ಐ.ಎ.ಎಸ್.ಗೆ ಬದಲಿ: ಬದಲಾವಣೆಗೆ ನಾಂದಿ
ಜಡ್ಡುಗಟ್ಟಿದ್ದ ಆಡಳಿತ ವ್ಯವಸ್ಥೆಯಲ್ಲಿ ದಕ್ಷತೆ, ಚುರುಕುತನ ಮತ್ತು ಹೊಸತನ ತರಲು ಕೇಂದ್ರ ಸರಕಾರ ಮುಂದಾಗಿದೆ. ಭಾರತೀಯರನ್ನು ಗುಲಾಮಿಗಳನ್ನಾಗಿಯೇ ಇರಿಸಿ ದಮನಿಸಲಿಕ್ಕಾಗಿ ಮತ್ತು ಈ ದೇಶದ ಸಂಪತ್ತನ್ನೆಲ್ಲ ದೋಚಲಿಕ್ಕಾಗಿ ಬ್ರಿಟಿಷರು ರೂಪಿಸಿದ್ದ ಆಡಳಿತ ವ್ಯವಸ್ಥೆಯಲ್ಲಿ “ನೇರ ನೇಮಕಾತಿ” ಎಂಬ ಬದಲಾವಣೆಗೆ ರಂಗ ಸಜ್ಜಾಗಿದೆ.
ಅದುವೇ “ಐ.ಎ.ಎಸ್.ಗೆ ಪರ್ಯಾಯ ವ್ಯವಸ್ಥೆ” ಎಂಬ ಚಾರಿತ್ರಿಕ ಬದಲಾವಣೆ. ಇದರಿಂದಾಗಿ ಕೇಂದ್ರ ಸರಕಾರದ ಉನ್ನತ ಹುದ್ದೆ ಪಡೆಯಲು ಐ.ಎ.ಎಸ್. ಅಧಿಕಾರಿಗಳಿಗೆ ಮಾತ್ರ ಸಾಧ್ಯ ಎಂಬ ಪರಿಸ್ಥಿತಿ ಬದಲಾಗಲಿದೆ. ದೇಶದ ಆಡಳಿತ ನಡೆಸುವುದರಲ್ಲಿ ಮಹತ್ವದ ಪಾತ್ರ ವಹಿಸುವ ಉನ್ನತಾಧಿಕಾರಿಗಳ ನೇಮಕ ಪ್ರಕ್ರಿಯೆಯನ್ನು ಸ್ವಾತಂತ್ರ್ಯ ಗಳಿಸಿದ ೭೦ ವರುಷಗಳ ನಂತರವಾದರೂ ಕೇಂದ್ರ ಸರಕಾರ ಬದಲಾಯಿಸಿರುವುದು ಸ್ವಾಗತಾರ್ಹ. ಇನ್ನು ಮುಂದೆ ಐ.ಎ.ಎಸ್. ಅಧಿಕಾರಿಗಳಿಗೆ ಪರ್ಯಾಯವಾಗಿ ಖಾಸಗಿ ರಂಗದ ತಜ್ನರನ್ನು ಜಂಟಿ ಕಾರ್ಯದರ್ಶಿ ಹುದ್ದೆಗಳಿಗೆ ನೇರವಾಗಿ ನೇಮಕ ಮಾಡಿಕೊಳ್ಳುವ ಪ್ರಕ್ರಿಯೆಯನ್ನು ೧೦ ಜೂನ್ ೨೦೧೮ರಂದು ಕೇಂದ್ರ ಸರಕಾರ ಘೋಷಿಸಿದೆ.
ಮೊದಲ ಹಂತದಲ್ಲಿ ೧೦ ಇಲಾಖೆಗಳ ಜಂಟಿ ಕಾರ್ಯದರ್ಶಿ ಹುದ್ದೆಗಳಿಗೆ ವೃತ್ತಿಪರರಿಂದ ಆನ್-ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆ ಇಲಾಖೆಗಳು: ಕಂದಾಯ, ಹಣಕಾಸು ಸೇವೆ, ಆರ್ಥಿಕ ವ್ಯವಹಾರ, ಕೃಷಿ, ಸಹಕಾರ, ರೈತಕಲ್ಯಾಣ, ರಸ್ತೆ ಸಾರಿಗೆ ಮತ್ತು ಹೆದ್ದಾರಿ, ಬಂದರು, ಪರಿಸರ, ಅರಣ್ಯ ಮತ್ತು ಹವಾಮಾನ ವೈಪರೀತ್ಯ, ಹೊಸ ಮತ್ತು ನವೀಕರಿಸಬಲ್ಲ ಇಂಧನ, ನಾಗರಿಕ ವಿಮಾನಯಾನ, ವಾಣಿಜ್ಯ.
