ಏರಿಳಿತದ ಹಾದಿಯಲ್ಲಿ

ಏರಿಳಿತದ ಹಾದಿಯಲ್ಲಿ

ಪುಸ್ತಕದ ಲೇಖಕ/ಕವಿಯ ಹೆಸರು
ಸುಧಾ ಮೂರ್ತಿ
ಪ್ರಕಾಶಕರು
ಅಂಕಿತ ಪುಸ್ತಕ, ಬೆಂಗಳೂರು
ಪುಸ್ತಕದ ಬೆಲೆ
ರೂ.95/-

ಇನ್ಫೋಸಿಸ್ ಪ್ರತಿಷ್ಠಾನದ ಸಮಾಜಮುಖಿ ಕೆಲಸಕಾರ್ಯಗಳಿಂದಾಗಿ ಸುಧಾ ಮೂರ್ತಿಯವರು ಒಳ್ಳೆಯ ಹೆಸರು ಗಳಿಸಿದ್ದಾರೆ. ತನ್ನ ಇತರ ಬರಹಗಳ ಜೊತೆಗೆ, ಅಲ್ಲಿನ ಕೆಲಸದ ಸಂದರ್ಭಗಳಲ್ಲಿ ತನಗಾದ ಅನುಭವಗಳನ್ನೂ ಬರಹಗಳಾಗಿಸಿ ಸಾಹಿತಿಯಾಗಿಯೂ ಹೆಸರು ಗಳಿಸಿದ್ದಾರೆ.

ಇದರಲ್ಲಿನ ಬಹುಪಾಲು ಬರಹಗಳು ಆ ಅನುಭವಗಳ ಆಧಾರಿತ. ಈ ಬರಹಗಳ ಬಗ್ಗೆ ಮುನ್ನುಡಿಯಲ್ಲಿ ಸುಧಾ ಮೂರ್ತಿಯವರ ನೇರಾನೇರ ಮಾತು ಹೀಗಿದೆ: “ಅನುಭವಗಳು ಎಲ್ಲರಿಗೂ ಆಗುತ್ತಲೇ ಇರುತ್ತವೆ. ಆದರೆ ನನ್ನ ಅನುಭವಗಳೇ ವಿಚಿತ್ರ. ಅದಕ್ಕೆ ನಾನು ಮಾಡುವ ಕೆಲಸವೇ ಕಾರಣ. ನನ್ನ ಅನುಭವಗಳ ಬರಹವು ಕಾಲ್ಪನಿಕವಲ್ಲ. ಅವೆಲ್ಲಾ ಸತ್ಯ ಘಟನೆಗಳು. ಬರೆಯುವಾಗ ಹೆಸರನ್ನೂ, ಸ್ಥಳಗಳನ್ನೂ ಬದಲಿಸುತ್ತೇನೆ. ಆ ವ್ಯಕ್ತಿಗಳ ಅನುಮತಿಯನ್ನೂ ತೆಗೆದುಕೊಳ್ಳುತ್ತೇನೆ. ಹೀಗಾಗಿ ಈ ಅನುಭವಗಳ ಬರಹ ನಿಷ್ಠೆಯಿಂದ ಕೂಡಿದೆ. ಅಂತೆಯೇ ಜನಪ್ರಿಯವಾಗಿದೆ…..

…… ಕೆಲವು ವೇಳೆ ಈ ನನ್ನ ಅನುಭವಗಳು ಯಾಕೆ ಇಷ್ಟೊಂದು ಜನಪ್ರಿಯವಾಗಿವೆ? ಎಂದು ಅಚ್ಚರಿ ಪಡುತ್ತೇನೆ. ಭಾರತದ ಎಲ್ಲ ಭಾಷೆಗಳಲ್ಲಿ ಈ ಪುಸ್ತಕಗಳು ಪ್ರಕಟವಾಗಿವೆ. ಅಪಾರ ಜನಪ್ರಿಯವಾಗಿವೆ. ಬಹುಶಃ ಅದಕ್ಕೆ ಕಾರಣ ನಯನಾಜೂಕಿನ ಲೇಪನವಿಲ್ಲದೆ, ಮುಚ್ಚಿಡುವ ಗೋಜಿಗೆ ಹೋಗದೆ ಬರೆದ ಸತ್ಯ ವರದಿ. ಸತ್ಯ ಯಾವಾಗಲೂ ಶ್ರೇಷ್ಠ. ಮಾನವ ಯಾವುದೇ ಪರಿಸ್ಥಿತಿಯಲ್ಲಿದ್ದರೂ ಸತ್ಯಕ್ಕೆ ಬೆಲೆ ಕೊಡುತ್ತಾನೆ. ಕೆಲವು ವೇಳೆ ಸತ್ಯ ಕಹಿ ಎನಿಸಿದರೂ ಕಾಲಾಂತರದಲ್ಲಿ ಸತ್ಯ ಮಾತ್ರ ಬಾಳುತ್ತದೆ. …."

