವಾರು ಶಾಲಾ-ಕಾಲೇಜು, ಸಂಘ ಸಂಸ್ಥೆಗಳಿಗೆ ತೆರಳಿ ನನ್ನ ಬದುಕಿನ ಬಗ್ಗೆ, ನಾನು ಚೇತರಿಸಿಕೊಂಡು ಈ ಅಪಘಾತದಿಂದ ಹೊರಬಂದ ಬಗ್ಗೆ ಪ್ರೇರಣಾದಾಯಕ ಉಪನ್ಯಾಸಗಳನ್ನು ನೀಡುತ್ತೇನೆ. ಈಜು ಕಲಿಯುವವರಿಗೆ ತರಭೇತಿ ನೀಡುತ್ತೇನೆ. ರೇಡಿಯೋದಲ್ಲೂ ನಾನು ಕಾರ್ಯಕ್ರಮ ನೀಡುತ್ತೇನೆ. ನಾನು ನನ್ನಂತೆ ಬೆನ್ನು ಹುರಿಯ ಸಮಸ್ಯೆಗೆ ಗುರಿಯಾಗಿ ತಮ್ಮ ಬದುಕನ್ನು ಗಾಲಿ ಕುರ್ಚಿಯಲ್ಲಿ ಕಳೆಯುತ್ತಿರುವವರಿಗೆ ಹೇಳುವುದಿಷ್ಟೇ. ‘ ನಿಮ್ಮ ಬದುಕು ಇನ್ನೂ ಮುಗಿದಿಲ್ಲ. ನೀವಿನ್ನೂ ಸಾಧಿಸಬೇಕಾದದ್ದು ಬಹಳಷ್ಟಿದೆ. ಟೆನ್ನಿಸ್ ಆಟ, ಪರ್ವತಾರೋಹಣ, ಶಾಟ್ ಪುಟ್ ಮುಂತಾದ ಕ್ರೀಡೆಗಳಲ್ಲಿ ನೀವು ಭಾಗವಹಿಸಬಹುದು ಅಥವಾ ನಿಮ್ಮ ಇಷ್ಟದ ಯಾವುದೇ ಆಟಗಳಲ್ಲಿ ಪರಿಣತಿಯನ್ನು ಹೊಂದಬಹುದು. ಇದು ನನ್ನ ಸಂದೇಶ. ಸಕಾರಾತ್ಮಕ ಚಿಂತನೆ ಮಾಡಿ, ಇಡೀ ವಿಶ್ವ ನಿಮ್ಮ ಕಾಲ ಕೆಳಗೆ ಇರುತ್ತದೆ ಎಂಬುದನ್ನು ಮರೆಯಬೇಡಿ.

***

ಇದು ಏಮಿ ಡೈಕೆನ್ ಅವರ ಪ್ರೋತ್ಸಾಹದಾಯಕ ಸತ್ಯ ಕಥೆ. ಜೀವವಿರುವ ಕಡೇಕ್ಷಣದ ತನಕ ನಮ್ಮ ಬದುಕು ಕೊನೆಯಾಗಲ್ಲ. ಆದುದರಿಂದ ಯಾವುದೇ ಸಂದರ್ಭದಲ್ಲಿ, ಏನೇ ತೊಂದರೆಗಳು ಬಂದರೂ ಮನೋಬಲವನ್ನು ಕಳೆದುಕೊಳ್ಳಬೇಡಿ. ಹೊಸ ವರ್ಷದ ಮೊದಲ ದಿನ ಈ ಪ್ರೇರಣಾದಾಯಕ, ಸ್ಪೂರ್ತಿಯುತ ಬದುಕಿನ ಕಥೆ ನಿಮ್ಮಲ್ಲೂ ಹುಮ್ಮಸ್ಸು ತುಂಬಲಿ. ಹೊಸ ವರ್ಷ ಹರುಷ ತರಲಿ.   

 

ಚಿತ್ರದಲ್ಲಿ ಏಮಿ ಡೈಕೆನ್ ತನ್ನ ಪತಿ ಟಾಮ್ ರೌನ್ ಜೊತೆ

ಚಿತ್ರಗಳು : ಅಂತರ್ಜಾಲ ತಾಣಗಳ ಕೃಪೆಯಿಂದ