ಏಳು ದಶಕಗಳ ಬಳಿಕ ಕೇಕ್ ಮರಳಿಸಿದ ಸೇನೆ !

ಪತ್ರಿಕೆಯನ್ನು ಓದುವ, ದೂರದರ್ಶನವನ್ನು ನೋಡುವ ನೀವು ಅಪರೂಪದ ಕೆಲವು ಸುದ್ದಿಗಳನ್ನು ಓದಿ ಅಥವಾ ಕೇಳಿರುತ್ತೀರಿ. ಎರಡು ವರ್ಷಗಳ ನಂತರ ಮರಳಿದ ಸಾಕು ನಾಯಿ, ಹತ್ತು ವರ್ಷಗಳ ಬಳಿಕ ಮನೆಗೆ ಬಂದ ಪತಿರಾಯ, ಸತ್ತ ಮನುಷ್ಯ ಐದು ವರ್ಷಗಳ ಬಳಿಕ ಜೀವಂತ ಪತ್ತೆ... ಹೀಗೆಲ್ಲಾ ಅಪರೂಪದ ಅಚ್ಚರಿದಾಯಕ ನೈಜ ಕಥೆಗಳಿಗೇನೂ ಕೊರತೆಯಿರುವುದಿಲ್ಲ. ನಾನು ಹೇಳ ಹೊರಟಿರುವುದು ಕದ್ದು ತಿಂದ ಕೇಕ್ ಒಂದು ಬರೋಬ್ಬರಿ ೭೭ ವರ್ಷಗಳ ಬಳಿಕ ಮಾಲೀಕರಿಗೆ ಮರಳಿ ಸಿಕ್ಕ ಕಥೆ.
ಹಿಂದಿನ ಕಥೆ ಹೀಗಿದೆ: ೧೯೪೫ರಲ್ಲಿ ಎರಡನೇ ಮಹಾಯುದ್ಧದ ಸಮಯ. ಅಮೇರಿಕಾ ದೇಶದ ಸೈನಿಕರು ಇಟಲಿಯಲ್ಲಿ ಯುದ್ಧ ಮಾಡುತ್ತಿದ್ದರು. ಅದು ಅಮೇರಿಕಾದ ೮೮ನೇ ಇನ್ ಫ್ಯಾಂಟ್ರಿ ಡಿವಿಷನ್ ನ ಸೇನಾ ತುಕಡಿಯಾಗಿತ್ತು. ಈ ತುಕಡಿಯು ಜರ್ಮನಿಯ ಸೈನಿಕರ ಜೊತೆಗೆ ಕಾದಾಡಿ ಬಹಳ ಬಸವಳಿದಿತ್ತು. ವಿಪರೀತ ಹಸಿವಾಗಿತ್ತು. ಇದೇ ಸಮಯದಲ್ಲಿ ಇಟಲಿಯ ವೆನಿಸ್ ನಗರದ ವಾಯುವ್ಯ ಭಾಗದಲ್ಲಿರುವ ವಿಸ್ಡೆನ್ನಾ ನಗರದಲ್ಲಿದ್ದ ಒಂದು ಮನೆಯಲ್ಲಿ ಮಿಯನ್ ಎಂಬ ಹದಿಮೂರು ವರ್ಷದ ಬಾಲಕಿಗೆ ಹುಟ್ಟುಹಬ್ಬದ ಸಂಭ್ರಮ. ಹೊರಗೆ ಯುದ್ಧದ ವಾತಾವರಣವಾಗಿದ್ದರೂ ಬಾಲಕಿಗೆ ನಿರಾಸೆ ಮಾಡಬಾರದೆಂದು ಹುಟ್ಟು ಹಬ್ಬದ ಮುನ್ನಾ ದಿನವೇ ಆಕೆಯ ತಾಯಿ ಕೇಕ್ ತಯಾರಿಸಿದ್ದರು. ಆ ಕೇಕ್ ನ ಬಿಸಿ ಆರಲೆಂದು ಆಕೆ ಕೇಕ್ ಅನ್ನು ಕಿಟಕಿಯ ಬಳಿ ಇಟ್ಟಿದ್ದರು. ಅಳಿದುಳಿದ ಜರ್ಮನ್ ಸೈನಿಕರ ಭಯದಿಂದ ಅಮೇರಿಕನ್ ತುಕಡಿ ಆ ರಾತ್ರಿಯನ್ನು ಅದೇ ಮನೆಯ ಬಳಿ ಕಳೆದರು. ವಿಪರೀತ ಹಸಿವೆಯಲ್ಲಿದ್ದ ಸೈನಿಕರಿಗೆ ಮಿಯನ್ ತಾಯಿ ಮಾಡಿದ ಕೇಕ್ ಕಣ್ಣಿಗೆ ಬಿತ್ತು. ಹಸಿವೆಗೆ ನಾಚಿಕೆ ಉಂಟೇ? ಸೈನಿಕರು ನಾ ಮುಂದು ತಾ ಮುಂದು ಎಂದು ಕೇಕ್ ಅನ್ನು ಸ್ವಾಹಾ ಮಾಡಿದರು!
