ಏಲಕ್ಕಿಯ ಆರೋಗ್ಯಕರ ಉಪಯೋಗಗಳು

ಏಲಕ್ಕಿಯ ಆರೋಗ್ಯಕರ ಉಪಯೋಗಗಳು

ಏಲಕ್ಕಿಯನ್ನು ಮಸಾಲೆಗಳ ರಾಣಿ ಎಂದೂ ಕರೆಯುತ್ತಾರೆ. ಆರೋಗ್ಯ ಸಂಜೀವಿನಿಯಾದ ಈ ಏಲಕ್ಕಿಗೆ ನಮ್ಮ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಗೆ ಹಾಕುವ ಗುಣವಿದೆ. ಸಾಂಬಾರು ಪದಾರ್ಥಗಳಲ್ಲಿ ಒಂದಾದ ಏಲಕ್ಕಿ ಬೆಳೆಗೆ ತನ್ನದೇ ಆದ ವೈಶಿಷ್ಟ್ಯತೆಗಳಿವೆ. ಇದರ ಅದ್ಭುತ ಪರಿಮಳ ಯಾರನ್ನೂ ಮಂತ್ರಮುಗ್ಧಗೊಳಿಸಬಲ್ಲದು. ಏಲಕ್ಕಿಯು ಗಾತ್ರದಲ್ಲಿ ಚಿಕ್ಕದಾದರೂ ಅದರ ಉಪಯೋಗಗಳು ಹಲವು. ನಮ್ಮ ಪೂರ್ವಿಕರು ಇದರ ಸಮಗ್ರ ಉಪಯೋಗವನ್ನು ಅರಿತಿದ್ದರು, ಈ ಕಾರಣದಿಂದ ಅವರು ಏಲಕ್ಕಿಯನ್ನು ತಮ್ಮ ಆಹಾರದಲ್ಲಿ ನಿಯಮಿತವಾಗಿ ಬಳಕೆ ಮಾಡುತ್ತಿದ್ದರು. 

ಏಲಕ್ಕಿಯ ಪ್ರಮುಖ ಗುಣವೆಂದರೆ ಇದು ನಮ್ಮ ದೇಹಕ್ಕೆ ಸೇರಿರುವ ವಿಷಕಾರಿ ಅಂಶಗಳನ್ನು ಹೊರಗೆ ಹಾಕುತ್ತದೆ. ರಕ್ತಕ್ಕೆ ಸೇರಿದ ವಿಷ ವಸ್ತುಗಳನ್ನು ನಿವಾರಣೆ ಮಾಡುತ್ತದೆ. ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಅಸ್ತಮಾ ಸಮಸ್ಯೆಯಿಂದ ಬಳಲುವವರಿಗೆ ಏಲಕ್ಕಿ ಬಹಳ ಪ್ರಯೋಜನಕಾರಿ. ಏಲಕ್ಕಿಯ ಸೇವನೆಯು ನಿಮ್ಮ ಚರ್ಮದ ಕಾಂತಿಯನ್ನು ಹೆಚ್ಚು ಮಾಡುತ್ತದೆ. ನೆಗಡಿ ಮತ್ತು ಕೆಮ್ಮು ಇದ್ದರೆ ಅದನ್ನು ನಿವಾರಿಸುತ್ತದೆ. ಅಸಿಡಿಟಿಯಿಂದ ಹುಳಿ ತೇಗು ಬರುತ್ತಿದ್ದರೆ ಏಲಕ್ಕಿಯ ಸೇವನೆಯಿಂದ ಅದನ್ನು ನಿವಾರಿಸಬಹುದಾಗಿದೆ.

ಆಂಟಿಮೆಟಿಕ್ ಗುಣಗಳನ್ನು ಹೊಂದಿರುವ ಏಲಕ್ಕಿಯ ಸೇವನೆ ವಾಂತಿಯನ್ನು ಮತ್ತು ವಾಂತಿಯ ಸಂವೇದನೆಯನ್ನೂ  ನಿವಾರಿಸುತ್ತದೆ. ದೂರದ ಊರುಗಳಿಗೆ ನಿರಂತರವಾಗಿ ಪ್ರಯಾಣ ಮಾಡುವವರು ತಮ್ಮ ಪ್ರಯಾಣದ ಕಿಟ್ ನಲ್ಲಿ ಸ್ವಲ್ಪ ಏಲಕ್ಕಿ ಕಾಳುಗಳನ್ನು ಇಟ್ಟುಕೊಳ್ಳಬಹುದು. ಕೆಲವರಿಗೆ ಮುಂಜಾನೆ ಏಳುವ ಸಮಯದಲ್ಲಿ ವಾಕರಿಕೆ ಉಂಟಾಗುತ್ತದೆ. ಏಲಕ್ಕಿಯ ಬಳಕೆಯಿಂದ ಆ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ಗರ್ಭಿಣಿಯರಲ್ಲಿ ಕಾಣಿಸುವ ವಾಂತಿಯ ಸಂವೇದನೆಗೆ ಏಲಕ್ಕಿಯ ಸುವಾಸನೆಯನ್ನು ಗ್ರಹಣ ಮಾಡುವುದು ಉತ್ತಮ. ಇದರಿಂದ ವಾಂತಿ ಬರುವಂತೆ ಆಗುವ ಸಂವೇದನೆ ನಿಲ್ಲುತ್ತದೆ. 