ಕೇಂದ್ರ ನಾಗರಿಕ ಸೇವಾ ಆಯೋಗದ (ಯು.ಪಿ.ಎಸ್.ಸಿ.) ಪರೀಕ್ಷೆಯಲ್ಲಿ ಉನ್ನತ ಶ್ರೇಣಿ ಪಡೆದು, ಐ.ಎ.ಎಸ್. ಅಧಿಕಾರಿ ವರ್ಗಕ್ಕೆ ಆಯ್ಕೆಯಾಗಿ, ಒಂದು ದಶಕಕ್ಕಿಂತ ಅಧಿಕ ಸೇವಾ ಅನುಭವ ಗಳಿಸಿದ ಐ.ಎ.ಎಸ್. ಅಧಿಕಾರಿಗಳನ್ನು ಮಾತ್ರ ಜಂಟಿ-ಕಾರ್ಯದರ್ಶಿ ಹುದ್ದೆಗೆ ನೇಮಿಸುವುದು ಈಗಿನ ಪರಿಪಾಠ. ಆದರೆ ಇನ್ನು ಮುಂದೆ ಖಾಸಗಿ ರಂಗದ ತಜ್ನರಿಗೂ, ಅನುಭವಿಗಳಿಗೂ ಜಂಟಿ-ಕಾರ್ಯದರ್ಶಿ ಹುದ್ದೆಗೇರುವ ಅವಕಾಶ.
ಬ್ರಿಟಿಷರು ರೂಪಿಸಿದ ಶೋಷಣೆ ಮತ್ತು ದಬ್ಬಾಳಿಕೆಯೇ ಮೂಲವಾದ ಆಡಳಿತ ವ್ಯವಸ್ಥೆ ಸ್ವಾತಂತ್ರ್ಯ ಗಳಿಸಿದ ನಂತರವೂ ಭಾರತದಲ್ಲಿ ಹಾಗೆಯೇ ಮುಂದುವರಿದದ್ದು ನಮ್ಮ ದೇಶಕ್ಕೆ ಶಾಪವಾಯಿತು. ಆ ವ್ಯವಸ್ಥೆ ಸಂವೇದನಾರಹಿತವಾಗಿ ಹಾಗೂ ಜನವಿರೋಧಿಯಾಗಿಯೇ ಬೆಳೆಯಿತು. ಇದೀಗ ತುಕ್ಕು ಹಿಡಿದ ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸಿ, ಅದನ್ನು ಜನಪರವಾಗಿಸಲು ಹಾಗೂ ಪ್ರತಿಭಾನ್ವಿತ ವೃತ್ತಿಪರರ ಕ್ರಿಯಾಶೀಲತೆಯನ್ನು ಸರಕಾರಿ ಸೇವೆಯಲ್ಲಿ ಬಳಸಿಕೊಳ್ಳುವ ಉದ್ದೇಶದಿಂದ ಈ ಬದಲಾವಣೆ ತರಲಾಗಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ.