ಭಾರತದ ಪೂರ್ವ ತೀರಕ್ಕೆ ತ್ಸುನಾಮಿ ಅಪ್ಪಳಿಸಿದಾಗ, ಕರಾವಳಿ ತೀರದ ಹಲವು ಊರುಗಳಲ್ಲಿ ಅಪಾರ ಸಾವುನೋವು. ಆ ಸಂದರ್ಭದಲ್ಲಿ ಇನ್ಫೋಸಿಸ್ ಪ್ರತಿಷ್ಠಾನ ನೊಂದವರ ಕಣ್ಣೀರು ಒರಸುವ ಕಾಯಕದಲ್ಲಿ ತೊಡಗಿತು. ಆಗಿನ ಕೆಲವು ಅನುಭವಗಳ ಬರಹಗಳು ಇಲ್ಲಿವೆ. ಅವುಗಳಲ್ಲೊಂದು “ತ್ಸುನಾಮಿ ಅಲೆಯೊಂದಿಗೆ”. ಕೃತಜ್ನತೆಯ ಗುಣಕ್ಕೆ ಉದಾಹರಣೆಯಾಗಿ, ತನ್ನ ಸ್ನೇಹಿತನೊಬ್ಬನ ವಿವರಗಳೊಂದಿಗೆ ಬರಹದ ಆರಂಭ. ಆತ, ತನಗೆ ಧಾರವಾಡದಲ್ಲಿ ಆರು ವರ್ಷ ಶಿಕ್ಷಣ ಪಡೆಯಲು ಮನೆಯಲ್ಲೇ ವಾಸದ ವ್ಯವಸ್ಥೆ ಮಾಡಿದ್ದ ತನ್ನ ತಂದೆಯ ಆಪ್ತರ ಹೆಸರನ್ನೇ ತನ್ನ ಹೊಸಮನೆಗೆ ಇಟ್ಟಿದ್ದ . ಆ ಬರಹ ಮುಂದುವರಿಸಿ, ತ್ಸುನಾಮಿ ಸಂತ್ರಸ್ತರಿಗೆ ನೆರವು ನೀಡಲಿಕ್ಕಾಗಿ ಒಂದು ಹಳ್ಳಿಯ ಪಂಚಾಯತಿ ಜನರನ್ನು ಸಭೆ ಸೇರಿಸಿದ್ದರ ವಿವರ. ಅವರಿಗೇನು ಬೇಕಾಗಿದೆ ಮತ್ತು ತಾವೇನು ಕೊಡಬಲ್ಲೆವು ಎಂಬುದನ್ನು ತಾಳೆ ಹಾಕಿದರು. ಅನಂತರ, ಹಳ್ಳಿಯ ಎಲ್ಲ ಕುಟುಂಬಗಳ ಹೆಸರು - ವಿವರಗಳ ಪಟ್ಟಿ ತಯಾರಿಸಿದರು. ಮರುದಿನ ವಸ್ತುಗಳನ್ನು ಅವರಿಗೆ ವಿತರಿಸಲು ಹೋದಾಗ ಸುಧಾ ಮೂರ್ತಿ ಮತ್ತು ಅವರ ತಂಡದವರಿಗೆ ಆಘಾತ! ಯಾಕೆಂದರೆ, ಅಲ್ಲಿ ಇಮ್ಮಡಿ ಸಂಖ್ಯೆಯ ಕುಟುಂಬಗಳ ಸದಸ್ಯರು ಸೇರಿದ್ದರು! "ನಮ್ಮ ಮನೆಗೆ ನೆಂಟರು ಬಂದಿದ್ದಾರೆ. ಅವರಿಗೆ ಸಹಾಯ ಸಿಗದಿದ್ದರೆ ಹೇಗೆ? ಅವರೂ ನಮ್ಮವರೆ, ಅಲ್ಲದೆ ನೀವೇನೂ ಧರ್ಮದ ಕೆಲಸ ಮಾಡುತ್ತಿಲ್ಲ …." ಎಂಬ ಉಡಾಫೆ ಬೇರೆ! ಲವಲೇಶವೂ ಕೃತಜ್ನತಾ ಗುಣ ಇಲ್ಲದವರ ಉದಾಹರಣೆ ಇದು.

