ಏಳೆಯಲ್ಲೊಂದು ಗಝಲ್

ಏಳೆಯಲ್ಲೊಂದು ಗಝಲ್

ಕವನ

ನಸುಕಿನ ವೇಳೆಯ ಅರುಣನ ತೆರದಲಿ

ಬಂದಿಹೆ ನಲ್ಲೆ ನನಗಾಗಿ||

ಲಸತಿನ ಭಾವವ ತೋರುತ ನಲಿಯುತ

ನಿಂದಿಹೆ ನಲ್ಲೆ ನನಗಾಗಿ||

 

ಜಸವನು ತರುತಿದೆ ಮೋದದ ಅಲೆಯಲಿ

ನಾದವು ಹೊಮ್ಮಿ ಬರುವುದೇ|

ಮಸುಕದ ಗುರುತದು ಎದೆಯಲಿ ಚಿತ್ರಿಸಿ

ಸಂದಿಹೆ ನಲ್ಲೆ ನಿನಗಾಗಿ||

 

ನಸುನಗು ಹರಿಸಿದ ಹರಿಣಿಯ ಮನವನು

ಗೆದ್ದನು ರಮಣ ಒಲವೊಳು|

ಹೊಸಹೊಸ ತೆರೆಯದು ಏಳುವ ಕಡಲಲಿ

ಮಿಂದಿಹೆ ನಲ್ಲೆ ನಿನಗಾಗಿ||

 

ದೆಸೆಯನು ಕಾಣದೆ ಕುಳಿತೆನು ದಡದೊಳು

ನಿನ್ನನು ನಂಬಿ ಕಾದೆನು|

ಮಸೆಯುತ ಖಡ್ಗವ ನಿಗಿನಿಗಿ ಕೆಂಡದಿ

ಬೆಂದಿಹೆ ನಲ್ಲೆ ನಿನಗಾಗಿ||

 

ಕುಸುಮದ ಕೋಮಲ ಕಾವ್ಯದ ಪಂಡಿತ

ಅಭಿನವ ಬರೆದ ಪದ್ಯವು|

ಪಸರಿಸಿ ನಿಲ್ಲಲು ಲೋಕದ ಆಚೆಗೆ

ನೊಂದಿಹೆ ನಲ್ಲೆ ನಿನಗಾಗಿ||

-*ಶಂಕರಾನಂದ ಹೆಬ್ಬಾಳ*

ಚಿತ್ರ: ಗೂಗಲ್ 

 

ಚಿತ್ರ್