ಐಐಟಿ ಪ್ರವೇಶದಲ್ಲಿ ಸಿಂಹಪಾಲು ಯಾರಿಗೆ?

ಐಐಟಿ ಪ್ರವೇಶದಲ್ಲಿ ಸಿಂಹಪಾಲು ಯಾರಿಗೆ?

ಬರಹ

(ಇ-ಲೋಕ-77)(2/6/2008)
 

ದೇಶದ ಪ್ರತಿಷ್ಟೆಯ ತಾಂತ್ರಿಕ ಕಾಲೇಜುಗಳೆಂದರೆ ಭಾರತೀಯ ತಂತ್ರಜ್ಞಾನ ಸಂಸ್ಥೆ(ಐಐಟಿ)ಗಳು.ಇವುಗಳ ಪ್ರವೇಶ ಪಡೆವ ಪ್ರತಿಭಾನ್ವಿತ ವಿದ್ಯಾರ್ಥಿಗಳಲ್ಲಿ ಯಾವ ರಾಜ್ಯದ ವಿದ್ಯಾರ್ಥಿಗಳು ಹೆಚ್ಚು?ತಮಿಳ್ನಾಡು ಇರಬೇಕು ಎಂದು ನೀವು ಆಲೋಚಿಸಿದರೆ ಉತ್ತರ ತಪ್ಪು.ಐಐಟಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ರಾಜ್ಯದಲ್ಲಿ ಐಐಟಿಯೇ ಇಲ್ಲ.ಆಂಧ್ರದ ವಿದ್ಯಾರ್ಥಿಗಳು ಪ್ರವೇಶದ ಸಿಂಹಪಾಲು ಪಡೆಯುತ್ತಿದ್ದಾರೆ.ಇರುವ ಆರು ಸಾವಿರ ಸೀಟುಗಳಲ್ಲಿ ಮೂರನೇ ಒಂದು ಪಾಲು ಸೀಟುಗಳನ್ನು ಆಂಧ್ರದ ವಿದ್ಯಾರ್ಥಿಗಳು ಬಗಲಿಗೆ ಹಾಕಿಕೊಳ್ಳುತ್ತಿದ್ದಾರೆ.ಅದರಲ್ಲೂ ಕೆಲವು ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳೇ ಪ್ರವೇಶ ಪಡೆಯುತ್ತಿದ್ದಾರೆ.
 ಈ ವರ್ಷ ಪ್ರವೇಶ ಪಡೆದಯಲಿರುವ ವಿದ್ಯಾರ್ಥಿಗಳಲ್ಲಿ ನಾರಾಯಣ ಶಿಕ್ಷಣ ಸಂಸ್ಥೆಯಿಂದ ಒಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳೂ,ಶ್ರೀ ಚೈತನ್ಯ ಸಂಸ್ಥೆಗಳಿಂದ ಏಳುನೂರಕ್ಕೂ ಹೆಚ್ಚು ವಿದ್ಯಾರ್ಥಿಗಳೂ,ರಾಮಯ್ಯ ಸಂಸ್ಥೆಯಿಂದ ನೂರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಐಐಟಿ ಸೇರಲಿದ್ದಾರೆ.ಈ ಸಂಸ್ಥೆಗಳು ಅತ್ಯಂತ ಮೇಧಾವಿಗಳಿಗೆ ಪ್ರವೇಶ ಸೀಮಿತಗೊಳಿಸಿ,ಐಐಟಿ ಪರೀಕ್ಷೆ ಎದುರಿಸುವ ನಿಟ್ಟಿನಲ್ಲಿ ಕೇಂದ್ರೀಕೃತ ತರಬೇತಿ ನೀಡುವ ಮೂಲಕ ಈ ರೀತಿಯ ಸಾಧನೆ ತೋರುತ್ತಿವೆ.ತಮಗೆ ಬೇಕಾದ ಐಐಟಿಯಲ್ಲಿ ಪ್ರವೇಶ ಪಡೆಯಲು ವಿಫಲರಾಗುವ ಕೆಲವು ವಿದ್ಯಾರ್ಥಿಗಳು ಮುಂದಿನ ವರ್ಷ ಮರು ಪರೀಕ್ಷೆ ತೆಗೆದುಕೊಂಡು,ತಮ್ಮ ಪ್ರವೇಶಾವಕಾಶ ಉತ್ತಮ  ಪಡಿಸಿಕೊಳ್ಳಲು ಪ್ರಯತ್ನಿಸುವುದಿದೆ.
 