ಜಂಟಿ-ಕಾರ್ಯದರ್ಶಿ ಹುದ್ದೆಗೆ ಈ ನೂತನ ಆಯ್ಕೆ ಪ್ರಕ್ರಿಯೆ ಪ್ರಕಾರ ಅರ್ಜಿದಾರರ ವಯಸ್ಸು ೧ ಜುಲಾಯಿ ೨೦೧೮ರಂದು ಕನಿಷ್ಠ ೪೦ ವರುಷ ಆಗಿರಬೇಕು. ಅವರ ಶಿಕ್ಷಣಾರ್ಹತೆ: ವಿಶ್ವವಿದ್ಯಾಲಯದಿಂದ ಪದವಿ ಅಥವಾ ಅದಕ್ಕಿಂತ ಹೆಚ್ಚಿನ ಶಿಕ್ಷಣ. ಅವರ ವೃತ್ತಿಪರ ಅರ್ಹತೆ: ರಾಜ್ಯ ಸರಕಾರ ಅಥವಾ ಕೇಂದ್ರಾಡಳಿತ ಪ್ರದೇಶದಲ್ಲಿ ಜಂಟಿ-ಕಾರ್ಯದರ್ಶಿಗೆ ಸಮಾನ ಹುದ್ದೆಯಲ್ಲಿರುವ ಅಧಿಕಾರಿ; ಯಾವುದೇ ಸಾರ್ವಜನಿಕ ಸ್ವಾಮ್ಯದ ಉದ್ಯಮ, ಸಂಸ್ಥೆ ಅಥವಾ ಸಂಶೋಧನಾ ಸಂಸ್ಥೆಯಲ್ಲಿ ಅಥವಾ ಖಾಸಗಿ ಉದ್ಯಮದಲ್ಲಿ ೧೫ ವರುಷಕ್ಕಿಂತ ಹೆಚ್ಚಿನ ಕೆಲಸದ ಅನುಭವ.
ನೇರ ನೇಮಕಾತಿಯ ಜಂಟಿ-ಕಾರ್ಯದರ್ಶಿ ಹುದ್ದೆಗಳ ಗುತ್ತಿಗೆ ಅವಧಿ ಮೂರು ವರುಷ; ಅವರ ಕೆಲಸ ತೃಪ್ತಿಕರವಾಗಿದ್ದರೆ ಐದು ವರುಷಗಳ ವರೆಗೆ ವಿಸ್ತರಿಸುವ ಅವಕಾಶ. ಆದರೆ, ಕಾರ್ಯಕ್ಷಮತೆ ತೃಪ್ತಿಕರವಾಗಿ ಇಲ್ಲದಿದ್ದರೆ ಮೂರು ತಿಂಗಳ ನೋಟಿಸ್ ನೀಡಿ, ಈ ಗುತ್ತಿಗೆ ರದ್ದು. ಅವರ ಶ್ರಮಕ್ಕೆ ತಕ್ಕ ವೇತನ ನಿಗದಿ ಪಡಿಸಲಾಗಿದೆ: ಮಾಸಿಕ ವೇತನ ರೂ.೧,೪೪,೨೦೦ರಿಂದ ರೂ.೨,೧೮,೨೦೦. ಜೊತೆಗೆ ಭತ್ತೆ ಮತ್ತು ಇತರ ಸೌಲಭ್ಯಗಳೂ ಲಭ್ಯ.
ಇದಲ್ಲದೆ, ಆಡಳಿತ ಸುಧಾರಣೆಗಾಗಿ ಕೇಂದ್ರ ಸರಕಾರ ಹಲವು ವಿನೂತನ ಹೆಜ್ಜೆಗಳನ್ನಿಟ್ಟಿದೆ. ಇತ್ತೀಚೆಗೆ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮುಸ್ಸೋರಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ಐ.ಎ.ಎಸ್. ಹಾಗೂ ತತ್ಸಮಾನ ಶ್ರೇಣಿಗಳ ಅಭ್ಯರ್ಥಿಗಳ ಜೊತೆ ಒಂದು ದಿನವಿಡೀ ಸಮಾಲೋಚನೆ ನಡೆಸಿದರು. ಇದು, ದೇಶದ ಅಭಿವೃದ್ಧಿಗಾಗಿ ಕೇಂದ್ರ ಸರಕಾರದ ಆದ್ಯತೆಗಳನ್ನು ಪ್ರಧಾನ ಮಂತ್ರಿಗಳಿಂದಲೇ ನೇರವಾಗಿ ತಿಳಿದುಕೊಳ್ಳುವ ಅಪೂರ್ವ ಅವಕಾಶ ಒದಗಿಸಿತು. ಮಾತ್ರವಲ್ಲ, ತರಬೇತಿಯ ನಂತರ, ತಾವು ನಿಯುಕ್ತರಾದ ರಾಜ್ಯಗಳಲ್ಲಿ ಏನೇನು ಮಾಡಲಿದ್ದೇವೆ ಎಂದು ಆ ಅಭ್ಯರ್ಥಿಗಳು ಪ್ರಧಾನ ಮಂತ್ರಿಗಳಿಗೆ “ಪಾಠ” ಒಪ್ಪಿಸಬೇಕಾಯಿತು. ಅನಂತರ, ಕೇಂದ್ರ ಸರಕಾರದ ಹಿರಿಯ ಕಾರ್ಯದರ್ಶಿಗಳಿಂದ ಅವರಿಗೆ ಮಾರ್ಗದರ್ಶನ. ಇದು, ಅತ್ಯಂತ ಕೆಳಹಂತದ ಐ.ಎ.ಎಸ್. ಅಧಿಕಾರಿಗಳಿಗೆ ಅತ್ಯಂತ ಮೇಲ್-ಹಂತಹ ಅಧಿಕಾರಿಗಳ ಜೊತೆ ಸಂವಹನ ಕಲ್ಪಿಸುವ ಮೊದಲ ಪ್ರಯತ್ನ.
