ಐಎನ್‌ಎಸ್ ವಿರಾಟ್ ಯುದ್ಧನೌಕೆ ಇನ್ನು ನೆನಪು ಮಾತ್ರ

ಐಎನ್‌ಎಸ್ ವಿರಾಟ್ ಯುದ್ಧನೌಕೆ ಇನ್ನು ನೆನಪು ಮಾತ್ರ

೧೯ ಸಪ್ಟಂಬರ್ ೨೦೨೦ರಂದು “ಐಎನ್‌ಎಸ್ ವಿರಾಟ್” ಯುದ್ಧನೌಕೆ ಮುಂಬೈಯಿಂದ ಗುಜರಾತಿನ ಅಲಾಂಗಿಗೆ ತನ್ನ ಕೊನೆಯ ಸಮುದ್ರಯಾನ ಆರಂಭಿಸಿತು. ಭಾರತದ ಹೆಮ್ಮೆಯ ವಿಮಾನವಾಹಕ ಯುದ್ಧನೌಕೆಯಾಗಿದ್ದ ಐಎನ್‌ಎಸ್ ವಿರಾಟ್ ಮುಂಬೈ ಹಡಗುಕಟ್ಟೆಯಿಂದ ಹೊರಟಾಗ ಭಾರತದ ನೌಕಾಸೇನೆಯ ಅಧಿಕಾರಿಗಳು ಭಾವುಕ ವಿದಾಯ ಸಲ್ಲಿಸಿದರು.  

ಐಎನ್‌ಎಸ್ ವಿರಾಟ್ ಭಾರತದ ನೌಕಾಸೇನೆಯ ಯುದ್ಧನೌಕೆಯಾಗಿ ೨೯ ವರುಷ (೧೯೮೭ರಿಂದ ೨೦೧೭ ವರೆಗೆ) ಮತ್ತು ಎಚ್‌ಎಮ್‌ಎಸ್ ಹರ್ಮಿಸ್ ಹೆಸರಿನಲ್ಲಿ  ಬ್ರಿಟಿಷ್ ರಾಯಲ್ ನೌಕಾಸೇನೆಯ ಯುದ್ಧನೌಕೆಯಾಗಿ ೨೭ ವರುಷ (೧೯೫೯ರಿಂದ ೧೯೮೪ ವರೆಗೆ) ಸೇವೆ ಸಲ್ಲಿಸಿದೆ. ೧೯೮೬ರಲ್ಲಿ ಇದನ್ನು ಭಾರತಕ್ಕೆ ೬೫ ದಶಲಕ್ಷ ಡಾಲರುಗಳಿಗೆ ಬ್ರಿಟನ್ ಮಾರಾಟ ಮಾಡಿತು.   ನಂತರ ನವೀಕೃತಗೊಂಡು, ಇದು ಭಾರತೀಯ ನೌಕಾಸೇನೆಗೆ ಸೇರ್ಪಡೆಗೊಂಡಿತು. ತದನಂತರ ೨೦೧೭ರಲ್ಲಿ ಇದನ್ನು ನೌಕಾಸೇನೆಯಿಂದ "ನಿವೃತ್ತಿ"ಗೊಳಿಸಲಾಯಿತು. ಹೀಗೆ ೫೬ ವರುಷಗಳ ದೀರ್ಘ ಕಾಲ ಎರಡು ನೌಕಾಸೇನೆಗಳ ಪ್ರಧಾನ ವಿಮಾನವಾಹಕ ಯುದ್ಧನೌಕೆಯಾಗಿದ್ದ ಐಎನ್‌ಎಸ್ ವಿರಾಟ್, “ನೌಕಾಸೇನೆಯಲ್ಲಿ ಅತ್ಯಂತ ದೀರ್ಘ ಕಾಲ ಸೇವೆ ಸಲ್ಲಿಸಿದ ಯುದ್ಧನೌಕೆ” ಎಂಬ ಗಿನ್ನೆಸ್ ಜಾಗತಿಕ ದಾಖಲೆ ಹೊಂದಿದೆ.

ಶ್ರೀಲಂಕಾದಲ್ಲಿ ಶಾಂತಿ ಸ್ಥಾಪನೆಗಾಗಿ ೧೯೮೯ರಲ್ಲಿ ನಡೆದ ಆಪರೇಷನ್ ಜುಪಿಟರ್ ಮತ್ತು ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ೧೯೯೯ರಲ್ಲಿ ಆಪರೇಷನ್ ವಿಜಯ್ - ಇವು ಈ ಸಮರನೌಕೆ ಭಾಗವಹಿಸಿದ ಪ್ರಮುಖ ಕಾರ್ಯಾಚರಣೆಗಳು.