ಏಲಕ್ಕಿಯಲ್ಲಿ ಪ್ರಬಲ ಆಂಟಿ ಮೈಕ್ರೋಬಿಯಲ್ ಅಂಶಗಳು ಇರುವುದರಿಂದ ಇದು ಸಾಮಾನ್ಯವಾಗಿ ಎಲ್ಲರಿಗೂ ಕಾಡುವ ಹಲ್ಲಿನ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಏಲಕ್ಕಿಯಲ್ಲಿರುವ ಎಣ್ಣೆಯಂಶದಲ್ಲಿರುವ ಫೈಟೋಕೆಮಿಕಲ್ ಮತ್ತು ಸಿನೋಲ್ ಗುಣಗಳು ಬ್ಯಾಕ್ಟೀರಿಯಾವನ್ನು ನಾಶ ಮಾಡುತ್ತದೆ. ಬಾಯಿಯ ದುರ್ಗಂಧ, ಹಲ್ಲಿನಲ್ಲಿ ಕುಳಿ ಬೀಳುವುದು ಮತ್ತು ಅನುಚಿತವಾಗಿ ಹುಟ್ಟುವ ಹಲ್ಲುಗಳ ಸಮಸ್ಯೆಯನ್ನು ತಡೆಗಟ್ಟುತ್ತದೆ. ಏಲಕ್ಕಿ ಹಣ್ಣು ಮತ್ತು ಬೀಜದ ಸಾರವು ಉರಿಯೂತವನ್ನು ನಿವಾರಣೆ ಮಾಡುತ್ತದೆ. ಏಲಕ್ಕಿಯು ಬಹು ಹಿಂದಿನಿಂದಲೂ ಜೀರ್ಣಕ್ರಿಯೆಗೆ ಸಹಕಾರಿ ಎಂದು ನಂಬಲಾಗಿದೆ. ಹೊಟ್ಟೆಯ ತಳಮಳವನ್ನು ನಿವಾರಣೆ ಮಾಡಿ,ಹೊಟ್ಟೆಯ ಹುಣ್ಣುಗಳನ್ನೂ ನಿವಾರಣೆ ಮಾಡುತ್ತದೆ. ಇದರಿಂದ ಜೀರ್ಣಕ್ರಿಯೆಯ ಪ್ರಕ್ರಿಯೆ ಸಹಜವಾಗಿ ನಡೆಯುತ್ತದೆ. 

ಏಲಕ್ಕಿಯ ಸೇವನೆ ಶ್ವಾಸಕೋಶದ ಆರೋಗ್ಯವನ್ನು ಸುಧಾರಿಸುತ್ತದೆ. ಕಫದ ಸಮಸ್ಯೆ ಹೆಚ್ಚಾಗಿದ್ದಲ್ಲಿ ಏಲಕ್ಕಿಯನ್ನು ಸೇವನೆ ಮಾಡಿದರೆ ಕಡಿಮೆಯಾಗುತ್ತದೆ. ರೋಗಕಾರಕಗಳಿಂದ ರಕ್ಷಣೆ ಮಾಡುತ್ತದೆ. ಶ್ವಾಸಕೋಶದ ಉರಿಯನ್ನು ಶಮನ ಮಾಡುತ್ತದೆ. ಅಸ್ತಮಾದಂತಹ ಅಲರ್ಜಿಯ ಸಮಸ್ಯೆಯಿಂದ ಪರಿಹಾರ ನೀಡುತ್ತದೆ. ಅಧಿಕ ರಕ್ತದೊತ್ತಡದ ಸಮಸ್ಯೆ ಇರುವವರು ನಿಯಮಿತವಾಗಿ ಏಲಕ್ಕಿಯನ್ನು ಸೇವನೆ ಮಾಡುವುದರಿಂದ ನಿಯಂತ್ರಣ ಸಾಧಿಸಬಹುದು. ದೇಹದಲ್ಲಿರುವ ಹೆಚ್ಚುವರಿ ನೀರನ್ನು ಹೊರಹಾಕಲು ಸಹಕಾರ ನೀಡುತ್ತದೆ. ಬಹುಪಯೋಗಿ ಏಲಕ್ಕಿಯನ್ನು ನಿಯಮಿತವಾಗಿ ಆಹಾರದಲ್ಲಿ ಬಳಸುವುದು ಆರೋಗ್ಯದ ದೃಷ್ಟಿಯಿಂದ ಬಹಳ ಉತ್ತಮ.

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