ಏಳು ಮಲ್ಲಿಗೆ ತೂಕದವಳು

ಏಳು ಮಲ್ಲಿಗೆ ತೂಕದವಳು

ಪುಸ್ತಕದ ಲೇಖಕ/ಕವಿಯ ಹೆಸರು
ಶರಣಬಸವ ಕೆ.ಗುಡದಿನ್ನಿ
ಪ್ರಕಾಶಕರು
ಟಾಮಿ ಪ್ರಕಾಶನ, ಲಿಂಗಸಗೂರು
ಪುಸ್ತಕದ ಬೆಲೆ
ರೂ. ೧೨೦.೦೦, ಮುದ್ರಣ: ೨೦೨೩

ಶರಣಬಸವ ಕೆ.ಗುಡದಿನ್ನಿ ಅವರು ಬರೆದ ನೂತನ ಕಥಾ ಸಂಕಲನ “ಏಳು ಮಲ್ಲಿಗೆ ತೂಕದವಳು" ಈ ಕಥಾ ಸಂಕಲನಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕರಾದ ಅಮರೇಶ ನುಗಡೋಣಿ. ಇವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವ ನಿಮ್ಮ ಓದಿಗಾಗಿ...

“ಶರಣಬಸವ ಕೆ. ಗುಡದಿನ್ನಿಯವರು ಕಳೆದ ಆರೇಳು ವರ್ಷಗಳಿಂದ ಕತೆಗಳನ್ನು ಬರೆಯುತ್ತಲೇ ಇದ್ದಾರೆ. ಕಥಾ ಸಂಕಲನವನ್ನು ಪ್ರಕಟಿಸಿದ್ದಾರೆ. ಈಗ ಮತ್ತೊಂದು ಕಥೆಗಳ ಕಟ್ಟನ್ನು ಪ್ರಕಟಣೆಗೆ ಸಿದ್ಧ ಮಾಡಿದ್ದಾರೆ.ರಾಯಚೂರು ಜಿಲ್ಲಾ ಪ್ರದೇಶದಲ್ಲಿ ಹುಟ್ಟಿ ಬೆಳೆದ ಕತೆಗಾರರು ತಮ್ಮ ಕತೆಗಳಲ್ಲಿ ಮನುಷ್ಯ ಪರಿಸರವನ್ನು,ಅವರ ಸಂಕಟಗಳನ್ನು ತೀವ್ರವಾಗಿ ಶೋಧಿಸುತ್ತಿದ್ದಾರೆ. ವ್ಯಕ್ತಿ ತನ್ನಲ್ಲಿರುವ ಮನುಷ್ಯತ್ವವನ್ನು ಕಂಡುಕೊಂಡಂತೆ ತನ್ನ ಸಹಜೀವಿಗಳಲ್ಲಿ,ಒಡನಾಡಿಗಳಲ್ಲಿ, ಸಾಮಾಜಿಕ ಬದುಕಿನಲ್ಲಿ ಮನುಷ್ಯತ್ವವನ್ನು ಹುಡುಕಾಡಿ ಕಾಣದೆ ವಿಫಲನಾಗುವ ಮೂಲಕ ಅಸಾಹಯಕನಾಗುವ ಹಂತ ತಲುಪುತ್ತಾನೆ.ವ್ಯಕ್ತಿ ಮನುಷ್ಯತ್ವದೊಂದಿಗೆ ಬದುಕುತ್ತ,ಸಾಮಾಜಿಕ ಪರಿಸರದಲ್ಲಿ ಅದು ಇಲ್ಲದೆ ಹೋದಾಗ ಬದುಕು ದುರಂತಗಳಲ್ಲಿ ಅಂತ್ಯವಾಗುತ್ತದೆ ಎಂಬುದನ್ನು ಇಲ್ಲಿನ ಕತೆಗಳು ಹೇಳುತ್ತಿವೆ.