ಚುನಾವಣೆಯ ಕಣದಲ್ಲೂ ಅಂತರ್ಜಾಲದ ಮಾಯಾಜಾಲ
 ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಅಂತರ್ಜಾಲದ ಪ್ರಭಾವ ಇತ್ತೇ? ರವಿಕೃಷ್ಣ ರೆಡ್ಡಿಯವರು ತಮ್ಮ ಚುನಾವಣಾ ನಿಧಿಗಾಗಿ ಈ ಮಾಧ್ಯಮವನ್ನೇ ಅವಲಂಬಿಸಿ ಕಣಕ್ಕಿಳಿದು ವಿಫಲ ಪ್ರಯತ್ನ ನಡೆಸಿದ್ದು ನಿಮಗೆ ಗೊತ್ತೇ ಇದೆ.ಪಕ್ಷಗಳು ತಮ್ಮ ಅಂತರ್ಜಾಲ ತಾಣದಲ್ಲಿ ಪ್ರಣಾಳಿಕೆಗಳನ್ನು ಲಭ್ಯವಾಗಿಸಿ,ತಮ್ಮ ಧ್ಯೇಯೋದ್ದೇಶಗಳ ವಿವರ ನೀಡಲಷ್ಟೇ ಅಂತರ್ಜಾಲ ತಾಣವನ್ನು ಬಳಸಿದುವು.ಅರ್ಕುಟ್ ಸಾಮಾಜಿಕ ಜಾಲತಾಣದಲ್ಲಿ ಉಡುಪಿಯ ಬಿಜೆಪಿ ಅಭ್ಯರ್ಥಿ ರಘುಪತಿ ಭಟ್ ಪುಟ ಕಾಣಿಸಿಕೊಂಡು ಅಂತರ್ಜಾಲ ಮೂಲಕ ಜನರಿಗೆ ಸಮೀಪವಾಗುವ ಪ್ರಯತ್ನ ನಡೆಸಿದರು.
 ಅತ್ತ ಅಮೆರಿಕಾದಲ್ಲಿ ಬರಾಕ್ ಒಬಾಮಾ ಅವರು ಡೆಮೋಕ್ರಾಟ್ ಪಕ್ಷದ ವತಿಯಿಂದ ಅಧ್ಯಕ್ಷೀಯ ಪದಕ್ಕಾಗಿ ನಡೆಯುವ ಚುನಾವಣಾ ಅಭ್ಯರ್ಥಿಯಾಗಲು ಹಿಲರಿ ಕ್ಲಿಂಟನ್ ವಿರುದ್ಧ ಸೆಣಸಾಡುತ್ತಿದ್ದಾರೆ.ಕ್ಲಿಂಟನ್‌ಗೆ ಹೋಲಿಸಿದರೆ ದುರ್ಬಲರೆಂದೇ ಪರಿಗಣಿತರಾಗಿದ್ದ ಒಬಾಮಾ,ಕ್ಲಿಂಟನ್‌ಗೆ ಅತಿ ನಿಕಟ ಸ್ಪರ್ಧೆ ನೀಡಲು ಅಂತರ್ಜಾಲದ ಪರಿಣಾಮಕಾರಿ ಬಳಕೆಯೇ ಕಾರಣವೆಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ.ತಮ್ಮ ಚುನಾವಣಾ ನಿಧಿಯನ್ನು ಸಂಗ್ರಹಿಸಲೂ ಅಂತರ್ಜಾಲ ತಾಣವನ್ನು ಬಳಸಿ,ಯಶಸ್ವಿಯಾಗಿದ್ದಾರೆ. ಅವರು ಈ ಮೂಲಕ ಏನಿಲ್ಲವೆಂದರೂ ಒಂದು ಬಿಲಿಯನ್ ಡಾಲರು ಸಂಗ್ರಹಿಸಬಹುದೆಂದು ಅಂದಾಜು.ತಮ್ಮ ವಿಚಾರಗಳನ್ನು ಜನರಿಗೆ ಮುಟ್ಟಿಸಲೂ ಒಬಾಮಾ ಅಂತರ್ಜಾಲವನ್ನು ಬಳಸಿದರು.