“ಕಂಬನಿ ಒರಸುವ ಕೈ" ಅಧ್ಯಾಯ ಕೂಡ ತ್ಸುನಾಮಿ ಸಂತ್ರಸ್ತರಿಗೆ ಕೊಡಲಿಕ್ಕಾಗಿ ತಯಾರಿಸಿದ್ದ ಅವಶ್ಯಕ ವಸ್ತುಗಳ ಪ್ಯಾಕೆಟುಗಳ ರವಾನೆಗೆ ಸಂಬಂಧಿಸಿದ್ದು. ಪ್ರತಿಷ್ಠಾನದ ಸ್ವಯಂಸೇವಕರು ಬೆಂಗಳೂರಿನ ಒಂದು ಮನೆಯಲ್ಲಿ ನೂರಾರು ಸಂಖ್ಯೆಯ ಆ ಪ್ಯಾಕೆಟುಗಳನ್ನು ತಯಾರಿಸಿ, ಪಕ್ಕದ ಸೈಟಿನಲ್ಲಿ ಜೋಡಿಸಿಟ್ಟಿದ್ದರು - ಅದಕ್ಕಾಗಿ ಅನುಮತಿಯನ್ನೂ ಪಡೆದಿದ್ದರು. ಆದರೆ, ಸಂಜೆ ಆ ಸೈಟಿನ ಉಸ್ತುವಾರಿ ವಹಿಸಿದ್ದ ಆರ್ಕಿಟೆಕ್ಟ್ ಅಲ್ಲಿಗೆ ಬಂದ. ದರ್ಪದಿಂದ ಆತ ಅಬ್ಬರಿಸಿದ, “... ನನ್ನ ಅನುಮತಿ ನೀವು ಪಡೆದಿಲ್ಲ. ಈಗ ಕೂಡಲೆ ಇದೆಲ್ಲವನ್ನೂ ಈ ಜಾಗದಿಂದ ಖಾಲಿ ಮಾಡಿ, ಬೇಕಾದರೆ ರಸ್ತೆ ಬದಿಯಲ್ಲಿರಿಸಿ …" ಅವೆಲ್ಲವನ್ನೂ ಮರುದಿನ ಬೆಳಗ್ಗೆ ಟ್ರಕ್ಕುಗಳಲ್ಲಿ ಅಲ್ಲಿಂದ ಸಾಗಿಸಲಾಗುವುದು ಎಂದು ಎಷ್ಟು ವಿನಂತಿಸಿದರೂ ಅವನ ದರ್ಪ ಇಳಿಯಲಿಲ್ಲ. ಅನಂತರ ಸ್ವಯಂಸೇವಕರು ಅವೆಲ್ಲ ಪ್ಯಾಕೆಟುಗಳನ್ನು ಪಕ್ಕದ ರಸ್ತೆ ಬದಿಯಲ್ಲೇ ಇಡಬೇಕಾಯಿತು. ಮರುದಿನ, ಆ ಸೈಟಿನ ಕಾವಲುಗಾರ ಇವರ ಆಫೀಸಿಗೆ ಬಂದ. "ಮ್ಯಾಡಂ, ನಿನ್ನೆ ನಮ್ಮ ಬಾಸ್ ಮಾಡಿದ ಕೆಲಸ ತಪ್ಪು. ಅವರನ್ನೆದುರಿಸುವ ಶಕ್ತಿ ನಮ್ಮಂಥವರಿಗಿಲ್ಲ. …. ನಿನ್ನೆ ರಾತ್ರಿ ನಿಮ್ಮ ಅನುಮತಿ ಕೇಳದೆ ನನ್ನ ಡ್ಯೂಟಿ ಮುಗಿದ ನಂತರ ನಾನು ರಸ್ತೆ ಬದಿಯಲ್ಲಿದ್ದ ನಿಮ್ಮ ಪ್ಯಾಕೆಟುಗಳನ್ನು ಕಾದೆ. ಈಗ ನನ್ನ ಒಂದು ದಿನದ ಸಂಬಳವನ್ನು ನಿಮಗೆ ಕೊಡುತ್ತಿದ್ದೇನೆ. ಬಡವನಾದ ನನ್ನಿಂದ ತ್ಸುನಾಮಿ ಸಂತ್ರಸ್ತರಿಗೆ ಏನು ಸಾಧ್ಯವೋ ಅಷ್ಟು ಮಾಡಿದ್ದೇನೆ. ನೀವು ಇಂಥ ಕೆಲಸವನ್ನು ಮುಂದುವರಿಸಿರಿ. …" ಅಂತಂದು ಒಂದು ಕವರ್ ಇವರ ಕೈಗಿತ್ತು ಹೊರಟು ಹೋದ. ಆ ಕವರಿನಲ್ಲಿತ್ತು, ನೂರಾ ಅರುವತ್ತು ರೂಪಾಯಿ!