'ಭೂಮಿಗೆ ಅರ್ದ ಬೆಳದಿಂಗಳು' ನೆಲದ ಮೇಲೆ ಮನುಷ್ಯ ಕುಲದ ಜತೆಗೆ ಸೃಷ್ಟಿಯಾದ 'ತೃತೀಯ ಲಿಂಗಿ' ಎಂಬ ಮನುಷ್ಯ ಜೀವಿ ಲೋಕದಲ್ಲಿ ಇನ್ನಿಲ್ಲದಷ್ಟು ಕಷ್ಟ ಪಡುತ್ತಿದೆ.ನಿಸರ್ಗ ಸೃಷ್ಟಿಯ ಈ ಜೀವಿಯನ್ನು,ಸಮಾಜ ಮಾನ್ಯ ಮಾಡದೇ ಇರುವುದರಿಂದ ನರಕ ಸದೃಶ್ಯ ಬಾಳ್ವೆಯನ್ನು ಬಾಳುವಂತೆ ಮಾಡಲಾಗುತ್ತಿದೆ.

ನೈಸರ್ಗಿಕವಾಗಿ ಹುಟ್ಟಿ ಬೆಳೆಯುತ್ತ ಬಂದ ಮನುಷ್ಯ ಕುಲದಲ್ಲಿ ಕೆಲವರು ಯೌವ್ವನಕ್ಕೆ ಕಾಲಿಡುವ ಹೊತ್ತಿನಲ್ಲಿ ಗಂಡು ಹೆಣ್ಣಾಗುವ ಪರಿವರ್ತನೆಗೆ ಒಳಗಾಗುವುದು ಕೂಡ ನಿಸರ್ಗ ಶಕ್ತಿಯಿಂದಲೇ ಈ ಪರಿವರ್ತನೆ ಕ್ರಿಯೆ ಹೇಗೆ ನಡೆಯುತ್ತದೆ ಎಂಬುದರ ಬಗ್ಗೆ ವಿಜ್ಞಾನಕ್ಕೊಂದು ಅರಿವು ಇದೆ.

ಈ ಅರಿವು ಸಮಾಜದ ಒಡಲನ್ನು ತಲುಪಿಲ್ಲ. ತಲುಪಿದರೂ ಮಾನ್ಯ ಮಾಡುವ ಗುಣವನ್ನು ಹೊಂದಿಲ್ಲಇದರಿಂದ ಒಡನಾಡಿಯಾಗಿ ಹುಟ್ಟಿ ಬೆಳೆದ ಸಹಜೀವಿಗಳು ಲಿಂಗ ಪರಿವರ್ತನೆಗೆ ಒಳಗಾದಾಗ ಕುಟುಂಬ, ಸಮಾಜ,ಅದನ್ನು ಸಹಿಸುವುದಿಲ್ಲ. ಲಿಂಗ ಪರಿವರ್ತನೆ ವ್ಯಕ್ತಿಯ ಆಯ್ಕೆಯಲ್ಲ.ನಿಸರ್ಗಕ್ಕೆ ಸಂಬಂಧಿಸಿದ್ದು.ಆದರೂ ತೃತೀಯ ಲಿಂಗಿಗಳನ್ನು ಯಾರೂ ಸಹಿಸುವುದಿಲ್ಲ. ಹಿಂಸೆಗೆ ಗುರಿ ಮಾಡಲಾಗುತ್ತದೆ.ತಮ್ಮದಲ್ಲದ ತಪ್ಪಿಗೆ ಈ ವರ್ಗ ಲೋಕದ ಕ್ರೌರ್ಯಕ್ಕೆ ಬಲಿಯಾಗುತ್ತ ಸಮಾಜದ ಅಂಚಿನಲ್ಲಿ ಬದುಕುವ ಪ್ರಯತ್ನ ಮಾಡುತ್ತದೆ.

ಈ ಕತೆಯಲ್ಲಿ ಬರುವ ವಾದಿರಾಜನ ಗೆಳೆಯ ರಾಘು ಲಿಂಗ ಪರಿವರ್ತನೆಗೆ ಒಳಗಾಗಿ ಜೋಗತಿ ಆಗುವುದು, ವಾದಿರಾಜನ ತಂದೆಯೂ 'ಗೇ' ಆಗಿರುವನು.ಇವರಿಬ್ಬರನ್ನು ಕಂಡು ವಾದಿರಾಜ ನೊಂದಿದ್ದಾನೆ.ರಾಘು ಅದೆಷ್ಟು ಸಂಭ್ರಮದಿಂದ ಜೋಗಿಣಿಯಾಗುವ ಆಚರಣೆಗೆ ಒಳಗಾಗಿದ್ದಾನೆ.