 ಒಬಾಮಾ ಚುನಾವಣಾ ಕಣಕ್ಕಿಳಿಯುವ ಮೊದಲೇ ತಮ್ಮ ಅಂತರ್ಜಾಲ ತಾಣವನ್ನು ಪೂರ್ತಿಯಾಗಿ ಅಭಿವೃದ್ಧಿ ಪಡಿಸಿದ್ದರು.ಅವರದನ್ನು ತಮ್ಮ ಪ್ರಚಾರವನ್ನು ಸಂಘಟಿಸಲು ಮತ್ತು ತಮ್ಮ ಬೆಂಬಲಿಗರನ್ನು ತಲುಪಲು ಬಳಸಿಕೊಂಡರು.ತಮ್ಮ ವಿಚಾರಗಳನ್ನು ಬಹಿರಂಗಗೊಳಿಸಲೂ ಅದನ್ನವರು ಬಳಸುತ್ತಿದ್ದಾರೆ.ಫೇಸ್‍ಬುಕ್ ಅಂತಹ ಸಾಮಾಜಿಕ ಜಾಲತಾಣಗಳಲ್ಲೂ ತಮ್ಮ ಪುಟ ತೆರೆದು,ಅಲ್ಲಿನ ಸಕ್ರಿಯ ಸದಸ್ಯರಾಗಿರುವ ಯುವಜನರನ್ನು ತಲುಪಿದರು.ಯುಟ್ಯೂಬಿನಲ್ಲೂ ಅವರ  ಜಾಹೀರಾತು ಕಾಣಿಸಿಕೊಂಡು ಜನಪ್ರಿಯವಾದರು.ಜನರನ್ನು ಮತಗಟ್ಟೆಗೆ ಆಕರ್ಷಿಸಿ ಮತದಾನ ಮಾಡುವಂತೆಯೂ ಪ್ರೇರೇಪಿಸಲು ತಾಣವನ್ನವರು ಬಳಸಿಕೊಂಡರು.ಎರಡು ದಶಲಕ್ಷ ಸದಸ್ಯರನ್ನು ನೋದಾಯಿಸಿಕೊಳ್ಳುವಲ್ಲಿ ಅವರು ಸಫಲರಾಗಿದ್ದಾರೆ ಎಂದರೆ ಅಂತರ್ಜಾಲದ ಮಾಯಕದ ಅರಿವಾಗದೆ ಇರದು.ಹಿಂದಿನ ಅದ್ಯಕ್ಷೀಯ ಚುನಾವಣೆಯ ಅಭ್ಯರ್ಥಿ ಜಾನ್ ಕೆರ್ರಿಯವರೂ ಅಂತರ್ಜಾಲವನ್ನು ಬಳಸಿಕೊಂಡರೂ,ಅವರಿಗಿಂತ ಹನ್ನೆರಡು ಪಟ್ಟು ಅಧಿಕ ನಿಧಿಯನ್ನು ಒಟ್ಟು ಮಾಡಲೂ ಒಬಾಮಾಗೆ ಸಾಧ್ಯವಾಯಿತು.ಕೊನೆಯ ಹಂತದಲ್ಲಿ ಏನಾದರೂ,ದುರ್ಬಲನೆಂದೇ ಭಾವಿಸಲಾಗಿದ್ದ ಬರಾಕ್ ಒಬಾಮಾ ಕ್ಲಿಂಟನ್‌ಗೆ ಸಮಬಲದ ಸ್ಪರ್ಧೆ ನೀಡಲು ಅಂತರ್ಜಾಲ ನೆರವಾದುದು ಸುಳ್ಳಲ್ಲ.
ಮೈಕ್ರೋಸಾಫ್ಟಿನ:ವಿಸ್ತಾ ನಂತರ ವಿಂಡೋಸ್ 7
