ಏಷ್ಯಾದ ಆಯ್ದ ಕಥೆಗಳು

ಏಷ್ಯಾದ ಆಯ್ದ ಕಥೆಗಳು

ಪುಸ್ತಕದ ಲೇಖಕ/ಕವಿಯ ಹೆಸರು
ವಳ್ಳಿ ಕಣ್ಣನ್ ಮತ್ತು ಇತರರು
ಪ್ರಕಾಶಕರು
ನ್ಯಾಷನಲ್ ಬುಕ್ ಟ್ರಸ್ಟ್, ನವದೆಹಲಿ
ಪುಸ್ತಕದ ಬೆಲೆ
ರೂ.80/-

ಇದು ಯುನೆಸ್ಕೋದ ಏಷ್ಯಾ ಸಾಂಸ್ಕೃತಿಕ ಕೇಂದ್ರ ಪ್ರಾಯೋಜಿಸಿದ ಏಷ್ಯಾದ ಸಹ ಪ್ರಕಟಣಾ ಕಾರ್ಯಕ್ರಮದ ಅನುಸಾರ ಪ್ರಕಟಿಸಿದ ಏಷ್ಯಾದ 14 ದೇಶಗಳ ಸಮಕಾಲೀನ ಕತೆಗಳ ಸಂಕಲನ.

ಮೊದಲ ಕತೆ ಅಫಘಾನಿಸ್ತಾನದ್ದು: ಗಿಡುಗ ಮತ್ತು ಮರ. ಒಂದೂರಿನಲ್ಲೊಂದು ಮೋಚಿಯ ಸಣ್ಣ ಅಂಗಡಿ. ಆತ ಬೆಳಗ್ಗೆ ಅಂಗಡಿ ತೆರೆದರೆ ಸಂಜೆಯ ವರೆಗೆ ಕೂತಿರುತ್ತಿದ್ದ. ಅವನ ಅಂಗಡಿಗೆ ಪ್ರತಿ ದಿನ ಇಬ್ಬರು ಸೋಮಾರಿಗಳು ಬಂದು ಹರಟೆ ಹೊಡೆಯುತ್ತಾ ಇರುತ್ತಿದ್ದರು. ಅದೊಂದು ದಿನ ಮೋಚಿ ಖಿನ್ನನಾಗಿದ್ದ. ಯಾಕೆಂದು ಕೇಳಿದಾಗ “ನನ್ನ ಗಿಡುಗ ತಪ್ಪಿಸಿಕೊಂಡಿದೆ” ಎಂದ. ಮುಂದುವರಿದು ಅವನು ಹೇಳಿದ: “ಅದಕ್ಕೇನೋ ಸಾಯುವ ಕಾಲ ಬಂದಿದೆ. ಅದರ ಕಾಲಿಗೆ ಕಟ್ಟಿದ ಹಗ್ಗ ಹಾಗೇ ಇದೆ. ಆ ಅನಿಷ್ಟ ಗಿಡುಗ ಮರದ ಮೇಲೆ ಕುಳಿತೊಡನೆ ಆ ದಾರ ಕೊಂಬೆಗಳಿಗೆ ಸಿಕ್ಕಿಕೊಳ್ಳುತ್ತದೆ. ಅದು ಸಾಯುವ ವರೆಗೂ ಅಲ್ಲೇ ನೇತಾಡುತ್ತಿರುತ್ತದೆ.” ಹಾಗೇ ಆಯಿತು; ಮರುದಿನ ಹತ್ತಿರದ ಮರದಿಂದ ಸತ್ತ ಗಿಡುಗ ನೇತಾಡುತ್ತಿತ್ತು.