ಅವನ ಮಂದಿಯ ಎಲ್ಲಾ ಲೆಕ್ಕಾಚಾರಗಳು ಮಣ್ಣಾಗಿವೆ.ವಾದಿರಾಜನ ತಂದೆಗೆ ಆತನ ಬಯಕೆ ತೀರಿಸಿಕೊಳ್ಳಲು ಅವಕಾಶಗಳು ಇಲ್ಲವಾಗಿವೆ. ಮನೆ ಮಂದಿಯಿಂದ,ಯಾವದು ಸರಿ-ತಪ್ಪುಗಳ ಚಿಂತನೆಯಲ್ಲಿ ಕೊರಗುತ್ತಿದ್ದಾಗ ರಾಘುವಿನ ತಾಯಿ ಮಲ್ಲವ್ವ ಮಗನ ಬಗ್ಗೆ 'ಹಂಗ ಹಾರಾದ್ರಾಗ ಅದ್ಕ ಸುಖ ಐತೆಂದ್ರ ಅದ್ನ ತಡಿಯಾಕ ನಾನ್ಯಾರು? ನೀನ್ಯಾರು?' ಎಂದು ಹೇಳಿದಾಗ ವಾದಿರಾಜನಿಗೆ ಮನತಟ್ಟುತ್ತದೆ.ತನ್ನ ಅಪ್ಪ ನನ್ನನ್ನು ಮುಕ್ತವಾಗಿ ಬೆಳೆಸುತ್ತ ಪ್ರೀತಿ ತೋರಿಸುತ್ತಿದ್ದ ಆದರೆ ತಂದೆಯ ಬಯಕೆಗಳನ್ನು ಅರಿತು ನೋಡಲಿಲ್ಲ.ಮಲ್ಲವ್ವ ಅರಿವು ನೀಡಿದ್ದನ್ನು ಸ್ವೀಕರಿಸಿದರೂ ತಂದೆಗೆ ಸ್ವಾತಂತ್ರ್ಯ ನೀಡಲು ಬಯಸಿದರೂ ಆತ ತೀರಿ ಹೋಗಿದ್ದ. ವಾದಿರಾಜನ ಕಣ್ಣಿಂದ ಈ ಕಥನ ನಿರೂಪಣೆಗೊಂಡಿದೆ.

'ಏಳು ಮಲ್ಲಿಗೆ ತೂಕದವಳು' ಯೌವ್ವನಸ್ಥ ಗಂಡು ಮತ್ತು ಹೆಣ್ಣಿನ ನಡುವೆ ಸೆಳೆತ ಹುಟ್ಟುವುದು ನಿಸರ್ಗದ ನಿಯಮವೆ. ಸಮಾಜ ನೈತಿಕ ನಿಯಮಗಳನ್ನು ವಿಧಿಸಿರುತ್ತದೆ. ಗಂಡು,ಹೆಣ್ಣಿನ ಸೆಳೆತಕ್ಕೆ ಸಮಾಜದ ಒಪ್ಪಿಗೆ ಬೇಕು. ಮದುವೆ ರಚನೆಯಾದದ್ದೆ ಈ ನಿಯಮದಡಿಯಲ್ಲಿ.