ತನ್ನ ಸುದೀರ್ಘ ನೌಕಾಸೇನೆಯ ಸೇವೆಯಲ್ಲಿ, ೨೭,೮೦೦ ಟನ್ ತೂಕದ ಈ ಯುದ್ಧನೌಕೆ ೫,೯೦,೦೦೦ ನಾಟಿಕಲ್ ಮೈಲುಗಳನ್ನು ಕ್ರಮಿಸಿದ್ದು, ೨೨,೬೨೨ ಗಂಟೆಗಳ ಅವಧಿ ಯುದ್ಧವಿಮಾನಗಳ ಕಾರ್ಯಾಚರಣೆ ನಡೆಸಿದೆ. ಅದೊಂದು ತೇಲುವ ಪುಟ್ಟ ಪಟ್ಟಣದಂತಿತ್ತು. ಗ್ರಂಥಾಲಯ, ಜಿಮ್ನಾಷಿಯಮ್, ಎಟಿಎಂ, ಟಿವಿ ಮತ್ತು ವಿಡಿಯೋ ಸ್ಟುಡಿಯೋ ಇತ್ಯಾದಿ ಎಲ್ಲ ಸೌಲಭ್ಯಗಳೂ, ದೀರ್ಘ ಸಮುದ್ರಯಾನಕ್ಕೆ ಅಗತ್ಯವಾದ ಎಲ್ಲ ವ್ಯವಸ್ಥೆಗಳೂ ಅದರಲ್ಲಿದ್ದವು. ೧,೫೦೦ ನೌಕಾಸೇನೆಯ ಅಧಿಕಾರಿಗಳು ಮತ್ತು ಸೈನಿಕರನ್ನು ಹಾಗೂ ೨೫ ಯುದ್ಧವಿಮಾನಗಳನ್ನು ಒಯ್ಯುವ ಸಾಮರ್ಥ್ಯ ಅದರದ್ದು.

ಇದನ್ನೊಂದು ವಸ್ತುಸಂಗ್ರಹಾಲಯವಾಗಿ ಪರಿವರ್ತಿಸುವ ಪ್ರಯತ್ನಗಳು ಕೊನೆಗೂ ಯಶಸ್ವಿಯಾಗಲಿಲ್ಲ. ಅಂತಿಮವಾಗಿ, ಮೆಟಲ್ ಸ್ಕ್ರಾಪ್ ಟ್ರೇಡಿಂಗ್ ಕಂಪೆನಿ (ಎಮ್‌ಎಸ್‌ಟಿಸಿ) ಇದನ್ನು ಗುಜರಿಮಾಲು ಎಂದು ಏಲಂ ಹಾಕಿತು. ಆಗ ರೂಪಾಯಿ ೩೮ ಕೋಟಿ ಬೆಲೆಗೆ ಇದನ್ನು ಖರೀದಿಸಿದ್ದು ಗುಜರಾತಿನ ಶ್ರೀ ರಾಮ್ ಗ್ರೂಪ್. ಈ ಯುದ್ಧನೌಕೆಯ ಕಬ್ಬಿಣವನ್ನು ದ್ವಿಚಕ್ರ ವಾಹನಗಳ ತಯಾರಿಗೆ ಬಳಸಬೇಕೆಂಬುದು ಆ ಕಂಪೆನಿಯ ಯೋಜನೆ.

ಹಳೆಯ ನೌಕೆಗಳ ಬಿಡಿಭಾಗಗಳನ್ನು ಬೇರ್ಪಡಿಸಿ, ಗುಜರಿಗೆ ಹಾಕುವ ಜಗತ್ತಿನ ಬೃಹತ್ ಹಡಗುಕಟ್ಟೆ ಗುಜರಾತಿನ ಅಲಾಂಗಿನಲ್ಲಿದೆ. ಆರು ವರುಷಗಳ ಮುಂಚೆ, ೨೦೧೪ರಲ್ಲಿ, ಭಾರತದ ನೌಕಾಸೇನೆಯ ಮೊದಲ ವಿಮಾನವಾಹಕ ಐಎನ್‌ಎಸ್ ವಿಕ್ರಾಂತ್ ಅಲ್ಲೇ ಗುಜರಿಯಾಗಿ ಕೊನೆಯಾಗಿತ್ತು. ಇನ್ನೊಂದು ವರುಷದಲ್ಲಿ ಐಎನ್‌ಎಸ್ ವಿರಾಟ್ ಕೂಡಾ ಅಲ್ಲೇ ಗುಜರಿಯಾಗಿ ಅಂತ್ಯವಾಗಲಿದೆ. ಹಾಗಾಗಿ, ೨೭ ಬಾರಿ ಭೂಪ್ರದಕ್ಷಿಣೆ ಮಾಡಿದ ಐಎನ್‌ಎಸ್ ವಿರಾಟ್ ಎಂಬ ಬೃಹತ್ ಯುದ್ಧನೌಕೆ ಇನ್ನು ನೆನಪು ಮಾತ್ರ.
ಫೋಟೋ ಕೃಪೆ: "ದ ಹಿಂದೂ" ಪತ್ರಿಕೆ