ಎರಡನೆಯದು ಬರ್ಮಾದ ಕತೆ: ಸುಂದರ ನೀರುಹಕ್ಕಿ. ಒಬ್ಬ ಬಾಲಕ ಒಂದು ನಾಯಿ, ಒಂದು ಬೆಕ್ಕು ಮತ್ತು ಒಂದು ಕೋಳಿ ಸಾಕುತ್ತಿದ್ದ. ಮಳೆಗಾಲದ ಒಂದು ದಿನ ದೊಡ್ಡ ಮರದ ಕೆಳಗೆ ಗೆಳೆಯನೊಂದಿಗೆ ಮಣ್ಣಿನ ಗೊಂಬೆ ಮಾಡುತ್ತಾ ಕುಳಿತಿದ್ದ. ಆಗ ಕ್ವೀಗಿ ಎಂಬ ದೊಡ್ಡ ಹುಡುಗ ಅಲ್ಲಿಗೆ ಬಂದ. ಅವನ ಬಳಿ ಒಂದು ಚಂದದ ನೀರುಹಕ್ಕಿ ಇತ್ತು. ಈ ಬಾಲಕನಿಗೆ ಅದನ್ನು ಕಂಡು ಆಸೆಯಾಯಿತು. ಅದನ್ನು ಕೊಡು ಎಂದು ಕ್ವೀಗಿಯನ್ನು ಕೇಳಿದಾಗ ಬದಲಾಗಿ ಹತ್ತು ಸಿಗರೇಟು ಕೊಡಬೇಕೆಂದ. ಬಾಲಕ ಕೊನೆಗೆ ಮನೆಗೆ ಓಡಿ ಹೋಗಿ, ಚಿಕ್ಕಮ್ಮನ ಕಪಾಟಿನಿಂದ ಹತ್ತು ಸಿಗರೇಟು ಕದ್ದು ತಂದಿತ್ತು, ನೀರು ಹಕ್ಕಿ ಮನೆಗೊಯ್ದ. ಆ ದಿನ ರಾತ್ರಿ ತನ್ನ ಸಿಗರೇಟು ಡಬ್ಬದಲ್ಲಿ ಸಿಗರೇಟು ಕಡಿಮೆ ಇದ್ದುದನ್ನು ಕಂಡು ಚಿಕ್ಕಮ್ಮನಿಗೆ ತನ್ನ ತಮ್ಮ ಸ್ಯಾನ್ ಆಂಗ್ ಮೇಲೆ ಅನುಮಾನ. ಅವಳು ಚಿಕ್ಕಪ್ಪನಿಗೆ ಬಯ್ಯತೊಡಗಿದಳು. ಅವರಿಬ್ಬರೊಳಗೆ ಜಗಳವಾಗುತ್ತಿದ್ದಾಗ ಬಾಲಕ ತಾನೇ ಸಿಗರೇಟು ಕದ್ದೆನೆಂದು ಸತ್ಯ ಹೇಳುತ್ತಾನೆ. ಚಿಕ್ಕಮ್ಮ “ಈ ಸಲ ನಿನ್ನನ್ನು ಕ್ಷಮಿಸುತ್ತೇನೆ ಆದರೆ ಮತ್ತೆ ಇಂತಹ ಕೆಲಸ ಮಾಡಬೇಡ” ಎಂದು ಎಚ್ಚರಿಸುತ್ತಾಳೆ.