ಆದರೆ ಅಪವಾದಗಳು ನೂರಿರುತ್ತವೆ.ಈ ಕತೆಯಲ್ಲಿ ಹನುಮ-ನೀಲವ್ವರ ನಡುವೆ ನಿಸರ್ಗದತ್ತ ಸೆಳೆತ ಹುಟ್ಟುತ್ತದೆ.ಆದರೆ ಕುಟುಂಬ,ಸಮಾಜದ ಒಪ್ಪಿಗೆ ಇರುವುದಿಲ್ಲ.ನೀಲವ್ವ ಕೋಟೆ ಮನೆತನದ ಸೊಸೆ,ರಾಣಿ ಅಚ್ಚಮ್ಮನ ಸೊಸೆ.ಅದ್ಯಾವ ಶಾಪದಿಂದಲೋ ಏನೋ ನೀಲವ್ವನಿಗೆ ಗಂಡನಿಂದ ದೈಹಿಕ ಸುಖ ಲಭಿಸುತ್ತಿಲ್ಲ.ವಿರಹದುರಿಯಲ್ಲಿ ಬೇಯುವ ನೀಲವ್ವ ಜೀತದಾಳು ಹನುಮನ ಆಕರ್ಷಕ ಮೈಕಟ್ಟು,ಯೌವ್ವನ ಸೆಳೆಯುತ್ತದೆ.

ನೀಲವ್ವನ ಸೆಳೆತಹಾಗೆ ನೋಡಿದರೆ ನ್ಯಾಯಯುತವಾದದ್ದೇ. ಸಮಾಜದ,ಕೋಟೆಮನೆಯ ದೃಷ್ಟಿಯಿಂದ ನ್ಯಾಯಯುತವಾದದ್ದಲ್ಲ. ಆಕ್ರಮ ಸಂಬಂಧವೆಂದು ಪರಿಗಣನೆಗೆ ಒಳಗಾಗುತ್ತದೆ. ನೀಲವ್ವನಿಗೆ ನ್ಯಾಯ ಸಿಗುವುದಿಲ್ಲ. ಕಥೆಯಲ್ಲಿ ಅತ್ತೆಯ ಎಚ್ಚರಿಕೆಯನ್ನು ಮೀರಿ ನೀಲವ್ವ ಹನುಮನ ಜೊತೆ ಸೇರಿ ದೇಹಸುಖ ಅನುಭವಿಸುತ್ತಾಳೆ. ಜಾನಪದ, ಪೌರಾಣಿಕ, ಇತಿಹಾಸ, ಸಮಾಜ ಚರಿತ್ರೆಗಳಲ್ಲಿ ಇಂತಹ 'ಅಕ್ರಮ' ಸಂಬಂಧಗಳಿಗೆ ಶಿಕ್ಷೆ ಎಂದರೆ ಬಲಿ. ಜೀತದಾಳು ಹನುಮನ ಬಲಿ ಮಾತ್ರ ನಿಶ್ಚಿತ. ಅಕಸ್ಮಾತ್ ಹೆಣ್ಣು ಬಲಿಯಿಂದ ತಪ್ಪಿಸಿಕೊಂಡರೂ ವಾಡೆಯಲ್ಲಿ ಕೊಳೆತು ಹೋಗುತ್ತದೆ. ರಾಣಿ ಅಚ್ಚಮ್ಮನಲ್ಲಿ ಕರಗುವ ಮನಸಿದ್ದರೆ ಹನುಮ-ನೀಲವ್ವರಿಗೆ ಬಯಲ ದಾರಿ ಸಿಗುತ್ತಿತ್ತು.

ಕೊನೆಯದಾಗಿ ಈ ಕತೆಗಳು ಓದಿಸಿಕೊಳ್ಳುತ್ತವೆ. ಎಣಿಕೆಯಂತೆ ಪಾಜಿ ತಲುಪುತ್ತವೆ. ಭಾಷಿಕ ರಚನೆಯಲ್ಲಿ ತೊಡಕಿಲ್ಲ.ಕತೆಗಳಲ್ಲಿ ಕಥೆಗಳೂ ಇವೆ. ಸರಳತೆಯನ್ನು ಮೀರಿ ಸಂಕೀರ್ಣತೆ ಬೇಕು. ಅದರ ಕೊರತೆಯಿದೆ.ಕತೆಯ ವಸ್ತುಗಳು ಓದುಗನಿಗೆ ಅಪರಿಚಿತವೆನಿಸಬೇಕು.ಮುಂದಿನ ಕತೆಗಳಲ್ಲಿ ಹೆಚ್ಚಿನದನ್ನು ನಿರೀಕ್ಷಿಸಬೇಕಾಗಿದೆ.”