“ದಾನದ ದಶಾವತಾರ” ಅಧ್ಯಾಯದಲ್ಲಿ ಆ ಸಂದರ್ಭದ ಮತ್ತೊಂದು ಚಿತ್ರಣ: ಪರಿಚಿತಳೊಬ್ಬಾಕೆ ಬಂದು, ನಾವು ತ್ಸುನಾಮಿ ಸಂತ್ರಸ್ತರಿಗಾಗಿ ಹಣ ಸಂಗ್ರಹಿಸಿ, ನಿಮಗೆ ಹಸ್ತಾಂತರಿಸುತ್ತೇವೆ; ಆ ಸಮಾರಂಭಕ್ಕೆ ನೀವು ಬರಲೇ ಬೇಕು ಎಂದು ದುಂಬಾಲು ಬಿದ್ದಳು. ಅಂತೂ ಸುಧಾ ಮೂರ್ತಿ ಅಲ್ಲಿಗೆ ಹೋದಾಗ, ಶಾಮಿಯಾನ ಚಪ್ಪರ, ಮೈಕುಗಳ ಅಬ್ಬರ, ಸ್ಥಳೀಯ ರಾಜಕಾರಣಿಗಳ ಸಾಲುಸಾಲು ಭಾಷಣಗಳು, ಹಣ ಹಸ್ತಾಂತರದ ಫೋಟೋ ಹಾಗೂ ವಿಡಿಯೋ - ಇವೆಲ್ಲ ಧಾಂದೂಂ. ಕೊನೆಗೆ, ಸುಧಾ ಮೂರ್ತಿ ಅವರಿತ್ತ ಪರ್ಸ್ ತೆರೆದು ನೋಡಿದಾಗ ಅದರಲ್ಲಿ ಇದ್ದದ್ದು ಕೇವಲ ಹತ್ತು ರೂಪಾಯಿ ಮತ್ತು ಆ ಸಮಾರಂಭಕ್ಕೆ ಆದ ವೆಚ್ಚದ ವಿವರಪಟ್ಟಿ!