ಮೂರನೆಯದು ಭಾರತದ ಮಲೆಯಾಳಿ ಕತೆ: ಮೇಡಂನ ಬಸ್ ಸವಾರಿ. ಇದು ವಲ್ಲಿಯಮ್ಮ ಎಂಬ ಹುಡುಗಿಯ ಕತೆ. ಎಂಟು ವರುಷದ ಅವಳಿಗೆ ಎಲ್ಲದರಲ್ಲಿಯೂ ಕುತೂಹಲ. ಮನೆಯ ಹೊಸ್ತಿಲಿನಲ್ಲಿ ನಿಂತು ಮನೆಯೆದುರಿನ ರಸ್ತೆಯ ಆಗುಹೋಗುಗಳನ್ನು ನೋಡುವುದು ಅವಳಿಗೆ ಬಹಳ ಇಷ್ಟ. ಆರು ಮೈಲು ದೂರದ ಪಟ್ಟಣದಿಂದ ಇವಳ ಹಳ್ಳಿಗೆ ಒಂದು ಬಸ್ಸು ಗಂಟೆಗೊಮ್ಮೆ ಬಂದು ಹೋಗುತ್ತಿತ್ತು. ಅದರಿಂದ ಇಳಿಯುವವರನ್ನು ವಳ್ಳಿ ಗಮನಿಸುತ್ತಿದ್ದಳು. ಅವಳಿಗೊಂದು ಆಸೆ ಹುಟ್ಟಿತು: ತಾನು ಆ ಬಸ್ಸಿನಲ್ಲಿ ಸವಾರಿ ಮಾಡಬೇಕೆಂದು. ಅವಳು ಬಸ್ಸು ಸವಾರಿ ಬಗ್ಗೆ ಮಾಹಿತಿ ಸಂಗ್ರಹಿಸತೊಡಗಿದಳು. ಪಟ್ಟಣಕ್ಕೆ ಬಸ್ಸಿನ ಟಿಕೇಟಿಗೆ ಮೂವತ್ತು ಪೈಸೆ ಎಂದು ಅವಳು ತಿಳಿದುಕೊಂಡಳು. ಒಂದು ದಿನ ಅವಳು ಬಸ್ಸು ಹತ್ತಿ ಸವಾರಿ ಹೊರಟೇ ಬಿಟ್ಟಳು. ಅವಳ ಬಸ್ ಸವಾರಿಯ ಅನುಭವಗಳ ಕತೆ ಇದು.

ಇಂಡೋನೇಷಿಯಾದ ಕತೆ: ತಾತನಿಗೊಂದು ಉಡುಗೊರೆ. ಬಕ್ರಿ ಎಂಬ ಹುಡುಗ ಮುಂಜಾನೆ ಬೆಟ್ಟ ಹತ್ತಿ ಮರದಿಂದ ಬಿದ್ದಿದ್ದ ಹಣ್ಣುಗಳನ್ನೆಲ್ಲ ತಾತನಿಗಾಗಿ ಆಯ್ದುಕೊಂಡ. ಆಗ ಅಲ್ಲಿಗೆ ಬಂದ ಇತರ ನಾಲ್ವರು ಹುಡುಗರಿಗೆ ಒಂದೂ ಹಣ್ಣು ಸಿಗದೆ ನಿರಾಶೆ. ಅವರು ಬೆಟ್ಟವಿಳಿದು ಹೋಗುತ್ತಿದ್ದಾಗ ಬಕ್ರಿ ಅವರನ್ನು ಕರೆದು, ತನ್ನಲ್ಲಿದ್ದ ಹಣ್ಣುಗಳನ್ನು ಎಲ್ಲರಿಗೂ ಹಂಚುತ್ತಾನೆ. ಕೊನೆಗೆ ಅವರೆಲ್ಲರೂ ಬಕ್ರಿಯ ತಾತನ ಮನೆಗೆ ಹೋಗಿ ಎಲ್ಲ ಹಣ್ಣುಗಳನ್ನು ತಾತನಿಗೆ ಕೊಡುತ್ತಾರೆ. ಕವಿ ಮತ್ತು ಸೂರ್ಯ ಎಂಬ ಇರಾನಿನ ಕತೆ, ಸೂರ್ಯನ ಬಗೆಗಿನ ಕಲ್ಪನೆಗಳಿಂದ ತುಂಬಿದೆ.

ನರಿಯ ಹುಡುಗ ಎಂಬ ಜಪಾನಿನ ಕತೆ, “ಹೊಸ ಚಪ್ಪಲಿಯನ್ನು ರಾತ್ರಿ ಹಾಕಿಕೊಂಡರೆ ಅವನನ್ನು ನರಿ ವಶ ಪಡಿಸಿಕೊಳ್ಳುತ್ತದೆ” ಎಂಬ ಮೂಢ ನಂಬಿಕೆಯ ಸುತ್ತ ಹೆಣೆದಿರುವ ಕತೆ. ಕೊರಿಯಾದ ಕತೆ: ಯೂನಿ ಮತ್ತು ಎತ್ತು. ಬಾಲಕ ಯೂನಿಗೆ ಕುದುರೆ ಎಂದರೆ ಇಷ್ಟ; ಎತ್ತು ಎಂದರೆ ಭಯ. ಅಕಸ್ಮಾತ್ ಅವನ ಚೆಂಡು ಮರಕ್ಕೆ ಕಟ್ಟಿ ಹಾಕಿದ್ದ ಒಂದು ಎತ್ತಿನ ಕೆಳಗೆ ಉರುಳಿ ಹೋಯಿತು. ಆ ಚೆಂಡನ್ನು ತೆಗೆಯಲು ಯೂನಿ ಮತ್ತೆಮತ್ತೆ ಪ್ರಯತ್ನಿಸಿದ. ಅದು ಕೋಡುಗಳಿಂದ ಹಾಯ್ದರೆ ಎಂಬ ಭಯದಿಂದಾಗಿ ಅವನಿಗೆ ಚೆಂಡು ಪಡೆಯಲು ಸಾಧ್ಯವಾಗಲೇ ಇಲ್ಲ.