ಮರುದಿನ ಮಿಯನ್ ಳ ಹುಟ್ಟುಹಬ್ಬ. ಕೇಕ್ ತುಂಡರಿಸಿ ತಿನ್ನುವ ಸಂಭ್ರಮದಿಂದ ಎದ್ದು ಬಂದು ಅಡುಗೆ ಮನೆಯಲ್ಲಿ ನೋಡುತ್ತಾಳೆ ಕೇಕ್ ಮಾಯ. ಮಿಯನ್ ಳಿಗೆ ಬಹಳ ಬೇಸರವಾಯಿತು. ಹೊರಗೆ ಯುದ್ಧದ ಭೀತಿ, ಮನೆಯಲ್ಲಾದರೂ ಕೇಕ್ ತಿನ್ನುವ ಅಂದರೆ ಅದೂ ಮಾಯವಾಗಿದೆಯಲ್ಲಾ…
ಈ ಘಟನೆ ನಡೆದು ಬರೋಬ್ಬರಿ ೭೭ ವರ್ಷಗಳು ಕಳೆದವು. ಆ ದಿನ ಮಿಯನ್ ಳಿಗೆ ಆಗಿರಬಹುದಾದ ನೋವಿನ ಪ್ರಮಾಣವನ್ನು ಅರಿತಿದ್ದ ಅದೇ ಅಮೇರಿಕಾದ ೮೮ನೇ ಇನ್ ಫ್ಯಾಂಟ್ರಿ ಡಿವಿಷನ್ ಸೇನಾಪಡೆ ವಿಸ್ಡೆನ್ನಾ ನಗರಕ್ಕೆ ತೆರಳಿ ಮಿಯನ್ ಳಿಗೆ ಕೇಕೊಂದನ್ನು ಉಡುಗೊರೆಯಾಗಿ ನೀಡಿದೆ. ಈಗ ಮಿಯನ್ ಳಿಗೆ ವಯಸ್ಸು ಎಷ್ಟು ಗೊತ್ತೇ? ಕೇವಲ ೯೦ ವರ್ಷ! ಕೇಕ್ ಸಿಕ್ಕ ಮರುದಿನವೇ ಮಿಯನ್ ಳ ಹುಟ್ಟು ಹಬ್ಬವಾಗಿದ್ದುದರಿಂದ ಆಕೆ ಆ ಕೇಕ್ ಅನ್ನು ತನ್ನ ಪರಿವಾರದ ಸದಸ್ಯರ ಜೊತೆ ಹಂಚಿಕೊಂಡು ತಿಂದು ೭೭ ವರ್ಷದ ಹಿಂದಿನ ನೋವನ್ನು ಮರೆತರು.
ಮಿಯನ್ ಕೇಕ್ ಕಳೆದುಕೊಂಡದ್ದು ೧೯೪೫ರ ಎಪ್ರಿಲ್ ೨೮ರಂದು. ೭೭ ವರ್ಷಗಳ ಬಳಿಕ ಮಿಯನ್ ರಿಗೆ ಕೇಕ್ ಸಿಕ್ಕಾಗ ಅವರು ಭಾವೋದ್ವೇಗಕ್ಕೆ ಒಳಗಾಗಿ ಬಿಕ್ಕಿ ಬಿಕ್ಕಿ ಅತ್ತರಂತೆ. ಅಮೇರಿಕಾ ಸೇನೆಯು ಇಂಗ್ಲಿಷ್ ಹಾಗೂ ಇಟಲಿಯನ್ ಭಾಷೆಗಳಲ್ಲಿ ಹುಟ್ಟು ಹಬ್ಬದ ಶುಭಾಶಯ ಕೋರಿತ್ತು. ಇವೆಲ್ಲವನ್ನೂ ತಾನು ಇನ್ನುಳಿದ ತನ್ನ ಜೀವನ ಪರ್ಯಂತ ಮರೆಯಲ್ಲ ಅಂತಾರೆ ಮೇರಿ ಮಿಯನ್ ! ಕಡೆಗೂ ಕದ್ದು ತಿಂದ ಕೇಕ್ ಗೆ ಬದಲಾಗಿ ಹೊಸ ಕೇಕ್ ನೀಡಿ ತನ್ನ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಂಡಿತು ಅಮೇರಿಕ ಸೇನೆ.
(ಮಾಹಿತಿ ಮತ್ತು ಚಿತ್ರ ಕೃಪೆ : ಸ್ಕೈ ನ್ಯೂಸ್)