 ವಿಂಡೋಸ್ ಎಕ್ಸ್‌ಪಿ ನಂತರ ವಿಸ್ತಾ ಕಂಪ್ಯೂಟರ್ ಕಾರ್ಯನಿರ್ವಹಣಾ ವ್ಯವಸ್ಥೆ ತಂತ್ರಾಂಶವನ್ನು ತಂದ ಮೈಕ್ರೋಸಾಫ್ಟ್ ಕಂಪೆನಿ,ತನ್ನ ಮುಂದಿನ ಆವೃತ್ತಿಯನ್ನು ಮೂರು ವರ್ಷಗಳ ನಂತರ ಹೊರತರುವ ಯೋಜನೆ ಹಾಕಿಕೊಂಡಿದೆ.ವಿಂಡೋಸ್ 7 ಎಂದೀ ಆವೃತ್ತಿಗೆ ಹೆಸರಿಡಲು ಯೋಜಿಸಲಾಗಿದೆ.ಈ ಕಂಪ್ಯೂಟರ್ ಕಾರ್ಯನಿರ್ವಹಣಾ ತಂತ್ರಾಂಶದಲ್ಲಿ ಮೌಸ್ ಬಳಸದೆ ಕಂಪ್ಯೂಟರ್ ಬಳಸಲು ಆಸ್ಪದ ನೀಡಲು, ಸ್ಪರ್ಷ ಸಂವೇದಿ ಕಂಪ್ಯೂಟರ್ ಪರದೆಯನ್ನು ಬಳಸುವ ಯೋಜನೆ ಕಂಪೆನಿಗಿದೆ.ಇದರೊಂದಿಗೆ ಕಂಪ್ಯೂಟರ್ ಬಳಕೆಯಲ್ಲಿ ಹೊಸ ಮಜಲಿಗೆ ಕಾಲಿಡಲು ಬಯಸಿದೆ.ಜನರು ಸಹಜವಾದ ರೀತಿಯಲ್ಲಿ ಕಂಪ್ಯೂಟರ್ ಬಳಸಲು ಆಸ್ಪದ ನೀಡುವ ತಂತ್ರಜ್ಞಾನಗಳ ಪೈಕಿ,ಸ್ಪರ್ಶದ ಮೂಲಕ ಕಂಪ್ಯೂಟರ್ ಬಳಸುವ ತಂತ್ರಜ್ಞಾನವನ್ನು ಸದ್ಯಕ್ಕೆ ದುಡಿಸಿ ಕೊಳ್ಳುವುದು ಅನಿವಾರ್ಯ.
ಯುಟ್ಯೂಬ್ ಭಾರತದಲ್ಲಿ
 ಯುಟ್ಯೂಬ್‌ನ ಭಾರತೀಯ ಅವತಾರ ಈಗ ಲಭ್ಯ.ಜನರಿಗೆ ತಮ್ಮ ವಿಡಿಯೋ ತುಣುಕುಗಳನ್ನು ಇತರರೊಡನೆ ಹಂಚಿಕೊಳ್ಳಲು ಅವಕಾಶ ನೀಡಲು ಉದಯಿಸಿದ ಯುಟ್ಯೂಬ್ ತಾಣ ಸದ್ಯ ಗೂಗಲ್ ಹಿಡಿತದಲ್ಲಿದೆ. ಇಲ್ಲಿ ಸಿನಿಮಾ ತುಣುಕುಗಳಿಂದ ಹಿಡಿದು,ದೇಶಗಳ ಜನಜೀವನಕ್ಕೆ ಕನ್ನಡಿ ಹಿಡಿಯುವ ವಿಡಿಯೋ ತುಣುಕುಗಳ ಅಗಣಿತ ಕಣಜವಿದು.ಈಗ ಭಾರತೀಯರಿಗೇ ಮೀಸಲಾದ ಯುಟ್ಯೂಬಿನ ದೇಶೀ ಆವತಾರ www.youtube.co.in ಲಭ್ಯವಾಗಿದೆ.ಇಲ್ಲಿ ಭಾರತದ ಸಂಸ್ಕೃತಿಯ ದರ್ಶನ ನೀಡುವ ವಿಡಿಯೋ ತುಣುಕುಗಳಿಗೇ ಪ್ರಾಶಸ್ತ್ಯ ಸಿಗಲಿದೆ.

ashokworld

udayavani
*ಅಶೋಕ್‌ಕುಮಾರ್ ಎ