ಮಲೇಷ್ಯಾದ ಕತೆ: ನೆರೆ-ಹೊರೆ. ಅಕ್ಕಪಕ್ಕದ ಮನೆಗಳ ಬಾಲಕಿಯರು - ಝಲೇಲ ಮತ್ತು ಮೇಲಿಂಗ್. ಇವರು ಅಚ್ಚುಮೆಚ್ಚಿನ ಗೆಳತಿಯರು. ಮೇಲಿಂಗ್^ಗೆ ಅವಳ ಹೆತ್ತವರು ಒಂದು ನಾಯಿ ಮರಿಯನ್ನು ಹುಟ್ಟುಹಬ್ಬದ ಉಡುಗೊರೆಯಾಗಿ ಕೊಟ್ಟರು. ಅನಂತರ ಧಾರ್ಮಿಕ ನಂಬಿಕೆಗಳಿಂದಾಗಿ ಆ ಎರಡು ಕುಟುಂಬಗಳ ನಡುವೆ ತಾಕಲಾಟ. ಕೊನೆಗೆ ಆ ನಾಯಿಮರಿ ಸತ್ತೇ ಹೋಯಿತು. ಅನಂತರ ಝಲೇಳಲ ತಾಯಿ ಒಂದು ಬೆಕ್ಕಿನ ಮರಿ ತಂದು ಮೇಲಿಂಗಿಗೆ ಉಡುಗೊರೆ ಕೊಡುತ್ತಾಳೆ.