ಕೇಂದ್ರ ಸರಕಾರ ನೇರ ನೇಮಕಾತಿಯ ಐತಿಹಾಸಿಕ ಪ್ರಕ್ರಿಯೆ ಘೋಷಿಸಿದ ನಂತರ ಕೆಲವು ನಿವೃತ್ತ ಐ.ಎ.ಎಸ್. ಅಧಿಕಾರಿಗಳಿಂದ ಹಾಗೂ ಇನ್ನೂ ಕೆಲವರಿಂದ ಇದರ ಬಗ್ಗೆ ಅಪಸ್ವರ ಕೇಳಿ ಬಂದಿದೆ. ಸ್ವಾತಂತ್ರ್ಯಾ ನಂತರ, ಐ.ಎ.ಎಸ್. ಅಧಿಕಾರಿಗಳ ಕೂಟ ಈ ದೇಶದ ಅತ್ಯಂತ ಪ್ರಭಾವಿ ಕೂಟವಾಗಿ ಬೆಳೆದಿದೆ. ಇಗ ತನ್ನ ಚಕ್ರಾಧಿಪತ್ಯ ಅಲುಗಾಡಲಿದೆ ಎಂಬ ಭಯವೇ ಈ ಅಪಸ್ವರಕ್ಕೆ ಕಾರಣ ಎನ್ನಬೇಕಾಗಿದೆ. ಜೊತೆಗೆ, ಕಳೆದ ೭೦ ವರುಷಗಳಲ್ಲಿ ಈ ದೇಶದ ಹಲವು ಹಗರಣಗಳಿಗೆ ಹಾಗೂ ರಕ್ತಬೀಜಾಸುರನಂತೆ ಬೆಳೆದಿರುವ ಭ್ರಷ್ಟಾಚಾರಕ್ಕೆ ಕಾರಣವಾಗಿರುವ ರಾಜಕಾರಣಿ – ಅಧಿಕಾರಿ – ಸಮಾಜಘಾತಕರ ಪಾಪಿಕೂಟಗಳೇ ಆಡಳಿತದಲ್ಲಿ ದಕ್ಷತೆ ಮತ್ತು ಪಾರದರ್ಶಕತೆ ತರುವ ಎಲ್ಲ ಪ್ರಯತ್ನಗಳನ್ನೂ ವಿರೋಧಿಸುವುದು ಸಹಜ.
ಅದೇನಿದ್ದರೂ ದೂರಗಾಮಿ ಪರಿಣಾಮ ಬೀರಬಲ್ಲ ಇಂತಹ ಬದಲಾವಣೆಗಳ ಮೂಲಕ ದೇಶದ ಆಡಳಿತ ವ್ಯವಸ್ಥೆಯನ್ನು ದಕ್ಷ ಹಾಗೂ ಜನಪರವಾಗಿ ಬದಲಾಯಿಸಲು ಸಾಧ್ಯವಿದೆ. ಆದ್ದರಿಂದ, ನಮ್ಮೆಲ್ಲರ ಹಿತಕ್ಕಾಗಿ, ಈ ಬದಲಾವಣೆಯ ಪರವಾಗಿ ಪ್ರಬಲ ಜನಾಭಿಪ್ರಾಯ ರೂಪುಗೊಳ್ಳಲು ಇದು ಸಕಾಲ, ಅಲ್ಲವೇ?