ಅದೇ ಅಧ್ಯಾಯದಲ್ಲಿ, ತಮ್ಮ ಕಚೇರಿಯಲ್ಲಿ ಆರು ತಿಂಗಳು ಕೆಲಸ ಮಾಡಿದ ನಂತರ ಕೆಲಸ ತೊರೆದು ತುಮಕೂರು ಹತ್ತಿರದ ಹಳ್ಳಿಯಲ್ಲಿ ಕೃಷಿ ಮತ್ತು ಸಮಾಜಸೇವೆಯಲ್ಲಿ ತೊಡಗಿಕೊಂಡ ಗಜಾನನ ಎಂಬಾತನ ವಿಶ್ವಾಸದ್ರೋಹವನ್ನು ತಿಳಿಸುತ್ತಾರೆ. ತನ್ನೂರಿನಲ್ಲಿ ಅರವಟ್ಟಿಗೆ ನಿರ್ಮಿಸಲಿಕ್ಕಾಗಿ ಒಂದು ಲಕ್ಷ ರೂಪಾಯಿ ಸಾಲ ಅವನು ತನ್ನಿಂದ ಪಡೆದು ಕೊಂಡಾಗಲೇ ಸುಧಾ ಮೂರ್ತಿ ಸ್ಪಷ್ಟ ಪಡಿಸಿದ್ದರು: “ನನ್ನ ದೇಣಿಗೆ ಇಪ್ಪತ್ತೈದು ಸಾವಿರವಿರಲಿ, ನಿಮ್ಮದು ಎಪ್ಪತ್ತೈದು ಸಾವಿರ.” ಅನಂತರ, ಇವರನ್ನೇ ಅರವಟ್ಟಿಗೆಯ ಉದ್ಘಾಟನೆಗೆ ಗಜಾನನ ಆಮಂತ್ರಿಸಿದ್ದ. ಅಲ್ಲಿಂದ ಸುಧಾ ಮೂರ್ತಿ ಹೊರಟಾಗ ಆತ ಒಂದು ಕವರನ್ನಿತ್ತ. ಅದರಲ್ಲಿ ಇದ್ದದ್ದು ಕೇವಲ ಹತ್ತು ಸಾವಿರ ರೂಪಾಯಿಗಳ ಚೆಕ್! ಆದರೆ ಹಳ್ಳಿಯ ಅರವಟ್ಟಿಯಲ್ಲಿದ್ದ ಅಮೃತಶಿಲೆಯ ಫಲಕದಲ್ಲಿ ಹೀಗೆ ಕೆತ್ತಲಾಗಿತ್ತು: ‘ಈ ಅರವಟ್ಟಿಗೆಯನ್ನು ಸನ್ಮಾನ್ಯ ಶ್ರೀ ಗಜಾನನ ಅವರು ತಮ್ಮ ಹಳ್ಳಿಗೆ ಸಮಾಜಸೇವೆಯ ರೂಪದಲ್ಲಿ ಅರ್ಪಿಸಿದ್ದಾರೆ.” ಅಲ್ಲಿಗೆ ಹೋಗುವಾಗಲೇ ಸುಧಾ ಮೂರ್ತಿಗೆ “ಗಜಾನನ ಮುಂದಿನ ವರುಷ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆಯಿದೆ” ಎಂದು ತಿಳಿದು ಬಂದಿತ್ತು.

ಪುಕ್ಕಟೆಯಾಗಿ ಏನು ಕೊಟ್ಟರೂ ಅದಕ್ಕೆ ಬೆಲೆಯಿಲ್ಲ ಎಂಬುದಕ್ಕೆ ಪುರಾವೆಯಾಗಿ ಎರಡು ಘಟನೆಗಳನ್ನು ವಿವರಿಸಿದ್ದಾರೆ “ನೂರಕ್ಕೆ ನೂರು ಉಚಿತ" ಅಧ್ಯಾಯದಲ್ಲಿ.” ಈಗಿನ ಯುವಜನರ ಧಿಮಾಕನ್ನು ಚಿತ್ರಿಸುತ್ತದೆ “ಎಲೆಮರೆಯ ಕಾಯಿ" ಅಧ್ಯಾಯದ ಘಟನೆ.

ತಾನಿತ್ತ ದಾನ ಯಾರಿಗೂ ತಿಳಿಯಬಾರದೆಂಬ ಷರತ್ತು ಹಾಕಿಯೇ ಲಕ್ಷಗಟ್ಟಲೆ ರೂಪಾಯಿ ದಾನವನ್ನು ಪ್ರತಿಷ್ಠಾನಕ್ಕಿತ್ತ ಔಷಧಿ ಕಂಪೆನಿಯೊಂದರ ಮಾಲೀಕನ ಬಗ್ಗೆ ತಿಳಿಸುತ್ತಲೇ, ಅವರ ಮರಣಾ ನಂತರ ಅವರ ಮಗ ದಾನ ಮುಂದುವರಿಸಲು ವಿಪರೀತ ಷರತ್ತುಗಳನ್ನು ವಿಧಿಸಿದ್ದನ್ನೂ, ಅದನ್ನು ತಿರಸ್ಕರಿಸಿದ್ದನ್ನೂ “ಹೆಚ್ಚುವರಿ" ಅಧ್ಯಾಯದಲ್ಲಿ ತಿಳಿಸುತ್ತಾರೆ ಸುಧಾ ಮೂರ್ತಿ. “ವರದಾನ" ಅಧ್ಯಾಯದ ಸಂಗತಿ: ತನ್ನ ಪುಟ್ಟ ಮಗನ ಕ್ಯಾನ್ಸರ್ ಚಿಕಿತ್ಸೆಗೆ ಧನಸಹಾಯವನ್ನು ಪಡೆಯುವಾಗ ಅಂಗಲಾಚಿ ಇವರಿಂದ ಪತ್ರ ಪಡೆದುಕೊಳ್ಳುತ್ತಾನೆ ಒಬ್ಬ ತಂದೆ. ಅನಂತರ ಇವರಿಗೆ ತಿಳಿದದ್ದೇನೆಂದರೆ, ಆತ ಆ ಮಗುವಿಗೆ ಚಿಕಿತ್ಸೆಯನ್ನು ಕೊಡಿಸಲಿಲ್ಲ ಮಾತ್ರವಲ್ಲ ಇವರ ಪತ್ರ ತೋರಿಸಿ ಹಲವರಿಂದ ಧನಸಹಾಯ ಪೀಕಿಸಿ, ದೊಡ್ಡ ಮನೆ ಕಟ್ಟಿಸಿಕೊಂಡ!