ನಂತರದ ಕತೆ ಮಾಂತ್ರಿಕ ಕೊಳಲು ಎಂಬ ನೇಪಾಳದ ಕತೆ. ತಾಯಿಯನ್ನು ಕಳೆದುಕೊಂಡ ಸುಕುಮಾರ್ ಹತ್ತು ವರುಷದ ಹುಡುಗ. ಅವನ ತಂದೆ ಅವನಿಗೆ ಕೊಳಲು ನುಡಿಸಲು ಕಲಿಸುತ್ತಾರೆ. ನಂತರ ತಂದೆಯೂ ತೀರಿಕೊಂಡಾಗ ಸುಕುಮಾರ್ ಅನಾಥನಾದ. ಚಿಕ್ಕಪ್ಪನ ಮನೆಯಲ್ಲಿ ವಾಸ ಮಾಡತೊಡಗಿದ ಸುಕುಮಾರ್ ವರುಷದ ನಂತರ ಮನೆ ಬಿಟ್ಟು ಹೊರಟ. ಆ ದಿನವೆಲ್ಲಾ ನಡೆದು, ಬೆಟ್ಟಗಳನ್ನು ದಾಟಿ ದೂರದ ಹಳ್ಳಿಯೊಂದನ್ನು ಸೇರಿದ. ಅಲ್ಲಿ ಇವನನ್ನು ಕಂಡ ಹಳ್ಳಿಯ ಮುಖ್ಯಸ್ಥನ ಮಡದಿ ತನ್ನ ಮನೆಗೆ ಕರೆದೊಯ್ಯುತ್ತಾಳೆ. ಅವಳಿಗೆ ಗಂಡುಮಕ್ಕಳಿಲ್ಲ. ಅವಳ ಒಬ್ಬಳೇ ಮಗಳಾದ  ಸಾಯಪತ್ರಿ ಸುಕುಮಾರನನ್ನು ಅಣ್ಣ ಎಂದು ಬಹಳ ಹಚ್ಚಿಕೊಂಡಳು. ಸುಕುಮಾರ್ ಆ ಮನೆಯಿಂದಲೂ ಹೊರಟ - ಹಳ್ಳಿಯ ಮುಖ್ಯಸ್ಥನ ಮನಗೆಲ್ಲಲಾಗಲಿಲ್ಲವೆಂಬ ಹತಾಶೆಯಿಂದ. ಆ ದಿನ ಸುಕುಮಾರ್ ಒಂದು ದೇವಾಲಯದಲ್ಲಿ ದೇವತೆಯನ್ನು ಆರ್ತನಾಗಿ ಪ್ರಾರ್ಥಿಸಿದ. ಮರುದಿನ ಅದೇ ಹಳ್ಳಿಗೆ ಸುಕುಮಾರ್ ಮರಳಿದಾಗ, ಸಾಯಪತ್ರಿ ತೀವ್ರ ಜ್ವರದಿಂದ ಮಲಗಿದ್ದಳು. ಸುಕುಮಾರ್ ಕೊಳಲು ನುಡಿಸತೊಡಗಿದ. ಕೊಳಲಿನ ಸ್ವರ ಕೇಳುತ್ತಿದ್ದಂತೆಯೇ ಸಾಯಪತ್ರಿ ಎದ್ದು ಕುಳಿತಳು. ಆಗ ಅವಳ ತಂದೆ ಸುಕುಮಾರನನ್ನು ತಬ್ಬಿಕೊಂಡು ಹೇಳಿದ, “ನಿಜವಾಗಿಯೂ ನೀನು ನನ್ನ ಸ್ವಂತ ಮಗ, ಎಂದಿಗೂ ನಿನ್ನನ್ನು ಇಲ್ಲಿಂದ ಹೋಗಲು ಬಿಡುವುದಿಲ್ಲ.”

ಪಾಕಿಸ್ತಾನದ ಕತೆ: ಟುನ್ನು ಮತ್ತು ಕತ್ತೆ. ದೋಬಿಯ ಕತ್ತೆಯೊಂದಿಗೆ ಬಾಲಕಿ ಟುನ್ನುವಿನ ತುಂಟತನದಿಂದಾದ ಅನಾಹುತಗಳ ಚಿತ್ರಣ. ನಂತರದ ಕತೆ ಫಿಲಿಪೈನ್ಸಿನದು: ಭಾಗ್ಯಶಾಲಿ ಹುಡುಗ. ತನ್ನ ಹನ್ನೊಂದು ವಯಸ್ಸಿನ ಮಗನನ್ನು ವಿದ್ಯಾಭ್ಯಾಸಕ್ಕಾಗಿ ಗೆಳೆಯನ ಮನೆಗೆ ಕಳಿಸಿಕೊಡುವಾಗ ಗೆಳೆಯನಿಗೆ ಆ ಬಾಲಕನ ತಂದೆ ಬರೆಯುವ ಪತ್ರದ ಮೂಲಕ ಆ ಸನ್ನಿವೇಶವನ್ನು ಕಟ್ಟಿಕೊಡುವ ಕತೆ.

ಸಿಂಗಾಪುರದ ಬಾಲಕನ ಬೆಕ್ಕಿನ ಪ್ರೀತಿಯ ಕತೆ: ಮರೆಯಲಾಗದ ಬೆಕ್ಕು. ಶ್ರೀಲಂಕಾದ ಕತೆ: ಮನೆಯಷ್ಟು ದೊಡ್ಡ ಲಾಂದ್ರ.ಅಲ್ಲಿ ವಾಸ ಮಾಡುತ್ತಿದ್ದ ಅಜ್ಜಿ ಮತ್ತು ಮೊಮ್ಮಗ ಬಡತನದಲ್ಲೇ ಬಾಳುತ್ತಿದ್ದರು. ಮೇ ತಿಂಗಳ ವೈಶಾಖಿ ಹಬ್ಬಕ್ಕಾಗಿ ತಮ್ಮ ಹಳ್ಳಿಯಲ್ಲೇ ಅತಿ ದೊಡ್ಡ ಗೂಡುದೀಪ ಮಾಡಬೇಕು ಎಂಬುದು ಮೊಮ್ಮಗನ ಆಸೆ. ಬೆಳೆಸಿದ್ದ ಸಿಹಿಗೆಣಸು ಮಾರಿ ಬಂದ ಹಣದಿಂದ ಬಣ್ಣದ ಕಾಗದ ಖರೀದಿಸಿದರು. ಅಜ್ಜಿ ಅದರಿಂದ ಹೂ ಮಾಡಿಕೊಟ್ಟಂತೆ ಗೂಡುದೀಪಕ್ಕೆ ಆಂಟಿಸತೊಡಗಿದ ಮೊಮ್ಮಗ. ವೈಶಾಖಿ ಹಬ್ಬದ ಮುನ್ನಾ ದಿನ ಆ ಬೃಹತ್ ಗೂಡುದೀಪ ತಯಾರು. ಅದು ಹಳ್ಳಿಯಲ್ಲಿ ದೊಡ್ಡ ಸುದ್ದಿಯಾಯಿತು.

ಕೊನೆಯ ಕತೆ ಥೈಲ್ಯಾಂಡಿನದು: ಮೊಟ್ಟೆ ಒಡೆಯುವ ಧೀರ. ಜ್ಯೂಕ್ ಎಂಬ ಬಾಲಕ ತಂದೆ ಕಲಿಸಿದ ತಂತ್ರ ಬಳಸಿ, “ಬೇಯಿಸಿದ  ಕೋಳಿ ಮೊಟ್ಟೆ ಒಡೆಯುವ ಸ್ಪರ್ಧೆ”ಯಲ್ಲಿ ಗೆಳೆಯರನ್ನೆಲ್ಲ ಸೋಲಿಸುವುದೇ ಕತೆಯ ಹೂರಣ.

ಮಕ್ಕಳ ಭಾವಲೋಕದ ನವಿರಾದ ಅಲೆಗಳನ್ನು ಮನಮುಟ್ಟುವಂತೆ ಚಿತ್ರಿಸುವ ಈ ಕತೆಗಳನ್ನು ಓದುವುದೇ ಖುಷಿ. ಏಷ್ಯಾದ ಎಲ್ಲ ದೇಶಗಳಲ್ಲಿಯೂ ಮಕ್ಕಳ ಮತ್ತು ಹಿರಿಯರ ಬದುಕಿನ ನೋವುನಲಿವುಗಳಲ್ಲಿ ಸಮಾನ ಎಳೆಗಳನ್ನು ಗಮನಿಸಿದಂತೆ ಬದುಕನ್ನು ಅರ್ಥೈಸುವ ಪರಿಯೇ ಬದಲಾಗಲು ಸಾಧ್ಯ.

ಪ್ರತಿಯೊಂದು ಕತೆಯಲ್ಲಿರುವ ಚಂದದ ಚಿತ್ರಗಳು ಕತೆಗಳ ಓದಿಗೆ ಪೂರಕ. ಪುಸ್ತಕದ ಕೊನೆಯಲ್ಲಿ ಎಲ್ಲ ಕತೆಗಳ ಲೇಖಕರ ಮತ್ತು ಚಿತ್ರಕಾರರ ಮಾಹಿತಿ ನೀಡಿರುವುದು ಉಪಯುಕ್ತ.

Comments

Submitted by shreekant.mishrikoti Tue, 12/17/2024 - 19:14

ಈ ಪುಸ್ತಕವನ್ನು https://archive.org/details/in.ernet.dli.2015.447756/page/4/mode/1up ಇಲ್ಲಿ ಪುಕ್ಕಟೆ ಓದಬಹುದು ಅಥವಾ ಕೆಳಗೆ pdf ಇತ್ಯಾದ format ಗಳ ಮೇಲೆ ಕ್ಲಿಕ್ ಮಾಡಿ ಇಳಿಸಿಕೊಳ್ಳಬಹುದು