ಅಪ್ಪಟ ಸ್ವಾರ್ಥದ ವ್ಯಕ್ತಿಯೊಬ್ಬಳ ವಿವರ ನೀಡುತ್ತಾ, ಎಳವೆಯಲ್ಲಿಯೇ ಅಂತಹದೇ ವರ್ತನೆ ತೋರುತ್ತಿದ್ದ ಬಾಲಕಿಯೊಬ್ಬಳ ಚಿತ್ರಣ ನೀಡುತ್ತಾರೆ "ಬಾಲ್ಯದ ಮುಗ್ಧತೆ” ಅಧ್ಯಾಯದಲ್ಲಿ. ಕಾಡು ಹರಟೆಯ ಅಪಾಯಗಳನ್ನು ತೆರೆದಿಡುತ್ತಾರೆ, ಅದೇ ಶೀರ್ಷಿಕೆಯ ಅಧ್ಯಾಯದಲ್ಲಿ, ತಮ್ಮ ಸಹೋದ್ಯೋಗಿಯ ಆ ಕೆಟ್ಟ ಚಟದ ಉದಾಹರಣೆಗಳ ಸಹಿತ. ಐದು ಲಕ್ಷದಿಂದ ಹತ್ತು ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಧರಿಸಿ ಮೆರೆಯುವುದೇ ಬದುಕು ಎಂದುಕೊಂಡಿರುವ ಗೆಳತಿಯ ಪೊಳ್ಳುತನ ಬಿಚ್ಚಿಡುತ್ತಾರೆ “ಆಭರಣ" ಅಧ್ಯಾಯದಲ್ಲಿ. ಹಾಗೆಯೇ, ಯಾವಾಗಲೂ ಇನ್ನೊಬ್ಬರೊಂದಿಗೆ ತನ್ನನ್ನೂ ತನ್ನ ಮನೆಯವರನ್ನೂ ಹೋಲಿಸುತ್ತಾ ಈಗಿರುವ ಸಂತೋಷವನ್ನು ಬಲಿಗೊಡುವ ಗೀಳಿಗೆ ಬಿದ್ದಿರುವ ಗೆಳತಿಯ ವರ್ತನೆಯ ಅನಾವರಣವಿದೆ “ಪರಿಧಿ" ಅಧ್ಯಾಯದಲ್ಲಿ.

ಈ ಪುಸ್ತಕದ ೧೮ ಅಧ್ಯಾಯಗಳು ಜೀವನದ ಹಲವು ಪಾಠಗಳನ್ನು ತೆರೆದಿಟ್ಟರೆ, ಕೊನೆಯ ಅಧ್ಯಾಯ ಜೀವನಮೌಲ್ಯಗಳ ನಿಧಿಯಾಗಿದೆ. ಇವನ್ನು ಓದಿದರೆ ಸಾಲದು, ಓದಿ ಆತ್ಮಾವಲೋಕನ ಮಾಡಿ, ನಮ್ಮನ್ನು ನಾವೇ ತಿದ್ದಿಕೊಂಡರೆ, ಓದಿದ್ದು ಸಾರ್ಥಕ.